ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ “ಕಭೀ ಕಭೀ ಮೇರಾ ದಿಲ್ ಮೇ...,”
ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ “ಕಭೀ ಕಭೀ ಮೇರಾ ದಿಲ್ ಮೇ...,”, kuchangi-prasanna-ondu-galige-kabhie-kabhie-mere-dil-me

ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
“ಕಭೀ ಕಭೀ ಮೇರಾ ದಿಲ್ ಮೇ...,”
ನಮ್ಮ ಮನೆ ಮಾತು ಕನ್ನಡ ನಿಜ, ನಮ್ಮ ಕನ್ನಡದಲ್ಲಿ ಕೇಳುತ್ತಲೇ ಇದ್ದರೆ ಕೇಳುತ್ತಲೇ ಇರಬೇಕೆನ್ನಿಸುವ ಭಾವಗೀತೆಗಳು ಮತ್ತು ಸಿನಿಮಾ ಗೀತೆಗಳು ಇವೆಯಾದರೂ ನನ್ನ ಬಾಲ್ಯದಲ್ಲಿ ನಾನು ಹೆಚ್ಚು ಮಾರು ಹೋಗಿದ್ದು ಸುಶ್ರಾವ್ಯ ಹಿಂದೂಸ್ತಾನಿ ಹಾಡುಗಳಿಗೆ, ಮುಂಬಯಿ ಬಾಂಬೆಯಾಗಿ ಮತ್ತೆ ಮುಂಬೈ ಆಗಿರುವ ಆ ದೊಡ್ಡ ಷಹರದಲ್ಲಿ ತಯಾರಾಗುತ್ತಿವೆ ಎಂಬ ಕಾರಣಕ್ಕೆ ಈಗ ಅದನ್ನು ಬಾಲಿವುಡ್ ಎನ್ನುತ್ತಾರೆ, ಮತ್ತು ಆ ಸಿನಿಮಾಗಳಿಗೆ ಹಿಂದಿ ಸಿನಿಮಾ ಎನ್ನುತ್ತಾರೆ, ಇದೆಲ್ಲ ಭಾಷಾ ರಾಜಕೀಯ, ವಾಸ್ತವದಲ್ಲಿ ಆಗ ಆ ಸಿನಿಮಾಗಳ ಸೆನ್ಸಾರ್ ಸರ್ಟಿಫಿಕೇಟ್‌ನಲ್ಲೂ ಭಾಷೆ: ಹಿಂದೂಸ್ತಾನಿ ಅಂತಲೇ ಇರುತ್ತಿತ್ತು, ಬೇಕಿದ್ದರೆ ರಿಯಾಲಿಟಿ ಚೆಕ್ ಮಾಡಿ ನೋಡಿ.
ಎಪ್ಪತ್ತು ಎಂಬತ್ತರ ದಶಕದಲ್ಲಿ ನಮ್ಮ ಕೈಗೆಟಕುತ್ತಿದ್ದ ಒನ್ ಒಂಡ್ ಓನ್ಲಿ ಮನರಂಜನಾ ಸಾಧನವೆಂದರೆ ರೇಡಿಯೋ ಮಾತ್ರವೇ. ಆಕಾಶವಾಣಿಯ ಬೆಳಗಿನ ಜಾವದ ಬಾನ್ಸುರಿ ವಾದನದ ಸಿಗ್ನೇಚರ್ ಟ್ಯೂನಿನಿಂದ ರಾತ್ರಿ ಹತ್ತು ಹನ್ನೊಂದರವರೆಗೂ ಸದಾ ರೇಡಿಯೋನೇ ನಮ್ಮ ದಿನಚರಿಯ ಮಾನಿಟರ್ ಆಗಿದ್ದನ್ನು ನೆನಪಿಸಿಕೊಂಡರೆ ಇವತ್ತು ತೀರಾ ನಂಬಲಾಗದ ಅಚ್ಚರಿ ಎನಿಸಿಬಿಡುತ್ತದೆ. ಆಕಾಶವಾಣಿ ಬೆಂಗಳೂರು ಸಂಪ್ರದಾಯಸ್ಥರಿಗಾದರೆ, ಅತ್ಯಂತ ಸೋಶಿಯಲ್ ಆದ ಜೀವಗಳಿಗೆ ವಿವಿಧ ಭಾರತಿ, ಸಿಲೋನ್ ಸ್ಟೇಷನ್‌ಗಳ ಕಾರ್ಯಕ್ರಮಗಳೆಂದರೆ ಪ್ರಾಣವಾಗಿದ್ದವು.
