ಬೀದಿ ನಾಯಿ ಕಚ್ಚಿ ಹಲವರಿಗೆ ಗಾಯ, ಹೆಚ್ಚಿದ ಆತಂಕ ಆರೋಗ್ಯಾಧಿಕಾರಿ ವಿರುದ್ಧ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಗರಂ

ಬೀದಿ ನಾಯಿ ಕಚ್ಚಿ ಹಲವರಿಗೆ ಗಾಯ, ಹೆಚ್ಚಿದ ಆತಂಕ
ಆರೋಗ್ಯಾಧಿಕಾರಿ ವಿರುದ್ಧ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಗರಂ
ತುಮಕೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗುತ್ತಿದೆ. ಬೀದಿ ನಾಯಿಗಳು ಕಚ್ಚಿ ಹಲವರು ಗಾಯಗೊಂಡಿರುವ ಘಟನೆಗಳು ಮರುಕಳಿಸುತ್ತಿವೆ. ಇದು ನಗರದ ನಾಗರಿಕರಲ್ಲಿ ಆತಂಕ ಹೆಚ್ಚಿಸುತ್ತಿದೆ.
ಉಪ್ಪಾರಹಳ್ಳಿಯಲ್ಲಿ ನಾಲ್ವರಿಗೆ ಕಚ್ಚಿದ ಬೀದಿನಾಯಿ
ನಗರದ ಉಪ್ಪಾರಹಳ್ಳಿಯ (೨೪ ನೇ ವಾರ್ಡ್) ಚನ್ನಬಸವೇಶ್ವರ ಬಡಾವಣೆಯ ೬ ನೇ ಕ್ರಾಸ್‌ನಲ್ಲಿ ಸೆ.೧೬ ರಂದು ಬೆಳಗ್ಗೆ ಬೀದಿ ನಾಯಿ ಕಚ್ಚಿ ನಾಲ್ವರು ಗಾಯಗೊಂಡಿದ್ದಾರೆ.
೮ ವರ್ಷ ವಯಸ್ಸಿನ ಅಜಯ್ ಎಂಬ ಬಾಲಕ ಶಾಲೆಗೆ ತೆರಳಲೆಂದು ಮನೆಯ ಹೊರಗೆ ಬರುತ್ತಿದ್ದಂತೆ ಬೀದಿ ನಾಯಿಯೊಂದು ದಾಳಿ ನಡೆಸಿ, ಆತನ ಕಾಲಿನ ಮೀನಖಂಡವನ್ನು ಬಲವಾಗಿ ಕಚ್ಚಿದೆ. ಅಲ್ಲೇ ಸಮೀಪ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದ ಓರ್ವ ಪೌರಕಾರ್ಮಿಕನಿಗೂ ಇದೇ ನಾಯಿ ಕಚ್ಚಿ ಪರಾರಿಯಾಗಿದೆ. ಪಕ್ಕದ ಆಟೋ ಸರ್ಕಲ್‌ನಲ್ಲಿ ಇಬ್ಬರು ದಾರಿಹೋಕರ ಮೇಲೆ ಸದರಿ ನಾಯಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆ. ಈ ಘಟನೆಯು ಉಪ್ಪಾರಹಳ್ಳಿ ಭಾಗದ ನಾಗರಿಕರಲ್ಲಿ ತೀವ್ರ ಆತಂಕ ಮೂಡಿಸಿತು. ವಾರ್ಡ್ ಕಾರ್ಪೊರೇಟರ್ ಶಿವರಾಂ ಈ ಘಟನೆ ಬಗ್ಗೆ ಕಳವಳÀ ವ್ಯಕ್ತಪಡಿಸುತ್ತ, ನಮ್ಮ ವಾರ್ಡ್ ತುಂಬ ಬೀದಿನಾಯಿಗಳು ಮತ್ತು ಹಂದಿಗಳ ಹಾವಳಿ ಅಧಿಕವಾಗಿದೆ ಎಂದು ದೂರಿದ್ದಾರೆ.
ಆರೋಗ್ಯಾಧಿಕಾರಿ ವಿರುದ್ಧ ಗರಂ
ಈ ವಿಷಯ ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೆ.೧೬ ರಂದು ಬೆಳಗ್ಗೆ ಪ್ರತಿಧ್ವನಿಸಿತು. ಜೊತೆಗೆ ನಗರದ ವಿವಿಧ ಪ್ರದೇಶಗಳಲ್ಲಿ ಬೀದಿನಾಯಿಯು ಜನರಿಗೆ ಕಚ್ಚಿರುವ ಸಂಗತಿಯೂ ಪ್ರಸ್ತಾಪವಾಯಿತು. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ರಕ್ಷಿತ್ ವಿರುದ್ಧ ಗರಂ ಆದರು.
