ಹಾವೇರಿಯಲ್ಲಿ ಪತ್ರಕರ‍್ತರ ಮೇಲೆ ಹಲ್ಲೆಗೆ ಖಂಡನೆ
ಹಾವೇರಿಯಲ್ಲಿ ಪತ್ರಕರ‍್ತರ ಮೇಲೆ ಹಲ್ಲೆಗೆ ಖಂಡನೆ
ತುಮಕೂರು: ಹಾವೇರಿಯ ಪತ್ರಕರ್ತರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಹಾಗೂ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ನಗರದ ಎಲ್ಲಾ ಪತ್ರಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ರೈತಪರ ಹೋರಾಟಗಾರರ ಯ ಹೆಸರಿನ ಮಂಜುಳಾ ಪೂಜಾರ್ ಅಸಲಿ ಮುಖವಾಡವನ್ನು ಸುದ್ದಿ ವಾಹಿನಿ ಚುಟುಕು ಕಾರ್ಯಚರಣೆ ಮೂಲಕ ಬಯಲು ಮಾಡಿದ್ದರ ಹಿನ್ನೆಲೆಯಲ್ಲಿ ಜು.2ರಂದು ಶನಿವಾರ ಮಧ್ಯಾಹ್ನ ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಮಂಜುಳಾ ಪೂಜಾರ್ ಹಾಗೂ ಅವರ ಸಹಚರರು ಸುದ್ದಿಗೋಷ್ಠಿ ನಡೆಸಿ ಹೊರ ಬರುತ್ತಿದ್ದಂತೆ ಏಕಾಏಕಿ ಖಾಸಗಿ ಸುದ್ದಿ ವಾಹಿನಿಯ ಸಿಬ್ಬಂದಿಯ ಮೇಲೆ ಹಾಡಹಗಲೇ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿರುವುದು ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ ಎಂಬುದು ಸಾಬೀತಾಗಿದೆ ಹಾವೇರಿ ಜಿಲ್ಲೆಯ ಖಾಸಗಿ ವಾಹಿನಿಯ ವರದಿಗಾರರಾದ ವೀರಯ್ಯ ಹಿರೇಮಠ, ಶಿವು ಮಡಿವಾಳರ್ ಹಾಗೂ ಕ್ಯಾಮೆರಾಮೆನ್ ಪ್ರಕಾಶ್ ಮುಳ್ಳಳ್ಳಿ ಅವರ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್ ಮಾತನಾಡಿ, ರಾಜ್ಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಡಿ.ರಂಗರಾಜು ಮಾತನಾಡಿ, ಪದೇ ಪದೇ ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು, ಸಮಾಜದ ನಾಲ್ಕನೇ ಅಂಗ ಎಂದು ಹೇಳುತ್ತಾರೆಯೇ ವಿನಃ ಸೂಕ್ತ ರಕ್ಷಣೆ ನೀಡಿ, ಹಾವೇರಿ ಜಿಲ್ಲೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವವರನ್ನು ಗಡಿಪಾರು ಮಾಡಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಾಜಿ ಸಚಿವರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಶಿವಣ್ಣ ಮಾತನಾಡಿ, ಈ ಸಂಬಂಧ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಿ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.