ವಾರಕ್ಕೆರಡು ವ್ಯಾಕ್ಸಿನೇಷನ್ ಡ್ಯೂಟಿ, ಒಂದು ರಜೆ ನೀಡಿ ಆರೋಗ್ಯ ಸಚಿವರಿಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮನವಿ

ವಾರಕ್ಕೆರಡು ವ್ಯಾಕ್ಸಿನೇಷನ್ ಡ್ಯೂಟಿ, ಒಂದು ರಜೆ ನೀಡಿ  ಆರೋಗ್ಯ ಸಚಿವರಿಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮನವಿ


ವಾರಕ್ಕೆರಡು ವ್ಯಾಕ್ಸಿನೇಷನ್ ಡ್ಯೂಟಿ, ಒಂದು ರಜೆ ನೀಡಿ


ಆರೋಗ್ಯ ಸಚಿವರಿಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮನವಿ


ತುಮಕೂರು: ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಿಗದಿಪಡಿಸಿರುವ ಗುರಿಯಂತೆ ವ್ಯಾಕ್ಸಿನೇಷನ್ ನಿಗದಿತ ಅವಧಿಯೊಳಗೆ ಮುಗಿಸಲು ಸಾರ್ವಜನಿಕರು ಲಸಿಕೆ ಪಡೆಯಲು ಅಸಹಕಾರ ತೋರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವಾರದಲ್ಲಿ ೨ ದಿನ ವ್ಯಾಕ್ಸಿನೇಷನ್ ನೀಡಲು ಕಾರ್ಯಕ್ರಮ ನಿಗದಿಪಡಿಸುವ ಜತೆಗೆ ವಾರದಲ್ಲಿ ಒಂದು ದಿನ ರಜೆ ನೀಡುವಂತೆ ಆಗ್ರಹಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು. 
ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಶಾಖೆ ಡಾ. ರಾಜಶೇಖರ್ ನೇತೃತ್ವದಲ್ಲಿ ಜಿಲ್ಲಾ ಶಸ್ತçಚಿಕಿತ್ಸಕ ಡಾ. ವೀರಭದ್ರಯ್ಯನವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರನ್ನು ಭೇಟಿ ಮಾಡಿದ ಸರ್ಕಾರಿ ವೈದ್ಯಾಧಿಕಾರಿಗಳು ತಮ್ಮ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದರು. 
ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಜೀವದ ಹಂಗು ತೊರೆದು ಸುಮಾರು ೨ ವರ್ಷಗಳಿಂದ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ನಂತರದ ದಿನಗಳಲ್ಲಿ ನಡೆಯುತ್ತಿರುವ ಕೋವಿಡ್ ವ್ಯಾಕಿನೇಷನ್ ಕಾರ್ಯಕ್ರಮದಲ್ಲೂ ಸಾರ್ವಜನಿಕರಿಗೆ ಸೇವೆ ನೀಡಲು ಶ್ರಮಿಸುತ್ತಿದ್ದಾರೆ. ಆದರೆ ಕಳೆದ ೨ ವರ್ಷಗಳಿಂದ ನಿರಂತರವಾಗಿ ಯಾವುದೇ ಅಧಿಕೃತ ರಜೆಯ ದಿನಗಳು ಮತ್ತು ಹಬ್ಬ ಹರಿದಿನಗಳಲ್ಲೂ ರಜೆ ಪಡೆಯದೆ ವ್ಯಾಕ್ಸಿನೇಷನ್ ನಡೆಸಲಾಗುತ್ತಿದೆ.
ಹೀಗಾಗಿ ಕುಟುಂಬ ಜತೆ ಕಾಲ ಕಳೆಯಲು ಸಮಯಾವಕಾಶ ಇಲ್ಲದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿದ್ದು, ತಮ್ಮ ಕೌಟುಂಬಿಕ ಜೀವನಕ್ಕೆ ಆದ್ಯತೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯಾಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಮನವಿ ಪತ್ರದ ಮೂಲಕ ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ರಾಜಶೇಖರ್, ಕಳೆದ ಎರಡು ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣವಾಗಿ ತನು, ಮನ, ಆರೋಗ್ಯ ಇತರೆ ವೈಯಕ್ತಿಕ ವಿಷಯಗಳನ್ನು ಬದಿಗಿಟ್ಟು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಒದಗಿಸುವಲ್ಲಿ ಕಾರ್ಯನಿರತರಾಗಿದ್ದೇವೆ.  ಆದರೆ, ಇತ್ತೀಚೆಗೆ ಸರ್ಕಾರದಿಂದ ಅಧಿಕೃತವಾಗಿ ರಜೆ ನೀಡದಿರುವುದರಿಂದ ಕುಟುಂಬದ ಜತೆ ಕಾಲ ಕಳೆಯಲು ಸಮಯ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರಜೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ವಾರದಲ್ಲಿ ೨ ದಿನ ನಿಗದಿಗೊಳಿಸುವಂತೆ ಮನವಿ ಮಾಡಿದ ಅವರು, ದಿನನಿತ್ಯ ಈ ಕಾರ್ಯಕ್ರಮ ಮಾಡಿದರೆ ಬೇರೆ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಉಳಿದ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಬೇಕು. ಜತೆಗೆ ಪ್ರೋತ್ಸಾಹ ಧನ ಮತ್ತು ವಾಹನಗಳ ವ್ಯವಸ್ಥೆ ಸಹ ಮಾಡಿಕೊಡಬೇಕು ಎಂದು ಕೋರಿದರು. 
ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲ ಹಂತದಲ್ಲೂ ಸಾಕಷ್ಟು ಹುದ್ದೆಗಳು ಖಾಲಿ ಇರುವುದು ಸಹ ಕಾರ್ಯ ಒತ್ತಡ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಹಾಗಾಗಿ ಕೂಡಲೇ ಖಾಲಿ ಹುದ್ದೆಗಳ ಭರ್ತಿಗೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ವೈದ್ಯಾಧಿಕಾರಿಗಳಾದ ಡಾ. ಮೋಹನ್, ಡಾ. ಕೇಶವರಾಜ್, ಫಾರ್ಮಸಿ ಅಧಿಕಾರಿ ಸಂಘದ ಜಿಲ್ಲಾಧ್ಯಕ್ಷ ಎಂ. ಗಂಗಾಧರ್, ರೇಣುಕಾಂಬ, ಪದ್ಮಣ್ಣ, ರಂಗನಾಥ್, ವಿನೋದ್, ಜಯಕುಮಾರ್, ರಮ್ಯಾ ಸಿ.ಎಸ್. ಇದ್ದರು.