ಬುದ್ಧ ನೆನಪಾಗುವುದೇಕೆ, ಶೋಷಿತರಿಗೆ ಬೇಕೆನಿಸುವುದೇಕೆ ಮೈಸೂರಿನಲ್ಲಿ ಇಂದು ನಡೆಯುತ್ತಿರುವ ಬೌದ್ಧ ಮಹಾ ಸಮ್ಮೇಳನದ ಹಿನ್ನೆಲೆಯಲ್ಲಿ ಈ ಲೇಖನ

ಬುದ್ಧ ನೆನಪಾಗುವುದೇಕೆ, ಶೋಷಿತರಿಗೆ ಬೇಕೆನಿಸುವುದೇಕೆ  ಮೈಸೂರಿನಲ್ಲಿ ಇಂದು ನಡೆಯುತ್ತಿರುವ ಬೌದ್ಧ ಮಹಾ ಸಮ್ಮೇಳನದ ಹಿನ್ನೆಲೆಯಲ್ಲಿ ಈ ಲೇಖನ

 

ವರ್ತಮಾನ

ನಾ ದಿವಾಕರ

 

 

      ಭಾರತ ಸಾಂವಿಧಾನಿಕ ಶಾಸನದ ಮೂಲಕ ಅಸ್ಪೃಶ್ಯತೆಯನ್ನು ನಿಷೇಧಿಸಿ ಏಳು ದಶಕಗಳು ಕಳೆದಿದ್ದರೂ ಭಾರತೀಯ ಸಮಾಜ 21ನೆಯ ಶತಮಾನದ ಡಿಜಿಟಲ್‌ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದರೂ ಇಂದಿಗೂ ಸಹ ಈ ಸಾಮಾಜಿಕ ಅನಿಷ್ಠವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗಿಲ್ಲ. ಏಕೆ ಎಂಬ ಪ್ರಶ್ನೆಯೇ ಕ್ಲೀಷೆ ಎನಿಸುವಷ್ಟು ಮಟ್ಟಿಗೆ ಜಾತಿ ವ್ಯವಸ್ಥೆಯ ಬೇರುಗಳು ನೆಲದಾಳದಿಂದ ಮತ್ತೆ ಮತ್ತೆ ಮೇಲೇಳುತ್ತಲೇ ಇವೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಎಂಬ ಬೃಹತ್‌ ಆಲದ ಮರದ ಬಿಳಲುಗಳು ಕೊಂಚ ಬಾಹ್ಯ ಮೆರುಗಿನೊಂದಿಗೆ ಮತ್ತೆಮತ್ತೆ ಧರೆಗಿಳಿಯುತ್ತಲೇ ಇವೆ. ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ಈ ಬಿಳಲುಗಳನ್ನು ಸ್ಪರ್ಶಿಸಲು ಹೋದಾಗ, ಮನುಷ್ಯನ ತೊಗಲಿಗೆ ಅಂಟಿದ ವಸ್ತುವಿನಂತೆ ಜಾತಿ ಎನ್ನುವ ಮನಸ್ಥಿತಿ ಮತ್ತು ಅದು ಪೋಷಿಸುವಂತಹ ಶ್ರೇಷ್ಠತೆಯ ಅಹಮಿಕೆ ಅರಿವಾಗುತ್ತದೆ. ಶ್ರೇಷ್ಠ-ಕನಿಷ್ಠ- ಶುದ್ಧ-ಪರಿಶುದ್ಧ, ಮಡಿ-ಮೈಲಿಗೆ ಇವೆಲ್ಲವೂ ಈ ಬೃಹದಾಲದ ಬೇರುಗಳಿಂದಲೇ ಉಗಮಿಸುತ್ತಿದ್ದು ಭಾರತೀಯ ಸಮಾಜದಲ್ಲಿ ಇಂದಿಗೂ ಸಹ ಸ್ಪೃಶ್ಯಾಸ್ಪೃಶ್ಯತೆಯ ಸಾಂಸ್ಕೃತಿಕ ನೆಲೆಗಳನ್ನು ಸುಭದ್ರವಾಗಿರಿಸಿವೆ.

