60ರ ಹಿನ್ನೋಟ‌ ಡಾ.ಎಚ್.ವಿ.ರಂಗಸ್ವಾಮಿ “ ಈ ಮೇಸ್ಟ್ರು ಬತ್ತಾನೆ ನೋಡು ಹಂದಿ ಕಾಯಾಕೆ !?”    

60ರ ಹಿನ್ನೋಟ‌ ಡಾ.ಎಚ್.ವಿ.ರಂಗಸ್ವಾಮಿ “ ಈ ಮೇಸ್ಟ್ರು ಬತ್ತಾನೆ ನೋಡು ಹಂದಿ ಕಾಯಾಕೆ !?”    

60ರ ಹಿನ್ನೋಟ‌  ಡಾ.ಎಚ್.ವಿ.ರಂಗಸ್ವಾಮಿ  “ ಈ ಮೇಸ್ಟ್ರು ಬತ್ತಾನೆ ನೋಡು ಹಂದಿ ಕಾಯಾಕೆ !?”    

   ಡಾ. ಶಿವಕುಮಾರ ಸ್ವಾಮೀಜಿ “ ಈ ಭರತ ಖಂಡದಲ್ಲಿ” ಎಂಬ ಮಾತುಗಳಿಂದಲೇ ಬಹುಪಾಲು ಅವರ ಭಾಷಣವನ್ನು ಆರಂಭಿಸುತ್ತಿದ್ದರು. ಇಂಡಿಯಾ ಅಥವಾ ಭಾರತ ತಾಂತ್ರಿಕವಾಗಿ ಒಂದು ದೇಶ ಆಗಿದ್ದರೂ ಇಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬನೊಳಗೂ ಪ್ರತ್ಯೇಕ ವಿಶ್ವ ಇದ್ದೇ ಇರುತ್ತದೆ. ಜಾತಿ ಪದ್ಧತಿಯೇ ಕಾರಣವಾಗಿ ಈ ನೆಲದ ಪ್ರತಿ ಜೀವಿಯೂ ತನ್ನದೇ ಆದ ವಿಶಿಷ್ಟ ಅನುಭವಗಳ ಕುಲುಮೆಯೊಳಗೆ ಘನದ್ರವಾನಿಲ ಸ್ವರೂಪಿಯಾಗಿ ರೂಪುಗೊಂಡಿರುತ್ತಾನೆ. ಸರಕಾರಿ ವೈದ್ಯನಾಗಿ, ಆರೋಗ್ಯ ಇಲಾಖೆಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ, ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಡಾ. ಹೆಚ್.ವಿ.ರಂಗಸ್ವಾಮಿಯವರು ತಮ್ಮ ನೆನಪಿನ ಎಂದಿಗೂ ‘ಬತ್ತ’ದ ಕಣಜದ  ಕದವನ್ನು ಇಲ್ಲಿ ತೆರೆದಿದ್ದಾರೆ.

 

 

60 ಹಿನ್ನೋಟ

ಡಾ.ಎಚ್.ವಿ.ರಂಗಸ್ವಾಮಿ

“ ಈ ಮೇಸ್ಟ್ರು ಬತ್ತಾನೆ ನೋಡು ಹಂದಿ ಕಾಯಾಕೆ !?”           

ದೇಶದಲ್ಲಿ 75 ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಜರುಗುತ್ತಿದೆ.   ಆಗಸ್ಟ್‌ಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುವುದಕ್ಕೂ, ನನಗೆ 60 ವರ್ಷ ತುಂಬುವುದಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ! ಆಗಸ್ಟ್‌- ದಾಖಲೆ ಪ್ರಕಾರ ನಾನು ಹುಟ್ಟಿದ ದಿನ; ಅದನ್ನು ನಾನು ಹುಟ್ಟು ಹಬ್ಬದ ದಿನ ಅಂತ ಹೇಳಲು ನನಗಿಷ್ಟವಿಲ್ಲ:  ನನ್ನ ಶಾಲಾ ಮಾಸ್ತರು ಈ ದಿನವನ್ನು ಶಾಲೆಗೆ ಸೇರುವ ಸಂದರ್ಭದಲ್ಲಿ ದಾಖಲಿಸುವ ಮೂಲಕ ನಂಟು ಕಲ್ಪಿಸಿದ್ದಾರೆ.  ನನ್ನಂತೆಯೆ ಬಹಳ ಜನರಿಗೆ ಆ ಕಾಲದಲ್ಲಿ ಪ್ರೈಮರಿ ಶಾಲಾ ಮಾಸ್ತರು ನೀಡಿದ ಜನ್ಮ ದಿನವೇ ಗತಿ ಬಿಡಿ.

