ಇದೇನಿದ್ದರೂ ಮುಂದಿನ ಚುನಾವಣೆಯ ತಯಾರಿ!  ಶಶಿಧರ ಹೆಮ್ಮಾಡಿ

shashidhar-hemmadi-kesari-shawl-hijab ಇದೇನಿದ್ದರೂ ಮುಂದಿನ ಚುನಾವಣೆಯ ತಯಾರಿ! ಶಶಿಧರ ಹೆಮ್ಮಾಡಿ

ಇದೇನಿದ್ದರೂ ಮುಂದಿನ ಚುನಾವಣೆಯ ತಯಾರಿ!    ಶಶಿಧರ ಹೆಮ್ಮಾಡಿ

 

ಇದೇನಿದ್ದರೂ ಮುಂದಿನ ಚುನಾವಣೆಯ ತಯಾರಿ!


 ಶಶಿಧರ ಹೆಮ್ಮಾಡಿ

16-19 ವಯಸ್ಸಿನ ಹುಡುಗರನ್ನು ಒಂದು ಕೇಸರಿ ಶಾಲಿನ ಮೂಲಕ ಕೋಮುವಾದಿಗಳನ್ನಾಗಿಸಲು, ತನ್ನದೇ ಕ್ಲಾಸಿನ, ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ದ್ವೇಷ ಕಾರುವ ಮನಸ್ಥಿತಿಯನ್ನು ಆ ಹುಡುಗರಲ್ಲಿ ನಿರ್ಮಿಸಲು ಬಿಜೆಪಿ ಪಣತೊಟ್ಟು ನಿಂತಿದೆ. ಹಿಜಾಬ್ ಇಲ್ಲಿ ವಿಷಯವೇ ಅಲ್ಲ. ಅದರಿಂದ ಯಾರಿಗೂ ತೊದರೆ ಇಲ್ಲ. ಆದರೆ ಬಿಜೆಪಿಗೆ ಸದ್ಯಕ್ಕೆ ಇದರ ಮೂಲಕ ರಾಜಕೀಯ ಮಾಡಬೇಕಾಗಿದೆ. ಈ ಯುವಕರ ಮೊದಲ ವೋಟ್ ಬಿಜೆಪಿಗೆ ಬೀಳಬೇಕು, ಮುಸ್ಲಿಮರ ವಿರುದ್ಧ ದಿನೇದಿನೇ ಇವರು ಸಿಟ್ಟಾಗುತ್ತಿರಬೇಕು, ಮುಂದೆ ಈ ಹುಡುಗರು ತಮ್ಮ ದ್ವೇಷ ರಾಜಕಾರಣದ ಕಾಲಾಳುಗಳಾಗಬೇಕು ಎಂಬುದು ಸಂಘಪರಿವಾರದ ಅಜೆಂಡಾ. ಇಷ್ಟೆಲ್ಲವನ್ನೂ ಕೇಸರಿ ಶಾಲಿನ ಮೂಲಕ ಅದು ಮಾಡಲು ಹೊರಟಿದೆ.

