ಅನುಭಾವ ಕೇಶವ ಮಳಗಿ ಗ್ರೀಕ್ ರುದ್ರನಾಟಕ ಹುಟ್ಟಿದ್ದು ಹೇಗೆ?
ಅನುಭಾವ
ಕೇಶವ ಮಳಗಿ
ಗ್ರೀಕ್ ರುದ್ರನಾಟಕ ಹುಟ್ಟಿದ್ದು ಹೇಗೆ?
ದುರಂತ ನಾಟಕ ಎಂದರೇನು? ಇದು ಗ್ರೀಸ್‌ನಲ್ಲಿ ಹೇಗೆ ಪ್ರವರ್ಧಮಾನಕ್ಕೆ ಬಂತು? ಎಂದು ಕೇಳಿಕೊಂಡರೆ ಕಾಣಿಸುವ ವಿವರಗಳು ಇವು: ನಾವೆಲ್ಲ ಅರಿತಿರುವಂತೆ ಈ ಪರಿಕಲ್ಪನೆಯು `ಬಾಕಸ್’ ಇಲ್ಲವೆ `ಡಯನೈಸಸ್’ ಎಂದು ಕರೆಯುವ ಗ್ರೀಕ್ ಮದಿರಾ ದೇವತೆಯಿಂದ (ಸುರೆಯ ಸುರ) ಹುಟ್ಟಿದ್ದು. ಪ್ರತಿ ಸುಗ್ಗಿ ಕಾಲದಲ್ಲಿ ಆರಾಧನೆಗೊಳಗಾಗುವ ದೈವ. ಈ `ಸುರೆಯ ಸುರ’ನ ಮೂರ್ತಿಯೆದುರು ಜನ ಸುಗ್ಗಿ ಸಮಯದಲಿ ಹಾಡಿಕುಣಿದು ಕುಪ್ಪಳಿಸುವರು. ಅಬ್ಬರದ ಮದಿರಾ ವಿಲಾಸ, ಉಲ್ಲಾಸ. ಈ ಸುಗ್ಗಿಗರ ದಿರಿಸು ಕುರಿ ತೊಗಟೆ ಮತ್ತು ಹಸಿರೆಲೆಗಳು. ಆರಂಭದಲ್ಲಿದ್ದ ಹಾಡು-ಕುಣಿತಗಳನ್ನು ಕ್ರಮೇಣ ನೇರ್ಪುಗೊಳಿಸಿಕೊಂಡರು. ಕಾಲಾಂತರದಲ್ಲಿ, ಪ್ರದರ್ಶನದ ಗುಣಮಟ್ಟ ಕೂಡ ಸುಧಾರಿಸಿತು. ಹಾಡು, ಬಲುಬೇಗ ದೇವಲೀಲೆಯನು, ಆತನ ಬಹು ವಿಧಧ ಸಾಹಸಗಳ ಸ್ತುತಿಗಳನ್ನು ಉಲಿವ ರೂಪ ಪಡೆಯಿತು. ಈ ಪ್ರದರ್ಶಕರ ತಂಡವು ಪ್ರಾಣಿಗಳ ಜತೆಜತೆಗೆ ಬೇರೆ ಬೇರೆ ಬಗೆಯ ಪಾತ್ರಗಳಿಗೆ ವಿಭಿನ್ನ ಉಡುಪುಗಳನ್ನು ವಿನ್ಯಾಸ ಮಾಡಿಕೊಂಡರು. ಸುಗ್ಗಿದೇವನ ಸ್ತುತಿಗೆ ಹೊರತಾದ ವಿಷಯಗಳು ಕೂಡ ಪ್ರದರ್ಶನದಲ್ಲಿ ಸೇರಿಕೊಂಡವು. ಇದು ಕಂದಾಚಾರಿ ಹಿರಿಯರಲ್ಲಿ ಇರುಸುಮುರುಸು ಉಂಟು ಮಾಡಿತು. "ಇಲ್ಲಿ ಸುರೆಯ ಸುರನ ಮಹಿಮೆಯೇ ಮಾಯವಾಗಿದೆ" ಎಂದವರು ಗೊಣಗಿದರು. ಮುಂದೊಮ್ಮೆ ಈ ನುಡಿ ಗ್ರೀಕ್ ಗಾದೆಮಾತಾಯಿತು.
