ಕತಾ ಸರಿತ್ಸಾಗರ ಡಾ. ವಿಜಯ ರಾಘವೇಂದ್ರ  ಪರಿಕಲ್ಪನೆಗಳು

ಕತಾ ಸರಿತ್ಸಾಗರ ಡಾ. ವಿಜಯ ರಾಘವೇಂದ್ರ      ಪರಿಕಲ್ಪನೆಗಳು

ಕತಾ ಸರಿತ್ಸಾಗರ


ಡಾ. ವಿಜಯ ರಾಘವೇಂದ್ರ 

ಪರಿಕಲ್ಪನೆಗಳು


ಎಲ್ಲಾ ಶುರುವಾಗಿದ್ದು ‘ಮಲಾಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್’ನ ಕಾವಲುಗಾರನ ಸಾವಿನೊಂದಿಗೆ. ರಾತ್ರಿ ೧೦-೩೦ರ ಸುಮಾರಿಗೆ ಬಂದ ಫೋನ್ ಕರೆಯ ಪ್ರಕಾರ ತಕ್ಷ್ಷಣ ಸಾವಿನ ತನಿಖೆ ಮತ್ತು ವರದಿಗೆ ಆದೇಶವಾಗಿತ್ತು. ಹತ್ತಿರದಲ್ಲೇ ಇರುವ ಉಪ್ಪಿನಂಗಡಿಯ ಬೈ ಎಲೆಕ್ಷನ್, ಭಾನುವಾರದ ದಿನ ಚರ್ಚಿನಲ್ಲಿ ಹಮ್ಮಿಕೊಂಡಿರುವ ಖ್ಯಾತ ಬೋಧಕ ಲಿಂಡನ್ ಬಿ. ಜಾನ್ಸನ್ ಅವರ ಪ್ರಸಂಗದ ಹಿನ್ನೆಲೆ, ಹಿಂದೂ ಪರ ಸಂಘಟನೆಗಳು ಮತಾಂತರದ ವಿರುದ್ಧ ಹೋರಾಡುತ್ತಿರುವ ಈ ಸೂಕ್ಷ್ಮ ಸಮಯದಲ್ಲಿ ಎದ್ದಿರುವ ಸಣ್ಣ ಕಿಡಿ ಕಾಳ್ಗಿಚ್ಚಾಗುವ ಮುನ್ನ ನಂದಿಸುವ ಕ್ರಮದ ತುರ್ತಿತ್ತು. 


ಒಂದು ದಿನದ ಮಟ್ಟಿಗೆ ಹೊರಗೆ ಹೋಗುತ್ತಿರುವುದಾಗಿ ತ್ರಿಶೂಲಾಳಿಗೆ ಹೇಳಿ ನನ್ನ ಒಂದು ದಿನದ ಮಟ್ಟಿಗಿನ ಬ್ಯಾಗ್ ತೆಗೆದುಕೊಂಡು ದಾಸನಪುರ ವಿನಾಯಕ ದೇವಸ್ಥಾನದ ಮಗ್ಗುಲಲ್ಲಿ ತಿರುಗಿ ಮುಖ್ಯರಸ್ತೆಗೆ ಹೊರಳಿ ಸರ್ವೀಸ್ ರಸ್ತೆಯಲ್ಲಿ ನಿಂತು ನಾಯಿಗಳ ಓಡಿಸಲು ಕೈಲಿದ್ದ ಕೋಲನ್ನು ಬಿಸಾಟಿದೆನಷ್ಟೇ, ಪಕ್ಕದಲ್ಲೇ ಬಂದು ನಿಂತುಕೊAಡಿತು ಟ್ಯಾಕ್ಸಿ. "ಹತ್ರಿ ಬೇಗ” ಎಂಬ ಪರಿಚಯದ ಕೃಷ್ಣ ಐಯ್ಯಂಗಾರನ ಧ್ವನಿಯಲ್ಲಿದ್ದ ಆರ್ದ್ರತೆಯ ಅರಿವಾಗಿ ಹಿಂಬದಿಯ ಸೀಟಿನಲ್ಲಿ ನನ್ನ ಸ್ವಲ್ಪ ಹಿರಿದಾದ ದೇಹವನ್ನು ದೂಕಿ ಕೂತು ಬಾಗಿಲು ಹಾಕಿಕೊಳ್ಳುತ್ತಲೇ ಕಾರು ವೇಗ ಪಡೆಯತೊಡಗಿತು. 


