ಕೇಸರೀಕರಣ ಮತ್ತು ಬಾಬಾ ಸಾಹೇಬ ಅಂಬೇಡ್ಕರ್..,- ಒಂದು ಗಳಿಗೆ - ಕುಚ್ಚಂಗಿ ಪ್ರಸನ್ನ

dr br ambedkar and safronization - ondu galige- kuchangi prasanna

ಕೇಸರೀಕರಣ ಮತ್ತು ಬಾಬಾ ಸಾಹೇಬ ಅಂಬೇಡ್ಕರ್..,- ಒಂದು ಗಳಿಗೆ - ಕುಚ್ಚಂಗಿ ಪ್ರಸನ್ನ

ಡಿಸೆಂಬರ್ ಆರು, ಬಾಬಾಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಮತ್ತೊಮ್ಮೆ ನೆನೆಯಲೇಬೇಕಾದ ದಿನ, ಅಂಬೇಡ್ಕರ್ ಅವರ ದಿಟ್ಟ ವಿಚಾರಧಾರೆಯನ್ನು ದಿನವೂ ಅನುದಿನವೂ ಕ್ಷಣವೂ ಕ್ಷಣ ಕ್ಷಣವೂ ನೆನೆಯುತ್ತಲೇ ಇರಬೇಕಾದ ಸನ್ನಿವೇಶವನ್ನು ಈ ನೆಲದಲ್ಲಿ ಸೃಷ್ಟಿಸಲಾಗಿದೆ ಎನ್ನುವುದನ್ನು ಒಪ್ಪುತ್ತಲೇ ಅವರು ಭೌತಿಕವಾಗಿ ನಮ್ಮನ್ನಗಲಿದ ದಿನವನ್ನೂ ಸ್ಮರಿಸಿಕೊಳ್ಳೋಣ.

ಕೇಸರೀಕರಣ ಮತ್ತು ಬಾಬಾ ಸಾಹೇಬ ಅಂಬೇಡ್ಕರ್..,


1948ರಿಂದಲೂ ಅಂಬೇಡ್ಕರ್ ಡಯಾಬಿಟಿಸ್‌ನಿಂದ ಬಳಲುತ್ತಿದ್ದರು, ಔಷಧದ ಅಡ್ಡಪರಿಣಾಮಗಳು ಹಾಗೂ ದೃಷ್ಟಿ ಸಮಸ್ಯೆಯ ಕಾರಣವಾಗಿ ಅವರು 1954ರ ಅಕ್ಟೋಬರ್‌ನಿಂದಲೂ ಹಾಸಿಗೆ ಹಿಡಿದಿದ್ದರು. ದಿನ ಕಳೆದಂತೆ ಅವರ ಅರೋಗ್ಯ ಹದಗೆಡುತ್ತಾ ಬಂತು. ‘ಬುದ್ದ ಅಂಡ್ ಹಿಸ್ ಧಮ್ಮ’ ಕೃತಿಯನ್ನು ಬರೆದು ಮುಗಿಸಿದ ಮೂರು ದಿನಗಳ ಬಳಿಕ 1956ರ ಡಿಸೆಂಬರ್ ಆರರಂದು ದಿಲ್ಲಿಯ ಅವರ ನಿವಾಸದಲ್ಲಿ ಮಲಗಿರುವಂತೆಯೇ ಚಿರನಿದ್ರೆಗಿಳಿದರು.


ಮರುದಿನ ಡಿಸೆಂಬರ್ ಏಳರಂದು ಮುಂಬೈನ ದಾದರ್ ಪ್ರದೇಶದ ಚೌಪಾಟಿ ಕಡಲ ತೀರದಲ್ಲಿ ಬೌದ್ಧ ವಿಧಾನದಲ್ಲಿ ಅಂತ್ಯಸAಸ್ಕಾರ ನಡೆಯಿತು. ಬಾಬಾಸಾಹೇಬರಿಗೆ ಅಂತಿಮ ನಮನ ಸಲ್ಲಿಸಲು ಸೇರಿದ್ದ ಐದು ಲಕ್ಷಕ್ಕೂ ಹೆಚ್ಚು ಜನರು ಎಂಟತ್ತು ದಿನವಾದರೂ ಅಲ್ಲಿಂದ ಕದಲಲಿಲ್ಲ, ಬದಲಿಗೆ ಡಿಸೆಂಬರ್ 16ರಂದು ಅಂಬೇಡ್ಕರ್ ಅವರ ಹಾದಿಯಲ್ಲೇ ಬೌದ್ಧ ಧರ್ಮ ದೀಕ್ಷೆ ಸ್ವೀಕರಿಸಿದರು. ಈಗಲೂ ಅಲ್ಲಿ ಪ್ರತಿವರ್ಷ ದೊಡ್ಡದೊಂದು ಜಾತ್ರೆಯೇ ನಡೆಯುತ್ತದೆ. ಲಕ್ಷಾಂತರ ಅಂಬೇಡ್ಕರ್ ಅನುಯಾಯಿಗಳು ಕಲೆಯುತ್ತಾರೆ. ಸಾವಿರಾರು ಪುಸ್ತಕದ ಮಳಿಗೆಗಳು, ಹಾಡು, ಮಾತುಗಳ ಕಲರವ ಮೇಳೈಸುತ್ತದೆ.


