ಇಂದಿರಾ ಗಾಂಧಿಯ ಮಕ್ಕಳು ಸಂಜಯ್ ಮತ್ತು ರಾಜೀವ್, ಇವರಿಬ್ಬರ ಮಕ್ಕಳು ವರುಣ್ ಫಿರೋಜ್ ಮತ್ತು ರಾಹುಲ್
ರಾಜಕಾರಣವೂ ಹೀಗೇ ವೈದಿಕರ ನೀತಿ ನಿರೂಪಣೆಯ ಚೌಕಟ್ಟಿಗೇ ಅಂಟಿಕೊಂಡು ಬಿಟ್ಟಿತ್ತು.
ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
ಮುಸ್ಲಿಮರು ನಾಟಕದಲ್ಲಿ ಹೇಗೆ ತಮ್ಮದೇ ಆದ ವಿಶಿಷ್ಟ ಹಾಗೂ ವಿಚಿತ್ರ ಶೈಲಿಯಲ್ಲಿ ಕನ್ನಡ ಮಾತನಾಡುತ್ತಾರೆ ಎಂದು ರಿಚರ್ಡ್ ಲೂಯಿಸ್ ಎಂಬ ಹಾಸ್ಯ ನಟ ತಮ್ಮ ಸ್ಟಾಂಡಿಂಗ್ ಕಾಮೆಡಿಯಲ್ಲಿ ವರ್ಣಿಸುತ್ತಾರೆ. ಆದರೆ ಡಾಬಸ್ ಪೇಟೆ ಸಮೀಪದ ಹಾಲೇನಹಳ್ಳಿಯಲ್ಲಿ ಇತ್ತೀಚೆಗೆ ಕುರುಕ್ಷೇತ್ರ ನಾಟಕದ ಎಲ್ಲ ಪಾತ್ರಗಳನ್ನು ಮುಸ್ಲಿಮರೇ ಅಭಿನಯಿಸಿದರು ಹಾಗೂ ನಾಟಕದ ಮೇಷ್ಟ್ರು ಹೇಳಿಕೊಟ್ಟಂತೆಯೇ ಯಾವ ಅಪಭ್ರಂಶಗಳೂ ಇಲ್ಲದೇ ಸ್ವಚ್ಚ ಪೌರಾಣಿಕ ನಾಟಕದ ಭಾಷೆಯಲ್ಲಿಯೇ ಮಾತನಾಡಿದರು, ಕಂದ ಪದ್ಯಗಳನ್ನೂ ಹಾಡಿದರು. ಅವರಿಗೆ ಒನ್ಸ್ ಮೋರ್ ಕೂಡಾ ಬಿದ್ದವು.
ಆಧುನಿಕ ಕನ್ನಡ ಸಾಹಿತ್ಯದ ಆರಂಭದ ದಿನಗಳಲ್ಲಿ ಮಧ್ಯಮ ವರ್ಗದ ವೈದಿಕ ಪಟುಗಳೇ ನಾಗರಿಕತೆಯ ಎಲ್ಲವನ್ನೂ ನಿರೂಪಿಸಿ ನಿರ್ಧರಿಸಿದ ಪರಿಣಾಮ ನಾಟಕ ಹಾಗೂ ಸಿನಿಮಾಗಳಲ್ಲಿ ಮುಸ್ಲಿಮರು ಹೀಗೇ ಮಾತನಾಡಬೇಕು, ಅವರು ಜಟಕಾ ಹೊಡೆಯುವವರೇ ಆಗಿರಬೇಕು, ಎಲ್ಲ ಸಿನಿಮಾಗಳಲ್ಲೂ ಹೀರೋ ಬ್ರಾಹ್ಮಣನೇ ಆಗಿರಬೇಕು ಎಂಬ ಅಲಿಖಿತ ನಿಯಮವನ್ನು ಉದ್ಯಮದ ಎಲ್ಲರೂ ತಂತಮ್ಮ ಮೇಲೆ ಹೇರಿಕೊಂಡು ಬಿಟ್ಟಿದ್ದರು.