ಡ್ರೈವರ್ ಪಕ್ಕ ಕುಳಿತಿದ್ದ ಕೃಷ್ಣ ಎಲ್ಲರ ಪರಿಚಯ ಮಾಡಿಕೊಟ್ಟ. ನನ್ನ ಪಕ್ಕ ಅಂದರೆ ಮಧ್ಯ ಕುಳಿತಿದ್ದು ಡೇನಿಯಲ್, ಅವನ ಪಕ್ಕ ಸುಧನ್ವ. ಎಷ್ಟು ಸಮಯ ಆಗಬಹುದು? ಕೇಳಿದೆ. "೭ ಗಂಟೆಗಳ ಪ್ರಯಾಣ" ಕೃಷ್ಣ ಹೇಳಿದ "ಬೆಳಗ್ಗೆ ೬ಕ್ಕೆ ತಲುಪಬಹುದು". ಉಸಿರುಗಟ್ಟುವ ಮೌನ. ಯಾರೂ ಮಾತನಾಡುತ್ತಲೇ ಇಲ್ಲ. "ಏನಾಯ್ತು? ಕೇಳಿದೆ. ಚರ್ಚಿನ ಕಾವಲುಗಾರ ಸತ್ತಿದ್ದಾನೆ". "ಹೇಗೆ" ಕೇಳಿದೆ. “ಅದರ ತನಿಖೆಗೆ ತಾನೆ ನಾವೀಗ ಹೊರಟಿರುವುದು" ಮತ್ತೆ ಮೌನ. ಎಲ್ಲಾದರೂ ಟೀ’ಗೆ ನಿಲ್ಲಿಸಯ್ಯ ತಲೆ ಸಿಡಿಯುತ್ತಿದೆ" ಎಂದೆ. ಕೆಲ ಹೊತ್ತಿನ ನಂತರ ರಸ್ತೆ ಬದಿಯ ಡಾಬಾ ಸಂಕೀರ್ಣದ ಬದಿಯಲ್ಲಿ ಟ್ಯಾಕ್ಸಿ ನಿಂತಿತು. ಕೃಷ್ಣ ಫೋನ್ ಹಿಡಿದು ಅಮ್ಮನಿಗೆ ಮಡದಿಯ ಆರೋಗ್ಯ ವಿಚಾರಿಸುವಂತೆ ಕಂಡಿತು. 


 ಟ್ಯಾಕ್ಸಿ ಡ್ರೆöÊವರ್‌ನನ್ನ ನೋಡಿದೆ. ಕರ್ಮಠ ಮುಸಲ್ಮಾನನಂತಿದ್ದ. "ನಿಮ್ಮ ಹೆಸರು" ಕೇಳಿದೆ. "ಮುಸ್ತಾಫ", ನಗಲಿಲ್ಲ ಅವನು. " ಊಟ ಏನಾದರೂ ತಿನ್ನುತ್ತೀರಾ?” “ರಂಜಾನ್‌ನ ಪವಿತ್ರ ತಿಂಗಳು ಇಫ್ತಾರ್ ಮುಗಿಸಿಯೇ ಹೊರಟಿದ್ದೇನೆ” ಎಂದ ಚುಟುಕಾಗಿ. 


