75 ವರ್ಷಗಳ ನಂತರ ʼಯುವ ಭಾರತʼ ಎತ್ತ ಸಾಗಬೇಕಿದೆ.   -ನಾ ದಿವಾಕರ

ಭವಿಷ್ಯ ಭಾರತದ ಹಾದಿಯನ್ನು ಸಮಾನತೆ, ಸೌಹಾರ್ದತೆ, ಮಾನವತೆ, ಸೋದರತೆ, ಸಮನ್ವಯ ಮತ್ತು ಮನುಜ ಪ್ರೀತಿಯ ಹಾಸುಗಲ್ಲುಗಳಿಂದ ಸಿಂಗರಿಸಿದರೆ ಭಾರತ ನೂರರ ಗಡಿ ದಾಟುವ ವೇಳೆಗೆ “ ಸರ್ವ ಜನಾಂಗದ ಶಾಂತಿಯ ತೋಟ ”ದಂತೆ ಕಂಗೊಳಿಸಲು ಸಾಧ್ಯ. ªವರ್ತಮಾನ ನಾ ದಿವಾಕರ 75 ವರ್ಷಗಳ ನಂತರ ಎತ್ತ ಸಾಗಬೇಕಿದೆ ಯುವ ಪೀಳಿಗೆ

75 ವರ್ಷಗಳ ನಂತರ ʼಯುವ ಭಾರತʼ ಎತ್ತ ಸಾಗಬೇಕಿದೆ.    -ನಾ ದಿವಾಕರ

ಭವಿಷ್ಯ ಭಾರತದ ಹಾದಿಯನ್ನು ಸಮಾನತೆ, ಸೌಹಾರ್ದತೆ, ಮಾನವತೆ, ಸೋದರತೆ, ಸಮನ್ವಯ ಮತ್ತು ಮನುಜ ಪ್ರೀತಿಯ ಹಾಸುಗಲ್ಲುಗಳಿಂದ ಸಿಂಗರಿಸಿದರೆ ಭಾರತ ನೂರರ ಗಡಿ ದಾಟುವ ವೇಳೆಗೆ   “ ಸರ್ವ ಜನಾಂಗದ ಶಾಂತಿಯ ತೋಟ ”ದಂತೆ ಕಂಗೊಳಿಸಲು ಸಾಧ್ಯ.

 75 ವರ್ಷಗಳ ನಂತರ ʼಯುವ ಭಾರತʼ ಎತ್ತ ಸಾಗಬೇಕಿದೆ. 

 -ನಾ ದಿವಾಕರ

ಸ್ವತಂತ್ರ ಭಾರತ ತನ್ನ 75 ವಸಂತಗಳನ್ನು ಪೂರೈಸಿ ಯಶಸ್ವಿಯಾಗಿ ನೂರರತ್ತ ದಾಪುಗಾಲು ಹಾಕುತ್ತಿದೆ. ಆರ್ಥಿಕವಾಗಿ ಭಾರತದ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗುತ್ತದೆ ಎಂಬ ಮಾರುಕಟ್ಟೆ ತಜ್ಞರ ಆಶಾದಾಯಕ ಭವಿಷ್ಯದ ನಡುವೆಯೇ ಭಾರತ ಈ ಅಮೃತ ಗಳಿಗೆಯನ್ನು “ ಮನೆಮನೆಯಲ್ಲಿ ರಾಷ್ಟ್ರಧ್ವಜ ” ಹಾರಿಸುವ ಮೂಲಕ ಸಂಭ್ರಮಿಸುತ್ತಿದೆ.

2022ರ ಆಗಸ್ಟ್‌ 15ರಂದು ಭಾರತದ ಕೋಟ್ಯಂತರ ಮನೆಗಳ ಮೇಲೆ ದೇಶದ ಹೆಮ್ಮೆಯ ಧ್ವಜ ಪಟಪಟಿಸುತ್ತದೆ. ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಸೂರಿನ ಮೇಲೆ ಕಾಣುವ ಧ್ವಜಕ್ಕೆ ಹೆಮ್ಮೆಯಿಂದ ವಂದಿಸುವ ಮುನ್ನ, ಭಾರತ ಸಾಗಿಬಂದ ಹಾದಿ ಮತ್ತು ಸಾಗಬೇಕಿರುವ ಹಾದಿಯ ಬಗ್ಗೆ ಪ್ರಜ್ಞಾವಂತಿಕೆಯಿಂದ ಆಲೋಚನೆ ಮಾಡುವಂತಾದರೆ, “ಹರ್‌ ಘರ್‌ ಘರ್‌ ತಿರಂಗಾ” ಭಾಗ್ಯದಿಂದ ವಂಚಿತರಾದ 18 ಲಕ್ಷ ಭಾರತೀಯರ ಬಗ್ಗೆಯೂ ಒಂದು ಕ್ಷಣ ಯೋಚಿಸುವಂತಾಗಬಹುದು. 75 ವರ್ಷಗಳ ನಂತರವೂ ಹೆಮ್ಮೆಯ ಭಾರತದಲ್ಲಿ 18 ಲಕ್ಷ ಸೂರಿಲ್ಲದ ಪ್ರಜೆಗಳು ಇರುವುದು ಮತ್ತು ನಾಲ್ಕು ಲಕ್ಷ ಜನರು ರಸ್ತೆಗಳಲ್ಲಿ ಜೀವನ ಸಾಗಿಸುತ್ತಿರುವುದು ನಮ್ಮೊಳಗಿನ ಸ್ವಪ್ರಜ್ಞೆಯನ್ನು ಕದಡದೆ ಹೋದರೆ, ಮನೆಯ ಮೇಲೆ ಪಟಪಟಿಸುವ ಧ್ವಜ ಕೇವಲ ಸಾಂಕೇತಿಕವಾಗಿಬಿಡುತ್ತದೆ.

