1983ರಿಂದ 2023ರವರೆಗೆ ಯಡ್ಡಿ ರಾಜಕೀಯ ಪಯಣ 

ಯಡಿಯೂರಪ್ಪರವರ ಬಗ್ಗೆ ಕುಚ್ಚಂಗಿ ಪ್ರಸನ್ನ

   1983ರಿಂದ 2023ರವರೆಗೆ ಯಡ್ಡಿ ರಾಜಕೀಯ ಪಯಣ 

ಒಂದು ಗಳಿಗೆ

-ಕುಚ್ಚಂಗಿ ಪ್ರಸನ್ನ

           1983ರಿಂದ 2023ರವರೆಗೆ ಯಡ್ಡಿ ರಾಜಕೀಯ ಪಯಣ 


           ಯಡಿಯೂರಪ್ಪನವರ ಬಗ್ಗೆ ಮತ್ತೆ ಮತ್ತೆ ಬರೆಯುವಂತಾದರೆ ಅದು ನನ್ನ ತಪ್ಪಲ್ಲ, ಯಡಿಯೂರಪ್ಪ ಸುದ್ದಿಯಲ್ಲಿದ್ದಾರೆ ಮತ್ತು ಮತ್ತೆ ಮತ್ತೆ ಸುದ್ದಿಗೆ ಬರುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅಸೆಂಬ್ಲಿಯಲ್ಲಿ ಯಡಿಯೂರಪ್ಪ ವಿದಾಯ ಭಾಷಣ ಮಾಡಿದರು. 2008ರಿಂದಲೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಬಹುಮತ ಸಾಬೀತು ಪಡಿಸಲಾಗದೇ ಹೋದಾಗ, ಮತ್ತೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದ ಮೇಲೂ ಅದೂ ಇದೂ ನೆಪ ಹೇಳಿ ಅಧಿಕಾರದಿಂದ ಇಳಿಸುವಾಗ ಇಂಥ ಅನೇಕ ವಿದಾಯ ಭಾಷಣಗಳನ್ನು ಇದೇ ವೇದಿಕೆಯಲ್ಲಿ ಮಾಡಿದ್ದರೂ ಶುಕ್ರವಾರದ ಭಾಷಣ ಮಾತ್ರ ಅವರು ಶಾಸನ ಸಭೆಯಲ್ಲಿ ಮಾಡಬಹುದಾಗಿದ್ದ ಕಟ್ಟ ಕಡೆಯದಾಗಿತ್ತು. 


“ಇದೇ ತಿಂಗಳ 27ಕ್ಕೆ ನನಗೆ 80 ವರ್ಷ ತುಂಬುತ್ತಿದೆ, ಈ ನನ್ನ ಹುಟ್ಟುಹಬ್ಬದ ವಿಶೇಷ ದಿನದಂದೇ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಶಿವಮೊಗ್ಗಕ್ಕೆ ಬರುತ್ತಿದ್ದಾರೆ, ಇದು ನನ್ನೊಳಗೆ ಒಂಥರಾ ನೆಮ್ಮದಿ ಮತ್ತು ಸಂತಸ ತಂದಿದೆ” ಎಂದರು ಯಡಿಯೂರಪ್ಪ.


1943ರ ಫೆಬ್ರವರಿ 27ರಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಿದ್ಧಲಿಂಗಪ್ಪ-ಪುಟ್ಟತಾಯಮ್ಮ ದಂಪತಿಗಳ ಮಗನಾಗಿ ಹುಟ್ಟಿದ ಯಡಿಯೂರಪ್ಪನವರು ಮಂಡ್ಯ ನಗರದಲ್ಲಿ ಪಿಯುಸಿ ಓದಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತನಾಗುತ್ತಾರೆ. ಆದರೆ ಮಂಡ್ಯದಿಂದ ಅದು ಹೇಗೋ ದೂರದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಸೇರಿ, ಶಂಕರ ರೈಸ್ ಮಿಲ್‌ನಲ್ಲಿ ಗುಮಾಸ್ತರಾಗುತ್ತಾರೆ. ಅಲ್ಲಿ ಮಾಲಿಕರ ಮಗಳು ಮೈತ್ರಾದೇವಿಯನ್ನು ಮದುವೆಯಾಗಿ, ಶಿವಮೊಗ್ಗದಲ್ಲಿ ಹಾರ್ಡ್ವೇರ್ ಮಳಿಗೆಯನ್ನು ತೆರೆದು ವ್ಯಾಪಾರಿಯಾಗುತ್ತಾರೆ. ಆದರೆ ಇವೆಲ್ಲ ಯಡಿಯೂರಪ್ಪನವರಿಗೆ ಸಮಾಧಾನ ಕೊಡುವುದಿಲ್ಲ. 