ನಮ್ಮ ಮನೆಯ ಮಿಲಿಟರಿ ಶಿಸ್ತಿನ ವಾತಾವರಣದಲ್ಲಿ ರೇಡಿಯೋ ಸಹ ಬೆಂಗಳೂರು ಕೇಂದ್ರಕ್ಕೆ ಹಾಗೂ ವಾರ್ತೆ ಕೇಳಲು ಮಾತ್ರವೇ ಮೀಸಲಾಗಿದ್ದ ನನ್ನ ಬಾಲ್ಯದ ವರ್ಷಗಳಲ್ಲಿ ನನಗೆ ಈ ಹಿಂದೂಸ್ತಾನಿ ಹಾಡುಗಳ ಗುಂಗು ಹತ್ತಿಸಿ ಅಡಿಕ್ಟ್ ಆಗುವಂತೆ ಮಾಡಿದ್ದು ಪಾರ್ವತಮ್ಮ ಎನ್ನುವ ನಮ್ಮ ನೆಂಟರು. ಸೋಮೇಶ್ವರ ಪುರದಲ್ಲಿ ನಮ್ಮ ಮನೆಗೆ ಸಮೀಪದಲ್ಲೇ ಇದ್ದ ಪಾರ್ವತಮ್ಮನವರು ಬೆಂಗಳೂರಿನಲ್ಲಿ ಬೆಳೆದು ಬಂದು ಇಲ್ಲೇ ಸಮೀಪದ ಶೆಟ್ಟಿಹಳ್ಳಿಯ ಪುಟ್ಟಸ್ವಾಮಯ್ಯ ಮೇಷ್ಟ್ರನ್ನ ಮದುವೆಯಾಗಿ ಬಂದವರು. ಅವರ ಮನೆಯ ಪುಟ್ಟ ಟ್ರಾನ್ಸ್ ಸಿಸ್ಟರ್ ಸದಾ ಹಿಂದೂಸ್ತಾನಿ ಹಾಡುಗಳನ್ನು ಗುನುಗುತ್ತಲೇ ಇರುತ್ತಿತ್ತು. ಯಾವ್ಯಾವ ಸಮಯಕ್ಕೆ ಯಾವ್ಯಾವ ಸ್ಟೇಷನ್‌ಗಳಲ್ಲಿ ಎಂತೆAಥ ಒಳ್ಳೆ ಹಾಡುಗಳು ಪ್ರಸಾರವಾಗುತ್ತವೆ ಎಂಬುದು ಪಾರ್ವತಮ್ಮನವರ ನೆನಪಿನಲ್ಲಿದ್ದು ಅದರಂತೆ ಸ್ಟೇಷನ್‌ಗಳನ್ನು ಟ್ಯೂನ್ ಮಾಡುತ್ತಿದ್ದರು. ಅವರ ಹಿಂದೂಸ್ತಾನಿ ಪ್ರೇಮ ಎಷ್ಟಿತ್ತಪ್ಪಾ ಎಂದರೆ ಮಕ್ಕಳಿಗೆ ಅರಿವಾಗಬಾರದೆಂಬ ಸಂಗತಿಗಳನ್ನು ಗಂಡ ಹೆಂಡತಿ ಇಬ್ಬರೂ ಹಿಂದೂಸ್ತಾನಿಯಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಅಲ್ಲೂ ಒಂದು ವಿಶಿಷ್ಟ ಏನಿತ್ತಪ್ಪಾ ಅಂದರೆ ಪಾರ್ವತಮ್ಮನವರು ಹಿಂದೂಸ್ತಾನಿಯಲ್ಲಿ ಮಾತನಾಡಿದರೆ, ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಪುಟ್ಟಸ್ವಾಮಯ್ಯನವರು ಕನ್ನಡದಲ್ಲೇ ಚುಟುಕಾಗಿ ಉತ್ತರ ಕೊಡುತ್ತಿದ್ದರು.