 

ಭಾರತ ಎಂಬ ಒಂದು ಭೌಗೋಳಿಕ ಪರಿಕಲ್ಪನೆಗೆ ಭಾವನಾತ್ಮಕವಾಗಿ ಸ್ಪಂದಿಸುವ ಮುನ್ನ ಈ ದೇಶದ ಪ್ರತಿ ಪ್ರಜೆಯೂ ಈ ಭಾರತವನ್ನು ಒಂದು ಪ್ರಬಲ ರಾಷ್ಟ್ರವಾಗಿ ನಿರ್ಮಿಸಲು ಶ್ರಮಿಸಿರುವ ಕೋಟ್ಯಂತರ ಶ್ರಮಜೀವಿಗಳನ್ನೂ ಒಮ್ಮೆಯಾದರೂ ನೆನೆಯುವುದು 75ರ ಗಳಿಗೆಯಲ್ಲಿ ಅತ್ಯವಶ್ಯ. ಎರಡು ಶತಮಾನಗಳ ವಸಾಹತು ದಾಸ್ಯದಿಂದ ವಿಮೋಚನೆ ಪಡೆಯಲು ಜೀವ ತೆತ್ತ ಸಾವಿರಾರು ಜನರನ್ನು ಸ್ಮರಿಸುತ್ತಲೇ, ಈ ಸುದೀರ್ಘ ಸಂಗ್ರಾಮದಲ್ಲಿ ಗುರುತಿಸಲೂ ಸಿಗದೆ ಅಳಿಸಿಹೋಗಿರುವ ಲಕ್ಷಾಂತರ ಶ್ರಮಜೀವಿಗಳನ್ನೂ ನೆನೆಯುವುದು ಇಂದಿನ ತುರ್ತು. ಇಂದು ಭಾರತ 75ನೆಯ ವಸಂತವನ್ನು ಒಂದು ಸುಭದ್ರ ಬುನಾದಿಯ ಮೇಲೆ ನಿಂತು ಸಂಭ್ರಮಿಸುತ್ತಿದೆ ಎಂದರೆ ಅದರ ಹಿಂದೆ ಈ ಶ್ರಮಜೀವಿಗಳ ಬದುಕು, ಬೆವರು, ಪರಿಶ್ರಮ ಮತ್ತು ತ್ಯಾಗ ಬಲಿದಾನಗಳು ಇರುವುದನ್ನು ಮರೆಯುವಂತಿಲ್ಲ.

 

ಸ್ವಾತಂತ್ರ್ಯಾನಂತರದ ಭಾರತ ಈ 75 ವರ್ಷಗಳಲ್ಲಿ ನಿರ್ಮಿಸಿಕೊಂಡಿರುವ ಸುಭದ್ರ ಬುನಾದಿಗೆ ನಮ್ಮ ದೇಶದ ಆಡಳಿತ ವ್ಯವಸ್ಥೆ, ಆಡಳಿತಾರೂಢ ಸರ್ಕಾರಗಳು, ಆಡಳಿತ ನೀತಿಗಳು ಮತ್ತು ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿಯೇ ರೂಪಿಸಿದಂತಹ ಸಮ ಸಮಾಜದ ಯೋಜನೆಗಳು ಕಾರಣವಾಗಿವೆ. ಸ್ವಾತಂತ್ರ್ಯ ಸಂಗ್ರಾಮಿಗಳ ಇತಿಹಾಸವನ್ನು ಕೆದಕುತ್ತಾ, ಹೋರಾಟಗಾರರನ್ನು ಹೆಕ್ಕಿ ತೆಗೆದು, ಅಸ್ಮಿತೆಗಳನ್ನು ಆರೋಪಿಸುತ್ತಾ, ಚರಿತ್ರೆಯ ಚಕ್ರವನ್ನು ವಿವಸ್ತ್ರಗೊಳಿಸುತ್ತಿರುವ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ನಾವು ನೆನೆಯಬೇಕಾಗಿರುವುದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ, ಅಳಿದುಹೋದವರ, ಗುರುತಿಸಲಾಗದೆ ಹೋದವರ ಮತ್ತು ವಸಾಹತುಶಾಹಿಯೊಡನೆ ಬೆರೆತು ಹೋದವರ ಹೆಜ್ಜೆ ಗುರುತುಗಳನ್ನು. ಒಂದು ಸಮಾಜವಾಗಿ ನಾವೇ ನಿರ್ಮಿಸಿಕೊಂಡಿರುವ ಅಸ್ಮಿತೆಗಳ ಗೋಡೆಗಳನ್ನು ಮತ್ತಷ್ಟು ಬಿಗಿಯಾಗಿಸುತ್ತಲೇ, ಭೌತಿಕವಾಗಿ, ಭೌಗೋಳಿಕವಾಗಿ, ಐಕಮತ್ಯ ಮತ್ತು ಐಕ್ಯತೆ ಸಾಧಿಸಿರುವ ಸ್ವತಂತ್ರ ಭಾರತದ ವರ್ತಮಾನದ ಜನತೆ, ಬೌದ್ಧಿಕವಾಗಿ ಅಸಂಖ್ಯಾತ ಕಂದಕಗಳನ್ನು ನಿರ್ಮಿಸಿರುವುದನ್ನು ವಿಷಾದದಿಂದಲೇ ಗಮನಿಸಬೇಕಿದೆ.

