ಪ್ರಬಂಧ - ಕೃಷ್ಣಮೂರ್ತಿ ಬಿಳಿಗೆರೆ 

ಪ್ರಬಂಧ ಕೃಷ್ಣಮೂರ್ತಿ ಬಿಳಿಗೆರೆ  ಪ್ರೇಮ ಪತ್ರ ಓದುವ ಕಷ್ಟ ನಿಮಗೂ ಬಂದಿತ್ತಾ

ಪ್ರಬಂಧ - ಕೃಷ್ಣಮೂರ್ತಿ ಬಿಳಿಗೆರೆ 

ಪ್ರಬಂಧ


ಕೃಷ್ಣಮೂರ್ತಿ ಬಿಳಿಗೆರೆ 


ಮತ್ತೊಬ್ಬರು ಕದಿಯಲು ಸಾಧ್ಯವೇ ಇಲ್ಲದ ವಾಟ್ಸಪ್ ಸಂದೇಶಗಳನ್ನು ಕಳಿಸಬಹುದಾದ, ಫೇಸ್ ಬುಕ್‌ನ ಇನ್‌ಬಾಕ್ಸ್ ನಲ್ಲಿ ನಿಮಗೇನು ಬೇಕೋ ಅದನ್ನೆಲ್ಲ ಕಳಿಸಲು ಸಾಧ್ಯವಿರುವ, ಪಾಸ್‌ವರ್ಡ್ ಇಲ್ಲದೆ ತೆರೆಯಲಾಗದ ಒಮೇಲ್‌ಗಳ ಇವತ್ತಿನ ಕಾಲದಲ್ಲಿ ಪೆನ್ನು ಹಿಡಿದು ಕೂತು ಬರೆಯುವ, ಬರೆದದ್ದನ್ನು ಒಡೆಯುತ್ತಾ, ಹತ್ತಾರು ಸಲ ತಿದ್ದಿ ತೀಡಿ ಪ್ರೇಮ ಪತ್ರ ಬರೆದು ಗೆಳೆಯ, ಗೆಳತಿಯರ ಮೂಲಕ ಮನದನ್ನೆಗೆ ತಲುಪಿಸುವ ದೃಶ್ಯವೇ ಇಲ್ಲ ಅಲ್ವಾ, ಆದರೆ ಎರಡು ಮೂರು ದಶಕಗಳ ಹಿಂದೆ ಪ್ರೇಮಿಗಳಿಗೆ  ಪ್ರೇಮಪತ್ರಗಳೇ ಜೀವಧಾತುಗಳಾಗಿದ್ದವು ಎನ್ನುವುದನ್ನು ಅರಿಯಲು ಈ ಪ್ರಬಂಧ ಓದಿ


