ವರ್ತಮಾನ ಕನ್ನಡಕ್ಕೆ: ನಾ ದಿವಾಕರ   ಭಾರತದ ಪ್ರಜ್ಞೆಯನ್ನು ಮರುಸೃಜಿಸುವ ಕುರಿತು

ವರ್ತಮಾನ ಕನ್ನಡಕ್ಕೆ: ನಾ ದಿವಾಕರ   ಭಾರತದ ಪ್ರಜ್ಞೆಯನ್ನು ಮರುಸೃಜಿಸುವ ಕುರಿತು

ವರ್ತಮಾನ     ಕನ್ನಡಕ್ಕೆ:  ನಾ ದಿವಾಕರ     ಭಾರತದ ಪ್ರಜ್ಞೆಯನ್ನು ಮರುಸೃಜಿಸುವ ಕುರಿತು

ವರ್ತಮಾನ

ಕನ್ನಡಕ್ಕೆ:

ನಾ ದಿವಾಕರ

 

ಭಾರತದ ಪ್ರಜ್ಞೆಯನ್ನು ಮರುಸೃಜಿಸುವ ಕುರಿತು

 

ಭಾರತ ಶರವೇಗದೊಂದಿಗೆ ಹಿಂದಿರುಗಿ ಬರಲಾಗದಂತಹ ಒಂದು ನಿರ್ಣಾಯಕ ಹಂತವನ್ನು ತಲುಪುತ್ತಿದೆ. ದೇಶದ ರಾಜಕೀಯ ಸಂಸ್ಕೃತಿಯು ಎಷ್ಟರ ಮಟ್ಟಿಗೆ ಬಲಪಂಥದೆಡೆಗೆ ವಾಲಿದೆ ಎಂದರೆ ಭಾರತ ಎತ್ತ ಸಾಗುತ್ತಿದೆ ( ಹೇಗೆ ತಲುಪುವುದು ಎನ್ನುವುದರ ಬಗ್ಗೆ ಪಕ್ಷಗಳ ಭಿನ್ನ ನಿಲುವುಗಳ ಹೊರತಾಗಿಯೂ) ಎನ್ನುವುದರ ಬಗ್ಗೆ ಒಮ್ಮತದ ಅಭಿಪ್ರಾಯವೂ ಅಸಾಧ್ಯವಾಗಿದೆ. ದ್ವೇಷ ಮತ್ತು ಹಿಂಸೆ ಎಷ್ಟು ವ್ಯಾಪಕವಾಗಿ ಹರಡಿದೆಯೆಂದರೆ ನಿನ್ನೆ ಊಹಿಸಲಸಾಧ್ಯವಾಗಿದ್ದ ಸಂಗತಿಗಳು ನಾಳೆಗೆ ಅನಿವಾರ್ಯವಾಗುತ್ತಿವೆ. ನಿಸ್ಸಂದೇಹವಾಗಿ ಹೇಳುವುದಾದರೆ, ಭಾರತದ ಪ್ರಜಾತಂತ್ರದ ಪರಿಕಲ್ಪನೆಯನ್ನು ಯಶಸ್ವಿಯಾಗಿ ಭಗ್ನಗೊಳಿಸಲಾಗಿದೆ. ಭಾರತದ ಸಂವಿಧಾನ ರಚನಾ ಮಂಡಲಿಯಲ್ಲಿ ಎಲ್ಲರ ಒಮ್ಮತದೊಂದಿಗೆ ಬೆಸೆಯಲಾದ ದೇಶದ ರಾಜಕೀಯ ಸಂಸ್ಕೃತಿಯನ್ನು ಗುಟ್ಟಾಗಿ ಮರುರಚನೆ ಮಾಡಲಾಗುತ್ತಿದೆ.

 

