ಮದಲೂರು ಕೆರೆಗೆ ಅತಿ ಶೀಘ್ರದಲ್ಲಿ ಹೇಮಾವತಿ ಶಿರಾ ರಂಗಾಪುರದಲ್ಲಿ ಸಚಿವ ಮಾಧುಸ್ವಾಮಿ ಭರವಸೆ

ಮದಲೂರು ಕೆರೆಗೆ ಅತಿ ಶೀಘ್ರದಲ್ಲಿ ಹೇಮಾವತಿ ಶಿರಾ ರಂಗಾಪುರದಲ್ಲಿ ಸಚಿವ ಮಾಧುಸ್ವಾಮಿ ಭರವಸೆ

ಮದಲೂರು ಕೆರೆಗೆ ಅತಿ ಶೀಘ್ರದಲ್ಲಿ ಹೇಮಾವತಿ

ಶಿರಾ ರಂಗಾಪುರದಲ್ಲಿ ಸಚಿವ ಮಾಧುಸ್ವಾಮಿ ಭರವಸೆ


ಶಿರಾ: ಅತಿ ಶೀಘ್ರವಾಗಿ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿ ಕೆರೆ ತುಂಬಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ತಾಲೂಕಿನ ಬರಗೂರು ರಂಗಾಪುರ ಗ್ರಾಮದಲ್ಲಿ ಗಡಿನಾಡು ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಆಯೋಜಿಸಿದ್ದ ಸೋಲಾರ್ ಶೀಥಲೀಕರಣ ಘಟಕ ಉದ್ಘಾಟನೆ ಮತ್ತು ಕಟ್ಟಡ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಾಕಷ್ಟು ಮಳೆಯಾಗಿರುವ ಕಾರಣ ಕಳ್ಳಂಬೆಳ್ಳ ಮತ್ತು ಶಿರಾ ದೊಡ್ಡ ಕೆರೆಗಳು ತುಂಬಿದ್ದು, ಮದಲೂರು ಕೆರೆಗೆ ನೀರು ಹರಿಸಲು ಸಹಕಾರಿಯಾಗಿದೆ ಎಂದರು.
ತಾಲೂಕಿನ ಜನರ ಕುಡಿಯುವ ನೀರಿನ ಉದ್ದೇಶಕ್ಕೆ ೦.೯ ಟಿಎಂಸಿ ಹೇಮಾವತಿ ನೀರು ನಿಗದಿಯಾಗಿದೆ. ಇದರಲ್ಲಿ ೦.೪ ಟಿಎಂಸಿಯಷ್ಟು ನೀರು ಶಿರಾ ಮತ್ತು ಕಳ್ಳಂಬೆಳ್ಳ ಕೆರೆಗೆ ಹರಿಸಲಾಗಿದೆ. ಈ ಎರಡೂ ಕೆರೆಗಳು ಮಳೆಯಿಂದ ತುಂಬಿರುವುದರಿAದ ಈ ಕೆರೆಗಳ ಉಳಿಕೆ ೦.೫ ಟಿಎಂಸಿಯಷ್ಟು ನೀರನ್ನು ಮದಲೂರು ಕೆರೆಗೆ ಹರಿಸಲಾಗುತ್ತದೆ ಎಂದರು.
ಮದಲೂರು ಕೆರೆಗೆ ನೀರು ಹರಿಸುವ ವಿಷಯದಲ್ಲಿ ಮದಲೂರು ಕೆರೆಗೆ ಕಾಲುವೆ ನಿರ್ಮಾಣ ಕಾಮಗಾರಿಗೆ ಒಪ್ಪಿಗೆ ನೀಡಿದ್ದ ಪತ್ರವನ್ನೇ ನೀರು ಹರಿಸಲು ದೊರೆತಿರುವ ಒಪ್ಪಿಗೆ ಎಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾಡಿದ್ದರು ಎಂದು ಆರೋಪಿಸಿದ ಅವರು, ಒಂದು ದಿನವೂ ನೀರು ಹರಿಸಲಿಲ್ಲ. ಆದರೆ, ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನೀರು ಹರಿಸುತ್ತಿದೆ ಎಂದರು.
ನೈಸರ್ಗಿಕವಾಗಿ ಉಷ್ಣಾಂಶದಿAದ ದೊರೆಯುವ ಸೋಲಾರ್ ಶಕ್ತಿಯಿಂದ ನಿರ್ಮಾಣವಾದ ಶೀಥಲೀಕರಣ ಘಟಕ ಹಣ್ಣು ಮತ್ತು ಬೆಳೆಗಾರರಿಗೆ ಸಹಕಾರಿಯಾಗಲಿದ್ದು, ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲಿದ್ದು ಅನುಕೂಲವಾಗಲಿದೆ ಎಂದರು.