ಪ್ರೇಮ ಪತ್ರ ಓದುವ ಕಷ್ಟ ನಿಮಗೂ ಬಂದಿತ್ತಾ


ನನಗೆ ಜೀವನದಲ್ಲಿ ಬಂದ ಮೊಟ್ಟ ಮೊದಲ, ಕಟ್ಟ ಕಡೆಯ ಪ್ರೇಮ ಪತ್ರವೊಂದು ಉಂಟುಮಾಡಿದ ಹಿತವಾದ ನೋವಿನ ಕತೆಯಿದು. ಪ್ರೇಮವೇ ನೋವಿನ ಮಡು ಎನ್ನುವವರಿದ್ದಾರೆ, ಅದು ಬೇರೆ ವಿಷಯ. ಆದರೆ ಪ್ರೇಮಪತ್ರವೂ ಇಂಥ ನೋವನ್ನುಂಟು ಮಾಡಬಲ್ಲ ಪದಾರ್ಥವೇ ಎಂಬುದನ್ನು ನನ್ನ ಅನುಭವದಿಂದ ಕಂಡುಕೊAಡಿದ್ದೇನೆ. ನಾನು ಅಷ್ಟೊತ್ತಿಗಾಗಲೇ ಹತ್ತಾರು ಪ್ರೇಮಪತ್ರಗಳನ್ನು ಅವಳಿಗೆ ಬರೆದಿದ್ದೆನಾದರೂ ಆ ಕಡೆಯಿಂದ ಒಂದಾದರೂ ಪತ್ರದ ಪ್ರತ್ಯುತ್ತರ ಬಂದಿರಲಿಲ್ಲ. ಅವಳ ಮನೆಯ ಮುಂದಿನ ಮಲ್ಲಿಗೆ ಗಿಡಕ್ಕೆ ಸಿಕ್ಕಿಸಿ ಬರುತ್ತಿದ್ದ ಈ ಬಗೆಯ ಪ್ರೇಮ ಪತ್ರಗಳು ಅವಳಿಗೆ ತಲುಪದೆ ಮಲ್ಲಿಗೆ ಗಿಡದಲ್ಲಿ ಸುಮ್ಮನೆ ಹೂವಾಗಿ ಅರಳಿ  ಉದುರಿ ಕಣ್ಮರೆಯಾಗಿರಬಹುದೆಂದು ಸಮಾಧಾನಪಟ್ಟುಕೊಳ್ಳುತ್ತಿದ್ದೆ. 


ಪರಿಸ್ಥಿತಿ ಹೀಗಿರುತ್ತಿರಲಾಗಿ ಈ ಬಗೆಯ ಒಣ ಸಮಾಧಾನ ಹೆಚ್ಚು ಕಾಲ ಬಾಳಿಕೆ ಬರಲಿಲ್ಲ.  ಅವಳ ಪುಟ್ಟ ತಮ್ಮನ ಕೈಯ್ಯಲ್ಲಿ ನನ್ನ ಪ್ರೇಮಪತ್ರ ರವಾನೆಯ ವಿಫಲ ಪ್ರಯತ್ನವೂ ನಡೆಯಿತು. ಅವರಪ್ಪನ ಕಠೋರ ನಡವಳಿಕೆಯ ಪರಿಚಯವಿದ್ದ ನನಗೆ ಇದು ಬಲು ಅಪಾಯಕಾರಿಯಾಗಿ ಗೋಚರವಾಯಿತು.  ನಾನೇ ಪ್ರೇಮಪತ್ರವನ್ನು ನೇರವಾಗಿ ಕೊಡುವ ತೀರ್ಮಾನ ಯಾಕೋ ರೋಚಕವೆನಿಸಲಿಲ್ಲ. ಅದಕ್ಕೆ ಬೇಕಾದ ಬೀಜಶಕ್ತಿಯ  ಕೊರತೆಯೂ ಕಾರಣವಿದ್ದಿರಬಹುದು.  


ಕಟ್ಟ ಕಡೆಗೆ ಧೈರ್ಯಶಾಲಿ ಗೆಳೆಯನೊಬ್ಬನ ಕಡೆಯಿಂದ ಪ್ರೇಮಪತ್ರವನ್ನು ಅವಳಿಗೆ ತಲುಪಿಸುವ  ಒಂದು ಐತಿಹಾಸಿಕ ತೀರ್ಮಾನಕ್ಕೆ ಬಂದೆ. ಆ ಕೆಲಸ ಹೂವೆತ್ತಿದಂತೆ ಆಗಲು, ಅವಳು ಮರು ಪ್ರೇಮಪತ್ರ ಬರೆಯದಿದ್ದರೇನು, ಅದು ನನ್ನ ಕಲ್ಪನಾ ವಿಲಾಸಕ್ಕೇನು ಕಿಂಚಿತ್ತೂ  ಧಕ್ಕೆ ತರಲಿಲ್ಲ. ಯಾವ ತಕರಾರು ಇಲ್ಲದೆ ನಾನು ಬರೆದ ಪ್ರೇಮಪತ್ರಗಳನ್ನು ಅವಳು ವಶಕ್ಕೆ ಪಡೆದು ಓದುತ್ತಿದ್ದುದೇ ಒಂದು ಬಗೆಯ ಪ್ರೇಮ ಸಾಕ್ಷಾತ್ಕಾರವಲ್ಲವೇ. ಇದು ನಿರಂತರವಾಗಿ ನಡೆಯುತ್ತಿರಲು...