ಆದರೆ ಕನ್ನಡದ ಜನರಾದ ನಮಗೆ ಅಂಬೇಡ್ಕರ್ ಒಂದು ವಿಗ್ರಹವಾಗಿ, ಒಂದು ಚಿತ್ರವಾಗಿ ನಮ್ಮ ಚಿತ್ತದಲ್ಲಿ ನೆಲೆಸಿದ್ದಾರೆಯೇ ಹೊರತು ನಾವು ಅಂಬೇಡ್ಕರ್ ಅವರನ್ನಾಗಲೀ ಅವರ ವಿಚಾರಗಳನ್ನಾಗಲೀ ಮನದುಂಬಿಕೊAಡಿಲ್ಲ. ದಲಿತ ಚಳವಳಿಯಿಂದ ಒಡಮೂಡಿ ಬಂದವರಲ್ಲೂ ಅಷ್ಟೇ ಅಂಬೇಡ್ಕರ್ ತಮ್ಮ ಹೋರಾಟದ ಬದುಕಿನ ಶಾಶ್ವತ ಹಾದಿ ಬೆಳಕು ಎಂಬ ದಟ್ಟ ಭಾವನೆ ಒಡಮೂಡಿಯೇ ಇಲ್ಲ, ಈ ಮಾತಿಗೆ ಅಪವಾದಗಳಂತೆ ಅಲ್ಲೊಬ್ಬರು ಇಲ್ಲೊಬ್ಬರು ಇರಬಹುದು.


ಅಂಬೇಡ್ಕರ್ ಅಸ್ಪೃಶ್ಯ ಜಾತಿಯೊಂದರಲ್ಲಿ ಜನಿಸಿದವರು ಮತ್ತು ಆ ಜನರಿಗಾಗಿಯೇ ಹೋರಾಡಿದವರು ಎಂಬ ಆಧುನಿಕ ಮೂಢನಂಬಿಕೆಯೂ ನಮ್ಮ ನಡುವೆ ಇದೆ, ಅದೂ ಅಪ್ಪಟ ಸುಳ್ಳು. ಅಂಬೇಡ್ಕರ್ ಇಂಡಿಯಾದ ಎಲ್ಲರಿಗಾಗಿ ತಮ್ಮ ಜೀವ ಸವೆಸಿದವರು. ಲಿಂಗ ತಾರತಮ್ಯವನ್ನೂ ಮಾಡದೇ ಎಲ್ಲರ ಎಲ್ಲ ಬಗೆಯ ಸಮಾನತೆಗಾಗಿ ತುಡಿದವರು. ಅದು ಹೇಗೆ ಎಂಬುದನ್ನು ಈ ಪುಟ್ಟ ಲೇಖನದಲ್ಲಿ ವಿವರಿಸುವ ದುಸ್ಸಾಹಸಕ್ಕೆ ಹೋಗುವುದಿಲ್ಲ. 


ಆದರೆ ಅಂಬೇಡ್ಕರ್ ಅವರ ಈ ಸಮಾನತೆಯ ಸಿದ್ಧಾಂತವನ್ನು ಈ ದೇಶದಲ್ಲಿ ಜಾತಿ ಎಂಬುದು ಹೇಗೆ ಎಲ್ಲ ಸಂಸ್ಥೆಗಳು ಹಾಗೂ ರಂಗಗಳಲ್ಲಿ ವಿಫಲಗೊಳಿಸುತ್ತಾ ಬಂದಿದೆ ಎಂಬುದನ್ನು ಮಾನವ ಹಕ್ಕುಗಳ ಹೋರಾಟಗಾರ ಡಾ. ಆನಂದ್ ತೇಲ್ತುಂಬ್ಡೆ ತಮ್ಮ ‘ ರಿಪಬ್ಲಿಕ್ ಆಫ್ ಕ್ಯಾಸ್ಟ್” ಕೃತಿಯಲ್ಲಿ ವಿವರಿಸುತ್ತಾರೆ. ಸಂಘ ಪರಿವಾರವು ಅಂಬೇಡ್ಕರ್ ಅವರನ್ನು ಆಂಟಿ- ಕಮ್ಯುನಿಸ್ಟ್ ಮತ್ತು ಆಂಟಿ- ಮುಸ್ಲಿಮ್ ಎಂದು ಪ್ರತಿಪಾದಿಸುವ ಮೂಲಕ ಸ್ವತಃ ಅಂಬೇಡ್ಕರ್ ಅವರನ್ನೂ ಕೇಸರೀಕರಣಗೊಳಿಸುವ ಹುನ್ನಾರ ನಡೆಸಿದೆ ಎನ್ನುವುದನ್ನು ಡಾ. ಆನಂದ್ ಹೇಳಿದ್ದಾರೆ. 


