ಮನಃಸಾಕ್ಷಿ ಅಂತಾರಲ್ಲ, ಅದರ ಕುರಿತು..,

'ನ್ಯಾಯನಿರ್ಣಯ'ಗಳು ಸಾರ್ವಕಾಲಿಕ ಸತ್ಯವಲ್ಲ; ಈ ನಿರ್ಣಯಗಳು ಅನೇಕ ಸಲ ಸರ್ವಸಮ್ಮತವೂ ಆಗಿರುವುದಿಲ್ಲ.

ಮನಃಸಾಕ್ಷಿ ಅಂತಾರಲ್ಲ, ಅದರ ಕುರಿತು..,

ಮನಃಸಾಕ್ಷಿ ಅಂತಾರಲ್ಲ, ಅದರ ಕುರಿತು..,

(ನಾನು ಮಾತು, ಮೌನ, ಧ್ಯಾನ ಮತ್ತು ಬಿಡುಗಡೆಯ ಪರವಾಗಿದ್ದೇನೆ)

 ಅನುಭಾವ

ಕೇಶವ ಮಳಗಿ

    ಲೋಕ ನ್ಯಾಯವಿಚಾರಣೆ, ಸಾಕ್ಷ್ಯ ಸಂಗ್ರಹ, ಪರಿಶೀಲನೆ ಮತ್ತು ಭಾಗವಹಿಸುವಿಕೆಯಿಂದ ರೂಪುಗೊಳ್ಳುವ 'ನ್ಯಾಯನಿರ್ಣಯ'ಗಳು ಸಾರ್ವಕಾಲಿಕ ಸತ್ಯವಲ್ಲ; ಈ ನಿರ್ಣಯಗಳು ಅನೇಕ ಸಲ ಸರ್ವಸಮ್ಮತವೂ ಆಗಿರುವುದಿಲ್ಲ. ಆ ಕಾರಣಕ್ಕಾಗಿಯೇ ಐತೀರ್ಪುಗಳನ್ನು ನೀಡಿದ ಪೀಠದ ನ್ಯಾಯಮೂರ್ತಿಗಳನ್ನೂ ನಾವು ಪ್ರಶ್ನಿಸುತ್ತೇವೆ. ಇದೇ ನಿಜವಾದ ಬಹುತ್ವ ಮತ್ತು ವೈವಿಧ್ಯತೆಯನ್ನು, ಪ್ರಜಾಸತ್ತಾತ್ಮಕ ಕ್ರಿಯೆಯನ್ನು ಪ್ರತಿಫಲಿಸುವ ಮತ್ತು ನಾವೆಂದೂ ಮರೆಯಬಾರದ ಬಹುಮುಖ್ಯ ಅಂಶ. ನ್ಯಾಯ ವಿತರಣೆಯಲ್ಲಿ ಗೋಚರಿತ ಸಾಕ್ಷ್ಯಗಳನ್ನು ಹೊರತುಪಡಿಸಿ, ಅನುಭವದಿಂದ ಪಕ್ವಗೊಂಡ ಮನಸ್ಸು 'ಕಾವ್ಯನ್ಯಾಯ' ಒದಗಿಸುವ ಸಾಹಿತ್ಯ ಕೃತಿಗಳನ್ನು ನಾವೆಲ್ಲ ಓದುತ್ತ, ಮೆಚ್ಚಿಕೊಳ್ಳುತ್ತ ಬಂದಿದ್ದೇವೆ. ನ್ಯಾಯಪರತೆ ಹೇಗೆ ಸಾಪೇಕ್ಷ ಹಾಗೂ ನಿರಪೇಕ್ಷವಾಗಿದೆಯೋ ಹಾಗೆಯೇ, ಮನಃಸಾಕ್ಷಿಗೆ ಸಂಬಂಧಿಸಿದ ವಿಷಯವೂ ಆಗಿದೆ.

ಕನ್ನಡದ ಸೂಕ್ಷ್ಮ-ಸಂವೇದನಾಶೀಲ ಕಥೆಗಾರ ಬಾಗಲೋಡಿ ದೇವರಾಯನ ಕಥೆಯೊಂದರಲ್ಲಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿದ ಸಾಕ್ಷ್ಯಗಳನ್ನು ಬದಿಗಿರಿಸಿ, ಹಸುಗಳನ್ನು ಕಟ್ಟುವ ಗೋದೆಲೆಗೆ ಹೋಗಿ, ಹಸುವನ್ನು ಮಾತಾಡಿಸುತ್ತ, ಮೂಸುತ್ತ ಮನಃಸಾಕ್ಷಿಗೆ ಅನುಗುಣವಾಗಿ ತೀರ್ಪನ್ನು ನೀಡುವ ಪ್ರಸಂಗವಿದೆ. ಕಥೆಯ ಹೆಸರು: 'ಹುಚ್ಚ ಮುನಸೀಫ'.