          ಶಾಲೆಯಲ್ಲಿ ನನ್ನೊಂದಿಗೇ ಕಲಿತ ಓರಗೆಯವರು, ಅಂದರೆ ʼಕ್ಲಾಸ್‌ಮೇಟ್ಸ್ʼ ಮತ್ತು ಸೇವೆಯಲ್ಲಿನ ನನ್ನ ಸಹೋದ್ಯೋಗಿಗಳು ನನಗಿಂತ 2 ರಿಂದ 3 ವರ್ಷದಷ್ಟು ಕಿರಿಯರು.  ನನಗೆ ನೆನಪಿರುವಂತೆ ಪುಂಡಾಟದಲ್ಲಿ ಆಗಲೇ ಸ್ವಲ್ಪ ಹೆಸರುವಾಸಿಯಾಗಿದ್ದ ನನ್ನ ತಮ್ಮ ಲಕ್ಷ್ಮಣನನ್ನು ಅಪ್ಪ ಮೊದಲು ಶಾಲೆಗೆ ಸೇರಿಸಿದ್ದು ನೆನಪು.  ಆದರೆ ನನ್ನ ಓರಗೆಯ ಶಾಲೆಗೆ ಹೋಗುವ ಹುಡುಗರು ಶಾಲೆ ಬಿಟ್ಟಾದ ಮೇಲೆ ನನ್ನೊಂದಿಗೆ ಆಟವಾಡಲು ಬರುತ್ತಿದ್ದರು.  ಸ್ಕೂಲಿಗೆ ಹೋದರೆ ಅಲ್ಲಿ ಇನ್ನೂ ಆಟವಾಡಲು ಜೊತೆಗಾರರಿರುತ್ತಾರಲ್ಲ ಅಂತ ನನ್ನ ತಮ್ಮನ ಸ್ಲೇಟ್‌ಕಿತ್ತುಕೊಂಡು ಗೆಳೆಯರ ಮಧ್ಯೆ ಹೋಗಿ ಕೂತಿದ್ದೆ.  ನಾನು ಸ್ಲೇಟು ಕಿತ್ತುಕೊಂಡದ್ದಕ್ಕೆ ಅವಮಾನಿತನಾದ ನನ್ನ ತಮ್ಮ, ಎರಡೂ ಕಣ್ಣುಗಳಲ್ಲಿ ಧಾರಾಕಾರವಾಗಿ ಕಣ್ಣೀರಿಡುತ್ತಾ ಭೂಮಿಯೇ ಬಾಯ್ಬಿಟ್ಟಂತೆ ಬಿಕ್ಕಿ ಬಿಕ್ಕಿ ಅಳುತ್ತಾ ಅಪ್ಪನ ಮುಂದೆ ಪ್ರತ್ಯಕ್ಷವಾಗಿದ್ದ!  ಕಲಿಯುಗದ ದೂರ್ವಾಸ ಮುನಿಯಂತಿದ್ದ ನನ್ನ ಅಪ್ಪನಿಗೆ ಒಮ್ಮೆಗೇ ಪಿತ್ತ ನೆತ್ತಿಗೇರಿತ್ತು.  ನಮ್ಮ ಗುಡಿಸಿಲಿಗೆ ಅನತಿ ದೂರದಲ್ಲಿದ್ದ ಈಚಲಮರದ ಬರಲನ್ನು ಸವರಿಕೊಂಡು, ಮುದ್ದಿನ ಮಗ ಲಕ್ಮಣನನ್ನೂ ಎಳಕಂಡು ಒಂದೇ ಬಾಗಿಲಿದ್ದ -ತಪ್ಪಿಸಿಕೊಳ್ಳಲೂ ಆಗದಂತೆ-ಏಕೋಪಾಧ್ಯಾಯ ಶಾಲೆ ಬಾಗಿಲಲ್ಲಿ ಅಪ್ಪ ಕೆಂಗಣ್ಣು ಬಿಟ್ಟುಕೊಂಡು ಪ್ರತ್ಯಕ್ಷನಾಗಬೇಕೆ? 