 

ಈ 75 ವರ್ಷಗಳಲ್ಲಿ ಭಾರತದ ಅಧಿಕಾರ ರಾಜಕಾರಣದ ಕಾರ್ಖಾನೆಯಲ್ಲಿ ಅತಿ ಹೆಚ್ಚು ಉತ್ಪಾದನೆಯಾಗಿರುವ ಸರಕು ಎಂದರೆ “ಭರವಸೆ ಆಶ್ವಾಸನೆ ಮತ್ತು ಸುಳ್ಳುಗಳು” ಮಾತ್ರ ಎನ್ನುವುದನ್ನು ವಿಷಾದದಿಂದಲೇ ಗಮನಿಸಬೇಕಿದೆ. ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ನೇತಾರರು, ಪಕ್ಷಗಳು ನೀಡುವ ಆಶ್ವಾಸನೆಗಳು ಪೊಳ್ಳು ಎಂಬ ಅರಿವಿನೊಂದಿಗೇ ಜನಸಾಮಾನ್ಯರು ತಮ್ಮದೇ ಆದ ಸೈದ್ಧಾಂತಿಕ ನೆಲೆಗಳಲ್ಲಿ, ಪಕ್ಷ/ವ್ಯಕ್ತಿ/ಜಾತಿ/ಧರ್ಮ ನಿಷ್ಠೆಯೊಂದಿಗೆ ಜನಪ್ರತಿನಿಧಿಗಳ ಆಯ್ಕೆ ಮಾಡುತ್ತಿದ್ದಾರೆ. ಅನೂಚಾನವಾಗಿ ನಡೆದುಕೊಂಡು ಬಂದಿರುವ ಈ ಪರಂಪರೆಗೆ ಈ ಹೊತ್ತಿನಲ್ಲಾದರೂ ನಾವು ಅಂತ್ಯಗಾಣಿಸಬೇಕಿತ್ತು. ಆದರೆ ಯಾವುದು ಸತ್ಯ ಯಾವುದು ಮಿಥ್ಯ ಎನ್ನುವ ವ್ಯತ್ಯಾಸವನ್ನೇ ಅರಿಯಲಾಗದಂತೆ ಸುಶಿಕ್ಷಿತ ಯುವ ಸಮೂಹವನ್ನೂ ಸಹ ವಶೀಕರಣಗೊಳಿಸಿರುವ ಒಂದು ವಾತಾವರಣದಲ್ಲಿ ಭಾರತ ಸಾಗುತ್ತಿದೆ. ಜಾತಿ, ಮತ, ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳ ಭಾವುಕ ಜಗತ್ತಿನಲ್ಲಿ ವಿಹರಿಸುತ್ತಿರುವ ಈ ಸಮೂಹಕ್ಕೆ ಭಾರತದ ಸ್ವಾಂತಂತ್ರ್ಯಪೂರ್ವದ ಮತ್ತು ಸಾಂವಿಧಾನಿಕ ಆಶಯಗಳನ್ನು ಮನದಟ್ಟುಮಾಡುವ ನಿಟ್ಟಿನಲ್ಲಿ, ಹಿರಿಯ ಪೀಳಿಗೆ ಸೋತಿದೆಯೇ ಎಂದು ಯೋಚಿಸಬೇಕಿದೆ.

 