 

ದುಡಿಯುವ ಜನತೆ ತಾವು ದಿನನಿತ್ಯ ಎದುರಿಸುವ ಶೋಷಣೆಗಳಿಗೆ ಮುಕ್ತಿ ಎಂದು ದೊರೆತೀತು ಎಂಬ ಚಿಂತೆಗೀಡಾದ ಸಂದರ್ಭದಲ್ಲೆಲ್ಲಾ ಒಂದು ಕೆಂಬಾವುಟ ಅಥವಾ ಕಾರ್ಲ್‌ ಮಾರ್ಕ್ಸ್‌ ನೆನಪಾದಂತೆ ಭಾರತದ ಶೋಷಿತ, ಅಪಮಾನಿತ ಜನಸಮುದಾಯಗಳಿಗೆ ತಮ್ಮ ನಿತ್ಯ ಜೀವನದಲ್ಲಿ ಘಟಿಸುವ ವಿದ್ಯಮಾನಗಳೇ ಬುದ್ಧನನ್ನು ಪದೇ ಪದೇ ನೆನಪಿಸುತ್ತಿರುತ್ತದೆ. ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆಯ ಉಗಮವಾಗುವುದೇ ನಾಲ್ಕು ಗೋಡೆಗಳ ನಡುವೆ, ಕುಟುಂಬಗಳ ಒಳಗೆ ಮತ್ತು ಮನುಷ್ಯ ಸಂಬಂಧಗಳ ನೆಲೆಯಲ್ಲಿ. ಅನುಸರಿತ ಧರ್ಮಕ್ಕೂ ಆಚರಣಾತ್ಮಕ ಧರ್ಮಕ್ಕೂ ನಡುವೆ ಇರುವ ಅಂತರದಲ್ಲೇ ಅಸ್ಪೃಶ್ಯತೆ ಎಂಬ ಹೀನಾಚರಣೆ ವ್ಯವಸ್ಥಿತವಾಗಿ ಬೆಳೆದುಕೊಂಡು ಬಂದಿರುವುದನ್ನು ಇತಿಹಾಸದುದ್ದಕ್ಕೂ ಗಮನಿಸಬಹುದು. ಹಾಗಾಗಿಯೇ ಭಾರತದ ಸಂದರ್ಭದಲ್ಲಿ ಧರ್ಮದ ನೆಲೆಯಲ್ಲಿ ಔನ್ನತ್ಯವನ್ನು, ಉದಾತ್ತತೆಯನ್ನು ವೈಭವೀಕರಿಸುತ್ತಿದ್ದರೂ, ಇದೇ ಧರ್ಮದ ಚೌಕಟ್ಟಿನಲ್ಲೇ ಸಂಭವಿಸುವ ಅಸ್ಪೃಶ್ಯತೆಯಂತಹ ಅಮಾನುಷ ಆಚರಣೆಯನ್ನು ಖಂಡಿಸುವುದಿರಲಿ, ವಿಮರ್ಶಿಸುವ ಮನಸ್ಥಿತಿಯೂ ಕಂಡುಬರುವುದಿಲ್ಲ.

 