“ಮೇಸ್ಟ್ರೇ ಕಳುಸ್ರೀ ಆ ಬಡ್ಡಿಮಗನ್ನ ಹೊರಕ್ಕೆ,” ಅನ್ನುವ ಕರ್ಕಶ ಧ್ವನಿಗೆ ನಮ್ಮೂರಿನ ಶಿಷ್ಟ ಭಾಷೆಯನ್ನೇ ಇಲ್ಲಿಯವರೆಗೆ ಕೇಳಿದ್ದ ಮುತ್ತಾಣೆಗೆರೆ ಮಾಸ್ಟರು ನನಗಿಂತ ಜಾಸ್ತೀನೆ ಗಾಬರಿಯಾಗಿದ್ದು ನಿಚ್ಛಳವಾಗಿ ಮುಖದಲ್ಲಿ ಗೋಚರಿಸುತ್ತಿತ್ತು.  ಅಲ್ಲಿಯವರೆಗೆ ಮಾಸ್ತರಿಗೆ ಒಬ್ಬ ಆಗುಂತಕ ಶಾಲೆ ಒಳಗೆ ಅತಿಕ್ರಮ ಪ್ರವೇಶ ಮಾಡಿರುವ ವಿಷಯವೇ ತಿಳಿದಿರಲಿಲ್ಲ.  ಶಾಲೆಗೆ ಬಲವಂತಕ್ಕಾದರೂ ಬರುತ್ತಿದ್ದ ಲಕ್ಷ್ಮಣ ಬೇರೆ ಅಪ್ಪನ ಪಕ್ಕದಲ್ಲೇ ಗಂಗಾವತರಣದೊಂದಿಗೆ ನಿಂತಿರುವಾಗ……...! ಅಪ್ಪ ಕುತ್ತಿಗೆಯ ಹಿಂಭಾಗದಿಂದ ಅಂಗಿಯ ಒಳ ಭಾಗಕ್ಕೆ ಕಾಣಬಾರದೆಂದು ಬಚ್ಚಿಟ್ಟುಕೊಂಡು ನನಗೆ ಹೊಡೆಯಲೆಂದೇ ಸಿಕ್ಕಿಸಿಕೊಂಡಿದ್ದ ಆ ಸವರಿದ ಈಚಲ ಬರಲಿನ ತುದಿ ಭಾಗ ಕುತ್ತಿಗೆ ಪಕ್ಕದಿಂದ ಇಣುಕುತ್ತಿತ್ತು.  ಏಕ್‌ದಂ ಸೃಷ್ಟಿಯಾದ ಈ ದೃಶ್ಯದಿಂದ ಅಪ್ರತಿಭರಾದ ಮೇಸ್ಟ್ರನ್ನ ಕಂಡ ನನ್ನ ಗೆಳೆಯರು “ಸಾ ಇವನೇ ಸಾ, ರಂಗ್ಸ್ವಾಮಿ ಲಕ್ಷ್ಮಣನ ಅಣ್ಣ, ಅವನ ಸ್ಲೇಟ್‌ಕಿತ್ಗಂಡು ಸ್ಕೂಲಿಗೆ ಬಂದಿದಾನೆ.  ಇವುನ್ನೂ ಸ್ಕೂಲಿಗೆ ಸೇರಿಸ್ಕಳ್ಳಿ ಸಾ.” ಅನ್ನಬೇಕೆ?!   ಈ ಶಿಷ್ಯೋತ್ತಮರ ಸಪೋರ್ಟಿನಿಂದ ಸ್ವಲ್ಪ ಧೈರ್ಯ ತಂದುಕೊಂಡ ಮೇಸ್ಟರು “ಅಲ್ಲಾ ಕಣಯ್ಯ ಸ್ಕೂಲಿಗೆ ತಪ್ಪಿಸ್ಗಂಡು ಹುಡುಗ್ರು ಓಡೋಗ್ತವೆ. ಅವನ್ನ ದಿನಾ ಹುಡುಗ್ರ ಕಳಿಸಿ ಎಲ್ಲಿ ಬಚ್ಚಿಕ್ಕಂಡಿದಾರೊ ಅಲ್ಲಿಂದ ಎಳಕಂಬರೋದೆ ನಮಗೆ ಸಾಕಾಗೋಗುತ್ತೆ.  ನಿನ್ನ ಮಗ ಅವನೇ ಸ್ಕೂಲಿಗೆ ಬಂದು ನಂಗೂ ಗೊತ್ತಿಲ್ದಂಗೆ ಒಳಗೆ ಕುಂತಿದಾನೆ. ಅವ್ನಿಗೆ ಅದೆಷ್ಟು ಓದಾಕೆ ಖಾಯಸ್  ಇರಬೇಡ!  ಹೋಗಯ್ಯಾ ಸುಮ್ಮನೆ.  ಆ ಲಕ್ಷ್ಮಣನ್ನೂ ಒಳಿಕ್ಕೆ ಕಳ್ಸು, ಇನ್ನಮೇಲೆ ಇಬ್ಬರೂ ಒಟ್ಟಿಗೆ ಸ್ಕೂಲಿಗೆ ಬರಲಿ.” ಅಂತಿದ್ದಂಗೆ “ಹೂ ಸಾ ಇಬ್ಬರೂ ಬರ್ಲಿ,” ಅಂತ ಈ ನಾಟಕೀಯ ಬೆಳವಣಿಗೆಯನ್ನ ತದೇಕ ಚಿತ್ತದಿಂದ ವೀಕ್ಷಿಸುತ್ತಿದ್ದ  ಹುಡುಗರು ಒಕ್ಕೊರಲಿನಿಂದ ಚೀರಲಾಗಿ, ಏಕಾಂಗಿಯಾದ ಅಪ್ಪ “ ಬಾ ಸಾಯಂಕಾಲಕ್ಕೆ ಮನಿಗೆ,  …ಈ ಮೇಸ್ಟ್ರು ಬತ್ತಾನೆ ನೋಡು ಹಂದಿ ಕಾಯಾಕೆ” ಅನ್ನುತ್ತಾ  ನನ್ನ ಕಡೆ ಕೆಕ್ಕರಿಸಿ ನೋಡುತ್ತಾ ಬಿರುಸಿನಿಂದ ಕೈ ಬೀಸಿಕೊಂಡು ಮರೆಯಾಗಲಾಗಿ, ಬೆದರಿ ಕೂತಿದ್ದ ನನಗೆ ಬದುಕಿದೆಯಾ ಬಡಜೀವ ಅನ್ನಿಸಿ ನಿರಾಳವಾಯ್ತು. 

          1 ರಿಂ 4 ನೇ ಕ್ಲಾಸಿನವರೆಗಿನ ಈ ಏಕೋಪಾಧ್ಯಾಯ ಶಾಲೆಯಲ್ಲಿ ಶಿವಲಿಂಗಪ್ಪ, ಮಹಲಿಂಗಪ್ಪ ಮತ್ತು ಮೂರ್ತಪ್ಪ ಅನ್ನುವ ಮೂವರು ಮಾಸ್ತರು ನಮಗೆಲ್ಲಾ ಪಾಠ ಮಾಡಿದ್ದು ನೆನಪು.   ಈ ಮೂವರಲ್ಲಿ ನನ್ನನ್ನು ತುಂಬಾ ಪ್ರಭಾವಿಸಿದವರು ಮಹಲಿಂಗಪ್ಪ ಮಾಸ್ಟರು. ಶುಭ್ರವಾದ ಬಿಳಿ ಪಂಚೆ, ಬಿಳಿ ಅಂಗಿ ಅವರ ನಿತ್ಯದ ಉಡುಗೆ.  ಅವರು ಸೈಕಲ್‌ಮೇಲೆ ಶಾಲೆಯ ಎದುರು ಕಾಣುತ್ತಿದ್ದಂತೆ, ಆಟದಲ್ಲಿ ಮಗ್ನರಾಗಿರುತ್ತಿದ್ದ ನಾವೆಲ್ಲಾ ಪೂರ್ವ ನಿರ್ಧಾರಿತ ಜಾಗಗಳಲ್ಲಿ ನಿಂತುಕೊಂಡು “ಸ್ವಾಮಿ ದೇವನೆ ಲೋಕಪಾಲನೆ ತೇನ ನಮೋಸ್ತು, ನಮೋಸ್ತುತೆ………,” ಆದ ಮೇಲೆ ಸ್ಕೂಲಿನ ಒಳಗೆ ಗಪ್-ಛುಪ್!

                              ರಾಜಪ್ಪ, ಸಣ್ಣರಂಗಪ್ಪ, ಶಿವಕುಮಾರ (ಮೇಸ್ಟ್ರ ಕುಮಾರ) ಮತ್ತು ಸುಲೋಚನಾರೆಲ್ಲಾ ನನ್ನ ಕ್ಲಾಸ್‌ಮೇಟ್ಸ್. ಆದರೆ ನನಗೆ ಈಗಲೂ ಆತ್ಮೀಯರಾಗಿರುವವರೆಲ್ಲಾ ಓಂಕಾರಮೂರ್ತಿ, ಮಹೇಶ ನನಗೆ ಒಂದು ವರ್ಷ ಹಿರಿಯರು.  ಶಿವಾನಂದ ಕಿರಿಯವನು.

