ಪಂಡಿತ್ ರಾಜೀವ್ ತಾರಾನಾಥರೊಂದಿಗೆ ಒಂದು ದಿನ

ನೀವು ಈಗಲೂ ಅಭ್ಯಾಸ ಮಾಡುತ್ತೀರ? ಎಂದು ನಾನು ಕೇಳಿದ ಪ್ರಶ್ನೆಗೆ " ಹೌದು.. ನಾನಿನ್ನು ಸಂಗೀತದ ವಿದ್ಯಾರ್ಥಿ. ನಾನು ಕಲಿತಿರುವುದು ಬಹಳ ಕಡಿಮೆ. ಇನ್ನು ಕಲಿಯುವುದು ಬಹಳಷ್ಟಿದೆ.

ಪಂಡಿತ್ ರಾಜೀವ್ ತಾರಾನಾಥರೊಂದಿಗೆ ಒಂದು ದಿನ

 


ಎಚ್.ವಿ.ಮಂಜುನಾಥ

     ವಿಚಾರವಾದಿ ಕೆ.ರಾಮದಾಸ್ ತೀರಿಕೊಂಡು ಕೆಲವು ದಿನಗಳಷ್ಟೇ ಆಗಿತ್ತು. ತುಮಕೂರಿನ ಗೆಳೆಯರು ಎಂ.ಜಿ.ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಶ್ರದ್ದಾಂಜಲಿ ಸಭೆ ಏರ್ಪಡಿಸಿದ್ದರು. ವೇದಿಕೆಯಲ್ಲಿ ನನ್ನ ವೃತ್ತಿ ಗುರು ಪ್ರೊ.ರವಿವರ್ಮಕುಮಾರ್ ಇದ್ದರು. ಅವರ ಪಕ್ಕದಲ್ಲಿ ಅಜಾನುಬಾಹು ವ್ಯಕ್ತಿಯೊಬ್ಬರು ಕೂತ್ತಿದ್ದರು. ಕಾರ್ಯಕ್ರಮದ ಮಧ್ಯದಲ್ಲಿಯೇ ನನ್ನನ್ನು ಕರೆದ ಪ್ರೊಫೆಸರ್ ಅವರು "ಇವರು ರಾಜೀವ್ ತಾರನಾಥ್ ಅಂತ, ಇವರು ಕಡೆಯವರ ಒಂದು ಮದುವೆ ರಿಜಿಸ್ಟರ್ ಮಾಡಿಸಿ ಕೊಡಬೇಕು" ಅಂದರು. "ಆಗಲಿ ಸಾರ್" ಎಂದ ನಾನು ಪಂಡಿತ ರಾಜೀವ್ ತಾರಾನಾಥರಿಗೆ ನಮಸ್ಕಾರ ಮಾಡಿ ಪರಿಚಯಿಸಿಕೊಂಡೆ. ವೇದಿಕೆ ಮೇಲೆಯೇ ಫೋನ್ ನಂಬರ್ ಬದಲಾಯಿಸಿಕೊಂಡೆವು. ನಾನು ಅವರ ಹೆಸರು ಕೇಳಿದ್ದು, ನೋಡಿದ್ದು ಮತ್ತು ಪರಿಚಯ ಅಗಿದ್ದು ಎಲ್ಲ ಒಂದೇ ದಿನ ಆಗಿತ್ತು.

