ಎತ್ತಂಗಡಿ ಆತಂಕದಲ್ಲಿ ವಿಳೇದೆಲೆ ವ್ಯಾಪಾರಿಗಳು: ಎಪಿಎಂಸಿ ವಿರುದ್ಧ ಪ್ರತಿಭಟನೆಗೆ ಸಿದ್ಧ: ಧನಿಯಾ ಕುಮಾರ್ ಎಚ್ಚರಿಕೆ
ಎತ್ತಂಗಡಿ ಆತಂಕದಲ್ಲಿ ವಿಳೇದೆಲೆ ವ್ಯಾಪಾರಿಗಳು: ಎಪಿಎಂಸಿ ವಿರುದ್ಧ ಪ್ರತಿಭಟನೆಗೆ ಸಿದ್ಧ: ಧನಿಯಾ ಕುಮಾರ್ ಎಚ್ಚರಿಕೆ
ಎತ್ತಂಗಡಿ ಆತಂಕದಲ್ಲಿ ವಿಳೇದೆಲೆ ವ್ಯಾಪಾರಿಗಳು:
ಎಪಿಎಂಸಿ ವಿರುದ್ಧ ಪ್ರತಿಭಟನೆಗೆ ಸಿದ್ಧ:
ಧನಿಯಾ ಕುಮಾರ್ ಎಚ್ಚರಿಕೆ
ತುಮಕೂರು: ನಾಲ್ಕೈದು ದಶಕಗಳಿಂದ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ನಿಗದಿತ ಶುಲ್ಕ ಪಾವತಿ ಮಾಡಿ ಅಂಗೈಯಗಲದ ಜಾಗದಲ್ಲಿ ವ್ಯಾಪಾರ ಮಾಡಿಕೊಂಡು ಬಂದಿರುವ ೩೦ಕ್ಕೂ ಹೆಚ್ಚು ವೀಳೆದೆಲೆ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸಲು ಎಪಿಎಂಸಿ ಮುಂದಾಗಿದೆಯೇ. ಹೌದು ಎಪಿಎಂಸಿ ಕಳೆದ ಒಂದು ವಾರದಿಂದ ಹಾಗೆ ಮೈಕ್‌ನಲ್ಲಿ ಪ್ರಕಟಣೆ ನೀಡುತ್ತಿದೆ ಎಂದು ವಿಳೇದೆಲೆ ವ್ಯಾಪಾರಿಗಳು ಗಾಬರಿಗೊಂಡಿದ್ದಾರೆ.
ಅಂತರಸನಹಳ್ಳಿ ಸಮೀಪದ ಹೂ,ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಈ ವಿಳೇದೆಲೆ ವ್ಯಾಪಾರಿಗಳಿಗೆ ಇದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ರೂ.೩೪೦೦ ಶುಲ್ಕ ಪಾವತಿ ಮಾಡಿಸಿಕೊಂಡು 2013ರಿಂದ 2023 ರವರೆಗೆ ಹತ್ತು ವರ್ಷಗಳ ಅವಧಿಗೆ ಲೈಸೆನ್ಸ್ ನೀಡಿದೆ.(ಚಿತ್ರ ನೋಡಿ) ಅಲ್ಲದೆ ಸದರಿ ರಸೀತಿಯಲ್ಲಿ ನಿರ್ದಿಷ್ಟವಾಗಿ ತರಕಾರಿ ಮತ್ತು ವಿಳೇದೆಲೆ ವ್ಯಾಪಾರ ಎಂದೇ ನಮೂದಿಸಲಾಗಿದೆ. ಈ ಪರವಾನಗಿ ಶುಲ್ಕದ ಜೊತೆಗೆ ವಾರಕ್ಕೆ ಕಳೆದ ವರ್ಷ ರೂ. 550 ರಂತೆ ಹಾಗೂ ಹಾಲಿ ಈಗ ರೂ.620 ರಂತೆ ಸುಂಕವನ್ನೂ ಪಾವತಿ ಮಾಡಿಕೊಂಡು ಬರುತ್ತಿದ್ದಾರೆ. ಆದರೂ ಎಪಿಎಂಸಿ ಇವರನ್ನು ಅಲ್ಲಿಂದ ಎಬ್ಬಿಸಲು ಜ.25ರಂದು ಧ್ವನಿವರ್ಧಕದಲ್ಲಿ ಪ್ರಕಟಣೆ ಹೊರಡಿಸಿರುವುದು ಏತಕ್ಕೆ ಎಂದು ಸಮಿತಿ ಸಮಜಾಯಿಷಿ ನೀಡಬೇಕಾಗಿದೆ ಎಂದು ಎಪಿಎಂಸಿ ಮಾಜಿ ನಿರ್ದೇಶಕ ಹಾಗೂ ಕನ್ನಡ ಸೇನೆ ಅಧ್ಯಕ್ಷ ಧನಿಯಾ ಕುಮಾರ್ ಒತ್ತಾಯಿಸಿದ್ದಾರೆ.
