ಕಾಂಗ್ರೆಸ್‌ ನವರಿಂದ ಅವಮಾನ: ದೇವೇಗೌಡರು

ದೇವೇಗೌಡರಿಗೆ ಅವಮಾನ

ಕಾಂಗ್ರೆಸ್‌ ನವರಿಂದ ಅವಮಾನ: ದೇವೇಗೌಡರು

ಕಾಂಗ್ರೆಸ್‌ ನವರಿಂದ ಅವಮಾನ: ದೇವೇಗೌಡರು


ತುರುವೇಕೆರೆ: ``ಈ ಗೌಡ ಅವರಿಗೇನು ಅನ್ಯಾಯ ಮಾಡಿದ್ದ? ನಾನೇನು ಪ್ರಧಾನ ಮಂತ್ರಿ ಆಗಬೇಕು ಅಂತ ಕೇಳಿದ್ನಾ? ಇಲ್ಲ. ಹೋಗಲಿ ನನ್ನ ಮಗ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿ ಅಂತ ಕೇಳಿದ್ನಾ? ಇಲ್ಲಾ. ಎಲ್ಲಾ ಕಾಂಗ್ರೆಸ್‌ನವರೇ ನನಗೆ ಮೋಸ ಮಾಡಿ ,ದ್ರೋಹ ಮಾಡಿ ಅವಮಾನ ಮಾಡಿದರು. ಇದು ನನ್ನ ಮನಸ್ಸನ್ನು ತುಂಬಾ ಘಾಸಿಗೊಳಿಸಿದೆ’’


ಇದು.. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅಂತರಾಳದ ಮಾತು.
ಪಟ್ಟಣದ ಚೌದ್ರಿ ಕನ್ವೆಂಷನ್ ಹಾಲ್‌ನಲ್ಲಿ ತಾಲೂಕು ಜೆಡಿಎಸ್ ವತಿಯಿಂದ ನಡೆದ ವಿಧಾನ ಪರಿಷತ್ ಸದಸ್ಯ ಸ್ಥಾನದ ಪರವಾಗಿ ನಡೆದ ಚುನಾವಣಾ ಪ್ರಚಾರದಲ್ಲಿ ದೇವೇಗೌಡರು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕೋಪಗೊಂಡು ಮಾತನಾಡಿದ ಪರಿ ಇದು.


ನಾನು ಪ್ರಧಾನ ಮಂತ್ರಿ ಆಗಬೇಕೆಂದು ಅಪೇಕ್ಷಿದವನೂ ಅಲ್ಲ. ನನ್ನ ಮಗ ಮುಖ್ಯಮಂತ್ರಿ ಮಾಡಿ ಅಂತ ಕೇಳಿದವನೂ ಅಲ್ಲ. ಎಲ್ಲವೂ ಕಾಂಗ್ರೆಸ್ ಮುಖಂಡರ ತಂತ್ರಗಾರಿಕೆ ಅದು ಅಷ್ಟೆ. ಕುರ್ಚಿಯಲ್ಲಿ ಕೂರಿಸಿದವರೂ ಅವರೇ, ನಮ್ಮನ್ನು ಅವಮಾನಿಸಿ ಕೆಳಗಿಸಿದವರೂ ಅವರೇ ಎಂದು ಬೇಸರ ವ್ಯಕ್ತಪಡಿಸಿದರು.


ಈ ದೇವೇಗೌಡ ಇನ್ನೂ ಬದುಕಿದ್ದಾನೆ. ಜೆಡಿಎಸ್ ಎಲ್ಲಿದೆ. ಜೆಡಿಎಸ್ ಕಥೆ ಮುಗಿದೇ ಹೋಯಿತು ಎಂದು ಅಬ್ಬರಿಸುತ್ತಿರುವವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ಇದು ಮುಂಬರುವ ಚುನಾವಣಾ ದಿಕ್ಸೂಚಿ ಎಂಬುದನ್ನು ಕಾರ್ಯಕರ್ತರು ಮರೆಯಬಾರದು. ನಮ್ಮಿಂದ ರಾಜಕೀಯ ಜೀವನ ಆರಂಭಿಸಿದ ಈಗಿನ ಕೆಲವು ಕಾಂಗ್ರೆಸ್ ಮುಖಂಡರು ಜೆಡಿಎಸ್‌ನ್ನು ಮುಗಿಸಿಬಿಡ್ತೀವಿ ಅಂತ ಹೇಳುತ್ತಿದ್ದಾರೆ. ಮುಗಿಸೋದು, ಏಳಿಸೋದು ಎಲ್ಲಾ ಜೆಡಿಎಸ್ ಕಾರ್ಯಕರ್ತರಲ್ಲಿ ಇದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.


ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಮಾತನಾಡಿ ತಾತನವರನ್ನು (ದೇವೇಗೌಡರು) ಸೋಲಿಸಿದೆ ಎಂದು ಎದೆಯುಬ್ಬಿಸಿ ಹೇಳಿದ್ದ ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಮತ್ತು ಅವರ ಮಕ್ಕಳು ಇಂದು ಮಂಡಿಯೂರುವ ಪರಿಸ್ಥಿತಿ ಇದೆ. ಅಂದು ದೇವೇಗೌಡರ ವ್ಯಕ್ತಿತ್ವಕ್ಕೂ ಬೆಲೆ ನೀಡದ ಆ ಮನುಷ್ಯರು ಇಂದು ನಮ್ಮ ಪಕ್ಷದ ಅಭ್ಯರ್ಥಿ ಅನಿಲ್‌ಕುಮಾರ್‌ರವರ ಎದುರು ತೆಪ್ಪಗಾಗಿದ್ದಾರೆ ಎಂದು ಲೇವಡಿ ಮಾಡಿದರು.


ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ ಈ ಚುನಾವಣೆಯಲ್ಲಿ ಜೆಡಿಎಸ್‌ನ ಶಕ್ತಿ ಏನೆಂಬುದನ್ನು ತೋರಿಸಬೇಕು. ಅಲ್ಲದೇ ನಮ್ಮ ದೇವೇಗೌಡರ ಸೋಲಿಸಲು ಕಾರಣಕರ್ತರಾದವರಿಗೆ ತಕ್ಕ ಪಾಠ ಕಲಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

 
ವಿಧಾನ ಪರಿಷತ್ ಅಭ್ಯರ್ಥಿ ಅನಿಲ್‌ಕುಮಾರ್, ಮಾಜಿ ಶಾಸಕ ಹೆಚ್.ಬಿ. ನಂಜೇಗೌಡ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಾಮಾಂಜಪ್ಪ ಮತಯಾಚನೆ ಮಾಡಿದರು.


ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಯುವ ಜೆಡಿಎಸ್ ತಾಲೂಕು ಅಧ್ಯಕ್ಷ ಬಾಣಸಂದ್ರ ರಮೇಶ್, ಎಪಿಎಂಸಿ ಅಧ್ಯಕ್ಷ ನರಸಿಂಹ, ಪಟ್ಟಣ ಪಂಚಾಯ್ತಿ ಸದಸ್ಯರಾದ ಎನ್.ಆರ್. ಸುರೇಶ್, ಮಧು, ಭೈತರಹೊಸಳ್ಳಿ ರಾಮಚಂದ್ರು, ವಿಜಯೇಂದ್ರ, ಬೇಬಿ ತ್ಯಾಗರಾಜ್, ಲೀಲಾವತಿ ಗಿಡ್ಡಯ್ಯ, ಜಫ್ರುಲ್ಲಾ, ಪ್ರಸನ್ನಕುಮಾರ್ ಪಿ.ಎಚ್. ಧನಪಾಲ್, ಬೆಳ್ಳಿಲೋಕೇಶ್, ಎಂ.ಎನ್. ಚಂದ್ರೇಗೌಡ, ಎ.ಬಿ. ಜಗದೀಶ್, ಯೋಗಾನಂದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



ನಾನು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ವೇಳೆ ನನಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಸುಮಾರು 19 ಸಾವಿರಕ್ಕೂ ಹೆಚ್ಚು ಮತ ನೀಡುವ ಮೂಲಕ ನನ್ನನ್ನು ಅವಮಾನದಿಂದ ಪಾರು ಮಾಡಿದ್ದೀರಿ. ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ.


- ಹೆಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ 

ಎಲ್ಲರಿಗೂ ರಾಜಕೀಯ ಶಕ್ತಿ ನೀಡಿದ್ದೆ
ತಾವು ಮುಖ್ಯಮಂತ್ರಿಯಾದ ವೇಳೆ ಮತ್ತು ಪ್ರಧಾನಿಯಾಗಿದ್ದ ವೇಳೆ ಇತರೆ ಸಮುದಾಯ ಅಭಿವೃದ್ಧಿಗೆ ಶ್ರಮ ಹಾಕಿದ್ದೆ. ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಇತರೆ ಸಮುದಾಯಕ್ಕೆ ಸೂಕ್ತ ಮೀಸಲಾತಿ ನೀಡಿದ್ದರ ಫಲವಾಗಿ ಇಂದು ಎಲ್ಲಾ ಸಮುದಾಯದ ಜನ ರಾಜಕೀಯ ಪ್ರವೇಶ ಪಡೆದು ಸೂಕ್ತ ಸ್ಥಾನಮಾನವನ್ನು ಪಡೆದಿದ್ದಾರೆ ಎಂದು ಹೆಚ್.ಡಿ. ದೇವೇಗೌಡ ಹೇಳಿದರು.