15ನೇ ವಯಸ್ಸಿಗೇ ಆರ್‌ಎಸ್‌ಎಸ್‌ನಲ್ಲಿ ಸಂಪರ್ಕಕ್ಕೆ ಬಂದೆ ಎನ್ನುವ ಇವರು, 1970ರಲ್ಲಿ ಶಿಕಾರಿಪುರ ಆರ್‌ಎಸ್‌ಎಸ್ ಕಾರ‍್ಯವಾಹ ಅಂದರೆ ಕಾರ‍್ಯದರ್ಶಿಯಾಗುತ್ತಾರೆ, ಎರಡು ವರ್ಷದ ಬಳಿಕ ಶಿಕಾರಿಪುರ ಪುರಸಭಾ ಸದಸ್ಯರಾಗುತ್ತಾರೆ, ಅದೇ ವರ್ಷ ಆರ್‌ಎಸ್‌ಎಸ್‌ನ ಅಂದಿನ ರಾಜಕೀಯ ವಿಭಾಗ ಜನಸಂಘದ ತಾಲೂಕು ಅಧ್ಯಕ್ಷರೂ ಆಗುತ್ತಾರೆ. ಮೊನ್ನಿನ ವಿದಾಯ ಭಾಷಣದಲ್ಲಿ ಯಡಿಯೂರಪ್ಪನವರು, ನನ್ನನ್ನು ರಾಜಕಾರಣಿಯಾಗಿ ರೂಪಿಸಿದ್ದೇ ಈ ಆರ್‌ಎಸ್‌ಎಸ್ ಎಂದರು.


    1975ರ ಹೊತ್ತಿಗೆ ಅದೇ ಪುರಸಭೆಗೆ ಅಧ್ಯಕ್ಷರೂ ಆಗುತ್ತಾರೆ. 1977ರ ಎಮರ್ಜೆನ್ಸಿಯಲ್ಲಿ ಜೈಲು ಪಾಲಾಗುತ್ತಾರೆ. ಜನತಾರಂಗದೊಳಗೆ ವಿಲೀನವಾಗಿದ್ದ ಜನಸಂಘ 1980ರಲ್ಲಿ ಬಿಜೆಪಿಯಾಗಿ ರೂಪುಗೊಂಡ ನಂತರ 1983ರಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಹಾಗೂ ಆ ನಂತರದ ಮೂರೇ ವರ್ಷಗಳಲ್ಲಿ ರಾಜ್ಯಾಧ್ಯಕ್ಷರೂ ಆಗಿ ಬಿಡುತ್ತಾರೆ. ಹೀಗೆ ಹಿಂದಿರುಗಿ ನೋಡದ ರಾಜಕೀಯ ಪಯಣದಲ್ಲಿ ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆಗಳಲ್ಲಿ ರೌಂಡು ಹಾಕಿ,  ಮೂರು ಸಲ ವಿರೋಧ ಪಕ್ಷದ ನಾಯಕರಾಗುತ್ತಾರೆ. ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ  ಆಗುತ್ತಾರೆ. 

ರಾಜ್ಯದ 19 ಮುಖ್ಯಮಂತ್ರಿಗಳ ಪೈಕಿ ನಾಲ್ಕು ಸಲ  ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯದ ಏಕೈಕ ನಾಯಕ ಯಡಿಯೂರಪ್ಪನವರು. ಉಳಿದಂತೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಮತ್ತು ಹೆಚ್.ಡಿ.ಕುಮಾರಸ್ವಾಮಿ ಇವರೆಲ್ಲ ಎರಡು ಸಲ ಮಾತ್ರ ಮುಖ್ಯಮಂತ್ರಿಯಾದವರು.


ಒಂದು ಲೆಕ್ಕದಲ್ಲಿ ಯಡಿಯೂರಪ್ಪನವರು 2004ರಲ್ಲೇ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಿದ್ದವರು, ಆದರೆ ದೇವೇಗೌಡರು ಸುಮ್ಮನಿರಬೇಕಲ್ಲ, ಆಗ 79 ಕ್ಷೇತ್ರ ಗೆದ್ದ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 65 ಸೀಟು ಗೆದ್ದ ಕಾಂಗ್ರೆಸ್ ಜೊತೆ 58 ಸೀಟು ಗೆದ್ದ ಜೆಡಿಎಸ್ ಸೇರಿ ಧರ‍್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಿ ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿ ಮಾಡಿ ಸಮ್ಮಿಶ್ರ ಸರ‍್ಕಾರ ರಚಿಸಿದರು ದೇವೇಗೌಡರು. 


