ದೂರದೃಷ್ಟಿಯ ಮುತ್ಸದ್ಧಿ ನಾಯಕ- ಡಾ. ಜಿ.ಪರಮೇಶ್ವರ

ಡಾ. ಪರಮೇಶ್ವರ್ ಅವರ ರಾಜಕೀಯ ಪ್ರವೇಶಕ್ಕೆ ಅವರ ತಂದೆಯವರಿಗೆ ಆಗಿರುವ ಹಲವಾರು ಕಹಿ ಅನಭವವೂ ಕಾರಣ. ಗಂಗಾಧರಯ್ಯ ಅವರ ಅಂದಿನ ನಿರ್ಧಾರದಿಂದ ಇಂದು ರಾಜ್ಯದ ರಾಜಕೀಯಕ್ಕೆ ಒಬ್ಬ ಸುಸಂಸ್ಕೃತ ಮತ್ತು ಉನ್ನತ ಶೈಕ್ಷಣಿಕ ಹಿನ್ನೆಲೆಯ ಸಂಭಾವಿತ ರಾಜಕಾರಣಿಯೊಬ್ಬ ದೊರೆತಂತಾಗಿದೆ. ತಂದೆ ಕಟ್ಟಿದ ಶಿಕ್ಷಣ ಸಂಸ್ಥೆಯನ್ನು ಬೃಹದಾಕಾರವಾಗಿ ಬೆಳೆಸಿ ಅದರ ವರ್ಚಸ್ಸನ್ನು ಹೆಚ್ಚಿಸಿರುವ ಪರಮೇಶ್ವರ್, ಶಿಕ್ಷಣ ಸಂಸ್ಥೆಯ ಹೊಣೆಗಾರಿಕೆ ಜೊತೆಗೆ ರಾಜಕೀಯವನ್ನು ಸಮರ್ಥವಾಗಿ ನಿರ್ವಹಿಸುವುದನ್ನು ನೋಡಿದರೆ ಅವರಿಗಿರುವ ಬುದ್ಧಿ ಮತ್ತು ವ್ಯವಹಾರಿಕ ಸಾಮರ್ಥ್ಯ ಬೇರೆಯವರಿಗೆ ಮಾರ್ಗದರ್ಶನವಾಗುವುದರಲ್ಲಿ ಅಚ್ಚರಿಯೇನಿಲ್ಲ.

ದೂರದೃಷ್ಟಿಯ ಮುತ್ಸದ್ಧಿ ನಾಯಕ- ಡಾ. ಜಿ.ಪರಮೇಶ್ವರ

     ದಲಿತರ ವಿಮೋಚನೆಗಾಗಿ ಹೋರಾಡಿ ಇತರರಿಗೆ ಸಮಾನವಾಗಿ ಬದುಕುವ ಹಕ್ಕುಗಳನ್ನು ಗಳಿಸಿಕೊಡುವ ಮೂಲಕ ದಲಿತರಿಗೆ ಒಂದು ಬದುಕಿನ ದಾರಿ ತೋರಿಸಿಕೊಟ್ಟ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ದಲಿತರಿಗಾಗಿ ಕರೆ ಕೊಟ್ಟದ್ದು; ಶಿಕ್ಷಣ; ಸಂಘಟನೆ ಮತ್ತು ಹೋರಾಟ.