ಬರ್ಟೋಲ್ಟ್ ಬ್ರೆಕ್ಟ್‌ನ ಜನಪ್ರಿಯ ರಂಗಕೃತಿ 'ಕಕೇಶಿಯನ್ ಚಾಕ್ ಸರ್ಕಲ್' ಕಥೆ ಬಲು ಪ್ರಸಿದ್ಧ. ಹೆತ್ತ ತಾಯಿ ಮತ್ತು ಪೊರೆದ ಅವ್ವರ ನಡುವಿನ ಮನೋಜ್ಞ ಕಥನ.

ಮೈಕೆಲ್‌ನನ್ನು ಹಡೆದವಳು ಸಾಕ್ಷಾತ್ ಆ ರಾಜ್ಯದ ರಾಜ್ಯಪಾಲನ ಪತ್ನಿ ನಟೆಲ್ಲ. ಗಂಡ ತನಗಿಂತ ಮಗುವಿನ ಮೇಲೆ ಹೆಚ್ಚು ಪ್ರೀತಿ ತೋರುತ್ತಾನೆಂದು ಅಸೂಯೆಯಲ್ಲಿ ಮುನಿಸಿಕೊಂಡವಳು. ರಾಜ್ಯದಲ್ಲಿ ಕ್ಷೋಭೆ, ದಂಗೆ, ಅರಾಜಕತೆ! ರಾಜ್ಯಪಾಲನ ಹತ್ಯೆ ಆತನ ಹೆಂಡತಿ ನಟೆಲ್ಲ ಬಲವಂತವಾಗಿ ರಾಜಭವನ ತೊರೆಯುವಂತೆ ಮಾಡುತ್ತದೆ. ಮಗು ಮೈಕೆಲ್ ಅಡುಗೆ ಹೆಂಗಸು ಗ್ರುಶಾಳ ಮಡಿಲಿಗೆ ಬೀಳುತ್ತದೆ. ಆಕೆ ಮಗುವಿನ ರಕ್ಷಣೆಗಾಗಿ ದೇಶಾಂತರ ಹೋಗಿ ಪಡಬಾರದ ಸಂಕಷ್ಟ ಪಡಬೇಕಾಗುತ್ತದೆ. ಖಾಸಗಿ ಬದುಕನ್ನೇ ಪಣಕ್ಕಿಡಬೇಕಾಗುತ್ತದೆ.

ಇತ್ತ, ರಾಜಧಾನಿಯ ದಂಗೆ ಸ್ಥಿಮಿತಕ್ಕೆ ಬಂದು ಅಜ್ದಕ್ ನ್ಯಾಯಮೂರ್ತಿಯಾಗಿದ್ದಾನೆ. ಬಡವರ ಪರ ಮತ್ತು ವಿವೇಚನಾ ತೀರ್ಪುಗಳಿಗೆ ಪರಿಚಿತನಾಗಿದ್ದಾನೆ. ರಾಜ್ಯಪಾಲನ ಹೆಂಡತಿ ನಟೆಲ್ಲ ವಾರಸುದಾರ ಮಗನಿಲ್ಲದೆ ತನ್ನ ಐಭೋಗ ಹಾಗೂ ಸಂಪತ್ತು ಮರಳಿ ಪಡೆಯಲಾರಳು. ಜಾಣೆಯಾದ ಆಕೆಯದನ್ನು ಬಲ್ಲಳು. ಸರಿ, ನ್ಯಾಯಾಧೀಶ ಅಜ್ದಕ್‌ನಲ್ಲಿ ದೂರು ಒಯ್ಯುತ್ತಾಳೆ. ಆದರೆ, ಜೀವವನ್ನೇ ಒತ್ತೆಯಿಟ್ಟು ಮೈಕೆಲ್‌ನನ್ನು ಪೊರೆದ ಅವ್ವ ಗ್ರುಶಾ ಕೂಡ ಆತನನ್ನು ಬಿಟ್ಟು ಕೊಡಲು ಸಿದ್ಧಳಿಲ್ಲ.