ರಾಜಕಾರಣವೂ ಹೀಗೇ ವೈದಿಕರ ನೀತಿ ನಿರೂಪಣೆಯ ಚೌಕಟ್ಟಿಗೇ ಅಂಟಿಕೊಂಡು ಬಿಟ್ಟಿತ್ತು. ತಮಿಳುನಾಡಿನಲ್ಲಿ ಕಾಂಗ್ರೆಸ್ ನಾಯಕತ್ವ ಹಿಡಿದುಕೊಂಡಿದ್ದ ಇದೇ ಜನರು ವಿದ್ಯಾರ್ಥಿ ನಿಲಯಗಳಲ್ಲೂ ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯತೆ ಆಚರಿಸುತ್ತಿದ್ದುದನ್ನು ಕಂಡು ಕಾಮರಾಜ್ ನಾಡಾರ್ ಆ ಪಕ್ಷವನ್ನೇ ತೊರೆಯುವ ಹಂತಕ್ಕೆ ಬಂದು ಬಿಡುತ್ತಾರೆ. 60ರ ದಶಕದ ಅಂತ್ಯದಲ್ಲಿ ನಮ್ಮ ಖರ್ಗೆಯವರಂತೆಯೇ ಎಐಸಿಸಿ ಅಧ್ಯಕ್ಷರಾಗಿದ್ದ ಇದೇ ಕಾಮರಾಜ್ ಇಂದಿರಾ ಗಾಂಧಿಯನ್ನು ಪ್ರಧಾನಿ ಗದ್ದುಗೆ ತಲುಪಿಸಿಬಿಡುತ್ತಾರೆ. ಆಗ ಆ ಗಾದಿಯನ್ನು ಹಿಡಿಯಲು ಯತ್ನಿಸಿ ಸೋತಿದ್ದ ಮುರಾರ್ಜಿ ದೇಸಾಯಿ ದಶಕದ ಬಳಿಕ ಜನತಾರಂಗದ ಪ್ರಧಾನಿಯಾಗಿ ಹಟ ತೀರಿಸಿಕೊಳ್ಳುತ್ತಾರೆ.
ಚುನಾವಣಾ ಅಕ್ರಮದ ಕಾರಣ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ಇಂದಿರಾ ಇನ್ನು ಆರು ವರ್ಷ ಅಥವಾ ಕಾಲ ಬದಲಾಗಿಬಿಟ್ಟರೆ ಜೀವಮಾನ ಪೂರಾ ಪ್ರಧಾನಿಯಾಗಲಾರೆ ಎಂದು ಭಾವಿಸಿ ತುರ್ತುಪರಿಸ್ಥಿತಿ ಹೇರುತ್ತಾರೆ. 1977-78ರಲ್ಲಿ ಇಂದಿರಾ ಎಂಬ ಸರ್ವಾಧಿಕಾರಿಯ ಕಡು ವಿರೋಧಿಗಳಾಗಿದ್ದ ಬಹುಪಾಲು ಮಂದಿ ಇವತ್ತು ಅಧಿಕಾರದಲ್ಲಿದ್ದಾರೆ ಹಾಗೆಯೇ ಇಂದಿರಾ ವಿರೋಧಿಗಳಾಗಿದ್ದ ಸಾಮಾನ್ಯ ಓಟುದಾರರು ಇವತ್ತು ಆಕೆ ಒಡೆದು ಬಿಟ್ಟುಹೋದ ಕಾಂಗ್ರೆಸ್ ಪರವಾಗಿ ನಿಲ್ಲುವಂತ ದುರವಸ್ಥೆಯನ್ನು ಎಮರ್ಜೆನ್ಸಿ ವಿರೋಧಿಸಿ ಅವತ್ತು ಜೈಲು ಸೇರಿದ್ದ ಇವತ್ತಿನ ಬಿಜೆಪಿಗಳು ತಂದೊಡ್ಡಿದ್ದಾರೆ.