“ನಗರದಲ್ಲಿ ದಿನೇ ದಿನೇ ಬೀದಿ ನಾಯಿಗಳು ಮತ್ತು ಹಂದಿಗಳ ಹಾವಳಿ ಹೆಚ್ಚುತ್ತಿದೆ. ಸದಸ್ಯರುಗಳು ಪ್ರತಿ ಸಭೆಯಲ್ಲೂ ಈ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪಾಲಿಕೆಯ ಆರೋಗ್ಯಾಧಿಕಾರಿ ಸುಳ್ಳು ಮಾಹಿತಿ ಕೊಡುತ್ತ ಕಾಲ ನೂಕುತ್ತಿದ್ದಾರೆ. ಮೂರು ತಿಂಗಳುಗಳೊಳಗೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವುದಾಗಿ ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಘೋಷಿಸಿದ್ದರು. ಆದರೆ ಈವರೆಗೆ ಏನೂ ಪ್ರಯೋಜನ ಆಗಿಲ್ಲ. ಬೀದಿನಾಯಿ ಮತ್ತು ಹಂದಿ ಹಾವಳಿ ಬಗ್ಗೆ ಜನರು ದಿನವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಾಲಿಕೆಯ ಆಯುಕ್ತರಾದಿಯಾಗಿ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನಹರಿಸುತ್ತಿಲ್ಲ” ಎಂದು ಸೈಯದ್ ನಯಾಜ್ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ್ದಾರೆ.
“ಬೀದಿನಾಯಿಗಳನ್ನು ಹಿಡಿದು ನಿಯಮದ ಪ್ರಕಾರ ಎ.ಬಿ.ಸಿ. ಮಾಡಿಸಲು ಅನುಕೂಲವಾಗುವಂತೆ ಅಜ್ಜಗೊಂಡನಹಳ್ಳಿಯ ಘನತ್ಯಾಜ್ಯ ಘಟಕದಲ್ಲಿ ಒಂದು ಎಕರೆ ಜಾಗ ಬಳಸಿಕೊಳ್ಳಲು ನಾವು ಒಪ್ಪಿದ್ದೇವೆ. ಸದರಿ ಬೀದಿನಾಯಿಗಳಿಗೆ ಅಲ್ಲಿರುವಷ್ಟೂ ಅವಧಿಯಲ್ಲಿ ಆಹಾರ ಒದಗಿಸಬಹುದೆಂಬ ಸಲಹೆಯನ್ನೂ ನೀಡಿದ್ದೇವೆ. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ನಿರ್ಲಕ್ಷö್ಯ ತಾಳಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
೧ ತಿಂಗಳಿನಲ್ಲಿ ಸುಮಾರು ೨೦ ಜನರಿಗೆ ಗಾಯ
ನಗರದ ೮ (ಪಿ.ಜಿ.ಲೇಔಟ್), ೯ (ವೀರಸಾಗರ), ೧೦ (ಲೇಬರ್ ಕಾಲೋನಿ) ಮತ್ತು ೧೪ (ವಿನಾಯಕ ನಗರ) ನೇ ವಾರ್ಡ್ಗಳಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಒಟ್ಟು ಸುಮಾರು ೨೦ ಜನರಿಗೆ ಬೀದಿ ನಾಯಿಗಳು ಕಚ್ಚಿ ಗಾಯವಾಗಿವೆ ಎಂಬುದನ್ನು ಇದೇ ಸಂದರ್ಭದಲ್ಲಿ ಸೈಯದ್ ನಯಾಜ್ ಅವರು ಬಹಿರಂಗಪಡಿಸುತ್ತ, ತೀವ್ರ ಆತಂಕ ವ್ಯಕ್ತಪಡಿಸಿದರು.