ಹಿರೀಕರಲ್ಲಿ ಅಸಮಾಧಾನ, ಟೀಕೆಯನು ಹುಟ್ಟಿಸಿದ ಈ ಹೊಸಕಲ್ಪನೆ ಕಲಾಪ್ರಕಾರವಾಗಿ ಹೊಮ್ಮಿತು. ಇನ್ನು ಕಾಯುವುದು ಬೇಡವೆಂಬಂತೆ ಥೆಸ್ಪೀಸ್ ಎಂಬ ವ್ಯಕ್ತಿ ಪ್ರತ್ಯಕ್ಷನಾದ. ಈತನ ಚಿಂತನೆಯಿಂದಾಗಿ ಮೇಳವು ಗೀತೆಯನ್ನು ಹೇಗೆ ಪ್ರಸ್ತುತಪಡಿಸಬೇಕು, ಈ ಮೇಳಕ್ಕೆ ಹೊಂದುವಂತೆ ನಟನು ತನ್ನ ಸಂಭಾಷಣೆಯನ್ನು ಯಾವರೀತಿ ಆಡಿ ತೋರಿಸಬೇಕು ಎಂಬ ವಿಷಯಗಳು ಸೇರಿಕೊಂಡವು. ನಟರಿಗೆ ಪ್ರತ್ಯೇಕವಾದ ಮುಖವಾಡ ಮತ್ತು ದಿರಿಸುಗಳು ಪ್ರಾಪ್ತವಾದವು. ಇದರಿಂದ ಒಬ್ಬನೇ ನಟ ಅನೇಕ ಪಾತ್ರಗಳನ್ನು ವಹಿಸಲು ಸಾಧ್ಯವಾಯಿತು.
ಈ ರೀತಿಯಾಗಿ ಭಾವಗೀತೆ ನಿರೂಪಣೆಯು ಸಂಭಾಷಣೆ ಮತ್ತು ನಟನೆಯಾಗಿ ರೂಪಾಂತರಗೊಂಡಿತು. ನಾಟಕ ಹುಟ್ಟು ಪಡೆದು, ದುರಂತಗಾಥೆಗಳ ರಂಗಪ್ರದರ್ಶನಕ್ಕೆ ಅವಕಾಶವುಂಟಾಯಿತು. ಥೆಸ್ಫೀಸ್‌ನ ಬಳಿಕ ಬಂದ ಇನ್ನೊಬ್ಬ ಕವಿ ಫ್ರೈನಿಕಸ್ ಇದನ್ನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋದ. ರಂಗಮಂಚದ ಮೇಲೆ ಹೆಣ್ಣು ಪಾತ್ರಗಳನ್ನು ಕರೆ ತಂದುದರಲ್ಲಿ ಈತ ಮೊದಲಾಳಿ ಎಂಬುದು ಅಂಬೋಣ. ಆತ ಮೇಳವನ್ನು ಎರಡು ಭಾಗವಾಗಿ ಮಾಡಿದ. ಒಂದು ಮೇಳವು ನಟ ಮಾಡುತ್ತಿರುವುದನ್ನು ಸಮರ್ಥಿಸುವಂತೆ ದನಿಗೂಡಿಸುತ್ತದೆ. ಅದೇವೇಳೆ, ಇನ್ನೊಂದು ಮೇಳ ಆತ ಮಾಡಿರುವುದಕ್ಕೆ ಟೀಕು-ಟಿಪ್ಪಣಿ ಸೇರಿಸುತ್ತ ವಿರೋಧಿಸುತ್ತದೆ. ಇಮ್ಮೇಳಗಳ ಮೂಲಕ ಸಮಾಜದ ಪರ-ವಿರೋಧ ಎರಡೂ ದನಿಗಳನ್ನು ಆತ ಸರಿದೂಗಿಸಿದ. ಈ ಎಲ್ಲ ಪ್ರಯತ್ನಗಳು ದುರಂತ ನಾಟಕಗಳ ಮೇರು ಲೇಖಕರಾದ ಇಸ್ಕಿಲಸ್, ಸೊಫೊಕ್ಲೆಸ್ ಮತ್ತು ಯೂರಿಪಿಡೆಸ್‌ರಂಥವರು ಹೊಮ್ಮಲು ಕಾರಣವಾದವು.
