ಕೋಳಘಟ್ಟ ಕಲ್ಲುಗಣೆ ಸ್ಥಗಿತ: ಶಾಸಕ ಜಯರಾಂ ಲೈಸನ್ಸ್ ರದ್ದಾಗದೇ ಹೋರಾಟ ನಿಲ್ಲದು-ಗ್ರಾಮಸ್ಥರು
masala-jayaram-kolaghatta-stone-quarry ಕೋಳಘಟ್ಟ ಕಲ್ಲುಗಣೆ ಸ್ಥಗಿತ: ಶಾಸಕ ಜಯರಾಂ ಲೈಸನ್ಸ್ ರದ್ದಾಗದೇ ಹೋರಾಟ ನಿಲ್ಲದು-ಗ್ರಾಮಸ್ಥರು
ಕೋಳಘಟ್ಟ ಕಲ್ಲುಗಣೆ ಸ್ಥಗಿತ: ಶಾಸಕ ಜಯರಾಂ
ಲೈಸನ್ಸ್ ರದ್ದಾಗದೇ ಹೋರಾಟ ನಿಲ್ಲದು-ಗ್ರಾಮಸ್ಥರು
ತುರುವೇಕೆರೆ : ತಾಲೂಕಿನ ಕೋಳಘಟ್ಟದಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹಗಲಿರುಳೂ ನಡೆಸುತ್ತಿರುವ ಧರಣಿ-ಪ್ರತಿಭಟನೆಗೆ ಮಣಿದ ಕ್ಷೇತ್ರದ ಶಾಸಕ ಮಸಾಲಾ ಜಯರಾಂ ತಕ್ಷಣವೇ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಆದಾಗ್ಯೂ ಕ್ರಷರ್ ಹಾಗೂ ಕಲ್ಲು ಗಣಿಗಾರಿಕೆಯ ಲೈಸನ್ಸ್ ರದ್ದು ಮಾಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎನ್ನುತ್ತಾರೆ ಧರಣಿ ನಿರತ ಗ್ರಾಮಸ್ಥರು.
ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕೆಂದು ಶಾಸಕ ಮಸಾಲಾ ಜಯರಾಮ್ ಸೂಚನೆ ಶುಕ್ರವಾರ ನೀಡಿದ್ದಾರೆ.
ಅವರ ಫಾರಂ ಹೌಸ್‌ನ ಗೃಹ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಆರಂಭದಲ್ಲಿ ತಾವೇ ಮರ‍್ನಾಲ್ಕು ತಿಂಗಳಗಳ ಕಾಲ ಗಣಿಗಾರಿಕೆ ನಡೆಸಲು ಅವಕಾಶ ನೀಡಿರಲಿಲ್ಲ. ಕೋಳಘಟ್ಟ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಕಲ್ಲುಗಣಿಗಾರಿಕೆ ನಡೆಸಲು ಸುಳ್ಳು ದಾಖಲಾತಿಗಳನ್ನು ಕೊಟ್ಟು ಅನುಮತಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಇದು ಕೇಂದ್ರ ಸರ್ಕಾರದ ಹೆದ್ದಾರಿ ನಿರ್ಮಾಣ ಮಾಡುವ ಸಲುವಾಗಿ ಮಾಡಿರುವ ಯೋಜನೆಯಾಗಿದೆ. ಅಧಿಕೃತವಾಗಿ ಸರ್ಕಾರದಿಂದ ಅನುಮತಿಯನ್ನೂ ಸಹ ಪಡೆಯಲಾಗಿದೆ. ಅಭಿವೃದ್ಧಿಯೂ ಮುಖ್ಯವಾಗಿದೆ. ಕಲ್ಲುಗಣಿಗಾರಿಕೆಯ ಸಂಬAಧ ಅನುಮತಿ ಪಡೆಯಲು ಸಲ್ಲಿಸಿರುವ ದಾಖಲಾತಿಗಳನ್ನು ಪರಿಶೀಲಿಸಿದ ನಂತರವೇ ಕಲ್ಲುಗಣಿಗಾರಿಕೆ ನಡೆಸುವ ಬಗ್ಗೆ ಚಿಂತಿಸಲಾಗುವುದು ಎಂದು ಜಯರಾಮ್ ಹೇಳಿದರು.
ನಾನು ರೈತರ ಪರವಾಗಿದ್ದೇನೆ. ಆದರೆ 2014 ರಿಂದಲೇ ಗಣಿಗಾರಿಕೆ ಸಂಬAಧ ಕಾಗದ ಪತ್ರಗಳ ವ್ಯವಹಾರ ನಡೆದಿದೆ. ಸರ್ಕಾರದ ಮಟ್ಟದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಹಾಗಾಗಿ ತಾವು ಅಸಹಾಯಕರಾಗಿರಬೇಕಾಯಿತು ಎಂದು ಶಾಸಕರು ಹೇಳಿದರು.