ನಾನು ಬರೆದ ಚಿತ್ರಕ ಚುಂಬಕ ಪ್ರೇಮಪತ್ರವೊಂದು ಆ ಗೆಳೆಯನ ಕಡೆಯಿಂದ ಅವಳಿಗೆ ರವಾನೆಯಾಗುವ ಮಾರ್ಗ ಮಧ್ಯದಲ್ಲಿ ನನ್ನಣ್ಣನ ಕೈಗೆ ಸಿಕ್ಕಿದ್ದೇ ತಡ ಸದರಿ ದುರಂತದ ಉದ್ಘಾಟನೆ ಆಗಿಯೇಬಿಟ್ಟಿತು. 


ನನ್ನಣ್ಣ ನಮ್ಮೂರಿನಲ್ಲಿದ್ದ ಹಾಸ್ಟೆಲ್‌ನಲ್ಲಿ ಮ್ಯಾನೇಜರ್ ಆಗಿದ್ದ. ಬಡ ಹಾಸ್ಟೆಲ್ಲಿಗೆ ಕಾಳುಕಡ್ಡಿ, ಹಸಿಟ್ಟು, ಮೆಣಸಿನಕಾಯಿ, ತೆಂಗಿನಕಾಯಿ ಹಂಚುವುದೇ ಈ ಮ್ಯಾನೇಜರ್ ಕೆಲಸ. ಈ ಅಣ್ಣ ಇದನ್ನು ಶಿರಸಾವಹಿಸಿ ಮಾಡುತ್ತಿದ್ದ. ಸರ್ಕಾರದ ಕಿಂಚಿತ್ತು ಅನುದಾನವಿರದಿದ್ದ ಕಾಲದಲ್ಲಿ ಪಕ್ಕದ ಮಠದ ಸ್ವಾಮಿಗಳು ಇದಕ್ಕೆ ಇಂಬಾಗಿದ್ದುದು ನಿಜ. ಅವರ ಪಟ್ಟಶಿಷ್ಯನಾಗಿದ್ದ ಅಣ್ಣ ಬಹುತೇಕ ಹಾಸ್ಟೆಲ್ಲಿನಲ್ಲೇ ಮಲಗುತ್ತಿದ್ದ. ಅದೇ ಹಾಸ್ಟೆಲ್‌ನಲ್ಲಿದ್ದ ನನ್ನ ಗೆಳೆಯ ಊಟ ಮಾಡಿ ಬಂದು  ಅಂಗಿ ಬಿಚ್ಚಿ ವೈರ್ ಮೇಲೆ ಹಾಕಿ ಯಾಮಾರಿ ಮಲಗಿದ್ದಾನೆ. ಈ ಸದವಕಾಶಕ್ಕೆ ಹೊಂಚು ಹಾಕಿ ಕೂತಿದ್ದ, ನಾನು ಪ್ರೇಮಪತ್ರವನ್ನು ಯಾರಿಗೆ ಬರೆದಿದ್ದೆನೋ ಅವಳನ್ನೆ ಪ್ರೀತಿಸುತ್ತಿದ್ದ ಹತ್ತಾರು ಜನರಲ್ಲಿ ಒಬ್ಬನು ಆ ನನ್ನ ಗೆಳೆಯನ ಜೇಬು ತಪಾಸಣೆ ಮಾಡಿ ಪ್ರೇಮ ಪತ್ರವನ್ನು ಜಪ್ತಿ ಮಾಡಿಕೊಂಡಿದ್ದಾನೆ. ನನ್ನ ಹಾವಭಾವಗಳ ಮೂಲಕ ನಾನು  ಪ್ರೇಮ ಸ್ಪರ್ಧೆಯಲ್ಲಿನ ಅವನ ಪ್ರತಿಸ್ಪರ್ಧಿ ಎಂಬುದನ್ನು ಆತ ಸಂಶೋಧಿಸಿ ಸದರಿ ಪ್ರೇಮಪತ್ರವನ್ನು ಗೆಳೆಯನ ಜೇಬಿನಿಂದ ಲಪಟಾಯಿಸಿದ್ದರಲ್ಲಿ ಆಶ್ಚರ್ಯವೇನಿದೆ. 