ಕಾಲ ಎಲ್ಲವನ್ನೂ ಮರೆಸಿಬಿಡುತ್ತದೆಯಂತೆ, ಜೀವಂತವಾಗಿರುವ ಎಲ್ಲರನ್ನೂ ಮರೆಸುವ ಶಕ್ತಿ ಈ ಕಾಲಮಾನಕ್ಕಿದೆ ಎನ್ನುವುದೂ ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಒಂದು ಕಾಲಕ್ಕೆ ಕಾಂಗ್ರೆಸ್ ಕರಪತ್ರಗಳಲ್ಲಿ ಮಹಾತ್ಮ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಬ ಬಾಯಿ ಪಟೇಲ್, ಜವಹರಲಾಲ್ ನೆಹರೂಗಳು ಮುಗುಳ್ನಗುತ್ತಿದ್ದರು, ಕ್ರಮೇಣ ಅವರೆಲ್ಲ ಮರೆಯಾಗಿ ಇಂದಿರಾ ಮತ್ತು ನೆಹರೂ ಉಳಿದುಕೊಂಡರು. ಈಗ ಇಂದಿರಾಗಾಂಧಿಯೂ ನಾಪತ್ತೆ, ಓನ್ಲೀ ಸೋನಿಯಾ, ರಾಹುಲ್ ಅಂಡ್ ಪ್ರಿಯಾಂಕ.
ಇಂದಿರಾ ಗಾಂಧಿಗೆ ಸಂಜಯ್ ಹಾಗೂ ರಾಜೀವ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು ಎನ್ನುವುದನ್ನೂ ಈ ಕಾಲ ಮರೆಸಿಬಿಟ್ಟಿದೆ. 1997ರಲ್ಲಿ ಸೋತು ಮನೆ ಸೇರಿದ್ದ ಅಮ್ಮ ಇಂದಿರಾ ಪ್ರಿಯದರ್ಶಿನಿ ಗಾಂಧಿಯನ್ನು ಮೂರೇ ವರ್ಷಗಳಲ್ಲಿ 1980ರ ಜನವರಿಯಲ್ಲಿ ಪ್ರಧಾನಿ ಗದ್ದುಗೆಯ ನಾಲ್ಕನೇ ಅವಧಿಗೆ ತಂದು ಕೂರಿಸಿದ ಮಗ ಸಂಜಯ್ ಗಾಂಧಿ ಅದಾದ ಆರೇ ತಿಂಗಳಿಗೆ ಜೂನ್ 23ರಂದು ವಿಮಾನ ಅಪಘಾತದಲ್ಲಿ ತೀರಿಕೊಳ್ಳುತ್ತಾರೆ. ಆಗ ಸಂಜಯ್ ಗಾಂಧಿ-ಮೇನಕಾ ಗಾಂಧಿ ದಂಪತಿಯ ಏಕೈಕ ಕರುಳ ಕುಡಿಗೆ ಕೇವಲ 100 ದಿನ ಮಾತ್ರ .ಅಪ್ಪ ತನ್ನನ್ನು ಎತ್ತಿ ಮುದ್ದಾಡಿ ಮೈದಡವಿದ ಅನುಭವವೇ ಈ ಕಂದನಿಗಿಲ್ಲ. ಸಂಜಯ್ ತನ್ನ ಅಪ್ಪನ ಹೆಸರನ್ನೇ ಮಗನಿಗೂ ಇಟ್ಟಿದ್ದರು. ಮಗ ತನ್ನ ಮೊಮ್ಮಗನಿಗೆ ಇರಿಸಿದ್ದ ಫಿರೋಜ್ ಎಂಬ ಹೆಸರಿನ ಜೊತೆಗೆ ವರುಣ್ ಎಂದು ಸೇರ್ಪಡೆ ಮಾಡಿದ್ದು ಅಜ್ಜಿ ಇಂದಿರಾ ಗಾಂಧಿ. ಅದಾದ ನಾಲ್ಕೇ ವರ್ಷದಲ್ಲಿ ಅಜ್ಜಿಯೂ ಅಂಗರಕ್ಷಕರ ಗುಂಡಿನ ದಾಳಿಗೆ ಬಲಿಯಾಗಿಬಿಟ್ಟರು. ಆದರೆ ಆ ನಾಲ್ಕು ವರ್ಷಗಳಲ್ಲೇ ಇಂಡಿಯಾದ ಎಲ್ಲರ ಮನೆಗಳಲ್ಲಿ ನಡೆಯುವಂತೆ ಅತ್ತೆ ಸೊಸೆ ಕಿತ್ತಾಟ ನಡೆದು ಮೇನಕಾ ಗಾಂಧಿ ಎಳೆ ಕಂದನನ್ನು ಎತ್ತಿಕೊಂಡು ಪ್ರಧಾನಿ ನೆರಳನ್ನು ತೊರೆದು ಸಂಜಯ್ ವಿಚಾರ್ ಮಂಚ್ ಸ್ಥಾಪಿಸಿಕೊಂಡಿದ್ದರು.
