“ ಉತ್ತಮ ಆಡಳಿತಕ್ಕಾಗಿ ನನ್ನನ್ನು ಗೆಲ್ಲಿಸಿ” ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಭ್ಯರ್ಥಿ ಕೆ.ಎಸ್.ಸಿದ್ಧಲಿಂಗಪ್ಪ ಮನವಿ
“ ಉತ್ತಮ ಆಡಳಿತಕ್ಕಾಗಿ ನನ್ನನ್ನು ಗೆಲ್ಲಿಸಿ”
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
ಅಧ್ಯಕ್ಷ ಅಭ್ಯರ್ಥಿ ಕೆ.ಎಸ್.ಸಿದ್ಧಲಿಂಗಪ್ಪ ಮನವಿ
ತುಮಕೂರು: ಇದೇ ನವೆಂಬರ್ 21ರಂದು ನಡೆಯಲಿರುವ ಚುನಾವಣೆಯಲ್ಲಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಚುನಾಯಿಸಬೇಕೆಂದು ಕಣದಲ್ಲಿರುವ ಆರು ಅಭ್ಯರ್ಥಿಗಳಲ್ಲಿ ಒಬ್ಬರಾದ ಗುಬ್ಬಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹಾಗೂ ವಿಶ್ರಾಂತ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹಾಗೂ ಪ್ರಾಚಾರ್ಯ ಕೆ.ಎಸ್.ಸಿದ್ಧಲಿಂಗಪ್ಪ ಕೋರಿದ್ದಾರೆ.
ಉಪನ್ಯಾಸಕ ಹಾಗೂ ಪ್ರಾಚಾರ್ಯರಾಗಿ ಕೆಎಸ್‍ಎಸ್ ಎಂದೇ ಪರಿಚಿತರಾಗಿರುವ ಸಿದ್ದಲಿಂಗಪ್ಪನವರು ಸೋಮವಾರ ನಗರದÀಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, “ ನಾನು ಮೂಲತಃ ಲೇಖಕನಲ್ಲದೇ ಹೋದರೂ, ಜಿಲ್ಲೆಯ ವಿವಿಧೆಡೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಕನ್ನಡ ಉಪನ್ಯಾಸಕನಾಗಿ, ಕನ್ನಡ ಓದಿ, ಓದಿಸುವ ಕೆಲಸದ ಜೊತೆಗೆ, ಬೋಧನೆ ಮಾಡಿಕೊಂಡು ಬಂದಿದ್ದು, ರಾಜ್ಯ ಸರಕಾರದ ಪದವಿ ಪೂರ್ವ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷನಾಗಿ, ಗುಬ್ಬಿ ತಾಲೂಕು ಕಸಾಪ ಅಧ್ಯಕ್ಷನಾಗಿ ಎರಡು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದಲ್ಲದೆ, ಈ ಹಿಂದೆ ತುಮಕೂರಿನಲ್ಲಿ ಆಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಯಾಗಿ ಅಂದಿನ ಅಧ್ಯಕ್ಷ ದಿವಂಗತ ಚಿ.ನಾ.ಏಕೇಶ್ವರ್ ಜೊತೆ ಕೆಲಸ ಮಾಡಿ ಕನ್ನಡ ನಾಡು ನುಡಿ ಏಳಿಗೆಗೆ ಆಸಕ್ತಿಯಿಂದ ಅತ್ಯುತ್ತಮ ಸಂಘಟಕನಾಗಿ ಶ್ರಮಿಸಿದ್ದೇನೆ ಎಂದರು.
“ ನನ್ನ ಮೇಲೆ ವಿಶ್ವಾಸವಿಟ್ಟು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದಲ್ಲಿ ಸಂಘದ ಅಸ್ತಿತ್ವದಲ್ಲಿರುವ ಬೈಲಾಗಳ ಪ್ರಕಾರವೇ ಪರಿಷತ್ತಿನ ಬೆಳವಣಿಗೆಗಾಗಿ ನನ್ನದೇ ಆದ ರೂಪರೇಷೆಗಳನ್ನು ಸಿದ್ದಪಡಿಸಿಕೊಂಡಿದ್ದು, ಪ್ರಜಾಸತ್ತಾತ್ಮಕವಾಗಿ, ಪಾರದರ್ಶಕವಾಗಿ ಆಡಳಿತ ನಡೆಸಿ ವ್ಯವಸ್ಥಿತವಾಗಿ ಪರಿಷತ್ತನ್ನು ಕಟ್ಟಿ ಬೆಳೆಸುತ್ತೇನೆ” ಎಂದರು.