ಆ  ಕ್ರೂರ ಪ್ರತಿಸ್ಪರ್ಧಿ ನನ್ನ ಪ್ರೇಮಪತ್ರವನ್ನು ಓದಿ ವ್ಯಗ್ರಗೊಂಡಿದ್ದಾನೆ. ಒಳಗೊಳಗೆ ಹತ್ತಿ ಉರಿದ ಈರ್ಷೆಯ ಬೆಂಕಿಯನ್ನು ನಂದಿಸುವ ಮಾರ್ಗದ ಹುಡುಕಾಟದಲ್ಲಿ  ಅವನಿಗೊಂದು ಭಯಂಕರ ಉಪಾಯ ಹೊಳೆದಿದೆ. ಪ್ರೇಮಸ್ಪರ್ಧೆಯಿಂದ ನನ್ನನ್ನು ಹೊರದಬ್ಬುವ ದಾರಿಯೂ ಇದೆಂದು ಅವನು ಯೋಚಿಸಿರಬೇಕು. ಹೀಗಾಗಿ  ಆ ಪ್ರೇಮಪತ್ರವನ್ನು ಅಲ್ಲೇ ಇದ್ದ ನನ್ನಣ್ಣನಿಗೆ ತಲುಪಿಸಲಾಗಿ, ಆ ಅಣ್ಣನೆಂಬ ಕರುಣಾಹೀನನು ಕಿಂಚಿತ್ತು ಮುಲಾಜಿಲ್ಲದೆ ಅದನ್ನು ನನ್ನಪ್ಪನಿಗೆ ಕೊಡುವ ಬದಲು ಅದರೊಳಗಿದ್ದ ಇಲ್ಲದಿರುವ ಪದಪುಂಜಗಳನ್ನು ಉಲ್ಲೇಕಿಸಿ ಈ ವಯಸ್ಸಿಗೇ ಲವ್ವು, ಗಿವ್ವು ಲೆರ‍್ರು  ಮತ್ತು ಅದರ ಘೋರ ಪರಿಣಾಮಗಳನ್ನು ಅಪ್ಪನ ಮನಮುಟ್ಟುವಂತೆ ವಿವರಿಸಲಾಗಿ, ಗಪ್ಪಟ್ಟಿನಲ್ಲಿ ನನ್ನನ್ನು ತೋಟಕ್ಕೆ ಕರೆಸಿಕೊಂಡು ಬಾವಿ ಸುತ್ತಲೂ ಓಡಾಡಿಸಿಕೊಂಡು ಗೂಸಾ ಕೊಡುತ್ತಿದ್ದಾಗ  ಅಣ್ಣ ವಿಘ್ನ ಸಂತೋಷಿಯಾಗಿ ನಗುತ್ತಿದ್ದ. ಇದಿಷ್ಟಾದರೆ...


