‘ಬೊಮ್ಮನಹಳ್ಳಿʼ ಬಾಬು ಎಂಬ ಎಲೆಕ್ಷನ್ ಕಿಂದರಿ ಜೋಗಿಯ ಕನೆಕ್ಷನ್ ಅಂಡ್ ಕಲೆಕ್ಷನ್!?
“ MONEY TALKS – WE LISTEN WITH INTEREST”
ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
‘ಬೊಮ್ಮನಹಳ್ಳಿʼ ಬಾಬು ಎಂಬ ಎಲೆಕ್ಷನ್ ಕಿಂದರಿಜೋಗಿಯ ಕನೆಕ್ಷನ್ ಅಂಡ್ ಕಲೆಕ್ಷನ್!?
ಚಿಕ್ಕಪೇಟೆ ಹಾಗೂ ಗುಂಚಿ ಚೌಕ ತುಮಕೂರು ನಗರದ ಎರಡು ಪ್ರಮುಖ ಚಿನ್ನದ ವಹಿವಾಟಿನ ಕೇಂದ್ರಗಳು, ಚಿಕ್ಕಪೇಟೆ ಚಿನ್ನ,ಬೆಳ್ಳಿ ಆಭರಣ ತಯಾರಿಸುವ ಕುಶಲಕರ್ಮಿಗಳ ನೆಲೆಯಾಗಿದ್ದರೆ, ಅದೇ ಚಿನ್ನ,ಬೆಳ್ಳಿ ಆಭರಣಗಳನ್ನು ಗಿರವಿ ಇಡಿಸಿಕೊಳ್ಳುವ ಸೇಟುಗಳೆಂದು ಕರೆಸಿಕೊಳ್ಳುವ ರಾಜಸ್ಥಾನ ರಾಜ್ಯದ ಮಾರ್ವಾಡ ಪ್ರದೇಶದಿಂದ ಬಂದು ನೆಲೆಸಿರುವ ಶ್ವೇತಾಂಬರ ಜೈನರೆಲ್ಲ ಇರುವುದು ಗುಂಚಿ ಚೌಕದಲ್ಲಿ. ಇವರಿಬ್ಬರ ನಡುವೆ ಈ ನಗರದ ಮೂಲ ಚಿನ್ನ, ಬೆಳ್ಳಿ ವರ್ತಕರಾಗಿದ್ದ ಆರ್ಯ ವೈಶ್ಯರು ತಾತನ ಕಾಲದ ವ್ಯಾಪಾರವನ್ನು ನಿಭಾಯಿಸಲೂ ಆಗದೇ ಬಿಟ್ಟು ಬೇರೆ ಏನೂ ಮಾಡಲೂ ಆಗದೇ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.
ನಮ್ಮೂರು ಕುಚ್ಚಂಗಿಗೂ ಆರ್ಯವೈಶ್ಯರ ನಂಟಿದೆ, ನಮ್ಮೂರಿನ ಗದ್ದೆ ಬಯಲಿನಲ್ಲಿ ಶೆಟ್ಟರ ಗದ್ದೆ , ಶೆಟ್ಟರ ಬಾವಿ ಅಂತೆಲ್ಲ ಇವೆ. ತುಮಕೂರಿನ ಮಂಡಿಪೇಟೆ ಮುಖ್ಯ ರಸ್ತೆಯಲ್ಲಿ, ಅಶೋಕ ರಸ್ತೆಯಲ್ಲಿ ಚಿನ್ನ,ಬೆಳ್ಳಿ ಮಳಿಗೆ ಹೊಂದಿದ್ದ ಅರುಣಾಚಲ ಶೆಟ್ಟರು ನಮ್ಮೂರಿನಲ್ಲಿ ಜಮೀನು ಹೊಂದಿದ್ದರು.ಕುರುಬರ ಗೋವಿಂದಯ್ಯ ಮತ್ತು ಮಕ್ಕಳು ಅವರ ಗದ್ದೆಯನ್ನು ವಾರಕ್ಕೆ ಮಾಡುತ್ತಿದ್ದರು. ಬೇಸಿಗೆಯ ಬಿರು ಬಿಸಿಲಲ್ಲಿ ಊರ ಹುಡುಗರೆಲ್ಲ ಶೆಟ್ಟರ ಬಾವಿಯಲ್ಲೇ ಕಪ್ಪೆಗೊದ್ದಗಳಂತೆ ಬಿದ್ದು ಒದ್ದಾಡುತ್ತಿದ್ದುದು. ಶೆಟ್ಟರ ಬಾವಿಯಂತೆಯೇ ನಮ್ಮದೂ ಒಂದು ಕಲ್ಲು ಕಟ್ಟಿದ ವಿಸ್ತಾರವಾದ ಬಾವಿ ಇದ್ದರೂ, ಉಗಾದಿ ಕಳೆಯುವ ಹೊತ್ತಿಗೆ ನಮ್ಮ ಬಾವಿಯ ನೀರೆಲ್ಲ ತಳ ಕಂಡು, ಕೆಸರ ಹೊಂಡು ಕಾಣುತ್ತಿದ್ದುದರಿಂದ, ನಾನೂ ಶೆಟ್ಟರ ಬಾವಿಯಲ್ಲೇ ಈಜು ಬೀಳುತ್ತಿದ್ದೆ.
ನಮ್ಮೂರ ಬಾವಿಗಳಿಗೆ 1975ರ ಸುಮಾರಿನಲ್ಲಿ ವಿದ್ಯುತ್ ಸಂಪರ್ಕ ಬಂದು ಪಂಪ್ ಮೋಟಾರ್ ಅಳವಡಿಸುವ ಮುನ್ನ ಎಲ್ಲರೂ ಜೋಡೆತ್ತುಗಳನ್ನು ಹೂಡಿದ ಕಪಿಲೆ ಬಾನಿಯಲ್ಲೇ ನೀರು ಎತ್ತುತ್ತಾ ಇದ್ದದ್ದು. ಬ್ರಹ್ಮ ರಾಕ್ಷಸ ಕಿಡ್ನ್ಯಾಪ್ ಮಾಡಿಕೊಂಡು ಹೊತ್ತೊಯ್ದ ತಮ್ಮ ತಂಗಿಯನ್ನು ಬಿಡಿಸಿಕೊಂಡು ಬರಲು ಕಾಡಿಗೆ ಹೋಗುವ ಏಳು ಮಂದಿ ಅಣ್ಣ ತಮ್ಮಂದಿರ ಕತೆಯಲ್ಲಿ ಈ ಕಪಿಲೆ ಬಾನಿ ಬರುತ್ತದೆ, ಇವತ್ತಿನ ಮಕ್ಕಳಿಗೆ ಕಪಿಲೆ ಬಾನಿ ಎಂದರೇನು ಅರ್ಥ ಮಾಡಿಸುವುದು ಅಷ್ಟು ಸುಲಭದ ಮಾತಲ್ಲ.
