ದಾಖಲೆ ಮಂಡಿಸಿ- ತನಿಖೆ ಎದುರಿಸಲು ಸಿದ್ಧ: ಗುತ್ತಿಗೆದಾರರ ಸಂಘ  4 ಮುಖ್ಯ ಇಂಜಿನಿಯರ್‌ಗಳು, 26 ಶಾಸಕರು ತಕ್ಷಣ ಅಧಿಕಾರ ಬಿಡಬೇಕಾಗುತ್ತದೆ: ಡಿ.ಕೆಂಪಣ್ಣ  

ದಾಖಲೆ ಮಂಡಿಸಿ- ತನಿಖೆ ಎದುರಿಸಲು ಸಿದ್ಧ: ಗುತ್ತಿಗೆದಾರರ ಸಂಘ  4 ಮುಖ್ಯ ಇಂಜಿನಿಯರ್‌ಗಳು, 26 ಶಾಸಕರು ತಕ್ಷಣ ಅಧಿಕಾರ ಬಿಡಬೇಕಾಗುತ್ತದೆ: ಡಿ.ಕೆಂಪಣ್ಣ  

ದಾಖಲೆ ಮಂಡಿಸಿ- ತನಿಖೆ ಎದುರಿಸಲು ಸಿದ್ಧ: ಗುತ್ತಿಗೆದಾರರ ಸಂಘ  4 ಮುಖ್ಯ ಇಂಜಿನಿಯರ್‌ಗಳು, 26 ಶಾಸಕರು ತಕ್ಷಣ ಅಧಿಕಾರ ಬಿಡಬೇಕಾಗುತ್ತದೆ: ಡಿ.ಕೆಂಪಣ್ಣ  

 

ದಾಖಲೆ ಮಂಡಿಸಿ- ತನಿಖೆ ಎದುರಿಸಲು ಸಿದ್ಧ: ಗುತ್ತಿಗೆದಾರರ ಸಂಘ 
4 ಮುಖ್ಯ ಇಂಜಿನಿಯರ್‌ಗಳು, 26 ಶಾಸಕರು
ತಕ್ಷಣ ಅಧಿಕಾರ ಬಿಡಬೇಕಾಗುತ್ತದೆ: ಡಿ.ಕೆಂಪಣ್ಣ  


ತುಮಕೂರು: ನಮ್ಮಲ್ಲಿರುವ ದಾಖಲೆಗಳನ್ನು ಬಿಡುಗಡೆ ಮಾಡಿದಲ್ಲಿ ರಾಜ್ಯದ ನಾಲ್ವರು ಮುಖ್ಯ ಇಂಜಿನಿಯರ್‌ಗಳು ಹಾಗೂ 26 ಶಾಸಕರು ತಕ್ಷಣ ಅಧಿಕಾರ ಬಿಡಬೇಕು, ಅಂಥ ಲೀಗಲ್ ದಾಖಲೆಗಳು ನಮ್ಮಲ್ಲಿವೆ, ಸಮಯ ಬಂದಾಗ ಬಿಡುಗಡೆ ಮಾಡುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಘೋಷಿಸಿದರು.


ಅವರು ಶುಕ್ರವಾರ ನಗರದ ಕನ್ನಡ ಭವನದಲ್ಲಿ ತುಮಕೂರು ನಗರ ಗುತ್ತಿಗೆದಾರರ ಸಂಘವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಒಂದು ಸ್ವತಂತ್ರ ತನಿಖಾ ಆಯೋಗವನ್ನು ನೇಮಿಸಿದಲ್ಲಿ ನಮ್ಮಲ್ಲಿರುವ ದಾಖಲೆಗಳನ್ನು ಮಂಡಿಸುತ್ತೇನೆ, ನಮ್ಮ ಆಪಾದನೆಯನ್ನು ನಾವು ಸಾಬೀತು ಪಡಿಸುವಲ್ಲಿ ವಿಫಲರಾದರೆ ಸರ್ಕಾರ ಹೇಳಿದಂತೆ ಕೇಳಲು ಸಿದ್ಧ ಎಂದು ಪ್ರಕಟಿಸಿದರು.


ಇಡೀ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗುತ್ತಿಗೆದಾರರಿದ್ದು ಕೊರೊನಾ ಸೋಂಕು ಕಡಿಮೆಯಾದ ಮೇಲೆ ಬೆಂಗಳೂರಿನಲ್ಲಿ ಕನಿಷ್ಟ 50 ಸಾವಿರ ಗುತ್ತಿಗೆದಾರರನ್ನು ಸೇರಿಸಿ ಸಮಾವೇಶ ಏರ್ಪಡಿಸಲಾಗುವುದು ಎಂದ ಕೆಂಪಣ್ಣನವರು, 


ಪ್ಯಾಕೇಜ್ ಸಿಸ್ಟಮ್‌ನಿಂದಾಗಿ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸವೇ ಇಲ್ಲದಂತಾಗಿದೆ. ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳೂ ವ್ಯವಸ್ಥೆಯ ಭಾಗವಾಗಿ ಅಸಹಾಯಕರಾಗಿದ್ದಾರೆ. ಗುತ್ತಿಗೆದಾರರಿಗೆ ಸರ್ಕಾರದಿಂದ 22 ಸಾವಿರ ಕೋಟಿ ರೂ ಬಾಕಿ ಬರಬೇಕಾಗಿದೆ. ಅನುದಾನ ಬಿಡುಗಡೆ ಮಾಡಲೂ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದರು ಕೆಂಪಣ್ಣ.