ಅಂದು ಇನ್ನೂ ನಾವು ಗೆಳೆಯರು ಕಾಲೇಜಿಗೆ ಹೊರಟಿರಲಿಲ್ಲ, ಆ ನಮ್ಮ ರೂಮಿಗೆ ಪೋಸ್ಟ್ ಮ್ಯಾನ್ ಬಂದಾಗ ಮಹದಾಶ್ಚರ್ಯ. ಎರಡು ದಿನಗಳ ಹಿಂದಷ್ಟೆ ಇದೇ ಪೋಸ್ಟ್ ಮ್ಯಾನ್ ಪ್ರತಿ ತಿಂಗಳ  ಮಾಮೂಲು 150 ರೂಪಾಯಿ  ಎಮ್ ಓ ಕೊಟ್ಟು ಹೋಗಿದ್ದರು. ಈಗ ನೋಡಿದರೆ ಮತ್ತೊಮ್ಮೆ ಆ ಪುಣ್ಯಾತ್ಮನ ಆಗಮನ. ಯಾವ ಕಾರಕ್ಕೂ ಅದು ಎಮ್ ಓ ಆಗಿರಲು ಸಾಧ್ಯವಿರಲಿಲ್ಲ, ಏನಿದೇನೆಂದು ಯೋಚಿಸುತ್ತಿರುವಂತೆಯೇ   ಆತ ಕೊಟ್ಟುದ್ದು ನನ್ನ ವಿಳಾಸಕ್ಕೆ ಬಂದಿದ್ದ ಕ್ರೀಮ್ ಬಣ್ಣದ ಪೋಸ್ಟ್ ಕವರ್. ಹಿಂದು ಮುಂದು ನೋಡದೆ   ಗೆಳೆಯನೊಬ್ಬ ನನ್ನ ಬಳಿಯಿದ್ದ ಕವರ್ ಕಿತ್ತುಕೊಂಡು ಒಡೆದು ಯಾರಿಂದ ಬಂದಿದೆ ಎಂದು ಘೋಷಿಸಿದ. ನಮ್ಮ ಪುಕ್ಕಟ್ಟೆ ಚರ್ಚೆಗಳಲ್ಲಿ ನಾನು ಅವಳನ್ನು ಪ್ರೀತಿಸುತ್ತಿದ್ದ ವಿಷಯ ಸಾವಿರಾರು ಬಾರಿ ಪ್ರಸ್ತಾಪವಾಗಿದ್ದರಿಂದ ಆ ಪತ್ರದ ಹಿಂದು ಮುಂದುಗಳೆಲ್ಲ   ಅವರ ಅರಿವಿಗೆ ಬಂದ   ತಕ್ಷಣ  ಪರಿಸ್ಥಿತಿ ಉಲ್ಬಣಗೊಂಡು, ಹೊಸ ತಿರುವು ಪಡೆಯುವುದಕ್ಕೆ ಕಾರಣವಾಯಿತು. ನನಗೆ ಏನು ಮಾಡಬೇಕೆಂದು ತಕ್ಷಣ ತೋಚಲೇ ಇಲ್ಲ. ಮನಸ್ಸು ಅಲ್ಲೋಲ ಕಲ್ಲೋಲಗೊಂಡು ಉಸಿರು ನಿಂತAತಾಯಿತು. ಆದರೆ ದಿಡೀರನೆ ಅವನ ಕೈನಿಂದ ಆ ಪ್ರೇಮಪತ್ರವನ್ನು ಕಿತ್ತುಕೊಂಡು ಓಡಲು ಬಾಗಿಲು ಬಗಾಲು ಮಾಡಲು ನೋಡಿದೆ, ಆ ಗೆಳೆಯರಲ್ಲೊಬ್ಬ ನನ್ನನ್ನು ಹಿಡಿದು ಅದಕ್ಕೆ ಅವಕಾಶ ಕೊಡದೆ ಬಂಧಿಸಿದ. ಎಲ್ಲಾ ಗೆಳೆಯರು ಒಂದಾದರು. ನಾನು ಒಂಟಿಯಾದೆ. ಅವರ ಒಟ್ಟಿಗೆ ಸೇರಿ ಫರ್ಮಾನು ಹೊರಡಿಸಿದರು “ಪ್ರೇಮ ಪತ್ರವನ್ನು ನಮಗೆಲ್ಲಾ ಓದಿ ಹೇಳಬೇಕು”. ಆದಕ್ಕೆ ನಾನು ಸುತ್ರಾಮ್ ಒಪ್ಪಲಿಲ್ಲ. ಅದು ಬಂದಿರುವುದು ನನಗೆ ಅದು ಅಣ್ಣೋ ಅಪ್ಪನೋ ಬರೆದ ಸಾಧಾರಣ ಪತ್ರವಲ್ಲ, ನಾನು ಪ್ರೀತಿಸುತ್ತಿರುವ ಗೆಳತಿ ನನಗೆಂದೇ ಬರೆದಿರುವ ಪ್ರೇಮಪತ್ರ, ಇದು ಪೂರಾ ಖಾಸಗಿ ವಿಷಯ, ಅದನ್ನು ಅವರೊಂದಿಗೆ ಹಂಚಿಕೊಳ್ಳುವುದಕ್ಕೆ ಅದೇನು ಮಾಮೂಲಿ ಹಿಸ್ಟರಿ ನೋಟ್ಸ್  ಆಗಿರಲಿಲ್ಲವಲ್ಲ. ಎಷ್ಟೇ ಪ್ರತಿರೋಧÀ ಒಡ್ಡಿ ಓಡಿಹೋಗಲು ಪ್ರಯತ್ನಿಸಿದರೂ ಸಾಧ್ಯವಾಗದೆ ಒದ್ದಾಡತೊಡಗಿದೆ. ಈಗ ಎಲ್ಲರೂ ಕಾಲೇಜಿಗೆ ಹೋಗಿ ಸಂಜೆ ಬಂದಾಗ ನಾನೇ ಅವರುಗಳ ಮುಂದೆ ಸದರಿ ಪತ್ರವನ್ನು ಓದುವೆನೆಂದು ರಾಜಿಯಾಗಲು ಸಿದ್ಧನಾದೆ, ಅವರು ಇವೊತ್ತು ಕಾಲೇಜಿಗೆ ಹೋಗುವ ಪ್ರಶ್ನೆಯೇ ಇಲ್ಲವೆಂದು ಇನ್ನೊಂದು ಫರ್ಮಾನು ಪಾಸು ಮಾಡಿದರು. ಸಂಜೆ ಪ್ರಸಾದ್ ಲಂಚ್ ಹೋಂನಲ್ಲಿ   ಖಾಲಿ ದೋಸೆ ಕೊಡಿಸುವ ನನ್ನ ಮಾತು ಅವರಿಗೆ ಯಕಶ್ಚಿತ್  ಆಸೆಯಾಗಿ ತೋರಿರಬೇಕು, ಅದನ್ನವರು ಕೇಳಿಸಿಕೊಳ್ಳಲೂ ತಯಾರಿರಲಿಲ್ಲ. ನಾನೊಮ್ಮೆ ಓದಿ ಆದಮೇಲೆ ನಿಮಗೂ ಓದುವುದಾಗಿ ಶರಣಾದೆ. ಅದಕ್ಕೂ ಅವರು ಒಪ್ಪಲಿಲ್ಲ. ನನ್ನ  ಪ್ರೇಮ ಪತ್ರದಲ್ಲಿ ಪಾಲು ಕೇಳುತ್ತಿರುವ ಇವರು ಎಂಥಾ ಗೆಳೆಯರು ಎಂದು ಮಮ್ಮಲ ಮರುಗಿದೆ, ಗೋಗರೆದೆ. ಈ ಮಧ್ಯೆ ಹೇಗೋ ಅವರಿಂದ ತಪ್ಪಿಸಿಕೊಂಡು ಈಚೆ ಹೋಗುವುದು ಸಾಧ್ಯವಾದದ್ದೇ ತಡ ಸುಮ್ಮನೆ ಓಡತೊಡಗಿದೆ, ಅವರು