ನಕಲಿ ದಾಖಲೆ ಸಲ್ಲಿಸಿ ಸೀಬಿ ಅರಣ್ಯದಲ್ಲಿ 736 ಎಕರೆ ಕಬಳಿಕೆ ಯತ್ನ 

ನಕಲಿ ದಾಖಲೆ ಸಲ್ಲಿಸಿ ಸೀಬಿ ಅರಣ್ಯದಲ್ಲಿ  736 ಎಕರೆ ಕಬಳಿಕೆ ಯತ್ನ 
ನಕಲಿ ದಾಖಲೆ ಸಲ್ಲಿಸಿ ಸೀಬಿ ಅರಣ್ಯದಲ್ಲಿ  736 ಎಕರೆ ಕಬಳಿಕೆ ಯತ್ನ 

ಶಿರಾ ತಾಲೂಕಿನ ಸೀಬಿ ಅರಣ್ಯಕ್ಕೆ ಸೇರಿದ 732 ಎಕರೆ ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಡುವಂತೆ ಭೂಗಳ್ಳರ ದೊಡ್ಡ ತಂಡವೊಂದು ನಕಲಿ ದಾಖಲೆಗಳನ್ನು ಸಲ್ಲಿಸಿ ತಾಲೂಕು ಆಡಳಿತಕ್ಕೆ ದುಂಬಾಲು ಬಿದ್ದಿತ್ತು. ನಿವೃತ್ತ ಐಎಎಸ್, ಐಎಫ್‌ಎಸ್ ಅಧಿಕಾರಿಗಳು, ಶಾಸಕರ ಸೋದರರೆಲ್ಲರೂ ಒತ್ತಡ ಹೇರಿದ್ದರು, ಜೊತೆಗೆ ಮುಖ್ಯಮಂತ್ರಿಯವರೇ ಶಿಫಾರಸು ಪತ್ರವನ್ನೂ ಕೊಟ್ಟಿದ್ದರು.  ಆದರೆ ತಹಶೀಲ್ದಾರ್ ಮಮತಾರವರು ವಲಯ ಅರಣ್ಯಾಧಿಕಾರಿ ರಾಧಾ ಅವರಿಂದ ವಾಸ್ತವಾಂಶದ ವರದಿ ಪಡೆದು ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ಇಡೀ ಹಗರಣವನ್ನು ಜನಪರ ರಾಜಕಾರಣಿ ಹಾಗೂ ಹವ್ಯಾಸಿ ಪತ್ರಕರ್ತ ಬುಕ್ಕಾಪಟ್ಣ ಮಂಜುನಾಥ್ ಸಾಮಾಜಿಕ ಜಾಲತಾಣಗಳ ಪೈಕಿ ಅತ್ಯಂತ ಪ್ರಭಾವಿ ಎನಿಸಿರುವ ಫೇಸ್ ಬುಕ್‌ನಲ್ಲಿ ದಾಖಲೆಗಳ ಸಹಿತ ಬಯಲಿಗೆಳೆದಿದ್ದಾರೆ. ಇನ್ನೂ ವಿವರವಾದ ವರದಿ ನಿಮಗಾಗಿ ಇಲ್ಲಿದೆ. 