“ ಚುನಾಯಿತರಾಗುವ ಅಧ್ಯಕ್ಷರು ಅವರ ಬೆಂಬಲಿಗರು ಹಾಗೂ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಿ ಪ್ರಚಾರ ಮಾಡಿದವರನ್ನು ಜಿಲ್ಲಾ ಹಾಗೂ ತಾಲೂಕು ಸಮಿತಿಗಳಿಗೆ ನಾಮಕರಣ ಮಾಡುತ್ತ ಬಂದಿದ್ದು ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದಲ್ಲಿ ಆಯಾ ತಾಲೂಕುಗಳ ಆಜೀವ ಸದಸ್ಯರ ಸಭೆ ಕರೆದು, ತಾಲೂಕು ಸಮಿತಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುವುದು. ಅಲ್ಲದೇ ಚುನಾವಣೆಗಳು ಬಂದಾಗ ಮಾತ್ರವೇ ಓಟು ಕೇಳಲು ಆಜೀವ ಸದಸ್ಯರನ್ನು ಭೇಟಿ ಮಾಡುವುದು ಸಾಮಾನ್ಯ, ಆದರೆ ನನ್ನನ್ನು ಆಯ್ಕೆ ಮಾಡಿದಲ್ಲಿ ವರ್ಷಕ್ಕೊಮ್ಮೆ ತಾಲೂಕು ಮಟ್ಟದ ಆಜೀವ ಸದಸ್ಯರ ಸಭೆ ಕರೆಯುವ ಉದ್ದೇಶವಿದೆ. ಜೊತೆಗೆ ಕನ್ನಡ ವಿದ್ಯಾರ್ಥಿಗಳು,ಉಪನ್ಯಾಸಕರನ್ನು ಜೋಡಿಸಿ ಪ್ರತಿ ಗ್ರಾಮದಲ್ಲಿ ಕನ್ನಡ ನಿತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವುದರೊಂದಿಗೆ ಹೋಬಳಿ,ತಾಲೂಕು ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದ್ದು, ಸಾಹಿತ್ಯಾಸಕ್ತರಿಗಾಗಿ ಕಮ್ಮಟಗಳನ್ನು ಏರ್ಪಡಿಸುತ್ತೇನೆ” ಎಂದರು.
ರಾಮನಗರದಲ್ಲಿರುವ ಜಾನಪದ ಲೋಕದಂತೆ ತುಮಕೂರು ಜಿಲ್ಲೆಯಲ್ಲಿ ಕನ್ನಡ ಕಲಾ ಗ್ರಾಮವನ್ನು ಸರ್ಕಾರದ ನೆರವಿನೊಂದಿಗೆ ಸ್ಥಾಪಿಸುವ ಮೂಲಕ ಜಿಲ್ಲೆಯ ಸಾಹಿತಿಗಳು, ಚಿತ್ರ ನಟರನ್ನು ನೆನಪಿಸುವಂತಹ ಕಾರ್ಯ ಚಟುವಟಿಕೆಯ ಯೋಜನೆ ರೂಪಿಸಲಾಗುವುದು ಎಂದು ಕೆ.ಎಸ್.ಸಿದ್ದಲಿಂಗಪ್ಪ ಹೇಳಿದರು.
ರಾಜ್ಯ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ಯಾರನ್ನೂ ತಾವು ಬೆಂಬಲಿಸುತ್ತಿಲ್ಲ ಎಂದ ಅವರು, ಜಿಲ್ಲಾ ಅಧ್ಯಕ್ಷ ಚುನಾವಣೆಯಲ್ಲಿ ಕಣದಲ್ಲಿರುವ ಇತರ ಐವರೂ ನನಗೆ ಸಮಾನ ಸ್ಪರ್ಧಿಗಳು” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಸ್ಪಷ್ಟಪಡಿಸಿದರು.
