ವರ್ತಮಾನ- ಕೇಶವಮಳಗಿ

“ಕುಲಮತದಲ್ಲಿ ಭಕ್ತಿಯು ಮುಕ್ತಿಯ ದಾರಿಯಾಗಿರಬಹುದು.‌ ಆದರೆ, ರಾಜಕಾರಣದಲ್ಲಿ ಭಕ್ತಿ ಇಲ್ಲವೇ ನಾಯಕ ಆರಾಧನೆಯು ಅವನತಿಯ ದಾರಿಯ ಲಕ್ಷಣವಾಗಿದ್ದು, ಕೊನೆಗೊಮ್ಮೆ ಸರ್ವಾಧಿಕಾರಕ್ಕೆ ಅನುವು ಮಾಡಿಕೊಡುತ್ತದೆ”

ವರ್ತಮಾನ- ಕೇಶವಮಳಗಿ

 

"ಇನ್ನು ಏನಾದರೂ ತಪ್ಪುಗಳಾದರೆ

ದೂರಲು ನಮಗೆ ಯಾರೂ ಇರುವುದಿಲ್ಲ,

ನಮ್ಮ ಹೊರತಾಗಿ”:ಅಂಬೇಡ್ಕರ್

". . . ಏನೇ ಇರಲಿ, ಸಂವಿಧಾನವೊಂದು ಎಷ್ಟೇ ಉತ್ತಮವಾಗಿದ್ದರೂ, ಅದನ್ನು ಅನುಷ್ಠಾನಗೊಳಿಸುವವರು ದುರುಳರ ಗುಂಪಿಗೆ ಸೇರಿದವರಾಗಿದ್ದರೆ ಸಂವಿಧಾನವು ದಾರುಣವಾಗಿಯೇ ಅಂತ್ಯವಾಗುವುದು. ಅಂತೆಯೇ, ಕಳಪೆ ಸಂವಿಧಾನವೊಂದರ ಅನುಷ್ಠಾನಕ್ಕೆ ಸದಾಶಯವುಳ್ಳ ಜನ ಕೆಲಸ ಮಾಡಿದಾಗ ಅದೊಂದು ಒಳ್ಳೆಯ ಸಂವಿಧಾನವಾಗಿ ಬದಲಾಗಬಹುದು.

ಸಂವಿಧಾನವು ಕೇವಲ ರಾಜ್ಯಾಡಳಿತಕ್ಕೆ ಅಗತ್ಯವಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಮಾತ್ರ ಒದಗಿಸಬಲ್ಲುದು. ರಾಜ್ಯಾಂಗದ ಈ ಅವಯವಗಳ ಕ್ಷಮತೆಯು ಅದರೊಂದಿಗೆ ಕೆಲಸ ಮಾಡುವ ಜನರನ್ನು ಅವಲಂಬಿಸಿದೆ. ತಮ್ಮ ಆಶಯ ಹಾಗೂ ರಾಜಕೀಯ ನಂಬಿಕೆಯನ್ನು ಸಾಕಾರಗೊಳಿಸುವ ರಾಜಕೀಯ ಪಕ್ಷಗಳನ್ನು ಅವಲಂಬಿಸಿದೆ.