ಮೊದಲು ಖರಗ್‌ಪುರ್‌ನ ಐಐಟಿ ಪ್ರೊಫೆಸರ್ ಅಗಿದ್ದ ಡಾ.ಆನಂದ್ ತೇಲ್ತುಂಬ್ಡೆ ಆನಂತರ ಗೋವಾದ ಐಐಎಂನಲ್ಲಿ ಡೇಟಾ ಅನಾಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮಾನವ ಹಕ್ಕುಗಳು ಆ ಮೂಲಕ ದಲಿತ ಹಕ್ಕುಗಳ ಕಡು ಪ್ರತಿಪಾದಕರಾಗಿ ನರೇಂದ್ರ ಮೋದಿ ಆಡಳಿತವನ್ನು ರಚನಾತ್ಮಕವಾಗಿ ದಾಖಲೆಗಳ ಸಹಿತ ಟೀಕಿಸುತ್ತಿದ್ದರು. ಅವರ ಸೋದರ ಮಾವೋ ಸಿದ್ದಾಂತದ ಪ್ರತಿಪಾದಕ ಎಂಬ ಒಂದು ಎಳೆಯನ್ನು ನೆವವಾಗಿ ಒಡ್ಡಿ, ಪ್ರಧಾನಿ ಹತ್ಯೆ ಸಂಚು ಆರೋಪ ಹೊರಿಸಿ ಹಾಗೂ ಭೀಮಾ ಕೋರೆಗಾವ್ ಹಿಂಸಾಚಾರ ಪ್ರಕರಣದಲ್ಲಿ ಪಾತ್ರವಿದೆ ಎಂದು ದೂರಲಾಗಿದೆ. ಈ ಪ್ರಕರಣದ ವಿರುದ್ದ ಅವರು 2018ರ ಸೆಪ್ಟೆಂಬರ್ 29ರಿಂದಲೂ ಕಾನೂನು ಹೋರಾಟ ಮಾಡುತ್ತಲೇ ಬಂದರು. ಆದರೆ ಅವರ ಮೇಲೆ ಹೊರಿಸಿದ ಯುಎಪಿಎ ಕಾಯ್ದೆಗೆ ಜಾಮೀನು ನೀಡುವಂತಿಲ್ಲ ಎಂಬ ನ್ಯಾಯಾಲಯದ ಆದೇಶದ ಮೇರೆಗೆ ಡಾ.ಆನಂದ್ ತೇಲ್ತುಂಬ್ಡೆ ಅವರನ್ನು  2020ರ ಏಪ್ರಿಲ್ 14ರಂದು( ಅಂಬೇಡ್ಕರ್ ಜನ್ಮ ದಿನ) ಅವರ ನಿವಾಸದಿಂದ ಬಂಧಿಸಿ ಎಳೆದೊಯ್ಯಲಾಯಿತು. ಸದ್ಯ ಅವರು ನ್ಯಾಯಾಲಯದ ವಿಚಾರಣೆಗಾಗಿ ಕಾಯುತ್ತ ನವೀಮುಂಬೈನ ತಲೋಜಾ ಜೈಲಿನಲ್ಲಿ ಬಂದಿಯಾಗಿ ಕೊಳೆಯುತ್ತಿದ್ದಾರೆ. ಕೋವಿಡ್ ಸೋಂಕಿನAಥಾ ಮಾರಕ ಸನ್ನಿವೇಶದಲ್ಲೂ ಅವರನ್ನು ಹೊರಬಿಡಲಿಲ್ಲ. ವಾರಕ್ಕೊಮ್ಮೆ ಕೇವಲ ಎರಡು ನಿಮಿಷ ಅವರು ತಮ್ಮ ಪತ್ನಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಮಾತ್ರವೇ ಅವಕಾಶ ನೀಡಲಾಗಿದೆ. ಮಾನವ ಹಕ್ಕುಗಳಿಗಾಗಿ ಪ್ರಾಮಾಣಿಕ ಹೋರಾಟ ಮಾಡಿದ್ದಕ್ಕಾಗಿ ಅವರು ಈ ಶಿಕ್ಷೆಯಲ್ಲದ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ನೆನಪಿರಲಿ ಡಾ.ಆನಂದ್ ತೇಲ್ತುಂಬ್ಡೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗಳು ರಮಾ ಅವರ ಪತಿ. ಒಂದೊಮ್ಮೆ ನಮ್ಮ ಈ ಅಂಬೇಡ್ಕರ್ ಅವರೇನಾದರೂ ಈ ದಿನಗಳಲ್ಲಿ ಜೀವಂತವಿದ್ದಿದ್ದರೆ ಅವರೂ ತಮ್ಮ ವಿಚಾರ ಹಾಗೂ ಹೋರಾಟಗಳಿಗಾಗಿ ಜೈಲು ಕಾಣುತ್ತಿದ್ದರು ಅಂತ ಅಂದರೆ ಭಾವುಕರಾಗಿ ನನ್ನನ್ನು ನಿಂದಿಸಬೇಡಿ.  


ಇಂಥಾ ಡಾ.ಆನಂದ್ ತೇಲ್ತುಂಬ್ಡೆ ತಮ್ಮ ರಿಪಬ್ಲಿಕ್ ಆಫ್ ಕ್ಯಾಸ್ಟ್ ಅಂದರೆ ‘ ಜಾತಿಯ ಗಣರಾಜ್ಯ’ ಕೃತಿಯಲ್ಲಿ ಮಾರ್ಕ್ಸಿಸಂ ಹಾಗೂ ಅಂಬೇಡ್ಕರಿಸA ಬೆಳಕಿನಲ್ಲಿ ಶಿಕ್ಷಣ, ಮೀಸಲಾತಿ, ರಾಜಕೀಯ ಮತ್ತು ನೀತಿ ನಿರೂಪಣೆಗಳನ್ನು ಮತ್ತು ದಲಿತರ ಮೇಲಿನ ಹಲ್ಲೆ ಮತ್ತು ಹಿಂಸೆಯನ್ನು ಗುಜರಾತಿನ ಊನಾ ಪ್ರಕರಣಗಳ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೆ. ಜಾತಿ ಅದರಲ್ಲೂ ವಿಶೇಷವಾಗಿ ದಲಿತರ ಶೋಷಣೆಯು ಆಧುನಿಕ ಇಂಡಿಯಾವನ್ನು ನಿರೂಪಿಸಿದೆ ಎನ್ನುತ್ತಾರೆ ಆನಂದ್.


ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ‘ ಹಿಂದೂ ರಾಷ್ಟç’ ಗುರಿ ಸಾಧನೆಗಾಗಿ ದಲಿತರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅನಿವಾರ್ಯತೆ ಎದುರಾದಾಗ ಹಿಂದುತ್ವದ ಕಟು ಟೀಕಾಕಾರ ಅಂಬೇಡ್ಕರ್ ಅವರನ್ನೂ ಕೈಬಿಡಲಾಗದ ಪರಿಸ್ಥಿತಿಯಲ್ಲಿ ಅವರ ಬರವಣಿಗೆಗಳನ್ನು ತಪ್ಪಾಗಿ ವ್ಯಾಖ್ಯಾನಿಸುತ್ತ ಅವರು ಕಮ್ಯುನಿಸಂ ಮತ್ತು ಮುಸ್ಲಿಮರ ವಿರೋಧಿಗಳಾಗಿದ್ದರು ಎಂದು ಹೇಳುತ್ತ ಬಾಬಾಸಾಹೇಬರನ್ನು ಅತ್ಯಂತ ಪರಿಣಾಮಕಾರಿಯಾಗಿ ಕೇಸರೀಕರಿಸುವಲ್ಲಿ ಯಶಸ್ವಿಯಾಗಿಬಿಟ್ಟಿದ್ದಾರೆ ಎಂದು ಗುರುತಿಸುತ್ತಾರೆ.