ಈ ಪ್ರಕ್ರಿಯೆ 2014ರಿಂದಲೇ ಆರಂಭವಾಗಿದೆ ಎಂದು ಹೇಳುವುದು ಅರ್ಧಸತ್ಯವಾಗುತ್ತದೆ. ಸದಾ ರಾಜಕಾರಣದ ಪರಿಧಿಯಲ್ಲೇ ಇರಬೇಕಾದ ಅವಧಿಯಲ್ಲಿ, ಅಧಿಕಾರದ ಹಂಗಿಲ್ಲದೆಯೇ, ಆರೆಸ್ಸೆಸ್‌ ಮತ್ತು ಆನಂತರ ಬಿಜೆಪಿಗಳು ಚುನಾವಣೇತರ ರಾಜಕೀಯದ ಬಗ್ಗೆ ಹೆಚ್ಚು ಗಮನಹರಿಸುವುದು ಅನಿವಾರ್ಯವಾಗಿತ್ತು. ಆದರೆ ಎರಡು ನಿರ್ಣಾಯಕ ತಿರುವುಗಳು  ಈ ಎರಡೂ ಸಂಘಟನೆಗಳ ಕಾರ್ಯವ್ಯಾಪ್ತಿಯನ್ನು ಹಿಗ್ಗಿಸಲು ನೆರವಾಗಿದ್ದವು.  ಜನತಾ ಪಕ್ಷದ ಸರ್ಕಾರವು, ಆರೆಸ್ಸೆಸ್‌ ಬಗ್ಗೆ ಅನುಕಂಪವುಳ್ಳವರನ್ನು ಅಧಿಕಾರಶಾಹಿಯಲ್ಲಿ, ಮಾಧ್ಯಮಗಳಲ್ಲಿ ಮತ್ತು ಚಲನಚಿತ್ರರಂಗದಲ್ಲಿ ಸ್ಥಾಪಿಸಲು ಅವಕಾಶವನ್ನು ಕಲ್ಪಿಸಿತ್ತು. ಈ ಯೋಜನೆಯು ಎನ್‌ಡಿಎ ಆಳ್ವಿಕೆಯ ಮೊದಲ ಪಾಳಿಯಲ್ಲಿ ತೀವ್ರತೆಯನ್ನು ಪಡೆದುಕೊಂಡಿತ್ತು. 2010 ರಿಂದ 2014ರ ಅವಧಿಯಲ್ಲಿ ಇದು ಪರಿಣಾಮಕಾರಿಯಾಗಿ ತಳವೂರಲು ಸಾಧ್ಯವಾಗಿತ್ತು.  ಯುಪಿಎ ಸರ್ಕಾರದ ಒಳಗೆ ಮತ್ತು ಹೊರಗೂ ಸಹ ಪ್ರಮುಖ ಪಾತ್ರಧಾರಿಗಳು  ಭಾರತದ ಸ್ವಪ್ರಜ್ಞೆಗೆ ಹೊಸ ರೂಪವನ್ನು ನೀಡಲು ಶ್ರಮಿಸಿದ್ದರು. 

ಇಲ್ಲಿ ಮೂರು ಅಂತರ್‌ ಸಂಬಂಧಿತ ವಿಚಾರಗಳನ್ನು ಪ್ರಸ್ತಾಪಿಸುವುದಾದರೆ , ಭ್ರಷ್ಟಾಚಾರದ ವಿರುದ್ಧ ಅಖಿಲ ಭಾರತ ಆಂದೋಲನವು (ಇದನ್ನು ನೇರವಾಗಿ ಆರೆಸ್ಸೆಸ್‌-ಬಿಜೆಪಿ ಪೋಷಿಸಿದ್ದವು) ಯುಪಿಎ ಸರ್ಕಾರವನ್ನು ಅಸ್ಥಿರಗೊಳಿಸಿದ್ದೇ ಅಲ್ಲದೆ ಆಡಳಿತ ವಿರೋಧಿ ಅಲೆಯನ್ನು ಸಮರ್ಥಿಸುವಂತೆ ಮಾಡಿತ್ತು. ಇದಕ್ಕೆ ಪೂರಕವಾಗಿ ಅನೇಕ ಹಿರಿಯ  ಅಧಿಕಾರಿಗಳು ( ಆನಂತರ ಇವರಲ್ಲಿ ಹಲವರು ಬಿಜೆಪಿ ಸೇರಿದ್ದರು) 2011ರಿಂದಲೇ ಪ್ರಭುತ್ವದ ಅಧಿಕಾರದ ಕೀಲಿಗಳನ್ನು ಶಿಥಿಲಗೊಳಿಸಿದ್ದರು. ಈ ಪ್ರಕ್ರಿಯೆಯೊಂದಿಗೇ ಬಿಜೆಪಿ ಸಂಸತ್‌ ಅಧಿವೇಶನಕ್ಕೆ ತಡೆಯೊಡ್ಡುವ ಮೂಲಕ ಆಡಳಿತ ನೀತಿ ನಿಷ್ಕ್ರಿಯವಾಗಿದೆ ಎನ್ನುವ ಒಂದು ಮಿಥ್ಯೆಯನ್ನು ಸೃಷ್ಟಿಸಿತ್ತು.  ಒಟ್ಟಾರೆಯಾಗಿ ಈ ಎಲ್ಲ ಕಾರಣಗಳಿಂದ  ಭಾರತದ ಸಕಲ ಸಮಸ್ಯೆಗಳಿಗೂ ಮೇಲ್ಪದರದ ಅಧಿಕಾರಾರೂಢ ವ್ಯವಸ್ಥೆಯೇ ಕಾರಣ ಮತ್ತು ಅದು ಪೋಷಿಸುವ ರಾಜಕೀಯ ಸಂಸ್ಕೃತಿಯೇ ಕಾರಣ ಎಂದು ಬಿಂಬಿಸಲಾಯಿತು. ಅಂದರೆ ಭಾರತದ ಸಂವಿಧಾನವನ್ನು ಗುರಿಪಡಿಸಲಾಯಿತು.