ಕ್ಷಮೆಯಾಚನೆ – ಕಳೆದ 21 ದಿನಗಳಿಂದಲೂ ರೈತಾಪಿಗಳು ಮಾಡುತ್ತಿರುವ ಹೋರಾಟ ರಾಜಕೀಯ ತಿರುವು ಪಡೆದಿತ್ತು. ಕಳೆದ 5 ದಿನಗಳಿಂದ ತಾಲೂಕು ಕಛೇರಿ ಮುಂಭಾಗ ಅಹೋರಾತ್ರಿ ಪ್ರತಿಭಟನೆಯನ್ನೂ ಸಹ ಮಾಡಲಾಗಿತ್ತು. ತಮ್ಮ ವಿರುದ್ಧವಾಗಿ ಕೆಲವರು ಪಿತೂರಿಯನ್ನೂ ಸಹ ಮಾಡಿದರು. ತಮ್ಮನ್ನು ವಿನಾಕಾರಣ ಕೆಟ್ಟಪದಗಳ ಬಳಕೆ ಮಾಡಿ ಮನಸ್ಸು ನೋಯಿಸಿದರು. ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಘೋಷಣೆ ಕೂಗಿಸಿದರು. ಆದರೂ ಸಹ ತಾವು ಮೌನಕ್ಕೆ ಶರಣಾಗಿದ್ದೆ. ಕಾನೂನಾತ್ಮಕವಾಗಿ ಹೋರಾಡಿ ನ್ಯಾಯಾಲಯದಿಂದ ತಡೆ ತರಬಹುದಿತ್ತು. ಆದರೆ ತಾವು ನ್ಯಾಯಾಲಯದ ಆದೇಶವಿಲ್ಲದೇ ಏಕಾಏಕಿ ನಿಲ್ಲಿಸಿದರೆ ಕಾನೂನಿನ ನಿಂದನೆಗೆ ಒಳಗಾಗುತ್ತಿದ್ದೆವು. ಹಾಗಾಗಿ ಇದರ ಸಾಧಕ ಭಾದಕಗಳನ್ನು ಗಮನಿಸಿ ಇಂದು ಕಲ್ಲುಗಣಿಗಾರಿಕೆ ನಿಲ್ಲಿಸುವಂತೆ ಸೂಚನೆ ನೀಡಿದ್ದೇನೆ. ಇದುವರೆಗೂ ರೈತರಿಗೆ ಆಗಿರುವ ನೋವಿಗೆ ತಾವು ವೈಯಕ್ತಿಕವಾಗಿ ಕ್ಷಮೆಯನ್ನೂ ಸಹ ಯಾಚಿಸುವುದಾಗಿ ಹೇಳಿದ ಶಾಸಕ ಮಸಾಲಾ ಜಯರಾಮ್ ರವರು ಶೀಘ್ರದಲ್ಲೇ ತಾವು ಗ್ರಾಮಗಳಿಗೆ ಭೇಟಿ ನೀಡಿ ಕಲ್ಲುಗಣಿಗಾರಿಕೆಯಿಂದ ತೊಂದರೆಗೆ ಈಡಾಗಿರುವ ಕುಟುಂಬಗಳ ಮನೆಗೆ ತೆರಳಿ ವಾಸ್ತವಾಂಶ ಅರಿಯುವುದಾಗಿ ಹೇಳಿದರು.
2 ಕೋಟಿ – ಕೋಳಘಟ್ಟ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಅಗತ್ಯವಿರುವ ರಸ್ತೆ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಸುಮಾರು 2 ಕೋಟಿ ವೆಚ್ಚದಲ್ಲಿ ನಡೆಸಲಾಗುವ ಕಾಮಗಾರಿಗೆ ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದೂ ಸಹ ಶಾಸಕರು ಹೇಳಿದರು.
ಶಾಸಕರ ಪತ್ರಿಕಾಗೋಷ್ಠಿಯ ವೇಳೆ ಬಿಜೆಪಿ ವಕ್ತಾರ ವಕೀಲ ಮುದ್ದೇಗೌಡ, ಹಿರಿಯ ಮುಖಂಡ ಕಡೇಹಳ್ಳಿ ಸಿದ್ದೇಗೌಡ, ವಿ.ಟಿ.ವೆಂಕಟರಾಮ್, ಮಲ್ಲಾಘಟ್ಟ ಹುಚ್ಚೇಗೌಡ, ಕಾಳಂಜೀಹಳ್ಳಿ ಸೋಮಶೇಖರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಕೋಳಘಟ್ಟದ ಕಲ್ಲು ಗಣಿ ಹಿನ್ನೆಲೆ
ತುರುವೇಕೆರೆ ತಾಲೂಕಿನ ಕೋಳಘಟ್ಟ ಗ್ರಾಮಕ್ಕೆ ಅತಿ ಸಮೀಪದಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಎರಡು ತಿಂಗಳ ಹಿಂದೆ ಅಲ್ಲಿ ಕಲ್ಲು ಗಣಿಗಾರಿಕೆಗೆ ಸಿಡಿಮದ್ದಿನ ತೆರೆದ ಸ್ಫೋಟ ನಡೆಯಿತು. ಊರಿಗೆ ಕೇವಲ 300 ಮೀಟರ್ ಸಮೀಪದಲ್ಲಿ ನಡೆಯತೊಡಗಿದ ಸ್ಫೋಟಕ್ಕೆ ಗ್ರಾಮಕ್ಕೆ ಗ್ರಾಮವೇ ಬೆಚ್ಚಿತು. ಆದರೆ ಅಧಿಕಾರಿಗಳು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಊರಿನಿಂದ ರಸ್ತೆಯಲ್ಲಿ ವಾಹನದಲ್ಲಿ ಸಾಗಿ ಎರಡು ಕಿಮೀ ದೂರವಿದೆ ಎಂದು ವರದಿ ನೀಡಿರುವುದರಿಂದ ಸರ್ಕಾರ ಅನುಮತಿ ನೀಡಿದೆ ಎನ್ನುತ್ತಾರೆ ಗ್ರಾಮಸ್ಥ ಮಲ್ಲಿಕಣ್ಣ.