ಹಾಗೂ ಹೀಗೂ ಎರಡು ವರ್ಷ ಪೂರೈಸುವಷ್ಟರಲ್ಲೇ ಜೆಡಿಎಸ್ ಯುವರಾಜ ಹೆಚ್.ಡಿ.ಕುಮಾರಸ್ವಾಮಿ ಮಾಡಿದ ಕ್ಷಿಪ್ರಕ್ರಾಂತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನಗೊಂಡಿತು. ಜೆಡಿಎಸ್ (ಕುಮಾರಸ್ವಾಮಿ) ಮತ್ತು ಬಿಜೆಪಿ 20/20 ಸರಕಾರದಲ್ಲಿ ಯಡಿಯೂರಪ್ಪ ಉಪಮುಖ್ಯಮಂತ್ರಿಯಾದದ್ದು ಹೀಗೆ. ಮುಂದೆ, 20 ತಿಂಗಳ ನಂತರ ಕುಮಾರಸ್ವಾಮಿ ಸಲೀಸಾಗಿ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಲು ಬಿಡಲಿಲ್ಲ, ಬಲವಂತಕ್ಕೆ ಅವಕಾಶ ಕೊಟ್ಟರೂ ಖಾತೆ ಹಂಚಿಕೆಯಲ್ಲಿ ಕುಮಾರಸ್ವಾಮಿ ಖ್ಯಾತೆ ತೆಗೆದ ಕಾರಣ ಬಹುಮತ ಸಾಬೀತು ಮಾಡಲಾಗದೇ ವಿದಾಯ ಭಾಷಣ ಮಾಡಿಬಿಟ್ಟರು ಯಡಿಯೂರಪ್ಪ. ಆಗ 2007ರ ಜುಲೈ 7ರಿಂದ 19ರವರೆಗೆ ಏಳು ದಿನ ಮಾತ್ರ ಮುಖ್ಯಮಂತ್ರಿ ಭಾಗ್ಯ ದೊರಕಿತ್ತು ಬಿಎಸ್‌ವೈ ಅವರಿಗೆ. 


2008ರ ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತದ ಹತ್ತಿರಕ್ಕೆ ಪಕ್ಷವನ್ನು ಒಯ್ದ ಯಡಿಯೂರಪ್ಪನವರು ಮೇ, 30ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಅಲ್ಲೂ ಅವಧಿ ಪೂರೈಸಲಾಗಲಿಲ್ಲ ಅವರಿಗೆ. ಸರಳ ಬಹುಮತಕ್ಕೆ ಅವಶ್ಯವಾಗಿದ್ದ ನಾಲ್ಕು ಶಾಸಕರನ್ನು ಖರೀದಿಸುವ ಹೊಸ ವಿಧಾನವಾಗಿ ‘ ಆಪರೇಶನ್ ಕಮಲ’ದ ಜನಕ ಎಂಬ ಹೆಸರು ಬಿಎಸ್‌ವೈ ಅವರಿಗೆ ಬಂತು. 


