ಇವರೆಲ್ಲ ನಮ್ಮ “ಮರ್ಯಾದಸ್ಥರು” - ಶ್ರೀನಿವಾಸ್ ಪ್ರಸಾದ್ ಹೇಳಿಕೆ ಕುರಿತು ತನಿಖೆ ಆಗಲಿ

Elections-MLA-MPs

   ಇವರೆಲ್ಲ ನಮ್ಮ “ಮರ್ಯಾದಸ್ಥರು”  - ಶ್ರೀನಿವಾಸ್ ಪ್ರಸಾದ್ ಹೇಳಿಕೆ ಕುರಿತು ತನಿಖೆ ಆಗಲಿ

 

ರಾಜಾರಾಂ ತಲ್ಲೂರು

ಕ್ರಿಯೆ-ಪ್ರತಿಕ್ರಿಯೆ

 

ಇವರೆಲ್ಲ ನಮ್ಮ “ಮರ್ಯಾದಸ್ಥರು”

ಶ್ರೀನಿವಾಸ್ ಪ್ರಸಾದ್ ಹೇಳಿಕೆ ಕುರಿತು ತನಿಖೆ ಆಗಲಿ

- - - - - - - - - -

ಏನೋ ಸಾರಾಯಿ ಅಂಗಡಿಯ ಹೊರಗೆ ಇಬ್ಬರು ಹೀಗೆ ಬೈದಾಡಿಸಿಕೊಂಡದ್ದಿದ್ದರೆ, ಮಾತಾಡಿದ್ದು ಅವರಲ್ಲ, “ಅದು” ಎಂದು ನಕ್ಕು ಸುಮ್ಮನಿರಬಹುದಿತ್ತು. ಆದರೆ ಒಬ್ಬರು ಹಾಲೀ ಸಂಸದರು, ಇನ್ನೊಬ್ಬರು ಹಾಲೀ ಶಾಸಕರು. ಇಬ್ಬರೂ “ಮರ್ಯಾದಸ್ಥರು”. ವೈಯಕ್ತಿಕವಾಗಿ ಏನೇ ಬೈದಾಡಿಕೊಳ್ಳಲಿ, ಇಂದು ಪತ್ರಿಕೆಗಳಲ್ಲಿ, ಸಂಸದರು ಶಾಸಕರ ಮೇಲೆ ಮಾಡಿರುವ ಈ ಆರೋಪದ ವರದಿ, ಒಂದು ಕ್ರಿಮಿನಲ್ ಅಪರಾಧದ ಬಗ್ಗೆ ಬೊಟ್ಟು ಮಾಡುತ್ತಿದೆ.

ಚುನಾವಣಾ ನೀತಿಸಂಹಿತೆಗಳ ಅನ್ವಯ ಒಬ್ಬ ವಿಧಾನಸಭಾ ಅಭ್ಯರ್ಥಿ ಒಂದು ಚುನಾವಣೆಗೆ ಪ್ರಚಾರ ನಡೆಸಲು ಖರ್ಚು ಮಾಡುವುದಕ್ಕೆ ಇರುವ ಮಿತಿ, 28ಲಕ್ಷ ರೂಪಾಯಿಗಳು. ಆದರೆ ಇಲ್ಲಿ ಹದಿನೈದು ಕೋಟಿ ಕೊಟ್ಟ ಮತ್ತು ಐದು ಕೋಟಿ ಮಾತ್ರ ಖರ್ಚು ಮಾಡಿದ ಆಪಾದನೆಗಳನ್ನು ಸಂಸದರು ಶಾಸಕರ ಮೇಲೆ ಮಾಡಿದ್ದಾರೆ.

