ಕಾನೂನು ಅರಿವು ಪಡೆದುಕೊಂಡು ಕ್ರಿಯಾಶೀಲವಾಗಿ ಕೆಲಸಗಳನ್ನು ಮಾಡಬೇಕು: ಜಿಲ್ಲಾಧಿಕಾರಿ ಸೆಲ್ವಮಣಿ
ಕಾನೂನು ಅರಿವು ಪಡೆದುಕೊಂಡು ಕ್ರಿಯಾಶೀಲವಾಗಿ
ಕೆಲಸಗಳನ್ನು ಮಾಡಬೇಕು: ಜಿಲ್ಲಾಧಿಕಾರಿ ಸೆಲ್ವಮಣಿ
ಕೋಲಾರ: ತುಂಬಾ ಕೆಲಸಗಳಲ್ಲಿ ಯಾವ ರೀತಿಯಾದಂತಹ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಸುಲಭದ ಮಾತಲ್ಲ. ಎಷ್ಟೇ ಯೋಚಿಸಿ ಕೇಸ್ ಪರಿಶೀಲಿಸಿದರು ಅದು ತಪ್ಪಾಗುವ ಸಾಧ್ಯತೆಗಳಿವೆ ಅದನ್ನು ಸರಿಪಡಿಸಿಕೊಳ್ಳಲು ಕಾನೂನು ಅರಿವು ಪಡೆದುಕೊಂಡು ಕೇಸುಗಳನ್ನು ಪರಿಶೀಲಿಸಿ ಕ್ರಿಯಾಶೀಲವಾಗಿ ಕೆಲಸಗಳನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ||ಆರ್. ಸೆಲ್ವಮಣಿ ತಿಳಿಸಿದರು.
ಶನಿವಾರ ತೋಟಗಾರಿಕೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಅಬಕಾರಿ ಇಲಾಖೆ, ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಾರ್ವಜನಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಗುಂಪುಗುAಪಾಗಿ ಕುಡಿದು ಸಾರ್ವಜನಿಕರಿಗೆ ತೊಂದರೆಗಳನ್ನು ಕೊಡುತ್ತಿದ್ದು ಇದನ್ನು ನಿಲ್ಲಿಸಬೇಕು. ಒಂದು ಕೇಸ್ ಬಗ್ಗೆ ಟೈಪ್ ಮಾಡಲು ಹೋಗುವ ಮುಂಚೆಯೇ ಎಲ್ಲಾ ಕಾನೂನಿನ ನಿಯಮಗಳನ್ನು ತಿಳಿದುಕೊಂಡು ಕೆಲಸ ಮಾಡುವುದು ಉತ್ತಮ. ಕಾನೂನಾತ್ಮಕವಾಗಿ ತಿಳಿಯದ ವಿಷಯಗಳನ್ನು ಕಾನೂನು ಕಾರ್ಯಾಗಾರದ ಮೂಲಕ ತಿಳಿಯಬಹುದು ಎಂದು ತಿಳಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಆರ್ ನಾಗರಾಜ್ ಅವರು ಮಾತನಾಡಿ ನ್ಯಾಯಬದ್ಧವಾಗಿ ಕಾನೂನಿನ ಅಡಿಯಲ್ಲಿ ಸಮಾಜಕ್ಕೆ ಒಳ್ಳೆಯದು ಮಾಡಿದರೆ ನಮ್ಮ ಆತ್ಮ ಸಂತೃಪ್ತಿ ಆಗುತ್ತದೆ. ಕಾನೂನು ಅರಿವನ್ನು ತಿಳಿದುಕೊಂಡು ಚಿಂತನೆ ಮಾಡಿದರೆ ಪರಿಣಾಮಕಾರಿಯಾಗಿ ಕೆಲಸಗಳನ್ನು ಮಾಡಬಹುದು. ಅಧಿಕಾರಿಗಳೆಲ್ಲರೂ ಒಳ್ಳೆಯ ಕಾನೂನು ಅರಿವು ಪಡೆದುಕೊಂಡರೆ ಸಮಾಜಕ್ಕೆ ಉತ್ತಮ ಸೇವೆಯನ್ನು ಮಾಡಬಹುದು ಹಾಗೂ ಅಕ್ರಮಗಳನ್ನು ತಡೆಯಬಹುದು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಿ. ಹೆಚ್. ಗಂಗಾಧರ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಪವನೇಶ್, ಪ್ರಧಾನ ಸಿವಿಲ್ ನ್ಯಾಯಾಧೀಶ ವಿವೇಕ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿ ಗೌಡ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಇದ್ದರು.