ಕೊನೆಗೆ, ನ್ಯಾಯಾಧೀಶ ಅಜ್ದಕ್ ಸೀಮೆಸುಣ್ಣದ ವೃತ್ತ ಬರೆಯಿಸಿ, ಮಗುವನ್ನು ಅದರ ಮಧ್ಯದಲ್ಲಿ ನಿಲ್ಲಿಸುತ್ತಾನೆ. ನಟೆಲ್ಲ ಮತ್ತು ಗ್ರುಶಾ ಇಬ್ಬರಲ್ಲಿ ಯಾರು ಮಗುವನ್ನು ವೃತ್ತದಿಂದ ಆಚೆ ಬರುವಂತೆ ಜೋರಾಗಿ ಎಳೆದುಕೊಳ್ಳುತ್ತಾರೋ ಅವರಿಗೆ ಮಗು ಸಲ್ಲುತ್ತದೆ, ಎಂದು ಶರತ್ತು ವಿಧಿಸುತ್ತಾನೆ. ಮೈಕೆಲ್‌ನನ್ನು ಹೆತ್ತವ್ವ ನಟೆಲ್ಲ ತನ್ನೆಲ್ಲ ಬಲವನ್ನು ಹಾಕಿ ಎಳೆದರೆ, ಮಗುವಿನ ಮೃದುತ್ವ, ಸೂಕ್ಷ್ಮತೆ, ಅಸಹಾಯಕತೆ ಹಾಗೂ ಅನಿವಾರ್ಯ ಅವಲಂಬನೆಯನ್ನು ಪೊರೆದು ಅನುಭವಿಸಿದ್ದ ಗ್ರುಶಾ ಹಾಗೆ ಮಾಡಲಾರದೆ ಬಿಟ್ಟು ಬಿಡುತ್ತಾಳೆ. ಕೊನೆಗೆ ಮಗು ಆಕೆಗೇ ಸೇರುತ್ತದೆ. ಮಗುವನ್ನು ಹೆತ್ತಿದ್ದರೂ ನಟೆಲ್ಲ ಶಿಶುಪ್ರೇಮದಿಂದ ವಂಚಿತಳಾಗುತ್ತಾಳೆ.

*

ಇತ್ತೀಚೆಗೆ ಭಾನು ಮುಷ್ತಾಕ್‌ರ 'ಹೂ ಕಣಿವೆಯ ಚಾರಣ' ಪ್ರಬಂಧ ಸಂಕಲನವನ್ನು ಓದುತ್ತಿದ್ದೆ. ಇದೊಂದು ಮನಸ್ಸನ್ನು ಆಹ್ಲಾದಕರಗೊಳಿಸಬಲ್ಲ ಪುಸ್ತಕ. ಮುಕ್ತ ವಿಚಾರಗಳಿಗೆ ತೆರೆದುಕೊಂಡ ಕುಟುಂಬ ಮತ್ತು ಮಗಳ ಎಲ್ಲ ತಪ್ಪುಗಳನ್ನು ಕ್ಷಮಿಸಬಲ್ಲ ಉದಾರಿ ತಂದೆಯ ಹೊರತಾಗಿಯೂ ಒಂದು ಸಮುದಾಯದ ಹೆಂಗಳೆಯರು ಬರೆಯುವ ಮತ್ತು ಬದುಕುವ ಕಷ್ಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಭಾನು ಈ ಕೃತಿಯಲ್ಲಿ ಹೇಳಿದ್ದಾರೆ. ಧರ್ಮ ಸಂಕಟಗಳು ಎನ್ನುತ್ತಾರಲ್ಲ, ಅಂಥವು.