     ಒಂದೆರಡು ದಿನದ ನಂತರ ಫೋನ್ ಮಾಡಿದ ಪ್ರೊಫೆಸರ್ "ಮದುವೆ ರಿಜಿಸ್ಟ್ರೇಷನ್ನಿಗೆ ಕಡಿದಾಳ್ ಶಾಮಣ್ಣನು ಬರುತ್ತಾರಂತೆ ಜೊತೆಯಲ್ಲಿ ಕರೆದುಕೊಂಡು ಹೋಗಿ" ಎಂದರು. ಆಗ ಲ್ಯಾಂಡ್ ಲೈನ್ ಕಾಲ. ಪಂಡಿತ್ ರಾಜೀವ್ ತಾರಾನಾಥರಿಗೆ ಫೋನ್ ಮಾಡಿ ಮದುವೆ ಆಗುವ ಹುಡುಗ ಹುಡುಗಿಯ ವಿವರಗಳನ್ನು ಪಡೆದುಕೊಂಡಿದ್ದಲ್ಲದೆ ರಿಜಿಸ್ಟ್ರೇಷನ್ನಿಗೆ ದಿನ ನಿಗದಿಪಡಿಸಿಕೊಂಡೆವು. ಕಡಿದಾಳ್ ಶಾಮಣ್ಣನವರು ಬೆಂಗಳೂರಿನ ಸಂಜಯನಗರದಲ್ಲಿ ಅವರ ಮಗಳಾದ ಲಾಜವಂತಿ ಮನೆಯಲ್ಲಿ ಉಳಿದುಕೊಂಡಿದ್ದರು. ರಾಜೀವ್ ತಾರಾನಾಥರು ಕೆ.ಆರ್.ಪುರಂ ಕಡೆಯ ಅವಲಹಳ್ಳಿಯಲ್ಲಿ ಆಗ ವಾಸವಿದ್ದರು. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯದೇ ನಾವು ಮಾಡಿಸಬೇಕಾಗಿದ್ದ ಮದುವೆ ರಿಜಿಸ್ಟ್ರೇಷನ್, ಹಾಗಾಗಿ ನಾನು ಶಾಮಣ್ಣನವರನ್ನು ಸಂಜಯನಗರದಿಂದ ಪಿಕ್ ಮಾಡಿಕೊಂಡು ಕೆ.ಆರ್.ಪುರಂಗೆ ಹೋಗಬೇಕಾಗಿತ್ತು. ನನ್ನ ಬಳಿ ಕಾರು ಇರಲಿಲ್ಲ. ನನ್ನ ಕಕ್ಷಿದಾರರೂ ಹಾಗೂ ಗೆಳೆಯರೂ ಆದ ನಟರಾಜ್ ಎಂಬುವವರ ಬಳಿ ಕಾರು ಇತ್ತು. ಕೇಳಿದ ತಕ್ಷಣ ಬರಲು ಒಪ್ಪಿದರು. ಅವರದೇ ಕಾರು ಅವರೇ ಡ್ರೈವರ್.

     ಅಂದು ಬೆಳಿಗ್ಗೆ ಒಂಭತ್ತು ಗಂಟೆಗೆ ಸಂಜಯನಗರದಲ್ಲಿ ಶಾಮಣ್ಣನನ್ನು ಹತ್ತಿಸಿಕೊಳ್ಳಲು ಅವರ ಮಗಳ ಮನೆ ಬಳಿಗೆ ಹೋದರೆ ಅವರು ಆಗಲೇ ರೆಡಿಯಾಗಿ ನಿಂತಿದ್ದರು. "ಬರೀ ಮಾರಾಯ...ತಿಂಡಿ ತಿನ್ನಿ" ಅಂದರು. "ನಮ್ಮು ಆಯ್ತು ಸಾ...ಬನ್ನಿ ಹೋಗೋಣ"

    ಅಂದು ಕರೆದುಕೊಂಡು ಬಂದು ಕಾರಿಗೆ ಕೂರಿಸಿದವನು ಸುಮ್ಮನಿರಲಾರದೆ ಕಾರ್ ಓನರ್ ಫ್ರೆಂಡನ್ನು ಪರಿಚಯಿಸಿದೆ.


     ಶಾಮಣ್ಣನವರದು ಅದೆಂತಹ ಚುರುಕಾದ ಕಣ್ಣುಗಳೋ ನನ್ನ ಫ್ರೆಂಡ್ ಕುತ್ತಿಗೆಯಲ್ಲಿದ್ದ ದಪ್ಪನೆಯ ಬಂಗಾರದ ಸರ ಕಣ್ಣಿಗೆ ಬಿದ್ದಿತ್ತು."

    ಅದೇನ್ ಮಾರಾಯ್ತ...ನಮ್ಮೂರಲ್ಲಿ ದನ ಕಟ್ಟಾಕೋ ಹಗ್ಗದುರಿ ಥರ ಐತೆ ನಿಮ್ ಸರ..." ಅಂದು ಬಿಟ್ಟರು. ಆ ಥರ ಸರ ಹಾಕಿಕೊಂಡರೆ ಸಖತ್ತು ಮರ್ಯಾದೆ ಸಿಗುತ್ತೆ ಎಂದುಕೊAಡಿದ್ದ ನನ್ನ ಫ್ರೆಂಡು ಶಾಮಣ್ಣನವರ ತಮಾಷೆಯಿಂದ ಪೆಚ್ಚಾಗಿ ನನ್ನ ಮುಖ ನೋಡಿದರು. ಶಾಮಣ್ಣನವರ ಬಗ್ಗೆ ಆ ನನ್ನ ಗೆಳೆಯರಿಗೆ ಯಾವ ಐಡಿಯಾನೂ ಇರಲಿಲ್ಲ, ಅವರ ಬಗ್ಗೆ ಗೊತ್ತಿದ್ದರೂ ನಾನು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಆದರೂ ಶಾಮಣ್ಣನವರನ್ನು ವಿಷಯಾಂತರ ಮಾಡಿ ಕಾರನ್ನು ಕೆ.ಆರ್.ಪುರಂ ಸಬ್ ರಿಜಿಸ್ಟ್ರಾರ್ ಕಚೇರಿಗೆ ನಡೆಸಲು ಹೇಳಿದೆ.