ಇದಕ್ಕೆ ಕಾರಣ ಎಂದರೆ ನಮ್ಮ ಶ್ರೇಣೀಕೃತ ಸಮಾಜ ಇಂದಿಗೂ ಸಹ ಜಾತಿ ಅಂತರವನ್ನು, ತಾರತಮ್ಯಗಳನ್ನು ಮತ್ತು ಶ್ರೇಣಿಗಳನ್ನು ಸಹಜ-ಸ್ವಾಭಾವಿಕ ಎಂದು ಸ್ವೀಕರಿಸಿದಂತೆಯೇ ಅಸ್ಪೃಶ್ಯತೆಯನ್ನೂ ಇದೇ ಪ್ರಕ್ರಿಯೆಯ ಒಂದು ಸಹಜ ಕ್ರಿಯೆ ಎಂದು ಭಾವಿಸುತ್ತದೆ. ಹಾಗಾಗಿ                       ʼ ನೀ ನನ್ನ ಮುಟ್ಟಬೇಡ ʼ ಎಂದು ಹೇಳುವುದು ಕಾನೂನುರೀತ್ಯಾ ಅಪರಾಧವಾಗುವುದರಿಂದ, ಮೇಲ್ಜಾತಿಯ ಒಂದು ವರ್ಗ ʼ ನಾ ನಿನ್ನನ್ನು ಮುಟ್ಟಲಾರೆ ʼ ಎಂದು ನಿರ್ಭಿಡೆಯಿಂದ ಹೇಳುತ್ತದೆ. ಮೆಟ್ರೋಪಾಲಿಟನ್‌ ನಗರಗಳಲ್ಲೂ ಅತ್ಯುನ್ನತ ಶಿಕ್ಷಣ ಪಡೆದವರೇ ವಾಸಿಸುವ ಗೃಹ ಸಮುಚ್ಚಯಗಳೂ ಸಹ ʼ ಮಾಂಸಾಹಾರಿಗಳಿಗೆ ʼ ನಿಷಿದ್ಧವಾಗಿರುವುದು ಇದನ್ನೇ ಸೂಚಿಸುತ್ತದೆ. ಸಣ್ಣ ಪಟ್ಟಣಗಳಲ್ಲೂ                    ʼ ಸಸ್ಯಾಹಾರಿಗಳಿಗೆ ಮಾತ್ರ ʼ ಎಂಬ ಫಲಕಗಳು ಈ ವ್ಯಾಧಿಯ ವ್ಯಾಪ್ತಿ ಮತ್ತು ಹರವನ್ನು ಬಿಂಬಿಸುತ್ತದೆ. ಮೇಲ್ಜಾತಿಯ ಒಂದೇ ಕುಟುಂಬದ ಒಳಗೂ ಸಹ ಪೂಜೆ-ಆಚರಣೆ-ವಿಧಿವಿಧಾನಗಳ ಸಂದರ್ಭದಲ್ಲಿ                    ʼ ನೀ ನನ್ನ ಮುಟ್ಟದಿರು ʼ ಅಥವಾ ʼ ನಾ ನಿನ್ನ ಮುಟ್ಟಲೊಲ್ಲೆ ʼ ಎಂಬ ಅಲಿಖಿತ ನಿಯಮವನ್ನು ಸಂಪ್ರದಾಯ ಸೃಷ್ಟಿಸಿರುವುದರಿಂದ ಇಂತಹ ಪರಿಸರದಲ್ಲಿ ಬೆಳೆಯುವ ಎಳೆಯ ಮನಸುಗಳೂ ಸಹ ಸ್ಪರ್ಶವನ್ನು ಸಾಪೇಕ್ಷವಾಗಿ ನೋಡುವ ಮನೋಭಾವದೊಂದಿಗೇ ಬೆಳೆಯುತ್ತವೆ. ಸ್ಪೃಶ್ಯಾಸ್ಪೃಶ್ಯತೆಯ ಸಿಕ್ಕುಗಳ ನಡುವೆಯೇ ಬೆಳೆಯುವ ಇಂತಹ ಒಂದು ಮನಸು ಸಹಜವಾಗಿಯೇ ಬಾಹ್ಯ ಸಮಾಜದಲ್ಲಿನ ಶ್ರೇಣಿ ಆಧಾರಿತ ಶ್ರೇಷ್ಠ-ಕನಿಷ್ಠ, ಶುದ್ಧ-ಪರಿಶುದ್ಧ ಎಂಬ ದ್ವಿಮಾನ ಸಂಕಥನಗಳ ನಡುವೆ ಬದುಕು ನಡೆಸುತ್ತವೆ. ಇದರ ನೇರ ಪರಿಣಾಮವನ್ನು ಆಧುನಿಕ ಸುಶಿಕ್ಷಿತ ಸಮಾಜದೊಳಗಿನ ಅಸ್ಪೃಶ್ಯತೆಯಲ್ಲಿ ಕಾಣಬಹುದಾಗಿದೆ.

 

ಒಳನೋಟವಿಲ್ಲದೆ ಅಸ್ಪೃಶ್ಯತೆ ಕಾಣದು

 

