ರಾಜ್ಯದ ಜನತೆ ಬದಲಾವಣೆ ತರಲು ಕಾಯುತ್ತಿದ್ದಾರೆ: ಎಂ.ಬಿ.ಪಾಟೀಲ್ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ
ರಾಜ್ಯದ ಜನತೆ ಬದಲಾವಣೆ ತರಲು ಕಾಯುತ್ತಿದ್ದಾರೆ: ಎಂ.ಬಿ.ಪಾಟೀಲ್ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ
ರಾಜ್ಯದ ಜನತೆ ಬದಲಾವಣೆ ತರಲು ಕಾಯುತ್ತಿದ್ದಾರೆ:
ಎಂ.ಬಿ.ಪಾಟೀಲ್ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ
ತುಮಕೂರು: ಪೆಟ್ರೋಲ್,ಡೀಸೆಲ್, ಅಡಿಗೆ ಅನಿಲ, ಅಡಿಗೆ ಎಣ್ಣೆ ಹೀಗೆ ಜೀವನಾವಶ್ಯಕ ಪದಾರ್ಥಗಳ ವಿಪರೀತ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಕೊರೊನಾ ಪಿಡುಗಿನ ಅಸಮರ್ಥ ನಿರ್ವಹಣೆ, 40% ಕಮೀಶನ್ ಭ್ರಷ್ಟಾಚಾರಗಳಿಂದ ಬೇಸತ್ತ ರಾಜ್ಯದ ಜನ ಕಾಯ್ತಾ ಇದ್ದಾರೆ, ಶಾಸಕರನ್ನು ಖರೀದಿಸಿ, ಸರ್ಕಾರ ರಚಿಸಿ ಹಿಂದೂ -ಮುಸ್ಲಿಂ ಭಾವನೆಗಳನ್ನು ಕೆರಳಿಸಿ ದುರಾಡಳಿತ ಮಾಡುತ್ತಿರುವ ಬಿಜೆಪಿಯನ್ನು ಮನೆಗೆ ಕಳಿಸಿ, 2013-18ರ ಅವಧಿಯಲ್ಲಿ ಜನಪರ ಆಡಳಿತ ನೀಡಿದ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಭರವಸೆ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್‍ನ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡು ಅಧಿಕಾರ ಗ್ರಹಣ ಮಾಡಿದ ಬಳಿಕ ಮೊದಲ ಸಲ ತುಮಕೂರು ಜಿಲ್ಲೆಗೆ ಭೇಟಿ ನೀಡಿದ ಮಾಜಿ ಸಚಿವ ಎಂ.ಬಿ.ಪಾಟೀಲರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿ, ಸ್ವಾತಂತ್ರ್ಯಾನಂತರ 60 ವರ್ಷಗಳ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್‍ನ ಕೊಡುಗೆ ಏನೂ ಇಲ್ಲ ಎಂದು ಬಿಜೆಪಿ ನಾಯಕರು ಪದೇ ಪದೇ ಟೀಕಿಸುವುದನ್ನು ಪ್ರಸ್ತಾಪಿಸಿದ ಪಾಟೀಲರು, 1947ರ ಆರಂಭದ ವರ್ಷಗಳಲ್ಲಿ ದೇಶದಲ್ಲಿ ಆಹಾರದ ಉತ್ಪಾದನೆಯೇ ಇಲ್ಲದೇ ವಿದೇಶಗಳಿಂದ ಗೋಧಿ ಹಾಗೂ ಕೆಂಪುಜೋಳವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು, ಕೃಷಿ ರಂಗದಲ್ಲಿ ದೇಶವನ್ನು ಸ್ವಾವಲಂಭಿಯನ್ನಾಗಿ ಮಾಡಿ ಆಹಾರ ಪದಾರ್ಥಗಳನ್ನು ರಫ್ತು ಮಾಡುವ ಹಂತಕ್ಕೆ ದೇಶವನ್ನು ತರುವಲ್ಲಿ ನೆಹರೂ, ಲಾಲ್ ಬಹದೂರ್ ಶಾಸ್ತ್ರಿಹಾಗೂ ಇಂದಿರಾಗಾಂಧಿ ಅವರ ಪಾತ್ರ ಮಹತ್ವದ್ದು, ಈ 60 ವರ್ಷಗಳಲ್ಲಿ ,ಪ್ರತಿ ಹಳ್ಳಿಯಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಐಐಟಿ, ಐಐಎಂಗಳವರೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರಂಭಿಸಿ ಏಮ್ಸ್ ಗಳನ್ನು ಸ್ಥಾಪಿಸಿದ್ದು, ಸೂಜಿಯನ್ನೂ ಸ್ವತಃ ಉತ್ಪಾದಿಸಲಾಗದೇ ಇದ್ದ ದೇಶದಲ್ಲಿ ನವರತ್ನ ಕಂಪನಿಗಳನ್ನು ಸ್ಥಾಪಿಸಿದ್ದು , ರೈಲ್ವೆ, ವಿಮಾನನಿಲ್ದಾಣ, 1900ಕ್ಕೂ ಡ್ಯಾಂಗಳನ್ನು ನಿರ್ಮಿಸಿದ್ದು ಕಾಂಗ್ರೆಸ್ ಸರಕಾರವೋ ಅಥವಾ 2014ರ ನಂತರ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವೋ ಎಂದು ಪ್ರಶ್ನಿಸಿದರು ಎಂ.ಬಿ.ಪಾಟೀಲ್.