ಡೇನಿಯಲ್, ಸುಧನ್ವ ಕಾಫಿ ಆರ್ಡರ್ ಮಾಡಿದರು. ಕೃಷ್ಣ ಗಾಬರಿಯಲ್ಲಿದ್ದಂತ್ತಿದ್ದ. ತಿನ್ನಲೇನೂ ಇಲ್ವ" ಫಿಂಗರ್ ಚಿಪ್ಸ್ ಹೇಳಿದೆ. ಕೃಷ್ಣ ಮುಲಾಜಿಲ್ಲದೆ ಚಿಕನ್ ಕಬಾಬ್ ಹೇಳಿ ತರಿಸಿಕೊಂಡು  ತನ್ನಷ್ಟಕ್ಕೆ ತಾನು ತಿನ್ನತೊಡಗಿದ. ಹೊರ ಬಂದಾಗ ಕೈಯ್ಯಲ್ಲಿದ್ದ ಸಿಗರೇಟನ್ನು ಕಡೆಯ ಬಾರಿ ಹೀರಿ ಒಗೆದ ಡೇನಿಯಲ್. ಮಿಂಟಿ ಬಾಯ್ಗಾಕಿ ಕಾರನ್ನೇರಿದ. ಮೊದಲು ಕಾರನ್ನೇರಿದ ಫಲ ನಾನು ಸುಧನ್ವ ಮತ್ತು ಡೇನಿಯಲ್‌ರ ಮಧ್ಯೆ ಕುಳಿತೆ. 


ಮತ್ತೆ ಮೌನ. 


“ಮುಸ್ತಾಫ, ರಂಜಾನ್ ಏಕೆ ಆಚರಿಸುತ್ತಾರೆ" ಮೌನವ ಮುರಿಯಲೇಬೇಕಾದ ಅವಶ್ಯಕತೆ ನನ್ನ ವ್ಯಕ್ತಿತ್ವಕ್ಕಿತ್ತು. “ದೇವಧೂತೆಯಾದ ಗೇಬ್ರಿಯಲ್‌ಳು ಪವಿತ್ರ ರಂಜಾನ್ ಅನ್ನು ಮಹಮ್ಮದ್ ಪೈಗಂಬರರಿಗೆ ಬೋಧಿಸಿದ ಪವಿತ್ರ ತಿಂಗಳು. ಈ ತಿಂಗಳು ನಾವು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಇರುತ್ತೇವೆ. ಶಾಹದ ಅಂದರೆ ಅಮೂರ್ತನಾದ ದೈವ ಅಲ್ಲಾಹುನು ಮತ್ತು ಅವನ ಸಂದೇಶಗಳನ್ನು ನೀಡಿದ ಪ್ರವಾದಿ ಮಹಮ್ಮದ್ ಪೈಗಂಬರರಲ್ಲಿ ಪ್ರಶ್ನಾತೀತವಾಗಿ ನಂಬಿಕೆಯಿರಿಸುತ್ತೇವೆ. ಸಲತ್- ದಿನಕ್ಕೆ ಐದು ಸಾರಿ ದೈವ ಅಲ್ಲಾಹ್‌ಗೆ  ನಮಸ್ಕರಿಸಿ ಅವರಿಗೆ ಕೃತಜ್ಞತೆ ಅರ್ಪಿಸುತ್ತೇವೆ. ಅಲ್ಲದೇ ಪವಿತ್ರ ರಂಜಾನ್ ಅನ್ನು ಪಠಿಸುತ್ತೇವೆ. ಜಕತ್- ಅಂದರೆ ನಮ್ಮ ಐಶ್ವರ್ಯದ ೨೫ ಪ್ರತಿಶತವನ್ನು ಬಡವರಿಗೆ ದಾನ ಮಾಡುತ್ತೇವೆ. ಮತ್ತು ಹe಼ï - ಸಾಧ್ಯವಾದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸೌದಿಅರೇಬಿಯಾದ ಮೆಕ್ಕಾದಲ್ಲಿರುವ ಕಾಬಾದ ದೇವರ ಮನೆಗೆ ತೀರ್ಥಯಾತ್ರೆ ಹೋಗಿಬರುತ್ತೇವೆ. ಉಪವಾಸ, ನಂಬಿಕೆ, ದಾನ ಮತ್ತು ತೀರ್ಥಯಾತ್ರೆ ಇಸ್ಲಾಂ ಧರ್ಮದ ಆಧಾರ ಸ್ತಂಭಗಳು. 