1980ರಲ್ಲಿ ಇಂದಿರಾ ಗಾಂಧಿಯನ್ನು ಮತ್ತೆ ಗಾದಿಗೆ ತಂದು ಕೂರಿಸುವಲ್ಲಿ ಸಂಜಯ್ ಗಾಂಧಿಯಷ್ಟೇ ಅತನ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದದ್ದು ಮೇನಕಾ ಗಾಂಧಿ, ಆಗ ಆಕೆ ಕಾಂಗ್ರೆಸ್ ವರ್ಚಸ್ಸು ಹೆಚ್ಚಿಸುವ ಸಲುವಾಗಿಯೇ ಸೂರ್ಯ ಎಂಬ ಪತ್ರಿಕೆಯನ್ನೂ ಆರಂಭಿಸಿ ನಡೆಸಿದ್ದರು.
ನಂತರ ವಿಪಿ ಸಿಂಗ್ ಜನತಾದಳ, ಅದಾದ ಮೇಲೆ ಕಡೆಗೆ ಬಿಜೆಪಿಯಲ್ಲಿ ನೆಲೆ ಕಂಡುಕೊಂಡ ಮೇನಕಾ ಗಾಂಧಿಗೆ ಈಗ 67ರ ಇಳಿವಯಸ್ಸು. ಅಮ್ಮ ಎಂಪಿಯಾಗಿ ಚುನಾಯಿತರಾಗುತ್ತಿದ್ದ ಉತ್ತರ ಪ್ರದೇಶದ ಉತ್ತರ ಭಾಗದ ಗಡಿಯಲ್ಲಿ ನೇಪಾಳಕ್ಕೆ ಅಂಟಿಕೊಂಡಿರುವ ಫಿಲಿಬಿಟ್ 2009ರಿಂದ ಮಗ ವರುಣ್ ಗಾಂಧಿಯ ಪಾಲಿಗೆ ಬಂದಿದೆ. ಪ್ರತಿ ಚುನಾವಣೆಯಲ್ಲೂ ಎರಡೂ ವರೆ ಲಕ್ಷಕ್ಕಿಂತೆ ಹೆಚ್ಚು ಲೀಡಿಂಗ್‌ನಲ್ಲಿ ವರುಣ್ ಫಿರೋಜ್ ಗಾಂಧಿ ಗೆಲ್ಲುತ್ತ ಬಂದಿದ್ದಾರೆ. ಆದರೆ ಈತನ ಕಸಿನ್ ಗಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಗಳ್ಯಾರೂ ಇಷ್ಟೊಂದು ಲೀಡಿಂಗ್‌ಗಳಲ್ಲಿ ಗೆಲ್ಲಲಾಗಿಲ್ಲ ನೆನಪಿರಲಿ.