ರೂಮಿಗೆ ಬೀಗವನ್ನು ಹಾಕದೆ ನನ್ನನ್ನು ಹಿಂಬಾಲಿಸಿದರು. ಇದು ತಮಾಷೆೆಯ ಘಟನೆಯಾಗಿ ರೂಪಾಂತರವಾಗುತ್ತಿದ್ದುದು ನನ್ನ ನೋವಿಗೆ ಕಾರಣವಾಯಿತು. ಒಬ್ಬರೂ ಆ ಪ್ರೇಮಪತ್ರದ ಘನತೆ ಗಂಭೀರತೆ ಪಾವಿತ್ರö್ಯತೆಯನ್ನು ಆರ್ಥಮಾಡಿಕೊಳ್ಳಲು ತಯಾರಿರಲಿಲ್ಲ. ಅವರೊಳಗೂ ಎಂಥದೋ ಮುಲುಕಾಟ ಆರಂಭವಾಗಿದ್ದಿರಬೇಕು. ನಾನು ಗುರಿಯೊಂದನ್ನು ಕುರ್ತುಕೊಂಡು ಓಡತೊಡಗಿದೆ. ಕೊನೆಗೆ ತಲುಪಿದ್ದು ನಮ್ಮ ತೌರು ಮನೆಯಂತಿದ್ದ ಕುಂಬಾರರ ಹಾಸ್ಟೆಲಿಗೆ. ಅಲ್ಲಿನ ಕಕ್ಕಸ್ಸು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡೆ. ಅವರು ತಗಡಿನ ಬಾಗಿಲನ್ನು ಒಂದೆರಡು ಬಾರಿ ಕಿತ್ತುಬರುವಂತೆ ಬಡಿದರು. ಬಾಗಿಲು ತರೆಯಲು ಒತ್ತಾಯಿಸಿ ಕೂಗಿದರು. ಚಕ್ಕನೆ ಮೌನ ಆವರಿಸಿತು. ಅಂತೂ ಅವರನ್ನೆಲ್ಲಾ ತಪ್ಪಿಸಿ ನನಗೆ ಬಂದಿರುವ ಅವಳ ಪ್ರೇಮಪತ್ರವನ್ನು ಏಕಾಗ್ರತೆಯಿಂದ ಪದಪದವನ್ನು ಪಾಲಿಸಿಕೊಂಡು ಓದುವ ಮಹದಾಸೆ ಒತ್ತರಿಸಿಕೊಂಡು ಬಂತು. ಅವರನ್ನೆಲ್ಲ ಕ್ಷಣಾರ್ಧದಲ್ಲಿ ಮರೆತೆ. ಓದತೊಡಗಿದೆ. ಪ್ರೇಮಪತ್ರದ ಮೇಲೆ ನೆರಳಾಡಿದಂತಾಯಿತು, ಅನುಮಾನದಿಂದ ಕತ್ತೆತ್ತಿ ನೋಡುತ್ತೇನೆ, ನಾಲ್ಕೂ ಜನ ನಾಲ್ಕು ದಿಕ್ಕಿನಿಂದ ಆಕಾಸಕ್ಕೆ ತೆರೆದುಕೊಂಡಿದ್ದ  ಆ ಕಕ್ಕಸ್ಸು ರೂಮಿನ ಮೋಟು ಗೋಡೆಯ ಮೇಲೆ ಇಣುಕಿ ತದೇಕ ಚಿತ್ತದಿಂದ ಪ್ರೇಮಪತ್ರ ಓದಲು ಅವರವರ ಯೋಗ್ಯತಾನುಸಾರ ಪ್ರಯತ್ನಿಸುತ್ತಿದ್ದಾರೆ... ಇದಲ್ಲವೆ ಪ್ರೇಮಪತ್ರದ ಗಮ್ಮತ್ತು.