 

ಜನತೆಯ ಸಹಮತ ಮತ್ತು ಸಮ್ಮತಿ

 

ಜನತೆಯ ಸಹಮತ ಮತ್ತು ಸಮ್ಮತಿ ಇಲ್ಲದೆ ಹೋಗಿದ್ದರೆ ಇದಾವುದೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಸಮ್ಮತಿಯು ಸ್ವಾಭಾವಿಕವಾಗಿ ಸೃಷ್ಟಿಯಾಗಲಿಲ್ಲ. ಭಾರತದ ರಾಜಕೀಯ ಸಂಸ್ಕೃತಿಯ ಮೇಲೆ ತನ್ನ ಬಹು ಆಯಾಮಗಳ ದಾಳಿಯಲ್ಲಿ ಸಂಘಪರಿವಾರವು ಮೊದಲು ಸಾಮಾಜಿಕ ಸಂಕಥನಗಳಿಗೆ ಮರುಜೀವ ನೀಡಿತ್ತು. ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಸಶಕ್ತಗೊಳಿಸಿತ್ತು. ಪ್ರಗತಿಪರ ಸಂಘಟನೆಗಳು ಇನ್ನೂ ಸಹ ಟ್ವಿಟರ್‌ ಬಳಕೆಯಲ್ಲೇ ಮುಂದುವರೆಯುತ್ತಿದ್ದಾಗ                      ( ಭಾರತದಲ್ಲಿ 23.6 ದಶಲಕ್ಷ ಟ್ವಿಟರ್‌ ಬಳಕೆದಾರರಿದ್ದಾರೆ) ಸಂಘಪರಿವಾರವು ಯುಟ್ಯೂಬ್‌                    ( ಭಾರತದಲ್ಲಿ ನಿತ್ಯ ಬಳಕೆದಾರರ ಸಂಖ್ಯೆ 265 ದಶಲಕ್ಷ), ಫೇಸ್‌ಬುಕ್‌ (ಭಾರತದಲ್ಲಿ 329 ದಶಲಕ್ಷ ಬಳಕೆದಾರರಿದ್ದಾರೆ), ಮತ್ತು ವಾಟ್ಸಾಪ್ (ಭಾರತದಲ್ಲಿ 459 ದಶಲಕ್ಷ ಬಳಕೆದಾರರಿದ್ದಾರೆ), ಈ ಮೂರು ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಿತ್ತು. ಭಾರತದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಮೂವರಲ್ಲಿ ಒಬ್ಬರು ರಾಜಕೀಯ ವಿಷಯ  ವಸ್ತುವನ್ನೇ ಬಳಸುತ್ತಾರೆ. ಇವರಲ್ಲಿ ಬಹುಪಾಲು ಬಳಕೆದಾರರು ಸಂಘಪರಿವಾರದವರೇ ಆಗಿರುತ್ತಾರೆ.  ಇದೇ ರೀತಿ, ಆರೆಸ್ಸೆಸ್‌ ಮತ್ತು ಬಿಜೆಪಿ ಜನಪ್ರಿಯ ಸಾಂಸ್ಕೃತಿಕ ವಲಯವನ್ನು ಯಶಸ್ವಿಯಾಗಿ ಸಶಕ್ತಗೊಳಿಸಿದೆ. ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌, ಉರಿ-ಸರ್ಜಿಕಲ್‌ ಸ್ಟ್ರೈಕ್‌, ದ ತಾಷ್ಕೆಂಟ್‌ ಫೈಲ್ಸ್‌, ದ ಕಾಶ್ಮೀರ್‌ ಫೈಲ್ಸ್‌, 1946, ಕೊಲ್ಕತ್ತಾ ಕಿಲ್ಲಿಂಗ್ಸ್‌ ಮುಂತಾದ ಚಲನಚಿತ್ರಗಳಷ್ಟೇ ಅಲ್ಲದೆ, ಮಾಧ್ಯಮ ವಾಹಿನಿಗಳು, ಪುಸ್ತಕಗಳು ಮತ್ತು ಚಿಂತನಾ ವಾಹಿನಿಗಳನ್ನು ಹರಿಬಿಡುವ ಮೂಲಕ ಸಂಘಪರಿವಾರದ ಸೈದ್ಧಾಂತಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂದೇಶವನ್ನು ರವಾನಿಸುವುದರಲ್ಲಿ ಯಶಸ್ವಿಯಾಗಿದೆ.