ಇದು ಎಷ್ಟು ಸರಳ ಎಂದರೆ ಕಾಲೇಜಿಗೆ ಬರುವಾಗ ಬ್ಯಾಗ್‌ನಲ್ಲಿ ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ., ಸ್ಕಾರ್ಫ್ ಹಾಕಿದ ಹುಡುಗಿ ಕಾಲೇಜಿನ ಕಂಪೌಂಡ್ ಒಳಗೆ ಬಂದರೂ ತಕ್ಷಣ ಹುಡುಗರು ಕೇಸರಿ ಶಾಲು ಹಾಕಿಕೊಂಡು ಕ್ಲಾಸಿನಲ್ಲಿ ಕೂರುತ್ತಾರೆ. ಆಗ ಯಾರಾದರೂ 'ನೋಡಿ ಇದು ತಾರತಮ್ಯ, ಕೇಸರಿ ಶಾಲು ಹಾಕಿದ ಮಕ್ಕಳು ಕ್ಲಾಸಿನಲ್ಲಿದ್ದಾರೆ, ಸ್ಕಾರ್ಫ್‌ಗೆ ಮಾತ್ರ ನಿಮ್ಮ ವಿರೋಧವೇ' ಎಂದು ಪ್ರಶ್ನಿಸುತ್ತಾರೆ. ತಕ್ಷಣ ಪ್ರಿನ್ಸಿಪಾಲರು ಕ್ಲಾಸಿಗೆ ಹೋಗಿ ಕೇಸರಿ ಶಾಲಿನ ಮಕ್ಕಳನ್ನು ಕ್ಲಾಸಿನಿಂದ ಹೊರಗೆ ಹೋಗಿ ಎಂದು ಹೇಳುತ್ತಾರೆ. ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಕ್ಲಾಸಿನಿಂದ ಹೊರಬಂದು ಕಾಲೇಜಿನ ಹೊರಗೆ ಜಮಾಯಿಸುತ್ತಾರೆ. ತಕ್ಷಣ ಅಲ್ಲಿಗೆ ಸಂಘಪರಿವಾರದ ನಾಯಕರು ಬರುತ್ತಾರೆ. ಮಕ್ಕಳಿಗೆ ಸಮಾಧಾನ ಮಾಡಿದ ನಾಟಕ ಮಾಡುತ್ತಾರೆ. ಅಲ್ಲಿದ್ದ ಮುಸ್ಲಿಮ್ ಪೋಷಕರನ್ನೋ, ನಾಯಕರನ್ನೋ ಉದ್ದೇಶಿಸಿ 'ನೋಡಿ ನಿಮ್ಮ ಹುಡುಗಿ ಸ್ಕಾರ್ಫ್ ಹಾಕಿದ್ರೆ ನಮ್ಮ ಹುಡುಗರನ್ನ ಕಂಟ್ರೋಲ್ ಮಾಡುವುದು ಹೇಗೆ, ಏನೆಲ್ಲ ಅನಾಹುತ ಆಗಬಹುದು, ಇದು ಎಲ್ಲಿಗೆ ತಲುಪಬಹುದು' ಎಂದೆಲ್ಲ ಜಗಳಕ್ಕೆ ಬರುತ್ತಾರೆ. ಪೊಲೀಸರು 'ಕಾಲೇಜಿನ ರೂಲ್ಸ್ ಪಾಲಿಸಬೇಕು ಕಣ್ರೀ' ಎಂದು ಮುಸ್ಲಿಮರಿಗೆ ಬುದ್ದಿ ಹೇಳುತ್ತಾರೆ. ಕೊನೆಗೆ ಕೇಸರಿ ಶಾಲು ಹಾಕಿದ ಹುಡುಗರ ಬಳಿ ಹೋಗಿ ಸಂಘಪರಿವಾರದ ನಾಯಕರು 'ನೀವೆಲ್ಲ ಶಾಲು ತೆಗೆದು ಕ್ಲಾಸಿಗೆ ಹೋಗಿ' ಎಂದು ಆದೇಶ ನೀಡುತ್ತಾರೆ. ಅಲ್ಲಿಗೆ ಶಾಲಿನ ಸಣ್ಣ ಪ್ರಹಸನ ಮುಗಿಯುತ್ತಾದೆ. ಶಾಲಿನ ಹುಡುಗರು ಕ್ಲಾಸಿನೊಳಗೆ ಹೋಗುತ್ತಾರೆ. ಹಿಜಾಬ್ ಹುಡುಗಿಯರು ಬೀಗ ಹಾಕಿದ ಗೇಟಿನ ಎದುರು ನಿಂತು ಸಂಜೆಯಾಗುವುದನ್ನು ಕಾಯುತ್ತಾರೆ. ಇಷ್ಟು ಸರಳವಾಗಿ ಬಿಜೆಪಿ ಕಾಲೇಜುಗಳಲ್ಲಿ ಇನ್ನಷ್ಟು ಗಟ್ಟಿಯಾಗುತ್ತದೆ. ವಿವೇಚನೆ ಇಲ್ಲದ ಹುಡುಗರು ಬಿಜೆಪಿಯ ದಾಳವಾಗಿ ಬಳಕೆಯಾಗುತ್ತಾರೆ.