ಜಾತಿ-ಗೀತಿ ಎಲ್ಲಿದೆ ? ಅಸ್ಪೃಶ್ಯತೆ ಎಲ್ಲಿದೆ ? ಕಚೇರಿಗಳಲ್ಲಿ, ಬಸ್ಸು ರೈಲುಗಳಲ್ಲಿ, ಸಾರ್ವಜನಿಕ ಬದುಕಿನಲ್ಲಿ, ಮಾರುಕಟ್ಟೆಗಳಲ್ಲಿ ಯಾವ ಅಸ್ಪೃಶ್ಯತೆಯನ್ನು ಆಚರಿಸಲಾಗುತ್ತಿದೆ ? ಈ ಜಟಿಲ ಪ್ರಶ್ನೆಗಳಿಗೆ ಉತ್ತರಿಸುವ ಮುನ್ನ ಆಧುನಿಕ ಸಮಾಜ ತನ್ನ ಒಳನೋಟವನ್ನು ಮೊನಚುಗೊಳಿಸಿಕೊಳ್ಳಬೇಕು. ಏಕೆಂದರೆ ತೀಕ್ಷ್ಣ ಒಳನೋಟ ಇಲ್ಲದೆ ಹೋದರೆ ನಮಗೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳೂ ಸಹ ಕಾಣುವುದಿಲ್ಲ. ಹಾಗೆಯೇ ಅಸ್ಪೃಶ್ಯತೆಯನ್ನು ಬಾಹ್ಯ ಜಗತ್ತಿನಲ್ಲಿ ನಿಂತು ನೋಡುವುದಕ್ಕೂ, ಸಮಾಜದ ಆಂತರ್ಯದ ಒಳಹೊಕ್ಕು ನೋಡುವುದಕ್ಕೂ ಇರುವ ವ್ಯತ್ಯಾಸವನ್ನು ನಾವು ಮನಗಾಣಬೇಕಿದೆ. ಆಧುನಿಕ ಜೀವನ ಶೈಲಿ ಮತ್ತು ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುವ ಮನುಜ ಸಂಬಂಧಗಳು ಜಾತಿ ವ್ಯವಸ್ಥೆಯನ್ನು ಮರೆಮಾಚುವ ಒಂದು ಮಂಜಿನ ಪರದೆಯನ್ನು ಮಾತ್ರವೇ ಸೃಷ್ಟಿಸಲು ಸಾಧ್ಯ. ಪರದೆಯನ್ನು ಪಕ್ಕಕ್ಕೆ ಸರಿಸಿ ನೋಡಿದಾಗ ಸ್ಪೃಶ್ಯಾಸ್ಪೃಶ್ಯತೆಯ ಅನುಭವವಾಗುತ್ತದೆ. ಔದ್ಯೋಗಿಕ ವಲಯ ಮತ್ತು ಮಾರುಕಟ್ಟೆ ಇದನ್ನು ಜಾಣ್ಮೆಯಿಂದ ನಿರ್ವಹಿಸದೆ ಹೋದರೆ, ಬಹುಶಃ ತಳಸಮುದಾಯಗಳು ನಿರ್ವಹಿಸುವ ಹಲವು ರೀತಿಯ ಕಾಯಕಗಳಿಗೆ ಸಿಬ್ಬಂದಿ ದೊರೆಯದೆ ಹೋಗುತ್ತಾರೆ. ಇದು ಜಾತಿ ವ್ಯವಸ್ಥೆಯ ಚಾರಿತ್ರಿಕ ಜಾಣ್ಮೆ ಮತ್ತು ಸಮಕಾಲೀನ ತಂತ್ರಗಾರಿಕೆ.

 

ಈ ನಡುವೆಯೇ ನಮ್ಮ ನಡುವೆ ಕಳೆದ ಐದಾರು ವರ್ಷಗಳಲ್ಲಿ ಸಂಭವಿಸಿರುವ ಅಮಾನುಷ ಘಟನೆಗಳತ್ತ ಕಣ್ಣು ಹಾಯಿಸಿದರೆ ಈ ವಾಸ್ತವ ಢಾಳಾಗಿ ಕಾಣಿಸುತ್ತದೆ. ರಾಜಸ್ಥಾನದ ಶಾಲೆಯೊಂದರಲ್ಲಿ ಮೇಲ್ಜಾತಿಯವರಿಗಾಗಿ ಇರಿಸಲಾಗಿದ್ದ ಕುಡಿಯುವ ನೀರನ್ನು ಮುಟ್ಟಿದ ಕಾರಣಕ್ಕಾಗಿ ಶಾಲಾ ಬಾಲಕನೊಬ್ಬ ಶಿಕ್ಷಕನಿಂದ ಹತನಾಗಿದ್ದು, ಕೊಪ್ಪಳದ ದೇವಾಲಯವೊಂದಕ್ಕೆ ದಲಿತ ಸಮುದಾಯದ ಎಳೆ ಹಸುಳೆ ಪ್ರವೇಶಿಸಿದ್ದಕ್ಕಾಗಿ ಬಹಿಷ್ಕಾರ ಹೇರಿದ್ದು, ಕೋಲಾರ ಜಿಲ್ಲೆಯ ಉಲ್ಲೇರಹಳ್ಳಿಯಲ್ಲಿ ಉತ್ಸವದ ವೇಳೆ ದೇವರ ಗುಜ್ಜು ಕೋಲು ಮುಟ್ಟಿದ ಕಾರಣಕ್ಕೆ ಪರಿಶಿಷ್ಟ ಜಾತಿಯ ಬಾಲಕನ ಕುಟುಂಬಕ್ಕೆ 60 ಸಾವಿರ  ರೂ ದಂಡ ವಿಧಿಸಿ ಬಹಿಷ್ಕಾರ ಹೇರಿದ್ದು, ಬಂಗಾರಪೇಟೆ ತಾಲ್ಲೂಕಿನ ದೊಡ್ಡೂರು ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ದೇವಾಲಯ ಪ್ರವೇಶಿಸಿದ ಇಡೀ ದಲಿತ ಕುಟುಂಬವನ್ನು ಹೊರಗಟ್ಟಿದ್ದು ಇವೆಲ್ಲವೂ ಅಮೃತ ವರ್ಷದಲ್ಲಿ ನಡೆದ ಘಟನೆಗಳು. ಇತ್ತೀಚೆಗೆ ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬಳು ನೀರು ಕುಡಿದ ಕಾರಣಕ್ಕೆ ಸಾರ್ವಜನಿಕ ನೀರಿನ ತೊಟ್ಟಿಯನ್ನೇ ಗೋಮೂತ್ರದಿಂದ ಶುದ್ಧೀಕರಿಸಿರುವುದು ಸಹ ವರದಿಯಾಗಿದೆ.