ಈ ಮೂರು ತತ್ವಗಳನ್ನು ಅವರವರ ಶಕ್ತಿಗನುಸಾರವಾಗಿ ದಲಿತರು ಆಯ್ಕೆ ಮಾಡಿಕೊಂಡು ಬಾಬಾ ಸಾಹೇಬರಿಗೆ ತಮ್ಮ ಗೌರವ ಸಲ್ಲಿಸುತ್ತಿರುವ ನೂರಾರು ಸಾವಿರಾರು ಮಂದಿ ಇದ್ದಾರೆ. ಇಂತಹವರಲ್ಲಿ ಎಲೆಮರೆ ಕಾಯಿಯಾಗಿ ದುಡಿದು ದಲಿತರಿಗೆ ಶಿಕ್ಷಣದ ದಾರಿ ತೋರಿಸಿಕೊಟ್ಟವರಲ್ಲಿ ಮಹಾರಾಷ್ಟçದ ಜ್ಯೋತಿ ಬಾಫುಲೆ, ಸಾವಿತ್ರಿ ಬಾಫುಲೆ, ಮಂಗಳೂರಿನ ಕುದ್ಮಲ್ ರಂಗರಾವ್ ಮತ್ತು ದಲಿತ ವರ್ಗದವರೇ ಆದ ದಿವಂಗತ ಎಚ್.ಎಂ. ಗಂಗಾಧರಯ್ಯ ಅವರು ಇತಿಹಾಸದ ಪುಟಗಳಲ್ಲಿ ಢಾಳಾಗಿ ಕಾಣುತ್ತಾರೆ. ಈಗಿನ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಹೆಬ್ಬಳಲು ಗಂಗಾಧರಯ್ಯನವರಿಗೆ ಜನ್ಮ ನೀಡಿದ ಪುಣ್ಯ ಭೂಮಿ. ಆದರೆ ಅವರ ಕರ್ಮ ಭೂಮಿ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತ್ತೂರು ಮತ್ತು ತುಮಕೂರು ತಾಲ್ಲೂಕಿನ ಗೊಲ್ಲಹಳ್ಳಿ(ಈಗಿನ ಸಿದ್ದಾರ್ಥ ನಗರ).


ದಲಿತರ ದಾಸ್ಯದಿಂದ ವಿಮುಕ್ತಿ ಪಡೆಯಲು ಮೊದಲು ಶಿಕ್ಷಣ, ಸಂಘಟನೆ ನಂತರ ಹೋರಾಟ ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕರೆ ಕೊಟ್ಟರು. ಅಕ್ಷರದ ಈ ಮಹತ್ವವನ್ನು ಗಂಗಾಧರಯ್ಯ ಅವರು ಅರುವತ್ತು ವರ್ಷಗಳ ಹಿಂದೆಯೇ ಕಂಡುಕೊಂಡ ಮಹಾನ್ ಚೇತನ.


ಮಠಗಳು ಮತ್ತು ಜಮೀನುದಾರಿ ಜಾತಿಗಳ ಪ್ರಭಾವಿ ವ್ಯಕ್ತಿಗಳು ಶಾಲೆ ಕಾಲೇಜುಗಳನ್ನು ಪ್ರಾರಂಭಿಸಿದರೆ, ಅವರಿಗೆ ಶ್ರೀಮಂತ ದಾನಿಗಳು ಮತ್ತು ಸ್ವಜಾತಿಯ ಜನರು ಲೆಕ್ಕವಿಲ್ಲದಷ್ಟು ಹಣ ಮತ್ತು ಎಕರೆಗಟ್ಟಲೆ ಭೂಮಿಯನ್ನೂ ನೀಡುತ್ತಾರೆ. ಆದರೆ ಐವತ್ತು ಅರವತ್ತು ವರ್ಷಗಳ ಹಿಂದೆ ಸ್ವತಃ ಶಾಲೆಗಳಿಗೇ ಹೋಗುವ ಮಾತಿರಲಿ, ಹೊಟ್ಟೆಗೇ ತುತ್ತು ಅನ್ನವಿಲ್ಲದ ಸ್ಥಿತಿಯಲ್ಲಿದ್ದ ದಲಿತರು ಸ್ವತಃ ಶಾಲೆಗಳನ್ನು ತೆರೆಯುವ ಮಾತು ನಿಜಕ್ಕೂ ತಿರುಕನ ಕನಸಾಗಿತ್ತು. ಆದರೆ ಅಂತಹ ಕನಸೊಂದನ್ನು ನನಸು ಮಾಡಿದವರು ಗಂಗಾಧರಯ್ಯ ಅವರು. 