ಎಪಿಎಂಸಿ ಪ್ರಕಟಣೆ ಕೇಳಿದ ದಿನದಿಂದ ವಿಳೇದೆಲೆ ವ್ಯಾಪಾರಿಗಳು ಭಯದಿಂದ ತತ್ತರಿಸಿಹೋಗಿದ್ದಾರೆ ಮತ್ತು ತಮ್ಮನ್ನು ಅಲ್ಲಿಂದ ಎತ್ತಂಗಡಿ ಮಾಡಬಾರದೆಂದು ಜಿಲ್ಲಾಧಿಕಾರಿಗಳನ್ನು ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ತುಮಕೂರು ನಗರದಲ್ಲಿ ಮೊದಲಿಗೆ ಹೂ, ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಮೊದಲಿಗೆ ಅಮಾನಿಕೆರೆ ಕೋಡಿ ಬಳಿ, ಕೋಟೆ ಆಂಜನೇಯ ದೇವಾಲಯದ ಬಳಿಯ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ನಡೆಯುತ್ತಿತ್ತು, ಅದಾದ ಬಳಿಕ ಜೆಸಿ ರಸ್ತೆಯಲ್ಲಿರುವ ಹಳೇ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಂಡಿತು, ಮತ್ತು ಇದೀಗ ಏಗೇನಹಳ್ಳಿ ಕಟ್ಟೆಯಲ್ಲಿ ನಿರ್ಮಿಸಲಾಗಿರುವ ಮಾರುಕಟ್ಟೆಯಲ್ಲಿ ಕರ‍್ಯನಿರ್ವಹಿಸುತ್ತಿದೆ. ಈಗ ಎತ್ತಂಗಡಿಯ ಆತಂಕದಲ್ಲಿರುವ ಎಲ್ಲ ವಿಳೇದೆಲೆ ವ್ಯಾಪಾರಿಗಳು ಅವರ ತಾತನ ಕಾಲದಿಂದಲೂ ಕಾಲಾನುಕ್ರಮದಲ್ಲಿ ಈ ಮೂರೂ ಮಾರುಕಟ್ಟೆಗಳಲ್ಲಿ ಈ ವಿಳೇದೆಲೆ ಮಾರಾಟ ಮಾಡಿಕೊಂಡೇ ಬಂದಿದ್ದಾರೆ. ಅವರಿಗೆ ಈ ಕಸುಬನ್ನು ಹೊರತುಪಡಿಸಿ ಇತರ ಯಾವ ವಿದ್ಯೆ ಮತ್ತು ಉದ್ಯೋಗವೂ ಇಲ್ಲ. ಪರಿಸ್ಥಿತಿ ಹೀಗಿರುವಾಗ ಇವರನ್ನು ಅಲ್ಲಿಂದ ಎಬ್ಬಿಸಲು ಯಾರು ಆದೇಶ ಕೊಟ್ಟವರು ಎಂಬ ಸಂಗತಿ ಬಹಿರಂಗವಾಗಬೇಕಿದೆ.