ಇದು ಗ್ರೀಸ್‌ನಲ್ಲಿ ರಂಗಭೂಮಿಗೆ ಹುಟ್ಟಿಗೆ ಕಾರಣವಾದ ಲಗುಬಗೆಯ ನೋಟ. ಒಂದೇವಾಕ್ಯದಲ್ಲಿ ಹೇಳುವುದಾದರೆ, `ಸುಗ್ಗಿಕಾಲದ ಸುರೆಯಸುರನ ಆರಾಧನೆಯೇ ದುರಂತ ನಾಟಕಗಳ ಮೂಲವಾಯಿತು.’. ಆಮೇಲಾದುದೆಂದರೆ, ಧರ್ಮದ ಬಾನಿಯೊಳಗಿಂದ ‘ಕಲಾ ಮದಿರೆ’ಯು ಅವ್ಯಾಹತವಾಗಿ ನಮ್ಮೆಡೆಗೆ ಹರಿಯತೊಡಗಿದ್ದು. ತಮ್ಮ ಧರ್ಮ ಒದಗಿಸಿದ ಐತಿಹ್ಯ, ವೀರಗಾಥೆಗಳನ್ನು ಆಧರಿಸಿ ಮಹಾಕವಿಗಳು ಚಿರಂತನ ದುರಂತಕೃತಿಗಳನ್ನು ರಚಿಸತೊಡಗಿದರು. ಅವುಗಳಿಗೆ ದೇವ-ಮಾನವರ ನಡುವಿನ ಹೋರಾಟದ ಕೆಚ್ಚಿನ ಬಣ್ಣವನ್ನು ತುಂಬಿದರು.
(ಈಜಿಪ್ಟ್‌ನ ನಾಟಕಕಾರ, ಮೀಮಾಂಸಕ ತಾಫಿಕ್ ಅಲ್-ಹಕೀಮ್)
*
‘She loves me, she loves me not’
ಆಕೆ ನನ್ನನ್ನು ಪ್ರೀತಿಸುತ್ತಾಳೆ, ಆಕೆ ನನ್ನನ್ನು ಪ್ರೀತಿಸುವುದಿಲ್ಲ; ಆಕೆ ನನ್ನನ್ನು ಪ್ರೀತಿಸುತ್ತಾಳೆ, ಆಕೆ ನನ್ನನ್ನು ಪ್ರೀತಿಸುವುದಿಲ್ಲ. ನೋಡಿದಿರಲ್ಲ? ನನ್ನ ಅಮ್ಮ ನನ್ನನ್ನು ಪ್ರೀತಿಸುವುದಿಲ್ಲ. ಖಂಡಿತ ಇಲ್ಲ! ಆಕೆಗೆ ಬದುಕು ಬೇಕು, ಪ್ರೀತಿಸಲು, ಹೊಳಪಿನ ಉಡುಪುಗಳನ್ನು ತೊಡಲು. ಅಮ್ಮ ಇನ್ನೂ ಚಿಕ್ಕವಳಲ್ಲ ಎಂದು ನೆನಪಿಸಲು ಎಂಬಂತೆ ಇಪ್ಪತ್ತೈದರ ವಯಸ್ಸಿನ ನಾನಿದ್ದೇನೆ! ಆಕೆ ಮೂವತ್ತರಡು ಎಂದು ಹೇಳಿಕೊಂಡಾಗ ನಾನಿರುವುದಿಲ್ಲ! ಆದರದೇ, ನಲವತ್ಮೂರು ಎಂದು ಹೇಳಿಕೊಂಡಾಗ ನಾನಿರುತ್ತೇನೆ. ಅದಕ್ಕಾಗಿ ಅಮ್ಮ ನನ್ನನ್ನು ದ್ವೇಷಿಸುತ್ತಾಳೆ! ಮೇಲಾಗಿ ನಾನು ರಂಗಭೂಮಿಯನ್ನು ಸ್ವೀಕರಿಸಲಾರೆ ಎಂದು ಆಕೆಗೆ ಗೊತ್ತು. ಅವಳಿಗೆ ನಾಟಕವೆಂದರೆ ಪ್ರಾಣ!
