ರೈತರ ಹೋರಾಟ ಅಭಿಪ್ರಾಯ ಆಶಯಗಳು
farmers protest, repeal of farm laws, reaction
ಆರದಿರಲಿ ಬೆಳಕು
ದೀಪವು ನಿನ್ನದೆ, ಗಾಳಿಯು ನಿನ್ನದೆ,
ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ,
ಮುಳುಗದಿರಲಿ ಬದುಕುʼ
ಇಷ್ಟು ಹಾರೈಸುವುದು ಬಿಟ್ಟರೆ ಈ ವಯಸ್ಸಿನಲಿ ಇನ್ನು ನನಗೇನಾಗಬೇಕಾಗಿದೆ?
ಡಾ,ಪುರುಷೋತ್ತಮ ಬಿಳಿಮಲೆ
ಈ ಗೆಲುವು ಹೊಸ ಭಾರತ ಕಟ್ಟೋಣದ
ಕಸುವಾಗಿ ಕನಸಾಗಿ ಬದಲಾಗಲಿ
ವರ್ಷಕಾಲ ನಡೆದ ರೈತ ಹೋರಾಟದಲ್ಲಿ ಅನೇಕ ಸ್ಮರಣೀಯ ಚಿತ್ರಗಳು ತೆಗೆಯಲ್ಪಟ್ಟವು. ಕೆಲವು ನಮ್ಮನ್ನು ಆವರಿಸಿ ಕಾಡಿದವು. ಇವುಗಳಲ್ಲಿ ಒಂದು-ರಾಕೇಶ್ ಟಿಕಾಯತ್ ಉಮ್ಮಳಿಸಿ ಅಳುವ ಚಿತ್ರ; ಮತ್ತೊಂದು- ಆಕ್ರಮಣಕಾರಿಯಾಗಿ ಕೈಯೆತ್ತಿರುವ ಪೋಲೀಸು ಹಾಗೂ ಹೊಡೆತ ತಪ್ಪಿಸಿಕೊಳ್ಳಲು ಕೈಯಡ್ಡಮಾಡಿಕೊಂಡು ನೋವಿನ ನಗೆಯನ್ನು ಬೀರುತ್ತಿರುವ ರೈತನಚಿತ್ರ. ಈ ಎರಡನೆಯ ಚಿತ್ರದಲ್ಲಿ ಹೊಡೆವವನ ಕೈ ಬಲಿಷ್ಠವಾಗಿದೆ. ತಡೆಯುತ್ತಿರುವ ಕೈ ದುರ್ಬಲವಾಗಿದೆ. ಹೊಡೆವ ಯುವಕ ಅಂಗರಕ್ಷಣೆಗೆ ಹುಲಿಪಟ್ಟೆಯ ಜಾಕೀಟನ್ನೂ ಹೆಲ್ಮೆಟ್ಟನ್ನೂ ತೊಟ್ಟಿದ್ದರೆ, ಬಡಿಸಿಕೊಳ್ಳುವ ವೃದ್ಧನ ತಲೆಯ ಮೇಲೆ ಕೇವಲ ಸಾಂಪ್ರದಾಯಿಕ ಪಗಡಿಯಿದೆ. ರೈತನ ಮುಖ ಕಾಣುತ್ತಿದೆ. ಹೊಡೆಗಾರನಿಗೆ ಮುಖವಿಲ್ಲ. ಪ್ರಭುತ್ವದ ಪ್ರತಿನಿಧಿಯಾದ ಆತ ನಿಂತಿದ್ದಾನೆ. ಅನ್ನದಾತರ ಪ್ರತಿನಿಧಿ ಆತಂಕದಿಂದ ಚಲಿಸುತ್ತಿದ್ದಾನೆ. ಬಹುಶಃ ಬಡಿಯಲು ಧಾವಿಸುತ್ತಿರುವ ಬಡಿಗೆಧಾರಿಯು, ಯಾವುದೊ ರೈತನ ಅಥವಾ ಕುಶಲಕರ್ಮಿಯ ಮಗನೂ ಆಗಿರಬಹುದು. ಇದೊಂದು ಸೋಜಿಗವಲ್ಲದ ವೈರುಧ್ಯ. ಕಾರಣ, ಭಾರತದಲ್ಲಿ ಉಳ್ಳವರ ಅಥವಾ ಪ್ರಭುತ್ವದ ಕ್ರೌರ್ಯವು, ಅದರ ದಮನಿತ ಬಲಿಪಶುಗಳ ಮೂಲಕವೂ ಜಾರಿಯಾಗುತ್ತದೆ.
ಆದರೆ ಕೊನೆಗೂ ಗೆದ್ದಿರುವುದು ಹೊಡೆಸಿಕೊಂಡ ವೃದ್ಧರೈತನ ಛಲ ಮತ್ತು ತಾಳ್ಮೆ. ಇದು ನಮ್ಮ ಕಾಲ ಕಂಡ ಪ್ರಭುತ್ವ ವಿರೋಧಿ ಹೋರಾಟಗಳ ದೊಡ್ಡ ಗೆಲುಮೆ. ಜನವಿರೋಧಿ ಕಾಯಿದೆ ಸಿದ್ಧಾಂತ ನೀತಿಗಳನ್ನು ನಾವು ಸೋಲಿಸಬಲ್ಲೆವು ಎಂದು ನಮ್ಮ ರೈತರು ತೋರಿಸಿಕೊಟ್ಟ ಚಾರಿತ್ರಿಕವಾದ ಅಪೂರ್ವ ನಿದರ್ಶನ.