ಆದರೆ, ಎಪಿಎಂಸಿ ಕಾರ್ಯದರ್ಶಿ ಶ್ರೀಮತಿ ಪುಷ್ಪ ಅವರ ಪ್ರಕಾರ ಎಪಿಎಂಸಿ ವಿಳೇದೆಲೆ ವ್ಯಾಪಾರಿಗಳನ್ನಾಗಲೀ ಇನ್ನಿತರ ಯಾವುದೇ ವರ್ತಕರನ್ನು ಮಾರುಕಟ್ಟೆಯಿಂದ ಎತ್ತಂಗಡಿ ಮಾಡಲು ಮುಂದಾಗಿಲ್ಲ.
ವಿಳೇದೆಲೆ ವರ್ತಕರ ಸಮಸ್ಯೆ ಕುರಿತಂತೆ ‘ಬೆವರ ಹನಿ’ ದಿನಪತ್ರಿಕೆಗೆ ಸ್ಪಷ್ಟೀಕರಣ ನೀಡಿದ ಅಧಿಕಾರಿಯವರು, ಹೂ,ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತ ತಲುಪಿದೆ. ಕಾಮಗಾರಿ ಅವಧಿಯಲ್ಲಿ ಎಲ್ಲ ವರ್ತಕರೂ ಸಿಕ್ಕ ಸಿಕ್ಕೆಡೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ರಸ್ತೆ ಕಾಮಗಾರಿ ಅರಂಭಗೊಳ್ಳುವ ಮೊದಲು ಸದರಿ ಮಾರುಕಟ್ಟೆಯಲ್ಲಿ ಬಹಳಷ್ಟು ವರ್ತಕರು ಅವರಿಗೆ ಮಂಜೂರು ಮಾಡಿರುವ ಅಂಗಡಿಗಳಿAದ ಮುಂದಕ್ಕೆ ಬಂದು ಅರ್ಧದಷ್ಟು ರಸ್ತೆಯನ್ನು ಅತಿಕ್ರಮಿಸಿಕೊಂಡು ಅವರ ಹೂ,ಹಣ್ಣು ತರಕಾರಿ ವ್ಯಾಪಾರ ಮಾಡುತ್ತ ಗ್ರಾಹಕರ ಮತ್ತು ಸರಕು ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಹೀಗೆ ಅನಧಿಕೃತವಾಗಿ ರಸ್ತೆಗಳನ್ನು ಅತಿಕ್ರಮಿಸಿಕೊಂಡಿರುವವರನ್ನು ಹಿಂದಕ್ಕೆ ಅವರಿಗೆ ಮಂಜೂರು ಮಾಡಿರುವ ಮಳಿಗೆಗಳಲ್ಲೇ ಕುಳಿತು ವ್ಯಾಪಾರ ಮಾಡುವಂತೆ ಮಾತ್ರವೇ ನಾಲ್ಕೆöÊದು ದಿನ ಪ್ರಕಟಣೆ ನೀಡಲಾಗಿದೆ ಎಂದರು.
ಆದಾಗ್ಯೂ, ಎಪಿಎಂಸಿ ಮಂಜೂರು ಮಾಡಿರುವ ಮಳಿಗೆಗಳಲ್ಲೇ ವ್ಯಾಪಾರ ಮಾಡುತ್ತಿರುವ ವಿಳೇದೆಲೆ ವ್ಯಾಪಾರಿಗಳ ಮಳಿಗೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು ಎಂಬ ಸಂಗತಿಯನ್ನೂ ವ್ಯಾಪಾರಿಗಳು ಹೇಳುತ್ತಾರೆ.