ಬುಕ್ಕಾ ಪಟ್ಟಣ ಮಂಜುನಾಥ್


ನಕಲಿ ದಾಖಲೆ ಸಲ್ಲಿಸಿ ಸೀಬಿ ಅರಣ್ಯದಲ್ಲಿ

736 ಎಕರೆ ಕಬಳಿಕೆ ಯತ್ನ 


ಸಿಎಂ ಶಿಫಾರಸು ಪತ್ರ ತಂದರೂ ಮಣಿಯಲಿಲ್ಲ ತಹಸೀಲ್ದಾರ್ ಮಮತಾ, ಆರ್‌ಎಫ್‌ಓ ರಾಧಾ
ಶಿರಾ ತಾಲೂಕಿನ ಇತಿಹಾಸದಲ್ಲಿ ಬಹು ದೊಡ್ಡ ಹಗರಣವೊಂದು ನಡೆದು ಹೋಗಿದೆ. ನೂರಾರು ಕೋಟಿ ರೂ ಮೌಲ್ಯದ ಅರಣ್ಯ ನುಂಗಲು ಹೊಂಚು ಹಾಕಿದ್ದವರ ಬುಡಕ್ಕೆ ಬೆಂಕಿ ಬಿದ್ದಿದೆ.ಸುಳ್ಳು ಸರ್ಕಾರಿ ದಾಖಲೆಗಳನ್ನ ಸೃಷ್ಟಿಸಿ ಏಳುನೂರಕ್ಕೂ ಹೆಚ್ಚು ಎಕರೆ ಅರಣ್ಯಪ್ರದೇಶವನ್ನ ನುಂಗಲು ಪ್ರಯತ್ನಿಸಿದ್ದವರ ಹುನ್ನಾರ ಸದ್ಯಕ್ಕೆ ವಿಫಲಗೊಂಡಿದೆ. ಶಿರಾ ತಾಲೂಕು ಕಂಡರಿಯದ ಬಹು ದೊಡ್ಡ ಹಗರಣವೊಂದನ್ನ ಶಿರಾ ತಹಸೀಲ್ದಾರ್ ಮಮತಾ ಹಾಗೂ ಶಿರಾ ವಲಯ ಅರಣ್ಯಧಿಕಾರಿಗಳಾಗಿದ್ದ ರಾಧಾ ಬಯಲಿಗೆ ಎಳೆದಿದ್ದಾರೆ. ಹಣ ಎಂದರೆ ಹೆಣವೂ ಬಾಯಿ ಬಿಡುವ ಇಂಥ ಕಾಲಘಟ್ಟದಲ್ಲಿ ಕೋಟ್ಯಂತರ ರೂ ಆಮಿಷಕ್ಕೆ ಬಲಿಯಾಗದೆ ರೂ. 500 ಕೋಟಿಗೂ ಅಧಿಕ ಅರಣ್ಯ ಭೂಮಿ ಉಳಿಸಿದ ಖ್ಯಾತಿ ಈ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸಂದಿದೆ.


ಏನೀ ಹಗರಣ


ರಾಷ್ಟ್ರೀಯ ಹೆದ್ದಾರಿ -4 (ಬೆಂಗಳೂರಿನಿಂದ ಪುಣೆ ಮಾರ‍್ಗ) ಶಿರಾ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಶೀಬಿ ನರಸಿಂಹ ಸ್ವಾಮಿ ದೇವಸ್ಥಾನದ ಸಮೀಪ ಹಾದು ಹೋಗಿದೆ. ದೇವಸ್ಥಾನದ ಬಳಿಯ ಹೆದ್ದಾರಿಯ ಎರಡೂ ಬದಿ ಸಮೃದ್ಧ ವಾಗಿ ಬೆಳೆದಿರುವ ಅರಣ್ಯ ಕಣ್ಣು ಕುಕ್ಕುವಂತಿದೆ. ಶೀಬಿ ಗ್ರಾಮದ ಸರ್ವೆ ನಂಬರ್ 59, 68,69,70,142, 143, 144, 146, 147 ಮತ್ತು 34 ನೇ ನಂಬರ್ ಗಳಲ್ಲಿನ ನೂರಾರು ಎಕರೆ ವಿಸ್ತೀರ್ಣ ಜಮೀನಿನಲ್ಲಿ ಅರಣ್ಯ ಸೊಂಪಾಗಿ ಬೆಳೆದಿದೆ. ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿನ ಜಮೀನುಗಳ ಸದ್ಯದ ಮುಕ್ತ ಮಾರುಕಟ್ಟೆ ಬೆಲೆ ಎಕರೆವೊಂದಕ್ಕೆ 70 ರಿಂದ 80 ಲಕ್ಷ ರೂ...!! ತುಮಕೂರು -ಶಿರಾ ಮಧ್ಯೆ ತಲೆ ಎತ್ತುತ್ತಿರುವ ಚೆನ್ನೈ-ಪುಣೆ  ಕಾರಿಡಾರ್, ದಾವಣಗೆರೆ - ತುಮಕೂರು ರೈಲ್ವೆ ಮಾರ್ಗ, ದೊಡ್ಡಾಲದ ಮರದ ಬಳಿ ಹೊಸ ವಿಮಾನ ನಿಲ್ದಾಣ ಸ್ಥಾಪನೆ ಘೋಷಣೆ, ಸನಿಹದಲ್ಲೇ ಇರುವ ವಸಂತಾನರಸಾಪುರ ಕೈಗಾರಿಕಾ ಪ್ರದೇಶ,,,, ಇವೆಲ್ಲವೂ ಇಲ್ಲಿನ ಭೂಮಿಗೆ  ಚಿನ್ನಕ್ಕಿಂತಾ ಹೆಚ್ಚಿನ ಬೆಲೆ ತಂದು ಕೊಟ್ಟಿವೆ. ಮುಂದಿನ ಹತ್ತು ಇಪ್ಪತ್ತು ವರ್ಷಗಳಲ್ಲಿ ಚಿನ್ನದ ಬೆಲೆಯನ್ನೂ ಮೀರಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.. ಈ ಕಾರಣದಿಂದಾಗಿಯೇ ಭೂ ಗಳ್ಳರ ಕಣ್ಣು ಮೇಲ್ಕಂಡ ಸರ್ವೆ ನಂಬರ್ ಗಳ ಜಮೀನಿನ ಮೇಲೆ ಬಿತ್ತು.