                 ತೇರು ಬೀದಿಯಲ್ಲಿರುವ ಪ್ರೈಮರಿ ಶಾಲೆ ಈ 60 ವರ್ಷಗಳ ನಂತರವೂ ಹಾಗೇ ಇದೆ.  ಅಲ್ಪ-ಸ್ವಲ್ಪ ಮಾತ್ರ ನವೀಕರಣಗೊಂಡಿದೆ.  ಈ ಶಾಲೆಗೆ ಹೊಂದಿಕೊಂಡಂತೆ ವಿಶಾಲ ಆಟದ ಮೈದಾನವಿದೆ.  ಹಿಂದೆ ಮತ್ತು ಮುಂದೆ ಸ್ವಲ್ಪವೇ ದೂರದಲ್ಲಿ ಒಂದೊಂದು ಸುಂದರ ಮಂಟಪಗಳಿವೆ.  ಮುಂದಿನ ಮಂಟಪಕ್ಕೆ ಹೊಂದಿಕೊಂಡಂತೆ ತೇರು ಮತ್ತು ವಿಶಾಲವಾದ ಶ್ರೀ ಲಕ್ಮೀ ರಂಗನಾಥಸ್ವಾಮಿ ದೇವಾಲಯವಿದೆ.  ಈ ರಂಗನಾಥಸ್ವಾಮಿಯ ಪರಮ ಭಕ್ತನಾದ ನನ್ನ ಅಪ್ಪ ನನಗೆ ರಂಗಸ್ವಾಮಿ ಅಂತ ಹೆಸರಿಡಲು ಇದೇ ಕಾರಣ. ಈ ಶಾಲಾ ಮೈದಾನ ಮತ್ತು ಶಾಲೆಯೂ ಕೂಡ ದೇವಾಲಯದ ಸುಪರ್ದಿಗೆ ಸಂಬಂಧಿಸಿದ್ದಾಗಿವೆ. ಈ ಶಾಲೆ ನನ್ನ ಬಾಲ್ಯದ ನೆನಪುಗಳನ್ನು ಕಟ್ಟಿಕೊಟ್ಟಿದೆ.  ಅನೇಕ ಬಾಲ್ಯದ ಗೆಳೆಯರನ್ನು ಕೊಟ್ಟಿದೆ.         

                      

                           ನಮ್ಮೂರು ದೇವರ ಹೊಸಹಳ್ಳಿ.  ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಆಗಿನ ಶಿಂಗಟಿಗೆರೆ ಹೋಬಳಿ, ಈಗಿನ ಪಂಚನಹಳ್ಳಿ ಹೋಬಳಿ.  ಸುಮಾರು 80 ಮನೆಗಳ ಚಿಕ್ಕದಾದ ಚೊಕ್ಕದಾದ ಊರು.  ಪಕ್ಕದ ಆಣೇಗೆರೆ ಕೇವಲ ಮುಕ್ಕಾಲು ಮೈಲಿಯಷ್ಟು ದೂರದಲ್ಲಿದ್ದರೆ, ಇನ್ನೊಂದು ಭಾಗದಲ್ಲಿ ಗರುಗದಹಳ್ಳಿ ಒಂದೂವರೆ ಮೈಲು ದೂರದ್ದು.   ಈ ಎರಡೂ ಊರಿನವರು ನಮ್ಮನ್ನು ಕರೆಯುವುದು ಕೂಗೊಸಳ್ಳಿಯವರು ಅಂತ.  ಕೂಗಳತೆ ದೂರದಲ್ಲಿರುವ ಕಾರಣಕ್ಕೋ ಏನೋ!  ಈ ಪುರಾತನ ದೇವಾಲಯ ಚೋಳರ ಕಾಲದ್ದು ಅನ್ನುವ ಕಾರಣಕ್ಕೆ ಸುತ್ತಲ 7 ಹಳ್ಳಿಗಳಲ್ಲೇ ನಮ್ಮೂರು ಪ್ರಖ್ಯಾತಿಯಾಗಿದೆ.  ಶಿಥಿಲವಾಗಿದ್ದ ಕೋಟೆ ಮತ್ತು ಬುರ್ಜುಗಳನ್ನು ಕೆಡವಿ ಸಿಮೆಂಟ್‌ಗೋಡೆ ಕಟ್ಟಿರಲಾಗಿ ಹೊರಗೆ ಹಳೆಯ ವಾಸ್ತು ವೈಭವ ಮರೆಯಾಗಿದೆ.  ಆದರೆ ಕೋಟೆಯ ಒಳ ಭಾಗದ ಸೌಂದರ್ಯ ಮಾತ್ರ ಹಾಗೇ ಇದೆ. 