ಆಪಾದನೆ ಹೊತ್ತಿರುವ ಶಾಸಕರು, ಅಭ್ಯರ್ಥಿಗಳು ಹೆಚ್ಚು ಖರ್ಚು ಮಾಡಿ ಕಡಿಮೆ ಲೆಕ್ಕ ತೋರಿಸುತ್ತಾರೆ ಎಂದು ಸ್ವತಃ ಆಪಾದಿಸಿದ್ದು, ಚುನಾವಣಾ ವ್ಯವಸ್ಥೆ ಬದಲಾಗಬೇಕೆಂದು ಕರೆಕೊಟ್ಟದ್ದು ಹಿಂದೊಮ್ಮೆ ಪತ್ರಿಕೆಗಳಲ್ಲಿ ವರದಿ ಆದದ್ದಿದೆ ( https://timesofindia.indiatimes.com/.../arti.../65465070.cms ).  ಸದ್ರಿ ಶಾಸಕರು, ಅಷ್ಟೊಂದು ವೆಚ್ಚ ಮಾಡುವುದಕ್ಕೆ ಅಧಿಕೃತವಾಗಿ ಅವರಲ್ಲಿ ಅಷ್ಟೆಲ್ಲ ಸಂಪತ್ತಿಲ್ಲ. ಅವರ ಆಸ್ತಿ ವಿವರಗಳ ಬಗ್ಗೆ ಇಲೆಕ್ಷನ್ ವಾಚ್, ವಿವರಗಳನ್ನು ಹೀಗೆ ಕೊಟ್ಟಿದೆ: ( https://myneta.info/karnataka2018/candidate.php... )

ವಾಸ್ತವ ಹೀಗಿರುವಾಗ, ಈ ದೇಶದಲ್ಲಿ ಮರ್ಯಾದಸ್ಥ ಚುನಾವಣಾ ಆಯೋಗ (Election Commission of India, Chief Electoral Officer Karnataka) ಇರುವುದು ಹೌದಾದರೆ, ಜನಪ್ರತಿನಿಧಿಗಳ ಈ ಕೆಸರೆರಚಾಟವನ್ನು ಕೂಲಂಕಷ ತನಿಖೆ ನಡೆಸಬೇಕು. ಇಷ್ಟೊಂದು ದುಡ್ಡಿನ ಮೂಲ ಯಾವುದು? ಅದು ಅವರ ಕೈಗೆ ಹೇಗೆ ಬಂತು? ಹೇಗೆ ವೆಚ್ಚವಾಯಿತು? ಆ ಚುನಾವಣೆಗೆ ಅಭ್ಯರ್ಥಿ ತೋರಿಸಿದ ಖರ್ಚಿನ ಲೆಕ್ಕ ಎಷ್ಟು? ನಿಜವಾದ ಖರ್ಚು ಎಷ್ಟು? ಇದೆಲ್ಲದರ ತನಿಖೆ ನಡೆಸಬೇಕು.

ಕನ್ನಡದ ಮರ್ಯಾದಸ್ಥ ಮಾಧ್ಯಮಗಳೂ ಕೂಡ, ಈ ಸಂಗತಿಯನ್ನು “ಶರಾಬು ಅಂಗಡಿ ವಾರ್ತೆ” ರೀತಿಯಲ್ಲಿ ಪ್ರಕಟಿಸಿ ಕೈತೊಳೆದುಕೊಳ್ಳದೇ, ಇದರ ಫಾಲೋಅಪ್ ಮಾಡಬೇಕು ಮತ್ತು ಅದನ್ನು ಅದರ ತಾರ್ಕಿಕ ತುದಿಗೆ ಮುಟ್ಟಿಸಬೇಕು. ಪತ್ರಿಕೆ ಪ್ರಕಟಿಸಿದ್ದು ಸುಳ್ಳೆಂದಾದರೆ, ಸಂಸದರು ಪತ್ರಿಕೆಯ ವಿರುದ್ಧವಾದರೂ ಕ್ರಮ ಕೈಗೊಳ್ಳಲಿ.

ಇದು ಆಗಬೇಕೆನ್ನುವುದು ಕರ್ನಾಟಕದ ಎಲ್ಲ ಪ್ರಜ್ಞಾವಂತ ಮತದಾರರ ಒತ್ತಾಯವಾಗಲಿ. ಸಂಬಂಧಿತರೆಲ್ಲರಿಗೂ ಇದನ್ನು ತಲುಪಿಸುವ ಜವಾಬ್ದಾರಿ ತಮ್ಮೆಲ್ಲರದೂ ಫ್ರೆಂಡ್ಸ್!