ಮಾಗಿ ಕಾಲದ ಮೊದಲ ಪದ್ಯಗಳು
ಡಾ.ವೆಂಕಟೇಶ್ ನೆಲ್ಲುಕುಂಟೆ
ಪದ್ಯ
೧.
ಮೊನ್ನೆ ಕಾರ್ತೀಕದ ಕಡೆಯ ದಿನ
ದುಷ್ಟ ಜ್ಯೋತಿಷಿ
ನಾಡಿನೆದೆ ತುಂಬ
ಅಮಾವಾಸ್ಯೆ ಭೀತಿ ಹುಟ್ಟಿಸಿದ
ಎದೆ ತುಂಬ ಬೆವರು
ಹೂವು ತಳ್ಳುವ ಕನಸು ಮುಡಿದ
ಮಾವು
ಬೂದಿ ಬಳಕೊಂಡು ಬತ್ತಲೆ ನಿಂತಿವೆ.
ಭಯದ ಬಾಂಡಲಿಯೊಳಗೆ
ಬೆಂದು ಬೆದಗುವ ಕಜ್ಜಾಯ
ಹಬ್ಬದ ನೆನಪು.
ಹೊಸದೇವರುತ್ಸವಕೆ ಒಕ್ಕಲಿಗ ತಂದ ಭತ್ತ
ಸೊನೆ ಮುರಿದ ಕುಂಬಳ
ಬಿಚ್ಚಿದರೆ ಒಡಲಲ್ಲಿ ಅರಿಶಿನ ರಕ್ತ
ಮಾರಿದವನ ಮನಸೇಕೆ ಇಷ್ಟು ಮಲಿನ
ನೆಯ್ದವನ ನೋವು ಸೀರೆ ಮೇಲಿನ ಕರೆ
ಕಂಬನಿಯದೊ ನೆತ್ತರದೊ
ಅರ್ಥವಾಗುವುದೆಂದು?
ದೇವರ ಬಯಸಿ ಬಯಸಿ
ದೆವ್ವಗಳ ಹೆರುತ್ತಿದೆ ನಾಡು
ಸ್ಮಶಾನಕ್ಕೆ ಮಾತ್ರ ಕೊಬ್ಬುವ ಕನಸು ಬೀಳುತ್ತಿವೆ.
ಮಿಠಾಯಿ ಅಂಗಡಿ ಸಕ್ಕರೆ ತಿಂದು
ಜೇನು ಕಟ್ಟುತ್ತವೆ ಗೂಡು
ಹೆಣದ ಕೊರಳಿಗೆ ತಂದ
ಮಲ್ಲಿಗೆ
ಮಕಮಲ್ಲು ಗುಲಾಬಿ
ಸುಗಂಧರಾಜದ ಮೇಳದ ಮೂತಿಯೊಳಗೂ
ಮಕರಂದ ಹುಡುಕುತ್ತವೆ.
ಹಳೆ ಸಂತೆ ತುಂಬೆಲ್ಲ ಇಂಥದೇ ಮೆರವಣಿಗೆ
ಆಹಾ, ಪಟ್ಟಣದ ಜೇನಿಗೆಷ್ಟೊಂದು ಮಾಧುರ್ಯ!
ಹೊಕ್ಕುಳಿಗೆ ಕಬ್ಬಿಣದ ಕಠಾರಿ ನೆಟ್ಟು ನಡೆವ
ಹಳ್ಳಿ ಹುಡುಗಿ ಹಾಡುತ್ತಾಳೆ.
ಸೃಷ್ಟಿ ಸೋರುತ್ತಿದೆ ಹುಡುಗ ಹುಡುಗಿಯರ ಊರು ಮಧ್ಯೆ
ರಥ ಬೀದಿ ಡಾಕ್ಟರಮ್ಮನ ಅಂಗಡಿ ತುಂಬ
ನೊಣ ಮುತ್ತಿದ ಭ್ರೂಣ
ಎಷ್ಟು
ಅಮೃತ ಧಾರೆಗಳ ಕೊಂದ ಪಾಪ
ಕರೆನ್ಸಿಗಂಟಿದೆ
ದೇವರೆ?
೨.
ನರಿಯ ನಗುವೇಕೆ ಇಷ್ಟು ಸಾಚಾ ಆಗಿದೆ?
ಗಿಳಿ ಗೊರವಂಕ ನವಿಲುಗಳೇಕೆ
ಬೆಂಕಿಯುಂಡೆಗೆ ಕಾವು ಕೊಡುತ್ತಿವೆ
ಹುಟ್ಟುವ ಮರಿಗಳ ಉಗುರುಗಳಿಗೇಕೆ ಕಠಾರಿ ಹರಿತ
ಯಾವ ಊರಿನೆದೆ ಗುಲಾಬಿ ಕಣ್ಣು ಕುಕ್ಕುತ್ತಿದೆ.
ದ್ವೇಷದ ಋತು ಮರಳಿ ಬಂದಿದೆ
ಭೀತಿಗಾರನ ನೀತಿ ಉಕ್ಕುಕ್ಕಿ ಹಾರುತ್ತಿದೆ
ಹಣೆ ಹಿಂಡಿ ನುಡಿದ ಅಜ್ಜ.
ನೂರು ತುಂಬಿದ
ಹನುಮಕ್ಕಜ್ಜಿ
ಶಿವನ ಗುಡಿ ತೊಳೆದು
ಲೋಕಕ್ಕೆ ಒಳ್ಳೇದು ಮಾಡಯ್ಯ ತಂದೆ
ಗಂಗಾಳಕ್ಕೆ ಕರುಣೆ ಪಾಯಸ ನೀಡು
ಎಂದಂದ
ಮಾತು
ಮೊಮ್ಮಗನ ಎದೆಗಿಳಿದ ದಿನ
ಹೊಸ ದೇವರ ಉತ್ಸವ
ನನ್ನ ನಾಡಿನಲ್ಲಿ.
**************