ರಸ್ತೆ ಸುರಕ್ಷತೆ ಪಾಲನೆಯಿಂದ ಅಪಘಾತ ತಪ್ಪಿಸಬಹುದು: ರಾಘವೇಂದ್ರ ಶೆಟ್ಟಿಗಾರ್
Jd. Raghavendra shettigar
ರಸ್ತೆ ಸುರಕ್ಷತೆ ಪಾಲನೆಯಿಂದ ಅಪಘಾತ
ತಪ್ಪಿಸಬಹುದು: ರಾಘವೇಂದ್ರ ಶೆಟ್ಟಿಗಾರ್
ತುಮಕೂರು: ವಾಹನ ಸವಾರು ರಸ್ತೆ ಸುರಕ್ಷತಾ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿದರೆ ಅರ್ಧದಷ್ಟು ಅಪಘಾತಗಳನ್ನು ತಡೆಯಬಹುದಲ್ಲದೆ, ಅಮೂಲ್ಯ ಮಾನವ ಸಂಪತ್ತನ್ನು ಉಳಿಸಬಹುದಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದ್ದಾರೆ.
ನಗರದ ಆರ್.ಟಿ.ಓ. ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪ್ಯಾನ್ ಇಂಡಿಯಾ ಕಾನೂನು ಅರಿವು ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಮೋಟಾರು ವಾಹನ ಅಧಿನಿಯಮದ ಬಗ್ಗೆ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಪೊಲೀಸರಿಗೆ ಹೆದರಿ ಹೆಲ್ಮೆಟ್ ಧರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕೆಂದರು.
ಒAದು ವಾಹನ ಚಲಾಯಿಸುವ ವ್ಯಕ್ತಿಯ ಬಳಿ, ವಾಹನದ ನೋಂದಣಿ, ವಾಹನ ಚಾಲನಾ ಪರವಾನಗಿ, ವಾಹನದ ವಿಮೆ ಹೀಗೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಜೊತೆಗೆ ದ್ವಿಚಕ್ರವಾದಲ್ಲಿ ತಲೆಗೆ ಹೆಲ್ಮೆಟ್, ನಾಲ್ಕು ಚಕ್ರದ ವಾಹನವಾಗಿದ್ದಲ್ಲಿ, ಸೀಟ್‌ಬೆಲ್ಟ್ ಕಡ್ಡಾಯವಾಗಿರುತ್ತದೆ. ಇವುಗಳಲ್ಲಿ ಒಂದು ಇಲ್ಲವೆಂದರೂ ಸಹ ಅಪಘಾತ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗುವ ಕುಟುಂಬಕ್ಕೆ ವಾಹನದ ಮಾಲೀಕನೇ ಪರಿಹಾರ ಭರಿಸಬೇಕಾಗುತ್ತದೆ. ಹಾಗಾಗಿ ಅಪ್ರಾಪ್ತರಿಗೆ ವಾಹನ ನೀಡುವ ಮೊದಲು, ದ್ವಿಚಕ್ರ ವಾಹನದಲ್ಲಿ ಮೂರು ಜನರು ಕುಳಿತು ಕೊಳ್ಳುವ ಮೊದಲು ನೂರಾರು ಬಾರಿ ಯೋಚಿಸಬೇಕಾಗಿದೆ. ಮುಂದೆ ಒದಗಬಹುದಾದ ಕಾನೂನು ತೊಡಕುಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವುದು ಅನಿವಾರ್ಯ ಎಂದು ನ್ಯಾ. ರಾಘವೇಂದ್ರ ಶೆಟ್ಟಿಗಾರ್ ನುಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ರಾಜು ಮಾತನಾಡಿ, ಸಾರಿಗೆ ನಿಯಮಗಳ ಬಗ್ಗೆ ನಾವು ತಿಳಿದುಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ನಾವು ತಪ್ಪು ಮಾಡದಂತೆ ವಾಹನ ಚಲಾಯಿಸಲು ಸಾಧ್ಯವಾಗುತ್ತದೆ. ಹಾಗಾಗಿ ಮೊದಲು ಸಾರಿಗೆ ನಿಯಮಗಳ ಬಗ್ಗೆ ಎಲ್ಲರೂ ಓದಿ ತಿಳಿಯಬೇಕಾಗಿದೆ. ಯುವಜನರಿಗೆ ಮೋಟಾರು ತರಬೇತಿ ಸಂಸ್ಥೆಗಳು ಎಲ್ಲಾ ರೀತಿಯ ಸನ್ನೆ, ಸಂಚಾರಿ ನಿಯಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕಾಗಿದೆ. ಇಲ್ಲದಿದ್ದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲರೂ ಇತ್ತ ಗಮನಹರಿಸುವಂತೆ ಸಲಹೆ ನೀಡಿದರು.
ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಬಾರೀಗಿಡದ, ಮೋಟಾರು ವಾಹನ ನಿರೀಕ್ಷಕ ಸದ್ರುಲ್ಲಾ ಷರೀಫ್ ಅವರುಗಳು ಮೋಟಾರು ವಾಹನ ಕಾಯ್ದೆಗಳ ಕುರಿತು ವಿವರವಾದ ಮಾಹಿತಿಯನ್ನು ಸಾರ್ವಜನಿಕರಿಗೆ ಮತ್ತು ಮೋಟಾರು ತರಬೇತಿ ಶಾಲೆಗಳ ಸಿಬ್ಬಂದಿಗೆ ನೀಡಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಕಾಂಪೋಸ್ಟ್ ನಿಗಮದ ಸದಸ್ಯರಾದ ಟಿ.ಆರ್. ಸದಾಶಿವಯ್ಯ, ಟೂಡಾ ಸದಸ್ಯ ಹಾಗೂ ಮೋಟಾರು ವಾಹನ ಚಾಲನಾ ತರಬೇತಿ ಶಾಲೆಗಳ ಸಂಘದ ಅಧ್ಯಕ್ಷ ಶಿವಕುಮಾರ್, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧೀಕ್ಷಕರುಗಳಾದ ದೇವರಾಜು ಮತ್ತು ಮಮತ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.