 

ಮತ್ತೊಂದೆಡೆ ಸಂಘಪರಿವಾರವು ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವ (ಪಠ್ಯಕ್ರಮಗಳ ಬದಲಾವಣೆ, ತನ್ನ ಕಾರ್ಯಕರ್ತರನ್ನು ಬೋಧಕರನ್ನಾಗಿ ನೇಮಿಸುವುದು) ಮೂಲಕ ನಮ್ಮ ರಾಷ್ಟ್ರಪ್ರಜ್ಞೆಯನ್ನು ಪುನಾರೂಪಿಸಲು ಮುಂದಾಗಿದೆ. ಈ ಹಾದಿಯಲ್ಲಿ ಸಂಘಪರಿವಾರವು ತಮ್ಮ ಆಯ್ಕೆಯ ಸಮುದಾಯದ ನಾಯಕರಿಗೆ ರಾಜಕೀಯ ಹುದ್ದೆ, ಸ್ಥಾನಗಳನ್ನು ನೀಡುವುದರ ಮೂಲಕ ಅವರಿಂದ ಪ್ರಯೋಜನ ಪಡೆಯತ್ತಿದೆ. ಹಾಗೂ ತಳಮಟ್ಟದಲ್ಲಿರುವ ಧಾರ್ಮಿಕ ಸಂಸ್ಥೆಗಳ ಜಾಲವನ್ನು ಬಳಸಿಕೊಳ್ಳುತ್ತಿದೆ. ಹೊರದೇಶಗಳಲ್ಲಿರುವ ಭಾರತೀಯ ಸಂಜಾತರೊಡನೆ ಸಂಪರ್ಕ ಸಾಧಿಸಲು ವಿದೇಶಿ ರಾಯಭಾರಿಗಳ ಸಹಕಾರದೊಂದಿಗೆ ತನ್ನದೇ ಆದ ಸಂಘಟನೆಗಳನ್ನು ನಿರ್ವಹಿಸುತ್ತಿದೆ. ಸಂಘಪರಿವಾರವು ಕೇವಲ ಚುನಾವಣೆಗಳನ್ನು ಮಾತ್ರ ಗೆಲ್ಲುತ್ತಿಲ್ಲ ಎನ್ನುವ ವಾಸ್ತವವನ್ನು ಪ್ರಗತಿಪರರು ಅರ್ಥಮಾಡಿಕೊಳ್ಳಬೇಕಿದೆ. ವಾಸ್ತವಿಕವಾಗಿ ಸಂಘವು ಭಾರತದ ಸಂವಿಧಾನದ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಚುನಾವಣೆಗಳು ಕಣ್ಣಿಗೆ ಕಾಣುವಂತಹ ಕ್ಷೇತ್ರಮಾತ್ರ.  ಭಾರತೀಯರ ಮನಸು, ಹೃದಯಗಳಲ್ಲಿನ ಆಲೋಚನೆಗಳನ್ನು ಪುನರ್ನಿರ್ಯೋಜನಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥಿತವಾದ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿಯೇ ಚುನಾವಣೆಗಳು ಘೋಷಣೆಯಾಗುವ ಮುನ್ನವೇ ಗೆಲುವು ನಿಶ್ಚಿತ ಎನ್ನುವಂತಿರುತ್ತದೆ. ಇದು ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ರಾಜಕೀಯ ಕ್ಷೇತ್ರವನ್ನೂ ಬಾಧಿಸಿದೆ.  ಹೆಚ್ಚಿನ ಮಟ್ಟಿಗೆ ಎಲ್ಲ ಪಕ್ಷದ ನಾಯಕರೂ ಸಹ ಕೋಮುವಾದಿ, ಜಾತೀಯ, ಪಿತೃಪ್ರಧಾನ ಮತ್ತಿತರ ತಿರೋಗಾಮಿ ಭಾವನೆಗಳಿಗೆ ಸ್ಪಂದಿಸುತ್ತಾರೆ. ಈ ಸಾಮಾಜಿಕ-ಮನಶ್ಶಾಸ್ತ್ರೀಯ ಬದಲಾವಣೆ ಎಷ್ಟು ನಿರುಪಾಧಿಕವಾಗಿದೆ ಎಂದರೆ, ತಿರೋಗಾಮಿ ಮೌಲ್ಯಗಳ ವಿರುದ್ಧ ಸಂದೇಹವಾದಿ ಪ್ರಜ್ಞೆ ಉಳ್ಳವರೂ  ಸಹ ಬಲಪಂಥೀಯ ನೆಲೆಯಿಂದಲೇ ಬಿಜೆಪಿಯನ್ನು ಮೀರಿಸಬಹುದು ಎಂದೇ ಭಾವಿಸಿ ಬಿಜೆಪಿಯೊಡನೆ ಸ್ನೇಹದಿಂದಿರುತ್ತಾರೆ. ಆದರೂ ಕೆಲವರು, 2029ರ ನಂತರದಲ್ಲಷ್ಟೇ ( ಆ ವೇಳೆಗೆ ಪ್ರಸಕ್ತ ನಾಯಕತ್ವವು ಹೊಸ ಪೀಳಿಗೆಗೆ ಬಿಟ್ಟುಕೊಟ್ಟಿರುತ್ತದೆ) ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂಬ ಭಾವನೆಗೆ ಕಟ್ಟುಬಿದ್ದಿದ್ದಾರೆ.