(ಈ ಹಿನ್ನೆಲೆಯಲ್ಲಿ) ಇತಿಹಾಸವು ಮರುಕಳಿಸುವುದೇ? ಈ ವಿಚಾರವೇ ನನ್ನನ್ನು ವ್ಯಾಕುಲತೆಗೆ ನೂಕುತ್ತದೆ. ನಮ್ಮ ಹಳೆಯ ವೈರಿಗಳಾದ ಜಾತಿ ಮತ್ತು ಪಂಥಗಳ ಜತೆಜತೆಗೆ, ವೈವಿಧ್ಯಮಯವಾದ, ವ್ಯತಿರಿಕ್ತ ಹಿತಾಸಕ್ತಿಯಿರುವ ರಾಜಕೀಯ ಪಕ್ಷಗಳನ್ನು ಹೊಂದಿದ್ದೇವೆ, ಎನ್ನುವುದು ನನ್ನ ಕ್ಷೋಭೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ನನಗಂತೂ ತಿಳಿಯದು. ಆದರೆ, ಈ ರಾಜಕೀಯ ಪಕ್ಷಗಳು ತಮ್ಮ ಮತ ಸಿದ್ಧಾಂತವನ್ನು ದೇಶಕ್ಕಿಂತ ಹಿರಿದೆಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯವು ಕ್ಷಣಮಾತ್ರದಲ್ಲಿ ಗಂಡಾಂತರಕ್ಕೆ ಸಿಲುಕ ಬಲ್ಲುದು ಹಾಗೂ ಎಲ್ಲ ಕಾಲಕ್ಕೂ ಕಣ್ಮರೆಯಾಗುವುದು, ಎಂಬುದಂತೂ ಖಚಿತ. ನಾವಿದನ್ನು ದೃಢ ಸಂಕಲ್ಪದಿಂದ ಎದುರಿಸಲೇಬೇಕು. ನಮ್ಮ ನೆತ್ತರಿನ ಕೊನೆಯ ಹನಿ ಇರುವವರೆಗೂ ನಮ್ಮ ಸ್ವಾತಂತ್ರ್ಯವನ್ನು ನಾವು ಕಾಪಾಡಿಕೊಳ್ಳಲೇಬೇಕು.

ಹಾಗಿದ್ದರೆ, ಪ್ರಜಾಸತ್ತೆಯನ್ನು ಕೇವಲ ರೂಪದಲ್ಲಿಯಲ್ಲದೆ, ಸಾಕಾರವಾಗಿ ಕಾಣಲು ನಾವೇನು ಮಾಡಬೇಕು? ನನ್ನ ದೃಷ್ಟಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಗುರಿಯನ್ನು ತಲುಪಲು ಸಾಂವಿಧಾನಿಕ ವಿಧಿವಿಧಾನಗಳನ್ನು ಅನುಸರಿಸಬೇಕು. ಅಸಂವಿಧಾನಿಕ ಅನುಸರಣೆಗೆ ಬೇಕಾದಷ್ಟು ಸಮರ್ಥನೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ, ಎಲ್ಲಿ ಸಾಂವಿಧಾನಿಕ ಪ್ರಕ್ರಿಯೆಗಳಿಗೆ ಅವಕಾಶವಿರುತ್ತದೋ, ಅಂಥಲ್ಲಿ ಅಸಂವಿಧಾನಿಕ ಕ್ರಿಯೆಗಳಿಗೆ ಸಮರ್ಥನೆ ಇರಕೂಡದು. ಈ ಬಗೆಯ ವಿಧಾನಗಳು ಅರಾಜಕತೆಯನು ಕಲಿಸುವ ವ್ಯಾಕರಣಪಾಠವಾಗಿದ್ದು, ಆದಷ್ಟು ಬೇಗ ಅವುಗಳಿಂದ ಹೊರಬಂದರೆ ನಮಗೆ ಒಳಿತು.

ದೇಶದ ಏಳಿಗೆಗಾಗಿ ಜೀವ ಮುಡಿಪಾಗಿಟ್ಟ ಮಹಾನ್ ವ್ಯಕ್ತಿಗಳ ಕುರಿತು ಕೃತಜ್ಞತೆ ತೋರುವುದು ಏನೂ ತಪ್ಪಲ್ಲ. ಆದರೆ, ಅದಕ್ಕೊಂದು ಮಿತಿಯಿದೆ. "ಯಾವ ವ್ಯಕ್ತಿಯೂ ತನ್ನ ಘನತೆಯನ್ನು ಮೀರಿ, ಯಾವ ಮಹಿಳೆಯು ತನ್ನ ಪಾವಿತ್ರ್ಯತೆಯನ್ನು ಮೀರಿ, ಯಾವುದೇ ದೇಶವು ತನ್ನ ಸ್ವಾತಂತ್ರ್ಯವನ್ನು ಮೀರಿ ಯಾರಿಗೂ ಉಪಕೃತತೆಯನ್ನು ತೋರುವ ಅಗತ್ಯವಿಲ್ಲ " ಎಂದು ಮಹಾನ್ ಐರಿಶ್ ದೇಶಪ್ರೇಮಿ ಡೇನಿಯಲ್ ಓ'ಕಾನೆಲ್‌ ಹೇಳುತ್ತಾರೆ.