ಅಮ್ಮನಂತೆಯೇ ಮಗನೂ ಲೇಖಕ, ಅದಕ್ಕಿಂತ ಮುಖ್ಯವಾಗಿ ಕವಿ, ಈತನ ಎರಡು ಕವನ ಸಂಕಲನಗಳು ಹೊರಬಂದಿವೆ, ದಾಖಲೆಯ ಸಂಖ್ಯೆಯಲ್ಲಿ ಮಾರಾಟವಾಗಿವೆ. ಹತ್ತಾರು ಇಂಗ್ಲಿಷ್ ಹಾಗೂ ಭಾಷಾ ಪತ್ರಿಕೆಗಳಲ್ಲಿ ಈತ ಅಂಕಣಕಾರ. ಅಷ್ಟೇ ಚೆನ್ನಾದ ಭಾಷಣಕಾರನೂ ಹೌದು. ಭಾಷಣಕಾರ ಎನ್ನುವುದಕ್ಕಿಂತ ಭಾಷಣಕೋರ ಎಂದರೂ ತಪ್ಪಿಲ್ಲ. ತನ್ನ ಕ್ಷೇತ್ರವೂ ಸೇರಿ ಅಕ್ಕಪಕ್ಕದ 40 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವ ಈತನ ಮೇಲೆ ಒಂದಕ್ಕಿಂತ ಹೆಚ್ಚು ಮೊಕದ್ದಮೆ ಗಳನ್ನು ಹೂಡಲಾಗಿತ್ತು, ಆದರೆ ನ್ಯಾಯಾಲಯಗಳು ಈತನನ್ನು ದೋಷಿ ಎಂದು ಪರಿಗಣಿಸಲಿಲ್ಲ.
2011ರಲ್ಲಿ ಹೊಸ ದಿಲ್ಲಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಹಾಗೂ ಲೋಕ್ ಪಾಲ್ ಮಸೂದೆ ಜಾರಿಗಾಗಿ ಸತ್ಯಾಗ್ರಹ ನಡೆಸಿದ ಅಣ್ಣಾ ಹಜಾರೆಯನ್ನು ಬೆಂಬಲಿಸಿದ ಮೊದಲ ಜನಪ್ರತಿನಿಧಿ ಈ ವರುಣ್ ಫಿರೋಜ್ ಗಾಂಧಿ, ತನ್ನ ನಿವಾಸದಲ್ಲಿ ಹಜಾರೆಗೆ ನೆಲೆ ಕೊಟ್ಟಿದ್ದರು ಈತ. ಬಿಜೆಪಿಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದರೂ, ಸಂಸದನಾಗಿದ್ದರೂ ಮೋದಿಯ ಕ್ರಮಗಳ ವಿರುದ್ಧ ಆಗಾಗ ಗುಡುಗುವ ಛಾತಿ ಉಳಿಸಿಕೊಂಡಿದ್ದಾರೆ ವರುಣ್ ಫಿರೋಜ್ ಗಾಂಧಿ.
ರಾಜಕಾರಣದಲ್ಲಿ ಸಕ್ರಿಯವಾಗಿದ್ದರೂ ರಾಹುಲ್, ಪ್ರಿಯಾಂಕ ರೀತಿಯಲ್ಲಿ ರಾಜಕುಮಾರನಂತೆ ಬೆಳೆಯುವ ಅವಕಾಶ ವರುಣ್‌ಗೆ ದೊರಕಲಿಲ್ಲ. ಹೀಗೆ ಸುಖದ ಸೋಪಾನ ಮತ್ತು ಸುಪ್ಪತ್ತಿಗೆ ದೊರಕದ ಕಾರಣದಿಂದಾಗಿಯೇ ವರುಣ್ ರಾಜಕೀಯವಾಗಿ ಗಟ್ಟಿತನ ಬೆಳೆಸಿಕೊಳ್ಳಲು ಸಾಧ್ಯವಾಗಿರಬಹುದು. ʼ ಬೀದಿ ಮಕ್ಕಳು ಬೆಳೆದೋ- ಕೋಣೆ ಮಕ್ಕಳು ಕೊಳೆತೋ ಎಂಬ ಗಾದೆ ನೆನಪಿಸಿಕೊಳ್ಳಿ.