ವಿವಿಧ ಭಾರತಿಯಲ್ಲಿ ಅತ್ಯಂತ ಮಧುರ ಹಾಗೂ ಮೆಲು ದನಿಯ ನಿರೂಪಕರು ಹಾಡಿನ ಹಿನ್ನೆಲೆಯನ್ನು ಪ್ರಸ್ತಾಪ ಮಾಡುತ್ತಿದ್ದಂತೆಯೇ ಆ ಹಾಡು ಯಾವುದು, ಗಾಯಕ,ಗಾಯಕಿ ಯಾರು, ಗೀತ ರಚನಕಾರರು ಯಾರು, ಸಂಗೀತ ನೀಡಿರುವವರು ಯಾರು, ಆ ಸಿನಿಮಾದ ನಾಯಕ , ನಾಯಕಿಯರು ಯಾರು, ದೃಶ್ಯದ ಸಂದರ್ಭ ಏನು ಎನ್ನುವುದನ್ನೆಲ್ಲ ಪಾರ್ವತಮ್ಮನವರು ಪಟ ಪಟ ಅಂತ ಹೇಳಿಬಿಡುತ್ತಿದ್ದರು, ಅವರ ಜ್ಞಾನ ಸಂಪತ್ತು ನನಗೆ ನಿಜಕ್ಕೂ ಅಚ್ಚರಿಯ ಸಂಗತಿಯಾಗಿ ನಾನು ಅವರ ಹಾಗೂ ಆ ಮೂಲಕ ಹಿಂದೂಸ್ತಾನಿ ಹಾಡುಗಳ ಅಭಿಮಾನಿಯೇ ಆಗಿ ರೂಪುಗೊಂಡೆ.
ಕಾಲೇಜು ದಿನಗಳ ಚಟುವಟಿಕೆಗಳು ಹಾಗೂ ನಂತರದ ಪತ್ರಕರ್ತನ ವೃತ್ತಿಯ ಕ್ಷಣ ಬಿಡುವಿರದ ನಿರಂತರ ಒತ್ತಡದಲ್ಲಿ ಎಲ್ಲ ಮರೆತೇ ಹೋಗಿತ್ತು ಎನ್ನುವಂತಿದ್ದಾಗ, ನನ್ನ ಬಾಲ್ಯದ ಹಿಂದೂಸ್ತಾನಿ ಹಾಡುಗಳ ಪ್ರೇಮದ ಕೊರಡಿಗೆ ಮತ್ತೆ ನೀರೆರೆದು ಚಿಗುರುವಂತೆ ಮಾಡಿದ್ದು ನನ್ನ ಎರಡು ದಶಕಗಳ ಜೀವನ ಸಂಗಾತಿ ನೇತ್ರಾವತಿ, ಈಕೆ ಕೂಡಾ ಈ ಹಿಂದಿ ಯಾನೆ ಹಿಂದೂಸ್ತಾನಿ ಸಿನಿಮಾ ಹಾಗೂ ಹಾಡುಗಳ ಸಜೀವ ಎನ್ ಸೈಕ್ಲೋಪೀಡಿಯಾ. ಯಾವ ಹಾಡಿನ ಯಾವ ಗಾಯಕ, ಗಾಯಕಿಯ ಮಾಹಿತಿ ಬೇಕೆಂದರೂ ನಾಲಿಗೆ ತುದಿಯಲ್ಲೇ ಪಟ ಪಟಾಂತ ಹೇಳಿಬಿಡುತ್ತಾಳೆ. ಈ ಎರಡು ಜೀವಗಳಿಗೂ ನಾನು ಚಿರರುಣಿ.