     ಶಾಮಣ್ಣನವರು ಮನೆಯಿಂದ ಹೊರಡುವಾಗಲೇ ರಾಜೀವ್ ತಾರಾನಾಥರೊಂದಿಗೆ ಫೋನಿನಲ್ಲಿ ಮಾತನಾಡಿದ್ದರು. ಕೆ.ಆರ್.ಪುರಂ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗುವ ವೇಳೆಗೆ ಅವರಾಗಲೇ ಬಂದು ನಮಗಾಗಿ ಕಾಯುತ್ತಿದ್ದರು. ಹುಡುಗ ಹುಡುಗಿ ಅವರ ಕಾರಿನಲ್ಲಿ ಕೂತ್ತಿದ್ದರು. ಆ ಸಬ್ ರಿಜಿಸ್ಟ್ರಾರ್ ಕಚೇರಿಯೋ ಮಾರ್ಕೆಟ್‌ನಂತೆ ಇದ್ದ ಜಾಗದ ಮಧ್ಯಭಾಗದಲ್ಲಿ ಇತ್ತು. ಶಾಮಣ್ಣನವರಿಗೆ ಕಾರಿನಲ್ಲಿಯೇ ಇರಲು ಹೇಳಿ ನಾನು ರಾಜೀವ್ ತಾರಾನಾಥರ ಬಳಿಗೆ ಹೋದೆ. ಅವರು ಅತ್ಮೀಯವಾಗಿ ಕೈ ಕುಲುಕಿ "ಈಗ ಏನ್ ಮಾಡೋಣ" ಅಂದರು. “ಬನ್ನಿ ಹೋಗಿ ಸಬ್ ರಿಜಿಸ್ಟ್ರಾರ್ ಹತ್ತಿರ ಫಸ್ಟ್ ಡಾಕ್ಯುಮೆಂಟ್ ಚೆಕ್ ಮಾಡೋಣ" ಅಂದೆ. ಅವರ ಪಕ್ಕ ನಡೆಯುತ್ತಾ ಹೋಗುತ್ತಿದ್ದ ನನಗೆ ನಾನು ಅತ್ಯಂತ ಕುಬ್ಬ ವ್ಯಕ್ತಿ ಅನ್ನಿಸತೊಡಗಿತ್ತು. ಸಬ್ ರಿಜಿಸ್ಟಾçರ್  " ಇಲ್ಲಿ ಬರಲ್ಲ, ಮಹದೇವಪುರಕ್ಕೆ ಹೋಗಿ" ಅಂದರು. ಒಬ್ಬರ ಮುಖ ಒಬ್ಬರು ನೋಡಿಕೊಂಡು ವಾಪಾಸ್ಸು ಬಂದೆವು. ಅವರ ಕಾರಲ್ಲಿ ಅವರು, ನಮ್ಮ ಕಾರಲ್ಲಿ ನಾವು ಮಹದೇವಪುರ ಸಬ್ ರಿಜಿಸ್ಟ್ರಾರ್ ಆಫೀಸ್ ತಲುಪಿದೆವು. ಅದು ಮೊದಲ ಅಂತಸ್ತಿನಲ್ಲಿತ್ತು. ನಾನು, ಶಾಮಣ್ಣನವರು ಮುಂದೆ ಹೋದೆವು. ರಾಜೀವ್ ತಾರಾನಾಥರು ನಿಧಾನವಾಗಿ ಹತ್ತಿ ಬಂದರು. ಜೊತೆಯಲ್ಲಿ ಹುಡುಗ ಹುಡುಗಿಯೂ ಬಂದರು. ನಾನು ಡಾಕ್ಯುಮೆಂಟ್ ನೀಡಿ ಪ್ರೋಸಸ್ ಮಾಡತೊಡಗಿದೆ. ಸುಮಾರು ಒಂದು ತಾಸು ಆದ ಮೇಲೆ ಸಬ್ ರಿಜಿಸ್ಟ್ರಾರ್ ತನ್ನ ಬಳಿಯಿದ್ದ ದಾಖಲಾತಿಯನ್ನು ಪರಿಶೀಲಿಸಿ ಹುಡುಗ ಹುಡುಗಿಯನ್ನು ಕರೆಸಲು ಹೇಳಿದರು. ಅವರ ಮುಂದೆ ನಿಲ್ಲಿಸಿದೆ. ಅಲ್ಲಿಂದ ಸ್ವಲ್ಪವೇ ದೂರದಲಿ ಶಾಮಣ್ಣ ಮತ್ತು ತಾರಾನಾಥರು ಕುಳಿತ್ತಿದ್ದರು. ಎಲ್ಲ ದಾಖಲಾತಿ ಪರಿಶೀಲಿಸಿದ ಸಬ್ ರಿಜಿಸ್ಟ್ರಾರ್ ಹುಡುಗಿ ಮೇಜರ್ ಎಂದು ನಿರೂಪಿಸುವ ಯಾವುದೇ ದಾಖಲಾತಿ ಇಲ್ಲ ಎಂದು ತಕರಾರು ತೆಗೆದರು. 