 

ಬಿಜೆಪಿ ಭಾರತದ ಸಾಂವಿಧಾನಿಕ ಪರಿಕಲ್ಪನೆಯ ವಿರುದ್ಧ ನಿರಂತರ ಸಂಘರ್ಷ ನಡೆಸುತ್ತಿದೆ ಎಂಬ ಒಂದೇ ಕಾರಣಕ್ಕಾಗಿ ಅಲ್ಲದಿದ್ದರೂ,  ಈ ಸೈದ್ಧಾಂತಿಕ ಗೊಂದಲ ಮತ್ತು ಪರಾಜಿತಭಾವವು ದೇಶದ ದೃಷ್ಟಿಯಿಂದ ಒಳ್ಳೆಯದಲ್ಲ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಇದ್ದಂತೆಯೇ ಪ್ರಗತಿಪರರು ಇಂದು ಭಾರತದ ಪ್ರಭುತ್ವದ ಶಕ್ತಿಯನ್ನು ಎದುರಿಸಬೇಕಿದೆ. ಪ್ರತಿದಿನವೂ ನವನವೀನ ದುಷ್ಟತನದ ಕತೆಗಳನ್ನು ಎದುರಿಸುತ್ತಲೇ ಇದ್ದೇವೆ.

 

 

 

 

ಪ್ರಗತಿಪರರನ್ನು ಹಿಮ್ಮೆಟ್ಟಿಸಲಾಗಿದೆ

 

ಆದರೆ ಎಲ್ಲ ವಿದ್ಯಮಾನಗಳ  ಶ್ರೇಯಸ್ಸನ್ನು ಸಂಘಪರಿವಾರಕ್ಕೆ  ಆರೋಪಿಸುವುದು ನ್ಯಾಯಯುತವಲ್ಲ. ಇಂದಿನ ಭಾರತದಲ್ಲಿ ಇತರೆ ಪುರೋಗಾಮಿ ಶಕ್ತಿಗಳೂ ಸಹ  ಡಿಜಿಟಲ್‌ ಪ್ರಪಂಚದಲ್ಲಿ ಸದೃಶ ಭಾಗಿದಾರರಾಗಿವೆ. ಪ್ರಗತಿಪರರು ಸಂಘಟನಾತ್ಮಕ ದೌರ್ಬಲ್ಯಗಳಿಂದ ಮತ್ತು ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿರುವುದು ವಾಸ್ತವವೇ ಹೌದು. ಆದರೆ ಅವರು ಹಿನ್ನಡೆ ಅನುಭವಿಸುತ್ತಿರುವುದಕ್ಕೆ ಕಾರಣ  ಬೇರೆಯೇ ಆಗಿದೆ. ಬಿಜೆಪಿಯನ್ನು ಎದುರಿಸುವ ಮಾರ್ಗದಲ್ಲಿ ಪ್ರಗತಿಪರರು ಅರ್ಜಿಗಳು, ಬಹಿರಂಗ ಪತ್ರಗಳು, ಸಾಂಕೇತಿಕ ಪ್ರತಿಭಟನೆಗಳು, ಧರಣಿಗಳು, ಪತ್ರಿಕಾ ಪ್ರಕಟಣೆಗಳು, ಟ್ವೀಟ್‌ಗಳು ಹೀಗೆ ಪ್ರಚಲಿತ ಕಾರ್ಯತಂತ್ರಗಳಿಗೇ ಮೊರೆಹೋಗುತ್ತಿದ್ದಾರೆ.  ಈ ಕಾರ್ಯತಂತ್ರಗಳು ಮಾಧ್ಯಮಗಳ ಮೇಲೆ ಬಿಜೆಪಿ ಹೊಂದಿರುವ ನಿಯಂತ್ರಣವನ್ನು ಅಲುಗಾಡಿಸಬಹುದಾದರೂ ಬಿಗಿಹಿಡಿತವನ್ನು ಸಡಿಲಿಸಲು, ನೆರವಾಗುವುದಿಲ್ಲ. ಪ್ರಗತಿಪರ ಕಾರ್ಯಕರ್ತರು ಗುರಿಯಾಗುತ್ತಲೇ ಇರುತ್ತಾರೆ, ಸರ್ಕಾರಗಳನ್ನು ಅಸ್ತಿರಗೊಳಿಸುವುದು ಮುಂದುವರೆಯುತ್ತಲೇ ಇರುತ್ತದೆ, ಸಾಂಸ್ಥಿಕ ಕಿರುಕುಳಗಳು ನಡೆಯುತ್ತಲೇ ಇರುತ್ತವೆ. ಇಷ್ಟೇ ಚಿಂತೆಗೀಡುಮಾಡುವ ವಿಚಾರ ಎಂದರೆ, ಸೃಜನಾತ್ಮಕ ಜಡತ್ವವು ಮೌನಿ ಸಮೂಹವನ್ನು ಜಾಗೃತಗೊಳಿಸುವುದಿಲ್ಲ. ಬದಲಾಗಿ, ಯಾವುದೇ ಪರ್ಯಾಯ ಇಲ್ಲ ಎಂಬ ಅಭಿಪ್ರಾಯ ದಟ್ಟವಾಗುತ್ತಾ ಹೋಗುತ್ತದೆ. ಇಂದು ಪ್ರಗತಿಪರರ ಪಕ್ಷಗಳು  ದೂರದೃಷ್ಟಿಯ ಕೊರತೆ ಹೊಂದಿವೆ , ರಾಜನೀತಿ  ಮತ್ತು ಲೋಕನೀತಿ (ಜನಪರ ರಾಜಕಾರಣ) ಎರಡನ್ನೂ ಮರೆತಿವೆ ಎಂದು ಭಾವಿಸಬೇಕಾಗುತ್ತಿದೆ. ಅಷ್ಟೇ ಅಲ್ಲದೆ, ಈ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಸಾಕಷ್ಟು ಸಂಪನ್ಮೂಲಗಳನ್ನು, ಶ್ರಮವನ್ನು ವ್ಯಯಿಸಿದ್ದರೂ ಅದು ಕೇವಲ ಸಣ್ಣ ವಲಯಗಳಿಗಷ್ಟೇ ಸೀಮಿತವಾಗಿದೆ.