ಇಂದಿರಾ ಗಾಂಧಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿದ್ದರು, ಅದೇ ತರ ಅನ್ಯ ಕಾರಣಕ್ಕೆ ರಾಹುಲ್ ಗಾಂಧಿಯ ಸದಸ್ಯತ್ವ ಅನರ್ಹಗೊಂಡಿದೆ. 1967ರಲ್ಲಿ ಮೊದಲ ಸಲ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಇಂದಿರಾ ಗಾಂಧಿ ಸಂಪುಟದಲ್ಲಿ ಮುರಾರ್ಜಿದೇಸಾಯಿ ಉಪ ಪ್ರಧಾನಿಯಾಗಿರುತ್ತಾರೆ. ರಾಹುಲ್ ಗಾಂಧಿಯನ್ನು ಇಡೀ ಬಿಜೆಪಿ ಪಪ್ಪು ಎಂದು ಲೇವಡಿ ಮಾಡಿದ್ದಂತೆಯೇ ಪ್ರಧಾನಿಯಾದ ಮೊದಲ ಒಂದರೆಡು ವರ್ಷ ಇಂದಿರಾ ಗಾಂಧಿಯನ್ನು “ ಗೂಂಘೀ ಗುಡಿಯಾ” ಅಂದರೆ ಮೂಕ ಗೊಂಬೆ ಎಂದು ಗೇಲಿ ಮಾಡಲಾಗುತ್ತಿತ್ತು. ಆದರೆ ಹತ್ತೇ ವರ್ಷಗಳಲ್ಲಿ ಇಡೀ ಇಂಡಿಯಾದ ಎಲ್ಲ ಟೀಕಾಕಾರರ ಬಾಯಿ ಮುಚ್ಚಿಸುವ ಹಂತಕ್ಕೆ ಇಂದಿರಾ ಬೆಳೆದುಬಿಟ್ಟರು. ಈಗ ಭಾರತ್ ಜೋಡೋ ಕಾಲ್ನಡಿಗೆ ಯಾನದ ಬಳಿಕ ರಾಹುಲ್ ಗಾಂಧಿ ವ್ಯಕ್ತಿತ್ವ ಗಟ್ಟಿತನವನ್ನು ಪಡೆದುಕೊಂಡು, ಲೋಕಸಭೆಯಲ್ಲಿ ಆತನ ಮಾತುಗಳನ್ನೆಲ್ಲ ಕಡತಕ್ಕೆ ಹೋಗದಂತೆ ನೋಡಿಕೊಳ್ಳುವುದಷ್ಟೇ ಅಲ್ಲ, ಯಾವುದೋ ಮೂಲೆಯಲ್ಲಿದ್ದ ಮಾನನಷ್ಟ ಮೊಕದ್ದಮೆಗೆ ಜೀವ ಕೊಟ್ಟು ಇರುಳು ಬೆಳಗಾಗುವುದರೊಳಗೆ ತಪ್ಪಿತಸ್ಥನಾಗಿ, ಗರಿಷ್ಟ ಎರಡು ವರ್ಷ ಎಂದು ನ್ಯಾಯಾಲಯ ಘೋಷಿಸಿಬಿಟ್ಟಿತು.
ಮುಂದ, ರಾಹುಲ್ ಗಾಂಧಿ ಅನರ್ಹತೆ ವಿರುದ್ಧ ಇಡೀ ದೇಶದಲ್ಲಿ ಕಿಚ್ಚೆಬ್ಬಿಸುವಷ್ಟು ಪ್ರತಿಭಟನೆ ಮಾಡುವಷ್ಟು ಜೋಶ್ ಕಾರ್ಯಕರ್ತರಲ್ಲಿ ಇಲ್ಲ ಎನ್ನುವುದು, ಮೊನ್ನೆ ತುಮಕೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ನ ಹದಿನಾರು ಮಂದಿ ಭದ್ರಮ್ಮನ ಛತ್ರದ ಎದುರು ಸಾಲಾಗಿ ನಿಂತು ಫೋಟೋ ಹೊಡೆಸಿಕೊಂಡದ್ದನ್ನ ನೋಡಿದ ಯಾರಿಗೇ ಆದರೂ ಅರಿವಾಗುತ್ತದೆ. ಹೇಗೋ ಆಡಳಿತ ವಿರೋಧಿ ಅಲೆ ಇದೆ, ಅದರಲ್ಲಿ ತೇಲಿ ಬರುವ ಚುನಾವಣೆಯಲ್ಲಿ ಅಧಿಕಾರ ಹಿಡಿಯುತ್ತೇವೆ ಎಂಬ ಹುಂಬ ತಿಳುವಳಿಕೆ ಬಿಟ್ಟರೆ ಕಾಂಗ್ರೆಸ್ ಬಳಿ ಬೇರೆ ಏನೂ ಇಲ್ಲ.