ದೀರ್ಘವಾಗಿ ಏರಿಳಿತವಿಲ್ಲದ ದಾಟಿಯಲ್ಲಿ ಮುಸ್ತಪಾ ಹೇಳಿದ. 


ದೇವಧೂತೆ ಗೇಬ್ರಿಯಲ್‌ಳ ಮೂರ್ತಿ ಚರ್ಚ್ಗಳಲ್ಲೂ ಇರುತ್ತವಲ್ಲ? ಡೇನಿಯಲ್ ಕಡೆ ನೋಡುತ್ತಾ ಕೇಳಿದೆ. "ಹೌದು ದೇವಧೂತೆ ಪ್ರವಾದಿ ಡೇನಿಯಲ್‌ಗೆ ಸೃಷ್ಟಿಯ ಕುರಿತು ಅರುಹಿದ್ದಳು. ಜಿಕರಿಯಾ ಮತ್ತು ಕನ್ಯೆ ಮೇರಿಗೆ ಬ್ಯಾಪ್ಟಿಸ್ಟ್ ಜಾನ್ ಮತ್ತು ಜೀಸಸ್‌ನ ಜನುಮದ ಬಗ್ಗೆ ಭವಿಷ್ಯ ನುಡಿದಿದ್ದಳು.” 


“ದೇವರು ತನ್ನದೇ ತದ್ರೂಪು ಆಡಮ್ ಮತ್ತು ಈವರನ್ನು ಸೃಷ್ಟಿಸಿ ದೇವರ ಉದ್ಯಾನದಲ್ಲಿ ಬದುಕಲು ಬಿಡುತ್ತಾನೆ. ಅವರು ಎಲ್ಲಾ ಹಣ್ಣುಗಳನ್ನು ತಿನ್ನಬಹುದು. ಆದರೆ, ಜ್ಙಾನದ ಮರದ ಹಣ್ಣನ್ನೊರೆತುಪಡಿಸಿ. ಸರ್ಪ ಈವಳನ್ನು ಆ ಹಣ್ಣನ್ನು ತಿನ್ನಲು ಪ್ರಲೋಬಿಸುತ್ತದೆ. ಚಂಚಲೆ ಈವಳು ಹಣ್ಣನ್ನು ಆಡಮ್‌ನೊಡನೆ  ಹಂಚಿಕೊಳ್ಳುತ್ತಾಳೆ. ಇದನ್ನರಿತ ದೇವರು ಹೆಣ್ಣಿಗೆ ಹೆರಿಗೆ ನೋವು, ಗಂಡಿಗೆ ದುಡಿತ ಮತ್ತು ಸರ್ಪಕ್ಕೆ ಕಾಲುಗಳಿಲ್ಲದಂತೆ ಶಾಪಕೊಡುತ್ತಾನೆ. ದೇವರ ಮಕ್ಕಳು, ಮಕ್ಕಳ ಮಕ್ಕಳು ಹೀಗೆ ಸಂತತಿಯಾಗಿ ಮನುಷ್ಯನ ಸಂಖ್ಯೆ ವೃದ್ಧಿಸುತ್ತದೆ.” 


“ಲೋಕದಲ್ಲಿ ಅಧರ್ಮ, ಅನೀತಿ, ವ್ಯಭಿಚಾರ ಹೆಚ್ಚಾದಾಗ ದೇವರು ಅನೇಕ ಪ್ರವಾದಿಗಳ ರೂಪದಲ್ಲಿ ಬಂದು ಬದುಕುವುದು ಹೇಗೆಂದು ತಿಳಿ ಹೇಳಿದರು. ಮೋಸಸ್, ಜೀಸಸ್, ಮೊಹಮ್ಮದ್ ಪೈಗಂಬರ್ ಮುಖ್ಯವಾದ ಪ್ರವಾದಿಗಳು.” 