 

ಅಮಾನುಷತೆಗೂ ಒಂದು ಮಿತಿ ಇದೆ ಎಂಬ ಭಾವನೆಯೇ ತಪ್ಪು ಎನ್ನುವಂತಹ ಘಟನೆ ಪೆರಿಯಾರ್‌ ಕರ್ಮಭೂಮಿ ತಮಿಳುನಾಡಿನಲ್ಲಿ ನಡೆದಿದೆ. ಪುದುಕೋಟ್ಟೈ ಜಿಲ್ಲೆಯ ವೆಲ್ಲನೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ನೂರು ಕುಟುಂಬಗಳು ಬಳಸುವ ಕುಡಿಯುವ ನೀರಿನ ಟ್ಯಾಂಕಿಗೆ ಮನುಷ್ಯನ ಮಲವನ್ನು ಸುರಿದು ಮಲಿನಗೊಳಿಸಿದ ಘಟನೆಯು ಸುದ್ದಿಮನೆಗಳ ಪರಿಭಾಷೆಯಲ್ಲಿ ಹೇಳುವುದಾದರೆ ಇಡೀ ದೇಶವನ್ನೇ ʼ ಬೆಚ್ಚಿ ಬೀಳಿಸಬೇಕಿತ್ತು ʼ. ಆದರೆ ದೇಶ ಬೆಚ್ಚಗೆ ಹೊದ್ದು ಮಲಗಿತ್ತು.  10 ಸಾವಿರ ಲೀಟರ್‌ ಸಾಮರ್ಥ್ಯದ ಈ ಟ್ಯಾಂಕಿನ ನೀರು ಹಳದಿ ಬಣ್ಣಕ್ಕೆ ತಿರುಗಿತ್ತು ಎಂದು ಹೇಳಲಾಗಿದೆ. ಇದು ಮಲಸಂಗ್ರಹದ ಪ್ರಮಾಣವನ್ನು ಸೂಚಿಸಿದಂತೆಯೇ, ಜಾತಿ ದ್ವೇಷ ಎನ್ನುವುದು ಮನುಷ್ಯನಿಂದ ಎಂತಹ ದುಷ್ಕೃತ್ಯಗಳನ್ನಾದರೂ ತಾಳ್ಮೆಯಿಂದ ಮಾಡಿಸಲು ಸಾಧ್ಯ ಎನ್ನುವುದನ್ನೂ ಸೂಚಿಸುವುದಲ್ಲವೇ ? ಮತ್ತೊಂದು ಘಟನೆಯಲ್ಲಿ ಮಧ್ಯಪ್ರದೇಶದ ಖರ್ಗೋನ್‌ ಜಿಲ್ಲೆಯ ಸಾನಾವದ್‌ ಪ್ರಾಂತ್ಯದ ಛಾಪ್ರಾ ಗ್ರಾಮದಲ್ಲಿ ಶಿವರಾತ್ರಿಯಂದು ಶಿವ ದೇವಾಲಯಕ್ಕೆ ಹೋದ ದಲಿತರ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ್ದಾರೆ. 