     ಅಷ್ಟು ದೂರದಲ್ಲಿ ಕುಳಿತಿದ್ದ ಶಾಮಣ್ಣನವರು, ಏನಂತೆ ವಕೀಲರೇ?" ಅಂದರು. ನಾನು ಅವರ ಬಳಿಗೆ ಹೋಗಿ ನಡೆದ ವಿಚಾರ ಹೇಳಿದೆ. " ಹಲ್ಲು ಹಿಡ್ಡು ನೋಡೋಕೆ ಹೇಳಿ,ನಮ್ಮೂರ ಕಡೆ ಜಾತ್ರೇಲಿ ಹಂಗೇ ದನದ ವಯಸ್ ಹೇಳೋದು" ಅಂದರು. ಆದರೆ ಮದುವೆ ರಿಜಿಸ್ಟರ್ ಆಗಲ್ಲವೇನೋ ಎಂಬಂತಹ ಆತಂಕ ತಾರಾನಾಥರದಾಗಿತ್ತು. ಸಬ್ ರಿಜಿಸ್ಟ್ರಾರ್‌ಗೆ ಶಾಮಣ್ಣನವರ ಹಸಿರು ಶಾಲು, ರಾಜೀವ್ ತಾರಾನಾಥರ ಸಿಂಡರಿಸಿಕೊಂಡಂತಹ ಮುಖ ನೋಡಿ ಸಿಕ್ತ್ ಸೆನ್ಸ್ ವರ್ಕ್ ಆಯಿತು ಅನ್ನಿಸುತ್ತದೆ. " ವಕೀಲರೇ.. ಎದುರುಗಡೆ ಗೌರ್ಮೆಂಟ್ ಹಾಸ್ಪಿಟಲ್ ಇದೆ. ಅಲ್ಲಿ ಡಾಕ್ಟರ್ ಹತ್ರ ಪರೀಕ್ಷೆ ಮಾಡಿಸಿ, ಇಷ್ಟು ವಯಸ್ಸು ಅಂತ ಪತ್ರ ತನ್ನಿ ರಿಜಿಸ್ಟರ್ ಮಾಡಿಕೊಳೇನೆ. ಆದರೆ ಸರ್ಟಿಫಿಕೇಟ್ ನನ್ನ ಬಳಿಯೇ ಇಟ್ಟುಕೊಳ್ಳುವೆ. ಆಮೇಲೆ ಆ ಹುಡುಗ ಬಂದು ಹುಡುಗಿಯ ವಯಸ್ಸಿಗೆ ಸಂಬಂಧಿಸಿದ ದಾಖಲಾತಿ ನೀಡಿ ಸರ್ಟಿಫಿಕೇಟ್ ತಗೊಂಡು ಹೋಗಲಿ" ಎಂದು ಸಲಹೆಯಿತ್ತರು. ಅದು ನಮ್ಮೆಲ್ಲರಿಗೂ ಒಪ್ಪಿಗೆ ಆಯಿತು. ಈ ಪ್ರೋಸೀಜರ್ ಇನ್ನು ಟೈಮ್ ಹಿಡಿಯುತ್ತೆ ಎಂದು ಅರಿತ ರಾಜೀವ ತಾರಾಂನಾಥರು ನನ್ನನ್ನು ಹತ್ತಿರ ಕರೆದು "ನಾನು ಹೋಗಿರುತ್ತೇನೆ. ನೀವು ಇದನ್ನು ಮುಗಿಸಿ ನನ್ನ ಮನೆಗೆ ಬನ್ನಿ.ನಾನು ನಿಮಗೆ ಊಟಕ್ಕೆ ಚಿಕನ್ ಏರ್ಪಾಡು ಮಾಡೇನೆ" ಅಂದರು. ಶಾಮಣ್ಣನವರು "ನಾನಿರ್ತೇನೆ ವಕೀ...ಅವರನ್ನು ಕಳ್ಸಿ" ಅಂದರು. ನನಗೆ ತಾರಾನಾಥರು ಹೋಗುವುದರಿಂದ ಏನೂ ತೊಂದರೆ ಇರಲಿಲ್ಲ, ಆದರೆ ಶಾಮಣ್ಣನವರು ನಮ್ಮ ಜೊತೆಯಲ್ಲಿಯೇ ಉಳಿದುಕೊಳ್ಳೋದ್ರಿಂದ ಏನೇನು ತಾಪತ್ರಯ ಕಾದಿದೆಯೋ ಎಂಬುದು ನನ್ನ ಆತಂಕ ಆಗಿತ್ತು. ಆದರೆ ಅಂತಹುದೇನು ಆಗದೆ ಸ್ವಲ್ಪ ತಡವಾದರೂ ರಿಜಿಸ್ಟ್ರೇಷನ್ ಸುಸೂತ್ರವಾಗಿ ನಡೆದಿತ್ತು. ಇದಕ್ಕೆ ಸಬ್ ರಿಜಿಸ್ಟ್ರಾರ್ ಅವರ ಮುಂಜಾಗ್ರತೆಯೂ ಕಾರಣ.