“ಜುದಾಯಿಸಂನ ಮೋಸೆಸ್‌ನ ೧೦ ಆಜ್ಞೆಗಳಂತೆ ಏಕದೇವೋಪಾಸನೆ, ಮೂರ್ತಿ ಪೂಜೆ ನಿಷಿದ್ಧ,  ದೇವರ ಹೆಸರನ್ನು ಕೆಟ್ಟ ಕೆಲಸಕ್ಕೆ ಬಳಸಿಕೊಳ್ಳದಿರುವುದು, ದೇವರ ದಿನವನ್ನು ಆಚರಿಸುವುದು, ತಂದೆ-ತಾಯಿಗಳನ್ನು ಪೂಜಿಸುವುದು, ಹತ್ಯೆ ಮಾಡದಿರುವುದು, ವ್ಯಭಿಚಾರ ಮಾಡದಿರುವುದು, ಕದಿಯದಿರುವುದು, ಮತ್ತೊಬ್ಬರ ಮೇಲೆ ಸುಳ್ಳುಸಾಕ್ಷಿ ಹೇಳದಿರುವುದು, ಮತ್ತೊಬ್ಬರ ಐಶ್ವರ್ಯ ಆಶಿಸದಿರುವುದು.” 

“ದೈವದ ಪಿತೃತ್ವ ಮತ್ತು ಮನುಷ್ಯನ ಭ್ರಾತೃತ್ವ ಕ್ರಿಶ್ಚಿಯನ್ನರ ನಂಬಿಕೆಯಾಗಿದೆ. ತ್ಯಾಗ, ಕ್ಷಮೆ, ಶಿಲುಬೆಯ ಮಹತ್ವವಾಯಿತು.” 