ಸಾವಿರಾರು ಕೋಟಿ ಮೊತ್ತವನ್ನು ಚುನಾವಣಾ ಪ್ರಚಾರಕ್ಕೆ ಖರ್ಚು ಮಾಡಿ 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿದ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣವನ್ನು 100 ದಿನಗಳಲ್ಲಿ ವಾಪಸ್ ತಂದು ದೇಶದ ನಾಗರಿಕರ ಖಾತೆಗೆ ತಲಾ ರೂ.15 ಲಕ್ಷ ಸಂದಾಯ ಮಾಡುವ ಭರವಸೆ ಹುಸಿಯಾಯಿತು. ಸರ್ಕಾರಗಳ ತಪ್ಪು ನಿರ್ಣಯಗಳಿಂದ ಇದ್ದ ಉದ್ಯೋಗಗಳನ್ನೂ ಜನರು ಕಳೆದುಕೊಂಡರು. ನೋಟು ರದ್ದತಿ, ಕೋವಿಡ್ ನಿರ್ವಹಣೆಯಲ್ಲಿ ಲೋಪ, ಆರ್ಥಿಕ ಪರಿಸ್ಥಿತಿ ನಿಭಾಯಿಸುವಲ್ಲಿ ವೈಫಲ್ಯ ಅನುಭವಿಸಿದ್ದರಿಂದ ದೇಶದಲ್ಲಿ ಇಂದು ಹೆಚ್ಚಿನ ಅನಾಹುತಗಳು ನಡೆಯುತ್ತಿವೆ ಎಂದು ಟೀಕಿಸಿದರು.
ಮೊಸರು, ಮಂಡಕ್ಕಿಯ ಮೇಲೂ ಜಿಎಸ್‍ಟಿ ವಿಧಿಸಲಾಗಿದೆ, ಚಿತಾಗಾರದಲ್ಲಿ ಹೆಣ ಸುಡಲೂ 18% ಜಿಎಸ್‍ಟಿ ತೆರಬೇಕಾಗಿದೆ. ಹೀಗಾಗಿ ಮೋದಿ ಸರ್ಕಾರ ಜನರನ್ನು ಬದುಕಲೂ, ಸಾಯಲೂ ಬಿಡುತ್ತಿಲ್ಲ ಜೊತೆಗೆ ಸತ್ತ ಮೇಲೂ ಬಿಡುತ್ತಿಲ್ಲ ಎಂದು ವಿಷಾದಿಸಿದರು.
ಹಾಜರಿದ್ದ ಪ್ರಮುಖರು
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಡಾ.ಎಸ್.ರಫೀಕ್ ಅಹ್ಮದ್, ಎಸ್.ಷಫಿ ಅಹ್ಮದ್, ಕೆ.ಷಡಕ್ಷರಿ, ಆರ್.ನಾರಾಯಣ, ಬಿ.ಲಕ್ಕಪ್ಪ, ಬೆಮಲ್ ಕಾಂತರಾಜು, ಎಐಸಿಸಿ ವೀಕ್ಷಕ ಬಾಲಕೃಷ್ಣ, ರಾಯಸಂದ್ರ ರವಿಕುಮಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ,ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಮಠ್, ಮುಖಂಡರಾದ ಪಾವಗಡದ ಹೆಚ್. ವಿ. ವೆಂಕಟೇಶ್,ರಾಯಸಂದ್ರ ರವಿ
‘ಶಿವಮೂರ್ತಿ ಶರಣರ ಪ್ರಕರಣ
ನಿರ್ವಹಣೆಯಲ್ಲಿ ಲೋಪಗಳಾಗಿವೆ’
ಚಿತ್ರದುರ್ಗದ ಮುರುಘಾ ಮಠಾಧೀಶ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೊಸ್ಕೋ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದ್ದು, ಹೀಗೆ ಪ್ರಕರಣ ದಾಖಲಾದ ತಕ್ಷಣ ವಿಳಂಬಕ್ಕೆಡೆ ಮಾಡದೇ ಆರೋಪಿಗಳನ್ನು ಪೊಲೀಸರು ಬಂಧಿಸಬೇಕಿತ್ತು. ಇದು ಗೃಹ ಸಚಿವನಾಗಿ ಕಾರ್ಯನಿರ್ವಹಿಸಿರುವ ನನ್ನ ಕಾನೂನು ತಿಳುವಳಿಕೆ. ಈ ಪ್ರಕರಣ ನಿರ್ವಹಣೆಯಲ್ಲಿ ಹಲವಾರು ಲೋಪಗಳಾಗಿವೆ. ತನಿಖೆ ಪ್ರಗತಿಯಲ್ಲಿದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಆಗ್ರಹಿಸಿದರು.
