ಆರೋಗ್ಯ ರಕ್ಷಣೆಗೆ ಕೇಂದ್ರದ ಹಲವು ಯೋಜನೆ: ಬಿ.ಸಿ. ನಾಗೇಶ್

bc nagesh

ಆರೋಗ್ಯ ರಕ್ಷಣೆಗೆ ಕೇಂದ್ರದ ಹಲವು ಯೋಜನೆ: ಬಿ.ಸಿ. ನಾಗೇಶ್

ಆರೋಗ್ಯ ರಕ್ಷಣೆಗೆ ಕೇಂದ್ರದ ಹಲವು ಯೋಜನೆ: ಬಿ.ಸಿ. ನಾಗೇಶ್


ತಿಪಟೂರು : ಬಡವರಿಗೆ ಉತ್ತಮ ಆರೋಗ್ಯ ಸೌಲಭ್ಯ ದೊರಕಿಸಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಇದರಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಪ್ರಮುಖವಾದುದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ನಗರದ ಸತ್ಯಗಣಪತಿ ಸಭಾ ಮಂಟಪದಲ್ಲಿ ಭಾನುವಾರ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೇವಾ ಮತ್ತು ಸಮರ್ಪಣ ಅಭಿಯಾನ ಹಾಗೂ ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಡವರಿಗೆ ಅನುಕೂಲವಾಗಲಿ ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಕೊರೊನಾ ಮಹಾಮಾರಿ ಬಾರದಂತೆ ತಡೆಯಲು ಕೋವಿಡ್ ಲಸಿಕೆಯನ್ನು ದೇಶದ ೧೩೦ ಕೋಟಿ ಜನರಿಗೆ ಕೇಂದ್ರ ಸರ್ಕಾರವು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.
ಮನುಷ್ಯನಲ್ಲಿ ಆರೋಗ್ಯ ಚೆನ್ನಾಗಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಸದಾ ಜಾಗೃತಿ ಹಾಗೂ ಕಾಳಜಿ ಹೊಂದುವುದು ಅತಿಮುಖ್ಯ ಎಂದು ಸಚಿವ ನಾಗೇಶ್ ತಿಳಿಸಿದರು. 
ಭಾರತೀಯ ಜನತಾ ಪಾರ್ಟಿ ವಿಶೇಷ ಸಂಘಟನೆ ಮೂಲಕ ಅಧಿಕಾರಕ್ಕೆ ಬಂದಿದೆ ದೇಶಕ್ಕೆ ಸ್ವಾತಂತ್ರ‍್ಯ ಸಿಗಲು ಅನೇಕರ ಬಲಿದಾನ ಕೂಡ ಕಾರಣವಾಗಿದೆ. ಭಾರತ ದೇಶವು ವೈಜ್ಞಾನಿಕ ಕ್ಷೇತ್ರದಲ್ಲಿ ಸಾಕಷ್ಟು ಉನ್ನತಿ ಹೊಂದಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ರಾಮೀಣ ಭಾಗಕ್ಕೆ ಅನೇಕ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿದ್ದ ಗ್ರಾಮೀಣ ಪ್ರದೇಶ ಅಭಿವೃದ್ಧಿ ಕಾರ್ಯವನ್ನು ಮೋದಿ ಸರ್ಕಾರ ಮಾಡುತ್ತಿದೆ. ಪ್ರಧಾನಿ ಮೋದಿಯವರು ವಿಶ್ರಾಂತಿ ಪಡೆಯದೇ ಕಾರ್ಯನಿರ್ವಹಿಸುತ್ತಿದ್ದು ವಿಶ್ವದ ನಾಯಕರಾಗಿದ್ದಾರೆ. ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದರು. 
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ನಗರಸಭೆ ಅಧ್ಯಕ್ಷ ಪಿ.ಜೆ. ರಾಮಮೋಹನ್, ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಮಮತಾ ಯೋಗೀಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಸಲೆಹಳ್ಳಿ ಜಗದೀಶ್, ಬಿಜೆಪಿ ಪಕ್ಷದ ನಗರ ಘಟಕದ ಅಧ್ಯಕ್ಷ ಗುಲಾಬಿ ಸುರೇಶ್, ತಾಲ್ಲೂಕು ಘಟಕ ಅಧ್ಯಕ್ಷ ಬಳ್ಳೆಕಟ್ಟೆ ಸುರೇಶ್, ಶಂಕರಪ್ಪ, ಶ್ರೀದೇವಿ ಆಸ್ಪತ್ರೆಯ ವೈದ್ಯ ಡಾ. ದೀಪಕ್, ನಗರಸಭಾ ಸದಸ್ಯರಾದ ಪ್ರಸನ್ನ, ಡಾ. ಓಹಿಲಾ ಗಂಗಾಧರ್, ಪದ್ಮ ತಿಮ್ಮೇಗೌಡ, ಅಶ್ವಿನಿ ದೇವರಾಜ್, ಜಯಲಕ್ಷ್ಮಿ, ಸಂಧ್ಯಾ ಕಿರಣ್, ಪದ್ಮ ಶಿವಪ್ಪ ಮತ್ತಿತರರು ಇದ್ದರು.