ಎಲ್ ಅಂಡ್ ಟಿ ಮತ್ತು ಮೆಘಾ ಗ್ಯಾಸ್, ಗೇಲ್ ಸೇರಿ ತುಮಕೂರು ಮಹಾನಗರ ಪಾಲಿಕೆಯಲ್ಲಿ ನಾಲ್ಕು ಕಂಪನಿಗಳು ಕಾಮಗಾರಿ ನಡೆಸುತ್ತಿವೆ, ಈ ಕಂಪನಿಗಳು ಕೆಲಸವನ್ನು ಸಕಾಲದಲ್ಲಿ ಮಾಡಿ ಮುಗಿಸುವುದಿಲ್ಲ, ಈ ಕಂಪನಿಗಳ ನೌಕರರು ಪಾಲಿಕೆಯ ಯಾರ ಮಾತನ್ನೂ ಕೇಳುವುದಿಲ್ಲ, ಅವರಿಗೆ ಬೇಕು ಬೇಕಾದಾಗ ಕೆಲಸ ಮಾಡುತ್ತಾರೆ, ವರ್ಷಗಳು ಕಳೆದರೂ ಕೆಲಸ ಮುಗಿಸುತ್ತಿಲ್ಲ, ಇಡೀ ಪಾಲಿಕೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ನೌಕರರಿಗೆ ದುಂಬಾಲು ಬೀಳಬೇಕು, ಮೊನ್ನೆ ಮೆಘಾ ಗ್ಯಾಸ್‌ನವರ ಸಾಮಗ್ರಿಗಳನ್ನು ಕಿತ್ತುಕೊಂಡ ಬಳಿಕವಷ್ಟೇ ಅವರ ಪ್ರತಿನಿಧಿ ನಮ್ಮ ಮುಂದೆ ಹಾಜರಾಗಿದ್ದು, ಸ್ಥಳೀಯರಿಗೆ ಕೆಲಸ ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಪಾಲಿಕೆ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಧರಣೇಂದ್ರಕುಮಾರ್ ವಿವರಿಸಿದರು. 


ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಬಹಳಷ್ಟು ಸಂಘಗಳು ಉದ್ಘಾಟನೆಯಾದ ಬಳಿಕ ಹಾಗೇ ಸ್ಥಗಿತಗೊಳ್ಳುತ್ತವೆ. ಗುತ್ತಿಗೆದಾರರ ಸಂಘವೂ ಹಾಗಾಗದಿರಲಿ ಎಂದು ಆಶಿಸಿದರು.


ಮಹಾನಗರಪಾಲಿಕೆ ಹಂಗಾಮಿ ಅಧೀಕ್ಷಕ ಇಂಜಿನಿಯರ್ ಜಿ.ಕೆ.ಆಶಾ ಮಾತನಾಡಿ, ಹೊರಗಡೆಯಿಂದ ಬರುವ ಗುತ್ತಿಗೆದಾರರಿಗೆ ಯಾವುದೇ ಬದ್ಧತೆ ಇರುವುದಿಲ್ಲ, ಕೇವಲ ಕೆಲಸ ಮತ್ತು ಲಾಭಕ್ಕಾಗಿ ಬರುತ್ತಾರೆ. ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಸಿಕ್ಕಿದಲ್ಲಿ ಅವರು ಬದ್ಧತೆಯಿಂದ ಕೆಲಸ ಮಾಡುತ್ತಾರೆ ಎಂದರು.


ಮೇಯರ್ ಬಿ.ಜಿ.ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಸೈಯದ್ ನಯಾಜ್, ಮಹೇಶ್, ಪಾಲಿಕೆಯ ಕಾರ್ಯಪಾಲಕ ಇಂಜಿನಿಯರ್‌ಗಳಾದ ಬಿ.ಕೆ.ಆಶಾ, ಸುರೇಶ್, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ಬಿ.ಪಿ.ಸುರೇಶ್ ಕುಮಾರ್, ಕೋದಂಡರಾಮು, ಆರ್.ವಿಜಯಕುಮಾರ್, ಡಿ.ಭಾನುಪ್ರಕಾಶ್ ಮೊದಲಾದವರು ವೇದಿಕೆಯಲ್ಲಿದ್ದು ಮಾತನಾಡಿದರು. ಅನುಷಾ ನಿರೂಪಿಸಿದರು.