ಸುಧನ್ವ ಅಷ್ಟೊತ್ತು ಸುಮ್ಮನಿದ್ದವರು ಹೇಳತೊಡಗಿದರು. “ಡಾರ್ವಿನ್ನನ ಜೀವ ವಿಕಸನದ ಸಿದ್ಧಾಂತದAತೆ ಹೋದರೆ, ಮನುಷ್ಯರು ಪ್ರಕೃತಿಯ ಮಡಿಲಲ್ಲಿ ವಿಕಸನಗೊಂಡವರು. ಪ್ರಕೃತಿಯ ಅನಿಶ್ಚಿತತೆ, ಅವಘಡಗಳ ಮಧ್ಯೆ ಬದುಕಲೇಬೇಕಾದ ಅನಿವಾರ್ಯತೆ ಹೋರಾಟದ ಮಧ್ಯೆ ಅವರಿಗೆ ಬೇಕಿದ್ದುದು ಭರವಸೆ ಮತ್ತು ನಂಬಿಕೆ. ಪೂಜಿಸಿದರೆ ಹಾವು ಕಚ್ಚುವುದಿಲ್ಲ, ಸಿಡಿಲು ಹೊಡೆಯುವುದಿಲ್ಲ, ಪ್ರಾಣಿ ಕೊಲ್ಲುವುದಿಲ್ಲ ಎಂಬ ನಂಬಿಕೆ ಅಂತಹ ಮನಸ್ಸಿಗೆ ತಾತ್ಕಾಲಿಕ ಭರವಸೆ ನೀಡಿದ್ದೀತು. ಹಿಂಡುಗಳಲ್ಲಿ ಅಲೆಮಾರಿಯಾಗಿ ಬದುಕುತ್ತಿದ್ದ ಜನ ಗುಂಪಾಗಿ, ಸಮೂಹವಾಗಿ ಭದ್ರತೆ ಮತ್ತು ಸುರಕ್ಷತೆಗಾಗಿ ನೆಲೆಯೂರತೊಡಗಿದಾಗ, ಗುಂಪಿನಲ್ಲಿ ದೈಹಿಕವಾಗಿ ಬಲಾಡ್ಯರಾಗಿದ್ದವರು ನಾಯಕರಾದರು. ನೈತಿಕತೆಯ ಅಧಃಪತನವಾದಾಗ ಗುಂಪಿನ ಅಬಲರು, ಸ್ತ್ರೀಯರು, ಮಕ್ಕಳವರೆಗೆ ಕಾಪಾಡಲು ಬಹುಷಃ ಅತಿಮಾನುಷ ಶಕ್ತಿ ಹೊಂದಿದ್ದೇವೆAದು ಅಥವಾ ದೈವಾಂಶ ಸಂಭೂತರೆAದು ಬಿಂಬಿಸಿ ಗುಂಪಿನ ನಾಯಕತ್ವ ಹೊಂದತೊಡಗಿದರು. ಅಲ್ಲಿಂದ ಧರ್ಮಗಳ, ನಿಯಮಾವಳಿಗಳ, ಸರ್ಕಾರಗಳ ಉದಯವಾಯಿತೆನ್ನಬಹುದು. ಸರ್ಕಾರಗಳು ಸಂಹಿತೆಗಳ ರೂಪದಲ್ಲಿ ಸಮಾಜವನ್ನು ನಿಯಂತ್ರಣಕ್ಕೊಳಪಡಿಸಿದರೂ, ನೈತಿಕತೆಯ ಅಂತಃಪಯಣವಿಲ್ಲದೆ ಮನುಷ್ಯನ ಸಾರ್ಥಕತೆಯಿಲ್ಲ ಎಂಬಲ್ಲಿ ಸಮಾಜ ಸುಧಾರಕರು ಜನಮನಗಳಿಗೆ ತಂಪೆರೆಯುವಲ್ಲಿ ಪ್ರಯೋಗಶೀಲರಾದರೆನ್ನಬಹುದು. ಕ್ರಮೇಣ ಅತಿಮಾನುಷ ಶಕ್ತಿಗಳು, ದೈವಾಂಶ ಸಂಭೂತರು ಇತ್ಯಾದಿ ವರಾತಗಳು ಜನಮನಕ್ಕೆ ಸುಳ್ಳೆಂದು ಅರಿವಾದಾಗ ಪ್ರಜಾಸತ್ತಾತ್ಮಕ ಗಣರಾಜ್ಯಗಳ ಉದಯವಾಯಿತು.” 


“ಹಣ, ಅಧಿಕಾರದ ಆಸೆಯೇ ದುಃಖದ ಕಾರಣವೆಂದರು ಗೌತಮರು. ಸಂಸಾರ, ದುಃಖ, ಹುಟ್ಟು, ಕರ್ಮ, ನಿರ್ವಾಣ, ಮೋಕ್ಷದ ದಾರಿಯಲ್ಲಿ ಅನುಭವ, ಭಾವನೆ, ಪ್ರಜ್ಞೆಗಳ ಮೀರಿ ಪಂಚೇAದ್ರಿಯಗಳ ದಿಕ್ಕುತಪ್ಪಿಸುವ ಅರಿಷಡ್ವರ್ಗಗಳ ಮಣಿಸಿ ಪಂಚಭೂತಗಳಲ್ಲಿ ಲೀನವಾಗುವ ಪ್ರಕ್ರಿಯೆಯೇ ಭೌದ್ದ ಧರ್ಮ ಎನ್ನಬಹುದು.” 

“ಅಹಿಂಸೆ, ಸತ್ಯ, ಬ್ರಹ್ಮಚರ್ಯ ,ಆಚಾರ್ಯ ಮತ್ತು ಯಾವುದನ್ನೂ ಹೊಂದದ ಅಪರಿಗ್ರಹ ಜನರಿಗೆ ಮಾರ್ಗದರ್ಶಕವಾದಂತೆ” ಗುಣುಗಿದೆ. 