ಇದೇ ವಿಚಾರವಾಗಿ ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ “ಮುರುಘಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ ಲಿಂಗ ಧಾರಣೆ ಮಾಡಿಸಿಕೊಂಡಿದ್ದರಿಂದ ಆ ಸ್ವಾಮೀಜಿ ವಿರುದ್ಧ ಷಡ್ಯಂತ್ರ ಹೂಡಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುರುಘಾ ಮಠಕ್ಕೆ ಎಲ್ಲ ರಾಜಕೀಯ ಪಕ್ಷದವರೂ ಭೇಟಿ ನೀಡುತ್ತಾರೆ, ಬಿಜೆಪಿ ನಾಯಕ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಕೂಡಾ ಭೇಟಿ ನೀಡಿದ್ದಾರೆ.ಹಾಗೆಲ್ಲ ರಾಜಕೀಯ ತರಬೇಡಿ ಎಂದು ಮನವಿ ಮಾಡಿದರು.
ಮುದ್ದಹನುಮೇಗೌಡರು
ಇನ್ನೂ ಬೇರೆ ಪಕ್ಷ ಸೇರಿಲ್ಲ
ಜಿಲ್ಲೆಯ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಇನ್ನೂ ಯಾವುದೇ ರಾಜಕೀಯ ಪಕ್ಷ ಸೇರಿಲ್ಲ, ಆದ್ದರಿಂದ ಅವರೊಂದಿಗೆ ಕಾಂಗ್ರೆಸ್ ಮುಖಂಡರು ಮಾತನಾಡಿ ಮನವೊಲಿಸಲಿದ್ದಾರೆ ಎನ್ನುತ್ತಲೇ ಗುಲಾಂ ನಭಿ ಆಜಾದ್ ಹಾಗೂ ಅವರ ಬೆಂಬಲಿಗರು ಪಕ್ಷ ತೊರೆಯುವ ಸಂಗತಿಗೆ ಸಂಬಂಧಿಸಿದಂತೆ ಇಂದಿರಾ ಕಾಲದಿಂದಲೂ ಬಹಳ ಜನ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಸೇರಿದ್ದಾರೆ. ಅದು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು ಎಂ.ಬಿ.ಪಾಟೀಲ್
ಕಾಂಗ್ರೆಸ್‍ಗೆ ಜಿಲ್ಲೆಯಲ್ಲಿ 8-9 ಸ್ಥಾನ !
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 8ರಿಂದ 9 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್ ಸಮಿತಿಗಳಿಂದ ವರದಿ ಪಡೆದು, ಸಾಮಾಜಿಕ ನ್ಯಾಯ ಆಧರಿಸಿ ಮುಂಬರುವ ವಿಧಾನ ಸಭಾ ಚುನಾವಣೆಗೆ ಟಿಕೆಟ್ ನೀಡಲು ಪಕ್ಷ ಕ್ರಮ ಕೈಗೊಳ್ಳಲಿದೆ. ಹಾಗಾಗಿ ಎಂಟರಿಂದ ಒಂಬತ್ತು ಸ್ಥಾನ ಗಳಿಸುವುದು ಖಚಿತ ಎಂದರು. ಜಿಲ್ಲೆಯಲ್ಲಿ ಲಿಂಗಾಯಿತರಿಗೆ ಎಷ್ಟು ಟಿಕೆಟ್ ನೀಡಲಾಗುವುದು ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ಇಲ್ಲಿ ಉತ್ತರ ನೀಡಲಾಗುವುದಿಲ್ಲ ಎಂದರು ಪಾಟೀಲರು.