1947ರಲ್ಲಿದ್ದ ಯುವಸಮೂಹ ಮತ್ತು ಹರೆಯದ ಪೀಳಿಗೆ ಇಂದು ವಯೋವೃದ್ಧ ಸ್ಥಿತಿಯಲ್ಲಿದ್ದು, ಹಿಂದಿರುಗಿ ನೋಡುತ್ತಾ, ವಿಷಾದದ ನಗೆಯೊಂದಿಗೆ ಮನೆಮನೆಯಲ್ಲಿ ಹಾರುತ್ತಿರುವ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುತ್ತಿದ್ದಾರೆ. ಇದೇ ಕಾಲಘಟ್ಟದಲ್ಲಿ ಜನಿಸಿದ ಒಂದು ಪೀಳಿಗೆ ತಾವು ನಡೆದುಬಂದ ಹಾದಿಯನ್ನು ಪರಾಮರ್ಶಿಸುತ್ತಾ ಎಲ್ಲಿ ಎಡವಿದ್ದೇವೆ ಎಂಬುದನ್ನೇ ಗುರುತಿಸಲಾಗದೆ ಪರದಾಡುತ್ತಿದೆ. ಈ ಪೀಳಿಗೆಯ ಒಂದು ವರ್ಗ ಚರಿತ್ರೆಯ ಪ್ರಮಾದಗಳನ್ನು ಹೆಕ್ಕಿಹೆಕ್ಕಿ ತೆಗೆದು ದುರಸ್ತಿ ಮಾಡುವ ಉನ್ಮಾದದಲ್ಲಿ ಭಾರತೀಯ ಸಮಾಜದ ಆಂತರ್ಯದಲ್ಲೇ ಶತ್ರುಗಳನ್ನು ಗುರುತಿಸುತ್ತಾ, ತನ್ನದೇ ಆದ ಸಾಂಸ್ಕೃತಿಕ, ಸೈದ್ಧಾಂತಿಕ, ಸಾಮಾಜಿಕ ಹಾಗೂ ರಾಜಕೀಯ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದೆ. ಮತ್ತೊಂದು ವರ್ಗವು ಈ ದೇಶದ ಬಹುತ್ವ ಸಂಸ್ಕೃತಿ ಶಿಥಿಲವಾಗುತ್ತಿರುವುದನ್ನು ಗಮನಿಸುತ್ತಲೇ, ನಮಗೆ ನಾವೇ ಅರ್ಪಿಸಿಕೊಂಡಿರುವ ಸಂವಿಧಾನದ ಮೂಲ ಆಶಯಗಳು, ಗಂಗೆಯಲ್ಲಿ ಕೊಚ್ಚಿಹೋಗದಂತೆ ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿವೆ. ಈ ಎರಡು ಸಮೂಹಗಳ ನಡುವೆ 75 ವರ್ಷಗಳ ಅಭಿವೃದ್ಧಿಯ ಮತ್ತು ಸಾಂವಿಧಾನಿಕ ಸವಲತ್ತುಗಳ  ಫಲಾನುಭವಿಗಳಾಗಿ ತಮ್ಮದೇ ಆದ ಹಿತವಲಯದ ಭದ್ರಕೋಟೆಗಳಲ್ಲಿ ವಿರಮಿಸುತ್ತಿರುವ ಒಂದು ಬೃಹತ್‌ ಪ್ರಜ್ಞಾವಂತ ಸಮೂಹ ನಮ್ಮ ನಡುವೆ ಇದೆ.

 

ಈ ಸಮೂಹವೇ ಇಂದು ಭಾರತದ ವರ್ತಮಾನದ ಯುವಸಮೂಹವನ್ನು ಬೌದ್ಧಿಕವಾಗಿ ನಿಯಂತ್ರಿಸುತ್ತಿದೆ. ಮತಧರ್ಮಗಳ ಚೌಕಟ್ಟಿನೊಳಗೆ, ಜಾತಿಶ್ರೇಷ್ಠತೆಯ ಭ್ರಮಾತ್ಮಕ ಜಗತ್ತಿನೊಳಗೆ, ಅಸ್ಮಿತೆಗಳ ಭಾವುಕ ಬಯಲಿನೊಳಗೆ, ಮಾರುಕಟ್ಟೆ ಆರ್ಥಿಕತೆಯ ಲೋಭಕೂಪದೊಳಗೆ ಸುಶಿಕ್ಷಿತ ಯುವ ಪೀಳಿಗೆಯನ್ನೂ ಬಂಧಿಸುವ ಮೂಲಕ ನಮ್ಮ ಸುತ್ತಲೂ ನಡೆಯುತ್ತಿರುವ ಭೀಕರ ವಿದ್ಯಮಾನಗಳನ್ನು ಗಮನಿಸದಂತೆ ಪರದೆಗಳನ್ನು ಸೃಷ್ಟಿಸಿಬಿಟ್ಟಿವೆ. ನಾವು ನಿರ್ಮಿಸಿರುವ ಸಾಂಸ್ಕೃತಿಕ ಪರದೆಗಳು ಮತ್ತು ಅಸ್ಮಿತೆಗಳ ಗೋಡೆಗಳು ಒಂದು ವಾಸ್ತವ ಜಗತ್ತನ್ನು ಮರೆಮಾಚುತ್ತಿವೆ ಮತ್ತೊಂದೆಡೆ ಒಂದು ಕಲ್ಪಿತ ಸುಂದರ ಲೋಕವನ್ನು ಮಾಧ್ಯಮಗಳ ಮೂಲಕ, ಜಾಹೀರಾತುಗಳ ಮೂಲಕ, ರಾಜಕೀಯ ಪ್ರಣಾಳಿಕೆಗಳ ಮೂಲಕ ಯುವ ಸಮೂಹದ ಮುಂದಿಡುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ಒಂದು ಸುಂದರ, ಸೌಹಾರ್ದಯುತ, ಸ್ವಾವಲಂಬಿ, ಸಮ ಸಮಾಜದ ಕನಸನ್ನು ಹೊತ್ತು ಜೀವತ್ಯಾಗ ಮಾಡಿದ ಅನೇಕಾನೇಕ ಸ್ವಾತಂತ್ರ್ಯ ಸಂಗ್ರಾಮಿಗಳನ್ನು, ಗತಕಾಲದ ಚಿಂತಕರನ್ನು ಮತ್ತು ತತ್ವಶಾಸ್ತ್ರಜ್ಞರನ್ನು, ಬುದ್ಧನಿಂದ ಅಂಬೇಡ್ಕರ್‌ವರೆಗಿನ ಎಲ್ಲ ಬೌದ್ಧಿಕ ನೆಲೆಗಳನ್ನು ಅಧಿಕಾರ ರಾಜಕಾರಣದ ವಿಸ್ತರಣೆಗೆ ಸೇತುವೆಗಳಾಗಿ ಬಳಸಿಕೊಳ್ಳುತ್ತಿದ್ದೇವೆ. ಅಥವಾ ಬಳಸಿಕೊಳ್ಳುತ್ತಿರುವುದನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದೇವೆ.