 
“ಆದರೂ ಭೂಮಿ ಒಳಗೆ ಬೆಳೆದಿದ್ದರಲ್ಲಿ ಸೂಕ್ಷ್ಮಜೀವಿ ಇರುತ್ತವೆಂದು ತಿನ್ನದೇ ಇರುವುದು ಅತಿರೇಕ ಬಿಡಯ್ಯ” ಎಂದ. ನನಗೇಕೋ ಕೋಪದಲ್ಲಿ “ನೀವು ನೆತ್ತರೆಂದು ನೀರು ಕುಡಿಯುವುದಿಲ್ಲವಾ?” ಎಂದೆ. 


ತೂಕಡಿಸುತ್ತಿದ್ದ ಕೃಷ್ಣ ಹೇಳಿದ. “ಎಲ್ಲ ಹಳೆಯ ಕ್ಯಾಸೆಟ್ಟುಗಳು ಮುಗಿದವಾ ? ಅಲ್ಲಾ ಕಣಯ್ಯ, ಮಾನವ ವಿಶ್ವಮಾನವವಾಗುತ್ತಿರುವ ಈ ವೈಜ್ಙಾನಿಕ ಕಾಲಘಟ್ಟದಲ್ಲಿ ಧರ್ಮಗಳೆಂದು ಜನರನ್ನು ವಿಂಗಡಿಸುವುದು, ಪ್ರಲೋಬಿಸುವುದು ಎಷ್ಟು ಸರಿ? ಕೆಲ ಜ್ಞಾನಿಗಳು ಬದುಕುವುದು ಹೇಗೆಂದು ಹೇಳಿಕೊಟ್ಟ ಮಾತ್ರಕ್ಕೆ ಅವರನ್ನು ಒಂದು ಗುಂಪಿಗೆ, ಧರ್ಮಕ್ಕೆ ಒಡೆಯರನ್ನಾಗಿಸುವುದು ಅಥವಾ ಸೀಮಿತಗೊಳಿಸುವುದು ತಪ್ಪಲ್ಲವಾ? ಅನುಭವ ಮಂಟಪದಿ ಕುಂತು ದೇವನ ಆರಾಧನೆಯ ಬಗ್ಗೆ ಅರುಹಿದವರು ಅಮೂರ್ತಗರಾಗಿಯೂ ಮೂರ್ತಿಗಳಾಗಿದ್ದು ವಿಪರ್ಯಾಸವೆಂದು ಅಡಿಗರೇ ಹೇಳಿಲ್ಲವೇ ? ಬಿಟ್ಟುಬಿಡಿ ಈ ವ್ಯಾಖ್ಯಾನಗಳ ಸ್ವಲ್ಪ ಪವಡಿಸಿ ಬೆಳಗ್ಗೆ ಕೆಲಸಗಳಿವೆ.”


ಕೃಷ್ಣನೇಳಿದಂತೆ ಅದೇಗೆ ಜೋಂಪೆತ್ತಿತೋ ಕಾಣೆ.

ಪ್ರವಾಸಿ ಮಂದಿರ ಹೊಕ್ಕಾಗ ಸಮಯ ಮುಂಜಾನೆ ಏಳು. ಕೊಂಚ ವಿರಮಿಸಿ ಸ್ನಾನ, ಇತ್ಯಾದಿಗಳ ಮುಗಿಸಿ ತಿಂಡಿ ತಿಂದು ಚರ್ಚಿನ ಒಳಗೆ ಭೇಟಿ ನೀಡುವಾಗಲೇ ಅರಿವಾದದ್ದು ಊರು ಕಾದ ಬಾಣಲೆಯಂತಿದೆ ಎಂದು. 