 

ಚೇತರಿಕೆಗಾಗಿ ಹಾದಿಗಳು

 

ಪ್ರಗತಿಪರ ಶಕ್ತಿಗಳಿಗೆ ಕಠಿಣ ಪರಿಶ್ರಮದ ತಿದ್ದುಪಾಡು ಅಗತ್ಯವಿದೆ. ನಮ್ಮ ಮುಂದಿರುವ ಬಹುದೊಡ್ಡ ಸವಾಲೆಂದರೆ, ಭಾರತದ ಸ್ವಪ್ರಜ್ಞೆಯನ್ನು ಹೇಗೆ ಪುನರ್ಯೋಜನೆಗೊಳಪಡಿಸುವುದು ಎಂದು ಯೋಚಿಸುವುದು. ಇದನ್ನು ಕೇವಲ ಚುನಾವಣೆಗಳಲ್ಲಿ ಗೆಲ್ಲುವುದರಿಂದ ಸಾಧಿಸಲಾಗುವುದಿಲ್ಲ. ಅಥವಾ ಸಾಂಕೇತಿಕ ತಂತ್ರಗಾರಿಕೆಗಳಿಂದಲೂ ಸಾಧ್ಯವಿಲ್ಲ . ನಿರಂತರವಾಗಿ ಸಾಗುತ್ತಿರುವ ಬಲಪಂಥದತ್ತ ವಾಲುವಿಕೆಯನ್ನು ಇದರಿಂದ ತಡೆಗಟ್ಟುವುದೂ ಸಾಧ್ಯವಿಲ್ಲ.  ನಾವು ಶಕ್ತಿಯುತವಾದ ರಾಜಕೀಯ ಮತ್ತು ಮಾನಸಿಕ ಸ್ಥಿತಿಯನ್ನು ಮರಳಿ ಪಡೆಯುವಂತಾಗಬೇಕು. ಇದನ್ನು ಸಾಧಿಸಬೇಕೆಂದರೆ ಭಾರತದ ಸಂವಿಧಾನವನ್ನೇ ಸೃಜನಾತ್ಮಕವಾಗಿ ಬಳಸಿಕೊಂಡು ಭಾರತದ ಮೊದಲು ಸಾಫ್ಟ್‌ವೇರನ್ನು (ಸಂಸ್ಕೃತಿ, ಮೌಲ್ಯಗಳು ಮತ್ತು ಧೋರಣೆಗಳು) , ಆನಂತರ ಹಾರ್ಡ್‌ವೇರನ್ನು ( ಅರ್ಥವ್ಯವಸ್ಥೆ, ಸಂಸ್ಥೆಗಳು ಮತ್ತು ವ್ಯವಸ್ಥೆಗಳು) ಪುನರ್‌ ಜಾಗೃತಗೊಳಿಸಬೇಕು.