ದಲಿತರು ಸಂಘ ಪರಿವಾರದ ಗೇಮ್ ಪ್ಲಾನ್‌ನ ಮುಖ್ಯ ಭಾಗವಾಗಿದ್ದಾರೆ. ಇಂಡಿಯಾದ ಜನರನ್ನು ಹಿಂದೂ ವರ್ಸಸ್ ಇತರರು ಅಂದರೆ ಇವರ ಸಿದ್ದಾಂತವನ್ನು ಒಪ್ಪದ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಕಮ್ಯುನಿಸ್ಟರು ಎಂಬುದಾಗಿ ಧ್ರುವೀಕರಿಸುವ ನಿಟ್ಟಿನಲ್ಲಿ ದಲಿತರನ್ನೂ ಹಿಂದುಗಳ ಭಾಗವಾಗಿ ಮಾಡಿಕೊಳ್ಳುವುದು ಇವರ ಹುನ್ನಾರ. ಆದರೆ ದಲಿತರನ್ನು ಅವರ ಐತಿಹಾಸಿಕ, ಸಾಮಾಜಿಕ, ಸೈದ್ದಾಂತಿಕ ಮತ್ತು  ಸಾಂಸ್ಕೃತಿಕ ಅಸ್ಮಿತೆಗಳ ಹಿನ್ನೆಲೆಯಲ್ಲಿ ಸುಮ್ಮಸುಮ್ಮನೇ ತಮ್ಮನ್ನು ತಾವು ಹಿಂದೂಗಳು ಎಂದು ಗುರುತಿಸಿಕೊಳ್ಳುವುದಿಲ್ಲವಲ್ಲ ಎಂಬ ಕಾರಣದಿಂದಾಗಿಯೇ ಅಂಬೇಡ್ಕರ್ ಅವರನ್ನು ಕೇಸರೀಕರಣ ಮಾಡಹೊರಟಿದ್ದು. ಅಂಬೇಡ್ಕರ್ ಅವರನ್ನು ಸಾಕಷ್ಟು ಕೇಸರೀಕರಣಗೊಳಿಸದ ಹೊರತು ದಲಿತರು ಸಂಘ ಪರಿವಾರದ ತೆಕ್ಕೆಗೆ ದಕ್ಕುವುದಿಲ್ಲ ಎಂಬುದು ಅವರು ರಾಜಕೀಯ ತಂತ್ರಗಾರಿಕೆಯ ಒಂದು ಮುಖ್ಯ ಭಾಗ.


ಈ ತಂತ್ರಗಾರಿಕೆ ಇವತ್ತು ನೆನ್ನೆಯದಲ್ಲ ಎಂದು ಡಾ. ಆನಂದ್ ತೇಲ್ತುಂಬ್ಡೆ ಗುರುತಿಸುತ್ತಾರೆ, 1973-94ರವರೆಗೆ ಆರ್‌ಎಸ್‌ಎಸ್‌ನ ಸರಸಂಘಚಾಲಕರಾಗಿದ್ದ ಮಧುಕರ್ ದತ್ತಾತ್ರೇಯ ಅಲಿಯಾಸ್ ಬಾಳಸಾಹೇಬ್ ದೇವರಸ್ ಆರ್‌ಎಸ್‌ಎಸ್‌ನ ಎನ್‌ಜಿಓ ‘ಸೇವಾಭಾರತಿ’ಯನ್ನು ದಲಿತರೊಂದಿಗೆ ಸಕ್ರಿಯ ಕಾರ್ಯಗಳನ್ನು ನಡೆಸುವಂತೆ ನಿಯೋಜಿಸುತ್ತಾರೆ. ಹೀಗಾಗಿ ಅಂಬೇಡ್ಕರ್ ಆರ್‌ಎಸ್‌ಎಸ್‌ನ “ ಪ್ರಾತಃಸ್ಮರಣೀಯರಲ್ಲಿ” ಒಬ್ಬರಾಗಿ ಸೇರ್ಪಡೆಗೊಳ್ಳುತ್ತಾರೆ. ಮಧ್ಯಮ ವರ್ಗದ ದಲಿತರಿಗೆ ಸಾಮಾಜಿಕ ಮನ್ನಣೆ ನೀಡಲೆಂದೇ ಪ್ರತ್ಯೇಕ ವೇದಿಕೆ ಆರಂಭಗೊಳ್ಳುತ್ತದೆ. 1983ರಲ್ಲಿ ಸಂಘ ಪರಿವಾರ ಅಂಬೇಡ್ಕರ್ ಜನ್ಮದಿನವನ್ನು ಮೊಟ್ಟ ಮೊದಲ ಸಲ ಆಚರಿಸಲೂ ಮುಂದಾಗುತ್ತದೆ.