 

ಹಾಗಾಗಿಯೇ ಭಾರತದ ಒಂದು ಬೃಹತ್‌ ಯುವ ಸಮೂಹ ನಿರುದ್ಯೋಗದ ವಿರುದ್ಧ, ಬೆಲೆ ಏರಿಕೆಯ ವಿರುದ್ಧ, ಹಿಂಸಾತ್ಮಕ ವಿದ್ಯಮಾನಗಳ ವಿರುದ್ಧ ದನಿ ಎತ್ತದಿದ್ದರೂ, ಯಾವುದೋ ಒಂದು ಮಂದಿರ, ಮಸೀದಿ, ಚರ್ಚು ಅಥವಾ ಒಂದು ಕಾವ್ಯ, ನಾಟಕ, ಕತೆಯ ವಿರುದ್ಧ ದನಿ ಎತ್ತಲು ಉತ್ಸುಕವಾಗಿವೆ. ತಮ್ಮ ಸಾಮಾಜಿಕ ಆವರಣದಲ್ಲೇ ಕಂಡುಬರುತ್ತಿರುವ ಪೈಶಾಚಿಕ ಪ್ರವೃತ್ತಿಯನ್ನು ಗಮನಿಸಿದರೂ ಗಮನಿಸದಂತಿರುವಂತೆ ಈ ಯುವ ಸಮೂಹದ ಕಣ್ಣುಗಳಿಗೆ ಪೊರೆ ಬಂದುಬಿಟ್ಟಿದೆ. ಆದ್ದರಿಂದಲೇ ಒಂದು ಹತ್ಯೆ, ಅಸಹಜ ಸಾವು, ಅತ್ಯಾಚಾರ, ಅಮಾನವೀಯ ದಾಳಿ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಯುವ ಸಮೂಹದ ಸ್ವಪ್ರಜ್ಞೆಯನ್ನು ಕದಡುತ್ತಿಲ್ಲ. ಹುಟ್ಟಿನಿಂದ ಸಾವಿನವರೆಗೂ ಬದುಕಿನ ಪಯಣವನ್ನು ಅಸ್ಮಿತೆಯ ಮಸೂರಗಳನ್ನು ತೊಟ್ಟುಕೊಂಡೇ ನೋಡುವಂತಹ ಒಂದು ಸಾಂಸ್ಕೃತಿಕ ಪರಿಸರವನ್ನು ಭಾರತದ ಜಾತಿ ವ್ಯವಸ್ಥೆ ಮತ್ತು ಮತಧರ್ಮ ಶ್ರದ್ಧೆ ನಿರ್ಮಿಸಿಬಿಟ್ಟಿದೆ. “ ನಮ್ಮವರು ” ಎಂಬ ಭಾವನೆಯೇ ಅಸ್ಮಿತೆಗಳ ನೆಲೆಯಲ್ಲಿ ವಿಘಟಿತವಾಗಿದ್ದು ವಿಕ್ಷಿಪ್ತತೆಯನ್ನು ಪಡೆದುಕೊಂಡಿರುವುದರಿಂದ, ಹತರಾದವರು, ಅತ್ಯಾಚಾರಕ್ಕೊಳಗಾದವರು, ದೌರ್ಜನ್ಯಕ್ಕೊಳಗಾದವರು, ಅಸ್ಪೃಶ್ಯತೆಯಂತಹ ಹೀನಾಚರಣೆಗೊಳಗಾದವರು ಈ ಚೌಕಟ್ಟಿನಲ್ಲಿ ನಾವೇ ನಿರ್ಮಿಸಿಕೊಂಡಿರುವ ತೆಳುಪರದೆ ಅಥವಾ ಗೋಡೆಗಳಿಂದಾಚೆಗೇ ಕಾಣುವಂತಾಗಿದೆ.