 

 

ಅಸ್ಪೃಶ್ಯತೆ ಮತ್ತು ಸಾಮಾಜಿಕ ನೆಲೆಗಳು

 

ಇಂದಿಗೂ ಸಹ ಅಸ್ಪೃಶ್ಯತೆಗೆ ಬಲಿಯಾಗುತ್ತಿರುವುದು, ಹಲ್ಲೆಗೊಳಗಾಗುತ್ತಿರುವುದು ಮತ್ತು ಸ್ಪೃಶ್ಯಾಸ್ಪೃಶ್ಯತೆಯ ಭೀಕರ ಅನುಭವಗಳಿಗೆ ತುತ್ತಾಗುತ್ತಿರುವುದು ದಲಿತ ಸಮುದಾಯದೊಳಗಿನ ತಳವರ್ಗ, ದುರ್ಬಲ ವರ್ಗ ಮತ್ತು ಸಾಮಾಜಿಕವಾಗಿ ಮೇಲೇರಲಾರದೆ ಅಂಚಿನಲ್ಲೇ ಉಳಿದಿರುವ ಒಂದು ವರ್ಗ. ಇದು ಜಾತಿ ವ್ಯವಸ್ಥೆ ಹೇಗೆ ವರ್ಗ ಸಮಾಜವನ್ನು ತನ್ನ ಬಾಹುಗಳಲ್ಲಿ ಬಂಧಿಸಿದೆ ಎನ್ನುವುದನ್ನೂ ಸೂಚಿಸುತ್ತದೆ. ಭಾರತದ ಸಂವಿಧಾನ ರೂಪಿಸಿರುವ ಸಹಬಾಳ್ವೆ, ಸಮನ್ವಯ, ಸೋದರತ್ವದ ನೆಲೆಗಳನ್ನು ಭಂಜಿಸಿ ಇಂತಹ ಅಮಾನುಷ ಕೃತ್ಯಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ಶೋಷಣೆ, ದೌರ್ಜನ್ಯ, ಅಪಮಾನ, ಬಹಿಷ್ಕಾರ, ಮಾನಸಿಕ ಚಿತ್ರಹಿಂಸೆಗೆ ಒಳಗಾಗುತ್ತಿರುವ ಅಸ್ಪೃಶ್ಯ ಸಮುದಾಯದ ಮುಂದೆ ಯಾವ ಆಯ್ಕೆ ಇರಲು ಸಾಧ್ಯ ?

ಬಹಿಷ್ಕೃತ ಸಮಾಜವೊಂದು ಸದ್ದಿಲ್ಲದೆ ಸೃಷ್ಟಿಯಾಗುತ್ತಿರುವಾಗ, ಅಸ್ಪೃಶ್ಯತೆಯಂತಹ ಹೀನ-ಅಮಾನುಷ ಆಚರಣೆಗಳು ನಿರ್ಭೀತಿಯಿಂದ ಅನಾವರಣಗೊಳ್ಳುತ್ತಿರುವಾಗ ಶೋಷಿತ ಸಮುದಾಯಕ್ಕೆ ಸಹಜವಾಗಿಯೇ ಅನ್ಯ ಮಾರ್ಗಗಳೂ ಕಾಣುತ್ತವೆ. ತಾವು ಬೆವರು ಸುರಿಸಿ ಕಟ್ಟಿಕೊಳ್ಳುವ ಬದುಕು ವಿಶಾಲ ಬಾಹ್ಯ ಸಮಾಜದ ದೃಷ್ಟಿನಲ್ಲಿ ನಿಕೃಷ್ಟವಾಗಿ ಕಾಣುತ್ತಿರುವಾಗ ಈ ಸಮುದಾಯಗಳ ಆಯ್ಕೆ ಸಹಜವಾಗಿಯೇ ಸಾಮಾಜಿಕ ಗೋಡೆಗಳಿಂದಾಚೆಗೆ ಕಂಡುಬರುತ್ತದೆ. ಸಮಾನತೆಯೊಂದಿಗೆ, ಘನತೆಯಿಂದ ಗೌರವಯುತ ಬದುಕು ಸವೆಸಲು ಕೇವಲ ಸಾಂವಿಧಾನಿಕ ಸವಲತ್ತುಗಳು ಮತ್ತು ಸರ್ಕಾರಗಳ ಆರ್ಥಿಕ ನೆರವುಗಳು ಸಾಕಾಗುವುದಿಲ್.‌ ಮನುಷ್ಯನಿಗೆ ವ್ಯಕ್ತಿಗತ ನೆಲೆಯಲ್ಲಿ ಒಂದು ಘನತೆ-ಗೌರವ ಇರುತ್ತದೆ. ಇದು ಸುತ್ತಲಿನ ಸಮಾಜಕ್ಕೂ ಸಹಜವಾಗಿ ವ್ಯಾಪಿಸುತ್ತದೆ. ಹಾಗಾಗಿಯೇ ಶೋಷಿತ-ಅಪಮಾನಿತ ಜನತೆ ಅಸ್ಪೃಶ್ಯತೆಯ ಅಪಮಾನಕ್ಕೆ ಎಡೆಯಿಲ್ಲದ ಅನ್ಯಧರ್ಮಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.  ಸಹಜವಾಗಿಯೇ ಡಾ ಬಿ.ಆರ್.‌ ಅಂಬೇಡ್ಕರ್‌ ಅವರ ಮಾರ್ಗ ಇಲ್ಲಿ ಹೆದ್ದಾರಿಯಂತೆ ಕಾಣುತ್ತದೆ.