                       ನನಗೆ ನೆನಪಿರುವಂತೆ ಎರಡನೆ ತರಗತಿವರೆಗೆ ನಾನು ಅಕ್ಷರ, ಕಾಗುಣಿತ ಮತ್ತು ಮಗ್ಗಿ ಉರು ಹೊಡೆದಿದ್ದೆ ನಾದರೂ ಕೂಡಿಸಿ ಓದಲು ಬರುತ್ತಿರಲಿಲ್ಲ.   ಕೊಟ್ರಪ್ಪ ಅನ್ನುವ ನನ್ನ ಸಹಪಾಠಿಯೊಬ್ಬ ಬೀದಿಗೆಲ್ಲಾ ಕೇಳುವಂತೆ ತನ್ನ ವಿದ್ವತ್ತನ್ನು ಪ್ರದರ್ಶಿಸಲು ಜೋರಾಗಿ ಹೇಳಿಕೊಂಡು ಉರು ಹೊಡೆಯುತ್ತಿದ್ದದ್ದು ನಮಗೆಲ್ಲಾ ಸರಿ ಕಾಣುತ್ತಿರಲಿಲ್ಲ.  ಅವನ ನಿರರ್ಗಳ ಓದಿನ ಚೀರಾಟ ಕೇಳಿಸಿಕೊಂಡ ನಮ್ಮೆಲ್ಲರ ಅಪ್ಪ-ಅಮ್ಮಂದಿರು ನಮಗೆ ಆಟವಾಡುವುದಕ್ಕೂ ಕಡಿವಾಣ ಹಾಕುತಿದ್ದುದಲ್ಲದೆ, ಉಣ್ಣುವಾಗ, ತಿನ್ನುವಾಗೆಲ್ಲಾ ನಾವೆಲ್ಲಾ ದಂಡ ಪಿಂಡಗಳು ಅಂತ ಮೂದಲಿಸುತ್ತಿದ್ದರು.  ಕೊಟ್ರಪ್ಪನ ಓದಿನ ವರಸೆ ಬಗ್ಗೆ ನಮಗೂ ಮೆಚ್ಚುಗೆ, ಆಶ್ಚರ್ಯವಿತ್ತಾದರೂ ಅವನ ಪಾಂಡಿತ್ಯದ ಕಾರಣಕ್ಕೆ ನಮಗಾದ ನಷ್ಟ ಅಷ್ಟಿಷ್ಟಲ್ಲ!  ಆಟ ತುಂಟಾಟಗಳನ್ನೆಲ್ಲಾ ನಾವು ಸ್ವಲ್ಪ ಅಂಜಿಕೆಯಿಂದಲೆ ಮಾಡಬೇಕಾಗಿತ್ತು.  ನಾವು ಸಾಯಂಕಾಲ ಗೋಲಿ, ಚಿನ್ನಿದಾಂಡಿನಲ್ಲಿ ಮಗ್ನರಾಗಿದ್ದರೆ ಈ ಕೂಚುಭಟ್ಟ ಅದೇ ಟೇಮಿಗೆ ಸರಿಯಾಗಿ ಪ್ರವಚನ ಶುರು ಮಾಡಿಬಿಡುತ್ತಿದ್ದ.  ಒಂಥರಾ ಗಾಂಧಿ, ನೋಡೋದಕ್ಕೂ ಸ್ವಲ್ಪ ಹಂಗೇ ಇದ್ದ.

