ತುಮಕೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ: ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ತುಮಕೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ: ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ತುಮಕೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ:
ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ತುಮಕೂರು: ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದಡಿ ಪ್ರಾರಂಭಗೊಳಿಸಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ತಾಲ್ಲೂಕು ಪಂಚಾಯತಿ ಆಡಳಿತಾಧಿಕಾರಿ ಹಾಗೂ ತೋಟಗಾರಿಕಾ ಅಧಿಕಾರಿ ಬಿ.ರಘು ಸೂಚನೆ ನೀಡಿದರು.
ತಾಲ್ಲೂಕು ಪಂಚಾಯತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಹಾಗೂ ಕೆಡಿಪಿ ಸಭೆಯಲ್ಲಿ ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಗತಿ ವರದಿ ಪರಿಶೀಲಿಸಿ ಮಾತನಾಡಿದ ಅವರು ತಾಲ್ಲೂಕಿನ ಎಲ್ಲಾ ಇಲಾಖೆಗಳು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯಡಿ ಮುತ್ಸಂದ್ರ, ಗೌಡಿಹಳ್ಳಿ, ಅದಲಾಪುರ, ಹಾಲನೂರು ಗ್ರಾಮಗಳಲ್ಲಿ ಪ್ರಗತಿಯಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಭವನ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.
2021-22ನೇ ಸಾಲಿನ ಫೆಬ್ರುವರಿ ಮಾಹೆಯಲ್ಲಿ ಸಾಧಿಸಿರುವ ವರದಿಯ ಪ್ರಕಾರ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ 2 ಅಂಗನವಾಡಿ ಕಟ್ಟಡಗಳು ಪೂರ್ಣಗೊಂಡಿದ್ದು, 3 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದರು.
ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲಿರುವ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ ಹಾಗೂ ಕೊರಟಗೆರೆ ವಿಧಾನ ಸಭಾ ಕ್ಷೇತ್ರ(ಕೋರ ಹೋಬಳಿ)ದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಬಿಪಿಎಲ್ ಪಡಿತರ ಚೀಟಿದಾರರ ಪಡಿತರ ಚೀಟಿಯನ್ನು ಎನ್.ಪಿ.ಹೆಚ್.ಹೆಚ್.(ಆದ್ಯತೇತರ) ಪಡಿತರ ಚೀಟಿಯನ್ನಾಗಿ ಪರಿವರ್ತನೆ ಮಾಡಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮಂಜೂರಾಗಿರುವ 12 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.
ಆಯಾ ಇಲಾಖೆಯ ಪ್ರಗತಿ ಪರಿಶೀಲನೆ ಮುಕ್ತಾಯಗೊಂಡ ಕೂಡಲೇ ಆ ಇಲಾಖಾಧಿಕಾರಿಗಳನ್ನು ತಮ್ಮ ಇಲಾಖಾ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ತೆರಳಲು ಸೂಚಿಸಲಾಯಿತು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಜೈಪಾಲ್ ಮತ್ತು ತಾಲ್ಲೂಕು ಮಟ್ಟದ ಇಲಾಖಾಧಿಕಾರಿಗಳು ಹಾಜರಿದ್ದರು.
ಮುಂದಿನ ಸಭೆಗೆ ಎಇಇ ಬರಲಿ !?
ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಆ ಇಲಾಖೆ ಪರವಾಗಿ ಆಗಮಿಸಿದ್ದ ಅಧಿಕಾರಿ ನೀಡಿದ ವಿವರಣೆಯು ಆಡಳಿತಾಧಿಕಾರಿ ರಘು ಅವರಿಗೆ ತೃಪ್ತಿ ತರಲಿಲ್ಲ. ಅವರು ಸದರಿ ಅಧಿಕಾರಿಗೆ ವಿವಿಧ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಆ ಅಧಿಕಾರಿ ನೀಡಿದ ಉತ್ತರ ಸಮಾಧಾನ ನೀಡಲಿಲ್ಲ. ಮುಂದಿನ ಸಭೆಗೆ ಸ್ವತಃ ಎ.ಇ.ಇ. ಅವರೇ ಇರಬೇಕೆಂದು ಅವರು ಸೂಚಿಸಿದರು.
***********
ಕೇಂದ್ರ ಯೋಜನೆಗಳ ಫಲಾನುಭವಿಗಳ ಗಮನಕ್ಕೆ
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್‌ಗೆ ಮಾ.31 ಕಡೇ ದಿನ
ತುಮಕೂರು: ಕೇಂದ್ರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸವಲತ್ತು ಪಡೆಯುತ್ತಿರುವ ಹಾಗೂ ಸರ್ಕಾರದ ಎಲ್ಲಾ ಯೋಜನೆಗಳ ನಗದು ವರ್ಗಾವಣೆಯ ಸೌಲಭ್ಯವನ್ನು ಪಡೆಯಲು ಜಿಲ್ಲೆಯ ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ಮಾರ್ಚ್ 31ರೊಳಗೆ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಿ, ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಬೇಕೆಂದು ಕೃಷಿ ಜಂಟಿ ನಿರ್ದೇಶಕಿ ರಾಜ ಸುಲೋಚನಾ ಮನವಿ ಮಾಡಿದ್ದಾರೆ.
ಅರ್ಹ ಫಲಾನುಭವಿಗಳಿಗೆ 2022-23ನೇ ಸಾಲಿನ ಏಪ್ರಿಲ್-ಜುಲೈ ಚತುರ್ಮಾಸಿಕದಿಂದ ಯೋಜನೆಯ ಮೊತ್ತವನ್ನು ಆಧಾರ್ ಆಧಾರಿತ ಪಾವತಿ ಮಾಡಲು ಆಧಾರ್ ಜೋಡಣೆ ಕಡ್ಡಾಯವಾಗಿದೆ. ಈವರೆಗೂ ಆಧಾರ್ ಜೋಡಣೆಯಾಗದೇ ಇರುವ ಎಲ್ಲಾ ರೈತ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರದರ್ಶಿಸಲಾಗಿದೆ.
ಜಿಲ್ಲೆಯಲ್ಲಿ ಚಿ.ನಾ.ಹಳ್ಳಿ-1160, ಗುಬ್ಬಿ-2353, ಕೊರಟಗೆರೆ-1080, ಕುಣಿಗಲ್-1586, ಮಧುಗಿರಿ-1283, ಪಾವಗಡ–1367, ಶಿರಾ-1649, ತಿಪಟೂರು-1344, ತುಮಕೂರು–1690 ಮತ್ತು ತುರುವೇಕೆರೆ - 1502 ಸೇರಿದಂತೆ ಒಟ್ಟು 15014 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಕಾರಣ ಯೋಜನೆಯ ಮೊತ್ತ ಪಾವತಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಆಧಾರ್ ಜೋಡಣೆಯಾಗದ ಪಟ್ಟಿಯಲ್ಲಿರುವ ರೈತ ಬಾಂಧವರು ತಮ್ಮ ಬ್ಯಾಂಕ್‌ಗಳಿಗೆ ಭೇಟಿ ನೀಡಿ ತಮ್ಮ ಎಲ್ಲಾ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಅನ್ನು ಮಾಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬೇಕೆAದು ಅವರು ತಿಳಿಸಿದ್ದಾರೆ.