ಡೀಸೆಲ್ ಬಸ್ ಖರೀದಿ ಓಕೆ- ವಿದ್ಯುತ್ ಬಸ್‍ ಗುತ್ತಿಗೆ ಏಕೆ? ಸಾರಿಗೆ ನಿಗಮಕ್ಕೆ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಶ್ನೆ

diesel bus and electric bus

ಡೀಸೆಲ್ ಬಸ್ ಖರೀದಿ ಓಕೆ- ವಿದ್ಯುತ್ ಬಸ್‍ ಗುತ್ತಿಗೆ ಏಕೆ?  ಸಾರಿಗೆ ನಿಗಮಕ್ಕೆ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಶ್ನೆ

ಡೀಸೆಲ್ ಬಸ್ ಖರೀದಿ ಓಕೆ- ವಿದ್ಯುತ್ ಬಸ್‍ ಗುತ್ತಿಗೆ ಏಕೆ?

ಸಾರಿಗೆ ನಿಗಮಕ್ಕೆ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಶ್ನೆ

ಬೆಂಗಳೂರು: ಬಿಎಂಟಿಸಿ ವ್ಯವಸ್ಥಾಪಕ ಮಂಡಳಿಯು 634 ಡೀಸೆಲ್ ಬಸ್ ಖರೀದಿಗೆ ಒಪ್ಪಿಗೆ ನೀಡಿದೆ, ಆದರೆ ಅದೇ ವೇಳೆ 300 ಎಲೆಕ್ಟ್ರಿಕ್ ಬಸ್ ಗಳನ್ನು ಮಾತ್ರ ಗುತ್ತಿಗೆ ಆಧಾರದಲ್ಲಿ ಪಡೆಯಲು ಏಕೆ ಮುಂದಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಬಿಎಂಟಿಸಿ ಮತ್ತು ರಾಜ್ಯ ಸಕಾ೯ರವನ್ನು ಪ್ರಶ್ನಿಸಿವೆ.

2030 ರ ನಂತರ ಪೆಟ್ರೋಲ್, ಡೀಸೆಲ್ ವಾಹನಗಳ ಉತ್ಪಾದನೆ ಜಾಗತಿಕ ಒಪ್ಪಂದದ ಭಾಗವಾಗಿ ಕೊನೆಯಾಗಲಿದೆ. ನಂತರ ಕೇವಲ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ ಮಾತ್ರ ಇರಲಿದೆ. ಇಂತಹ ಸಂದರ್ಭದಲ್ಲಿ ಎಲೆಕ್ಟ್ರಿಕ್ ಬಸ್ ಗಳ ಖರೀದಿಸುವ ಬದಲು ಗುತ್ತಿಗೆ ಆಧಾರಿತವಾಗಿ ಪಡೆಯಲು ಸಮ್ಮತಿ ನೀಡಿರುವುದು ಬಿಎಂಟಿಸಿಯನ್ನು ವ್ಯವಸ್ಥಿತವಾಗಿ ಖಾಸಗಿಯವರಿಗೆ ಧಾರೆಯೆರೆಯುವ ಕ್ರಮವಾಗಿದೆ. ಅಂತಿಮವಾಗಿ ಜನತೆಯ ಆಸ್ತಿಯನ್ನು ಖಾಸಗಿಯವರ ಪಾಲಾಗಿಸಲಿದೆ ಎಂದು ಸಿಪಿಐ (ಎಂ) ಟೀಕಿಸಿದೆ.

ಬಸ್ ನಿಲ್ದಾಣ, ನಿರ್ವಾಹಕರು ಮತ್ತು ವಿದ್ಯುತ್ ಮರುಪೂರಣಕ್ಕೆ ಸ್ಥಳಾವಕಾಶ ಮಾತ್ರ ಬಿಎಂಟಿಸಿಯದಾಗಲಿದೆ. ಚಾಲಕರು ಮತ್ತು ನಿವಾ೯ಹಣೆ ಮಾತ್ರ ಖಾಸಗಿ ಬಸ್ ಪೂರೈಕೆದಾರ ಗುತ್ತಿಗೆದಾರರದಾಗಿರಲಿದೆ ಎಂಬ ಒಪ್ಪಂದವು ಬಿಎಂಟಿಸಿಯ ಖಾಸಗೀಕರಣದ ಬುನಾದಿಯಾಗಿದೆ. ನಿವ೯ಹಣೆ ಮತ್ತು ಕಾರ್ಯಾಚರಣೆಯನ್ನು ಬಿಎಂಟಿಸಿಯೆ ಮಾಡುವ ಬದಲು ಖಾಸಗಿ ಅಶೋಕ್ ಲೇಲಾಂಡ್ ಕಂಪನಿಗೆ ಪ್ರತಿ ಕಿಮಿ ರೂ.48.90 ರಂತೆ ದಿನಕ್ಕೆ ಕನಿಷ್ಠ 225 ಕಿಮಿಗೆ ಒಟ್ಟು 11 ಸಾವಿರ ರೂಪಾಯಿಯನ್ನು ನೀಡುವ ಒಪ್ಪಂದವು ಮುಂದೊಂದು ದಿನ ಇಡಿ ಬಿಎಂಟಿಸಿಯ ಆಸ್ತಿಯನ್ನು ಖಾಸಗಿಯವರ ಪಾಲಾಗಿಸಲಿದೆ ಎಂದು ಸಿಪಿಐ(ಎಂ) ಬಿಎಂಟಿಸಿಯ ಆಡಳಿತ ಮಂಡಳಿಯ ತೀರ್ಮಾನವನ್ನು ಖಂಡಿಸಿದೆ.