     ಅಲ್ಲಿಂದ ಸೀದಾ ರಾಜೀವ್ ತಾರಾನಾಥರ ಅವಲಹಳ್ಳಿಯ ಮನೆಗೆ ಹೋದೆವು. ಅರ್ಧ ಜಾಗದಲ್ಲಿ ಮನೆ, ಉಳಿದರ್ಧ ಜಾಗದಲ್ಲಿ ತರಕಾರಿ ಗಿಡಗಳನ್ನು ಹಾಕಿದ್ದ ನೆನಪು. ಹಾಲ್‌ನಲ್ಲಿ ಟಿ.ವಿ. ನೋಡುತ್ತಾ ಕುಳಿತಿದ್ದ ರಾಜೀವ್ ತಾರಾನಾಥರು ಖುಷಿಯಿಂದ ಬರ ಮಾಡಿಕೊಂಡರು. ಅವರು ಕುಳಿತಿದ್ದ ಹಿಂಭಾಗದ ಗೋಡೆಗೆ ಅವರದ್ದೇ ಕ್ಯಾರಿಕೇಚರ್ ತಗುಲಾಕಿದ್ದರು. ಅವರಿಗೆ ರಿಜಿಸ್ಟ್ರೇಷನ್ ಕೆಲಸ ಮುಗಿದಿದ್ದು ಖುಷಿ ತಂದಿತ್ತು. "ಆ ಹುಡುಗ ಮೇಲಾತಿಯವನು. ಆತನ ತಂದೆ ರಿಯಲ್ ಎಸ್ಟೇಟ್ ಮಾಡ್ತಾನೆ. ಗೊತ್ತಾದರೆ ಒಟ್ಟಿಗೆ ಇರೋಕೆ ಬಿಡಲ್ಲ, ಅದಕ್ಕೆ ಈ ರಿಜಿಸ್ಟ್ರೇಷನ್ನು" ಎಂದು ಅವರು ಮದುವೆ ನೋಂದಣಿಯ ಹಿನ್ನಲೆಯನ್ನು ಹೇಳಿದರು. ಶಾಮಣ್ಣನವರು ಅವರು ಅಲ್ಲಿಂದ ಬಂದ ನಂತರ ನಡೆದ ಘಟನಾವಳಿಗಳ ಬಗ್ಗೆ ತಮ್ಮದೇ ತಮಾಷೆಯ ಶೈಲಿಯಲ್ಲಿ ಅವರಿಗೆ ಹೇಳತೊಡಗಿದರು. ನಾವು ಮದುವೆ ರಿಜಿಸ್ಟ್ರೇಷನ್ ಮಾಡಿಸಿದ ಹುಡುಗಿಯೇ ಓಡಾಡಿಕೊಂಡು ನಮಗೆ ಊಟದ ತಯಾರಿ ಮಾಡುತ್ತಿತ್ತು. ತಾರಾನಾಥರ ಬಳಿ ಕಿ.ರಂ.ನಾಗರಾಜರ ಸಂಬAಧಿ ಹೆಣ್ಣು ಮಗಳೊಬ್ಬರು ಸರೋದ್ ಕಲಿಯಲು ಬರುತ್ತಿದ್ದರು. ಅವರೂ ನಮಗೆ ಊಟಕ್ಕೆ ಅಡುಗೆ ಮಾಡಲು ಓಡಾಡುತ್ತಿದ್ದರು ಮತ್ತು ಹೋಟೆಲ್‌ನಿಂದ ಚಿಕನ್ ತರಿಸಿದರು.

