ಇರೋ ನೀರು ಪಡೆಯಲು ತಾಕತ್ತಿಲ್ಲದೆ ಅಡ್ಡಗಾಲು ಗೌರಿಶಂಕರ್ ವಿರುದ್ಧ ಸುರೇಶ್‌ ಗೌಡ ವಾಗ್ದಾಳಿ

ಇರೋ ನೀರು ಪಡೆಯಲು ತಾಕತ್ತಿಲ್ಲದೆ ಅಡ್ಡಗಾಲು ಗೌರಿಶಂಕರ್ ವಿರುದ್ಧ ಸುರೇಶ್‌ ಗೌಡ ವಾಗ್ದಾಳಿ


ಇರೋ ನೀರು ಪಡೆಯಲು ತಾಕತ್ತಿಲ್ಲದೆ ಅಡ್ಡಗಾಲು
ಗೌರಿಶಂಕರ್ ವಿರುದ್ಧ ಸುರೇಶ್‌ ಗೌಡ ವಾಗ್ದಾಳಿ


ತುಮಕೂರು: ಇರುವ ನೀರು ಹರಿಸಿಕೊಳ್ಳುವ ತಾಕತ್ತು ಇಲ್ಲದ ಶಾಸಕ ಗೌರಿಶಂಕರ್ ಕ್ಷೇತ್ರಕ್ಕೆ ಕಷ್ಟ ಬಿದ್ದು ದಶಕಗಳ ಕಾಲದ ಹೋರಾಟದಿಂದ ಮಂಜೂರಾಗಿರುವ ಯೋಜನೆಗೂ ಅಡ್ಡಗಾಲು ಹಾಕಲು ಹೊರಟಿರುವುದು ಕ್ಷೇತ್ರದ ದುರಾದೃಷ್ಟ  ಎಂದು  ಬಿ. ಸುರೇಶ್‌ ಗೌಡ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲೋ ಇದ್ದ ಗಿರಾಕಿಗೆ ಹೇಮಾವತಿ ನದಿ ನೀರಿಗಾಗಿ ಇಲ್ಲಿನ ಜನರು ಮಾಡಿರುವ ಹೋರಾಟ, ತಿಂದಿರುವ ಪೊಲೀಸ್ ಏಟುಗಳು ಹೇಗೆ ಗೊತ್ತಾಗಬೇಕು. ವಿಪರೀತ ಮಳೆಯಿಂದಾಗಿ ಹೇಮಾವತಿ ನೀರು ಇಷ್ಟು ವರ್ಷಗಳ ಅವಧಿಯಲ್ಲಿ ಜಿಲ್ಲೆಗೆ ಅತಿ ಹೆಚ್ಚಾಗಿ ಹರಿದಿದೆ. ಇಂತಹ ಸುಭಿಕ್ಷೆಯ ಕಾಲದಲ್ಲೂ ಗ್ರಾಮಾಂತರ ಕ್ಷೇತ್ರಕ್ಕೆ ಹಂಚಿಕೆಯಾಗಿರುವಷ್ಟು ಹೇಮಾವತಿ ನೀರನ್ನು ಬಿಡುವಂತೆ ಕೇಳದಷ್ಟು ನರಸತ್ತ ಶಾಸಕರಾಗಿದ್ದಾರೆ ಎಂದು ಟೀಕಿಸಿದ ಅವರು, ನಾನು ಅಧಿಕಾರದಲ್ಲಿದ್ದರೆ ರಕ್ತ ಕೊಟ್ಟಾದರೂ ನೀರು ಹರಿಸುತ್ತಿದ್ದೆ ಎಂದರು.
ಹೇಮಾವತಿ ನದಿ ನೀರು ಹರಿಸದಂತೆ ಅಧಿಕಾರಿಗಳಿಗೆ ಹೇಳಿರುವ ವಿಡಿಯೊ ವೈರಲ್ ಆಗಿರುವುದು ಈಗ ಜಗ್ಗಾಜಾಹೀರಾಗಿದೆ. ಕೊಟ್ಟಿರುವ ನೀರನ್ನು ಬಿಡಿಸಿಕೊಳ್ಳಪ್ಪ ಅಂದರೆ ಬೇರೇನೋ ಮಾತನಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