 

ಸಮಾಜದ ಏಳಿಗೆ ಮತ್ತು ಕಟ್ಟುವಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಈ ಯುವ ಸಮೂಹವು ತಮ್ಮ ಸುತ್ತಲಿನ ಗೋಡೆಗಳನ್ನು ಕೆಡವದಿದ್ದರೂ ಗೋಡೆಯ ಮೇಲೆ ಹತ್ತಿ ಕುಳಿತು ಮತ್ತೊಂದು ಬದಿಯ ಜಗತ್ತನ್ನು ಗಮನಿಸಿದಾಗ ಅಲ್ಲಿ ಹಸಿವು, ಬಡತನ, ದಾರಿದ್ರ್ಯ, ನಿರುದ್ಯೋಗ, ವಸತಿಹೀನತೆ ಮುಂತಾದ ಕರಾಳ ಚಿತ್ರಗಳು ಕಾಣಲು ಸಾಧ್ಯ. 18 ಲಕ್ಷ ಸೂರಿಲ್ಲದ ಬಡಜನತೆ, ರಸ್ತೆಯಲ್ಲಿ ಮಲಗುವ ನಾಲ್ಕು ಲಕ್ಷ ನಿರ್ಗತಿಕರು, ಉದ್ಯೋಗಾವಕಾಶಗಳಿಲ್ಲದೆ ಅರ್ಹತೆಯ ಪ್ರಮಾಣಪತ್ರ ಹಿಡಿದು ಉದ್ಯೋಗಕ್ಕಾಗಿ ಸಾಲುಗಟ್ಟಿ ನಿಂತಿರುವ ಕೋಟ್ಯಂತರ ಯುವಜನತೆ, ಬೆಲೆ ಏರಿಕೆಯಿಂದ ಹೈರಾಣಾಗಿ ಒಪ್ಪೊತ್ತಿನ ಆಹಾರ ಸೇವಿಸುತ್ತಿರುವ ಅಸಂಖ್ಯಾತ ಜನರು, ನಿತ್ಯ ಬದುಕಿಗಾಗಿ ಕೂಲಿಯನ್ನರಸುತ್ತಾ ಅಂಡಲೆಯುವ ವಲಸೆ ಕಾರ್ಮಿಕರು, ದಿನನಿತ್ಯ ಅತ್ಯಾಚಾರಕ್ಕೊಳಗಾಗುತ್ತಿರುವ ಅಮಾಯಕ ಮಹಿಳೆಯರು, ಜಾತಿ ದೌರ್ಜನ್ಯಕ್ಕೊಳಗಾಗುತ್ತಿರುವ ಅಸಹಾಯಕ ಜೀವಿಗಳು, ತಮ್ಮ ಅರಿವಿನ ವಿಸ್ತಾರಕ್ಕೆ ನಿಲುಕದ ಯಾವುದೋ ಒಂದು ತಾತ್ವಿಕ ನೆಲೆಗೆ ನಿರಂತರ ಬಲಿಯಾಗುತ್ತಿರುವ ಯುವಜನತೆ, ಶೈಕ್ಷಣಿಕ ಮಾರುಕಟ್ಟೆಯಲ್ಲಿ ಸರಕು ಖರೀದಿಸಲು ಅಶಕ್ಯರಾಗಿ ಶಿಕ್ಷಣವಂಚಿತರಾಗುತ್ತಿರುವ ಕೋಟ್ಯಂತರ ಜನರು, ಮತಾಂಧತೆಯ ಪೈಶಾಚಿಕ ಶಕ್ತಿಗಳ ನೆತ್ತರ ದಾಹ ತಣಿಸುತ್ತಿರುವ ಅಸಹಾಯಕ ಯುವಕರು, ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ವ್ಯಕ್ತಿಗತ ಸ್ವಾತಂತ್ರ್ಯವನ್ನೂ ಕಳೆದುಕೊಂಡಿರುವ ಯುವ ಸಮೂಹ, ಇವೆಲ್ಲವನ್ನೂ ನೋಡಬೇಕೆಂದರೆ ಗೋಡೆಗಳಿಂದಾಚೆಗೆ ದೃಷ್ಟಿ ಹಾಯಿಸಬೇಕಾಗುತ್ತದೆ.