 ಬಾಬಾಸಾಹೇಬರ ಮತ್ತು ಬುದ್ಧನ ಸಿದ್ಧಾಂತಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಗಂಗಾಧರಯ್ಯ ಅವರು, ಆರಂಭಿಸಿದ ಅಕ್ಷರ ಪಾತ್ರೆಯನ್ನು ಅಕ್ಷರದ ಅರವಟ್ಟಿಗೆಯನ್ನಾಗಿ ಮಾಡಿ ಈ ಸಮಾಜಕ್ಕೆ ನೀಡಿದ್ದಾರೆ. ಅದಕ್ಕಾಗಿ ಅವರು ಕ್ರಮಿಸಿದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಕಲ್ಲು ಮುಳ್ಳುಗಳ ಹಾದಿ. ದಾನಿಗಳು ಮತ್ತು ಸರ್ಕಾರದಿಂದ ಅಷ್ಟಿಷ್ಟು ನೆರವು ಪಡೆದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗಾಗಿ ಶಾಲೆ ಮತ್ತು ವಿದ್ಯಾರ್ಥಿನಿಲಯಗಳನ್ನು ತೆರೆದರು. ಶಾಲೆಗಳನ್ನು ತೆರೆದುಬಿಟ್ಟರೆ ಸಾಲದು, ಅವುಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದು ಮುಖ್ಯ. ಮತ್ತು ಆ ಶಾಲೆಗೆ ಮಕ್ಕಳನ್ನು ಕರೆದುತಂದು ಸೇರಿಸಿ ಅವರಿಗೆ ಶಿಕ್ಷಣ ನೀಡುವ ಆತ್ಮಬಲವನ್ನು ತುಂಬುವುದೂ ಮುಖ್ಯ. ಆ ದಾರಿಯಲ್ಲಿ ಅವರು ಅನುಭವಿಸಿದ ಕಷ್ಟ ಕೋಟಲೆ ಅವರಿಗಷ್ಟೇ ಗೊತ್ತು. ಗಂಗಾಧರಯ್ಯ ಅವರ ಯಶೋಗಾಥೆಯನ್ನು ಹೇಳುತ್ತಾ ಹೋದರೆ ಅದಕ್ಕೆ ಅಂತ್ಯಹಾಡುವುದು ಸುಲಭವಲ್ಲ. ಅವರ ಶಾಲೆಗಳಲ್ಲಿ ಓದಿ ಇಂದು ಉನ್ನತ ಸ್ಥಾನಗಳಲ್ಲಿರುವ ಸಾವಿರಾರು ಮಂದಿಗೆ ಗಂಗಾಧರಯ್ಯ ಅವರು ಪ್ರಾತಃಸ್ಮರಣೀಯರು. 


ಗಂಗಾಧರಯ್ಯ ಅವರು ಕಟ್ಟಿಕೊಟ್ಟ ಶಿಕ್ಷಣ ಸಂಸ್ಥೆಯನ್ನು ಅವರ ಇಬ್ಬರು ಮಕ್ಕಳಾದ ಡಾ. ಜಿ. ಶಿವಪ್ರಸಾದ್ ಮತ್ತು ಡಾ. ಜಿ. ಪರಮೇಶ್ವರ್ ಇಂದು ಎಲ್ಲರೂ ಹುಬ್ಬೇರಿಸುವಂತೆ ಬೆಳೆಸಿದ್ದಾರೆ. ಅವರ ಸಾಧನೆ ನಿಜಕ್ಕೂ ಇತರರಿಗೆ ಅನುಕರಣೀಯ.


ಅಪ್ಪ, ಅಮ್ಮ ಸಂಪಾದಿಸಿದನ್ನು ಇಂದಿನ ದಿನಗಳಲ್ಲಿ ಬಹುತೇಕ ಮಕ್ಕಳು ಉಳಿಸಿಕೊಳ್ಳುವುದಕ್ಕಿಂತ ಹಾಳು ಮಾಡುವುದೇ ಹೆಚ್ಚು. ಆದರೆ ಇದಕ್ಕೆ ಅಪವಾದ ಡಾ. ಶಿವಪ್ರಸಾದ್ ಮತ್ತು ಡಾ. ಪರಮೇಶ್ವರ್. ತುಮಕೂರು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಶಿವಮೊಗ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹಲವಾರು ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ತೆರೆದ ಗಂಗಾಧರಯ್ಯ ಅವರು, ತುಮಕೂರಿನ ಮರಳೂರಿನ ಕ್ಯಾಂಪಸ್‌ನಲ್ಲಿ ಎಂಜಿನಿಯರಿಂಗ್ ಮತ್ತು ಸಿದ್ಧಾರ್ಥನಗರ (ಗ್ಲೊಲಹಳ್ಳಿ)ದ್ಲಲಿ ವೈದ್ಯಕೀಯ ಕಾಲೇಜನ್ನೂ ತಮ್ಮ ಜೀವಿತಾವಧಿಯ್ಲಲೇ ಸ್ಥಾಪಿಸಿದರು.


