‘ ಉಪ್ಪುಚ್ಚಿ ಮುಳ್ಳು ‘ ಇಂದು ಬಿಡುಗಡೆ

ದಯಾ ಗಂಗನಘಟ್ಟ- ಕತಾ ಸಂಕಲನ ಇಂದು ಬಿಡುಗಡೆ

‘ ಉಪ್ಪುಚ್ಚಿ ಮುಳ್ಳು ‘ ಇಂದು ಬಿಡುಗಡೆ

 

ದಯಾ ಗಂಗನಘಟ್ಟ ಅವರ ಕತಾ ಸಂಕಲನ


‘ ಉಪ್ಪುಚ್ಚಿ ಮುಳ್ಳು ‘ ಇಂದು ಬಿಡುಗಡೆ


           ದಯಾ ಗಂಗನಘಟ್ಟ ಅವರ ‘ ಉಪ್ಪುಚ್ಚಿ ಮುಳ್ಳು ‘ ಕತಾ ಸಂಕಲನ ಈ ಭಾನುವಾರ ತುಮಕೂರು ನಗರದ ಪುರ ಭವನ ವೃತ್ತದಲ್ಲಿರುವ ಐಎಂಎ ಸಭಾಂಗಣದಲ್ಲಿ ಎರಡನೇ ಬಿಡುಗಡೆ ಕಾಣುತ್ತಿದೆ. ಬೆಳಿಗ್ಗೆ 10.30ಕ್ಕೆ ಆರಂಭವಾಗುವ ಸಭೆಗೆ ಕನ್ನಡದ ದೈತ್ಯ ಬರಹಗಾರ ಕೇಶವರೆಡ್ಡಿ ಹಂದ್ರಾಳ ಹಾಗೂ ಅವರ ಜೊತೆಗೆ ಹಂದ್ರಾಳರಿಗೆ ತದ್ವಿರುದ್ದ ಎನಿಸುವ ದೇಶ ವಿದೇಶದ ಕತೆಗಳನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡುತ್ತಿರುವ ನಯ, ನಾಜೂಕಿನ ಕತೆಗಾರ ಎಸ್.ಗಂಗಾಧರಯ್ಯ ಬರಲಿದ್ದಾರೆ. ಸದಾ ಒಂದಿಲ್ಲೊಂದು ಸಂಘಟನೆಯ ಅಧ್ಯಕ್ಷರಾಗಿ ತಮ್ಮ ಕ್ರಿಯಾಶೀಲತೆಗೆ ತುಕ್ಕು ಹಿಡಿಯದಂತೆ ನೋಡಿಕೊಳ್ಳುವ ಬಾ.ಹ.ರಮಾಕುಮಾರಿ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಎರಡನೇ ಅವಧಿಗೂ ಮುಂದುವರೆದಿರುವ ಮಲ್ಲಿಕಾ ಬಸವರಾಜು ಕೂಡಾ ಭಾಗವಹಿಸಲಿದ್ದಾರೆ. ಖುದ್ದು ಲೇಖಕಿ ದಯಾ ಗಂಗನಘಟ್ಟ ಇದ್ದೇ ಇರುತ್ತಾರೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ವಾ, ಬಂಗಾಳಕೊಲ್ಲಿಯ ಕಡೆಯಿಂದ ಅಮರಿಕೊಂಡಿರುವ ಜಿಟಿ ಜಿಟಿ ಜಡಿಮಳೆಯ ನಡುವೆಯೂ ಎಲ್ಲರೂ ಬರಲಿ ಅಂತ ಪ್ರಕಾಶಕ ಚಲಂ ಹಾಡ್ಲಹಳ್ಳಿ ಆಶಿಸಿದ್ದಾರೆ.


"ಉಪ್ಪುಚ್ಚಿ ಮುಳ್ಳು" ಅಂದ್ರೇನು ?!


ನನ್ನ ಕಥಾ ಸಂಕಲನ "ಉಪ್ಪುಚ್ಚಿ ಮುಳ್ಳು" ಬಿಡುಗಡೆ ಆದಾಗಿನಿಂದ ಬಹುತೇಕ ಎಲ್ಲರ ಪ್ರಶ್ನೆ ಒಂದೇ "ಉಪ್ಪುಚ್ಚಿ ಮುಳ್ಳು" ಅಂದ್ರೇನು ಅನ್ನೋದು. ಇದೊಂದು ಜೌಗು ಮಣ್ಣಿನಲ್ಲಿ ಬೆಳೆವ ಕುರುಚಲು ಗಿಡ. ನಮ್ಮೂರಿನ ಬಳಿ ಉಪ್ಪಿನ ಮಾಳೆಗಳಿವೆ. ಇಲ್ಲಿ ಹಿಂದೆ ಉಪ್ಪನ್ನು ತಯಾರಿಸುತ್ತಿದ್ದರಂತೆ. ವೈಜ್ಞಾನಿಕವಾಗಿ ಅಜಿಮ ಟೆಟ್ರಾಕ್ಯಾಂತಾ ಅನ್ನೋ ಭಯ ಬೀಳಿಸುವ ಹೆಸರಿರುವ ಇದಕ್ಕೆ ಕನ್ನಡದಲ್ಲಿ ಉಪ್ಪಿನ ಮುಳ್ಳು, ಎಸಗಳೆ, ಉಪ್ಪುಗೋಜೆ ಎಂಬ ಹೆಸರುಗಳೂ ಇವೆ. 