ಈಗಿರುವ ಕಾನೂನು ಅಂಶಗಳಲ್ಲಿ ಅರಣ್ಯ ಭೂಮಿ ಕಬಳಿಸುವುದು ಸುಲಭದ ಮಾತಲ್ಲ ಅನ್ನುವ ಅಂಶ ಸಂಚಿನ ಸೂತ್ರದಾರಿಗಳಿಗೆ ತಿಳಿಯದ ವಿಷಯವೇನಲ್ಲ.. ಹಾಗಾಗಿಯೇ ಅವರು ರೈತರ ಹೆಸರಲ್ಲಿ ಜಮೀನು ಕಬಳಿಕೆಗೆ ದಾಖಲೆಗಳನ್ನ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಿದರು. ಇದೇ ವರ್ಷದ ಜನವರಿ 10 ನೇ ತಾರೀಕು (10-1-2022) ಶಿರಾ ನಗರದ 10-15 ಮಂದಿ, ಕಾಳಾಪುರ, ಕಳ್ಳಂಬೆಳ್ಳ,, ಶೀಬಿ ಅಗ್ರಹಾರ, ಹನುಮಂತ ನಗರ ವಾಸಿಗಳೆಂದು ಹೇಳಿಕೊಂಡು  ಶಿರಾ ತಹಸೀಲ್ದಾರ್ ಕಚೇರಿಗೆ ಪವತಿ ವಾರಸು ಮೇರೆಗೆ ಖಾತೆ ಬದಲಾವಣೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸುತ್ತಾರೆ. ಇವರ ಅರ್ಜಿಗಳಿಗೆ ತಹಸೀಲ್ದಾರ್ ಪುರಸ್ಕರಿಸದೇ ಹೋದಾಗ, ಮುಖ್ಯಮಂತ್ರಿಯವರಿಂದಲೇ ತುಮಕೂರು ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ‍್ಯದರ್ಶಿಯವರಿಗೆ ಶಿಫಾರಸು ಮಾಡಿಸುತ್ತಾರೆ . ಮೇಲ್ಕಂಡ ಸದರಿ ಅರ್ಜಿದಾರರಿಗೆ ಖಾತೆ ಮಾಡಿಕೊಡುವಂತೆ ಮೀನುಗಾರಿಕಾ ಹಾಗೂ ಬಂದರು ಸಚಿವ ಎಸ್.ಅಂಗಾರ ಅವರ ಮಿನಿಟ್ ಅನ್ನು ಉಲ್ಲೇಖಿಸಿ ಮಾನ್ಯ ಮುಖ್ಯಮಂತ್ರಿಯವರಿಂದ ನಿರ್ದೇಶಿತನಾಗಿದ್ದೇನೆಂದು ಸಿಎಂ ಅವರ ಪ್ರಧಾನ ಕಾರ‍್ಯದರ್ಶಿ ಐಎಎಸ್ ಅಧಿಕಾರಿ ಎನ್.ಮಂಜುನಾಥ ಪ್ರಸಾದ್ ಅವರ ದಿನಾಂಕ 9.03.2022ರ ಪತ್ರ ಬರೆಯುತ್ತಾರೆ. 


