ಎಂ.ಎಸ್.ಪ್ರಭಾಕರ  ಮತ್ತು ಅವರ ಚರಮ ಗೀತೆ…!

ತಮ್ಮ ಸಾವನ್ನು ಸುಮಾರು ಹತ್ತು ವರ್ಷಗಳಿಂದ ಎದುರು ನೋಡುತ್ತಿದ್ದ ಕಾಮರೂಪಿ ನಿನ್ನೆ ತೀರಿಹೋದರು

ಎಂ.ಎಸ್.ಪ್ರಭಾಕರ  ಮತ್ತು ಅವರ ಚರಮ ಗೀತೆ…!

ಹತ್ತು ವರ್ಷಗಳ ಹಿಂದೆ ಕಾಮರೂಪಿ ಅವರೇ ಬರೆದಿದ್ದ ಅವರ ಸಾವಿನ ವರದಿಯ ಕನ್ನಡ ರೂಪ ಇದು .ಇದರ ಮೂಲ ಇಂಗ್ಲಿಷಿನಲ್ಲಿದೆ. ಕಾಮರೂಪಿ ಎಂದೇ ನಮಗೆ ಗೊತ್ತಿರುವ ಎಂ.ಎಸ್.ಪ್ರಭಾಕರ (ಪ್ರಭಾಕರ ಸೂರಪ್ಪ ಮೋಟ್ನಹಳ್ಳಿ) ಅವರು ಸುಮಾರು ಹತ್ತು ವರ್ಷಗಳ ಹಿಂದೆ (ಅಂದರೆ ಸರಿಯಾಗಿ ಫೆಬ್ರವರಿ 27, 2012ನೇ ಇಸವಿಯಂದು) ಈ ಸುದ್ದಿಯನ್ನು ತಾವೇ ಟೈಪು ಮಾಡಿ ತಮ್ಮ ಪತ್ರಕರ್ತ ಗೆಳೆಯರಿಗೆ ಮೇಲ್ ಮಾಡಿದ್ದರು. ತಮ್ಮ ಸಾವನ್ನು ಸುಮಾರು ಹತ್ತು ವರ್ಷಗಳಿಂದ ಎದುರು ನೋಡುತ್ತಿದ್ದ ಕಾಮರೂಪಿ ನಿನ್ನೆ ತೀರಿಹೋದರು

ಬೇಕೆಂದೇ ನಿದ್ದೆಗೆಟ್ಟು ಅವರ ಈ ಮರಣದ ಸುದ್ದಿಯ  ಸ್ವವರದಿಯನ್ನು  ಕನ್ನಡದ ಹೆಸರಾಂತ ಲೇಖಕ, ಅಂಕಣಕಾರ, ಛಾಯಾಗ್ರಾಹಕ ಅಬ್ದುಲ್ ರಶೀದ್ ಕನ್ನಡಕ್ಕೆ ಅನುವಾದಿಸಿ, ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ.  ಮೂಲ ವರದಿಯಲ್ಲಿ ಕಾಮರೂಪಿ ಅವರು ತಮ್ಮ ದೇಹವನ್ನು ಯಾವುದೇ ಧಾರ್ಮಿಕ ಸಂಸ್ಕಾರವಿಲ್ಲದೆ ಸುಡಬೇಕೆಂದು ಬಯಸಿದ್ದರಂತೆ ಆದರೆ ಈ ಹತ್ತು ವರ್ಷಗಳಲ್ಲಿ ತಮ್ಮ ಮನಸ್ಸು ಬದಲಾಯಿಸಿ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ.

 

ಎಂ.ಎಸ್.ಪ್ರಭಾಕರ  ಮತ್ತು ಅವರ ಚರಮ ಗೀತೆ…!

 

ಶಿಕ್ಷಕ, ಪತ್ರಕರ್ತ ಮತ್ತು ಕನ್ನಡ ಹಾಗೂ ಆಂಗ್ಲ ಬರಹಗಾರರಾದ ಎಂ.ಎಸ್.ಪ್ರಭಾಕರ (ಪ್ರಭಾಕರ ಸೂರಪ್ಪ ಮೋಟ್ನಹಳ್ಳಿ) ಅವರು ನಿನ್ನೆ ಕೋಲಾರದ ಅವರ ನಿವಾಸದಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು ಮತ್ತು ಅವರು ಮತ್ತು ಒಂಟಿಯಾಗಿದ್ದರು.