ಒಟ್ಟಾರೆ ತುಮಕೂರಿನ ಎಪಿಎಂಸಿ ಹೂ,ಹಣ್ಣು,ತರಕಾರಿ ಮಾರುಕಟ್ಟೆಯೆಂಬುದು ಮೊದಲಿಂದಲೂ ಗೊಂದಲದ ಗೂಡಾಗಿದೆ. ಅಧಿಕೃತವಾಗಿ ಲೈಸೆನ್ಸ್ ಪಡೆದ ವ್ಯಾಪಾರಿಗಳು ಯಾರು, ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಹೊಣೆ ಅಂತಿಮವಾಗಿ ಎಪಿಎಂಸಿಯದೇ ಆಗಿರುವುದರಿಂದ, ಜನರನ್ನು ದೂರಲು ಬರುವುದಿಲ್ಲ. ಕೋವಿಡ್ ಬಿಕ್ಕಟ್ಟಿನ ಕಾರಣವಾಗಿ ಈಗಾಗಲೇ ಮಾರುಕಟ್ಟೆಯ ಸಗಟು ವಹಿವಾಟು ಹಗಲಿನಲ್ಲಿ ನಡೆಯುವುದು ಬಂದ್ ಆಗಿ ವರ್ಷಗಳೇ ಆಗಿಬಿಟ್ಟಿತು. ಮಧ್ಯರಾತ್ರಿ ಒಂದೂವರೆಯಿಂದ ಬೆಳಗಿನ ಜಾವ ನಾಲ್ಕು ಗಂಟೆಯೊಳಗಾಗಿ ಎಲ್ಲ ರೈತರು ಅವರ ಉತ್ಪನ್ನಗಳನ್ನು ತಂದಿಳಿಸಿ, ಮಾರಾಟ ಮಾಡಿ ಬೆಳಕು ಹರಿಯುವ ಹೊತ್ತಿಗೆ ಅಲ್ಲಿಂದ ಹೊರಟು ಬಿಟ್ಟಿರುತ್ತಾರೆ. ಹಾಗಾಗಿ ಇಡೀ ಎಪಿಎಂಸಿಯಲ್ಲಿ ಉಳಿಯುವವರೆಲ್ಲ ಚಿಲ್ಲರೆ ಮಾರಾಟ ಮಾಡುವ ವರ್ತಕರೇ ಆಗಿದ್ದಾರೆ. ಕೇಂದ್ರ ಸರ್ಕಾರ ಅನುಷ್ಟಾನಕ್ಕೆ ತರಲು ಉದ್ದೇಶಿಸಿ, ದಿಲ್ಲಿ ಗಡಿಗಳಲ್ಲಿ ರೈತರ ಬೃಹತ್ ಪ್ರತಿಭಟನೆ ಕಾರಣ ಮೂರು ಕೃಷಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆದಿದೆ, ಆದರೆ ಅದಕ್ಕೆ ಮೊದಲೇ ರಾಜ್ಯ ಸರ್ಕಾರ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿ ಮಾಡಿಬಿಟ್ಟಿತು. ಇದೇ ಕಾರಣವಾಗಿ ರೈತರು ಅವರ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ಮಾರಾಟ ಮಾಡಿಕೊಳ್ಳಲು ಅವಕಾಶ ದೊರಕಿತು, ಪರಿಣಾಮ ಕೃಷಿ ಉತ್ಪನ್ನ ಮಾರುಕಟ್ಟೆಗಳ ಮೂಲಕ ರಾಜ್ಯಕ್ಕೆ ಬರುತ್ತಿದ್ದ ವರಮಾನ ಗಣನೀಯವಾಗಿ ಕುಸಿದಿದೆ ಎಂದು ಸಂಬಂಧಿಸಿದ ಖಾತೆ ಸಚಿವರಾದ ಎಸ್.ಟಿ.ಸೋಮಶೇಖರ್ ಅಧಿಕೃತವಾಗೇ ಒಪ್ಪಿಕೊಂಡಿದ್ದಾರೆ. ಇಷ್ಟಲ್ಲೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎಪಿಎಂಸಿ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕ ಸ್ನೇಹಿಯಾಗಿರಬೇಕೇ ಹೊರತು ಬಡಪಾಯಿಗಳ ಜೀವಹಿಂಡುವ ಕಾರ್ಯಕ್ಕೆ ಕೈ ಹಾಕಬಾರದು ಎಂದು ಧನಿಯಾಕುಮಾರ್ ಎಚ್ಚರಿಕೆ ನೀಡಿದ್ದಾರೆ.