 

ಪ್ರಗತಿಪರ ಶಕ್ತಿಗಳ ಬಳಿ ಪ್ರಭುತ್ವದ ಸಾಧನೆ ಸಲಕರಣೆಗಳು ಇಲ್ಲದೇ ಇದ್ದರೂ ( ಕೆಲವು ರಾಜ್ಯಗಳನ್ನು ಹೊರತುಪಡಿಸಿ) ಅವರ ಬತ್ತಳಿಕೆಯಲ್ಲಿ ಇತರ ಬಾಣಗಳೂ ಇವೆ.  ಜಾಗೃತಗೊಳಿಸುವ ರಾಜಕೀಯ ತಂತ್ರಗಳಾದ ಪಾದಯಾತ್ರೆಗಳನ್ನು ನಡೆಸುವುದು, ಸಮುದಾಯಗಳನ್ನು ಮತ್ತು  ಕ್ಷೇತ್ರೀಯ ಪ್ರಭಾವಿ ಕ್ಷೇತ್ರಗಳನ್ನು ಸಾಮೂಹಿಕ ನೆಲೆಯಲ್ಲಿ ಸಂಪರ್ಕಿಸುವುದು, ರಾಷ್ಟ್ರೀಯ ಮಹತ್ವ ಹೊಂದಿರುವ ವಿಚಾರಗಳಲ್ಲಿ ಸಮೂಹ ನಿಧಿ ಸಂಗ್ರಹದ ಮೂಲಕ ತಳಮಟ್ಟದ ಚಳುವಳಿಗಳನ್ನು ಹಮ್ಮಿಕೊಳ್ಳುವುದು, ಪಂಚಾಯತ್‌, ಮೊಹಲ್ಲಾ ಸ್ತರಗಳಲ್ಲಿ ಸಭೆಗಳನ್ನು ನಡೆಸುವುದು ಇತ್ಯಾದಿ ಮಾರ್ಗಗಳಿವೆ. ಇದಕ್ಕೆ ಪೂರಕವಾಗಿ ಒಂದು ಪರ್ಯಾಯ ದೃಷ್ಟಿಕೋನವನ್ನು  ರೂಪಿಸಿ, ದತ್ತಾಂಶ ವಿಶ್ಲೇಷಣೆಗಳ ಮೂಲಕ ಉದ್ದೇಶಿತ ಜನರನ್ನು ತಲುಪುವಂತಾಗಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ, ಮಾಧ್ಯಮಗಳ ಮೂಲಕ ಅಥವಾ ಜನಪ್ರಿಯ ಸಂಸ್ಕೃತಿಯ ಮೂಲಕ ( ಸಿನಿಮಾ, ಧಾರಾವಾಹಿ, ಪುಸ್ತಕಗಳು, ಕಾಮಿಕ್ಸ್‌ಗಳು, ಆಟಗಳು, ಜಾನಪದ ಇತ್ಯಾದಿ) ಮೌಲ್ಯಾಧಾರಿತ ಸಂದೇಶವನ್ನು ಸಾರಲು ನೆರವಾಗುವಂತಹ ಭಾಗಿದಾರರೊಡನೆ ತಾತ್ವಿಕ ಮೈತ್ರಿ ಸಾಧಿಸುವಂತಾಗಬೇಕು ಅಥವಾ ಕನಿಷ್ಠ ಬೆಂಬಲವನ್ನು ಪಡೆಯುವಂತಾಗಬೇಕು.

 