ಇಂಥ ನನ್ನ ಮನಸೂರೆಗೊಂಡಿರುವ ಹಾಡುಗಳಲ್ಲಿ ಕವಿ ಸಾಹಿರ್ ಲೂಧಿಯಾನ್ವಿಯ “ಕಭೀ ಕಭೀ ಮೇರಾ ದಿಲ್ ಮೇ ಖಯಾಲ್ ಆತಾ ಹೈ ” ಸಾಲುಗಳನ್ನು ನನಗೆ ಗೊತ್ತಿಲ್ಲದೇ ಗುನುಗುತ್ತಲೇ ಇರುತ್ತದೆ ನನ್ನ ಒಳ ದನಿ, ಮತ್ತೆ ಒಬ್ಬನೇ ಇರುವಾಗಲಂತೂ ಯೂ ಟ್ಯೂಬ್ ಚಾನೆಲ್‌ನಲ್ಲಿ ಈ ಹಾಡಿನ ಒರಿಜಿನಲ್ ಹಾಗೂ ಅಮಿತಾಬ್ , ಶಶಿಕಪೂರ್ ಹಾಗೂ ರಾಖಿಯ ಅಭಿನಯದ ಅದೇ “ ಕಭೀ ಕಭೀ “ ಹೆಸರಿನಲ್ಲಿ 1976ರಲ್ಲಿ ತೆರೆಗೆ ಬಂದ ಸಿನಿಮಾದಲ್ಲಿ ಮುಖೇಶ್ ಒಬ್ಬನೇ ಹಾಡಿರುವ ಮತ್ತು ಮುಖೇಶ್ ಮತ್ತು ಲತಾ ಮಂಗೇಶ್ಕರ್ ಒಟ್ಟಿಗೆ ಹಾಡಿರುವ ಹಾಗೂ ಅಮಿತಾಬ್ ತನ್ನ ವಿಶಿಷ್ಟ ಕಂಠದಲ್ಲಿ ವಾಚಿಸಿರುವ ಸಾಹಿರ್ ನ ಈ “ ಕಭೀ ಕಭೀ ಮೇರಾ ದಿಲ್ ಮೇ” ಗಳನ್ನು ಒಂದಾದ ಮೇಲೊಂದರಂತೆ ಬ್ಯಾಕ್ ಟು ಬ್ಯಾಕ್ ಕೇಳುತ್ತಲೇ ಇದ್ದರೆ ಅದೇ ಅಷ್ಟೇ ಸಾಕು ಎನಿಸುತ್ತದೆ ಜೀವಕ್ಕೆ. ಬಾಲಿವುಡ್ ನ ನೂರು ಶ್ರೇಷ್ಟ ಹಾಡುಗಳಲ್ಲಿ ಈ “ಕಭೀ ಕಭೀ” ಹಾಡು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಆ ವರ್ಷ ಸಿಲೋನ್ ಹಾಗೂ ಬಿನಾಕಾ ಗೀತ್ ಮಾಲಾಗಳಲ್ಲಿ ಅತಿ ಹೆಚ್ಚು ಸಲ ಪ್ರಸಾರವಾದ ಹಾಡಾಗಿತ್ತು ಈ “ ಕಭೀ ಕಭೀ”.
ಅಂದ ಹಾಗೆ ಈ“ ಕಭೀ ಕಭೀ” ಗಾನಕ್ಕೆ ಸಂಗೀತದ ಜೀವ ನೀಡಿರುವುದು ಕಯ್ಯಾಮ್ ಅತ್ಯುತ್ತಮ ಸಂಗೀತ ನಿರ್ದೇಶಕ ಹಾಗೂ ಸಾಹಿರ್ ಲೂಧಿಯಾನ್ವಿ ಅತ್ಯುತ್ತಮ ಗೀತ ರಚನಾಕಾರ ಹಾಗೂ ಮುಖೇಶ್‌ಗೆ ಅತ್ಯುತ್ತಮ ಗಾಯಕ ಪ್ರಶಸ್ತಿಯನ್ನು ಆ ವರ್ಷ ಪಡೆದುಕೊಂಡರು. ಈ ಅವಾರ್ಡ್ ಗಳನ್ನು ಕೊಟ್ಟಿದ್ದು ಫಿಲಂ ಫೇರ್ ಮ್ಯಾಗಜೀನ್. ಆಗ ಅದು ಇಂಡಿಯಾದ ಹಿಂದೂಸ್ತಾನಿ ಸಿನಿಮಾಗಳ ಪಾಲಿಗೆ ಆಸ್ಕರ್ ನಷ್ಟೇ ಮಹತ್ವದ ಪ್ರಶಸ್ತಿಯಾಗಿತ್ತು.