ಆನ್‌ಲೈನ್‌ನಲ್ಲಿ ಕೆಲಸದ ಆಮಿಷ: ಎರಡು ಲಕ್ಷ ಕಳೆದುಕೊಂಡ ಮಹಿಳೆ

ಆನ್‌ಲೈನ್‌ನಲ್ಲಿ ಕೆಲಸದ ಆಮಿಷ:

ಎರಡು ಲಕ್ಷ ಕಳೆದುಕೊಂಡ ಮಹಿಳೆ

ತುಮಕೂರು: ಆನ್‌ಲೈನ್ ಮೂಲಕ ದೊರೆತ ಮಾಹಿತಿಯನ್ನೇ ನಂಬಿ ತನಗೆ ಉದ್ಯೋಗ ಸಿಕ್ಕಿಬಿಟ್ಟಿತೆಂದು ಭಾವಿಸಿ ಮಹಿಳೆಯೊಬ್ಬರು 2 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ತುಮಕೂರು ನಗರದ ನಿವಾಸಿ ಡಿ.ಎಂ. ಮಣಿ ಎಂಬುವವರ ಮೊಬೈಲ್‌ಗೆ ಒಂದು ಸಂದೇಶ ಬಂದಿದೆ. ಇದರಲ್ಲಿದ್ದ ಒಂದು ಲಿಂಕ್ ಅನ್ನು ಒತ್ತುವಂತೆ ಅದರಲ್ಲಿ ಕೋರಲಾಗಿತ್ತು. ಕುತೂಹಲದಿಂದ ಅದನ್ನು ಒತ್ತಿದಾಗ ನಿಮಗೆ ಅಮೆಜಾನ್‌ನಲ್ಲಿ ಉದ್ಯೋಗ ಲಭಿಸುತ್ತದೆಂಬ ಸಂದೇಶ ಬಂತು. ಅದನ್ನು ಇವರು ನಂಬಿದರು. ನಂತರದಲ್ಲಿ ಈ ಉದ್ಯೋಗ ಸಿಗಬೇಕಾದರೆ ರಿಜಿಸ್ಟರ್ ಶುಲ್ಕ ಕೊಡಬೇಕೆಂಬ ನೆಪ ಮುಂದಿಟ್ಟು ಹಣವನ್ನು ಪಾವತಿಸುವಂತೆ ಸೂಚನೆ ಬರತೊಡಗಿತು. ಇದೆಲ್ಲವನ್ನೂ ನಂಬಿದ ಮಣಿ ಅವರು ಸೆ. 22 ರಿಂದ ಸೆ. 24 ರವರೆಗೆ ಹಂತ ಹಂತವಾಗಿ ಒಟ್ಟು 2 ಲಕ್ಷ ರೂ. ಗಳನ್ನು ಆಗಂತುಕರು ಸೂಚಿಸಿದ್ದ ಖಾತೆಗೆ ವರ್ಗಾಯಿಸಿದರು. ಇದಾದ ಬಳಿಕ ಇದ್ದಕ್ಕಿದ್ದಂತೆ ಸದರಿ ಆಗಂತುಕರ ಸಂಪರ್ಕ ಸ್ಥಗಿತವಾಗಿದ್ದು, ಹಣವೂ ಇಲ್ಲ-ಉದ್ಯೋಗವೂ ಇಲ್ಲವೆಂಬುದು ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೆ. 28 ರಂದು ಅವರು ತುಮಕೂರಿನ ಸಿ.ಇ.ಎನ್. ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.