ಪವತಿ ವಾರಿಸ್ ಖಾತೆ ಮಾಡಿಕೊಡುವಂತೆ ಅರ್ಜಿಯಲ್ಲಿ ಕೋರಲಾದ  ಜಮೀನುಗಳು ಶೀಬಿ ಹಾಗೂ ಶೀಬಿ ಅಗ್ರಹಾರ ಗ್ರಾಮಕ್ಕೆ ಸಂಬಂಧಿಸಿದ್ದು, ನಮ್ಮ ಪೂರ್ವಿಕರು 1948 -1954 ರ ಮಧ್ಯೆ ಸರ್ಕಾರಿ ಹರಾಜಿನಲ್ಲಿ ಈ ಜಮೀನುಗಳನ್ನು  ಕೊಂಡಿದ್ದರು. ಆದ್ದರಿಂದ ಆ ಜಮೀನುಗಳನ್ನ ಪೌತಿ ಖಾತೆ ಮಾಡಿ ಕೊಡಬೇಕೆಂಬುದು ಅವರ ಬೇಡಿಕೆಯಾಗಿತ್ತು.


ವಿಚಿತ್ರ ಏನೆಂದರೆ, ಅವರು ಕೊಟ್ಟಿದ್ದ ಸರ್ವೆ ನಂಬರ್‌ಗಳು ಶೀಬಿ ಅರಣ್ಯ ಪ್ರದೇಶಕ್ಕೆ ಸೇರಿದ್ದು ಅರಣ್ಯ ಇಲಾಖೆಯ ವಶದಲ್ಲಿ ಇದ್ದವು. 1948, 1949, 1950, 1954, 1956 ನೇ ವರ್ಷಗಳಲ್ಲಿ ಹರಾಜಿನಲ್ಲಿ ಕೊಂಡಿದ್ದ ಕೆಲವು ದಾಖಲೆಗಳ ಪ್ರತಿಗಳನ್ನು ಅರ್ಜಿ ಜೊತೆಗೆ ಲಗತ್ತಿಸಲಾಗಿತ್ತು. 
ಕಂದಾಯ ಅಧಿಕಾರಿಗಳು ಅರ್ಜಿದಾರರು ಕೋರಿಕೆಯನ್ನು ಪರಿಶೀಲಿಸುವಾಗ ಅವರು ಉಲ್ಲೇಖಿಸಿದ್ದ ಎಲ್ಲ ಸರ್ವೆ ನಂಬರ್‌ಗಳ ಪಹಣಿ ದಾಖಲೆಗಳೂ ಅದನ್ನು ಅರಣ್ಯ ಪ್ರದೇಶವೆಂದೇ ಹೇಳುತ್ತಿದ್ದವು . ಎಲ್ಲೂ ಯಾವುದೇ ರೈತನ ಹೆಸರು ಇರಲಿಲ್ಲ ನೂರಾರು ಎಕರೆ ಭೂಮಿಯನ್ನು ಹರಾಜಿನಲ್ಲಿ ಕೊಂಡಿದ್ದು ಗುತ್ತಿಗೆ ಆಧಾರದ ಮೇಲೆ ಕೆಲ ರೈತರಿಗೆ ಗುತ್ತಿಗೆ ನೀಡಲಾಗಿತ್ತು ಎಂದು ಹೇಳಿದ್ದರೂ 50-60 ವರ್ಷಗಳಿಂದ ಆ ಭೂಮಿ ಉಳುಮೆಯನ್ನೇ ಕಾಣದಿರುವುದು ಅನುಮಾನಗಳನ್ನು ಹುಟ್ಟು ಹಾಕಿತು. ಅರ್ಜಿಗೆ ಲಗತ್ತಿಸಿದ್ದ  ದಾಖಲೆಗಳ ಸತ್ಯಾಸತ್ಯತೆ ಬಗ್ಗೆ ಸಮಗ್ರ ತನಿಖೆ ನಡೆಸಿದಾಗ ತಾಲೂಕು ಕಂಡರಿಯದ ಬಹು ದೊಡ್ಡ ಭೂ ಹಗರಣದ ವಾಸನೆ ಬಡಿಯಿತು. ಅರ್ಜಿದಾರರು ಸಲ್ಲಿಸಿದ್ದ ನಕಲು ಪ್ರತಿಗಳ ಮೂಲ ದಾಖಲೆಗಳ ಕಡತಗಳು ಶಿರಾ ಕಚೇರಿಯಲ್ಲಾಗಲಿ, ಮಧುಗಿರಿ, ತುಮಕೂರು ಕಚೇರಿಗಲ್ಲಾಗಲಿ ಸಿಗಲೇ ಇಲ್ಲ.