ಕಾಯಿದೆಗಳ ಹಿಂತೆಗೆತವು ಪ್ರಭುತ್ವ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ರಣತಂತ್ರವೂ ಆಗಿರಬಹುದು ಎಂಬ ಹುಶಾರಿನಲ್ಲೇ, ಈ ಗೆಲುವು ಹೊಸ ಭಾರತ ಕಟ್ಟೋಣದ ಕಸುವಾಗಿ ಕನಸಾಗಿ ಬದಲಾಗಲಿ.
-ರಹಮತ್ ತರೀಕೆರೆ
ಧೀಮಂತ ಶಕ್ತಿಯೇ ನಿನಗೆ ಶರಣು.
ಸರ್ವಾಧಿಕಾರಿಯನ್ನು ಮಣಿಸಲು 700 ಕ್ಕೂ ಹೆಚ್ಚು ಜೀವಗಳ ಬಲಿದಾನ ಮತ್ತು ಇಷ್ಟೊಂದು ರಕ್ತ ಹರಿಸಬೇಕಾಯಿತು. ಭಗತ್ ಸಿಂಗ್ ನನ್ನು ಎದೆಮೇಲೆ ಧರಿಸಿದ ಧೀಮಂತ ಶಕ್ತಿಯೇ ನಿನಗೆ ಶರಣು.
ಬಸೂ
ಊಟದ ತಾಟಿನಲ್ಲಿ....
ಮಿಡಿ ಉಪ್ಪಿನ ಕಾಯಿ, ಹೆಸರುಬೇಳೆ, ಸೌತೆಕಾಯಿ ಲಿಂಬೆ,
ತೆಂಗು, ಸಾಸಿವೆ, ಕರಿಬೇವು ಹಸಿ ಮೆಣಸು ಹಾಕಿದ ಘಮ್ಮನೆ ಪರಿಮಳ ಸೂಸುವ ಕೋಸಂಬರಿ.
ಹುರುಳಿ ಕಾಯಿಯ ಪಲ್ಯ,
ಬೆಂಡೆಕಾಯಿ ಗೊಜ್ಜು.
ಬದನೆ ನೀರುಳ್ಳಿ ಆಲೂ ಹಾಕಿದ ಸಾಂಬಾರು- ಅದರಲ್ಲಿ ಉದ್ದು, ಕಡಲೆ, ಕೊತ್ತಂಬರಿ ಬೀಜ, ಮೆಣಸು, ಮೆಂತೆ, ಒಣಮೆಣಸು, ಕೊಬ್ಬರಿ ಹುರಿದು ಹಾಕಿದ ಪುಡಿಯ ಘಮ!
ಬೆಳ್ಳುಳಿ ಒಗ್ಗರಣೆ ಹಾಕಿರುವ ಹುಣಿಸೆ ಸಾರು
ಬೆಲ್ಲ, ತೆಂಗು, ದ್ರಾಕ್ಷಿ, ಏಲಕ್ಕಿ,
ತುಪ್ಪದ ಗೋಧಿಯ ಹುಗ್ಗಿ
ಹಾಲಿನ ಕೀರು
ಕೊತ್ತಂಬರಿ ಸೊಪ್ಪು-
ಹಸಿ ಶುಂಠಿ ಬೆರೆಸಿದ ಮಜ್ಜಿಗೆ
ಮಲ್ಲಿಗೆ ಹೂವಿನಂತಹ ಅನ್ನ
ಜೋಳದ ರೊಟ್ಟಿ-ತುಂಡು ಹಸಿ ನೀರುಳ್ಳಿಯಲ್ಲೂ
ರಾಗಿಯ ಮುದ್ದೆ- ಉಪ್ಪೆಸರಿನಲ್ಲೂ...
ಗೋಧಿಯ ರೊಟ್ಟಿ- ದಾಲ್ ನಲ್ಲೂ...
ಬಾಡೂಟ, ಬಿರಿಯಾನಿ...
ಭೂರಿ ಭೋಜನದಲ್ಲೂ...
ಉಪ್ಪು-ಗಂಜಿ-ಉಪ್ಪಿನಕಾಯಲ್ಲೂ
ಒಂದೊಂದು ಅಗುಳಿನಲ್ಲೂ ನೀನೇ ಇರುವೆ
ಊಟದ ತಾಟಿನ ತುಂಬಾ
ನೀನೇ ಕಾಣುವೆ !
ಓ ರೈತನೇ ಮೊದಲ ತುತ್ತು ನಿನಗೇ ಅರ್ಪಣೆ
-ಸವಿತಾ ನಾಗಭೂಷಣ
* ಅವರವರ ನಾಲಿಗೆಗೆ ಒಗ್ಗುವ ಆಹಾರ ಪದಾರ್ಥಗಳನ್ನು ಕೂಡಿಸಿ ಸಹೃದಯರು ಓದಿಕೊಳ್ಳಬಹುದು.
ಚಿತ್ರ:ಹಜರತ್ ಅಲೀ.