ನಾನು ತುಮಕೂರಿನಲ್ಲಿ 1984ರಿಂದ 89ರವರೆಗೆ ಪ್ರಜಾವಾಣಿಯ ವರದಿಗಾರನಾಗಿದ್ದೆ. ಆಗ ಅನೇಕ ಬಾರಿ ಮರಳೂರಿನ ಸಿದ್ಧಾರ್ಥ ಕ್ಯಾಂಪಸ್ಸಿಗೆ ಹೋಗುತ್ತ್ದಿದೆ. (ಕೆಲವೊಮ್ಮೆ ಸುದ್ದಿಗಾಗಿ ಮತ್ತೆ ಕೆಲವೊಮ್ಮೆ ಡಾ. ಪರಮೇಶ್ವರ್ ಅವರೊಡನೆ ಮಾತನಾಡುವುದಕ್ಕೆ) ಆಗ ತಾನೆ ಆಸ್ಟ್ರೇಲಿಯಾದಿಂದ ಕೃಷಿ ಶಿಕ್ಷಣದಲ್ಲಿ ಡಾಕ್ಟರೇಟ್ ಪದವಿ ಪಡೆದು ಬಂದಿದ್ದ ಡಾ. ಪರಮೇಶ್ವರ್, ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿ ಆ ಕ್ಯಾಂಪಸ್ಸಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಆಗ ಆಸ್ಬೆಸ್ಟಾಸ್ ಶೀಟಿನ ಒಂದು ಕಚೇರಿಯಲ್ಲಿ ಕುಳಿತು ತಮ್ಮ ಶಿಕ್ಷಣ ಸಂಸ್ಥೆಯ ಎಲ್ಲ ವ್ಯವಹಾರವನ್ನೂ ನಿರ್ವಹಿಸುತ್ತಿದ್ದರು. ಅವರು ಕುಳಿತಿರುತ್ತಿದ್ದ ಜಾಗದಲ್ಲಿ ಈಗ ಹಲವು ಕಟ್ಟಡಗಳು ತಲೆ ಎತ್ತಿವೆ. ಈ ಕ್ಯಾಂಪಸ್ಸಿನಲ್ಲಿ ಹೆಚ್ಚು ಗಮನ ಸೆಳೆಯುವುದು ಅದ್ಭುತವಾದ ಏಳು ಅಂತಸ್ತಿನ ಗೋಲಾಕಾರದ ಬೃಹತ್ ಗಾಜಿನ ಗ್ರಂಥಾಲಯ. ಅದರ ಒಳ ಮತ್ತು ಹೊರ ನೋಟ ನೋಡುವುದೇ ಒಂದು ಸೊಗಸು. ಸುಮಾರು 55 ಎಕರೆ ಪ್ರದೇಶದ ಇಡೀ ಕ್ಯಾಂಪಸ್ ಸುಂದರವಾದ ನವನಾವೀನ್ಯದ ಕಟ್ಟಡಗಳ ಸಂಕೀರ್ಣಗಳನ್ನು ಒಳಗೊಂಡಿದೆ.