ಆದರೆ  ಅರ್ಜಿದಾರರ ಕೋರಿಕೆಯಂತೆ ಖಾತಾ ಬದಲಾವಣೆ ಮಾಡುವಂತೆ ಪ್ರಭಾವಿಗಳ ದೂರವಾಣಿ ಕರೆಗಳು ಶಿರಾ ತಹಸೀಲ್ದಾರ್ ಮಮತಾರವರಿಗೆ ಬರಲಾರಂಭಿಸಿದವು. ಹೀಗೆ ಕರೆ ಮಾಡಿದವರ ಪಟ್ಟಿಯಲ್ಲಿ ನಿವೃತ್ತ ಐಎಎಸ್, ಐಎಫ್‌ಎಸ್ ಅಧಿಕಾರಿಗಳು, ಹಾಲಿ ಸರ್ಕಾರದ ಬೆಂಗಳೂರು ಮೂಲದ ಪ್ರಭಾವಿ ಶಾಸಕರ ಸಹೋದರರೂ ಇದ್ದರೆಂದು ತಿಳಿದು ಬಂದಿದೆ. ಶಿಫಾರಸಿನ ಜೊತೆಗೆ  ದೊಡ್ಡ ಮೊತ್ತದ ಆಮಿಷವನ್ನೂ ಒಡ್ಡಲಾಗಿತ್ತೆಂದು ಹೇಳಲಾಗಿದೆ. ಮತ್ತು ಕಾರ‍್ಯಾಂಗದ ಹಂತದಲ್ಲಿ ಇಂತದ್ದೆಲ್ಲ ಸಾಮಾನ್ಯವೂ ಹೌದು.


ಈ ಅರ್ಜಿಯಲ್ಲಿ ಖಾತೆ ಮಾಡಿಕೊಡುವಂತೆ ಕೋರಲಾಗಿದ್ದ ಎಲ್ಲ ಸರ್ವೆ ನಂಬರ್‌ಗಳ ಪಹಣಿಗಳಲ್ಲಿ ಅರಣ್ಯ ಎಂದೇ ಇದ್ದುದರಿಂದ ಈ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ತಹಸೀಲ್ದಾರ್ ಶಿರಾ ವಲಯ ಅರಣ್ಯಾಧಿಕಾರಿ ರಾಧಾ ಅವರನ್ನು ಲಿಖಿತವಾಗಿ ಕೋರುತ್ತಾರೆ. ಸದರಿ ಆರ್‌ಎಫ್‌ಓ ವಾಸ್ತವಾಂಶಗಳನ್ನು ತಹಸೀಲ್ದಾರ್ ರವರಿಗೆ ತಿಳಿಸುವ ಜೊತೆಗೆ ಅವರ ಇಲಾಖೆಯ ಮೇಲಿನ ಹಂತಕ್ಕೂ ಮಾಹಿತಿ ನೀಡುತ್ತಾರೆ. ಹೀಗಾಗಿ ತುಮಕೂರು ಪ್ರಾದೇಶಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ದಿನಾಂಕ 16.04.2022ರಂದು ತುಮಕೂರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಅರ್ಜಿದಾರರು ಖಾತೆ ಮಾಡಿಕೊಡುವಂತೆ ಕೋರಿರುವ ಭೂಮಿಯು ವಾಸ್ತವದಲ್ಲಿ ಅರಣ್ಯ ಎಂದೇ ಖಾತರಿ ಪಡಿಸುತ್ತಾರೆ. 


ಹೀಗೆ ನಕಲಿ ದಾಖಲೆಗಳನ್ನು ಲಗತ್ತಿಸಿ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ 730 ಎಕರೆ ಅರಣ್ಯ ಭೂಮಿಯನ್ನು ಲಪಟಾಯಿಸುವ ಕುತಂತ್ರ ನಡೆಸಿದ್ದ ಎಲ್ಲರಿಗೂ ಪ್ರತ್ಯೇಕವಾಗಿ ದಿನಾಂಕ 22.04.2022ರಂದು ಹಿಂಬರಹ ನೀಡಿದ್ದಾರೆ. ಅಲ್ಲದೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಅರಣ್ಯ ಜಮೀನನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿರುವ ನಿಮ್ಮ ವಿರುದ್ಧ ಭಾರತೀಯ ದಂಡ ಸಂಹಿತೆ ಅನ್ವಯ ಕ್ರಿಮಿನಲ್ ಪ್ರಕರಣ ಏಕೆ ದಾಖಲಿಸಬಾರದು ಎಂಬ ಬಗ್ಗೆ ಸಮಜಾಯಿಷಿ ನೀಡುವಂತೆಯೂ ನೋಟೀಸ್ ನೀಡಿದ್ದಾರೆ.