         ಕರ್ನಾಟಕದಲ್ಲಿ ಯಡಿಯೂರಪ್ಪನವರ ದರ್ಬಾರು ಅವರ ಪಕ್ಷದ ದಿಲ್ಲಿ ದೊರೆಗಳ ಕಣ್ಣು ಕುಕ್ಕಿತೇನೋ ಎಂಬಂತೆ, ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ ಹಾಗೂ ಬಳ್ಳಾರಿ ಗಣಿ ದಣಿಗಳ ಅಕ್ರಮ ಗಣಿಗಾರಿಕೆ ಹಾಗೂ ಲೆಕ್ಕ ಬುಕ್ಕು ಮೀರಿ ಮಾಡಿದ ಅಪಾರ ಪ್ರಮಾಣದ ಕಬ್ಬಿಣದ ಅದಿರಿನ ರಫ್ತು ಕುರಿತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವರದಿ ಬಿಎಸ್‌ವೈ ಅವರನ್ನು 2011ರ ಜುಲೈ 31ರಂದು ಮುಖ್ಯಮಂತ್ರಿ ಗದ್ದುಗೆಯಿಂದ ಇಳಿಯುವಂತೆ ಮಾಡಿದ್ದು ಮಾತ್ರವಲ್ಲದೇ 2011ರ ಅಕ್ಟೋಬರ್ 15ರಿಂದ 23 ದಿನ ಪರಪ್ಪನ ಅಗ್ರಹಾರದಲ್ಲಿ ಕೊಳೆಯುವಂತೆ ಮಾಡಿತು. ಇದೆಲ್ಲ ಇವರನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಇಳಿಸಲು ಹೂಡಿದ ಕುತಂತ್ರವೇ ಎಂದು ನಂಬುವಂತೆ ಮಾಡಿದ್ದು ಮರು ವರ್ಷ 2012ರ ಮಾರ್ಚಿಯಲ್ಲಿ ಈ ಪ್ರಕರಣಗಳಲ್ಲಿ ಮಾನ್ಯ ಹೈಕೋರ್ಟ್ ನೀಡಿದ ತೀರ್ಪು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಕೊಟ್ಟರು ಎಂಬುದಕ್ಕೆ ದಾಖಲೆ ಎಲ್ಲಿದೆ, ಕೊಡಿ ಎಂದು ಲೋಕಾಯುಕ್ತ ಪರ ವಕೀಲರನ್ನು ನ್ಯಾಯಾಧೀಶರು ಕೇಳಿದಾಗ, ಆತ ಮೌನವಾಗಿ ತಲೆ ತಗ್ಗಿಸಿ ನಿಲ್ಲುತ್ತಾನೆ. ಕೇವಲ ಸಂಶಯದ ಆಧಾರದ ಮೇಲೆ ಹೀಗೆ ಒಬ್ಬರನ್ನು ಅಧಿಕಾರದಿಂದ ಇಳಿಸಲಾಯಿತು ಎನ್ನುವುದು ಕಾಲದ ವ್ಯಂಗ್ಯವಲ್ಲದೇ ಮತ್ತೇನು. ಇಂತ ಯಾವ ಕೇಸುಗಳೂ 2016ರ ಹೊತ್ತಿಗೆ ಯಾವ ನ್ಯಾಯಾಲಯದಲ್ಲಿ ನಿಲ್ಲದೇ ಹೋದಾಗ, ಕೇವಲ ಯಡ್ಡಿಯವರನ್ನು ಸಿಎಂ ಗದ್ದುಗೆಯಿಂದ ಕೆಳಗಿಳಿಸಲು ಮಾತ್ರವೇ ಹೂಡಿದ ಕುತಂತ್ರ ಅನ್ನದೇ ಬೇರೇನು ಹೇಳಬಹುದು.


       ಪಕ್ಷದ ಹೈಕಮಾಂಡ್‌ನ ಅಸಡ್ಡೆ, ಅನಾದರಗಳಿಂದ ಉಂಟಾದ ಮುಜುಗರದಿಂದ ಸಿಡಿದೆದ್ದ ಯಡ್ಡಿ ಕೆಜೆಪಿ ಮಾಡದೇ ಬೇರೆ ದಾರಿ ಇರಲಿಲ್ಲ, ಆದರೆ ಕೆಜೆಪಿ ಕಟ್ಟಿ ಬಿಜೆಪಿಯನ್ನು ಬೀದಿ ಪಾಲು ಮಾಡಿದೆ ಎಂಬ ಕ್ಷಣಿಕ ಸಮಾಧಾನಕ್ಕೆ ಈಡಾಗುವ ಬದಲು ಅದೇ ಕೆಜೆಪಿಯನ್ನು ಒಂದು ಸ್ವತಂತ್ರ ಪ್ರಾದೇಶಿಕ ಪಕ್ಷವನ್ನಾಗಿ ಸಂಘಟಿಸಿ, ನಡೆಸಿದ್ದರೆ, ಮುಂದೆ ಇದೇ ಬಿಜೆಪಿ ಸೀಟು ಹೊಂದಾಣಿಕೆ ಮತ್ತು ಸರ್ಕಾರ ರಚಿಸಲು ಇದೇ ಯಡಿಯೂರಪ್ಪನವರನ್ನು ಓಲೈಸುವ ಸನ್ನಿವೇಶಗಳು ಒದಗಿ ಬರುತ್ತಿರಲಿಲ್ಲವೇ, ಆದರೆ ಅವರಿಗೆ ಅಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳುವ ಆಸಕ್ತಿ , ಹಂಬಲ ಅಥವಾ ಶಕ್ತಿ ಇರಲಿಲ್ಲವೇನೋ ಯಾರಿಗೆ ಗೊತ್ತು.