 

ಈ ಮಾರ್ಗದಲ್ಲಿ ನಡೆದರೆ ಶೋಷಣೆ ಮುಕ್ತ ಸಮಾಜವೊಂದನ್ನು ಕಟ್ಟುವ ಕನಸನ್ನು ಸಾಕಾರಗೊಳಿಸುವ ಬೌದ್ಧ ಧಮ್ಮ ಕಣ್ಮುಂದೆ ನಿಲ್ಲುತ್ತದೆ. ಡಾ ಬಿ ಆರ್‌ ಅಂಬೇಡ್ಕರ್‌ ಬೌದ್ಧ ಧಮ್ಮವನ್ನು ಸ್ವೀಕರಿಸಿದ್ದು ಕೇವಲ ತಮ್ಮ ಧಾರ್ಮಿಕ ಅಥವಾ ತಾತ್ವಿಕ ನೆಲೆಯನ್ನು ಬದಲಿಸಲು ಅಲ್ಲ ಎಂಬ ಸತ್ಯವನ್ನು ವರ್ತಮಾನದ ಸಮಾಜ ಮತ್ತೆಮತ್ತೆ ಸಾಬೀತುಪಡಿಸುತ್ತಿದೆ. ಬೌದ್ಧ ಧಮ್ಮವನ್ನು ಸ್ವೀಕರಿಸುವ ಮೂಲಕ, ಬುದ್ಧ ದೀಕ್ಷೆಯನ್ನು ಪಡೆಯುವ ಮೂಲಕ, ಶೋಷಿತ ಜನತೆ ತಮ್ಮ ಸುತ್ತಲಿನ ತಾರತಮ್ಯದ ಗೋಡೆಗಳನ್ನು ಕೆಡವಿ, ಸಮಾನತೆ, ಸೋದರತೆ ಮತ್ತು ಸಹಬಾಳ್ವೆಯ ಮಾರ್ಗದಲ್ಲಿ ಸಾಗುವ ಕನಸು ಕಾಣುತ್ತಾರೆ. ಯಾಂತ್ರಿಕವಾಗಿ ಈ ಪ್ರಕ್ರಿಯೆಯನ್ನು ಮತಾಂತರ ಅಥವಾ ಧರ್ಮಾಂತರ ಎಂದು ಕರೆಯಬಹುದಾದರೂ, ಈ ಪ್ರಕ್ರಿಯೆಯ ಹಿಂದೆ ಒಂದು ಇಡೀ ಸಮುದಾಯದ ನರಳಿಕೆ, ಹಪಹಪಿ, ಆತಂಕ, ಹತಾಶೆ, ಆಕ್ರೋಶ ಎಲ್ಲವೂ ಅಡಗಿರುತ್ತದೆ. ಇವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದ ಸಮಾಜಕ್ಕೆ ಈ ಜನತೆ ಬೌದ್ಧ ದೀಕ್ಷೆಯನ್ನು ಪಡೆಯುವುದಕ್ಕೆ ಆಕ್ಷೇಪಿಸುವ ನೈತಿಕ ಹಕ್ಕು ಸಹ ಇರುವುದಿಲ್ಲ.