               ಒಂದು ದಿನ ಸಂಜೆ ಸೇಂದಿ ಮತ್ತಿನಲ್ಲಿ ಕೊಟ್ರನ ಪ್ರವಚನ ಕೇಳಿಸಿಕೊಂಡು ಬಂದ ಅಪ್ಪ “ಆ ಪುಸ್ತಕ ತಗಂಡು ಬಾರ್ಲಾ ಇಲ್ಲಿʼ” ಅನ್ನಬೇಕೆ?! ಈ ಹಠಾತ್‌ ಸುಗ್ರೀವಾಜ್ಞೆಯಿಂದ ಅಪ್ರತಿಭನಾದ ನಾನು ಅಪ್ಪನ ಮುಂದೆ ನಿಂತೆ.  “ಓದ್ಲಾ ಪಾಠಾನ” ಅಂದ ಮಾತ್ರಕ್ಕೆ ನನಗೆ ಭೂಮಿ ಬಾಯ್ಬಿಟ್ಟಂತಾಗಿತ್ತು.  ತಡವರಿಸಿಕಂಡು ನಾಲ್ಕು ಸಾಲು ಓದುವಷ್ಟರಲ್ಲಿ ನಿದಾನಕ್ಕೆ ಅಪ್ಪನಿಗೆ ಕಣ್ಣು ಸೇಂದಿ ಮತ್ತಿನಲ್ಲಿ ನಿದ್ದೆಗೆ ಜಾರಲಾರಂಭಿಸಿದವು.  ಬದುಕಿದೆಯಾ ಬಡಜೀವ ಅಂತ ಮಾರನೆ ದಿನ ಅಪ್ಪ ಬರುವುದಕ್ಕೂ ಮೊದಲು ಕೊಟ್ರನ ರೂಮಿಗೆ ಹೋದೆ.  ʼಆಟ ಆಡಾಕೆ ಬತ್ತೀಯೋ ಇಲ್ಲಾ ನಂಗೂ ಪಾಠ ಹೇಳ್ಕೊಡ್ತೀಯೊ?ʼ ಅಂತ ತಾಕೀತು ಮಾಡ್ದೆ.  “ಆಟಕ್ಕೆ ಬರಲ್ಲಪ್ಪಾ… ಬಾ ಓದಾನʼ ಅಂತ ಶುರುಮಾಡ್ಕಂಡ.  “ನೀನು ಅದು ಹ್ಯಂಗೆ ಕೂಡ್ಸಿ ಓದ್ತೀಯ?”  ಅಂದಿದ್ದಕ್ಕೆ, ವರ್ಣಮಾಲೆ ತೋರಿಸಿ, “ಕ ಎಲ್ಲೀತೆ?  ಮ ಎಲ್ಲೀತೆ? ಲ ಎಲ್ಲೀತೆ ತೋರಿಸು ಅಂದ.  ಅವನು ಹೇಳಿದಂಗೆ ಮಾಡಿದ್ದಾತು.  ಅವನ್ನ ಒಂದು ಕಡೆ ಬರಿ ಅಂದ.  ನಾನು ಕ ಮ ಲ ಅಂತ ಬರೆದು, ಬಿಡಿ ಬಿಡಿಯಾಗಿ ಓದಿದೆ.” ಉಹೂ, ಅವನ್ನ ಕೂಡಿಸಿ ಬರಿ” ಅಂದ. ನಾನು ಕೂಡಿಸಿ ಬರೆದು ಮೊದಲಿನಂಗೇ ಬಿಡಿ ಬಿಡಿಯಾಗಿ ಓದಿದೆ.  “ಆವಾಗ ಬಿಡಿಯಾಗಿ ಬರದಿದ್ದೆ ಬಿಡಿ ಬಿಡಿಯಾಗಿ ಓದ್ದೆ, ಈಗ ಕೂಡಿಸಿ ಬರದಿದೀಯ, ಕೂಡ್ಸಿ ಓದು “ಅಂದ.  ಈ ಮೂರು ಅಕ್ಷರಗಳಲ್ಲಿ ಒಂದು ಹೆಸರು ಇರೋದು ಗೋಚರವಾಯ್ತು.  ಮೇಸ್ಟ್ರು ಹೇಳಿದ್ದು ತಲೆ ಒಕ್ಕಿರಲಿಲ್ಲ, ಕೊಟ್ರ ಹೇಳಿದ್ದು ಕೆಲಸ ಮಾಡಿತ್ತು. 

                 ಮೂರೂ, ನಾಲ್ಕನೆ ತರಗತಿಯಿಂದ ನಾನು ಬುದ್ಧಿವಂತ ಹುಡುಗರ ಪಟ್ಟಿಗೆ ಸೇರ್ಪಡೆಯಾದೆ.  ಮಹಲಿಂಗಪ್ಪ ಮಾಸ್ಟರು ನನ್ನನ್ನ ಮಾನಿಟರ್‌ಮಾಡಿ, ಶುದ್ಧವಾಗಿ ಓದಬೇಕಾದ್ದನ್ನ ನನ್ನಿಂದಲೇ ಓದ್ಸೋರು. 