ನೂರ್ ಜಹಾನ್ ನಮ್ಮ ಜಿಲ್ಲೆಯ (ಬಳ್ಳಾರಿ) ಲೇಖಕಿ. ನಾನು ಅವರ ಬಹುಪಾಲು ಕೃತಿಗಳನ್ನು ಓದಿದ್ದೇನೆ. ಇವರಿಗೆ ಸಾಹಿತ್ಯ ನೀಡುವ ಸುಖವೇ ಬದುಕು. ನೂರ್ ಜಹಾನ್ ಅತಿ ಚಿಕ್ಕ ವಯಸ್ಸಿನಲ್ಲೇ ಹೊಸಪೇಟೆ ನಗರಸಭೆಯ ಚುನಾಯಿತ ಸದಸ್ಯೆಯಾಗಿದ್ದವರು. ಬದುಕಿನಲ್ಲಿ ಇವರು ಕಂಡಿರುವ ಕಷ್ಟನಷ್ಟಗಳನ್ನು ಓದುತ್ತ ನನ್ನ ಗಂಟಲು ಕಟ್ಟಿ ದುಃಖಿತನಾಗಿದ್ದೇನೆ. ನೂರ್ ಜಹಾನ್ ತಮ್ಮ ಬದುಕಿನ ಸುಖದುಃಖಗಳನ್ನು ಫೇಸ್ಬುಕ್‌ನಲ್ಲಿ ಬರೆಯುತ್ತ ತಮ್ಮನ್ನು ತಾವು ಕಂಡುಕೊಂಡು ಹಗುರವಾಗುತ್ತಿದ್ಧರು. ಆದರೆ, ಒಂದು ದಿನ ಇದ್ದಕ್ಕಿದ್ದಂತೆ ಈ ಸರಣಿ ನಿಲ್ಲಿಸುತ್ತಿರುವುದಾಗಿ ಹೇಳಿ ಬರೆಯುವುದನ್ನು ನಿಲ್ಲಿಸಿದರು. ಅದರ ಹಿಂದೆ ಕುಟುಂಬ ಮತ್ತು ಸಮಾಜದ ಒತ್ತಡವಿದ್ದುದನ್ನು ಯಾರಾದರೂ ಊಹಿಸಬಹುದಾಗಿತ್ತು. ಅಗ್ನಿದಿವ್ಯದಲಿ ಹಾದು ಬಂದ ಅವರಿಗೆ ಸಮಾಧಾನ ಹೇಳುವುದು ಕೂಡ ಕೃತಕವೆಂದೆನ್ನಿಸಿ ನಿಟ್ಟುಸಿರು ಬಿಡಲಷ್ಟೇ ನನ್ನಿಂದ ಸಾಧ್ಯವಾಯಿತು.

ಕೆಲವು ಸಮಾಜದಲ್ಲಿ ತುಟಿ ಬಿಚ್ಚಲು ತಲೆಮಾರುಗಳ ಹೋರಾಟ ಬೇಕಾಗುತ್ತದೆ. ಆಮೇಲೆ, ಬರಹಕ್ಕೆ ತೊಡಗಲು ಇನ್ನೊಂದು ತಲೆಮಾರು. ನವೋದಯ ಕಾಲದಲ್ಲಿ ದಲಿತ-ನಿರ್ಲಕ್ಷಿತ-ಅಲ್ಪಸಂಖ್ಯಾತ ಸಮುದಾಯಗಳ ಲೇಖಕ/ಕಿಯರು ಎಷ್ಟಿದ್ದಾರೆ? ಪ್ರಗತಿಶೀಲರವರೆಗೆ ಕಾದ ಮೇಲಷ್ಟೇ ಆಗಸದಲ್ಲಿ ಮಿಂಚು ಹೊಳೆದವು. ಇದ್ದರೂ ಉಳಿದ ಸಮುದಾಯಗಳಿಗೆ ಹೊಲಿಸಿದರೆ ದಲಿತ- ನಿರ್ಲಕ್ಷಿತ, ಮುಸ್ಲಿಂ ಸಮುದಾಯದ ಎಷ್ಟು ಹೆಣ್ಣು ಮಕ್ಕಳು ಆ ಕಾಲದಲ್ಲಿ (ಪ್ರಗತಿಶೀಲ, ಬಂಡಾಯ, ದಲಿತ) ಮತ್ತು ಈ ಕಾಲದಲ್ಲಿ ಹೊರಹೊಮ್ಮಿದ್ದಾರೆ? ತುಟಿ ಬಿಚ್ಚುವುದು, ಮಾತನಾಡುವುದೇ ಕಷ್ಟ. ಬರಹಗಾರಾಗುವುದು ಇನ್ನೂ ಕಷ್ಟ. ಸಾಲದ್ದಕ್ಕೆ ಸಾರ್ವಜನಿಕವಾಗಿ ತಮ್ಮನ್ನು ತಾವು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳಬೇಕು ಬೇರೆ!

ಓಹ್! ದೈವವೇ ನೀನು ಅದೆಷ್ಟು ಕ್ರೂರಿ. ಇಷ್ಟಕ್ಕೂ ಪ್ರತಿಯೊಂದಕ್ಕೂ ಸಾರ್ವಜನಿಕ ಸಮಜಾಯಿಷಿಯನ್ನು ಏಕೆ ಕೊಡಬೇಕು. ಒಂದು ಗಳಿಗೆಯಲ್ಲಿ ಸರಿಯೆನ್ನಿಸಿ ಮಾಡಿದ್ದು ಆಮೇಲೆ ಪರಿಷ್ಕರಣೆಗೆ ಒಳಪಡಿಸಬೇಕು ಅನ್ನಿಸಿದರೆ ತಪ್ಪೇನು? ಅದಕ್ಕೆ ಬಣ್ಣ ಬಳಿಯದೆ ಇರುವಂತೆಯೇ ನೋಡಲು ಸಾಧ್ಯವಿಲ್ಲವೆ?

