ಟೂಡಾ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ: ಬಾವಿಕಟ್ಟೆ ನಾಗಣ್ಣ
bavikatte-naganna-tuda-basic-amenities
ಟೂಡಾ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ: ಬಾವಿಕಟ್ಟೆ ನಾಗಣ್ಣ
ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳಲ್ಲಿ ಮೂಲ ಸೌಕರ್ಯ ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಆದ್ಯತೆ ಮೇಲೆ ಹಂತಹAತವಾಗಿ ಟೂಡಾ ಬಡಾವಣೆಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ತಿಳಿಸಿದರು.
ನಗರದ ವೀರಸಾಗರ-ಮೆಳೆಕೋಟೆ ಟೂಡಾ ಬಡಾವಣೆಯಲ್ಲಿ ಹೇಮಾವತಿ ನಾಗರಿಕ ಹಿತರಕ್ಷಣಾ ವೇದಿಕೆಯ ಉದ್ಘಾಟನೆ, ಕನ್ನಡ ನಿತ್ಯೋತ್ಸವ ಕಾರ್ಯಕ್ರಮ ಹಾಗೂ ಉದ್ಯಾನವನದಲ್ಲಿ ಸಸಿಗಳನ್ನು ನೆಟ್ಟು ಪಾರ್ಕ್ ಅಭಿವೃದ್ಧಿಗೆ ಚಾಲನೆ ನೀಡುವ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಂಬರುವ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಬಜೆಟ್ ಸಂದರ್ಭದವರೆಗೆ ಖರ್ಚು ಮಾಡಬೇಕಾದ ಹಣದಲ್ಲಿ ಹಾಲಿ ತುಮಕೂರಿನಲ್ಲಿರುವ ನಮ್ಮ ಬಡಾವಣೆಗಳಲ್ಲಿ ಅತ್ಯವಶ್ಯವಾಗಿ ಬೇಕಾಗಿರುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಅದರಲ್ಲೂ ಅಭಿವೃದ್ಧಿ ವಿಚಾರದಲ್ಲಿ ಕೊಂಚ ಹಿಂದುಳಿದ ವೀರಸಾಗರ-ಮೆಳೆಕೋಟೆ ಬಡಾವಣೆಗೆ ಹೆಚ್ಚಿನ ಒತ್ತು ನೀಡಿ, ಕುಡಿಯುವ ನೀರು, ರಸ್ತೆ, ಪಾರ್ಕ್ ಅಭಿವೃದ್ಧಿ ಸೇರಿದಂತೆ ಪ್ರಾಧಿಕಾರದಿಂದ ಮಾಡಬೇಕಾದ ಎಲ್ಲ ಸೌಕರ್ಯಗಳನ್ನು ಆದ್ಯತೆ ಮೇಲೆ ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯರು, ``ಅಳುವ ಮಗುವಿಗೆ ತಾಯಿ ಹಾಲು ಕುಡಿಸುತ್ತಾಳೆಯೇ ಹೊರತು, ಮಲಗಿರುವ ಮಗುವಿಗಲ್ಲ. ಅಂತೆಯೇ, ನಿಮ್ಮ ಮನವಿ ಅಥವಾ ಒತ್ತಾಯದ ಹೊರತು ಯಾರು ಕೂಡ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವುದಿಲ್ಲ. ನಮ್ಮ ಬೇಕು-ಬೇಡಗಳನ್ನ ಸಂಬAಧಪಟ್ಟವರು ಮುಂದೆ ಆಹವಾಲಿಸಿದರೆ ಮಾತ್ರ ಕಾರ್ಯ ಸಿದ್ಧಿ. ಇಂದು ಉದ್ಘಾಟನೆಯಾದ ವೇದಿಕೆ ಮುಂದಿನ ದಿನಗಳಲ್ಲಿ ಸಂಘಟನಾತ್ಮಕ ಕೂಗಾಗಲಿ' ಎಂದು ಹಾರೈಸಿದರು.
ಪ್ರಗತಿಪರ ಚಿಂತಕ ದೊರೈರಾಜ್ ಮಾತನಾಡಿ, ತಮ್ಮ ಹಕ್ಕಿನ ಹೋರಾಟಕ್ಕಾಗಿ ಒಗ್ಗಟ್ಟಿನ ಧ್ವನಿಯಾಗಲು ಇಂತಹ ವೇದಿಕೆಗಳು ಹೆಚ್ಚು ಹೆಚ್ಚು ನಿರ್ಮಾಣವಾಗಬೇಕು. ಒಗ್ಗಟ್ಟಿನ ಮತ್ತು ಸಂಘಟನಾತ್ಮಕ ಹೋರಾಟಗಳಲ್ಲಿ ಪ್ರಬಲವಾದ ಶಕ್ತಿ ಇರುತ್ತದೆ ಎಂದರು.