ಆದರೆ ಇದರ ಮೂರರಷ್ಟು ವಿಶಾಲವಾದ ಮೆಡಿಕಲ್ ಕಾಲೇಜು ಕ್ಯಾಂಪಸ್ ಸಿದ್ಧಾರ್ಥನಗರದ ಬಳಿಯ ತಲೆ ಎತ್ತಿದೆ. ಅಲ್ಲಿನ ಕ್ಯಾಂಪಸ್ ಸುಮಾರು 200 ಎಕರೆ ಪ್ರದೇಶವನ್ನು ಒಳಗೊಂಡಿದೆ. ಇವರೆಡು ಸುಂದರವಾದ ಶೈಕ್ಷಣಿಕ ಕ್ಯಾಂಪಸ್‌ಗಳು ತುಮಕೂರಿಗೆ ಕಲಶಪ್ರಾಯವಾಗಿ ಆ ನಗರ ಮತ್ತು ಜಿಲ್ಲೆಯ ಪ್ರತಿಷ್ಠೆಯನ್ನೂ ಹೆಚ್ಚಿಸಿವೆ.


ಈ ಎರಡು ಕ್ಯಾಂಪಸ್‌ಗಳನ್ನು ಅಭಿವೃದ್ಧಿಪಡಿಸಿರುವುದರಲ್ಲಿ ಈ ಇಬ್ಬರು ಸಹೋದರರ ಶ್ರಮ ಶಕ್ತಿ ಇದೆ. ಈ ವಿದ್ಯಾಸೌಧ ದಲಿತರಿಗೆ ಹೆಮ್ಮೆಯ ಹೆಗ್ಗುರುತಾದರೆ, ಬೇರೆಯವರು ಅಸೂಯೆಯಿಂದಲೋ ಅಥವಾ ಅಚ್ಚರಿಯಿಂದಲೋ ಬಾಯಿ ಮೇಲೆ ಬೆರಳಿಟ್ಟುಕೊಂಡು ಹುಬ್ಬೇರಿಸುವಂತೆ ಬೆಳೆದಿವೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಈಗ ಒಂದು ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆದುಕೊಂಡಿರುವುದೇ ಪರಮೇಶ್ವರ್ ಅವರ ಸಾಧನೆಯನ್ನು ತೋರಿಸುತ್ತದೆ.


ರಾಜಕೀಯ ಪ್ರವೇಶದ ಪ್ರೇರಣೆ: ಡಾ. ಪರಮೇಶ್ವರ್ ರಾಜಕೀಯ ಪ್ರವೇಶಿಸುವುದರ ಹಿಂದೆ ಅವರ ಆಸಕ್ತಿಗಿಂತ ತಂದೆ ಗಂಗಾಧರಯ್ಯನವರನ್ನು ಪ್ರಚೋದಿಸಿದ ಹಲವಾರು ದಿನಗಳ ನೋವಿನ ಸಂಗತಿಗಳಿವೆ. ಎಂಬತ್ತರ ದಶಕದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳುವುದು ಸುಲಭವಾಗೇನೂ ಇರಲಿಲ್ಲ. ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ಅವರು ಪ್ರಯತ್ನ ಮಾಡುತ್ತಿದ್ದಾಗ ರಾಜ್ಯದಲ್ಲಿ ಜನತಾ ಪಕ್ಷದ ಆಡಳಿತವಿತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದರು. ವೈದ್ಯಕೀಯ ಕಾಲೇಜಿಗಾಗಿ ಅರ್ಜಿ ಸಲ್ಲಿಸಿ, ಕಾಲೇಜು ಮಂಜೂರಾತಿಗಾಗಿ ಹಲವು ಶಾಸಕರ ಮನೆಯ ಬಾಗಿಲುಗಳನ್ನು ತಟ್ಟುತ್ತಿದ್ದರು. ಗಂಗಾಧರಯ್ಯ ಅವರ ಬಳಿ ಒಂದು ಹಸಿರು ಅಂಬಾಸಿಡರ್ ಕಾರು ಇತ್ತು. ವಾರಕ್ಕೆ ಎರಡು ಮೂರು ದಿನಗಳ ಕಾಲ ಮುಂಜಾನೆಯೇ ಬೆಂಗಳೂರಿಗೆ ತೆರಳಿ ಕೆಲವು ಶಾಸಕರ ಮನೆಯ ಬಾಗಿಲು ಕಾಯುತ್ತಿದ್ದರಂತೆ. ಅವರನ್ನೊಮ್ಮೆ ಭೇಟಿಯಾಗಿದ್ದಾಗ ಲೋಕಾಭಿರಾಮವಾಗಿ ಮಾತನಾಡುತ್ತಾ ಹೇಳಿದ್ದು `` ನನ್ನ ಮಕ್ಕಳಿಗೆ ಇರುವ ಶಿಕ್ಷಣ ಮತ್ತು ಬುದ್ಧಿವಂತಿಕೆಯ ಮುಂದೆ ಇವರು ಲೆಕ್ಕಕ್ಕಿಲ್ಲ. ಆದರೂ ಅಧಿಕಾರ ಇದೆ ಎನ್ನುವ ಕಾರಣಕ್ಕೆ ಬೇಕೆಂತಲೇ ನನ್ನನ್ನು ಕಾಯಿಸುತ್ತಾರೆ. ಇದನ್ನೆಲ್ಲ ನೆನಪಿಸಿಕೊಂಡಾಗ ಪರಮೇಶ್ವರನನ್ನೇ ಏಕೆ ಎಂಎಲ್‌ಎ ಚುನಾವಣೆಗೆ ನಿಲ್ಲಿಸಬಾರದು. ಯಾವುದಲ್ಲಿ ಅವನು ಇವರಿಗಿಂತ ಕಡಿಮೆ ಇದ್ದಾನೆ ಎಂದು ಕೊಂಡು 1989ರಲ್ಲಿ ಮಧುಗಿರಿಯಿಂದ ಚುನಾವಣೆಗೆ ನಿಲ್ಲಿಸಿದೆ'. 