 

ನಿರಂತರ ಶೋಷಣೆಯಿಂದ ಜರ್ಜರಿತವಾದ ಸಮಾಜ ಅಥವಾ ಸಮುದಾಯ ಸಹಜವಾಗಿಯೇ ಸಾಂತ್ವನದ ನೆಲೆಗಳನ್ನು ಅರಸುತ್ತಾ ಹೋಗುತ್ತದೆ. ಜಾತಿ ತಾರತಮ್ಯಗಳಿಲ್ಲದ, ಮೇಲು-ಕೀಳು, ಶ್ರೇಷ್ಠ-ಕನಿಷ್ಠ, ಮಡಿ-ಮೈಲಿಗೆ, ಸ್ಪೃಶ್ಯಾಸ್ಪೃಶ್ಯತೆಯ ಗೊಡವೆ ಇಲ್ಲದ ಒಂದು ಸಮಾನತೆಯ ನೆಲೆಯಲ್ಲಿ ಶೋಷಿತ ಜನತೆ ತಮ್ಮ ಬದುಕು ಸವೆಸಲು ಇಚ್ಚಿಸುವುದು ಸಹಜವೇ ಆಗಿರುತ್ತದೆ. ಇಲ್ಲಿ ಭಾರತದ ಶೋಷಿತ ಸಮುದಾಯಗಳಿಗೆ, ಸ್ಪೃಶ್ಯ ಹಾಗೂ ಅಸ್ಪೃಶ್ಯ ದಲಿತರಿಗೆ ಬೌದ್ಧ ಧಮ್ಮ ತನ್ನ ತೆರೆದು ಬಾಹುಗಳೊಂದಿಗೆ ಕಾಣಿಸುತ್ತದೆ. ಬುದ್ಧ ಕೇವಲ ಶಾಂತಿ-ಸಹನೆ-ಅಹಿಂಸೆ ಮತ್ತು ಸಾಂತ್ವನದ ಸಾಕಾರ ಮೂರ್ತಿಯಾಗಿ ಕಾಣುವುದಿಲ್ಲ. ಬದಲಾಗಿ ಶೋಷಿತ ಜನತೆಯ ಪಾಲಿಗೆ ಒಂದು ಹೊಸ ಜಗತ್ತನ್ನು ನಿರ್ಮಿಸುವ ಪರಿವ್ರಾಜಕನಾಗಿ ಕಾಣುತ್ತಾನೆ. ಹುಟ್ಟಿನಿಂದಲೇ ಜೊತೆಗೆ ಬರುವ ತೊಗಲು ಅದರೊಡನೆ ಜಾತಿ ಸ್ಪರ್ಶವನ್ನೂ ಮಸಣದವರೆಗೂ ಹೊತ್ತು ತರುವ ಶ್ರೇಣೀಕೃತ ಸಮಾಜದಲ್ಲಿ ಶೋಷಣೆಗೊಳಗಾದವರಿಗೆ ಬೌದ್ಧ ಧಮ್ಮ ʼ ಸರ್ವ ಜನಾಂಗದ ಸುಂದರ ತೋಟ ʼ ದಂತೆ ಸಹಜವಾಗಿಯೇ ಕಾಣುತ್ತದೆ. ಬೌದ್ಧ ಧಮ್ಮವನ್ನು ಆಶ್ರಯಿಸುವುದರಿಂದ ಅಸ್ಪೃಶ್ಯತೆ ನಿವಾರಣೆಯಾಗುವುದೇ ? ಈ ಅಸಂಬದ್ಧ ಪ್ರಶ್ನೆಗೆ ತೆರೆದುಕೊಳ್ಳದೆ, ಅಸ್ಪೃಶ್ಯತೆಯ ಯಾತನೆಯನ್ನು ಅನುಭವಿಸುವ ಸಮಾಜದ ಕಟ್ಟಕಡೆಯ ಮನುಷ್ಯರ ಅಂತರಾಳದ ಬೇಗುದಿ ಮತ್ತು ವೇದನೆಯನ್ನು ಅರ್ಥಮಾಡಿಕೊಂಡರೆ, ಬಹುಶಃ ಬುದ್ಧ ಎಲ್ಲರಿಗೂ ಕಾಣಲು ಸಾಧ್ಯ.

-೦-೦-೦-೦-