ಸಾಹಿರ್ ಲೂಧಿಯಾನ್ವಿ ಎಂಬುದು 1921ರ ಮಾರ್ಚಿ ಎಂಟರAದು ಬ್ರಿಟಿಷ್ ಇಂಡಿಯಾದ ಪಂಜಾಬ್ ರಾಜ್ಯದ ಲೂಧಿಯಾನದ ಕರೀಮ್‌ಪುರದಲ್ಲಿ ಜನಿಸಿದ ಅಬ್ದುಲ್ ಹಾಯೀ ಎಂಬ ಶ್ರೇಷ್ಟ ಭಾರತೀಯ ಕವಿಯ ಕಾವ್ಯನಾಮ. ಕವಿ, ಗೀತರಚನಕಾರ ಹಾಗೂ ಲೇಖಕನಾಗಿದ್ದ ಈತ ತನ್ನಕಾಲದ ಪ್ರಗತಿಪರ ಲೇಖಕರ ಸಂಘದಲ್ಲಿ ಸಕ್ರಿಯವಾಗಿದ್ದ. ಉರ್ದು ಮತ್ತು ಹಿಂದಿಯಲ್ಲಿ ಸುಲಲಿತವಾಗಿ ಬರೆಯುತ್ತಿದ್ದ ಸಾಹಿರ್ 1971ರಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತನೂ ಹೌದು. ತಾಜ್ ಮಹಲ್ ಸಿನಿಮಾದ “ ಜೋ ವಾದ ಕಿಯಾ ವೋ ನಿಭಾನ ಪಡೇಗಾ”(ಮಾತು ಕೊಟ್ಟವರು ನಡೆಸಿ ಕೊಡಲೇ ತಕ್ಕದ್ದು) ಹಾಡಿಗೆ 1964ರಲ್ಲೇ ಫಿಲಂ ಫೇರ್ ಪ್ರಶಸ್ತಿಯೂ ದಕ್ಕಿತ್ತು ಈತನಿಗೆ. ಅತ್ಯಂತ ಸಿರಿವಂತ ಜಮೀನ್ದಾರ ಕುಟುಂಬದಲ್ಲೇ ಹುಟ್ಟಿದರೂ ಸಾಹಿರ್ ನ ಸ್ವಾಭಿಮಾನಿ ಅಮ್ಮ ಸರ್ದಾರ್ ಬೇಗಮ್ ಪತಿಯಿಂದ ದೂರಾಗಿ, ಬಡತನದ ಕಷ್ಟದ ಜೀವನ ಸಾಗಿಸಬೇಕಾಗಿ ಬರುತ್ತದೆ. 1934ರಲ್ಲಿ ಮತ್ತೆ ಮದುವೆಯಾಗುವ ಧನಿಕ ಅಪ್ಪ ಮಗನನ್ನು ತನ್ನ ವಶಕ್ಕೆ ಕೊಡುವಂತೆ ಕಟ್ಲೆ ಹೂಡುತ್ತಾನೆ. ಹೀಗೆ ಬಾಲ್ಯದಲ್ಲೇ ಅಮ್ಮನ ಅಕ್ಕರೆ ಹಾಗೂ ಅಪ್ಪನ ವಿರುದ್ಧ ದ್ವೇಷವನ್ನೂ ಬೆಳೆಸಿಕೊಳ್ಳಬೇಕಾಗಿ ಬರುತ್ತದೆ ಸಾಹಿರ್‌ಗೆ.
ಲೂಧಿಯಾನದ ಸರ್ಕಾರಿ ಕಾಲೇಜಿನಲ್ಲಿ ಓದಿದ ಸಾಹಿರ್ ಅದಾಗಲೇ ತನ್ನ ಗಜಲ್ ಹಾಗೂ ನಜ್ಮ್ ಗಳಿಗೆ ಹಾಗೂ ಮನಮಿಡಿಯುವ ಭಾಷಣಗಳಿಗೆ ಪ್ರಖ್ಯಾತನಾಗಿರುತ್ತಾನೆ. 1943ರಲ್ಲಿ ಲಾಹೋರ್ ನಲ್ಲಿ ನೆಲೆಗೊಳ್ಳುವ ಸಾಹಿರ್ ಅಲ್ಲೇ ತನ್ನ ಮೊದಲ ಕವನ ಸಂಕಲ ತಲ್ಕಿಯಾನ್ ( ಕಹಿತನ) ಬರೆದು ಪೂರೈಸುತ್ತಾನೆ. ಭಾರತೀಯ ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎಐಎಸ್‌ಎಫ್ ಸದಸ್ಯನಾಗಿದ್ದ ಸಾಹಿರ್ ನಂತರ ಪ್ರಗತಿಪರ ಲೇಖಕರ ಸಂಘದ ಸದಸ್ಯನಾಗಿ ಅವತ್ತಿನ ಮಟ್ಟಿಗೆ ವಿವಾದಾತ್ಮಕ ಎನಿಸುತ್ತಿದ್ದ ಕಮ್ಯುನಿಸ್ಟ್ ವಿಚಾರ ಧಾರೆಯ ಭಾಷಣಗಳನ್ನು ಮಾಡುತ್ತಾನೆ. ಅವತ್ತಿನ ಪಾಕಿಸ್ತಾನಿ ಸರಕಾರ ಸಾಹಿರ್ ಬಂಧನ ವಾರಂಟ್ ಹೊರಡಿಸುತ್ತದೆ.