       2018ರ ವಿಧಾನ ಸಭಾ ಚುನಾವಣೆಯಲ್ಲಿ ಮತದಾರ ಪ್ರಭುಗಳು ಹಿಂದಿನ ಸಲಕ್ಕಿಂತ ಇನ್ನೂ ಆರು ಸೀಟು ಕಡಿಮೆ ಅಂದರೆ 104ರಲ್ಲಿ ಬಿಜೆಪಿಗೆ ಗೆಲುವು ಒದಗಿಸಿಕೊಟ್ಟರು. ಪರಿಣಾಮ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಮುಖ್ಯಮಂತ್ರಿಯಾಗಿ ಇದ್ದದ್ದು ಕೇವಲ ಎರಡು ದಿನ ಅಥವಾ ಎರಡೂವರೆ ದಿನ ಮಾತ್ರ. ಬಹುಮತ ಸಾಬೀತು ಪಡಿಸಲು ರಾಜ್ಯಪಾಲರಾದ ವಜೂಬಾಯಿ ವಾಲ 15 ದಿನ ಅವಕಾಶ ಕೊಟ್ಟರೂ ಸುಪ್ರೀಂ ಕೋರ್ಟ್ ಕೇವಲ 24 ಗಂಟೆಯೊಳಗಾಗಿ ಸಾಬೀತು ಮಾಡಿ ಅಂತ ಅಂದ ಕಾರಣ ಮತ್ತೊಂದು ವಿದಾಯ ಭಾಷಣ ಮಾಡಿ ಅಸೆಂಬ್ಲಿ ಹಾಲ್‌ನಿಂದ ಹೊರಬಂದರು ಯಡಿಯೂರಪ್ಪ. ಪರಿಣಾಮ ಕಾಂಗ್ರೆಸ್-ಜೆಡಿಎಸ್ ಮತ್ತೆ ವರ್ಷ ಕಾಲ ಹನಿಮೂನ್ ನಡೆಸಿದವು. ಆದರೆ ಒಂದೇ ವರ್ಷದಲ್ಲಿ 17 ಶಾಸಕರನ್ನು ಬಾಂಬೆಗೆ ವಿಮಾನ ಹತ್ತಿಸಿದ ಯಡ್ಡಿ ಮತ್ತೊಮ್ಮೆ ಮುಖ್ಯಮಂತ್ರಿಯಾಗೇ ಬಿಟ್ಟರು. ಇಲ್ಲೂ ಅಷ್ಟೇ ಅವಧಿ ಪೂರ್ಣಗೊಳಿಸಲು ಅವರ ದಿಲ್ಲಿ ದೊರೆಗಳು ಅವಕಾಶ ಕೊಡಲೇ ಇಲ್ಲ. ಕೇವಲ ಎರಡೇ ವರ್ಷ, ಅದೂ ಸರಿಯಾಗಿ ಎರಡನೇ ವಾರ್ಷಿಕೋತ್ಸವ ಆಚರಣೆಯನ್ನು ನೆಮ್ಮದಿಯಾಗಿ ಮಾಡಲು ಬಿಡದೇ ಯಡಿಯೂರಪ್ಪನವರೇ ಸ್ವ ಇಚ್ಚೆಯಿಂದ ರಾಜಿನಾಮೆ ಬರೆದುಕೊಟ್ಟರು ಎನ್ನುವಂತೆ ಸೀನ್ ಕ್ರಿಯೇಟ್ ಮಾಡಿಬಿಟ್ಟರು. 2019ರ ಜುಲೈ 26ರಿಂದ 2021ರ ಜುಲೈ 28ರವರೆಗೆ ಎರಡು ವರ್ಷ ಎರಡು ದಿನ ಮಾತ್ರ ಇವರು ಸಿಎಂ ಗಾದಿಯಲ್ಲಿ ಇರಲು ಸಾಧ್ಯವಾಯಿತು.


