ಅಂಗವೈಕಲ್ಯ ದೇಹಕ್ಕಷ್ಟೇ, ಮನಸ್ಸಿಗಲ್ಲ: ಸಚಿವ ಜೆ.ಸಿ. ಮಾಧುಸ್ವಾಮಿ

ಅಂಗವೈಕಲ್ಯ ದೇಹಕ್ಕಷ್ಟೇ, ಮನಸ್ಸಿಗಲ್ಲ: ಸಚಿವ ಜೆ.ಸಿ. ಮಾಧುಸ್ವಾಮಿ

ಅಂಗವೈಕಲ್ಯ ದೇಹಕ್ಕಷ್ಟೇ, ಮನಸ್ಸಿಗಲ್ಲ: ಸಚಿವ ಜೆ.ಸಿ. ಮಾಧುಸ್ವಾಮಿ


ತುಮಕೂರು : ಯಾವುದೇ ಕಾರ್ಯ ಮಾಡಬೇಕೆಂದರೂ ಮೊದಲು ಮನಸ್ಸು ಸದೃಢವಾಗಿರಬೇಕು. ಅಂಗವೈಕಲ್ಯ ಎಂಬುದು ದೇಹಕ್ಕಷ್ಟೇ ವಿನಃ ಮನಸ್ಸಿಗಲ್ಲ ಎಂದು ಕಾನೂನು ಸಂಸದೀಯ ವ್ಯವಹಾರ, ಶಾಸನ ರಚನೆ, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆಯ ಜಿಲ್ಲಾ ಬಾಲಭವನದಲ್ಲಿಂದು ೭೫ನೇ ಸ್ವಾತಂತ್ರö್ಯ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ “ಯಂತ್ರ ಚಾಲಿತ ತ್ರಿಚಕ್ರ ವಾಹನ ಮತ್ತು ಇಲಾಖೆಯ ವಿವಿಧ ಯೋಜನೆಯಡಿ ಇತರೆ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  
ಗಾಂಧಿ ಜಯಂತಿ ಪ್ರಯುಕ್ತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಬ್ರಿಟೀಷರ ದಬ್ಬಾಳಿಕೆ ಹಾಗೂ ದಾಸ್ಯದಿಂದ ನಮ್ಮನ್ನೆಲ್ಲ ಮುಕ್ತಗೊಳಿಸಿ ಸ್ವಾಭಿಮಾನದಿಂದ ಬದುಕು ನಡೆಸಲು ತಮ್ಮನ್ನೇ ಅರ್ಪಿಸಿಕೊಂಡ ದೇಶದ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.
ಶಕ್ತಿಯಿಲ್ಲದ ಅಬಲರಿಗೆ ಶಕ್ತಿ ತುಂಬುವ ಉದ್ದೇಶದಿಂದ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ವಿಕಲಚೇತನರಿಗಾಗಿ ಯಂತ್ರಚಾಲಿತ ತ್ರಿಚಕ್ರ ವಾಹನ, ಬ್ರೆöÊಲ್ ಕಿಟ್, ಟಾಕಿಂಗ್ ಲ್ಯಾಪ್‌ಟಾಪ್, ಹೊಲಿಗೆ ಯಂತ್ರ ಸೇರಿದಂತೆ ಅವಶ್ಯವಿರುವ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ಫಲಾನುಭವಿಗಳು ಈ ಯೋಜನೆಗಳ ಸದುಪಯೋಗವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ದೇಹದ ಒಂದು ಅಂಗದ ನ್ಯೂನ್ಯತೆ ಇದ್ದರೆ ದೇವರು ಮತ್ತೊಂದು ಅಂಗದಲ್ಲಿ ಶಕ್ತಿ ಸಾಮರ್ಥ್ಯ ಕೊಟ್ಟಿರುತ್ತಾರೆ. ದೇಹಕ್ಕೆ ಊನವಾದರೂ ಮಾನಸಿಕವಾಗಿ ದೃಢವಾಗಿರುವುದು ತುಂಬಾ ಮುಖ್ಯ. ಮನುಷ್ಯ ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು. ನಮ್ಮ ಸಾಮರ್ಥ್ಯವನ್ನು ನಾವೇ ಕಂಡುಕೊಳ್ಳುವ ಮೂಲಕ ಅವಲಂಬನೆಯನ್ನು ತ್ಯಜಿಸಬೇಕು. ಮಹಾನ್ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ವಿಕಲಚೇತನರಿಗೆ ಸೌಲಭ್ಯ ವಿತರಿಸುತ್ತಿರುವುದು ಬಹಳ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ೧೫ ಹೊಲಿಗೆ ಯಂತ್ರ, ೫೦ ಯಂತ್ರಚಾಲಿತ ತ್ರಿಚಕ್ರ ವಾಹನ, ೧೫ ಬ್ರೆöÊಲ್ ಕಿಟ್ ೮ ಟಾಕಿಂಗ್ ಲ್ಯಾಪ್‌ಟಾಪ್ ಸೇರಿದಂತೆ ಒಟ್ಟು ೮೮ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ವಿತರಿಸಲಾಯಿತು.  
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಶ್ರೀಧರ್, ಡಿಡಿಪಿಐ ಸಿ. ನಂಜಯ್ಯ ಇದ್ದರು. 
ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಗೆ ಸೂಚನೆ:


ನಂತರ ಜಿಲ್ಲೆಯಲ್ಲಿರುವ ಅಪೌಷ್ಟಿಕ ಮಕ್ಕಳ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಪತ್ರಕತ್ರರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಸಚಿವ ಮಾಧುಸ್ವಾಮಿ ಜಿಲ್ಲೆಯಲ್ಲಿ ಸುಮಾರು ೬೦೦೦ ಮಕ್ಕಳನ್ನು ಅಪೌಷ್ಟಿಕ ಮಕ್ಕಳೆಂದು ಗುರುತಿಸಿದ್ದು, ಇವರಲ್ಲಿ ತೀವ್ರ ಅಪೌಷ್ಟಿಕತೆಯಿಂದ ಕೂಡಿರುವ ೨೦೦೦ ಮಕ್ಕಳಿಗೆ ಪೌಷ್ಟಿಕ ಆಹಾರ, ಸ್ಪಿರುಲಿನ ಚಿಕ್ಕಿ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಸ್ಪಿರುಲಿನ ಚಿಕ್ಕಿ ಹಾಗೂ ಪೌಷ್ಟಿಕ ಆಹಾರವನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ಅಲ್ಲದೆ ಶಾಲೆಗಳಲ್ಲಿ ಮಕ್ಕಳಿಗೆ ವಿಶೇಷವಾಗಿ ಪೌಷ್ಟಿಕಯುಕ್ತ ಹಾಲಿನ ಪುಡಿಯನ್ನು ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  
ಜಿಲ್ಲೆಯಲ್ಲಿ ವೈರಲ್ ಫೀವರ್ ಹೆಚ್ಚಾಗುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಸ್ಪಂದಿಸಿದ ಸಚಿವರು,  ವಾತಾವರಣ ಬದಲಾವಣೆಯೂ ವೈರಲ್ ಫೀವರ್ ಹೆಚ್ಚಾಗಲು ಕಾರಣವಾಗಿದೆ. ಕೋವಿಡ್ ನಂತರ ಆರೋಗ್ಯ ಸೇವೆ ಉತ್ತಮವಾಗಿದೆ.  ಎಲ್ಲ ರೀತಿಯ ವೈದ್ಯಕೀಯ ತಪಾಸಣೆಗಳನ್ನು ತಾಲೂಕು ಮಟ್ಟದಲ್ಲಿಯೂ ಮಾಡಲಾಗುತ್ತಿದೆ. ಈ ಮುಂಚೆ ಸಣ್ಣ ವೈರಲ್ ಪರೀಕ್ಷೆಗೂ ತುಮಕೂರಿಗೆ ಬರಬೇಕಾಗಿತ್ತು. ಪ್ರಸ್ತುತ ಎಲ್ಲ ತಾಲೂಕುಗಳಲ್ಲಿಯೂ ಆಮ್ಲಜನಿಕ ಸೇರಿದಂತೆ ವೈದ್ಯಕೀಯ ತಪಾಸಣೆಗೆ ಅವಕಾಶ ಕಲ್ಪಿಸಿರುವುದರಿಂದ ಇನ್ನು ಮುಂದೆ ಯಾವುದೇ ಆರೋಗ್ಯ ಸಮಸ್ಯೆ ಬಾಧಿಸುವುದಿಲ್ಲ ಎಂದರಲ್ಲದೆ ಕೋವಿಡ್‌ನಿಂದ ಮೃತಪಟ್ಟವರಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಪರಿಹಾರ ನೀಡಲಾಗುವುದೆಂದು ತಿಳಿಸಿದರು.

ವ್ಹೀಲ್ ಚೇರ್ ಮೇಲೆ ಕುಳಿತೇ ಅಭಿನಯಿಸಿದರು!


ಗುಬ್ಬಿ ನಾಟಕ ಕಂಪನಿಯಲ್ಲಿ ನಟನೆ ಮಾಡುವ ಮೂಲಕ ಜೀವನ ಕಟ್ಟಿಕೊಂಡ ನಮ್ಮ ತಾಯಿ ನಟನೆ ಮಾಡುವ ಸಂದರ್ಭದಲ್ಲಿ ವಿದ್ಯುತ್ ಅವಘಡದಿಂದ ಅಂಗ ವೈಫಲ್ಯಕ್ಕೆ ತುತ್ತಾದರು. ಆದರೂ ಛಲ ಬಿಡದೆ ವ್ಹೀಲ್ ಛೇರ್ ಮೇಲೆಯೇ ಯಾರೊಬ್ಬರ ಮೇಲೂ ಅವಲಂಬಿತರಾಗದೆ ನಾಟಕದಲ್ಲಿ ಪಾತ್ರ ಮಾಡುವ ಮೂಲಕ ತಮ್ಮ ಜೀವನವನ್ನು ಸವೆಸಿದರು ಎಂದು ಮಾಜಿ ರಾಜ್ಯ ಸಭಾ ಸದಸ್ಯೆ ಹಾಗೂ ಖ್ಯಾತ ಹಿರಿಯ ರಂಗ ಕಲಾವಿದೆ ಬಿ. ಜಯಶ್ರೀ ತಿಳಿಸಿದರು.
ಪ್ರತಿಯೊಬ್ಬ ವಿಕಲಚೇತನರೂ ಆತ್ಮಸ್ಥೆöÊರ್ಯ ಕಳೆದುಕೊಳ್ಳದೆ ಸ್ವಾಭಿಮಾನಿಯಾಗಿ ಬದುಕುವ ಮೂಲಕ ಉಳಿದವರಿಗೂ ಮಾದರಿಯಾಗಬೇಕು. ಇಂತಹವರನ್ನು ನೋಡಿ ಇತರರೂ ಸ್ಫೂರ್ತಿಗೊಳ್ಳಬೇಕು ಎಂದು ಜಯಶ್ರೀ ತಿಳಿಸಿದರು.