                 ನಾನು ಮತ್ತು ಓಂಕಾರಮೂರ್ತಿ ಬಾಲ್ಯ ಸ್ನೇಹಿತರು.  ನಾನು ಓದಿನಲ್ಲಿ ಚುರುಕಾಗಿದ್ದರಿಂದ ಓಂಕಾರನ ಅಪ್ಪ ನನ್ನನ್ನು ಅವರ ಮನೆಯಲ್ಲೇ ಓಂಕಾರನ ಜೊತೆಯಲ್ಲೇ ಇರಲು ಅವಕಾಶ ಕಲ್ಪಿಸಿದರು.  ಆಗ ಹೊಸದಾಗಿ ನಮ್ಮೂರಿಗೆ ವಿದ್ಯುತ್‌ಕಂಬ ನೆಟ್ಟು, ತಂತಿ ಎಳೆದು ಮನೆ ಮನೆಗೆ ʼಕರೆಂಟ್‌ʼ ಬಂತು.  ಈ ಮೊದಲು ದೇವಸ್ಥಾನದ ದೀಪದ ಬೆಳಕಿನಲ್ಲಿ ಓದುತ್ತಿದ್ದವನು ಈಗ ಓಂಕಾರನ ಮನೆಯ ವಿದ್ಯುತ್‌ಬೆಳಕಿನಲ್ಲಿ ಓದಲು ಖುಷಿಯಾಗ್ತಿತ್ತು. 

                   ನಾನು ಮತ್ತು ಓಂಕಾರ ಪಠ್ಯಕ್ಕಿಂತ ಪಠ್ಯೇತರ ಕೀಟಲೆಗಳಿಗೂ ಹೆಸರುವಾಸಿಯಾಗಿದ್ದೆವು. ನಾನು ಈ ಹಿಂದೆ ನಮ್ಮೂರ ದೇವಸ್ಥಾನದ ಕೋಟೆಯ ಬಗ್ಗೆ ಪ್ರಸ್ತಾಪಿಸಿದ್ದೆ.  ನಾವು ಈ ಕೋಟೆಯನ್ನು ಪೌಳಿ ಅಂತ ಕರೆಯುತ್ತಿದ್ದೆವು.  ಈ ಪೌಳಿಗೆ ಹೊಂದಿಕೊಂಡಂತೆ ನಾಲ್ಕು ಮೂಲೆಯಲ್ಲಿ ನಾಲ್ಕು ಬುರ್ಜುಗಳಿದ್ದವು.  ಅಲ್ಲದೆ ಈ ಪೌಳಿಯು ಕಲ್ಲುಗಳಿಂದ ಜೋಡಿಸಲ್ಪಟ್ಟಿದ್ದು, ಹೊರ ಮತು ಒಳ ಭಾಗದ ಕಲ್ಲುಗಳ ಮಧ್ಯೆ ಖಾಲಿ ಜಾಗ ಇದ್ದು ದೇವಸ್ಥಾನದ ದ್ವಾರ ಬಾಗಿಲಿನ ಬಲ ಭಾಗದಿಂದ ಎಡ ಭಾಗಕ್ಕೆ ನುಸುಳಿಕೊಂಡು ಹೋಗಬಹುದಿತ್ತು.  ನಮಗೆ ಗೊತ್ತಿರುವಂತೆ ಕೆಲವರು ಸ್ವಲ್ಪ ದೂರ ಹೋಗಿ ಹಿಂತಿರುಗಿದ್ದು ನಮಗೂ ಗೊತ್ತು.  ಆದರೆ ಬಲ ಭಾಗದಿಂದ ಹೊಕ್ಕು ಎಡ ಭಾಗದ ಪೂರ್ತಿ ನುಸುಳುವಿಕೆಯನ್ನು ಪೂರ್ಣಗೊಳಿಸಿದ ಧೀರರು ಮಾತ್ರ ನಾನು ಮತ್ತು ಓಂಕಾರ. ಈ ಗುಹೆಯು ಹೆಬ್ಬೆಕ್ಕುಗಳು, ಕಬಟಗಳು (ಬಾವಲಿಗಳು) ಮತ್ತು ಹಾವುಗಳ ಆವಾಸ ಸ್ಥಾನವಾಗಿತ್ತು.  ಈ ಮನುಷ್ಯ ನಿರ್ಮಿತ ಗುಹೆ ಹೊಕ್ಕ ನಮಗೇ ಇಷ್ಟೊಂದು ಖುಷಿಯಾಗಿರುವಾಗ ಅಥವಾ ಜಂಭ ಬಂದಿರುವುದಾದರೆ, ಆ ಹಿಮಾಲಯ ಮೊದಲು ಹತ್ತಿದ ಆ ಹಿಲೇರಿ, ತೇನಸಿಂಗರಿಗೆ ಏನೇನಾಗಿರಬಹುದು! ಊಹಿಸಿ.

                              (ಮುಂದಿನ ‘ಕಿನ್ನರಿ’ಗೆ )