ಕೋಮು ಸಂಘರ್ಷ ಬಿಜೆಪಿಯ ವ್ಯವಸ್ಥಿತ ಪಿತೂರಿ: ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪ

ಕೋಮು ಸಂಘರ್ಷ ಬಿಜೆಪಿಯ ವ್ಯವಸ್ಥಿತ ಪಿತೂರಿ:
ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪ


ತುಮಕೂರು: ನಗರ ಸೇರಿದಂತೆ ರಾಜ್ಯ ಮತ್ತು ದೇಶದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳು ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಪಕ್ಷ ನಡೆಸಿರುವ ವ್ಯವಸ್ಥಿತ ಪಿತೂರಿ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ಜನಸಾಮಾನ್ಯರಿಗೆ ಹೊರೆಯಾಗಿರುವ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಅಲ್ಲದೆ ದಿನದಿಂದ ದಿನಕ್ಕೆ ಆಡಳಿತ ಪಕ್ಷದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ಅಲ್ಲಲ್ಲಿ ಕೋಮು ಸಂಘರ್ಷಗಳನ್ನು ಸೃಷ್ಟಿಸಿ, ಹಿಂದೂ ಮತ್ತು ಮುಸ್ಲಿಂರ ನಡುವೆ ವೈಮಸ್ಸು ಉಂಟು ಮಾಡಿ, ಸರಕಾರದ ವಿರುದ್ಧ ತಿರುಗಿಬೀಳದಂತೆ ವ್ಯವಸ್ಥಿತ ಸಂಚಿನ ಭಾಗವೇ, ಕೋಮು ಸಂಘರ್ಷಗಳಾಗಿವೆ. ಬ್ರಿಟಿಷರಿಗಿಂತಲೂ ವಿಭಿನ್ನವಾಗಿ ದೇಶವನ್ನು ಒಡೆದು ಆಳುವ ನೀತಿಯನ್ನು ಬಿಜೆಪಿ ಪಕ್ಷ ಮಾಡುತ್ತಿದ್ದು, ಜನಸಾಮಾನ್ಯರು ಬಿಜೆಪಿಯ ಈ ಷಡ್ಯಂತ್ರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಜೊತೆಗೆ, ತೈಲ ಬೆಲೆಗಳು ಗಗಮುಖಿಯಾಗಿವೆ. ಇತಿಹಾಸದಲ್ಲಿ ಕಂಡು ಕೇಳರಿಯದ ಮಟ್ಟಕ್ಕೆ ಇಂದಿನ ಇಂಧನ ಬೆಲೆಗಳಿವೆ. ಜನರಿಗೆ ಉಚಿತವಾಗಿ ಕೊರೋನ ಲಸಿಕೆ ನೀಡಿದ್ದೇ, ಇಂಧನ ಬೆಲೆಗಳ ಹೆಚ್ಚಳಕ್ಕೆ ಕಾರಣ ಎಂದು ತಮ್ಮ ಬಾಲಂಗೋಚಿಗಳ ಮೂಲಕ ಪಕ್ಷದ ಮುಖಂಡರು ಸಮರ್ಥನೆಗೆ ಇಳಿದಿದ್ದಾರೆ. ಇದರ ವಿರುದ್ಧ ಜನರು ತಿರುಗಿ ಬೀಳಬಹುದು ಎಂಬ ಭಯದಲ್ಲಿ, ದೇಶದಲ್ಲಿ ಕೋಮು ಸಂಘರ್ಷಗಳನ್ನು ಸೃಷಿಸಲು ಮುಂದಾಗಿದೆ. ಬಿಜೆಪಿ ಪಕ್ಷದ ಈ ವ್ಯವಸ್ಥಿತ ಪಿತೂರಿಗೆ ಜನರು ಕಿವಿಗೊಡದೆ ಸೌಹಾರ್ದ ಜೀವನಕ್ಕೆ ಮುಂದಾಗುವAತೆ ಗಿರೀಶ್ ಜಿಲ್ಲೆಯ ಮತ್ತು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.