ಈ ಶೆಟ್ಟರ ಬಾವಿಯಲ್ಲೂ ಕಪಿಲೆ ಬಾನಿಯಿಂದ ಎತ್ತಿದ ನೀರನ್ನು ಗದ್ದೆಗೆ ಹರಿಸಲು ಮಾಡಿದ್ದ ಕಲ್ಲು ಚಪ್ಪಡಿಯ ಕಾಲುವೆಯೊಳಗಿಂದ ಸಾಲಾಗಿ ಒಬ್ಬೊಬ್ಬರೇ ಬಂದು ಡೈ ಹೊಡೆಯುವುದೇ ಮಜವಾಗಿತ್ತು. ಇನ್ನೂ ಪಟಿಂಗರು ಕರೆಂಟ್ ರೂಮಿನ ಮೇಲಿನಿಂದ ನೀರಿಗೆ ದುಮುಕುತ್ತಿದ್ದರು. ಹಾಗೆ ದುಮುಕುವಾಗ ಬೀಳುವ ರಭಸಕ್ಕೆ ನೀರೂ ಸಮುದ್ರದ ಅಲೆಯಂತೆ ಅಪ್ಪಳಿಸುವ ಜೊತೆಗೆ ಬಿದ್ದವರೂ ಸೀದಾ ತಳಕ್ಕೆ ತಲುಪಿಬಿಡುತ್ತಿದ್ದರು. ಆದರೆ ಎಲ್ಲರೂ ಪೂರ್ತಾ ತಳ ತಲುಪದೇ ಚಕ್ಕಂತ ಮೇಲಕ್ಕೆ ಬಂದು ಕಟ್ಟಿದ್ದ ಉಸಿರು ಬಿಟ್ಟು ಬಾಯಲ್ಲಿದ್ದ ನೀರನ್ನು ಪುಳಕ್ಕೆಂದು ಹೊರಚೆಲ್ಲುತ್ತಿದ್ದರು.
ಎಸ್‌ಎಸ್‌ಎಲ್‌ಸಿ ಸುಮಾರಿಗೆ ತುಮಕೂರು ನಗರದ ಈಗಿನ ವಿಜಯನಗರದ ಮಗ್ಗುಲ ಬಯಲಲ್ಲಿ ದೇವನೂರು ಕ್ರಿಶ್ಚಿಯನ್ನರ ಸ್ಮಶಾನದ ಸಮೀಪ ಇದ್ದ ಕಲ್ಲುಕಟ್ಟಿದ ಬಾವಿಯಲ್ಲಿ ಈಜು ಕಲಿತ ನಾನು ಮೂರ್ನಾಲ್ಕು ವರ್ಷ ಕಳೆಯುವ ಹೊತ್ತಿಗೆ ಕರೆಂಟ್ ರೂಮಿನಿಂದ ದುಮುಕುವಷ್ಟು ಪರಿಣಿತನಾಗಿದ್ದೆ, ಬಿದ್ದೇಟಿಗೇ ಎರಡೂ ಕೈಗಳನ್ನು ಮೇಲಕ್ಕೆತ್ತುವ ಮೂಲಕ ನಾನೇ ತಳವನ್ನು ತಲುಪಿ, ಕಪ್ಪನೆಯ ಕೆಸರು ಮಣ್ಣನ್ನು ಒಂದು ಕೈಯಲ್ಲಿ ಹಿಡಿದುಕೊಂಡೇ ಮೇಲಕ್ಕೆ ಬರುತ್ತಿದ್ದುದು. ಕರೆಂಟ್ ಬಾವಿಯೊಳಗೆ ಈಜುವಾಗ ಸಿಗುವ ಮಜಾ ಬ್ಲೀಚಿಂಗ್ ಪೌಡರ್ ಬೆರೆಸಿದ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸಿಗುವ ಚಾನ್ಸೇ ಇಲ್ಲ ಬಿಡಿ.
ಪಿಯುಸಿ ಓದುವ ಒಂದೆರಡು ವರ್ಷದ ಬೇಸಿಗೆ ರಜೆಯ ದಿನಗಳಲ್ಲಿ ಗುಂಚಿ ಚೌಕದಲ್ಲಿದ್ದ ಬಾಬು ಜ್ಯೂಯಲರಿ ಮಾರ್ಟಿನ ಬಾಬುಲಾಲ್ ಅವರ ಬಳಿ ಒಂದರೆಡು ತಿಂಗಳು ಲೆಕ್ಕ ಬರೆಯಲು ಪಾರ್ಟ್ ಟೈಮ್ ನೌಕರಿ ಮಾಡಿದ್ದೆ, ಮನೆಯ ತುರ್ತಿಗೆ ತುರ್ತಾಗಿ ನಗದು ದೊರಕುವ ಏಕೈಕ ನೆಲೆಗಳೆಂದರೆ ಈ ಮಾರ್ವಾಡಿ ಅಂಗಡಿಗಳು ಮಾತ್ರವೇ ಎಂಬ ನಂಬಿಕೆಯನ್ನು ನಮ್ಮ ಜನರು ಇನ್ನೂ ಕಳೆದುಕೊಂಡಿಲ್ಲ.