ಪಾಕಿಸ್ತಾನ ತನ್ನ ಸ್ವತಂತ್ರ ಮನೋಭಾವಕ್ಕೆ ತಕ್ಕ ನೆಲವಲ್ಲ ಎಂದು ಭಾವಿಸಿದ ಸಾಹಿರ್ ವಿಭಜನೆ ಬಳಿಕ ಲಾಹೋರ್‌ನಿಂದ ದಿಲ್ಲಿ ತಲುಪಿ ಬಿಡುತ್ತಾನೆ. ನಂತರ ಮುಂಬಯಿಯ ಅಂಧೇರಿಗೆ ಬಂದು, ಗೀತರಚನಾಕಾರರಾದ ಗುಲ್ಜಾರ್ ಹಾಗೂ ಕೃಶನ್ ಚಂದರ್‌ಗಳ ನೆರೆ ಸೇರಿ ಅಲ್ಲೇ ನೆಲೆಸಿಬಿಡುತ್ತಾನೆ. ಗಜಲ್ ಮತ್ತು ಪದ್ಯಗಳೇ ಈತನ ಜೀವವಾಗಿದ್ದರೂ ಆರ್ಥಿಕ ಭದ್ರತೆಗಾಗಿ ಸಿನಿಮಾ ಗೀತೆಗಳನ್ನು ರಚಿಸತೊಡಗಿ ಅಲ್ಲೂ ತನ್ನ ಗಟ್ಟಿ ನೆಲೆ ಕಂಡುಕೊಳ್ಳುತ್ತಾನೆ.ಈತನ ಹಿಂದಿ ಸಿನಿಮಾ ರಂಗದ ಇನ್ನಷ್ಟು ಭೌತಿಕ ವಿವರಗಳು ಇಲ್ಲಿ ಅಷ್ಟು ಅವಶ್ಯ ಅಲ್ಲ ಎನಿಸುತ್ತದೆ.
ಕಭೀ ಕಭೀ ಸಿನಿಮಾಕ್ಕೆ ಬಳಕೆಯಾದ ಇದೇ ಹೆಸರಿನ ಹಾಡನ್ನು ಸಾಹಿರ್ ಮೂಲ ಹಿಂದೂಸ್ತಾನಿ ಯಾನೆ ಉರ್ದು ಭಾಷೆಯಲ್ಲಿ ಬರೆದದ್ದು, ಆದರೆ ಸಿನಿಮಾಗಾಗಿ ಕೆಲವು ಪದಗಳನ್ನು ಬದಲಿಸಿಕೊಡುತ್ತಾನೆ.“ಕಭೀ ಕಭೀ ಮೇರಾ ದಿಲ್ ಮೇ ಖಯಾಲ್ ಆತಾ ಹೈ” ಎಂದರೆ “ ಆಗಾಗ ನನ್ನೆದೆಯೊಳಗೆ ಬಯಕೆಯೊಂದು ಮೂಡುತ್ತದೆ “ ಎಂದರ್ಥ, ಈ ಹಾಡಿನ ಅರ್ಥ ಹೇಳುವಾಗ ಬಳಕೆಯಾಗುವ ಕನ್ನಡದ ಪದಗಳು ಮೂಲ ಹಾಡಿನ ಧ್ವನಿಯನ್ನು ಹೊರಡಿಸಬೇಕು ಎಂದು ಅಪೇಕ್ಷೆ ಪಟ್ಟಲ್ಲಿ ನಮಗಿಂತ ಮೂರ್ಖರು ಮತ್ತೊಬ್ಬರಿರುವುದಿಲ್ಲ. ಪ್ರತಿ ಭಾಷೆಗೂ ತನ್ನದೇ ಆದ ಧ್ವನಿ ಮತ್ತು ಲಯವಿರುತ್ತದೆ. ಹಾಗಾಗಿ ಹಾಡುಗಳನ್ನು ಎಲ್ಲಿ ಹೇಗಿರುತ್ತವೋ ಹಾಗೇ ಕೇಳಿ ಒಳಕ್ಕೆ ಇಳಿಸಿಕೊಳ್ಳತಕ್ಕದ್ದು, ಭಾಷಾಂತರವೆಲ್ಲ ನಮ್ಮ ಘಮಂಡಿತನವನ್ನು ತಣಿಸಲು ಇರುವ ಸಂಗತಿಗಳು ಮಾತ್ರ.