ಮಾಜಿ ಶಾಸಕ ರಫೀಕ್ ಅಹಮದ್ ಮಾತನಾಡುತ್ತಾ, ರಾಜೀವ್‌ಗಾಂಧಿನಗರ ಮತ್ತು ಇದಕ್ಕೆ ಹೊಂದಿಕೊAಡAತೆ ಇರುವ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆ ಕಳೆದ ಮೂವತ್ತು ವರ್ಷಗಳಿಂದ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿವೆ. ನಗರಪಾಲಿಕೆ ಮತ್ತು ಟೂಡಾ ಇತ್ತ ಹೆಚ್ಚಿನ ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂದರು.
ವಿದ್ಯಾವಾಚಸ್ಪತಿ ಕವಿತಾಕೃಷ್ಣ ಮಾತನಾಡಿ, ಸಾರ್ವಜನಿಕ ಸಂಘಟನೆಗಳು ಎಂದಿಗೂ ಸಹ ದರ್ಜಿಯ ಕತ್ತರಿ ಆಗಬಾರದು, ಬದಲಿಗೆ ಸೂಜಿಯಾಗಬೇಕು. ಆ ಭಾಗದ ಜನರು ಸೂಜಿಗೆ ದಾರವಾಗಿರಬೇಕು. ಆಗಲೇ ಸುಂದರ ಮತ್ತು ಸುವ್ಯವಸ್ಥಿತ ಸಮಾಜ ಕಟ್ಟಲು ಸಾಧ್ಯ ಎಂದರು.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಯೋಗಾನಂದ ಅವರು ಮಾತನಾಡುತ್ತಾ, ಪ್ರಾಧಿಕಾರದ ವತಿಯಿಂದ ಮಾಡಬೇಕಾದ ಎಲ್ಲಾ ಕೆಲಸ ಕಾರ್ಯಗಳನ್ನು ಯಾವುದೇ ತಾರತಮ್ಯವಿಲ್ಲದೆ ನಮ್ಮ ಬಡಾವಣೆಗಳಲ್ಲಿ ನಡೆಯುತ್ತದೆ. ಆದರೆ ಇರುವ ಸಮಸ್ಯೆಗಳ ಬಗ್ಗೆ ಅಥವಾ ಆಗಬೇಕಾದ ತುರ್ತು ಕೆಲಸ ಕಾರ್ಯಗಳ ಬಗ್ಗೆ ನಮ್ಮೊಂದಿಗೆ ನಾಗರಿಕರು ಅಥವಾ ನಾಗರಿಕ ವೇದಿಕೆಗಳು ಚರ್ಚಿಸಿದರೆ ಖಂಡಿತವಾಗಿಯೂ ಬಡಾವಣೆಗಳ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಚಿತ್ರನಟ ಅವಿನಾಶ್ ಅವರಿಗೆ 'ಸಿನಿಮಾ ಸಂತ' ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಲಾಯಿತು. ಚಿತ್ರನಟಿ ಪ್ರಿಯ ಅವರನ್ನು ಸಹ ಗೌರವಿಸಲಾಯಿತು. ಹೇಮಾವತಿ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಲೋಕೇಶ ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಮನು ಗೌಡ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಚೇರ್ಮನ್ ಇಕ್ಬಾಲ್ ಅಹಮದ್, ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ ಸ್ವಾಮಿ ತ್ಯಾಗರಾಜ್, ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್, ಹಿರಿಯರಾದ ಬೆಳ್ಳಿ ಕೃಷ್ಣಪ್ಪ, ಗಿರಿಯಪ್ಪ, ಮಾಜಿ ನಗರಸಭಾ ಸದಸ್ಯ ರಮೇಶ್, ಕೊಳಗೇರಿ ನಿವಾಸಿಗಳ ಹೋರಾಟ ಸಮಿತಿಯ ನರಸಿಂಹಮೂರ್ತಿ, ಬೆಸ್ಕಾಂ ಎಸ್.ಓ. ನಾಗರಾಜ್ ಮತ್ತಿತರರು ಹಾಜರಿದ್ದರು.