ನೀವು ಯಾರು ಏನು ಎತ್ತ ಅಂತ ಏನೂ ಕೇಳುತ್ತಿರಲಿಲ್ಲ, ಎಷ್ಟೋ ಮುಸ್ಲಿಮ್ ಮಹಿಳೆಯರು ಬುರ್ಕಾ ತೆಗೆದು ಮುಖ ತೋರಿಸಿದೇ ಇದ್ದರೂ, ಅಲ್ಲೇ ಅಂಗಡಿಗಳಲ್ಲೇ ಕುಳಿತು ಕಿವಿಗಳಿಗೆ ಕೈ ಹಾಕಿ ಓಲೆ, ಜುಮಕಿಗಳ ತಿರುಪು ಬಿಚ್ಚಿ ಸೇಟು ಮುಂದಿದ್ದ ಮಕ್ಮಲ್ ಟ್ರೇಗೆ ಹಾಕಿ, “ತೀನ್ ಸೋ ಪಚ್ಚಾಸ್ ದೇದೋ ಸೇಟೂ” ಎನ್ನುತ್ತಿದ್ದರು, ಎದುರಿಗೆ ಕುಳಿತ ಬಾಬುಲಾಲ್ ಮಗ ಸುರೇಶ್ ಮೂಗಿನಿಂದ ಕೆಳಗಿಳಿಯುತ್ತಿದ್ದ ಚಿನ್ನದ ಫ್ರೇಮಿನ ಕನ್ನಡಕವನ್ನುತುಸು ಹಿಂದಕ್ಕೆ ತಳ್ಳಿ, ಎದುರು ಕುಂತವರು ಯಾರು ಎನ್ನುವುದನ್ನೂ ಗಮನಿಸದೇ ಕೆಳಗೆ ಮರೆಯಲ್ಲಿದ್ದ ಓರೆಗಲ್ಲನ್ನು ತೆಗೆದುಕೊಂಡು ಆ ವಾಲೆ ಜುಮಕಿಗಳನ್ನು ಒಂದೊಂದಾಗಿ ನಾಲ್ಕು ಸಲ ಗೆರೆ ಎಳೆದಂತೆ ತಿಕ್ಕಿ ಅದರ ಮೇಲೆ ಎರಡು ತರದ ಆಸಿಟ್ ಹನಿಗಳನ್ನು ಹನಿಕಿಸಿ ಚಿನ್ನವೋ ಅಲ್ಲವೋ ಎಂಬುದನ್ನು ಖಚಿತ ಪಡಿಸಿಕೊಂಡಂತೆ ಮಾಡುತ್ತಿದ್ದ. ಚಿನ್ನಬೆಳ್ಳಿ ಕಸುಬಿನಲ್ಲಿ ಹಲವಾರು ವರ್ಷ ಪಳಗಿದ ಯಾರಿಗೇ ಆದರೂ ಕೈಯಲ್ಲಿ ಹಿಡಿದ ಕೂಡಲೇ ಅದರ ತೂಕವನ್ನು, ಹೊಳಪನ್ನು ನೋಡುತ್ತಲೇ ಅದು ಚಿನ್ನವೇ ಅಲ್ಲವೇ ಎಂದು ಅರಿವಾಗಿಬಿಡುತ್ತಿದ್ದಾದರೂ, ಒಂದಷ್ಟು ಚಿನ್ನವನ್ನು ಗಿಲುಬಿಕೊಳ್ಳುವ ಸಲುವಾಗಿಯೇ ಆ ಒಡವೆಗಳನ್ನು ಓರೆಗಲ್ಲಿಗೆ ಗೀರುತ್ತಿದ್ದರು ಎನ್ನುವುದು ಗಿರಾಕಿಗಳ ದೂರಿನ ಮಾತಾಗಿರುತ್ತಿತ್ತು.
ಯಾವ ಸೇಟುವೂ ಯಾವತ್ತೂ ಅಡ ಇಡಲು ಬಂದ ಗಿರಾಕಿಗಳು ಕೇಳಿದಷ್ಟು ಮೊತ್ತವನ್ನು ಕೊಟ್ಟಿದ್ದು ನಾನು ನೋಡಲೇ ಇಲ್ಲ, ಅವರು ಕೇಳಿದ್ದರಲ್ಲಿ ಅರ್ಧದಷ್ಟೇ ಅವರಿಗೆ ದಕ್ಕುತ್ತಿದ್ದುದು, ತೀರಾ ಹಳೇ ಗಿರಾಕಿಗಳಾಗಿದ್ದು ವರ್ಷದೊಳಗೇ ಬಿಡಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದ್ದರೆ ಮೂರು ಪರ್ಸೆಂಟ್ ಇಲ್ಲ ಹೊಸಬರೆಂದರೆ ನಾಲ್ಕು ಪರ್ಸೆಂಟ್ ಬಡ್ಡಿಯನ್ನು ಜೊತೆಗೆ ಲೆಕ್ಕಬರೆವ ಖರ್ಚನ್ನೂ ಮುರಿದುಕೊಂಡೇ ಕಾಸು ಕೊಡುತ್ತಿದ್ದುದು.
ಬ್ಯಾಂಕುಗಳಲ್ಲೂ ಚಿನ್ನ,ಬೆಳ್ಳಿ ಆಭರಣಗಳನ್ನು ಗಿರವಿ ಇಡಿಸಿಕೊಳ್ಳುತ್ತಿದ್ದರಾದರೂ ಅಲ್ಲಿನ ಸುದೀರ್ಘ ದಾಖಲಾತಿ ಪ್ರಕ್ರಿಯೆ ಮತ್ತು ಕೊಡುತ್ತಿದ್ದ ಕಡಿಮೆ ಹಣದ ಲೆಕ್ಕದಲ್ಲೋ ಅಥವಾ ಗುರುತು ಪರಿಚಯದವರಿಗೆಲ್ಲ ತಾವು ಆಭರಣಗಳನ್ನು ಅಡವಿಟ್ಟದ್ದು ಗೊತ್ತಾಗುವುದೇಕೆ ಎಂಬ ಕಾರಣಕ್ಕೋ ಹೆಚ್ಚಿನ ಜನರು ಬ್ಯಾಂಕುಗಳಿಗೆ ಹೋಗುತ್ತಿರಲಿಲ್ಲ.