ಮೇ 1936 ರಲ್ಲಿ ಜನಿಸಿದ ಪ್ರಭಾಕರ ಅವರು ಕರ್ನಾಟಕದ ಕೋಲಾರದಲ್ಲಿ ಬೆಳೆದರು, ಅಲ್ಲೇ ಅವರು ಶಾಲೆಗೂ ಹೋದರು. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಆನರ್ಸ್ ಪದವಿ (1956) ಮತ್ತು ಸ್ನಾತಕೋತ್ತರ ಪದವಿ (1957) ಪಡೆದರು. ಫೆಬ್ರವರಿ 1962 ರಲ್ಲಿ ಗೌಹಾಟಿ ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲು ಅವರು ಬೆಂಗಳೂರು ಮತ್ತು ಧಾರವಾಡದಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಉಪನ್ಯಾಸಕರಾಗಿದ್ದರು

ಅವರು ಡಿಸೆಂಬರ್ 1975 ರಲ್ಲಿ ಗೌಹಾಟಿ ವಿಶ್ವವಿದ್ಯಾನಿಲಯಕ್ಕೆ ರಾಜೀನಾಮೆ ನೀಡಿ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ಅದರ ಸಂಪಾದಕೀಯ ಸದಸ್ಯರಾಗಿ ಸೇರಿದರು. ಅವರು ಜೂನ್ 1983 ರಲ್ಲಿ ಗುವಾಹಟಿಗೆ ಹಿಂದಿರುಗಿ“ದಿ ಹಿಂದೂ ಮತ್ತು ‘ಫ್ರಂಟ್‌ಲೈನ್‘ ಪತ್ರಿಕೆಗಳ, ಚೆನ್ನೈನ ವಿಶೇಷ ವರದಿಗಾರರಾಗಿ ಅಸ್ಸಾಂ ಮತ್ತು ಅದರ ನೆರೆಹೊರೆಯಲ್ಲಿನ ಬೆಳವಣಿಗೆಗಳ ಕುರಿತು ಬರೆದರು. ಜೂನ್ 1994 ರಲ್ಲಿ, ಅವರು ದಕ್ಷಿಣ ಆಫ್ರಿಕಾದಲ್ಲಿ ಇವೇ ಪತ್ರಿಕೆಗಳ ವಿಶೇಷ ವರದಿಗಾರರಾಗಿ ಜೋಹಾನ್ಸ್‌ಬರ್ಗ್‌ಗೆ ಹೋದರು. ಅವರು ಏಪ್ರಿಲ್ 2002 ರಲ್ಲಿ ಗುವಾಹಟಿಗೆ ಮರಳಿದರು ಮತ್ತು ಒಂದು ತಿಂಗಳ ನಂತರ ನಿವೃತ್ತರಾದರು.

ಶಿಕ್ಷಕರಾಗಿ, ಪ್ರಭಾಕರ ಅವರು ಸಹೋದ್ಯೋಗಿಗಳೊಂದಿಗೆ ಅಲ್ಲದಿದ್ದರೂ ವಿದ್ಯಾರ್ಥಿಗಳೊಂದಿಗೆ ಮಾತ್ರ ಜನಪ್ರಿಯರಾಗಿದ್ದರು.ವೃತ್ತಿಯಲ್ಲಿ ದೊರೆತ ಮನ್ನಣೆ ಮತ್ತು ಅದರಿಂದ ದೊರೆತ ಜೀವನದ ಪ್ರಗತಿಯ ಹೊರತಾಗಿಯೂ ಅವರು ಶಿಕ್ಷಕರಾಗಿ ತಾವು ವಿಫಲ ಎಂದೇ ಪರಿಗಣಿಸಿದ್ದರು. ರಾಜಕೀಯ ಪತ್ರಿಕೋದ್ಯಮಕ್ಕೆ ಅವರ ಪ್ರವೇಶ ಅವರ ಸ್ವಭಾವಕ್ಕೆ ಸಹಜವೇ ಆಗಿತ್ತು. ಏಕೆಂದರೆ ಅವರ ಡಾಕ್ಟರೇಟ್ ಪ್ರಬಂಧ ಸೇರಿದಂತೆ ಅವರ ಬಹುಪಾಲು ಅಕೆಡಮಿಕ್ ಬರವಣಿಗೆಗಳು ಸಾಹಿತ್ಯ, ಸಮಾಜ ಮತ್ತು ರಾಜಕೀಯ ಗಳ ನಡುವಿನ ಸಂಬಂಧಗಳ ಕುರಿತು ಅಂದರೆ ಒಟ್ಟಾಗಿ ರಾಜಕೀಯ ಆರ್ಥಿಕತೆ ಮತ್ತು ಸಾಮಾಜಿಕ ಬದಲಾವಣೆಯ ಸುತ್ತಮುತ್ತಲೇ ಇದ್ದವು.