       ದಿಲ್ಲಿಯಲ್ಲಿ ಆಳುತ್ತಿರುವ ಬಿಜೆಪಿ ದೊರೆಗಳಿಗಿಂತ ಹೆಚ್ಚು ಹಿರಿಯ , ಹೆಚ್ಚು ಜನಪ್ರಿಯ ಮತ್ತು ಸ್ವಾಭಿಮಾನಿ ಎನ್ನುವುದೇ ಇವರ ಕಣ್ಣುರಿಗೆ ಕಾರಣವೋ, ಅಥವಾ ಅನಧಿಕೃತವಾಗಿ ಹೇಳಿಕೊಳ್ಳುವಂತೆ ಯಡಿಯೂರಪ್ಪ ಅಂಡ್ ಸನ್ಸ್ ಅಂಡ್ ಡಾಟರ್‌ಗಳ ಒಟ್ಟಾರೆ ಬಿಗ್ ಫ್ಯಾಮಿಲಿಯ ದೊಡ್ಡ ಮಟ್ಟದ ಭ್ರಷ್ಟಾಚಾರವೇ ಕಾರಣವೋ ಗೊತ್ತಿಲ್ಲ. ಒಂದು ವೇಳೆ ಭ್ರಷ್ಟಾಚಾರವೇ ಕಾರಣವಾಗಿದ್ದರೆ, ಅವರ ನಂತರ ಅಸ್ತಿತ್ವದಲ್ಲಿರುವ ರಾಜ್ಯದ ಬಿಜೆಪಿ ಸರ್ಕಾರ 40% ಕಮೀಶನ್ ಸರ್ಕಾರ ಎಂದೇಕೆ ಜಗತ್ ಪ್ರಸಿದ್ಧಿ ಪಡೆಯಬೇಕಿತ್ತು. ಮೊನ್ನೆ ಸಂಡೂರಿನಲ್ಲಿ ಭಾಷಣ ಮಾಡಿದ ಅಮಿತ್ ಶಾ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದರೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದೇಕೆ ಘೋಷಣೆ ಮಾಡಬೇಕಿತ್ತು. ಭ್ರಷ್ಟಾಚಾರವೆಂಬುದು ಸರ್ವೇ ಸಾಧಾರಣ ವಿದ್ಯಮಾನವಾಗಿರುವಾಗ ನಾಡಿನ ಜನತೆಯ ಹಿತ ಕಾಪಾಡುವ ಆಡಳಿತ ನೀಡುವ ವ್ಯಕ್ತಿ ಅಥವಾ ಸರ್ಕಾರ ಮುಖ್ಯವಾಗಿರಬೇಕಲ್ಲವೇ.


        ವಿವಾದಗಳಿಗೂ ಯಡಿಯೂರಪ್ಪನವರಿಗೂ ಎಲ್ಲಿಲ್ಲದ ನಂಟು, ವಿವಾದಗಳನ್ನು ಇವರೇ ಹುಡುಕೊಂಡು ಹೋಗುತ್ತಿದ್ದರೋ ಅವೇ ಇವರನ್ನು ಅರಸಿಕೊಂಡು ಬರುತ್ತಿದ್ದವೋ ಗೊತ್ತಿಲ್ಲ, ಒಟ್ಟಾರೆ ಏನು ಮಾಡಿದರೂ ಅದು ಹೆಚ್ಚು ವಿವಾದವಾಗೇ ಪರಿಣಮಿಸುತ್ತಿತ್ತು. ಹಾಗೆಯೇ ಸದನದಲ್ಲಿ ಮತ್ತು ಹೊರಗೆ ವಿರೋಧ ಪಕ್ಷಗಳವರ ಹಾಗೂ ಖಾಸಗಿಯಾಗಿ ಪಕ್ಷದವರ ಬಾಯಲ್ಲಿ ‘ಜೈಲಿಗೆ ಹೋದ ಮುಖ್ಯಮಂತ್ರಿ’ ಎಂದು ಅನ್ನಿಸಿಕೊಂಡ ಏಕೈಕ ಸಿಎಂ ಆಗಿಬಿಟ್ಟರು ಯಡಿಯೂರಪ್ಪ. ಅಧಿಕಾರದ ವ್ಯಾಮೋಹ, ಹಣದ ಮೋಹ, ಕುಟುಂಬ ವಾಂಛಲ್ಯ, ಹೆಣ್ಣಿನ ಆಕರ್ಷಣೆಗಳೆಲ್ಲ ಇಂತದ್ದೊಂದು ವ್ಯಕ್ತಿತ್ವದ ಸೃಷ್ಟಿಗೆ ಕಾರಣವಾದವಾ ಗೊತ್ತಿಲ್ಲ.


      ಮೂವರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳ ತುಂಬು ಕುಟುಂಬದ ತಾಯಿ ಮೈತ್ರಾದೇವಿ ಯಡಿಯೂರಪ್ಪ ಮನೆಯ ಮುಂದಿನ ನೀರಿನ ಸಂಪ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದಕ್ಕೂ ಶೋಭಾ ಕರಂದ್ಲಾಜೆಯನ್ನು ಅವರ ಸಂಪುಟದ ಏಕೈಕ ಮಹಿಳಾ ಮಂತ್ರಿ ಮಾಡಿಕೊಂಡದ್ದಕ್ಕೂ ಗಂಟು ಹಾಕಿದವರೂ ಉಂಟು, ‘ಯಾರ ಬಾಯಿ ಮುಚ್ಚಿಸಿದರೂ ಊರ ಬಾಯಿ ಮುಚ್ಚಿಸಲು ಆಗಲ್ಲ ʼ  ಎನ್ನುವುದು ಹಳೇ ಗಾದೆ, ‘‘ಊರ ಬಾಯಿ ಮುಚ್ಚಿಸಿದರೂ ಮೀಡಿಯಾಗಳ ಅದರಲ್ಲೂ ಸೋಶಿಯಲ್ ಮೀಡಿಯಾಗಳ ಬಾಯಿ ಮುಚ್ಚಿಸಲಾಗುವುದಿಲ್ಲ" ಎಂಬುದು ಆಧುನಿಕ ಗಾದೆ.