ಕೇರಳ ಮೂಲದ ಮಣಪ್ಪುರಂ, ಮುತ್ತೂಟ್ ಎಂಬ ಹೆಸರುಗಳ ಚಿನ್ನ ಅಡವಿರಿಸಿಕೊಳ್ಳುವ ಕಂಪನಿಗಳು ಎಲ್ಲ ನಗರಗಳಲ್ಲೂ ಬ್ರಾಂಚುಗಳನ್ನು ತೆರೆಯತೊಡಗಿದಂತೆ, ಸೇಟುಗಳ ಮಕ್ಕಳು, ಮೊಮ್ಮಕ್ಕಳು ಗಿರವಿ ವ್ಯಾಪಾರದಿಂದ ವಿಮುಖರಾಗಿ ಇನ್ನಿತರ ಬಿಸಿನೆಸ್‌ಗಳತ್ತ ಮುಖ ಮಾಡತೊಡಗಿದ್ದಾರೆ. ಈ ಮಣಪ್ಪುರಂ ಮತ್ತು ಮುತ್ತೂಟ್ ಗಳು ಅವರಬಳಿ ಗಿರವಿ ಇಟ್ಟ ಒಡವೆಗಳನ್ನು ಹರಾಜು ಹಾಕುವ ಸೂಚನೆ ನೀಡಲು ರಾಜ್ಯ ದಿನಪತ್ರಿಕೆಗಳಲ್ಲಿ ಕಣ್ಣಿಗೇ ಕಾಣದಷ್ಟು ಸಣ್ಣಕ್ಷರಗಳಲ್ಲಿ ಪುಟಗಟ್ಟಲೆ ಹರಾಜು ನೋಟೀಸ್ ಪ್ರಕಟಿಸುತ್ತಿರುವುದನ್ನು ಕಂಡು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣನವರು ನಮ್ಮ ಬಡಜನರ ದುಸ್ಥಿತಿಯನ್ನು ಕಂಡು ಮರುಗುತ್ತಾರೆ, ಸಾತ್ವಿಕ ಸಿಟ್ಟನ್ನೂ ಸುದ್ದಿಗೋಷ್ಟಿಗಳಲ್ಲಿ ಪ್ರಕಟಿಸುತ್ತಾರೆ. ಇಂಥ ಕಷ್ಟದಲ್ಲಿರುವ ಜನರಿಗಾಗಿಯೇ ಹೆಚ್ಚಿನ ದರದಲ್ಲಿ ಆಭರಣ ಸಾಲ ನೀಡುವುದಾಗಿ ಫ್ಲೆಕ್ಸ್ಗಳನ್ನೂ ಕಟ್ಟಿಸಿದ್ದಾರೆ, ಆದರೂ ಆದೇಕೋ ನಮ್ಮ ಜನರು ಬೆಂಕಿಗೆ ಆಕರ್ಷಿತರಾಗುವ ಪತಂಗಗಳಂತೆ ಇಂಥಾ ಖಾಸಗಿ ಕಂಪನಿಗಳಿಗೆ ಹೋಗಿ ತಗಲಿಕೊಂಡು ನರಳುತ್ತಾರೆ.
ತುಸು ಸ್ಥಳೀಯರಲ್ಲಿ ಹೆಚ್ಚು ಬೆರೆಯುತ್ತಿದ್ದ ಶಾಂತಿಲಾಲ್ ಎಂಬ ಮಾರ್ವಾಡಿ, ಇದೇ ಗುಂಚಿ ಚೌಕದಲ್ಲಿ 1980ರ ದಶಕದಲ್ಲಿ ಚಿನ್ನ ಬೆಳ್ಳಿ ವ್ಯಾಪಾರ ತೊರೆದು, ಅದುವರೆಗೂ ನೆಲದಲ್ಲೇ ಬಿಳಿಯ ಮೆತ್ತೆಗಳ ಮೇಲೆ ಚಕ್ಕಂಬಕ್ಕಳ ಹಾಕಿ ಕೂರುತ್ತಿದ್ದ ಮಾರ್ವಾಡಿ ಸೇಟುಗಳ ರೂಡಿಯನ್ನು ತೊರೆದು ಟೇಬಲ್ ,ಚೇರ್‌ಗಳನ್ನು ಜೋಡಿಸಿ ಅವರ ಅಂಗಡಿಯನ್ನು ಆಫೀಸ್‌ನಂತೆ ಮಾರ್ಪಡಿಸಿ, ಹಣವನ್ನು ನೇರ ಸಾಲವಾಗಿ ಕೊಡುವ ಫೈನಾನ್ಸ್ ಶುರು ಮಾಡಿದ್ದರು, ಜೊತೆಗೆ ಈ ಶಾಂತಿಲಾಲ್ ಕೂರುತ್ತಿದ್ದ ಚೇಂಬರಿನ ಹಿಂದೆ ಒಂದು ಬಣ್ಣದ ಪೋಸ್ಟರ್‌ನಲ್ಲಿ ದಪ್ಪ ಅಕ್ಷರಗಳಲ್ಲಿ ““ MONEY TALKS – WE LISTEN WITH INTEREST” ಎಂಬ ಹೇಳಿಕೆಯೂ ಇತ್ತು, ಸೇಟುಗಳ ಪಾಲಿಗೆ ಇಂಟರಸ್ಟ್ ಎಂದರೆ ಆಸಕ್ತಿ ಅಲ್ಲ, ಅದು ಹಣ, “ ಹಣ ಮಾತಾಡುತ್ತದೆ- ನಾವು ಬಡ್ಡಿಯೊಂದಿಗೆ ಕೇಳಿಸಿಕೊಳ್ಳುತ್ತೇವೆ” ಎಂಬುದು ಈ ಹೇಳಿಕೆಯ ಅರ್ಥವಾಗಿತ್ತು. ಕಡೇ ದಿನಗಳಲ್ಲಿ ಪ್ರವಚನ, ಜ್ಞಾನ ಬುತ್ತಿ, ಸತ್ಸಂಗ ಇತ್ಯಾದಿಗಳಲ್ಲಿ ತೊಡಗಿದ್ದ ಶಾಂತಿಲಾಲ್ ಕೋವಿಡ್ ದಿನಗಳಲ್ಲಿ ಸ್ಮಶಾನದಲ್ಲೆಲ್ಲೋ ನಾಪತ್ತೆಯಾಗಿಬಿಟ್ಟರು.