ಪಿ.ಜಿ. ಲೇಔಟ್‌ನಲ್ಲಿ ಸೆ.೧೫ ರಂದು ಸರಿಸುಮಾರು ೧೦-೧೨ ವರ್ಷ ವಯೋಮಾನದ ನಾಲ್ಕು ಮಕ್ಕಳಿಗೆ ಬೀದಿನಾಯಿಗಳು ಕಚ್ಚಿ ಗಾಯಗೊಳಿಸಿದ್ದು, ಇಲ್ಲಿನ ಜನರು ಭಯಭೀತರಾಗಿದ್ದಾರೆ. ಇದೇ ರೀತಿ ಕೆ.ಹೆಚ್.ಬಿ. ಕಾಲೋನಿಯ ರಾಯಲ್ ಪ್ಯಾಲೇಸ್ ಹತ್ತಿರ ನಾಲ್ಕು ದಿನಗಳ ಹಿಂದೆ ಸುಮಾರು ೧೨ ವರ್ಷ ವಯಸ್ಸಿನ ಇಬ್ಬರು ಬಾಲಕರಿಗೆ ಬೀದಿ ನಾಯಿಗಳು ಕಚ್ಚಿರುವ ಘಟನೆ ನಡೆದಿದೆಯೆಂಬುದನ್ನೂ ಸೈಯದ್ ನಯಾಜ್ ಉಲ್ಲೇಖಿಸಿದರು.
ಒಂದೇ ದಿನ ಒಂದೇ ನಾಯಿ ೩೦ ಜನರಿಗೆ ಕಚ್ಚಿ ಗಾಯ
ನಗರದ ಶಿರಾಗೇಟ್ ಹೊರವಲಯದ ೧ ನೇ ವಾರ್ಡ್ ವ್ಯಾಪ್ತಿಯ ರಂಗಾಪುರ ಸುತ್ತಮುತ್ತ ಕಳೆದ ೨೦ ದಿನಗಳ ಹಿಂದೆ ಒಂದೇ ದಿನದಂದು ಒಂದೇ ಬೀದಿ ನಾಯಿಯು ಸುಮಾರು ೩೦ ಜನರಿಗೆ ಕಚ್ಚಿಗಾಯಗೊಳಿಸಿತೆಂಬ ಆತಂಕಕಾರಿ ಘಟನೆಯನ್ನು ಅಲ್ಲಿನ ಮಾಜಿ ಕಾರ್ಪೊರೇಟರ್ ಇಂದ್ರಕುಮಾರ್ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆತಂಕದಿAದ ಪ್ರಸ್ತಾಪಿಸಿದರು.
ಮನೆಯ ಹೊಸ್ತಿಲಿನಲ್ಲಿದ್ದ ಎರಡು ವರ್ಷದ ಮಗುವಿಗೂ ಈ ನಾಯಿ ಕಚ್ಚಿ ಗಾಯಗೊಳಿಸಿತ್ತೆಂಬುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದ ಸಂಗತಿಯಾಗಿದೆ.
ಈ ಬೆಳವಣಿಗೆಗಳಿಂದ ರೊಚ್ಚಿಗೆದ್ದ ಅಲ್ಲಿನ ನಾಗರಿಕರು ಆಕ್ರೋಶದಿಂದ ಸದರಿ ನಾಯಿಯನ್ನು ಹೊಡೆದು ಸಾಯಿಸಿದ್ದಾರೆನ್ನಲಾಗಿದೆ.
ನಗರದ ೨೫ ನೇ ವಾರ್ಡ್ ವ್ಯಾಪ್ತಿಯ ಸೋಮೇಶ್ವರ ಪುರಂನಲ್ಲೂ ಈಚೆಗೆ ಓರ್ವರಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ.
ತುರ್ತುಸಭೆಗೆ ತೀರ್ಮಾನ
ಬೀದಿನಾಯಿಗಳಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಹಾಗೂ ಅದರ ಜೊತೆಯಲ್ಲೇ ನಗರಾದ್ಯಂತ ಕಾಡುತ್ತಿರುವ ಹಂದಿಹಾವಳಿ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸುವ ಸಲುವಾಗಿ ಆರೋಗ್ಯ ಸ್ಥಾಯಿ ಸಮಿತಿಯ ತುರ್ತು ಸಭೆಯನ್ನು ಸೆ.೨೦ ರಂದು ಬೆಳಗ್ಗೆ ನಡೆಸಲು ಅಧ್ಯಕ್ಷ ಸೈಯದ್ ನಯಾಜ್ ತೀರ್ಮಾನಿಸಿ, ಮುಂದಿನ ಪ್ರಕ್ರಿಯೆಗೆ ಆರೋಗ್ಯಶಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.