ಹೀಗೆ ಡಾ. ಪರಮೇಶ್ವರ್ ಅವರ ರಾಜಕೀಯ ಪ್ರವೇಶಕೆ ಅವರ ತಂದೆಯವರಿಗೆ ಆಗಿರುವ ಹಲವಾರು ಕಹಿ ಅನಭವವೂ ಕಾರಣ. ಗಂಗಾಧರಯ್ಯ ಅವರ ಅಂದಿನ ನಿರ್ಧಾರದಿಂದ ಇಂದು ರಾಜ್ಯದ ರಾಜಕೀಯಕ್ಕೆ ಒಬ್ಬ ಸುಸಂಸ್ಕೃತ ಮತ್ತು ಉನ್ನತ ಶೈಕ್ಷಣಿಕ ಹಿನ್ನೆಲೆಯ ಸಂಭಾವಿತ ರಾಜಕಾರಣಿಯೊಬ್ಬ ದೊರೆತಂತಾಗಿದೆ. ತಂದೆ ಕಟ್ಟಿದ ಶಿಕ್ಷಣ ಸಂಸ್ಥೆಯನ್ನು ಬೃಹದಾಕಾರವಾಗಿ ಬೆಳೆಸಿ ಅದರ ವರ್ಚಸ್ಸನ್ನು ಹೆಚ್ಚಿಸಿರುವ ಪರಮೇಶ್ವರ್, ಶಿಕ್ಷಣ ಸಂಸ್ಥೆಯ ಹೊಣೆಗಾರಿಕೆ ಜೊತೆಗೆ ರಾಜಕೀಯವನ್ನು ಸಮರ್ಥವಾಗಿ ನಿರ್ವಹಿಸುವುದನ್ನು ನೋಡಿದರೆ ಅವರಿಗಿರುವ ಬುದ್ಧಿ ಮತ್ತು ವ್ಯವಹಾರಿಕ ಸಾಮರ್ಥ್ಯ ಬೇರೆಯವರಿಗೆ ಮಾರ್ಗದರ್ಶನವಾಗುವುದರಲ್ಲಿ ಅಚ್ಚರಿಯೇನಿಲ್ಲ.