2023ರ ವಿಧಾನ ಸಭೆಗೆ ಇನ್ನೆರಡೇ ತಿಂಗಳು ಉಳಿದಿರುವಾಗ ತುಮಕೂರು ನಗರದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಹಣ ಮಾತನಾಡತೊಡಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ವಿಧಾನ ಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದು ಕೇವಲ 1028 ಓಟುಗಳನ್ನು (ಮತ ಗಳಿಕೆ ಪ್ರಮಾಣ 0.63% ಮಾತ್ರ) ಪಡೆದಿರುವ ಬೊಮ್ಮನಹಳ್ಳಿ ಬಾಬು ಅಲಿಯಾಸ್ ಅಟ್ಟಿಕಾ ಬಾಬು ಇಂಥಾ ತುಮಕೂರಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಆರೇಳು ತಿಂಗಳಾಗಿದೆ. ವರ್ಷಕ್ಕೆ 1500 ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದ್ದೇನೆ ಎಂದು ಘೋಷಿಸಿರುವ ಈ ಬೊಮ್ಮನಹಳ್ಳಿ ಬಾಬು ಮೂಲ ಹೆಸರು ಪಿ.ಎಸ್.ಅಯೂಬ್ ಸನ್‌ಆಫ್ ಸೈಯದ್ ಭಾಷಾ, ವಯಸ್ಸು 50ರ ಆಸುಪಾಸು, ಅವರೇ ಹೇಳಿಕೊಂಡಂತೆ ಓದಿರುವುದು 5 ಅಥವಾ 6ನೇ ಕ್ಲಾಸು ಮಾತ್ರ, ಆದರೆ 2018ರ ವಿಧಾನ ಸಭಾ ಚುನಾವಣೆಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಚೌಧರಿ ಚರಣಸಿಂಗ್ ಯೂನಿವರ್ಸಿಟಿಯಿಂದ ಪೊಲಿಟಿಕಲ್ ಸೈನ್ಸ್ ಡಿಗ್ರಿ ಪಡೆದಿರುವುದಾಗಿ ಇವರು ನಮೂದಿಸಿದ್ದಾರೆ, ಜೊತೆಗೆ ಈಗ ಇವರ ಹೆಸರಿನ ಮೊದಲಿಗೇ ಡಾ. ಬೇರೇ ಆಡ್ ಆಗಿಬಿಟ್ಟಿದೆ. ನಮ್ಮ ಪ್ರಧಾನ ಸೇವಕರು ಎಂಟೈರ್ ಪೊಲಿಟಿಕಲ್ ಸೈನ್ಸ್ ಓದಿರುವಾಗ ಈ ಬಾಬು ಅವರ ವಿದ್ಯಾರ್ಹತೆಯನ್ನು ಗೇಲಿ ಮಾಡುವುದು ಇಷ್ಟೊಂದು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ದೇಶದಲ್ಲಿ ನಿಜಕ್ಕೂ ತಪ್ಪು ಬಿಡಿ.
ಈ ಅಯೂಬ್ ಹತ್ತು ವರ್ಷಗಳ ಹಿಂದೆ ಆರಂಭಿಸಿದ ಅಟ್ಟಿಕಾ ಗೋಲ್ಡ್ ಕಂಪನಿ ಇದೀಗ ಇಡೀ ಸೌತ್ ಇಂಡಿಯಾದಲ್ಲಿ 216 ಬ್ರಾಂಚುಗಳು ಹಾಗೂ 1200 ಕೆಲಸಗಾರರನ್ನು ಸಲಹುತ್ತಿದೆಯಂತೆ, “ನೀವು ಅಡವಿಟ್ಟ ಚಿನ್ನವನ್ನು ಬಿಡಿಸಿ ಮಾರಬೇಕೆ,ನಮ್ಮನ್ನು ಸಂಪರ್ಕಿಸಿ” ಎಂದು ಕನ್ನಡ, ತೆಲುಗು, ತಮಿಳು,ಮಲೆಯಾಳಂ ನಟಿಯರು ಟಿವಿಗಳಲ್ಲಿ ಬಂದು ಉಲಿಯುವುದನ್ನು ನೀವು ಗಮನಿಸಿರಬೇಕು, ಮುತ್ತೂಟ್,ಮಣಪ್ಪುರಂಗಳಲ್ಲಿ ಅಡವಿಟ್ಟು ಬಿಡಿಸಿಕೊಳ್ಳಲಾಗದ ನಿಮ್ಮ ಚಿನ್ನದ ಆಭರಣಗಳನ್ನು ಈ ಬಾಬು ಅವರ ಅಟ್ಟಿಕಾ ದವರು ಬಂದು ಬಿಡಿಸಿಕೊಂಡು, ಲೆಕ್ಕಾಚಾರ ಮಾಡಿ ಉಳಿದ ಹಣವನ್ನು ನಿಮ್ಮ ಕೈಗೆ ಕೊಟ್ಟು ಕಳಿಸುತ್ತಾರೆ. ಇದು ಇವರ ವ್ಯವಹಾರ. ಕಳವು ಮಾಲು ಖರೀದಿಸುವುದಿಲ್ಲ ಎಂದು ಅವರ ಮಳಿಗೆಗಳಲ್ಲಿ ವೆಬ್‌ಸೈಟ್‌ಗಳಲ್ಲಿ ಘೋಷಿಸಿಕೊಂಡಿದ್ದರೂ, ಮೇಲೆ ಕದ್ದ ಒಡವೆಗಳನ್ನುಖರೀದಿಸಿದ ಆರೋಪದ ಮೇಲೆ ಹತ್ತಾರು ಕೇಸುಗಳು ಈ ಕಂಪನಿಯ ಮೇಲಿವೆ. 2018ರ ಚುನಾವಣೆಗೆ ಹಾನಗಲ್‌ನಲ್ಲಿ ಸಲ್ಲಿಸಿದ ನಾಮಪತ್ರದ ಜೊತೆಗೆ ಹಾಕಿದ ಅಫಿಡವಿಟ್‌ನಲ್ಲೇ ಏಳು ಕ್ರಿಮಿನಲ್ ಕೇಸುಗಳು ನನ್ನ ಮೇಲಿವೆ, ಅವುಗಳಲ್ಲಿ ನಾಲ್ಕರಲ್ಲಿ ಚಾರ್ಜ್ ಶೀಟ್ ಹಾಕಿ ಆಗಿದೆ ಎಂದು ಬಾಬು ಬರೆದು ಸಹಿ ಹಾಕಿದ್ದಾರೆ. ಪತ್ನಿಯ ಮೇಲೆ ಹಲ್ಲೆ ಮಾಡಿದ, ವರದಕ್ಷಿಣೆ ಕಿರುಕುಳ ನೀಡಿದ, ಕೆಲಸಗಾರನ ಮೇಲೆ ಹಲ್ಲೆ ಮಾಡಿದ, ಕಳವು ಚಿನ್ನ ಖರೀದಿಸಿದ ಕೇಸುಗಳಲ್ಲಿ ಕುದೂರು,ಮಾಗಡಿ ಪೊಲೀಸರು ಅರೆಸ್ಟ್ ಮಾಡುವಾಗ ಪೊಲೀಸರ ಮೇಲೆ ಈತನ ಕಡೆಯವರು ಹಲ್ಲೆ ಮಾಡಿದ ಪ್ರಕರಣ, ಒಂದೂವರೆ ಕೋಟಿ ಮೊತ್ತ ಐಷಾರಾಮಿ ಕಾರೊಂದನ್ನು 45ಲಕ್ಷ ಮುಂಗಡ ಕೊಟ್ಟು,ಮೂರು ತಿಂಗಳನ್ನು ಆ ಕಾರಿನಲ್ಲಿ ಸುತ್ತಾಡಿ, ನಂತರ ಕಾರುವ ವಾಪಸ್ ಕೊಟ್ಟು ಹಣ ಕೇಳಿದ ಪ್ರಕರಣಗಳಲ್ಲೂ ಕೇಸು ಬುಕ್ ಆಗಿವೆ.