    ಆ ವೇಳೆಗಾಗಲೇ ರಾಜೀವ್ ತಾರಾನಾಧರಿಗೆ ಹತ್ತಿರತ್ತಿರ ಎಪ್ಪತ್ತು ವರ್ಷ ಆಗಿತ್ತು ಅಥವಾ ದಾಟಿತ್ತು. ಟಿ.ವಿ.ಯಲ್ಲಿ ಕ್ರಿಕೆಟ್ ಬರುತ್ತಿತ್ತು. ಧೋನಿ ಬ್ಯಾಟಿಂಗ್ ಮಾಡುತ್ತಿದ್ದರು. ನಾನು ಅವರ ಪಕ್ಕ ಕುಳಿತಿದ್ದೆ. "ಈ ಧೋನಿ ಇದ್ದಾನಲ್ಲ, ಚೆನ್ನಾಗಿ ರನ್ ವಡೀತಾನೆ, ಆದರೆ ಕ್ಲಾಸಿಕಲ್ ಬ್ಯಾಟ್ಸ್ಮನ್ ಅಲ್ಲ. ಬಗ್ಗಾಲು ಹಾಕಿದವನಂತೆ ಓಡ್ತಾನೆ" ಎಂದು ಅವರು ರಾಹುಲ್ ದ್ರಾವಿಡ್ ಮತ್ತು ಲಕ್ಷ್ಮಣ್ ರನ್ನು ಹೊಗಳಿದರು. ಅದು ಧೋನಿ ಆಗಿನ್ನೂ ಛಾಪು ಮೂಡಿಸುತ್ತಿದ್ದ ಕಾಲ.