ಅರವತ್ತು ವರ್ಷಗಳಿಂದ ಬೆಳೆದು ಬಂದಿರುವ ಈ ಶಿಕ್ಷಣ ಸಂಸ್ಥೆಯಿಂದ ಲಕ್ಷಾಂತರ ಮಂದಿ ಶಿಕ್ಷಣ ಪಡೆದಿದ್ದಾರೆ. ಅವರೆಲ್ಲ ಒಳ್ಳೆಯ ಉದ್ಯೋಗಗಳಲಿದ್ದಾರೆ. ಈ ಸಂಸ್ಥೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುಮಾರು 85 ಶಾಲಾ ಕಾಲೇಜುಗಳಿದ್ದು, ಸುಮಾರು ನಾಲ್ಕು ಸಾವಿರ ಮಂದಿಗೆ ಉದ್ಯೋಗ ನೀಡಿದ್ದು ಅವರೆಲ್ಲ ಈ ಸಂಸ್ಥೆಯಿಂದ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದು ನಿಜಕ್ಕೂ ದೊಡ್ಡ ಸಾಧನೆ. ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜಿನಲ್ಲಿ ಅನೇಕ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಉಚಿತ ಪ್ರವೇಶ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಅದಕ್ಕೆ ಡಾ. ಪರಮೇಶ್ವರ ಅವರು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಮತ್ತು ಅವರ ತಂದೆಯ ಆಶಯವೂ ಕೂಡ ಕಾರಣವಾಗಿದೆ.


ಶಾಸಕರಾಗಿ, ರೇಷ್ಮೆ, ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿ ಅವರು ನಿರ್ವಹಿಸಿದ ಜವಾಬ್ದಾರಿ ನಿಜಕ್ಕೂ ಅನುಕರಣೀಯ. ಎಸ್.ಎಂ. ಕೃಷ್ಣ ಅವರಂತಹ ಸುಸಂಸ್ಕೃತ ವ್ಯಕ್ತಿತ್ವದ ಮುಖ್ಯಮಂತ್ರಿಯ ಆಳ್ವಿಕೆಯಲ್ಲಿ ಪರಮೇಶ್ವರ್ ಉನ್ನತ ಶಿಕ್ಷಣ ಸಚಿವ ಖಾತೆಯನ್ನು ನಿರ್ವಹಿಸಿದ ರೀತಿ ಸ್ಮರಣೀಯ. ತಮ್ಮ ಈ ಅಧಿಕಾರ ಬಳಸಿಕೊಂಡು ತುಮಕೂರಿಗೆ ವಿಶ್ವ ವಿದ್ಯಾಲಯ ಬರಲು ಕಾರಣಕರ್ತರಾದರು. ಡಾ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾದಾಗ ವಿಜಯ ಕರ್ನಾಟಕದ ಅಂಕಣಕಾರರೊಬ್ಬರು ತಮ್ಮ ಅಂಕಣದಲ್ಲಿ ಬರೆದುದು ಇಲ್ಲಿ ಉ್ಲಲೇಖನೀಯ. `ತುಮಕೂರು ವಿಶ್ವ ವಿದ್ಯಾಲಯವನ್ನು ಆರಂಭಿಸಲು ಅವರು ತಂದ ಮಸೂದೆಯ ಹಿನ್ನೆಲೆ, ಉದ್ದೇಶ ಮತ್ತು ಇಂದಿನ ಶಿಕ್ಷಣದ ಸ್ಥಿತಿಗತಿ ಹಾಗು ಭವಿಷ್ಯದ ಯುವ ಜನಾಂಗಕ್ಕೆ ಸಿಗಬೇಕಾಗಿರುವ ಶಿಕ್ಷಣದ ಬಗೆಗಿನ ದೂರದೃಷ್ಟಿಯನ್ನು ಕುರಿತು ಮಾಡಿದ ಭಾಷಣ ವಿಶ್ವವಿದ್ಯಾಲಯದಲ್ಲಿ ಒಂದು ಡಾಕ್ಟರೇಟ್ ಪದವಿಗೆ ಸಲ್ಲಿಸುವ ಪ್ರಬಂಧದAತಿತ್ತು' . ಇದು ನಿಜಕ್ಕೂ ಪರಮೇಶ್ವರ್ ಅವರ ವಿದ್ವತ್ತು ಮತ್ತು ರಾಜ್ಯದಲ್ಲಿನ ಶಿಕ್ಷಣ ಎತ್ತ ಸಾಗಬೇಕು ಎನ್ನುವ ದೂರದೃಷ್ಟಿಯನ್ನು ತೋರಿಸುತ್ತದೆ.