ಹೀಗೆ ಅಂಬೇಡ್ಕರ್ ಅವರ ಕಡೆ ಪಲ್ಲಟಗೊಂಡ ನಂತರ, ಆರ್‌ಎಸ್‌ಎಸ್ ಸ್ಥಾಪಕ ಕೆ.ಬಿ. ಹೆಡ್ಗೆವಾರ್ ಹಾಗೂ ಬಿ.ಆರ್.ಅಂಬೇಡ್ಕರ್ ಇಬ್ಬರೂ “ಡಾಕ್ಟರ್ ಗೆಳೆಯರು” ಎಂಬ ಪರಿಕಲ್ಪನೆಯನ್ನು ತೇಲಿಬಿಡಲಾಗುತ್ತದೆ. ಆದರೆ ಈ ಇಬ್ಬರೂ ಹೊಂದಿದ್ದ ಡಾಕ್ಟರೇಟ್ ಪದವಿಗಳೇ ಬೇರೆ ಬೇರೆ. ಇಂಥಾ ಪರಿಕಲ್ಪನೆಗಳೇ ಮುಂದುವರೆಯುತ್ತ ಅಂಬೇಡ್ಕರ್ ಆರ್ ಎಸ್ ಎಸ್ ಅನ್ನು ಮೆಚ್ಚಿಕೊಂಡಿದ್ದರು, ಅವರು ಹಾಲಿ ತ್ರಿವರ್ಣ ಧ್ವಜದ ಬದಲಿಗೆ ಕೇಸರಿ ಧ್ವಜ ಇರಬೇಕು ಅಂತ ಹೇಳಿದ್ದರು ಎಂದೆಲ್ಲ ಹೇಳಬರಲಾಗುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಅಂಬೇಡ್ಕರ್ ವಿಗ್ರಹವನ್ನು ಇಡಿಯಾಗಿ ಕೇಸರಿ ಬಣ್ಣವನ್ನು ಬಳಿದು,ನಂತರ ಬಿಎಸ್‌ಪಿ ಪ್ರತಿಭಟಿಸಿ ಮತ್ತೆ ನೀಲಿ ಬಣ್ಣ ಹಚ್ಚಿನ ಪ್ರಸಂಗವೂ 2014ರಲ್ಲಿ ನಡೆದಿದೆ(ಚಿತ್ರ ನೋಡಿ).


ಸಾಂಸ್ಕೃತಿಕ ಸಾಮಾಜಿಕ ನೆಲೆಗಳಲ್ಲಿ ದಲಿತರನ್ನು ಒಳಗೊಳ್ಳುವ ಪ್ರಕ್ರಿಯೆಗಿಂತ ಸುಲಭವಾಗಿ ಆರ್‌ಎಸ್‌ಎಸ್‌ನ ರಾಜಕೀಯ ವಿಭಾಗ ಭಾರತೀಯ ಜನತಾ ಪಾರ್ಟಿಯಲ್ಲಿ ಈ ಕಾರ್ಯಕ್ರಮ ಬೇಗನೆ ಯಶಸ್ಸು ಕಂಡಿತು. ಮೀಸಲು ಕ್ಷೇತ್ರಗಳಲ್ಲಿ ದಲಿತ ರಾಜಕಾರಣಿಗಳನ್ನು ಸೆಳೆಯುತ್ತಾ ಸೆಳೆಯುತ್ತಾ 2014ರ ಮಹಾ ಚುನಾವಣೆಯಲ್ಲಿ ಇತರ ಎಲ್ಲ ರಾಜಕೀಯ ಪಕ್ಷಗಳಿಗಿಂತ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಮೀಸಲು ಕ್ಷೇತ್ರಗಳಿಂದ ಚುನಾಯಿತರಾದದ್ದನ್ನು ಗಮನಿಸಬಹುದು.( ಈ ಕುರಿತು ನಮ್ಮ ಕಟು ವಿಶ್ಲೇಷಕ ಡಾ. ಕೆ.ಪಿ. ನಟರಾಜ್ ಪದೇ ಪದೇ ಅವರ ಫೇಸ್ ಬುಕ್ ವಾಲ್‌ನಲ್ಲಿ ಈ ಕುರಿತು ಅಂಕಿ ಅಂಶಗಳನ್ನು ಮುಂದಿಟ್ಟಿದ್ದಾರೆ)


ಅAಬೇಡ್ಕರ್ ಅವರನ್ನು ಕೇಸರೀಕರಣಗೊಳಿಸುವ ಪ್ರಕ್ರಿಯೆ ಏನೇ ಆಗಿದ್ದರೂ ಅಂಬೇಡ್ಕರ್ ಅವರ ಕಡೇ ದಿನಗಳಲ್ಲಿ “ ಪಾಕಿಸ್ತಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ(1945) ಕೃತಿಯಲ್ಲಿ ಹೇಳಿರುವ ಮಹತ್ವದ ಅಂಶಗಳತ್ತ ಆನಂದ್ ನಮ್ಮ ಗಮನ ಸೆಳೆಯುತ್ತಾರೆ. “ ಒಂದು ವೇಳೆ ಹಿಂದೂ ರಾಜ್ಯ ವಾಸ್ತವಕ್ಕಿಳಿಯುವುದೇ ಆದಲ್ಲಿ ಅದು ಈ ದೇಶಕ್ಕೆ ಅತಿ ದೊಡ್ಡ ಗಂಡಾAತರ ಎಂಬುದರಲ್ಲಿ ಅನುಮಾನವೇ ಇಲ್ಲ, ಹಿಂದೂಗಳು ಏನೇ ಹೇಳಲಿ, ಹಿಂದುತ್ವವು ಈ ದೇಶದ ಸ್ವಾತಂತ್ರö್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ದೊಡ್ಡ ಪಿಡುಗೇ ಸರಿ, ಈ ಲೆಕ್ಕದಲ್ಲಿ ಇದು ಪ್ರಜಾಪ್ರಭುತ್ವಕ್ಕೆ ಹೊಂದಿಕೊಳ್ಳುವುದಿಲ್ಲ ಮತ್ತು ಎಷ್ಟೇ ಕಷ್ಟವಾದರೂ ಅದನ್ನು ತಡೆಯಬೇಕು” ಎಂದಿದ್ದಾರೆ ಅಂಬೇಡ್ಕರ್ ಎನ್ನುತ್ತಾರೆ ಆನಂದ್. 