ಸಣ್ಣ ರೈತರನ್ನು ಒಟ್ಟಿಗೆ ಸೇರಿಸಿ ಉತ್ಪಾದಕರ ಕಂಪನಿಯಲ್ಲಿ ಸೇರಿಸಿಕೊಂಡು ಸರ್ಕಾರದ ಯೋಜನೆಗಳು ಕೊನೆಯ ರೈತರನ್ನು ತಲುಪುವಂತೆ ಮಾಡಬೇಕಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಶಾಸಕ ಡಾ. ಸಿ.ಎಂ. ರಾಜೇಶ್‌ಗೌಡ ಮಾತನಾಡಿ, ತಾಲೂಕಿನಲ್ಲಿ ಸುಮಾರು ೩೯ ಸಾವಿರ ಎಕರೆ ಬೆಳೆ ನಷ್ಟವಾಗಿದೆ. ತಾಲೂಕಿನ ಜೀವನಾಡಿಯಾಗಿರುವ ಶೇಂಗಾ ಬೆಳೆ ಬೆಳೆದ ರೈತರು ಅತೀವ ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಾದ ತಾವುಗಳು ಕೂಡಾ ಮನವರಿಕೆ ಮಾಡಿಕೊಂಡು ಪರಿಹಾರ ದೊರಕಿಸಿಕೊಡಬೇಕೆಂದು ಸಚಿವ ಮಾಧುಸ್ವಾಮಿ ಅವರಲ್ಲಿ ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಿಸಾನ್ ಸನ್ಮಾನ್ ಯೋಜನೆಯಿಂದ ವರ್ಷಕ್ಕೆ ೧೨ ಸಾವಿರ ರೂಪಾಯಿ ಹಣದ ಮೊತ್ತವನ್ನು ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ. ಇದರಿಂದ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಮಾತನಾಡಿ, ಬರಗೂರು ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ಶೀಥಲೀಕರಣ ಘಟಕ ಸ್ಥಾಪಿಸಿರುವುದರಿಂದ ದಾಳಿಂಬೆ ಮತ್ತು ಹಣ್ಣು, ತರಕಾರಿ ಬೆಳೆಗಾರರಿಗೆ ಹೆಚ್ಚು ಅನುಕೂಲವಾಗಲಿದೆ. ರೈತರು ತಾವು ಬೆಳೆದ ಬೆಳೆಯನ್ನು ಸಿಕ್ಕ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ತಪ್ಪಲಿದೆ. ತಮ್ಮ ಉತ್ಪನ್ನಗಳನ್ನು ಶೇಖರಿಸಿಟ್ಟುಕೊಂಡು ಉತ್ತಮ ಬೆಲೆ ಬಂದಾಗ ಮಾರಿ ಅಧಿಕ ಲಾಭ ಪಡೆಯಬಹುದೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ರೈತರಿಗೆ ನೀರು ಒದಗಿಸಿಕೊಡಲು ತಮ್ಮ ಅನುದಾನದಲ್ಲಿ ಕೊಳಬೆ ಬಾವಿ ಕೊರೆಸುವುದಾಗಿ ಭರವಸೆ ನೀಡಿದರು.
ರಾಜ್ಯ ನಾರು ಉದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ. ಮಂಜುನಾಥ್, ತಹಸೀಲ್ದಾರ್ ಎಂ. ಮಮತ, ಬರಗೂರು ಗ್ರಾಮ ಪಂಚಾಯತಿ ಅಧ್ಯಕ್ಷ ಜಯರಾಮಯ್ಯ, ಕೃಷಿ ಸಹಾಯಕ ನಿರ್ದೇಶಕ ರಂಗನಾಥ್, ಶಿವಕುಮಾರ್, ದ್ವಾರಕೀಶ್ ಗೌಡ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಪ್ರಕಾಶ್‌ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.