ಕಾವಲುಗಾರ ಜಾರ್ಜ್ನ ಪೋಸ್ಟ್ ಮಾರ್ಟಮ್‌ನಲ್ಲಿ ಆಲ್ಕೋಹಾಲಿನ ಅಂಶ ಕಂಡು ಬಂದಿತ್ತು. ಹೆಂಡತಿ ಮೇರಿಯೂ ಜಾರ್ಜ್ ಕುಡುಕನೆಂದೇ ಹೇಳಿದಳು. ಜಾರ್ಜ್ ದೇಹದ ಮೇಲೆ ಯಾವುದೇ ಹೊಡೆದಾಟದ ಆಯುಧದ ಗಾಯವಿರದದ್ದು ಸ್ಪಷ್ಟವಾಗಿತ್ತು. 

ಕುಡಿದ ಮತ್ತಿನಲ್ಲಿ ತುಂತುರು ಮಳೆಹನಿಯ ಮಧ್ಯೆ ನಂದಿದ್ದ ಬಲ್ಬನ್ನು ಹೊತ್ತಿಸಲು ಏಣಿ ಏರುವಾಗ ಆಯತಪ್ಪಿ ಬಿದ್ದು ಜಾರ್ಜ್ ಮೃತನಾಗಿದ್ದ. 

ನಮ್ಮ ವರದಿಯನ್ನು ಪೋಸ್ಟ್ ಮಾರ್ಟಮ್ ರಿಪೋರ್ಟ್ ಜೊತೆ ಅಡಕಮಾಡಿ ನಾವು ನಾಲ್ವರೂ ಸಹಿಹಾಕಿ ಮಧ್ಯಾಹ್ನ ಅತಿಥಿ ಗೃಹದಲ್ಲಿ ಊಟ ಮಾಡುತ್ತಿರುವಾಗ ಕೃಷ್ಣನ ಹೆಂಡತಿಗೆ ಹೆರಿಗೆ ನೋವು ಶುರುವಾಗಿತ್ತು. 


ತನ್ನ ಹೆಂಡತಿ ತಾಯಿ ಇಬ್ಬರೇ ಮನೆಯಲ್ಲಿ ಎಂದು ಪೇಚಾಡುತ್ತಿದ್ದ ಕೃಷ್ಣ ಸ್ನೇಹಿತರ ಸಹಾಯದಿಂದ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ನಮ್ಮ ಹಿಂದಿರುಗುವ ಪ್ರಯಾಣದಲ್ಲಿ ಹುಟ್ಟು ಸಾವು ಕರ್ಮದ ದೀರ್ಘ ಉಹನ್ಯಾಸಕ್ಕೆ ಸುದೀಷ್ಣ ಅಣಿಯಾಗಿದ್ದ. ಆದರೆ ಕೇಳುವ ವಾತಾವರಣ ಕಾರಿನಲ್ಲಿರಲಿಲ್ಲ. 

ನಾವು ಬೆಂಗಳೂರು ತಲುಪುವ ಹೊತ್ತಿಗೆ ಹೆರಿಗೆಯಾಗಿತ್ತು. ತನ್ನ ಕರ್ಮಗಳ ಸವೆಸಲು ಭುವಿಗೆ ಆತ್ಮದಿಂದ ಜೀವೋದ್ಬವವಾಗಿತ್ತು. ಕೃಷ್ಣ-ಗೌತಮಿ ಹುಟ್ಟಿಗೆ ನೆಪ ಮಾತ್ರ ಕಾರಣವೆಂದು ಸುಧೀಷ್ಣ ನುಡಿಯುತ್ತಿದ್ದರೂ ಅವನ ಮುಖದಲ್ಲಿ ಮಗು ಅವನ ಬೆರಳು ಹಿಡಿದಾಗ ಕಂಡ ಆ ಭಾವ! ನಕ್ಕೆ.


ವೇದಾಂತ ಹೇಳೋದಕ್ಕೆ ಬದನೆಕಾಯಿ ತಿನ್ನೋದಕ್ಕೆ, 


ಅಂದ ಹಾಗೆ ನಾನು ಅಭಿನಂದನ.