ಹಾಜರಿದ್ದ ಬೆಂಬಲಿಗರು
ಕೆ.ಎಸ್.ಸಿದ್ದಲಿಂಗಪ್ಪ ಬೆಂಬಲಿಗರಾದ ರೇವಣಸಿದ್ದಪ್ಪ, ಬ್ಯಾಡನೂರು ನಾಗಭೂಷಣ್, ಡಾ.ಎಸ್.ಪಿ. ಪದ್ಮಪ್ರಸಾದ್, ವಿಶ್ರಾಂತ ಪ್ರಾಚಾರ್ಯ ಮರಿಬಸಪ್ಪ, ಡಾ.ಡಿ.ಎನ್.ಯೋಗೀಶ್ವರಪ್ಪ, ಬೆಳ್ಳಾವಿ ಶಿವಕುಮಾರ್, ಹೊಸಕೆರೆ ರಿಜ್ವಾನ್ ಪಾಷ, ನಿವೃತ್ತ ಡಿಡಿಪಿಐ ಹೆಚ್.ಕೆ. ನರಸಿಂಹಮೂರ್ತಿ, ಸಣ್ಣಹೊನ್ನಯ್ಯ ಕಂಟಲಗೆರೆ, ವಿಶ್ರಾಂತ ಪ್ರಾಚಾರ್ಯ ಎಂ.ಎಚ್.ನಾಗರಾಜು, ಶಿವರುದ್ರಯ್ಯ, ಬಾಣಸಂದ್ರ ರಂಗಪ್ಪ, ಶಂಕರಾನಂದ
ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿ ಮಾಡಿ ಮೂರು ವರ್ಷಗಳಿದ್ದ ಅಧ್ಯಕ್ಷರ ಅಧಿಕಾರಾವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸಿರುವುದಕ್ಕೇ ನನ್ನ ವಿರೋಧವಿದೆ. ಈ ತಿದ್ದುಪಡಿಯಿಂದ ಹಲವಾರು ಲೋಪ ದೋಷಗಳು ಉಂಟಾಗಿದ್ದು, ಇವುಗಳನ್ನು ಮೂಲ ಬೈಲಾಕ್ಕೆ ತಕ್ಕಂತೆ ಪರಿಷ್ಕರಿಸುವ ಅಗತ್ಯವಿದೆ.
ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಉಳಿದ ದೊಡ್ಡ ಮೊತ್ತದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯನವರ ಷರತ್ತಿನಂತೆ ಅಂದಿನ ಅಧ್ಯಕ್ಷ ದಿವಂಗತ ಚಿ.ನಾ.ಏಕೇಶ್ವರ್ ಅವರು ಕನ್ನಡ ಭವನಕ್ಕೆ ನಗರದಲ್ಲಿ ನಿವೇಶನ ಖರೀದಿಸಿದ್ದು, ನಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು ಹಂತ ಹಂತವಾಗಿ ಕನ್ನಡ ಭವನ ನಿರ್ಮಾಣದಲ್ಲಿ ಯಶಸ್ವಿಯಾಗಿದ್ದಾರೆ. ಕಟ್ಟಡ ಪೂರ್ಣಗೊಂಡಿದ್ದರೂ ಕೆಲ ಓರೆಕೋರೆಗಳಿವೆ, ನೆಲ ಮಹಡಿಯಲ್ಲಿ ನೀರು ನಿಲ್ಲುತ್ತಿದೆ. ಸಭಾಂಗಣದಲ್ಲಿ ಆಸನಗಳ ಸಾಲುಗಳ ನಡುವಿನ ಅಂತರ ಕಡಿಮೆ ಇದೆ. ಇಂಥ ಲೋಪಗಳನ್ನು ಸರಿಪಡಿಸಲು ಶ್ರಮಿಸುತ್ತೇನೆ ಎಂದರು ಕೆ.ಎಸ್.ಸಿದ್ಧಲಿಂಗಪ್ಪ.