ಈ ವಿದ್ಯಮಾನಗಳನ್ನು ಜನರ ಮುಂದಿಡಬೇಕಾದ (ವಿದ್ಯುನ್ಮಾನ) ಮಾಧ್ಯಮ ಜಗತ್ತು ತನ್ನ ನೈತಿಕತೆ ಮತ್ತು ಮಾನವೀಯ ಸ್ಪರ್ಶವನ್ನು ಕಳೆದುಕೊಂಡು ಬೆತ್ತಲಾಗಿದೆ. ಔದ್ಯಮಿಕ ಹಿತಾಸಕ್ತಿ, ಮಾರುಕಟ್ಟೆ ಅಸ್ತಿತ್ವ ಮತ್ತು ಅಧಿಕಾರ ರಾಜಕಾರಣದ ಸಾಂಗತ್ಯದೊಂದಿಗೇ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿರುವ ಮಾಧ್ಯಮ ಲೋಕ (ಕೆಲವು ಅಪವಾದಗಳನ್ನು ಹೊರತುಪಡಿಸಿದರೆ) ಬಹುಮಟ್ಟಿಗೆ ಸ್ವತಂತ್ರ ಭಾರತದ ಜನತೆಗೆ ವಿಶ್ವಾಸ ದ್ರೋಹ ಬಗೆದಿದೆ ಎನ್ನುವುದು ಕಟುವಾಸ್ತವ. ಆತ್ಮಸಾಕ್ಷಿಯನ್ನೇ ಕಳೆದುಕೊಂಡಿರುವ ಜನ ನಾಯಕರ ಒಂದು ವರ್ಗ ಜನಸಮುದಾಯಗಳ ವಿಶ್ವಾಸ ಗಳಿಸಲು ಮಾಡುವ ಕಸರತ್ತುಗಳು, ಇದೇ ಜನಸಮುದಾಯಗಳ ನಡುವೆ ಕರಾಳ ಬದುಕು ಸವೆಸುತ್ತಿರುವವರತ್ತ ಕಣ್ಣೆತ್ತಿಯೂ ನೋಡದಿರುವುದು ವರ್ತಮಾನದ ದುರಂತ ಎಂದೇ ಹೇಳಬೇಕಿದೆ. 75ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಾದರೂ ನಾವು ಹಿಂದಿರುಗಿ ನೋಡಬೇಕು, ನಮ್ಮ ಬೆನ್ನ ಹಿಂದಿನ ಕರಾಳತೆಯತ್ತ ಗಮನಹರಿಸಬೇಕು, ಇಟ್ಟ ತಪ್ಪುಹೆಜ್ಜೆಗಳನ್ನು ಗುರುತಿಸಿ ಮುಂದಣ ಹೆಜ್ಜೆಗಳನ್ನು ರೂಪಿಸಬೇಕು ಎನ್ನುವ ಒಂದು ಉದಾತ್ತ ಚಿಂತನೆ ನಮ್ಮ ಜನಪ್ರತಿನಿಧಿಗಳಲ್ಲಿ ಇಲ್ಲದಿರುವುದರಿಂದ, ಈ ದೇಶದ ಯುವ ಸಮೂಹ ನಿರ್ಮಿತ/ಕಲ್ಪಿತ ಗೋಡೆಗಳನ್ನು ತಾನೇ ಸ್ವತಃ ಭೇದಿಸಿ ನಮ್ಮ ಸಮಾಜದ ಮತ್ತೊಂದು ಮುಖವನ್ನು ನೋಡಲೇಬೇಕಿದೆ.

 

ದಿನಬೆಳಗಾದರೆ ಕನ್ನಡಿಯ ಮುಂದೆ ನಿಲ್ಲುವ ಮನುಷ್ಯ ಜೀವಿ, ಸಮಾಜ ಎನ್ನುವ ಒಂದು ಕನ್ನಡಿಯ ಮುಂದೆಯೂ ನಿಂತು ನೋಡಿದಾಗ ಬೆನ್ನ ಹಿಂದಿನ ಸತ್ಯಾಸತ್ಯತೆಗಳು, ಸುಡುವಾಸ್ತವಗಳು ಮತ್ತು ಕರಾಳ ಕೂಪಗಳು ಗೋಚರಿಸಲು ಸಾಧ್ಯ. ಆದರೆ ಈ ಕನ್ನಡಿಯ ಮುಂದೆ ನಿಲ್ಲುವ ಯುವಸಮೂಹದ ಕಣ್ಣಿಗೆ ಎಲ್ಲವೂ ಛಿದ್ರವಾಗಿಯೇ , ತುಣುಕುಗಳಾಗಿಯೇ ಕಾಣುತ್ತವೆ.  ಕಾರಣ, 75 ವರ್ಷಗಳ ಅಧಿಕಾರ ರಾಜಕಾರಣದಲ್ಲಿ, ಸಾಂಸ್ಕೃತಿಕ ರಾಜಕಾರಣದ ನಡುವೆ, ಜಾತಿ-ಮತ-ಲಿಂಗ ಭೇದಗಳ ಕಂದಕವನ್ನು ಹಿಗ್ಗಿಸುತ್ತಲೇ ನಡೆದಿರುವ ಸ್ವತಂತ್ರ ಭಾರತದ ಸುಶಿಕ್ಷಿತ ಸಮಾಜ ಮತ್ತು ಈ ದೇಶವನ್ನು ಮುನ್ನಡೆಸಬೇಕಾದ ಹಿರಿಯಪೀಳಿಗೆಯ ಒಂದು ಪ್ರಬಲ ವರ್ಗ ಈ ಕನ್ನಡಿಯನ್ನು ನಿರಂತರವಾಗಿ ಛಿದ್ರಗೊಳಿಸುತ್ತಲೇ ಬಂದಿದೆ. ಹಾಗಾಗಿಯೇ ನಾವು ನಮ್ಮ ಸ್ವಾತಂತ್ರ್ಯ ಸಂಗ್ರಾಮಿಗಳ  ಆಶಯದಂತೆ, ಸಂವಿಧಾನ ಕರ್ತೃಗಳ ನಿರೀಕ್ಷೆಯಂತೆ ಒಂದು ಭಾವೈಕ್ಯತೆಯ, ಸೋದರತೆಯ, ಸೌಹಾರ್ದತೆಯ ಭಾರತವನ್ನು ವಾಸ್ತವ ಜಗತ್ತಿಗಿಂತಲೂ ಹೆಚ್ಚಾಗಿ, ಸಾಂಕೇತಕವಾಗಿ ರಾಷ್ಟ್ರಧ್ವಜದಲ್ಲಿ ಕಾಣುತ್ತಿದ್ದೇವೆ.