ಇದೇ ಕಭೀ ಕಭೀ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿರುವ ಸಾಹಿರ್ ನ ಮತ್ತೊಂದು ಪದ್ಯ ಆತನ ಒಳ ದನಿಯನ್ನು ಹೇಗೆ ಬಿಂಬಿಸುತ್ತದೆ ನೋಡಿ:
“ ಮೈ ಪಲ್ ದೊ ಪಲ್ ಕಾ ಶಾಯರ್ ಹೂಂ, ಪಲ್ ದೋ ಪಲ್ ಮೇರಿ ಕಹಾನಿ ಹೈ”
ಈ ಪದ್ಯದ ಭಾವಾನುವಾದ ಹೀಗಿದೆ:
“ ನಾನು ಕೇವಲ ಒಂದು ಅಥವಾ ಎರಡು ಕ್ಷಣದ ಕವಿಯು,
ನನ್ನ ಕತೆಯೂ ಕೆಲ ಕ್ಷಣಗಳಲ್ಲೇ ಮುಗಿಯುವಂತಾದ್ದು,
ನನ್ನ ಅಸ್ತಿತ್ವವೂ ಕೇವಲ ಒಂದು ಅಥವಾ ಎರಡು ಕ್ಷಣದ್ದು
ನನ್ನ ಯೌವನವೂ ಅಷ್ಟೇ ಒಂದು ಅಥವಾ ಎರಡೇ ಕ್ಷಣದ್ದು,
ನಾನು ಕೇವಲ ಒಂದು ಅಥವಾ ಎರಡು ಕ್ಷಣದ ಕವಿಯು,
ನನಗೂ ಮುನ್ನ ಹಲವು ಕವಿಗಳು ಬಂದರು, ಬಂದ ಕವಿಗಳು ಹೋದರು ,
ಕೆಲವರು ನಿಟ್ಟುಸಿರು ತುಂಬಿ ಹೋದರು, ಮತ್ತೂ ಕೆಲವರು ಹಾಡುತ್ತಲೇ ಹೋದರು,
ಅವರೆಲ್ಲರ ಕತೆಯೂ ಕಾಲದ ಒಂದು ಕ್ಷಣದ ಭಾಗವಷ್ಟೇ
ನಾನೂ ಅಷ್ಟೇ ಒಂದು ಕ್ಷಣದ ಕತೆಯಷ್ಟೇ
ನಾಳೆ ನಾನು ನಿನ್ನಿಂದ ದೂರಾಗುತ್ತೇನೆ,
ನಾನು ಈ ದಿನ ನಿನ್ನೊಂದಿಗಿದ್ದೇನೆ,
ತಾಜಾ ಹೂಗಳನ್ನು ಮಾತ್ರವೇ ಆಯಬೇಕಲ್ಲವೇ,
ನಾಳೆ ಹೊಸ ಹಾಡುಗಳು ಬರುತ್ತವೆ ,
ನಾಳೆ ನನಗಿಂತ ಉತ್ತಮ ಕವಿಗಳು ಬರುತ್ತಾರೆ,
ಮತ್ತು ನಿನಗಿಂತ ಅತ್ಯುತ್ತಮ ಶ್ರೋತೃಗಳು ಬರುತ್ತಾರೆ
ನಾಳೆ ಕೆಲವರು ನನ್ನನ್ನು ನೆನಪಿಸಿಕೊಳ್ಳಬಹುದು,
ಆದರೆ ನನ್ನನ್ನು ಯಾರಾದರೂ ಯಾಕೆ ನೆನಪಿಸಿಕೊಳ್ಳಬೇಕು,
