ಹಲ್ಲೆ  ಆರೋಪಿಗಳನ್ನು ಬಂಧಿಸಿದ್ದರೂ ಬಂದ್ ಯಾರ ಪುರುಷಾರ್ಥಕ್ಕೆ: ಡಾ. ರಫೀಕ್ ಅಹ್ಮದ್

ಹಲ್ಲೆ  ಆರೋಪಿಗಳನ್ನು ಬಂಧಿಸಿದ್ದರೂ ಬಂದ್ ಯಾರ ಪುರುಷಾರ್ಥಕ್ಕೆ: ಡಾ. ರಫೀಕ್ ಅಹ್ಮದ್

ಹಲ್ಲೆ  ಆರೋಪಿಗಳನ್ನು ಬಂಧಿಸಿದ್ದರೂ
ಬಂದ್ ಯಾರ ಪುರುಷಾರ್ಥಕ್ಕೆ: ಡಾ. ರಫೀಕ್ ಅಹ್ಮದ್


ತುಮಕೂರು: ಕೆಲ ದಿನಗಳ ಹಿಂದೆ ಗುಬ್ಬಿ ಗೇಟ್‌ನಲ್ಲಿ ಯುವಕರ ನಡುವೆ ಜಗಳದಲ್ಲಿ ಭಾಗಿಯಾಗಿದ್ದ ಎಲ್ಲ ತಪ್ಪಿತಸ್ಥರ ವಿರುದ್ಧ 307 ಸೆಕ್ಷನ್ ವಿಧಿಸಿ, ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ. ಆದರೂ ತುಮಕೂರು ನಗರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಹಾಲಿ ಶಾಸಕರು ಬಂದ್‌ಗೆ ಬೆಂಬಲ ನೀಡಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಡಾ. ರಫೀಕ್ ಅಹ್ಮದ್ ಪ್ರಶ್ನಿಸಿದ್ದಾರೆ.
ನಗರದ ಹಾಲಿ ಶಾಸಕರು ವೀಲಿಂಗ್ ಮಾಡುವವರನ್ನು ಗುಂಡಿಕ್ಕಿ ಎಂದು ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡನೀಯ. ಈ ನಿಮ್ಮ ಹೇಳಿಕೆಯಿಂದ ಸಂವಿಧಾನಕ್ಕೆ ಧಕ್ಕೆಯಾಗಿದೆ. ಸಂವಿಧಾನದ ನಿಯಮದಡಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೀವು ಸಂವಿಧಾನ ವಿರೋಧಿ ಹೇಳಿಕೆ ನೀಡುವುದು ನಿಮ್ಮ ಶಾಸಕ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.
ವೀಲಿಂಗ್ ಮಾಡುವುದು ತಪ್ಪು. ಅದಕ್ಕೆ ನಮ್ಮ ವಿರೋಧವೂ ಇದೆ. ವೀಲಿಂಗ್ ವಿರುದ್ಧ ಕ್ರಮ ವಹಿಸುವ ಕೆಲಸ ಪೋಲಿಸ್ ಇಲಾಖೆ ಮಾಡುತ್ತಿದೆ. ಆದರೆ ವೀಲಿಂಗ್ ಮಾಡುವವರನ್ನು ಗುಂಡಿಕ್ಕಿ ಎಂಬ ಹೇಳಿಕೆ ನೀಡುವ ಮೂಲಕ ನೈತಿಕ ಪೋಲಿಸ್‌ಗಿರಿ ಮಾಡಿ ಸಮಾಜದ ಶಾಂತಿ ಕದಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಯ ಮೆರವಣಿಗೆಯನ್ನು ಕೊರೊನಾ ನಿಯಮಾವಳಿಗಳ ಅನುಸಾರವಾಗಿ ನಿಷೇಧಿಸಿದ್ದನ್ನು ಎರಡೂ ಸಮುದಾಯದವರು ಒಪ್ಪಿ ಸರ್ಕಾರದ ನಿಯಮಗಳನ್ನು ಸ್ವಾಗತಿಸಿ ಸರಳ ಆಚರಣೆ ಮಾಡುವ ಮೂಲಕ ಕೊರೊನಾ ತಡೆಗಟ್ಟಲು ಕೈಜೋಡಿಸಿದ್ದಾರೆ. ಆದರೆ ನಿನ್ನೆ ನಡೆದ ಬಂದ್ ವೇಳೆ ಪ್ರತಿಭಟನೆ ಮಾಡುವುದಾಗಿ ಮಾತ್ರ ಒಪ್ಪಿಗೆ ಪಡೆದಿದ್ದ ಸಂಘಟನೆಗಳು ಕೊನೆ ಘಳಿಗೆಯಲ್ಲಿ ಮೆರವಣಿಗೆ ಮಾಡಲು ತೀರ್ಮಾನಿಸಿದ್ದಾರೆ. ಈ ವೇಳೆ ಈ ಸಂಘಟನೆಗಳಿಗೆ ತಿಳಿ ಹೇಳುವ ಬದಲು ಖುದ್ದು ಶಾಸಕರೇ ಮೆರವಣಿಗೆಗೆ ಪ್ರೋತ್ಸಾಹಿಸಿರುವ ಮೂಲಕ ಕೋವಿಡ್ ನಿಯಮಾವಳಿ ಪಾಲಿಸದೆ ತಮ್ಮ ಅರಾಜಕತೆ ಮೆರಿದಿದ್ದಾರೆ ಎಂದು ಮಾಜಿ ಶಾಸಕರು ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಈ ಹಿಂದೆ ದಲಿತರ ಹಾಗೂ ಹಿಂದುಳಿದವರ ಮೇಲೆ ಹಲ್ಲೆಗಳಾದಾಗ ಈ ಸಂಘಟನೆಗಳು ಎಲ್ಲಿ ಅಡಗಿದ್ದವು ಎಂದು ಪ್ರಶ್ನಿಸಿರುವ ರಫೀಕ್ ಅಹಮದ್, ಕೇವಲ ಇವರ ಸಂಘಟನೆಯಲ್ಲಿರುವವರು ಮಾತ್ರ ಹಿಂದೂಗಳೇ, ದಲಿತರು, ಹಿಂದುಳಿದವರು ಹಿಂದೂಗಳಲ್ಲವೇ ಎಂದು ಪ್ರಶ್ನಿಸಿದ್ದಾರೆ.
ತುಮಕೂರು ನಗರ ಹಲವು ವರ್ಷಗಳಿಂದ ಶಾಂತಿಯುತ ವಾತಾವರಣದಿಂದ ಕೂಡಿದೆ. ಹಿಂದೂ ಮುಸ್ಲಿಂ ಸಮುದಾಯದವರು ಸೌಹಾರ್ದಯುತವಾಗಿ ಬಾಳಿಕೊಂಡು ಬಂದಿದ್ದಾರೆ. ಕೋವಿಡ್‌ನಿಂದ ಮೃತಪಟ್ಟ ಹಿಂದೂ ಮೃತದೇಹಗಳನ್ನು ಮುಸ್ಲಿಂ ಯುವಕರು ಅಂತ್ಯಸAಸ್ಕಾರ ಮಾಡಿದ್ದಾರೆ. ಹಾಗೂ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದ ಅಲ್ಪಸಂಖ್ಯಾತ ಕುಟುಂಬಗಳಿಗೆ ಹಿಂದೂ ಯುವಕರು ಆಹಾರ ಪೂರೈಕೆ ಮಾಡುವ ಕೆಲಸ ಮಾಡಿದ್ದಾರೆ.
ಇಂತಹ ಸೌಹಾರ್ದಯುತ ನಗರದಲ್ಲಿ ಇದಾವುದನ್ನೂ ಲೆಕ್ಕಿಸದೇ ಕೋಮುಭಾವನೆ ಕೆರಳಿಸುವ ಭಾಷಣ ಮಾಡುತ್ತಾ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮೆರವಣಿಗೆ ಮಾಡಿರುವ ಈ ಸಂಘಟನೆಯ ಮುಖಂಡರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಿ ಕೇಸ್ ದಾಖಲಿಸಿ ಎಂದು ಮಾಜಿ ಶಾಸಕರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಜನರು ಸಂಕಷ್ಟದಲ್ಲಿರುವಾಗ ಜವಾಬ್ದಾರಿಯುತ ಶಾಸಕರು ಇಂತಹ ಘಟನೆಗಳನ್ನು ನಿಯಂತ್ರಿಸುವ ಬದಲು ಪ್ರೋತ್ಸಾಹಿಸಿರುವುದು ಶಾಸಕ ಸ್ಥಾನಕ್ಕೆ ಮಾಡಿದ ಅವಮಾನವಾಗಿದೆ. ಇಂತಹ ಪ್ರತಿಭಟನೆ, ಬಂದ್‌ಗಳಿಗೆ ಪ್ರೇರೇಪಿಸಿ ಕೇವಲ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವುದಕ್ಕೆ ಕ್ಷಮೆ ಯಾಚಿಸಬೇಕು ಎಂದು ತಿಳಿಸಿದ್ದಾರೆ.
ಗುಬ್ಬಿಗೇಟ್‌ನಲ್ಲಿ ನಡೆದಂತಹ ಘಟನೆಗಳು ನಡೆದಾಗ ಎರಡೂ ಸಮುದಾಯದವರೊಂದಿಗೆ ಶಾಂತಿ ಸಭೆ ನಡೆಸಿ ಎಲ್ಲಾ ಸಮುದಾಯಗಳನ್ನು ಮತ್ತು ಜಾತಿಗಳನ್ನು ಅನ್ಯೋನ್ಯವಾಗಿ ಕಾಣುವುದು ಶಾಸಕರ ಜವಾಬ್ದಾರಿ. ಅದನ್ನು ಬಿಟ್ಟು ಹಾಲಿ ಶಾಸಕರು ಸೋಲಿನ ಭೀತಿಯಿಂದ ಮುಂದಿನ ಚುನಾವಣೆಗಾಗಿ ಮತಗಳ ಕ್ರೋಢೀಕರಣಕ್ಕಾಗಿ ಕೇವಲ ಒಂದು ಸಮುದಾಯದ ಓಲೈಕೆಗೆ ಮುಂದಾಗಿ ಇಂತಹ ಕೃತ್ಯಗಳನ್ನು ಮಾಡಲು ಹೊರಟಿರುವುದು ಜನಸಾಮಾನ್ಯರಿಗೆ ಮಾಡಿದ ಅಪಮಾನವಾಗಿದೆ ಎಂದು ಶಾಸಕರ ವಿರುದ್ದ ಡಾ. ರಫೀಕ್ ಅಹ್ಮದ್ ಕಿಡಿಕಾರಿದ್ದಾರೆ.