ಸಾಮೂಹಿಕ ನಾಯಕತ್ವದಡಿ ಗ್ರಾಮಸ್ಥರು ಮೊದಲಿಗೆ ಮನವಿ ನೀಡಿದರು, ತಾಲೂಕು ಆಡಳಿತವನ್ನು ಆಗ್ರಹಪಡಿಸಿದರು, ಜಿಲ್ಲಾ ಕೇಂದ್ರಕ್ಕೆ ಹತ್ತು ಸಲ ಬಂದು ಮನವಿ ಸಲ್ಲಿಸಿ ಹೋದರು. ಆದರೆ ಕಲ್ಲು ಗಣಿಗಾರಿಕೆ ನಿಲ್ಲಲಿಲ್ಲ. ಕಡೆಗೆ ಅನಿವರ‍್ಯವಾಗಿ ತುರುವೇಕೆರೆ ತಾಲೂಕು ಕಚೇರಿಯಲ್ಲಿ ಐದು ದಿನಗಳಿಂದ ಜನ, ಜಾನುವಾರು ಸಹಿತ ಹಗಲಿರುಳೂ ಧರಣಿ ಕುಳಿತರು. ಸ್ಥಳಕ್ಕೆ ಎಸಿ ಬಂದು ಹೋದರೂ ಬಗ್ಗಲಿಲ್ಲ. ರಾಜಕೀಯ ಒತ್ತಡಗಳಿಗೆ ಜಗ್ಗಲಿಲ್ಲ.
ತುಮಕೂರು-ಶಿವಮೊಗ್ಗ ರಾಷ್ಟಿçÃಯ ಹೆದ್ದಾರಿ 206ರ ನಾಲ್ಕು ಪಥದ ಹೊಸ ರಸ್ತೆ ನಿರ್ಮಾಣದಲ್ಲಿ 14 ಕಿಮೀ ಉದ್ದಕ್ಕೆ ಅಗತ್ಯವಿರುವ ಜಲ್ಲಿ ಹಾಗೂ ಡಸ್ಟ್ ಪೂರೈಸಲು ಕೋಳಘಟ್ಟ ಗ್ರಾಮದ ಸರ್ವೆ ನಂ 55ರಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಸರ್ಕಾರ 26.11.2020ರಂದು ಅನುಮತಿ ನೀಡಿ ಆದೇಶ ಹೊರಡಿಸಿದೆ. ಜೊತೆಗೆ ಸರ್ವೆ ನಂ 52ರಲ್ಲಿ ಕ್ರಷರ್ ಸ್ಥಾಪನೆಗೆ ಐದು ಎಕರೆ ನೀಡಲಾಗಿದೆ. ಇದೇ ತಾಲೂಕಿನ ದಂಡಿನಶಿವರದ ವಿಶ್ವ ಎಂಟರ್‌ಪ್ರೆöÊಸಸ್ ಹಾಗೂ ಅಶೋಕ್ ಬಿಟ್ ಕಾನ್ ಎಂಬ ಸಂಸ್ಥೆಗಳು ಈ ಕಲ್ಲು ಗಣಿಯ ಫಲಾನುಭವಿಗಳು. ಹೆದ್ದಾರಿ ಮುಗಿಯುತ್ತ ಬಂದಿರುವಾಗ ಇಲ್ಲಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
120 ಮನೆಗಳ ಗ್ರಾಮಕ್ಕೆ ಕೇವಲ 300 ಕಿಮೀ ಸಮೀಪದಲ್ಲಿ ಗೋಮಾಳದಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಿರುವುದನ್ನು ಗ್ರಾಮಸ್ಥರು ವಿರೋಧಿಸಿದ್ದು, ಲೈಸನ್ಸ್ ರದ್ದುಪಡಿಸುವವರೆಗೆ ಹೋರಾಟ ನಿಲ್ಲದು ಎಂದು ಹೇಳಿದ್ದಾರೆ.