ಈ ವ್ಯವಸ್ಥಿತ ಕೆಲಸವನ್ನು ಶಿಸ್ತುಬದ್ಧವಾಗಿ, ಮಾಧ್ಯಮಗಳ ಪ್ರಚಾರದಿಂದ ದೂರವಾಗಿದ್ದುಕೊಂಡೇ ಮಾಡಬೇಕಲ್ಲದೆ, ಕೇವಲ ವ್ಯಾವಹಾರಿಕ ಅವಶ್ಯಕತೆಗಳಿಗೆ ಸೀಮಿತಗೊಳಿಸಬಾರದು. ಈ ರೀತಿಯ ಸಮಾಜಮಟ್ಟದ ಸಂಕ್ರಮಣಗಳು ಕೇವಲ ಚುನಾವಣೆಗಳ ಮೂಲಕ ಮಾತ್ರವೇ ಸಾಧ್ಯವಾಗುವುದಿಲ್ಲ ಎಂಬ ವಾಸ್ತವವನ್ನು ಪ್ರಗತಿಪರ ಪಕ್ಷಗಳು ಅರಿತುಕೊಳ್ಳಬೇಕು. ( ರಾಜಕೀಯ ಪಕ್ಷಗಳು ಈ ಸ್ತರದಲ್ಲೇ ಉಳಿದುಕೊಂಡಿವೆ). ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಭಾರತವನ್ನು ಪುನರ್‌ ಜಾಗೃತಗೊಳಿಸುವ ಕೈಂಕರ್ಯದಲ್ಲಿ ಸಂಪೂರ್ಣವಾಗಿ ತೊಡಗುವಂತಹ ಸಂಘಟನೆಗಳು ಇಲ್ಲಿ ಅವಶ್ಯವಾಗಿ ಬೇಕಾಗುತ್ತವೆ.

 

ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌ ಒಮ್ಮೆ ಹೇಳಿದ್ದಂತೆ : “ ಶಾಂತಿಯನ್ನು ಪ್ರೀತಿಸುವವರು, ಯುದ್ಧವನ್ನು ಪ್ರೀತಿಸುವವರಷ್ಟೇ ಪರಿಣಾಮಕಾರಿಯಾಗಿ ಸಂಘಟಿತರಾಗಬೇಕು ”. ಆದ್ದರಿಂದಲೇ, ಒಂದು ಕಾಲದಲ್ಲಿ ಕಾಂಗ್ರೆಸ್‌ ಚಳುವಳಿ ಮಾಡಿದಂತೆ ( ಆರೆಸ್ಸೆಸ್‌ ಅದನ್ನೇ ತಂತ್ರವಾಗಿ ಮರುರೂಪಿಸಿದಂತೆ) ಪ್ರಗತಿಪರರು ಜನರೊಡನೆ ಸುಸ್ಥಿರವಾದ ಸಂಬಂಧಗಳನ್ನು , ಪಂಚಾಯತ್‌ನಿಂದ ಸಂಸತ್ತಿನವರೆಗೆ, ಬೆಳೆಸಿಕೊಳ್ಳಬೇಕು. ಆಗ ಮಾತ್ರವೇ ನಾವು ನಾಜಿ ಯುಗದ ನಂತರ ಜರ್ಮನಿಯಲ್ಲಿ ಮಾಡಿದಂತೆ, ಭೂತವನ್ನು ತೊಡೆದುಹಾಕುವ ಮಾದರಿಯನ್ನು ಕಂಡುಕೊಳ್ಳಬಹುದು. ಈ ಪ್ರಯತ್ನ ಯಶಸ್ವಿಯಾಗಬೇಕಾದರೆ, ಎಲ್ಲ ಪ್ರಗತಿಪರರೂ ಸಹಕಾರ ನೀಡಿ ಸಾಧಿಸಿ, ನಾವು ಎದುರುಗಾಣುತ್ತಿರುವ ಸೈದ್ಧಾಂತಿಕ ಸಂಘರ್ಷವನ್ನು ಉಚ್ಛ್ರಾಯ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕು. ಹಾಗಾದಾಗ ಮಾತ್ರವೇ ನಾವು ತಿರೋಗಾಮಿ ಶಕ್ತಿಗಳನ್ನು ಹಿಮ್ಮೆಟ್ಟಿಸಿ, ಭಾರತದ ಆತ್ಮವನ್ನು ಮರಳಿ ಪಡೆಯಲು ಸಾಧ್ಯ .

 

(ಪುಷ್ಪರಾಜ್‌ ದೇಶಪಾಂಡೆ ʼ ಸಮೃದ್ಧ ಭಾರತ ಫೌಂಡೇಷನ್‌ ʼ ಸಂಸ್ಥೆಯ ನಿರ್ದೇಶಕರು. ಭಾರತದ ಸಾಂವಿಧಾನಿಕ ಭರವಸೆಗಳನ್ನು ಸಾಕಾರಗೊಳಿಸಲು ಶ್ರಮಿಸುತ್ತಿರುವ ಬಹುಪಕ್ಷಗಳ ವೇದಿಕೆ ಇದಾಗಿದೆ. ಭಾರತದ ಮರುಚಿಂತನೆ ಎಂಬ ಸರಣಿ ಲೇಖನಗಳ ಲೇಖಕರೂ ಹೌದು).

 

ಪುಷ್ಪರಾಜ್‌ ದೇಶಪಾಂಡೆ–

reengineering india’s consciousness

 ದ ಹಿಂದೂ ಆಗಸ್ಟ್‌ 2 2022