ಪ್ರತಿ ವಿದ್ಯುತ್ ಬಸ್ ಉತ್ಪಾದನೆಗೆ ತಗಲುವ 2 ಕೋಟಿ ರೂಗಳ ವೆಚ್ಚಕ್ಕೆ ಕೇಂದ್ರ ಸರ್ಕಾರ ಫೇಮ್ 2 ಸಬ್ಸಿಡಿ ಆಗಿ

50 ಲಕ್ಷ ರೂಗಳನ್ನು ಒದಗಿಸಲಿದೆ. ಅಂತಹ ಅವಕಾಶವನ್ನು ಬಳಸಿ 300 ವಿದ್ಯುತ್ ಬಸ್ ಖರೀದಿಗೆ 450 ಕೋಟಿ ರೂಗಳ ಬಂಡವಾಳ ಹೂಡಿಕೆ ಮಾಡುವ ಬದಲು ಅವಕಾಶ ಬಳಸಿ ಬಿಎಂಟಿಸಿಯ ಖಾಸಗೀಕರಣಕ್ಕೆ ಬುನಾದಿ ಹಾಕುತ್ತಿರುವುದು ಬಿಜೆಪಿ ಸರ್ಕಾರದ ದಿವಾಳಿಕೋರತನವಾಗಿದೆ ಎಂದಿದೆ ಸಿಪಿಐ (ಎಂ). ಈ ಹಿಂದೆ ಇದರ ಪ್ರಸ್ತಾಪವನ್ನು ಮಾಡಿದಾಗಲೆ ಸಿಪಿಐ(ಎಂ) ಮತ್ತಿತರ ಜನಪರ ಸಂಘಟನೆಗಳು ಅದನ್ನು ವಿರೋಧಿಸಿ ಪ್ರತಿಭಟಿಸಿದ್ದರು. ಮುಖ್ಯ ಮಂತ್ರಿಯವರು ವಿದ್ಯುತ್ ಚಾಲಿತ ಬಿಎಂಟಿಸಿ ಬಸ್ ಗೆ ಹಸಿರು ನಿಶಾನೆ ತೋರಿದ್ದಾಗ ಮಾಧ್ಯಮದವರು ವರದಿ ಮಾಡಿದಂತೆ ಗುತ್ತಿಗೆದಾರರಿಗೆ ಪ್ರತಿ ದಿನಕ್ಕೆ ಕನಿಷ್ಠ 180 ಕಿಮಿಗೆ 9000 ರೂಗಳನ್ನು ನೀಡುವ ಒಪ್ಪಂದದ ಉಲ್ಲೇಖವಿತ್ತು. ಆದರೆ ಬಿಎಂಟಿಸಿಯ ಆಡಳಿತ ಮಂಡಳಿಯು ಅಶೋಕ್ ಲೇಲಾಂಡ್ ಗೆ ಪ್ರತಿ ದಿನಕ್ಕೆ ಕನಿಷ್ಟ 225 ಕಿಮಿಗೆ 11 ಸಾವಿರ ರೂಗಳ ಪಾವತಿ ಒಪ್ಪಂದಕ್ಕೆ ಅನುಮೋದನೆ ನೀಡಿರುವುದಾದರು ಏಕೆ ಎಂಬ ಪ್ರಶ್ನೆಗೆ ಬಿಜೆಪಿಯ ಸಕಾ೯ರ ಉತ್ತರಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಇಂತಹ ಅನುಮೋದನೆಗೆ ಕೋಟ್ಯಂತರ ರೂಪಾಯಿಯ ಕಿಕ್ ಬ್ಯಾಕ್ ಪಡೆದಿರುವ ಆರೋಪಗಳು ಕೇಳಿ ಬಂದಿವೆ. ಈ ಕುರಿತು ಸೂಕ್ತ ತನಿಖೆ ನಡೆಸ ಬೇಕೆಂದು ಸಿಪಿಐ(ಎಂ) ಕಾರ್ಯದರ್ಶಿ ಕೆ.ಎನ್.ಉಮೇಶ್ ರಾಜ್ಯ ಸಕಾ೯ರವನ್ನು ಒತ್ತಾಯಿಸಿದ್ದಾರೆ.