ಬೇರೆಲ್ಲಿಗಿಂತ ಭಾರತದಲ್ಲಿ ಈ ವಿಷಯ ಹೆಚ್ಚು ಪ್ರಸ್ತುತವಾಗಿದೆ. ಭಾರತದಲ್ಲಿ ಭಕ್ತಿ, ಅಥವ ಆರಾಧನಾ ಭಾವ, ಇಲ್ಲವೇ ನಾಯಕ ವಿಭೂತಿ ಪೂಜೆ ರಾಜಕಾರಣದಲ್ಲಿ ಬೇರಾವುದೇ ದೇಶಕ್ಕಿಂತ ಸರಿಗಟ್ಟದ ರೀತಿಯಲ್ಲಿ ಅತಿಯಾಗಿದೆ. ಕುಲಮತದಲ್ಲಿ ಭಕ್ತಿಯು ಮುಕ್ತಿಯ ದಾರಿಯಾಗಿರಬಹುದು.‌ ಆದರೆ, ರಾಜಕಾರಣದಲ್ಲಿ ಭಕ್ತಿ ಇಲ್ಲವೇ ನಾಯಕ ಆರಾಧನೆಯು ಅವನತಿಯ ದಾರಿಯ ಲಕ್ಷಣವಾಗಿದ್ದು, ಕೊನೆಗೊಮ್ಮೆ ಸರ್ವಾಧಿಕಾರಕ್ಕೆ ಅನುವು ಮಾಡಿಕೊಡುತ್ತದೆ.

ಸಾಮಾಜಿಕ ಪ್ರಜಾಸತ್ತೆಯ ತಳಹದಿಯಿಲ್ಲದೆ ರಾಜಕೀಯ ಪ್ರಜಾಸತ್ತೆಯ ಆಶಯ ಕೈಗೂಡದು. ಹಾಗಿದ್ದರೆ ಸಾಮಾಜಿಕ ಪ್ರಜಾಸತ್ತೆಯೆಂದರೇನು? ಇದೊಂದು ಜೀವನ ವಿಧಾನವಾಗಿದೆ. ಮತ್ತು ಈ ಜೀವನ ವಿಧಾನವು ಸ್ವಾತಂತ್ರ್ಯ, ಸೋದರತೆ ಹಾಗೂ ಸಮಾನತೆಯನ್ನು ಮೂಲ ಆಶಯವಾಗಿ ಪರಿಗಣಿಸುತ್ತದೆ.

ಸಮಾನತೆಯಿಲ್ಲದ ಸ್ವಾತಂತ್ರ್ಯವು ಕೆಲವೇ ಜನರ ಅಧಿಕಾರವು ಉಳಿದವರ ಮೇಲೆ ಹೇರಬಲ್ಲುದು. 

ಸೋದರತೆ, ಸ್ವಾತಂತ್ರ್ಯ ಇಲ್ಲದೆಡೆ ಸಮಾನತೆಯು ಒಂದು ಸಹಜ ಸಂಗತಿಯಾಗಲಾರದು.

ಸ್ವಾತಂತ್ರ್ಯವು ನಮ್ಮ ಮೇಲೆ ಅಪಾರವಾದ ಹೊಣೆಗಾರಿಕೆಯನ್ನು ಹೊರೆಸಿದೆ ಎಂಬುದನ್ನು ಮರೆಯದಿರೋಣ. ನಮಗೀಗ ಸ್ವಾತಂತ್ರ್ಯ ದೊರಕಿರುವುದರಿಂದ ಎಲ್ಲ ತಪ್ಪುಗಳಿಗೂ ಬ್ರಿಟಿಷರನ್ನು ದೂರುವಂತಿಲ್ಲ. ಇನ್ನುಮೇಲೆ ಏನೇ ತಪ್ಪಾದರೂ ನಮಗೆ ದೂರಲು ಯಾರೂ ಇರುವುದಿಲ್ಲ, ನಮ್ಮ ಹೊರತಾಗಿ."

(ಸಂವಿಧಾನದ ರಚನಾ ಸಮಿತಿಯಲ್ಲಿ, ನವೆಂಬರ್ 25, 1949ರಂದು ಡಾ. ಬಿ.ಆರ್.ಅಂಬೇಡ್ಕರ್ ಅವರು ಮಾಡಿದ ಕೊನೆಯ ಭಾಷಣದ ಕೆಲವು ಸಾಲುಗಳು.)