ತಾನು ರಸಿಕರ ಮನ ತಣಿಸುತ್ತ ಕಲೆಯ ಪವಿತ್ರತೆ ಕಾಯುತ್ತಿದ್ದೇನೆಂಬುದು ಅವಳ ಅನ್ನಿಸಿಕೆ. ಇವತ್ತಿನ ರಂಗಭೂಮಿ ಗೊಡ್ಡು ಕಂದಾಚಾರದ, ಸಂಕುಚಿತ ದೃಷ್ಟಿಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ರಂಗದ ಮೇಲಿನ ಪರದೆಯು ಮೇಲೆದ್ದಾಗ ಮೂರು ಗೋಡೆಗಳಿರುವ, ಕೃತಕ ಬೆಳಕಿನಲ್ಲಿ ಹೊಳೆಯುತ್ತಿರುವ ಕೋಣೆಯಲ್ಲಿ ಕುಳಿತ ಮೇಧಾವಿಗಳು, ಪವಿತ್ರ ಕಲೆಯ ಪೂಜಾರಿಗಳು ಜನ ಹೇಗೆ ತಿನ್ನುತ್ತಾರೆ, ಕುಡಿಯುತ್ತಾರೆ, ಪ್ರೀತಿಸುತ್ತಾರೆ, ನಡೆದಾಡುತ್ತಾರೆ, ಬಟ್ಟೆ ತೊಡುತ್ತಾರೆ ಎಂದು ನನಗೆ ತೋರಿಸುತ್ತಾರೆ! ನೀರಸ ದೃಶ್ಯ ಮತ್ತು ಮಾತುಗಳ ಮೂಲಕ ನೀತಿಯ ಮೀನೊಂದನ್ನು ಹಿಡಿದು ತೋರಿಸಲು ಪ್ರಯತ್ನಿಸುತ್ತಾರೆ. ಈ ಪುಡಿ ನೀತಿಗಳೋ ದಿನದ ಬದುಕಿನಲ್ಲಿ ಉಪಯೋಗಕ್ಕೆ ಬರಬಹುದಷ್ಟೇ. ಸಾವಿರಾರು ವಿಧಾನದಲ್ಲಿ ಇದನ್ನೇ ಬೇರೆ ಬೇರೆ ರೀತಿ ಬಡಬಡಿಸಿದರೆ ನಾನು ಐಫೆಲ್ ಟವರ್‌ನಿಂದ ಉದುರುವ ಮೊಪಾಸನಂತೆ ಫಡಫಡಿಸುತ್ತೇನೆ. ಅದರಿಂದ ಮೊಪಾಸನ ಮನಸ್ಸಿನಲ್ಲಿ ಕಸವೇ ತುಂಬಿ ತುಳುಕಿರಬೇಕು!
*
(ಆಂಟೆನ್ ಚೆಕಾಫ್‌ನ ‘ಸೀಗಲ್’ ರಂಗಕೃತಿಯ ಪಾತ್ರಧಾರಿ ಟ್ರೆಪಲೆವ್‌ನ ಸ್ವಗತ. ಪ್ರಸಿದ್ಧ ರಂಗನಟಿಯಾಗಿರುವ ಆತನ ತಾಯಿಯೊಂದಿಗೆ ಆತನದ್ದು ಸಂಕೀರ್ಣ ಸಂಬಂಧ)
`Aye, but to die and go we know not where'
ಅಯ್ಯೋ! ಸಾಯುತ್ತೇವೆ.
ಆದರೆ ಎಲ್ಲಿ ಹೋಗುತ್ತೇವೆ ಎಂಬುದು ನಮಗೆ ತಿಳಿಯದೆ;
ಕೊರೆವ ಶೀತವನೆದುರಿಸುತ್ತ ಮಲಗಿ ಕೊಳೆಯಲು,
ಈ ಸಂವೇದನಾಶೀಲ ಬಿಸಿಯುಸಿರು ಮುದ್ದೆಯಂತಾಗಲು
ಸಂತಸದಲಿರುವ ಚೇತನ ಧಗಧಗಿಸುವ ಪ್ರವಾಹದಲಿ ಮಜ್ಜನವ ಮಾಡಲೋ,
ಇಲ್ಲವೇ ರೋಮಾಂಚಕ ದಷ್ಟಪುಷ್ಟ ಥಣ್ಣಗಿನ ಪಕ್ಕೆಲುಬಿನಲಿ ವಿರಮಿಸಲು;
ದೃಷ್ಟಿಹೀನ ಗಾಳಿಯಲಿ ಬಂದಿಯಾಗಲು,
ಹಾಗೂ ಡೋಲಾಯಮಾನ ಲೋಕದ ಹುಚ್ಚು ಹಿಂಸೆಯಲಿ ಅರಳಲು,
ಅಥವ ಲಂಗುಲಗಾಮಿಲ್ಲದ, ಅನಿಶ್ಚಿತ ನಿಕೃಷ್ಟದಲಿ, ನಿಕೃಷ್ಟ
ಯೋಚನೆ "ಇದು ಭಯಾನಕ!" ಎಂದು ಹೂಂಕರಿಸುವುದನು ಕಲ್ಪಿಸಿಕೊಳ್ಳಲು.
ಅತಿಯಾಗಿ ದಣಿದ, ಹೇಸಿಗೆಯ ಲೌಕಿಕ ಬದುಕು,
ಕಾಲ, ನೋವು, ಶಿಕ್ಷೆ, ಸೆರೆವಾಸ,
ನಮ್ಮ ಸಾವಿನ ಭಯಕೆ ಪ್ರಕೃತಿಯಲಿ ಸಗ್ಗದಂತೆ ಕಾಣಿಸಲು!
(ಶೇಕ್ಸ್‌ಪಿಯರ್‌ನ ‘Measure for Measure’ ರಂಗಕೃತಿಯ ಮರಣದಂಡನೆಗೆ ಗುರಿಯಾಗಿರುವ ಕ್ಲಾಡಿಯೋ ಪಾತ್ರದ ಸ್ವಗತ)