     ಇಂಥಾ ಯಡಿಯೂರಪ್ಪನವರನ್ನು ನನ್ನ ಪತ್ರಕರ್ತ ವೃತ್ತಿಯ ಅವಧಿಯಲ್ಲಿ ಮುಖಾಮುಖಿಯಾಗುವ ಅಪೂರ್ವ ಕ್ಷಣವೊಂದು ಒದಗಿ ಬಂದಿತ್ತು. 1999ರ ವಿಧಾನ ಸಭಾ ಚುನಾವಣೆಯ ದಿನಗಳವು. ಆದಾಗಲೇ ಬಿಜೆಪಿಯಿಂದ ಯಡಿಯೂರಪ್ಪ ಹಾಗೂ ಜೆಡಿಎಸ್‌ನಿಂದ ಸಿದ್ದರಾಮಯ್ಯನವರನ್ನು ಭಾವಿ ಮುಖ್ಯಮಂತ್ರಿಗಳೆಂದು ಪರಿಗಣಿಸಿಯಾಗಿತ್ತು. ಆಗ ನಾನು ಕೆಲಸ ಮಾಡುತ್ತಿದ್ದ ‘ ಜನವಾಹಿನಿ’ ಎಂಬ ಅಲ್ಪಾಯುಷಿಯಾದರೂ ಹೆಚ್ಚು ಜನಪ್ರಿಯಗೊಂಡಿದ್ದ ಹಾಗೂ ಭರವಸೆ ಹುಟ್ಟಿಸಿದ್ದ ರಾಜ್ಯ ಮಟ್ಟದ ದಿನಪತ್ರಿಕೆಯ ಪರವಾಗಿ ಶಿಕಾರಿಪುರದ ಚುನಾವಣಾ ಸಮೀಕ್ಷೆಗೆ ನನ್ನನ್ನು ಕಳಿಸಿದರು ಸಂಪಾದಕರು. ಎರಡು ರಾತ್ರಿ,ಮೂರು ಹಗಲು ಶಿಕಾರಿಪುರದಲ್ಲಿ ಬೀದಿ,ಬೀದಿ ಊರೂರು ಅಲೆದೆ, ಯಡಿಯೂರಪ್ಪನವರ ಜೊತೆ ಅವರ ಕಾರಿನಲ್ಲಿ ಕುಳಿತೂ ಒಂದಷ್ಟು ಹಳ್ಳಿಗಳಿಗೆ ಹೋಗಿದ್ದೆ. ಒಟ್ಟಾರೆ ಅವತ್ತಿನ ಲೆಕ್ಕದಲ್ಲಿ ಯಡ್ಡಿ ಸೋಲುತ್ತಾರೆ ಎಂಬುದು ನನ್ನ ಗ್ರಹಿಕೆಯಾಗಿತ್ತು, ಅದರಂತೇ ಬರೆದು ಕೊಟ್ಟೆ, ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದ ನಮ್ಮ ಸಂಪಾದಕರು ಅಷ್ಟೇ ನಾಟಕೀಯವಾಗಿ , “ ಅತಿಯಾದ ಆತ್ಮ ವಿಶ್ವಾಸ- ಕೇಸರಿ ಇಳುವರಿ ಕುಸಿತ’ ಎಂದು ಹೆಡ್ಡಿಂಗ್ ಕೊಟ್ಟು, ಪಿ.ಮಹಮ್ಮದ್ ಅವರ ಅತ್ಯುತ್ತಮ ಕ್ಯಾರಿಕೇಚರ್ ಜೊತೆ ಮುಖಪುಟದಲ್ಲೇ ಬೈಲೈನ್ ಸಹಿತ ನನ್ನ ಸಮೀಕ್ಷಾ ವರದಿ ಪ್ರಕಟಿಸಿದರು. ಆ ಚುನಾವಣೆಯಲ್ಲಿ ಅವರು ಬಂಗಾರಪ್ಪನವರ ಶಿಷ್ಯ ಕಾಂಗ್ರೆಸ್‌ನ ವಕೀಲ ಮಹಲಿಂಗಯ್ಯನವರಿಗೆ 7561 ಓಟುಗಳ ಅಂತರದಲ್ಲಿ ಯಡಿಯೂರಪ್ಪ ಸೋತರು.