ಹೇಮಾವತಿ ನದಿ ನೀರು ಕ್ಷೇತ್ರಕ್ಕೆ ಹರಿಯುವುದು ಅವರಿಗೆ ಬೇಕಿಲ್ಲ. ಹೀಗಾಗಿಯೇ ಯೋಜನೆಯೇ ಅವೈಜ್ಞಾನಿಕ ಎಂದು ನೀರು ಬಿಡದಂತೆ ಅವರೇ ತಡೆಯುತ್ತಿದ್ದಾರೆ. ಶಾಸಕರ ಪರೋಕ್ಷ ಬೆಂಬಲ, ತೆರೆಮರೆಯ ಕುತಂತ್ರದ ಕಾರಣದಿಂದಲೇ ಕ್ಷೇತ್ರಕ್ಕೆ ನೀರು ಹರಿಸದಿರಲು ಕಾರಣವೇ ಹೊರತು ಬೇರೇನು ಅಲ್ಲ. ಇಲ್ಲದಿದ್ದರೆ ಇಷ್ಟು ನೀರಿದ್ದರೂ ನೀರು ಹರಿಸದಿರಲು ಇನ್ನೇನು ಕಾರಣ ಎಂದು ಪ್ರಶ್ನಿಸಿದ್ದಾರೆ.
ತಾಲ್ಲೂಕಿಗೆ ಹಂಚಿಕೆಯಾಗಿರುವಷ್ಟು ನೀರು ಬಿಡುವಂತೆ ಒತ್ತಾಯಿಸುವ ಬದಲು ನನ್ನ ಮೇಲೆ ಗೂಬೆ ಕೂರಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ಬಂದಿರುವ ಯೋಜನೆಯನ್ನು ಅವೈಜ್ಞಾನಿಕ, ನೀರು ಬೇಡ ಎಂದು ಹೇಳುತ್ತಿರುವ ಇಂತಹ ಶಾಸಕನನ್ನು ನಾನು ಇಡೀ ರಾಜ್ಯದಲ್ಲಿ ನಾನು ನೋಡಿಲ್ಲ.
ಪಕ್ಕದ ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ಕೆರೆಗಳು ಹೇಮಾವತಿ ನದಿ ನೀರಿನಿಂದ ತುಂಬಿ ಕಂಗೊಳಿಸುತ್ತಿವೆ. ನಮ್ಮ ಕ್ಷೇತ್ರದ ಕೆರೆಗಳು ಖಾಲಿ ಇರುವುದನ್ನು ಕಂಡರೆ ನೋವಾಗುತ್ತದೆ. ಯೋಜನೆ ಅವೈಜ್ಞಾನಿಕ ಅಲ್ಲ. ಶಾಸಕರಿಗೆ ತಿಳುವಳಿಕೆ ಇಲ್ಲದಿದ್ದರೆ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಹಂಚಿಕೆ ಹೇಗೆ ಮಾಡುತ್ತಾರೆ ಎಂಬುದನ್ನು ದೇವೇಗೌಡರ ಬಳಿ ಹೋಗಿ ತಿಳಿದುಕೊಂಡು ಬರಲಿ. ಹಾಗೆಯೇ ಸರಿಯಾಗಿ ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ತುಮಕೂರಿಗೆ ಹರಿಸಿದ್ದರೆ ತುಮಕೂರು ಗ್ರಾಮಾಂತರದ ಎಷ್ಟು ಕೆರೆಗಳು ತುಂಬುತ್ತಿದ್ದವು ಎಂಬುದನ್ನು ತಿಳಿದುಕೊಂಡು ಬಂದು ಇಲ್ಲಿ ಮಾತನಾಡಲಿ ಎಂದರು.
ಹೇಮಾವತಿ ನೀರು ಬಿಡಿಸಲು ತಾಕತ್ ಇಲ್ಲದಿದ್ದರೆ ರಾಜೀನಾಮೆ ನೀಡಲಿ. ನೀರು ಬಿಡಿಸುವ ಯೋಗ್ಯತೆ ಇಲ್ಲದವರಿಗೆ ಶಾಸಕ ಸ್ಥಾನ ಏಕೆ ಬೇಕು ಎಂದು ಖಾರವಾಗಿ ಪ್ರಶ್ನಿಸಿದರು.