ಎಷ್ಟೋ ಮಂದಿ ಜೈಲಿನಲ್ಲಿದ್ದುಕೊಂಡೇ ಚುನಾವಣೆಗಳಲ್ಲಿ ಗೆದ್ದಿರುವ ನಿದರ್ಶನಗಳಿರುವಾಗ ಹಾಗೂ ನಮ್ಮ ಪಾರ್ಲಿಮೆಂಟಿನಲ್ಲಿರುವ ಎಂಪಿಗಳ ಪೈಕಿ 42 % ಕ್ರಿಮಿನಲ್ ಪ್ರಕರಣಗಳಿರುವವರೇ ಆಗಿರುವಾಗ ಇವೆಲ್ಲ ದೋಷಗಳಾಗಿ ಕಾಣುವುದಿಲ್ಲ ಬದಲಿಗೆ ಅರ್ಹತೆ ಎಂದು ಪರಿಗಣಿಸಿದರೂ ಅಚ್ಚರಿ ಪಡುವಂತಿಲ್ಲ.
ಶಿವಕುಮಾರಸ್ವಾಮೀಜಿ ಸರ್ಕಲ್‌ನಲ್ಲಿ ಅಮೋಘ ಟವಿ ಸ್ಟುಡಿಯೋ ಬಾಜಿನಲ್ಲೇ ಇವರ ಅಟ್ಟಿಕಾ ಗೋಲ್ಡ್ ಕಂಪನಿಯ ತುಮಕೂರು ಶಾಖೆ ಇದೆ. ತಿಂಗಳ ಹಿಂದೆ ಇಲ್ಲಿ ಸುದ್ದಿ ಗೋಷ್ಟಿ ಕರೆದಿದ್ದ ಬಾಬು ನಿಗದಿಯಾದ ಸಮಯಕ್ಕಿಂತ ಎರಡೂವರೆ ಗಂಟೆ ತಡವಾಗಿ ಬಂದರೂ ಒಬ್ಬರೂ ಅಲ್ಲಿಂದ ಕದಲಿರಲಿಲ್ಲ. ಇದು ಬೊಮ್ಮನಹಳ್ಳಿ ಬಾಬು ಎಂಬ ಎಲೆಕ್ಷನ್ ಕಿಂದರಿಜೋಗಿಯ ಮಹಿಮೆ.
ಈ ಎಲೆಕ್ಷನ್ ಕಿಂದರಿ ಜೋಗಿಯ ಕನೆಕ್ಷನ್ ಮತ್ತು ಕಲೆಕ್ಷನ್ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತಿದೆ ಎಂದರೆ, ಈಗಾಗಲೇ ಮೂರು ಸಲ ಕಣದಲ್ಲಿದ್ದು ಒಂದು ಸಲ ಗೆದ್ದು ಶಾಸಕರಾಗಿ, ಈ ಸಲವೂ ಟಿಕೆಟ್ ಕೇಳುತ್ತಿರುವ ಕಾಂಗ್ರೆಸ್‌ನ ಡಾ.ಎಸ್.ರಫೀಕ್ ಅಹ್ಮದ್ ನಗರದ ಸಮಾರಂಭವೊಂದರಲ್ಲಿ ಈ ಬಾಬು ಎದುರು ದೀನನಾಗಿ, ವಿನೀತನಾಗಿ, ತಲೆ ತಗ್ಗಿಸಿ ನಿಂತಿರುವ ಈ ಫೋಟೋ ನೋಡಿದರೆ ಸಾಕು ಹೆಚ್ಚಿನ ವಿವರಣೆ ಕೊಡಲೇಬೇಕಿಲ್ಲ.
“ಏನ್ಸಾರ್, ಬೊಮ್ಮನಹಳ್ಳಿ ಬಾಬು ಜನರಿಗೆ ಹಂಚಲು ಪಾಂಪ್ಲೆಟ್ ಮಾಡಿಸೇ ಇಲ್ಲವಂತೆ, ಎಲ್ಲ ರಿಸರ್ವ್ ಬ್ಯಾಂಕೇ ಪ್ರಿಂಟ್ ಮಾಡಿಸಿಕೊಟ್ಟಿರುವ ಕರಪತ್ರಗಳನ್ನೇ ಹಂಚುತ್ತಿದ್ದಾರಂತೆ” ಎಂದು ಇವತ್ತು ಬೆಳಿಗ್ಗೆ ಎದುರು ಸಿಕ್ಕ ಪರಿಚಿತ ಉದ್ಯಮಿ, ಗುತ್ತಿಗೆದಾರರೊಬ್ಬರು ಅಮಾಯಕರಂತೆ ನನ್ನನ್ನು ಕೇಳಿದರು. ಅವರ ಮಾತನ್ನು ಸಾಬೀತುಪಡಿಸುವಂಥ ಕೆಲವು ಫೋಟೋಗಳನ್ನು ಇಲ್ಲಿ ಹಾಕಿದ್ದೇನೆ, ನೋಡಿ,
ಮಸೀದಿಯ ಮೀನಾರು ಕಟ್ಟಲು, ದೇವಾಲಯಗಳ ಬ್ರಹ್ಮ ಕಳಸ ಸ್ಥಾಪಿಸಲು, ಯುವಕರು ಆಟವಾಡಲು ಕಟ್ಟುಗಟ್ಟಲೆ ಐನೂರರ ನೋಟುಗಳನ್ನು ಸಾರ್ವಜನಿಕವಾಗೇ ದಾನ ಮಾಡುತ್ತಿರುವ ಫೋಟೋಗಳನ್ನು ಗಮನಿಸಿ, ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ವ್ಯಕ್ತಿ ಹೀಗೆ ದಾನ ಮಾಡುವುದು ತಪ್ಪು ಎನ್ನುವಂತ ಕಾನೂನನ್ನು ನಮ್ಮ ಚುನಾವಣಾ ಆಯೋಗ ಇನ್ನೂ ಮಾಡಿಲ್ಲವಲ್ಲ, ಏನೀಗ ಎನ್ನಬಹುದು ನೀವು.