ಸಂವಿಧಾನದ ಮೇಲೆ ಗಿಡುಗಗಳಂತೆ ಆಕ್ರಮಣ ಮಾಡಿ, ಬೇಕಾದಂತೆ ಪರಿಷ್ಕರಣೆ ಮಾಡುತ್ತಿರುವಾಗ ಮೆಳ್ಳಗಣ್ಣು ಮುಚ್ಚಿಕೊಂಡು ನಿದ್ರಿಸುವಂತೆ ನಟಿಸುವವರು ಗುಬ್ಬಿಗೇಕೆ ಪ್ರಜಾಸತ್ತೆಯ ಪಾಠವನ್ನು ಹೇಳಿಕೊಡುವುದು? ಅವರು ಹೀಗೆಯೇ ನಡೆದುಕೊಳ್ಳಬೇಕಿತ್ತೆಂದು ಸಂಹಿತೆಯನ್ನು ರೂಪಿಸಿ ಕೊಡಲು ನಾವು ಯಾರು? ಅಂಥ ನಿರ್ಧಾರ ತೆಗೆದುಕೊಂಡವರು ಭವಿಷ್ಯದಲ್ಲಿ ಬರೆಯುತ್ತಲೇ ಉಳಿದುಕೊಳ್ಳುವ ಸ್ವಾತಂತ್ರ್ಯವನ್ನು ಪಡೆದಿರಬಹುದು. ಆ ಸ್ವಾತಂತ್ರ್ಯವೇ ಅವರಿಗೆ ಮಹತ್ವದ್ದಾಗಿರಬಹುದು.

ತಕ್ಷಣದ ಮಾನ್ಯತೆ, ಪ್ರಸಿದ್ಧಿ, ಪುರಸ್ಕಾರ, ಪತ್ರಿಕೆಗಳಲ್ಲಿ ಭಾವಚಿತ್ರ ಅಥವ ಬರಹಗಾರರಿಗೆ ಬೇಕಾದ ಅಪರಿಮಿತ ಸ್ವಾತಂತ್ರ್ಯ ಈ ಎರಡರ ಆಯ್ಕೆಯ ಪ್ರಸಂಗ ಬಂದರೆ ನಾನು ಖಂಡಿತ 'ಬರಹಗಾರನ ಸ್ವಾತಂತ್ರ್ಯ'ವನ್ನು ಆಯ್ಕೆ ಮಾಡಿಕೊಂಡು ಉಳಿದುದನ್ನು ನಗಣ್ಯವೆಂದು ಭಾವಿಸುತ್ತೇನೆ. ಅವರೀಗ ತೊದಲುತ್ತ ಮಾತಾಡುವುದನ್ನು, ಬರೆಯುವುದನ್ನು ಕಲಿಯುತ್ತಿದ್ದಾರೆ. ಸಾಧ್ಯವಾದರೆ ಓದಿ. ನ್ಯಾಯ ನಿರ್ಣಯ ಕೊಡುವ ಮೊದಲು ನಿಮ್ಮ ನೈತಿಕತೆ, ಚಾರಿತ್ರ್ಯಗಳನ್ನು ಪರಿಶೀಲಿಸಿ. ಅವು ಕೂಡ ಸಾರ್ವಜನಿಕ ಚರ್ಚೆಗೆ ಒಳಪಡಬಲ್ಲ ಸಾಧ್ಯತೆಯಿರುತ್ತದೆ ಎಂಬುದರತ್ತ ಗಮನವಿರಲಿ. ಇಷ್ಟಾಗಿಯೂ ಅಭಿಪ್ರಾಯ ಹೇಳಿಯೇ ಸಿದ್ಧವೆನ್ನುವುದಾದರೆ, ಮನಃಸಾಕ್ಷಿಯನ್ನು ಬಳಸಿ. ಸಾಕ್ಷ್ಯವನ್ನಷ್ಟೇ ಮಾನ್ಯ ಮಾಡುವವರು ನಾಗರಿಕತೆ ನೀಡುವ ವಿವೇಚನೆ, ಮೃದುತ್ವ ಮತ್ತು ಸಂಸ್ಕೃತಿಯ ಬಳುವಳಿಯಾದ ಸಂಸ್ಕರಿತ ಮನಸ್ಸನ್ನು ಕಳೆದುಕೊಂಡಿರುತ್ತಾರೆ.

*