ಅಂಬೇಡ್ಕರ್ ಮರಣಾನಂತರ ಪ್ರಕಟವಾದ ಅವರ ಕೃತಿ “ ಫಿಲಾಸಫಿ ಆಫ್ ಹಿಂದೂಯಿಸA” ನಲ್ಲೂ ಹಿಂದುತ್ವವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಆದರೆ ಸಂಘ ಪರಿವಾರದ ಸುಳ್ಳು ಹರಡುವ ಜಾಲಕ್ಕೆ ಇಂತ ಸತ್ಯಾಂಶಗಳೆಲ್ಲ ಅಡ್ಡಿಯಾಗುವುದೇ ಇಲ್ಲ, ಅದು ಅಂಬೇಡ್ಕರ್ ಅವರನ್ನು ಮಹಾನ್ ಹಿಂದೂ ಆಗಿದ್ದರು ಎಂದು ಸುಳ್ಳು ಸಾರುತ್ತಲೇ ಹೋಯಿತು. ಆದರೆ ದಲಿತರು ಮತ್ತು ಇತರ ವಿದ್ಯಾರ್ಥಿ ಗುಂಪುಗಳು ಹೆಚ್ಚು ಹೆಚ್ಚು ಅಂಬೇಡ್ಕರ್ ಹಾಗೂ ಅವರ ವಿಚಾರವನ್ನು ಆಳ ಅಧ್ಯಯನ ಮಾಡತೊಡಗಿದ್ದರಿಂದ ಆರ್‌ಎಸ್‌ಎಸ್‌ನ ನಕಲಿ ಹೇಳಿಕೆಗಳಿಗೆ ಹೆಚ್ಚು ಮೌಲ್ಯ ದೊರಕದೇ ಹೋಯಿತು. ಮೇ 2015ರಲ್ಲಿ ಚೆನ್ನೆöÊನಲ್ಲಿ ಮದ್ರಾಸ್ ಐಐಟಿಯು ಅಂಬೇಡ್ಕರ್-ಪೆರಿಯಾರ್ ಅಧ್ಯಯನ ಗ್ರೂಪ್‌ಗೆ ಮಾನ್ಯತೆ ನಿರಾಕರಿಸಿದ ಘಟನೆಯನ್ನು ಗಮನಿಸಿ. ಆಗ ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್‌ನ ಜೂನ್ 2015ರ ಸಂಚಿಕೆಯ ಸಂಪಾದಕೀಯ ಈ ತಂಡದ ಸದಸ್ಯರನ್ನು ನಕಲಿ ಅಂಬೇಡ್ಕರ್‌ವಾದಿಗಳೆAದು ಹೇಳಿ ಖಂಡಿಸಲಾಯಿತು. ಇವರನ್ನು ರೆಡ್ಸ್ ಎಂದು ಗುರುತಿಸುವ ಮೂಲಕ ಕಮ್ಯುನಿಸ್ಟರೆಂದು ಹೇಳಲಾಯಿತು. ಅಂಬೇಡ್ಕರ್ ಅವರ ‘ ಅನ್‌ಹಿಲೇಶನ್ ಆಫ್ ಕ್ಯಾಸ್ಟ್’ ನಿಂದಲೂ ಅನುಕೂಲ ಸಿಂಧು ಪ್ಯಾರಾಗಳನ್ನು ಉಲ್ಲೇಖಿಸಲಾಯಿತು. ಆದರೆ ಇಲ್ಲಿ ಅಂಬೇಡ್ಕರ್ ಅವರು 1936ರಲ್ಲಿ ಹೇಳಿದ್ದ ಬ್ರಾಹ್ಮಣತ್ವ ಹಿಂದೂ ಧರ್ಮದ ದೊಡ್ಡ ರೋಗ ಎಂಬ ಮಾತನ್ನು ಮರೆತದ್ದು ಆಕಸ್ಮಿಕವೇನಲ್ಲ ಅಲ್ಲವೇ.


ಅಂಬೇಡ್ಕರ್ ಅವರ ನೈಜ ಸ್ವರೂಪವನ್ನು ಕೆಡಿಸುವ ನಿಟ್ಟಿನಲ್ಲಿ ಎನ್‌ಡಿಎ ಸರ್ಕಾರ ಕೂಡಾ ಸಂಘ ಪರಿವಾರಕ್ಕೆ ಹೇಗೆ ನೆರವಾಯಿತು ನೋಡಿ, ಬಾಬಾ ಸಾಹೇಬರ ಜನ್ಮ ಸ್ಥಳ, ಅವರು ಇಂಗ್ಲೆAಡಿನಲ್ಲಿ ವ್ಯಾಸಂಗ ಮಾಡುವಾಗ ಉಳಿದುಕೊಂಡಿದ್ದ ಮನೆ, ಅವರ ನಾಗಪುರದ ದೀಕ್ಷಾಭೂಮಿ, ಅವರು ಮರಣಿಸಿದ ದಿಲ್ಲಿಯ ನಿವಾಸ ಮತ್ತು ಅವರನ್ನು ಅಂತ್ಯ ಸಂಸ್ಕಾರ ಮಾಡಿದ ಮುಂಬೈನ ಚೈತ್ಯ ಭೂಮಿ ಹೀಗೆ ಈ ಐದು ಸ್ಥಳಗಳಿಗೆ ತೀರ್ಥಯಾತ್ರೆ ರೀತಿಯ ಪ್ರವಾಸ ಕರೆದೊಯ್ಯುವ “ ಪಂಚ ತೀರ್ಥ ಯೋಜನೆ” ಕೂಡಾ ಇದರ ಒಂದು ಭಾಗವೇ ಹೌದು.