 

ನಾವು ಎತ್ತ ಸಾಗಬೇಕು ಎನ್ನುವುದರೊಂದಿಗೇ ಯಾವ ಮಾರ್ಗದಲ್ಲಿ ಸಾಗಬೇಕು ಎಂಬ ಜಟಿಲ ಪ್ರಶ್ನೆಗೆ ಈ ದೇಶದ ಯುವ ಸಮೂಹ ಉತ್ತರ ಕಂಡುಕೊಳ್ಳಬೇಕಿದೆ. ನಮ್ಮ ನಡುವೆ ವರ್ತಮಾನದ ಆದರ್ಶಗಳಿಲ್ಲ. ಇತಿಹಾಸದ ಚೇತನಗಳು ಜೀವಂತವಾಗಿವೆ, ಬುದ್ಧನಿಂದ ಅಂಬೇಡ್ಕರ್‌ವರೆಗೆ ವಿಸ್ತರಿಸಿರುವ ವಿಶಾಲ ಹರವಿನಲ್ಲಿ ಗಾಂಧಿ, ವಿವೇಕಾನಂದ, ಭಗತ್‌ ಸಿಂಗ್‌, ಫುಲೆ, ರವೀಂದ್ರನಾಥ ಠಾಗೂರ್‌ ಮುಂತಾದ ಮಹಾನ್‌ ಚೇತನಗಳು ಇಂದಿಗೂ ಜೀವಂತಿಕೆಯಿಂದಿವೆ. ಇದರಿಂದಾಚೆಗೆ ನಮ್ಮ ಭವಿಷ್ಯದ ಹಾದಿಗಳನ್ನು ನಿರ್ಮಿಸಲು ನೆರವಾಗಬಹುದಾದ ತಾತ್ವಿಕ ಚಿಂತನೆಗಳನ್ನು ಅರಿಸ್ಟಾಟಲ್‌ನಿಂದ ಮಾರ್ಕ್ಸ್‌ವರೆಗೂ ಬಳಸಿಕೊಳ್ಳಬಹುದಾದ ಸರ್ವ ಸ್ವಾತಂತ್ರ್ಯ ನಮ್ಮದಾಗಿದೆ. ಈ ಬೌದ್ಧಿಕ ಸ್ವಾತಂತ್ರ್ಯವನ್ನು ಸಮರ್ಪಕವಾಗಿ ಬಳಸಿ, ಭವಿಷ್ಯ ಭಾರತದ ಹಾದಿಯನ್ನು ಸಮಾನತೆ, ಸೌಹಾರ್ದತೆ, ಮಾನವತೆ, ಸೋದರತೆ, ಸಮನ್ವಯ ಮತ್ತು ಮನುಜ ಪ್ರೀತಿಯ ಹಾಸುಗಲ್ಲುಗಳಿಂದ ಸಿಂಗರಿಸಿದರೆ ಭಾರತ ನೂರರ ಗಡಿ ದಾಟುವ ವೇಳೆಗೆ   “ ಸರ್ವ ಜನಾಂಗದ ಶಾಂತಿಯ ತೋಟ ”ದಂತೆ ಕಂಗೊಳಿಸಲು ಸಾಧ್ಯ.

 

“ ಕಂದಕಗಳನ್ನು ಕಿರಿದಾಗಿಸೋಣ, ಗೋಡೆಗಳನ್ನು ಭೇದಿಸೋಣ, ಅಸ್ಮಿತೆಗಳ ಪರದೆಗಳನ್ನು ಭಂಜಿಸೋಣ, ಮಾನವ ಸಮಾಜವನ್ನು ಕಟ್ಟೋಣ”

ಎಂಬ ಧ್ಯೇಯವಾಕ್ಯದೊಂದಿಗೆ ಈ ದೇಶದ ಯುವ ಸಮೂಹ ಮುನ್ನಡೆಯುವುದೇ ಆದರೆ, ಅಮೃತ ಮಹೋತ್ಸವದ ಸಂದರ್ಭದಲ್ಲಿ ಮನೆಮನೆಯಲ್ಲಿ ನಾವು ರಾಷ್ಟ್ರಧ್ವಜಕ್ಕೆ ಸಲ್ಲಿಸುತ್ತಿರುವ ಗೌರವ ಅರ್ಥಪೂರ್ಣವಾಗುತ್ತದೆ.