 

‘ಗುಲಾಮರಂತಾಗಿರುವ ಗುತ್ತಿಗೆದಾರರು’
ಸಂಘದ ಜಿಲ್ಲಾಧ್ಯಕ್ಷ ಎ.ಡಿ.ಬಲರಾಮಯ್ಯ ಆರೋಪ


ತುಮಕೂರು: ಸರ್ಕಾರ ಮತ್ತು ಅಧಿಕಾರಿಗಳು ಗುತ್ತಿಗೆದಾರರನ್ನು ಗುಲಾಮರನ್ನಾಗಿ ಮಾಡಿಕೊಂಡಿವೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಡಿ.ಬಲರಾಮಯ್ಯ ಆಪಾದಿಸಿದರು.


ತುಮಕೂರು ನಗರ ಗುತ್ತಿಗೆದಾರರ ಸಂಘದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮೈತ್ರಿ ಸರ್ಕಾರಗಳು ಬಂದ ನಂತರ ಗುತ್ತಿಗೆ ವ್ಯವಸ್ಥೆ ಬಹಳ ಹೊಲಸಾಗಿದೆ. ಕಾಂಗ್ರೆಸ್-ದಳ, ದಳ - ಬಿಜೆಪಿ, ಕಾಂಗ್ರೆಸ್-ದಳ ಹೀಗೆ ಮೈತ್ರಿ ಸರ್ಕಾರಗಳ ಅವಧಿಯಲ್ಲಿ ಗುತ್ತಿಗೆದಾರರಿಗೆ ಕಿರುಕುಳ ಹೆಚ್ಚಾಯಿತು ಎಂದು ಅಭಿಪ್ರಾಯ ಪಟ್ಟರು. 


ಈಗ ಸರ್ಕಾರದಲ್ಲಿ ಕಾಮಗಾರಿಗಳ ಕುರಿತ ಬಜೆಟ್ ಪುಸ್ತಕಗಳೇ ಪ್ರಕಟವಾಗುತ್ತಿಲ್ಲ, ಗ್ರಾಂಟ್‌ಗಳನ್ನು ಬಿಡುಗಡೆ ಮಾಡುವುದೇ ಒಂದು ದೊಡ್ಡ ದಂಧೆಯಾಗಿಬಿಟ್ಟಿದೆ. ಪ್ಯಾಕೇಜ್ ಹೆಸರಿನಲ್ಲಿ ತಮಗೆ ಬೇಕಾದವರಿಗೆ ಕಾಮಗಾರಿಗಳನ್ನು ಇಡಿಯಾಗಿ ಒಬ್ಬರಿಗೇ ಕೊಡಲಾಗುತ್ತಿದೆ. ಬಹಳಷ್ಟು ಇಂಜಿನಿಯರ್‌ಗಳ ಮಕ್ಕಳೇ ಈಗ ಗುತ್ತಿಗೆದಾರಾಗಿಬಿಟ್ಟಿದ್ದಾರೆ ಎಂದು ಬಲರಾಮಯ್ಯ ಆಪಾದಿಸಿದರು.


ಗುತ್ತಿಗೆ ನೀಡುವಲ್ಲಿ ಮತ್ತು ಬಿಲ್ ಮೊತ್ತ ಬಿಡುಗಡೆ ಮಾಡೋದರಲ್ಲಿ ಒಂದೊAದು ಇಲಾಖೆಗಳು ಒಂದೊAದು ನಿಯಮಗಳನ್ನು ಪಾಲಿಸುತ್ತಿದ್ದಾರೆ. ಎಲ್ಲವೂ ಅಧಿಕಾರಿ-ರಾಜಕಾರಣಿಗಳ ಮನಸೋ ಇಚ್ಚೆ (ವಿಮ್ಸ್ ಅಂಡ್ ಫ್ಯಾನ್ಸೀಸ್) ಆಗಿ ಬಿಟ್ಟಿದೆ. ಅವರಿಗೆ ಬೇಕಾದವರಿಗೆ ಕೆಲಸ ಕೊಡುವ ಸಲುವಾಗಿ ಹೀಗೆ ಮಾಡಲಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. 


ಒಂದು ವಿಧಾನ ಸಭಾ ಕ್ಷೇತ್ರಕ್ಕೆ 50 ಕೋಟಿ ರೂ, ಇನ್ನೊಂದು ಕ್ಷೇತ್ರಕ್ಕೆ 500 ಕೋಟಿ ಕೊಡ್ತಾರೆ. ಗುತ್ತಿಗೆದಾರರಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಹೊರಗಿನ ಗುತ್ತಿಗೆದಾರರು ಹೆಚ್ಚಿನ ಕೆಲಸಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹೊರಗಿನಿಂದ ಬಂದ ಗುತ್ತಿಗೆದಾರರು ನಕಲಿ ದಾಖಲೆಗಳನ್ನು ಸಲ್ಲಿಸುತ್ತಿದ್ದರೂ, ಅವುಗಳನ್ನು ಪರಿಶೀಲಿಸದೇ ಗುತ್ತಿಗೆ ನೀಡಲಾಗುತ್ತಿದೆ ಎಂದರು.
***************