ಗುವಾಹಟಿಗೆ ಹಿಂದಿರುಗುವ ಅವಕಾಶವನ್ನು ಅದೃಷ್ಟವೆಂದೇ ಸ್ವೀಕರಿಸಿದ ಅವರು ತಮ್ಮ ವೃತ್ತಿ ಜೀವನದ ಉಳಿದ ವರ್ಷಗಳನ್ನು ‘ದಿ ಹಿಂದೂ’ ಮತ್ತು ‘ಫ್ರಂಟ್‌ಲೈನ್‌’ನೊಂದಿಗೆ ಕಳೆದರು, ಗುವಾಹಟಿ, ಜೋಹಾನ್ಸ್‌ಬರ್ಗ್ ಮತ್ತು ಕೇಪ್ ಟೌನ್‌ನಲ್ಲಿ ವಾಸಿಸಿದರು. ಈ ಕಾಲಘಟ್ಟದಲ್ಲಿ ಅವರು ಭಾರತದ ಈಶಾನ್ಯ ಪ್ರದೇಶದಲ್ಲಿ ಮತ್ತು ನೆರೆಯ ದೇಶಗಳಲ್ಲಿ, ದಕ್ಷಿಣ ಆಫ್ರಿಕಾ , ಮಧ್ಯ ಆಫ್ರಿಕಾ, ಪಶ್ಚಿಮ ಆಫ್ರಿಕಾ ಮತ್ತು ಪೂರ್ವ ಆಫ್ರಿಕಾದಲ್ಲಿ ವ್ಯಾಪಕವಾಗಿ ಪ್ರಯಾಣಿಸಿದರು. ಅವರು ತಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಬರೆದರು, ಅವುಗಳಲ್ಲಿ ಹೆಚ್ಚಿನವು ಸಾಮಯಿಕವಾದವು ಮತ್ತು ಬಹುತೇಕ ಎಲ್ಲವೂ ಮರೆಯಲು ಅರ್ಹವಾದವುಗಳು.

ಹೊರನೋಟಕ್ಕೆ ಸ್ನಿಗ್ಧ ಹಾಗೂ ಶಾಂತಚಿತ್ತದವರಾಗಿ ಕಾಣಿಸುತ್ತಿದ್ದ ಪ್ರಭಾಕರ ಅವರು ಅರ್ಥಮಾಡಿಕೊಳ್ಳಲು ಮತ್ತು ಜೊತೆಗೆ ಬದುಕಲು ಸುಲಭವಾದ ಮನುಷ್ಯನಾಗಿರಲಿಲ್ಲ. ಅವರ ಬದುಕಿನ ನಿಜದ ಹೂರಣವೆಂದರೆ ಎಲ್ಲವನ್ನೂ ಕಬಳಿಸುತ್ತಿದ್ದ ಒಂದು ಬಗೆಯ ವಿಷಣ್ಣತೆ. ಈ ವಿಷಣ್ಣತೆಯನ್ನು ಮರೆಮಾಚಲು ಅವರು ಬೌದ್ಧಿಕ ಒಣಜಂಬ ಮತ್ತು ಆಕ್ರಮಣಕಾರಿ ದುರಹಂಕಾರವನ್ನು ತಮ್ಮ ಮೇಲೆ ಆವಾಹಿಸಿಕೊಂಡು ಬದುಕುತ್ತಿದ್ದರು. ಈ ಎಲ್ಲವೂ ಸಿನಿಕತನ ಮತ್ತು ಶಿಷ್ಠತೆಯ ಗೀಳಾಗಿ ಅವರಿಗೆ ಅಂಟಿಕೊಂಡಿತ್ತು.ಅವರು ಉದಾರಿ ಮನುಷ್ಯನಾಗಿದ್ದರು. ತಮ್ಮ ಸಮಯ, ತಮ್ಮ ಜ್ಞಾನ, ತಮ್ಮ ಸಂಪತ್ತು ಈ ಎಲ್ಲದರ ಕುರಿತೂ ಅವರು ಉದಾರರಾಗಿದ್ದರು; ಎಲ್ಲಕ್ಕಿಂತಲೂಕ್ಕಿಂತ ಹೆಚ್ಚಾಗಿ ತಮ್ಮ ಭಾವನೆ ಅದರಲ್ಲೂ ವಾತ್ಸಲ್ಯವನ್ನು ವ್ಯಕ್ತಪಡಿಸುವಾಗ ಸಹಜವಾದ ಮತ್ತು ತಕ್ಕುದಾದ ರೀತಿಯಲ್ಲಿ ವ್ಯಕ್ತಪಡಿಸಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ..