ದಲಿತರ ಏಳಿಗೆಗೆ ದಶಕಗಳಿಂದ ಶ್ರಮಿಸುತ್ತಿರುವ ಎನ್‌ಜಿಓ ಕೂಡಾ ಶೋಷಿತರ ಉದ್ಧಾರಕ್ಕೆಂದು ಅಟ್ಟಿಕಾ ಬಾಬು ಅವರಿಂದ ಹಣ ಪಡೆದುಕೊಂಡರೆ ತಪ್ಪೇನು ಎಂದು ನೀವು ಹೇಳಬಹುದು. ಹೀಗೇ 2020ರಲ್ಲಿ ಸಿರಾ ಉಪ ಚುನಾವಣೆಯಲ್ಲಿ ಅವತ್ತಿನ ಮುಖ್ಯಮಂತ್ರಿಯ ಯುವರಾಜ ಮಗ ವಿಜಯೇಂದ್ರ ಹುಂಜನಾಳು ಹಳ್ಳದಲ್ಲಿ ಹಣವನ್ನೇ ಹರಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದನ್ನು ಮರೆಯುವಂತಿಲ್ಲ.
ಉಪ್ಪಾರಹಳ್ಳಿಯ ಹಳೇ ಹೆಂಚಿನ ಕಾರ್ಖಾನೆಯ ಅವರಣದಲ್ಲಿ ಮತ್ತೊಬ್ಬ ಪಾರ್ಟ್ ಟೈಮ್ ರಾಜಕಾರಣಿ ಪಿ.ಎನ್.ಕೃಷ್ಣಮೂರ್ತಿ ನಿರ್ಮಿಸಿರುವ ಲೇಔಟ್‌ನಲ್ಲಿ ಕಟ್ಟಿದ್ದ ಮಾಡೆಲ್ ಮನೆಯೊಳಕ್ಕೆ ಹೋಗಿ ಬೊಮ್ಮನಹಳ್ಳಿ ಬಾಬು ಕುಳಿತ ಸುದ್ದಿ ಕೇಳಿ ಅವರ ಬ್ರದರ್ ನ್ಯಾಶನಲ್ ಟ್ರಾವಲ್ಸ್ನ ಜಮೀರ್ ಅಹಮದ್ ಓಡೋಡಿ ಬಂದು, ಸುದ್ದಿಗಾರರ ಕ್ಯಾಮೆರಾ ಎದುರು ಕೆಮ್ಮಿ ಕ್ಯಾಕರಿಸಿ, ʼ ಬೊಮ್ಮನಳ್ಳಿ ನಮ್ಗೆ ಒಂಥರಾ ಬ್ರದರ್‌ಗೆ ಇದ್ದಂಗೆ” ಅಂತ ಕ್ಲಾರಿಫೈ ಮಾಡಿ ಹೋಗಿದ್ದೂ ಆಯಿತು.
ಸುಮ್ಮನೇ ನೀವು ಒಂದ್ಸಲ ಈ ಬೊಮ್ಮನಳ್ಳಿ ಬಾಬು ಫೇಸ್ ಬುಕ್ ಪೇಜ್‌ಗೆ ಒಂದ್ ವಿಸಿಟ್ ಹಾಕಿ ನೋಡಿ, ಗಾಬರಿ ಆಗಿ ಬಿಡ್ತೀರಾ, ಇಡೀ ವರ್ಷದಲ್ಲಿ ಯಾರ ಯಾರ ಬರ್ತ್ಡೇ ಮತ್ತು ಡೆತ್ ಡೇ ಗಳಿವೆಯೋ ಅವರೆಲ್ಲರ ಹೆಸರಿನಲ್ಲಿ ವಿಶ್ ಮಾಡಿರುವ ಪೋಸ್ಟ್ಗಳು ಇವರ ವಾಲ್‌ನಲ್ಲಿವೆ. ಯಾರೋ ಸಖತ್ತಾಗಿರೋ ಪಾರ್ಟೀನೇ ಸೋಶಿಯಲ್ ಮೀಡಿಯಾ ಹೆಡ್ ಆಗಿರಬೇಕು, ಕುವೆಂಪು ಇರಲಿ ಪೂರ್ಣ ಚಂದ್ರ ತೇಜಸ್ವಿಯವರನ್ನೂ ಈ ವಿಶ್ ಮೆಸೇಜ್‌ನಲ್ಲಿ ಬಿಟ್ಟಿಲ್ಲ ಬಿಡಿ.
ಚುನಾವಣೆಯಲ್ಲಿ ಗೆಲ್ಲುವುದೊಂದೇ ಮಾನದಂಡ ಎಂದು ಎಲ್ಲರೂ ಹೇಳುವ ಹೊತ್ತಿನಲ್ಲಿ, ಜನತಾ ಜಲಧಾರೆ ಹಾಗೂ ಪಂಚರತ್ನ ರಥಯಾತ್ರೆಗಳ ಹೆಸರಿನಲ್ಲಿ ಜಿಲ್ಲೆಗೆ ಬಂದು ಹೋದ ಜೆಡಿಎಸ್ ಅಧಿನಾಯಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅದ್ಯಾವ ಗಳಿಗೆಯಲ್ಲಿ ಈ ಬೊಮ್ಮನಹಳ್ಳಿ ಬಾಬುವನ್ನು ಮಂಚಕಲ್‌ಕುಪ್ಪೆ ಟೋಲ್‌ನಿಂದ ಒಳಕ್ಕೆ ಕರೆದುಕೊಂಡು ಬಂದು ಬಿಟ್ಟು ಹೋದರೋ ಗೊತ್ತಿಲ್ಲ ಆದರೆ ಅವರ ಉದ್ದೇಶವಂತೂ ಈಡೇರಿದಂತಾಗಿದೆ ಎನ್ನಬಹುದು.