ಈ ಬಿಡುವಿರದ ಜಗದಲ್ಲಿ ನನ್ನನ್ನು ನೆನಪಿಸಿಕೊಂಡು
ಸಮಯವನ್ನೇಕೆ ವ್ಯರ್ಥ ಮಾಡಬೇಕು
ನಾನು ಒಂದು ಅಥವಾ ಎರಡು ಕ್ಷಣದ ಕವಿ ಮಾತ್ರ”
ಆದರೆ ಈ ಒಂದು ಅಥವಾ ಎರಡು ಕ್ಷಣದ ಕವಿಯು ಭಾರತೀಯ ಸಿನಿಮಾ ರಂಗದಲ್ಲಿ ಅಮರನಾಗಿ ಉಳಿದದ್ದೇನೂ ಸೋಜಿಗವೇನೂ ಅಲ್ಲ, ಸಾಹಿರ್ ನ ಪದ್ಯಗಳಲ್ಲಿ ಪದಗಳು ಜೀವ ತಳೆದು ಕೇಳುವವನ ಎದೆಯ ಕದವ ಮುರಿದು ಒಳ ನುಗ್ಗಿ ಶಾಶ್ವತವಾಗಿ ನೆಲೆಸಿ ಬಿಡುವಷ್ಟು ಶಕ್ತಿಶಾಲಿಯಾಗಿರುವುದೇ ಈತನ ಅಮರತ್ವಕ್ಕೆ ಕಾರಣ .
1980ರ ಅಕ್ಟೋಬರ್ 25ರಂದು ಕೇವಲ 59ನೇ ವರ್ಷದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾಹಿರ್ ಲೂಧಿಯಾನ್ವಿ ಅಸುನೀಗುತ್ತಾನೆ. ಆಗ ಮತ್ತೊಬ್ಬ ಪ್ರಸಿದ್ಧ ಗೀತ ರಚನಕಾರ ಕವಿ ಜಾವೇದ್ ಅಖ್ತರ್ ಎದುರಿಗೆ ಇರುತ್ತಾರೆ. ಜುಹು ಮುಸ್ಲಿಮ್ ಸ್ಮಶಾನದಲ್ಲಿ ಸಾಹಿರ್ ನ ಕಳೇಬರವನ್ನು ಸಮಾಧಿ ಮಾಡಲಾಗುತ್ತದೆ, 2010ರಲ್ಲಿ ಹೊಸ ಕಳೇಬರಕ್ಕೆ ಸ್ಥಳಾವಕಾಶ ಮಾಡಿಕೊಡುವ ಸಲುವಾಗಿ ಪ್ರಖ್ಯಾತ ಕವಿ, ಗೀತ ರಚನಕಾರ, ಪದ್ಮಶ್ರೀ ಸಾಹಿರ್ ಲೂಧಿಯಾನ್ವಿಯ ಸಮಾಧಿಯನ್ನು ಅಗೆದು ಹಾಕಲಾಗುತ್ತದೆ. ಆಗ ನನಗೆ ಮತ್ತು ನಿಮಗೆ ಸಾಹಿರ್ ಹೇಳುವ , “ ಮೈ ಪಲ್ ದೊ ಪಲ್ ಕಾ ಶಾಯರ್ ಹೂಂ, ಪಲ್ ದೋ ಪಲ್ ಮೇರಿ ಹಕಾನಿ ಹೈ” ನೆನಪಿಗೆ ಬರಲೇ ಬೇಕಲ್ಲವೇ..,
(ಸಾಹಿರ್ ಮತ್ತು ಅಮೃತಾ ಪ್ರೀತಮ್ ಬಾಂಧವ್ಯ ಕುರಿತು ಮತ್ತೊಂದು ದಿನ ಬರೆಯುತ್ತೇನೆ, ಕ್ಷಮೆಯಿರಲಿ).