ಉಡುಪಿಯಲ್ಲಿ ರಘುಪತಿ ಭಟ್‌ಗೆ ಮುಂದೆ ಆಗಲಿರುವ ಮುಖಭಂಗ ತಪ್ಪಿಸಲು ಇದೇ ಶಾಲು ಈಗ ಕರಾವಳಿಯ ಹಲವು ಕಾಲೇಜುಗಳಿಗೆ ತಲುಪಿದೆ. ಎಲ್ಲ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಅವರನ್ನು ಕಾಲೇಜಿನಿಂದ ಹೊರಗಿರಿಸಲಾಗುತ್ತಿದೆ. ಇದು ಇಲ್ಲಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದು ಇನ್ನೂ ಹಲವು ಕಾಲೇಜುಗಳಿಗೆ ಹರಡಲಿದೆ. ಸಂಘಟನೆ, ತೋಳ್ಬಲ, ಹಣದ ಬಲ, ಸಂಖ್ಯಾಬಲ ಎಲ್ಲ ಇರುವ ಸಂಘ ಪರಿವಾರ, ಬಿಜೆಪಿ ಈ ಆಟದಲ್ಲಿ ಸದ್ಯಕ್ಕೆ ಸಹಜವಾಗಿ ಮೇಲ್ಗೈ ಸಾಧಿಸಲಿದೆ.

ಈಗ ನಮ್ಮ ಮುಂದಿರುವ ಸವಾಲು ದೊಡ್ಡದಿದೆ. ಒಂದೆಡೆ ಬಿಜೆಪಿ ಈ ರೀತಿ ಹದಿಹರಯದ ಹಿಂದುಳಿದ ವರ್ಗಗಳ, ಬಡತನದ ಹಿನ್ನೆಲೆಯ ಹುಡುಗರನ್ನು ಒಂದು ಶಾಲಿನ ಮೂಲಕ ಕಣ್ಣುಕಟ್ಟಿ ದಿಕ್ಕುತಪ್ಪಿಸಿ ಆ ಹುಡುಗರನ್ನು ಬಳಸಿಕೊಂಡು ತನ್ನ ರಾಜಕೀಯ ಶಕ್ತಿಯನ್ನು ಹೆಚ್ಚಿಕೊಳ್ಳುವುದನ್ನು, ಆ ಹುಡುಗರು ಕೋಮುವಾದಿಗಳಾಗುವುದನ್ನು ನಾವು ತಡೆಯಬೇಕು. ಎರಡನೆಯದು ಮುಸ್ಲಿಮ್ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿ ಶಿಕ್ಷಣ ಪಡೆಯುವಂತಾಗಬೇಕು. ಬಿಜೆಪಿಯ ಈ ಕೇಸರಿ ಶಾಲಿನ ಕುತಂತ್ರದ ಆದರೆ ಅತಿ ಅಪಾಯಕಾರಿಯಾದ ರಾಜಕೀಯ ನಾಟಕವನ್ನು ಜಾಣ್ಮೆಯಿಂದ ಛಿದ್ರಗೊಳಿಸಬೇಕು.

ಕೋರ್ಟ್ ತೀರ್ಪು ಬರುವ ವರೆಗೆ ಕಾಯಬಾರದು. ಅದು ಯಾವಾಗ ಬರುತ್ತದೋ ಗೊತ್ತಿಲ್ಲ. ಸರ್ಕಾರ, ಶಿಕ್ಷಣ ಇಲಾಖೆ, ಪೊಲೀಸ್, ಕಾಲೇಜು ಆಡಳಿತ ಯಾರೂ, ಯಾವುದೂ ನಮ್ಮ ಪರವಾಗಿಲ್ಲ. ಈ ಹೋರಾಟದಲ್ಲಿ ಯಾರು ಸೋಲುತ್ತಾರೆ ಯಾರು ಗೆಲ್ಲುತ್ತಾರೆ ಎಂಬುವುದು ಮುಖ್ಯವಲ್ಲ. ಮುಸ್ಲಿಮ್ ಹೆಣ್ಣುಮಕ್ಕಳ ಶಿಕ್ಷಣ ಗೆಲ್ಲಬೇಕು. ಸಂಘಪರಿವಾರ ಶಾಲಿನ ರಾಜಕೀಯ ಸೋಲಬೇಕು. ಹಿಜಾಬ್ ವಿವಾದ ತಾತ್ಕಾಲಿಕವಾಗಿ ತಣ್ಣಗಾದರೂ ಬಿಜೆಪಿಗೆ ಅದು ದೊಡ್ಡ ಆಘಾತವಾಗುವುದು ಸತ್ಯ.