     ರಾಜೀವ್ ತಾರಾನಾಥರು ಮತ್ತು ಶಾಮಣ್ಣನವರು ಬಹಳ ಕಾಲದ ಸ್ನೇಹಿತರು ಮತ್ತು ಸರೋದ್ ಜೋಡಿಗಳು. ಊಟ ಮುಗಿದು ಸ್ವಲ್ಪ ಹೊತ್ತು ಹರಟೆ ಹೊಡೆದ ಮೇಲೆ ನಿಮಗೆ ಸರೋದ್ ಬಗ್ಗೆ ಗೊತ್ತಾ? ಎಂದು ತಾರಾನಾಥರು ಕೇಳಿದರು. ನನಗಾಗಲೀ, ನನ್ನ ಜೊತೆಗೆ ಬಂದಿದ್ದ ನನ್ನ ಸ್ನೇಹಿತರಿಗಾಗಲಿ ಅದರ ಗಂಧ ಗಾಳಿಯೂ ಗೊತ್ತಿರಲಿಲ್ಲ. ನಮ್ಮ ಪೇಚಾಟ ಅರ್ಥ ಮಾಡಿಕೊಂಡ ಅವರು ಶಾಮಣ್ಣನ ಕಡೆ ನೋಡಿದರು. ಶಾಮಣ್ಣನವರು ". ಬರೀ ವಕೀಲ್ವೇ..." ಅಂತ ಕರೆದರು. ಅವರಿಬ್ಬರು ನನ್ನನ್ನು ಮತ್ತು ನನ್ನ ಜೊತೆಗೆ ಬಂದಿದ್ದ ನಟರಾಜ್ ಅವರನ್ನು ಕರೆದುಕೊಂಡು ಮೊದಲ ಮಹಡಿಯಲ್ಲಿದ್ದ ಒಂದು ರೂಮ್‌ಗೆ ಹೋದರು. ಅದು ರಾಜೀವ್ ತಾರಾನಾಥರು ಏಕಾಂತದಲ್ಲಿ ಸರೋದ್ ನುಡಿಸಲು ಮಾಡಿಕೊಂಡಿದ್ದ ರೂಮ್ ಎಂದು ನೋಡಿದ ಕೂಡಲೇ ತಿಳಿಯಿತು. ಒಂದು ಕಾರ್ಪೆಟ್ ಅನ್ನು ನೆಲದ ಮೇಲೆ ಹಾಸಿ ನಮಗೂ ಕುಳಿತುಕೊಳ್ಳಲು ಹೇಳಿ ಮೃದುವಾದ ಬಟ್ಟೆ ಹೊದಿಸಿದ್ದ ಸರೋದ್ ಅನ್ನು ಮಗುವನ್ನು ಎತ್ತಿಕೊಳ್ಳುವಂತೆ ಎತ್ತಿಕೊಂಡು ಹಾಸಿದ್ದ ಕಾರ್ಪೆಟ್ ಮೇಲೆ ಚಕ್ಕಳಮಕ್ಕಳ ಹಾಕಿದಂತೆ ಕೂತು ಬಲಗಾಲನ್ನು ಎತ್ತಿ ಎಡತೊಡೆಯ ಪಕ್ಕಕ್ಕೆ ಇಟ್ಟು ಸರೋದ ಅನ್ನು ಕೈಗೆತ್ತಿಕೊಂಡು ಅದರ ಬಗ್ಗೆ ಬಣ್ಣಿಸಿ "ಹೇಗೆ ಸರೋದ್ ಹಿಡಿದುಕೊಳ್ಳಬೇಕು, ಹೇಗೆ ತಂತಿ ಮೀಟಬೇಕು..." ಇತ್ಯಾದಿ ಹೇಳಿದ ನಂತರ ಸುಮಾರು ಹದಿನೈದು ನಿಮಿಷಗಳಷ್ಟು ಸಮಯ ನುಡಿಸಿ ತೋರಿಸಿದರು. ಅವರು ನುಡಿಸುತ್ತಿದ್ದರೆ ಶಾಮಣ್ಣ ಕಾಮೆಂಟ್ರಿ ಕೊಡುತ್ತಿದ್ದರು. ಹೀಗೆ ನಡೆದ ಸಂಗೀತ ಕಛೇರಿಯಿಂದ ನಾವು ಥಿಲ್ ಆಗಿದ್ದೇನೋ ನಿಜ, ಆದರೆ ಅದರ ಆಳ ಅಗಲ, ಆ ಸಂಗೀತದ ಮಾಂತ್ರಿಕತೆ ಇದ್ಯಾವುದು ನನಗೆ ಗೊತ್ತಾಗಲಿಲ್ಲ. ಇದಕ್ಕೆ ಸಂಗೀತದ ಬಗ್ಗೆ ನನಗಿರುವ ಅಜ್ಞಾನವೇ ಕಾರಣ.

    ಮತ್ತೆ ಕೆಳಗಡೆ ಬಂದು ಕೂತ ಕೂಡಲೇ ರಾಜೀವ್ ತಾರಾನಾಥರು ತುಂಬಾ ಹುರುಪಿನಿಂದ ಮಾತನಾಡ ತೊಡಗಿದರು. ತುಂಬಾ ವಿಷಯಗಳನ್ನು ಮಾತನಾಡಿದರು. ಆದರೆ ಈಗ ನೆನಪಾಗುತ್ತಿಲ್ಲ. ನೀವು ಈಗಲೂ ಅಭ್ಯಾಸ ಮಾಡುತ್ತೀರ? ಎಂದು ನಾನು ಕೇಳಿದ ಪ್ರಶ್ನೆಗೆ " ಹೌದು.. ನಾನಿನ್ನು ಸಂಗೀತದ ವಿದ್ಯಾರ್ಥಿ. ನಾನು ಕಲಿತಿರುವುದು ಬಹಳ ಕಡಿಮೆ. ಇನ್ನು ಕಲಿಯುವುದು ಬಹಳಷ್ಟಿದೆ.