ಮೊದಲ ಸುದ್ದಿಗೋಷ್ಟಿಯಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದರು ಬಾಬು, ಕ್ಯಾತಸಂದ್ರದಲ್ಲಿ ಹೆಚ್‌ಡಿಕೆ ಗೋವಿಂದರಾಜು ಹೆಸರು ಹೇಳಿದ ಮೇಲೆ, ಕಾಂಗ್ರೆಸ್ ಕಡೆ ತಿರುಗಿಕೊಂಡರು, ಕಡೆಗೆ ತುಮಕೂರಿನ ಜನ ಬದಲಾವಣೆ ಬಯಸಿದ್ದಾರೆ, ನನಗೆ ಯಾವ ಪಕ್ಷ ಟಿಕೆಟ್ ಕೊಡಲಿ ಬಿಡಲಿ, 2023ರ ಚುನಾವಣೆಯಲ್ಲಿ ತುಮಕೂರು ಎಂಎಲ್‌ಎ ನಾನೇ ಎಂದು ಹೇಳಿ ಬಿಟ್ಟಿದ್ದಾರೆ ಈ ಬೊಮ್ಮನಹಳ್ಳಿ ಬಾಬು@ಪಿ.ಎಸ್.ಅಯೂಬ್ @ ಅಟ್ಟಿಕಾ ಬಾಬು . ಹೀಗಾಗಿ ತುಮಕೂರಿನ ಸಾಮಾಜಿಕ ಕಾರ್ಯಕರ್ತರಂತೆ, ಸಮಾಜ ಸೇವಕರಂತೆ ಫೋಸು ಕೊಡುತ್ತಿದ್ದ ಬಹುಪಾಲು ಮಂದಿ ಹಾಗೂ ಪುಡಿ ಪುಡಾರಿಗಳೆಲ್ಲ ಬೊಮ್ಮನಳ್ಳಿ ಬಾಬು ಹಣದ ಹಿಂದೆ ಬಿದ್ದಿದ್ದಾರೆ.
ಇಷ್ಟೆಲ್ಲ ಹೇಳುವ ಮೂಲಕ ನಾನು ಬೊಮ್ಮನಹಳ್ಳಿ ಬಾಬು ಅಲಿಯಾಸ್ ಪಿ.ಎಸ್.ಅಯೂಬ್ ಎಂಬ ಕಾರಿನ ಡಿಕ್ಕಿಯಲ್ಲೇ ಎಟಿಎಂ ಮೆಶಿನ್ ಇನ್‌ಸ್ಟಾಲ್ ಮಾಡಿಕೊಂಡು ತುಮಕೂರು ನಗರ ಕ್ಷೇತ್ರದಲ್ಲಿ ಗರಗರ ತಿರುಗುತ್ತ, ಹಿಂದೆ ಮುಂದೆ ಸುತ್ತುತ್ತಿರುವವರಿಗೆ ನೋಟಿನ ಕಂತೆ ತೋರಿಸುತ್ತ ಗಿರಿಗಿಟ್ಟಲೆ ಆಡುತ್ತಿರುವ ವ್ಯಾಪಾರಿಯನ್ನು ಹೊಗಳುತ್ತಿದ್ದೇನೆ ಎಂದು ತಪ್ಪಾಗಿ ಭಾವಿಸಬೇಡಿ.
ಮುಸ್ಲಿಮರ ಜನಸಂಖ್ಯೆ ಹೆಚ್ಚಿರುವ ಹಾಗೂ ಕಾಂಗ್ರೆಸ್ ಎಲ್ಲ ಚುನಾವಣೆಗಳಲ್ಲೂ ಮುಸ್ಲಿಮರಿಗೆ ರೆಗ್ಯುಲರ್ ಆಗಿ ಟಿಕೆಟ್ ಕೊಡುವ ವಿಧಾನ ಸಭಾ ಕ್ಷೇತ್ರಗಳಲ್ಲಿ ಬೊಮ್ಮನಳ್ಳಿ ಬಾಬುವಿನಂತವರನ್ನು ಯಾವುದಾದರೂ ನಾಮಕಾವಸ್ತೆ ರಾಜಕೀಯ ಪಕ್ಷಗಳ ಗುರುತಿನಡಿ ಅಥವಾ ಪಕ್ಷೇತರರಾಗಿ ಕಣಕ್ಕಿಳಿಸಿ, ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವಂತೆ ಮಾಡುವ ʼ ಸುಪಾರಿʼಯನ್ನು ರಾಜ್ಯದಲ್ಲಿ ಕೆಲ ಮುಸ್ಲಿಮ್ ರಾಜಕೀಯ ನಾಯಕರು ತೆಗೆದುಕೊಂಡಿದ್ದು, ಈ ಆಪರೇಶನ್‌ನ ಟೂಲ್‌ಕಿಟ್‌ಗಳೇ ಇವರೆಲ್ಲ ಎನ್ನಲಾಗಿದೆ. ಇಂಥ ಸನ್ನಿವೇಶದ ಲಾಭ ಯಾರಿಗೆ ಅಂತ ಬಿಡಿಸಿಹೇಳಬೇಕಿಲ್ಲ ಅಲ್ವಾ.
ಕೋವಿಡ್ ಬಿಕ್ಕಟ್ಟುಹಾಗೂ ಆರ್ಥಿಕ ಹಿಂಜರಿತಗಳೆರೆಡೂ ಕಾರಣವಾಗಿ ಹೆಚ್ಚಿರುವ ನಿರುದ್ಯೋಗಿಗಳು ಹಾಗೂ ಅರೆ ಉದ್ಯೋಗಿಗಳು, ಯಾವುದೇ ಬದ್ಧತೆಯಿಲ್ಲದ ದಲ್ಲಾಳಿಗಳಂತ ಪುಡಾರಿಗಳೇ ಈ ಪೊಳ್ಳು ಸಮಾಜದ ಹೆಣಿಗೆಯಾಗಿರುವ ಹೊತ್ತಿನಲ್ಲಿ ಬೊಮ್ಮನಳ್ಳಿ ಬಾಬು ತೋರಿಸುವ ಕಂತೆಗಟ್ಟಲೆ ನೋಟುಗಳಿಗೆ ಮರುಳಾಗದೇ ಇದ್ದವರು ಮೂರ್ಖರೋ ಅಲ್ಲವೋ ನೀವೇ ಹೇಳಿ. ಆದರೆ ಇಂಥ ಕೆಟ್ಟ ನಡವಳಿಕೆಗೆ ಚುನಾವಣಾ ಆಯೋಗ ತಡೆ ಹಾಕಬೇಕಿದೆ.