           ನನ್ನ ವರದಿ ಪ್ರಕಟವಾದ ಬೆಳಿಗ್ಗೆಗೇ ಯಡಿಯೂರಪ್ಪ ಕಚೇರಿಗೆ ಫೋನ್ ಮಾಡಿ ಅದ್ಯಾರ‍್ರೀ ಅದು ಪ್ರಸನ್ನ, ನನ್ನ ಜೊತೇನೇ ಹಳ್ಳಿಗಳಿಗೆ ಬಂದಿದ್ದ, ಜನರು ನನ್ನನ್ನು ದೊಡ್ಡ ಪ್ರಮಾಣದಲ್ಲಿ ಸ್ವಾಗತ ಮಾಡುತ್ತಿದ್ದುದನ್ನೆಲ್ಲ ನೋಡಿಯೂ ಹೀಗೆ ಬರೆದಿದ್ದಾನೆ’ ಎಂದೆಲ್ಲ ಕೂಗಾಡಿದ್ದರು. ಆದರೆ ಮತದಾರ ಪ್ರಭುವಿನ ಲೀಲೆ,ನಾನೇನು ಮಾಡುವಂತಿರಲಿಲ್ಲ. ಮುಲಾಜಿಗೆ ಸಿಕ್ಕಿ ಪ್ರಿಯವಾದುದನ್ನು ಬರೆಯಲಾಗುವುದಿಲ್ಲ.


          ನೋವನ್ನು, ದುಃಖವನ್ನು ಎದುರಿಗೆ ತೋರಿಸಿಕೊಳ್ಳುವ ಮನುಷ್ಯ ಅಪಮಾನವನ್ನು, ದ್ವೇಷವನ್ನು ಎದೆಯ ಕುಲುಮೆಯೊಳಗೆ ಸೇಡಿನ ತಿದಿಯೊತ್ತುತ್ತಲೇ ಜತನವಾಗಿರಿಸಿಕೊಂಡಿರುತ್ತಾನೆ. ಮುಖದಲ್ಲಿ ಕಾಣುವ ಮುಗುಳ್ನಗೆಯಂತೆಯೇ ಮನದೊಳಗಿನ  ವಿಷದ ಹೊಗೆ ಯಾರ ಕಣ್ಣಿಗೂ ಕಾಣುವುದಿಲ್ಲ. 


       ಈ ಸಲದ ರಾಜ್ಯ ಬಿಜೆಪಿ ಚುನಾವಣೆಯಲ್ಲಿ ಯಡಿಯೂರಪ್ಪನವರ ನೆರವಿಲ್ಲದೇ ಅಧಿಕಾರಕ್ಕೆ ಬರುವಷ್ಟು ಸೀಟುಗಳನ್ನು ಗೆಲ್ಲಲಾಗುವುದಿಲ್ಲ ಎಂದು ದಿಲ್ಲಿ ದೊರೆಗಳಿಗೆ ಅರಿವಾಗಿದೆ, ಆದರೆ ತಡವಾಗಿ ಅರಿವಾಗಿದೆ. ವಿಧಾನ ಸಭೆಯಲ್ಲಿ 1983ರಿಂದ 2023ರವರೆಗೆ ಶಾಸಕರಾಗಿದ್ದ ಯಡಿಯೂರಪ್ಪ ಸದನಕ್ಕೆ ವಿದಾಯ ಹೇಳಿದ್ದಾರೆಯೇ ಹೊರತು ಕದನಕ್ಕಲ್ಲ. ಮಗನ ಭವಿಷ್ಯವನ್ನುಕಾಪಾಡುವ ಕಾರಣಕ್ಕೆ ತುಸು ಮೃದುವಾಗಿರುವಂತೆ ಕಂಡರೂ ಸ್ವೀಟ್ ರಿವೆಂಜ್ ತೀರಿಸಿಕೊಳ್ಳುವುದನ್ನು ತಳ್ಳಿಹಾಕಲು ಬರುವುದಿಲ್ಲ, ಜಸ್ಟ್ ವೇಯ್ಟ್ ಅಂಡ್ ಸೀ, ಓದುಗ ಪ್ರಭುಗಳಾದ ನೀವು ಕಾದು ನೋಡುವ ತಂತ್ರ ಅನುಸರಿಸಿ.