     ಮೊಂಡು ಜನರ ನಾಲಗೆಯಂತೆ ಮಂದವಾದ ಇದರ ಎಲೆಗಳಿಗೆ ಒಮ್ಮೆ ಮೂಸಿ ನೋಡಬೇಕೆನಿಸುವ ವಿಚಿತ್ರವಾದ ವಾಸನೆಯಿದೆ. ಹಂಗಂತ ಮೂಸಿದಿರೋ ಕೆಟ್ಟಿರಿ! ಅವತ್ತೆಲ್ಲಾ ಆ ಘಾಟು ವಾಸನೆ ನಿಮ್ಮ ನೆತ್ತಿಗೇರಿದ್ದು ಇಳಿದರೆ ಕೇಳಿ. ಈ ಗಿಡದ ನಡುವೆ ಹಾದು ಬಂದರೆ ಒಂದಿಷ್ಟು ಹೊತ್ತು ನೀವೂ ಅದೇ ವಾಸನೆ ಹೊಡೆಯುತ್ತೀರಿ. ಕೆಲವರ ಸಹವಾಸದ ಪ್ರಭಾವದಂತೆ. 


      ನಾವೇನು ಕಮ್ಮಿ ಎಂಬಂತೆ ಕಡ್ಡಿ ತುಂಬಾ ಎಲೆಗಳಷ್ಟೇ ಇರುವ ಇದರ ಮುಳ್ಳುಗಳು ಈ ಹೆಸರಿನಷ್ಟೇನೂ ಸೌಮ್ಯವಲ್ಲ. ನೋಡಿದಾಗ ಮೂಟೆ ಹೊಲೆಯುವವರು ಹಿಡಿದ ದಬ್ಬಳದಂತೆ ಇಲ್ಲವೇ ಗೌರ್ಮೆಂಟ್ ಆಸ್ಪತ್ರೆಯ ನರ್ಸ್ ಕೈಯಲ್ಲಿರುವ ದಪ್ಪನೆಯ ಇಂಜೆಕ್ಷನ್ ಸೂಜಿಯಂತೆ ಕಾಣುತ್ತವೆ. ಅಕಸ್ಮಾತ್ ಚುಚ್ಚಿದರೆ ಜ್ವರದ ತಾಪಕ್ಕಿಂತ ವೇಗದಲ್ಲಿ ಉರಿ ಏರಿಸುತ್ತವೆ ಈ ವಿಷಪಾತಕ ಮುಳ್ಳುಗಳು. ಜನರ ಚುಚ್ಚು ಮಾತುಗಳಂತೆ ಇವಕ್ಕೂ ಚುಚ್ಚುವುದು ನೋವ ಹೆಚ್ಚಿಸುವುದೇ ಕೆಲಸ. ಹಂಗಂತ ಕೆಟ್ಟ ಗಿಡ ಅಂತ ನಿರ್ದಾರಕ್ಕೆ ಬಂದುಬಿಡ್ಬೇಡಿ ಮತ್ತೆ. 


       ಜಾನುವಾರುಗಳ ಹಲವಾರು ಖಾಯಿಲೆಗಳಿಗೆ ಇದು ಔಷದೀಯ ಸಸ್ಯ ಮತ್ತೆ ಜನರ ಕಜ್ಜಿ ತುರಿಕೆಗೂ ಔಷಧಿಯಾಗ್ತಿತ್ತಂತೆ. ಮನುಷ್ಯನ ಎಲ್ಲಾ ಮೂಲ ಗುಣಗಳನ್ನು ಪ್ರತಿನಿಧಿಸುವುದಕ್ಕೋ ಏನೋ ನನಗೆ ಈ ಗಿಡ ಇಷ್ಟ. ಮೊದಲು ಕಥಾಸಂಕಲನ ಕ್ಕೆ ಉಪ್ಪಿನ ಮುಳ್ಳು ಎಂದು ಹೆಸರಿಡುವ ಅಂತಿತ್ತು. ಆದರೆ ಅಕ್ಕ ಉಪ್ಪುಚ್ಚಿ ಮುಳ್ಳು ಅಂತಲೂ ಕರೀತಾರೆ ಅಂದ ತಕ್ಷಣ ಚಲಂ ಹಾಡ್ಲಹಳ್ಳಿ ಅದೇ ಹೆಸರು ಇರಲಿ ಎಂದು ಹಠ ಹಿಡಿದು ಗಂಟುಬಿದ್ದುಬಿಟ್ಟ ಕಾರಣ ಇಷ್ಟು ಚಂದದ ಹೆಸರು ಪುಸ್ತಕಕ್ಕಾಯ್ತು ನೋಡಿ.
ಬದುಕಲು ಉಪ್ಪು + ಹುಚ್ಚು + ಮುಳ್ಳು ಸಾಕಲ್ವಾ!


ಪುಸ್ತಕಕ್ಕಾಗಿ 8747043485 ಗೆ ಸಂಪರ್ಕಿಸಿ