ಇನ್ನೂ ಮುಂದುವರೆದು ಇವರು ಯಾವುದೇ ಲಜ್ಜೆಯಿಲ್ಲದೇ ಅಂಬೇಡ್ಕರ್ ಅವರನ್ನು ಹಿಂದೂ ಧರ್ಮ ಸಂರಕ್ಷಕ ಎಂದೂ ಬಿಂಬಿಸುತ್ತಾರೆ. ಹೇಗೆ ಎಂದಿರಾ, ನೋಡಿ ಒಂದು ವೇಳೆ ಬಾಬಾ ಸಾಹೇಬರು ಈ ನೆಲದ್ದೇ ಆಗಿರುವ ಬೌದ್ಧ ಧರ್ಮದ ಬದಲಿಗೆ ಇಸ್ಲಾಮನ್ನೋ, ಕ್ರೆöÊಸ್ತ ಧರ್ಮವನ್ನೋ ಸ್ವೀಕರಿಸಿದ್ದರೆ ಹೇಗಿರುತ್ತಿತ್ತು ನೋಡಿ ಎಂಬ ಕಾಲ್ಪನಿಕ ಸನ್ನಿವೇಶವೊಂದನ್ನು ಸೃಷ್ಟಿಸುವ ಮೂಲಕ ದಲಿತರನ್ನು ಘರ್ ವಾಪ್ಸಿಗೆ ಪ್ರೇರಿಸತೊಡಗುತ್ತಾರೆ.


ಆರ್‌ಎಸ್‌ಎಸ್ ಪರವಾಗಿ ಮೂಂಜೆ ವಿಮಾನ ನಿಲ್ದಾಣದಲ್ಲಿ ಸಂವಿಧಾನ ರಚಿಸುತ್ತಿದ್ದ ಅಂಬೇಡ್ಕರ್ ಅವರನ್ನು ಭೇಟಿ ಮಾಡಿ ಕೇಸರಿ ಧ್ವಜವನ್ನು ರಾಷ್ಟç ಧ್ವಜವನ್ನಾಗಿ ಮಾಡಿ ಮತ್ತು ಸಂಸ್ಕೃತವನ್ನು ರಾಷ್ಟç ಭಾಷೆ ಎಂದು ಪರಿಗಣಿಸಿ ಎಂದು ಮನವಿ ಕೊಟ್ಟರೇನೋ ನಿಜ, ಆದರೆ ಅದೊಂದು ಭೇಟಿಯನ್ನೇ ಮುಂದಿಟ್ಟುಕೊAಡು ಅಂಬೇಡ್ಕರ್ ಅದನ್ನೆಲ್ಲ ಒಪ್ಪಿದ್ದರು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಆನಂದ್ ಪ್ರಶ್ನಿಸುತ್ತಾರೆ. ಜೊತೆಗೆ ಬಾಬಾ ಸಾಹೇಬರು ಬೌದ್ಧ ಧರ್ಮದ ಚಕ್ರವನ್ನು ದೇಶದ ಅಧಿಕೃತ ಧ್ವಜದೊಳಗೆ ಸೇರ್ಪಡೆ ಮಾಡಿದ್ದನ್ನು, ಪ್ರಾಚೀನ ಭಾರತದ ಬೌದ್ಧ ಚಕ್ರವರ್ತಿ ಸಾಮ್ರಾಟ್ ಅಶೋಕನ ನಾಲ್ಕು ಸಿಂಹಗಳ ಸ್ತಂಭವನ್ನು ದೇಶದ ಲಾಂಛನ ಮಾಡಿದ್ದನ್ನು ಇವರೇಕೆ ನೆನಪಿಸಿಕೊಳ್ಳುವುದಿಲ್ಲ ಎಂದು ಕೇಳಬೇಕಾಗುತ್ತದೆ.


ಅಂಬೇಡ್ಕರ್ ಅವರು ಇಂಡಿಯಾ ಒಂದು ಕಲ್ಯಾಣ ರಾಜ್ಯವಾಗಬೇಕು ಎಂದು ತೀವ್ರವಾಗಿ ಬಯಸಿದ್ದರು. ದೇಶದ ಎಲ್ಲ ನಾಗರಿಕರಿಗೆ ಸ್ವಾತಂತ್ರö್ಯ, ಸಮಾನತೆ ಮತ್ತು ಭ್ರಾತೃತ್ವಗಳ ಜೊತೆಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಖಾತರಿಪಡಿಸತಕ್ಕದ್ದು ಎಂದಿದ್ದರು. ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡುವ ದೇಶವಾಗಬೇಕು ಎಂದಿದ್ದರು. ಆದರೆ ವರ್ಷಗಳು ಕಳೆದಂತೆ ಇಂಡಿಯಾ ನವ ಉದಾರವಾದಿ ದೇಶವಾಗಿ ರೂಪುಗೊಂಡಿತು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದನ್ನು ಒಂದು ಸರ್ಕಾರ ಹೋಯಿತು ಮತ್ತೊಂದು ಸರ್ಕಾರ ಬಂದಿತು ಎನ್ನುವ ಸಾಧಾರಣ ಮಾತುಗಳಲ್ಲಿ ಹೇಳಲು ಬರುವುದಿಲ್ಲ. ಇದೊಂದು ಫ್ಯಾಸಿಸ್ಟ್ವಾದಕ್ಕೆ ಜನ್ಮ ನೀಡುವ ಉದಾರವಾದ ಹಾಗೂ ಹಿಂದುತ್ವವಾದದ ವಿಲಕ್ಷಣ ಸಂಯೋಜನೆ. ಫ್ಯಾಸಿಸಂ ಸ್ವರೂಪ ದೇಶದಿಂದ ದೇಶಕ್ಕೆ ಆಯಾ ದೇಶಗಳ ಐತಿಹಾಸಿಕ, ಸಾಮಾಜಿಕ ಮತ್ತು ಆರ್ಥಿಕ ಸಂದರ್ಭಗಳನ್ನು ಮತ್ತು ರಾಷ್ಟಿçÃಯ ವೈಶಿಷ್ಟö್ಯಗಳನ್ನು ಆಧರಿಸಿ ಬದಲಾಗುತ್ತಾ ಹೋಗುತ್ತದೆ. ಇದು ಇಂಡಿಯಾದಲ್ಲಿ ಅಂಬೇಡ್ಕರ್ ಬಯಸಿದ್ದಕ್ಕೆ ತದ್ವಿರುದ್ದವಾಗಿ ಸಂವಿಧಾನ ಮತ್ತು ಸಂವಿಧಾನಾತ್ಮಕ ನೈತಿಕತೆ ಮಾರಕವಾಗಿ ರೂಪುಗೊಳ್ಳುತ್ತಾ ಹೋಗುತ್ತಿದೆ.