     ನಿತ್ಯ ಬೆಳಿಗ್ಗೆ ನಾನು ಅಭ್ಯಾಸ ಮಾಡುತ್ತೇನೆ" ಎಂಬ ಉತ್ತರ ಕೊಟ್ಟು ಅವರ ಗುರುಗಳಾದ ಉಸ್ತಾದ್ ಅಲಿ ಅಕ್ಸರ್ ಖಾನ್ ಬಗ್ಗೆ ಅತ್ಯಂತ ಅಭಿಮಾನದಿಂದ ಮಾತನಾಡಿದ್ದಲ್ಲದೆ ಅವರ ಗುರುಗಳ ಲವ್ ಸ್ಟೋರಿ ಬಗ್ಗೆಯೂ ಹೆಮ್ಮೆಯಿಂದ ಹೇಳಿಕೊಂಡರು. ಅನಂತರ "ದರಿದ್ರದ ಊರು ಕಣೋ ಇದು" ಅಂತ ಬೆಂಗಳೂರನ್ನು ಬೈಯ್ದುಕೊಳ್ಳಲು ಶುರು ಮಾಡಿದ ಮಾತಿನಿಂದ ಸ್ಫೂರ್ತಿ ಪಡೆದ ಶಾಮಣ್ಣನವರು " ಹೌದು ಮಾರಾಯ್ತ..ಅದಕ್ಕೇ ಎರಡ್ ದಿನದ ಮೇಲೆ ನನಗೆ ಇಲ್ಲಿ ಇರೋಕ್ಕಾಗಲ್ಲ" ಎಂದು ನಕ್ಕರು.

    ಸ್ವಲ್ಪ ಹೊತ್ತಿನ ಮಾತುಕತೆ ನಂತರ ನಾವು ಹೊರಡಲು ಸಿದ್ಧವಾದವು. ಎರಡು ಸಿ.ಡಿ. ತರಿಸಿದರು. ಅದರ ಮೇಲೆ ಸಹಿ ಮಾಡಿ ನನಗೊಂದು, ನಟರಾಜರಿಗೊಂದು ನೀಡಿ "ಇದರಲ್ಲಿ ನಾನು ಸರೋದ್ ನುಡಿಸಿರೋದು ಇದೆ" ಎಂದು ಹೇಳಿ ಎದ್ದು ಹೊರಗಡೆಯ ತನಕ ಬಂದು ನಮ್ಮನ್ನು ಬೀಳ್ಕೊಟ್ಟರು. ನಾವು ಶಾಮಣ್ಣರನ್ನು ಕರೆದುಕೊಂಡು ಹೊರೆಟೆವು. ಕಾರಿನಲ್ಲಿ ಬರುವಾಗ ಶಾಮಣ್ಣನವರ ತಮಾಷೆ ಪ್ರಸಂಗಗಳು ಬೆಂಗಳೂರು ಟ್ರಾಫಿಕ್ ನಮ್ಮ ಗಮನಕ್ಕೆ ಬರದಂತೆ ಮಾಡಿದ್ದವು.

     ಅಷ್ಟು ದೊಡ್ಡ ಮನುಷ್ಯ ಅತ್ಯಂತ ಸರಳವಾಗಿ ಇದ್ದರು. ಬಹಳ ಕಾಲದ ಪರಿಚಯವೇನೋ ಎಂಬಂತೆ ನಮ್ಮ ಜತೆ ಬೆರೆತಿದ್ದರು. ಯಾವ ಹಮ್ಮು ಬಿಮ್ಮು ಇರಲಿಲ್ಲ. ನೇರಾನೇರ ಮಾತು. ಆಳವಾದ ತಿಳುವಳಿಕೆ, ಆಕಾರದಲ್ಲೂ ದೈತ್ಯ, ಪ್ರತಿಭೆಯಲ್ಲೂ ದೈತ್ಯ. ತುಂಬಿದ ಕೊಡ ತುಳುಕಲ್ಲ ಎಂಬಂತಹ ನಡೆ. ಮನೆಯಲ್ಲಿ ಕೆಲಸ ಮಾಡುವ ಹುಡುಗಿಯ ಮದುವೆ ಮಾಡಿಸಲು ಅಷ್ಟು ಕಾಳಜಿ ವಹಿಸಿ ಖುದ್ದಾಗಿ ಸಬ್ ರಿಜಿಸ್ಟ್ರಾರ್ ಆಫೀಸಿನ ತನಕ ಧಾವಿಸಿದ್ದರು. ಅವರು ವಹಿಸಿದ ಕಾಳಜಿ ನನಗೆ ಬಹಳ ಮುಖ್ಯ ಅನ್ನಿಸಿತ್ತು.. ಅದಾದ ಸ್ವಲ್ಪ ವರ್ಷಗಳ ನಂತರ ಅವರು ಮೈಸೂರಿಗೆ ಶಿಫ್ಟ್ ಆದರು ಎಂದು ತಿಳಿಯಿತು. ಮತ್ತೆ ಭೇಟಿಯಾಗಲಿಲ್ಲ, ಆಗುವ ಅವಕಾಶವೂ ಇಲ್ಲವಾಯಿತು.