ತಾವು ಅವುಗಳನ್ನು ಮೀರುವುದನ್ನು ಇತರರು ಕಾತುರದಿಂದ ಬಯಸಬೇಕೆಂದು ಇವರು ನಿರೀಕ್ಷಿಸುತ್ತಿದ್ದರು ಮತ್ತು ಹಾಗೆ ನಿರೀಕ್ಷಿಸುತ್ತಿರುವಾಗಲೇ ಅದಕ್ಕೆ ಪ್ರತಿರೋದವನ್ನೂ ಒಡ್ಡುತ್ತಿದ್ದರು. ಇವರ ಈ ಪ್ರವೃತ್ತಿಯು ಮಹಿಳೆಯರೊಂದಿಗಿನ ಅವರ ಸಂಬಂಧಗಳ ಮೇಲೆ ಪರಿಣಾಮ ಬೀರಿತು. ಅವರು ಸ್ನೇಹ ಬೆಳೆಸಿದವರು ಮತ್ತು ಅವರೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದವರು ಆಕರ್ಷಿತರಾಗುತ್ತಿದ್ದರೂ ಆನಂತರ ಹಿಮ್ಮೆಟ್ಟುತ್ತಿದ್ದರು. ಇದೇ ಅವರ ಭಾವುಕ ಜೀವನದ ಒಣತನ ಮತ್ತು ಅಡ್ಡಾದಿದ್ದಿ ಸ್ವಬಾವವನ್ನು ಎತ್ತಿ ತೋರಿಸುತ್ತಿತ್ತು ಮತ್ತು ಈ ಸ್ಥಿತಿಯಲ್ಲಿಯೇ ಅವರು ತಮ್ಮ ಕೊನೆಯನ್ನು ಕಂಡುಕೊಂಡರು. ಈ ಒಂಟಿತನ ಮತ್ತು ಅವರು ತಮ್ಮ ಸಾವನ್ನು ಕಂಡುಕೊಂಡ ಬಗೆ ಅವರ ಒಳಬದುಕಿನ ಬಿರುಕು ಮತ್ತು ಬಿಕ್ಕಟ್ಟುಗಳನ್ನು ಬಿಚ್ಚಿ ಹೇಳುತ್ತವೆ.

ಪ್ರಭಾಕರ ಅವರು ತಮ್ಮ ತಾರುಣ್ಯದಲ್ಲಿ ಕನ್ನಡದ ಸಣ್ಣಮಟ್ಟಿಗಿನ ಬರಹಗಾರರಾಗಿ ಸಾಧಾರಣವಾದ ಮನ್ನಣೆಯನ್ನು ಪಡೆದಿದ್ದರು. ಅವರ ಮೂರು ಪುಸ್ತಕಗಳು, ಸಣ್ಣ ಕಥೆಗಳ ಸಂಗ್ರಹ ಮತ್ತು ಎರಡು ಕಾದಂಬರಿಗಳನ್ನು ಮನೋಹರ ಗ್ರಂಥಮಾಲಾ, ಧಾರವಾಡ, ಕರ್ನಾಟಕ ಅವರ ಕಾವ್ಯನಾಮವಾದ ‘ಕಾಮರೂಪಿ’ ಎಂಬ ಹೆಸರಿನಲ್ಲಿ ಪ್ರಕಟಿಸಿತ್ತು. ಮೂರು ಕವಿತೆಗಳು ಪದ್ಯದಲ್ಲಿ ಅವರ ಪ್ರಯತ್ನಗಳು, ಅದೇ ಕಾವ್ಯನಾಮದಲ್ಲಿ ಪ್ರಕಟವಾಗಿವೆ ಅವುಗಳಲ್ಲಿ ಒಂದು ಇಂಗ್ಲಿಷ್ ಅನುವಾದದಲ್ಲಿ ಮಾತ್ರ ಪ್ರಕಟಗೊಂಡಿದೆ. ಅವರು ಲಘು ಪ್ರಬಂಧಗಳ ಸಂಕಲನ(light essays, Words and Ideas (Anwesha, Guwahati , 2007),)ವನ್ನೂ ಪ್ರಕಟಿಸಿದ್ದರು. ಮತ್ತು ಅವರ ಸುದೀರ್ಘ ವಿಶ್ಲೇಷಣಾತ್ಮಕ ಪ್ರಬಂಧಗಳ ಸಂಗ್ರಹ, Looking Back into the Future: Identity and Insurgency in Northeast India (Routledge, Delhi, 2012). ಅವರು www.kamaroopi.wordpress.com ಎಂಬ ಬ್ಲಾಗ್ ಅನ್ನು ಪ್ರಾರಂಭಿಸುವ ಮೂಲಕ ಕನ್ನಡದಲ್ಲಿ ಮತ್ತೆ ಬರೆಯಲು ಪುನರಾರಂಭಿಸಲು ಆದರೆ ಇದೂ ಕೂಡಾ ಅವರ ಇಂತಹದೇ ಹೆಚ್ಚಿನ ಪ್ರಯತ್ನಗಳಂತೆ ಸಹಜವಾಗಿ ಅಜ್ಞಾತದೊಳಗೆ ಮುಳುಗಿದವು.

(ಚಿತ್ರ ಮತ್ತು ಬರಹ ಕೃಪೆ: ಅಬ್ದುಲ್ ರಶೀದ್)