ಮಾತುಗಳಲ್ಲಿ, ಸಂವಾದಗಳ ಮೂಲಕ ಒಪ್ಪಿಸಲಾಗದೇ ಸೋತು ನರಳಿ ಹತಾಶವಾಗುವ ಈ ಫ್ಯಾಸಿಸಂ ತನ್ನನ್ನು ವಿರೋಧಿಸುವ ಎಲ್ಲರ ವಿರುದ್ಧ ಸೈನ್ಯ ಮತ್ತು ಪೊಲೀಸರನ್ನು ಬಳಸಿ, ನ್ಯಾಯಾಲಯಗಳಲ್ಲಿ ವಿಚಾರಣೆಗೇ ಅವಕಾಶ ಕಲ್ಪಿಸಲಾಗದ, ಜಾಮೀನು ದೊರಕಲಾಗದಂಥ ಜನವಿರೋಧಿ ಕಾನೂನುಗಳ ಮೂಲಕ ನಿಯಂತ್ರಿಸತೊಡಗುತ್ತದೆ. ಈಗ ಆಗುತ್ತಿರುವುದೂ ಅದೇ, ಅಂಬೇಡ್ಕರ್ ಅವರನ್ನು ದಲಿತರನ್ನು ತನ್ನತ್ತ ಸೆಳೆಯಲು ಬಳಸಿಕೊಳ್ಳುತ್ತ ಬಂದ ಇದೇ ಜನರು ಬಾಬಾ ಸಾಹೇಬರ ಪರಿನಿಬ್ಬಾನದಂದೇ ವಿವಾದಿತ ಮಸೀದಿಯನ್ನು ಧ್ವಂಸಗೊಳಿಸಿದ್ದು ಕೇವಲ ಆಕಸ್ಮಿಕ ಎಂದು ಭಾವಿಸಬೇಕೇ.


ಈ ಎಲ್ಲ ಹಿನ್ನೆಲೆಯಲ್ಲಿ ತಣ್ಣಗೆ ಕೂತು ಯೋಚಿಸಿದಲ್ಲಿ, ಅದೇಕೆ, ಅಸ್ಪೃಶ್ಯ ಸಮುದಾಯದಿಂದ ಬಂದ ಕೇಂದ್ರ ಮಂತ್ರಿಯ ಬಾಯಿಯಿಂದಲೇ “ ಹಿಂದೂ ರಾಷ್ಟç” ನಿರ್ಮಿಸುವ ಹೇಳಿಕೆಗಳನ್ನು ಹೇಳಿಸಲಾಗುತ್ತದೆ ಎನ್ನುವುದು ಅರ್ಥವಾಗುತ್ತದೆ. ಅತ್ಯಾಧುನಿಕ ಸಾಮಾಜಿಕ ಜಾಲತಾಣಗಳು, ಕ್ಷಣಕ್ಷಣಕ್ಕೆ ಬಣ್ಣ ಬದಲಿಸುವ ಊಸರವಳ್ಳಿಯಂಥ ಟಿವಿ ಮಾಧ್ಯಮಗಳು ಜನರು ಮತ್ತು ಸಮುದಾಯಗಳ ನಡುವೆ ದ್ವೇಷ ಸಾಧಿಸುವ ಸಾಧನಗಳಾಗಿಬಿಟ್ಟಿವೆ. ಹಂಸಲೇಖಾ ಪ್ರಕರಣ ಕೂಡಾ ತಾಜಾ ನಿದರ್ಶನ. ಮತ್ತು ಮಾಂಸ ಕತ್ತರಿಸುವ ಹಲಾಲ್ ಮತ್ತು ಜಟ್ಕಾ ಎಂಬ ವಿಧಾನವೂ ಸಮುದಾಯಗಳ ನಡುವೆ ದ್ವೇಷ, ಅಸಹನೆ ಬಿತ್ತುವ ಬೀಜಗಳಾಗಿ ಬಳಕೆಯಾಗುತ್ತಿರುವುದನ್ನೂ ಗಂಭೀರವಾಗಿ ಪರಿಗಣಿಸಬೇಕು.


ಹೀಗಾಗಿ ಅಂಬೇಡ್ಕರ್ ಪ್ರತಿರೂಪಗಳ ಜೊತೆಗೆ ಅವರ ನೈಜ ಮತ್ತು ಮೂಲ ವಿಚಾರಗಳ ಅಧ್ಯಯನಕ್ಕೆ ನಾವು ಮುಂದಾಗುವುದೇ ಇಂಡಿಯಾದ ಭವಿಷ್ಯಕ್ಕೆ ಆರೋಗ್ಯಕರ ಎನ್ನುತ್ತಾ ಅಂಬೇಡ್ಕರ್ ಪರಿನಿಬ್ಬಾನವನ್ನು ಆಚರಿಸೋಣ.