ತಹಶೀಲ್ದಾರ್ ವರ್ಗಾವಣೆ ಹುನ್ನಾರ !?


ಕೋಟ್ಯಂತರ ರೂ ಮೌಲ್ಯದ 730 ಎಕರೆ ಅರಣ್ಯ ಭೂಮಿ ಉಳಿಸಿದ  ಪ್ರಭಾವಿಗಳ ಒತ್ತಡಕ್ಕೆ ಮಣಿಯದ, ಕರ್ತವ್ಯ ತತ್ಪರತೆಯ ಪ್ರಾಮಾಣಿಕ ತಹಸೀಲ್ದಾರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಬದಲಿಗೆ ಅವರನ್ನು ಶಿರಾದಿಂದ ಎತ್ತಂಗಡಿ ಮಾಡುವ ಹುನ್ನಾರ ಸಾಗಿದೆ ಎಂದು ತಿಳಿದು ಬಂದಿದೆ. ಇದೇ ಅಧಿಕಾರಿ ಗುಬ್ಬಿ ತಾಲೂಕಿನಲ್ಲಿ ತಹಶೀಲ್ದಾರ್ ಹುದ್ದೆಯಲ್ಲಿ ಕಾರ‍್ಯನಿರ್ವಹಿಸುತ್ತಿದ್ದಾಗಲೂ ಪ್ರಭಾವಿಗಳು ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದನ್ನು ತೆರವುಗೊಳಿಸುವ ಪ್ರಯತ್ನ ಮಾಡಿದ್ದರು. ಈ ಕಾರಣವಾಗಿಯೇ ಅವರ ವಿರುದ್ಧ ಸುಳ್ಳು ಪ್ರಕರಣವೊಂದನ್ನು ಸೃಷ್ಟಿಸಿ ಸಾರ್ವಜನಿಕವಾಗಿ ಮುಜುಗರವನ್ನುಂಟು ಮಾಡಿ ವರ್ಗಾವಣೆ ಮಾಡಿಸಲಾಗಿತ್ತು ಎಂಬುದನ್ನು ಗಮನಿಸಬೇಕಿದೆ. 


ಇಂಥ ಒಳ್ಳೆಯ ಅಧಿಕಾರಿಗಳು ಕಷ್ಟದಲ್ಲಿರುವ ಸಾಮಾನ್ಯ ಜನರಿಗೆ ಇಷ್ಟವಾಗುತ್ತಾರೆ, ಅದೇ ಹೊತ್ತಿನಲ್ಲಿ ಪುಡಾರಿಗಳಿಗೆ, ಮಧ್ಯವರ್ತಿಗಳಿಗೆ, ಸಂದರ್ಭದ ದೌರ್ಬಲ್ಯಗಳನ್ನು ಬಳಸಿಕೊಂಡು ಹಣ ಮಾಡಿಕೊಳ್ಳಲು ಮುಂದಾಗುವ ಮಧ್ಯವರ್ತಿಗಳು ಹಾಗೂ ಆರ್ ಟಿ ಐ ಕಾರ‍್ಯಕರ್ತರಿಗೆ ಇಷ್ಟವಾಗುವುದಿಲ್ಲ. ಶಿರಾ ಹಾಗೂ ಜಿಲ್ಲೆಯ ಅಧಿಕಾರಸ್ಥ ರಾಜಕಾರಣಿಗಳು ಮಮತಾ ಅವರ ವರ್ಗಾವಣೆಯನ್ನು ತಡೆದು , ಸರ್ಕಾರಕ್ಕೆ ಸುಳ್ಳು ದಾಖಲೆ ಸಲ್ಲಿಸಿ ವಂಚಿಸಲು ಹೊರಟಿದ್ದ ತಂಡದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಲು ಮುಂದಾಗಬೇಕಿದೆ.