ಅಂತಹ ದೂರದೃಷ್ಟಿಯನ್ನುಳ್ಳ, ಕೈಯಿ ಬಾಯಿ ಸ್ವಚ್ಛವಾಗಿಟ್ಟುಕೊಂಡಿರುವ ಸಂಭಾವಿತರಾದ ಪರಮೇಶ್ವರ್ 2013ರ ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದಿದ್ದರೆ ಅವರ ರಾಜಕೀಯ ಭವಿಷ್ಯವೇ ಬದಲಾಗುತ್ತಿತ್ತೋ ಏನೋ ! ಆ ಸೋಲಿನ ಕಹಿ ಅವರನ್ನು ಮಾನಸಿಕವಾಗಿ ಖಿನ್ನತೆಗೊಳಿಸಿದ್ದು ಇದೆ. ಅವರ ಅಂದಿನ ಸೋಲಿಗೆ ಹಲವಾರು ಕಾರಣಗಳಿರಬಹುದು. ಆದರೆ ಅವುಗಳನ್ನೆಲ್ಲ ಅರಿತು ಈಗ ಎಚ್ಚರಿಕೆಯ ಹೆಜ್ಜೆಯನಿಡುತ್ತಿದ್ದಾರೆ. 2018ರ ಗೆಲುವು ಅವರಿಗೆ ತೃಪ್ತಿ ತಂದಂತಿಲ್ಲ. ಏಕೆಂದರೆ ಕಾಂಗ್ರೆಸ್ಸ ಪಕ್ಷ ಸ್ವಂತ ಬಲದಿಂದ ಮತ್ತೆ ಅಧಿಕಾರಕ್ಕೆ ಬರಲಿಲ್ಲ ಎಂಬ ನೋವು ಅವರಲ್ಲಿ ಎದ್ದು ಕಾಣುತ್ತದೆ. ಆದರೆ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ಹೊರಗಿಡಬೇಕೆನ್ನುವ ಪಕ್ಷದ ವರಿಷ್ಠರ ತೀರ್ಮಾನದಿಂದ ಜನತಾ ದಳಕ್ಕೆ ನೀಡಿದ ಬೆಂಬಲದಿAದ ಅಧಿಕಾರವನ್ನು ಹಂಚಿಕೊಂಡಾಗಿದೆ. ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಬಂದುದಷ್ಟೇ ಈಗವರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಈ ಅಧಿಕಾರವನ್ನು ಬಳಸಿಕೊಂಡು ಅವರೀಗ ವಸಂತನರಸಾಪುರ ಕೈಗಾರಿಕಾ ಪ್ರದೇಶವನ್ನು ಬೃಹತ್ ಉದ್ದಿಮೆ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಕಾರ್ಯನಿರತರಾಗಿದ್ದಾರೆ. ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬಜೆಟ್‌ನಲ್ಲಿ ತುಮಕೂರಿಗೆ ಖಾಸಗಿ ಒಡೆತನದ ಕ್ರೀಡಾ ವಿವಿಯನ್ನು ಸ್ಥಾಪಿಸಲು ಮಂಜೂರಾತಿ ಪಡೆದಿದ್ದಾರೆ. ಈ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವ ಕಾಲ ಬರಲಿ ಎನ್ನುವುದು ಅವರ ಹಿತೈಷಿಗಳ ಹಾರೈಕೆ. ಆ ದಿಕ್ಕಿನಲ್ಲಿ ಪರಮೇಶ್ವರ್ ಅವರ ಸೇವೆ ಸಮಾಜಕ್ಕೆ ಸಿಗುವಂತಾಗಲಿ ಎಂದು ಆಶಿಸೋಣ.

-ಶಿವಾಜಿ ಗಣೇಶನ್
ಹಿರಿಯ ಪತ್ರಕರ್ತರು,