ಹೀಗೆ... ಹೆಸರೇ ಇಲ್ಲದ ಒಂದು ಪಾತ್ರ ಇತಿಹಾಸದಲ್ಲಿ ಬಂದುಹೋಯಿತು
‘ಅರಸರ ದಯೆಯಿಂ ಮನೆಯುಂ ಕವರ್ತೆ ವೋಪುದುಂ’ ಎನ್ನುವ ಮಾತು. ಅಂದರೆ (ರಾಜನೇ ನಮ್ಮ ಮನೆಯನ್ನು ನಾಶ ಮಾಡಿದವನು) ಎಂದು.

ದಯ ಗಂಗನಘಟ್ಟ
ಅವನದೆಷ್ಟೇ ದೊಡ್ಡ ಕುಳವೇ ಆಗಿರ್ಲಿ,ರಾಜನೇ ಆಗಿರ್ಲಿ, ಎಲ್ಲಾದರೂ ಆಸ್ತಿ ಸಿಗೋ ಸಾಧ್ಯತೆ ಇದೆ ಅನಿಸಿದರೆ ಅದನ್ನ ತನ್ನದು ಮಾಡಿಕೊಳ್ಳದೇ ಬಿಡಲ್ಲ,ಅದರಲ್ಲೂ ಅದೊಂದು ಅಸಹಾಯಕ ಒಂಟಿ ಹೆಣ್ಣಿನ ಆಸ್ತಿ ಆಗಿದ್ದರಂತೂ ಮುಗಿಯಿತು ಎಲ್ಲಾ ತರದಲ್ಲೂ ಮುಗಿಬೀಳುತ್ತಾನೆ, ನಮಗೆ ನಾವೇ ಯಜಮಾನರಾದ,ನಮಗೆ ಬೇಕಾದ ಎಲ್ಲಾ ನಿರ್ಧಾರಗಳನ್ನೂ ನಾವೇ ತೆಗೆದುಕೊಳ್ಳುತ್ತಿರುವ ಈ ಕಾಲದಲ್ಲಿ ಹೆಂಗಸೊಬ್ಬಳು ಸರ್ವೈವ್ ಆಗಲು ಪಡುವ ಪಾಡುಗಳು,ಅವಳ ಹೋರಾಟಗಳು,ಅದಕ್ಕೆ ಇರುವ ಅಡ್ಡಿ ಆತಂಕಗಳು ನಮ್ಮ ಕಣ್ಮುಂದೆ ಬಹಳಷ್ಟಿವೆ, ಒಂಟಿಯಾಗಿ ನಿಂತು ಹೋರಾಡಿ ಗೆದ್ದ ಹೆಣ್ಣಿನ ಸಾಹಸಗಾತೆಗಳು ಜಗತ್ತಿನಲ್ಲಿ ಸಾಕಷ್ಟಿವೆ, ಅದರಾಚೆಗೂ ಅವಳ ಹೋರಾಟದ ಫಲಗಳು ಮುಂದಿನ ಪೀಳಿಗೆಗೆ ಎಷ್ಟರ ಮಟ್ಟಿಗೆ ದಾಟುತ್ತವೆ ಎನ್ನುವುದೂ ಮುಖ್ಯ, ಯಾವ ಹೆಣ್ಣಿಗೂ ತನ್ನದು ಅನ್ನುವುದನ್ನ ಉಳಿಸಿಕೊಳ್ಳುವು ಬಹಳ ಕಷ್ಟ, ಅಷ್ಟು ಕಷ್ಟದಲ್ಲಿ ಮಾಡಿದ ಹೋರಾಟ ಯಾವುದಕ್ಕಾದರೂ ನಾಂದಿಯಾದರೆ ಅದು ಸಾರ್ಥಕವಾದಂತೆ, ಅದೆಷ್ಟೇ ಸಣ್ಣ ಹೋರಾಟವಾಗಲಿ ಹೆಣ್ಣೊಬ್ಬಳ ಹೋರಾಟಕ್ಕೆ ಬೆಲೆ ಇದೆ, ಅದರ ಫಲ ಮತ್ಯಾವುದಕ್ಕಾದರೂ ನಾಂದಿ ಹಾಡಬೇಕು, ರಾಜನ ಆಳ್ವಿಕೆಯ ಕಾಲದಲ್ಲಿ ಸಾಮಾನ್ಯ ಹೆಣ್ಣೊಬ್ಬಳು ತನ್ನದು ಅನ್ನುವುದನ್ನ ಉಳಿಸಿಕೊಳ್ಳಲು ಗಟ್ಟಿಯಾಗಿ ನಿಲ್ಲುತ್ತಾಳಲ್ಲಾ ಆಗ ಹುಟ್ಟುವ ಪ್ರಶ್ನೆಗಳು ವ್ಯವಸ್ಥೆ ಅಥವಾ ಯಜಮಾನಿಕೆಯ ವಿರುದ್ಧದ ಧ್ವನಿಗಳಾಗುತ್ತವೆ.
ಮೊನ್ನೆ ಮೊನ್ನೆ ಮಂದಿರಾಬೇಡಿ ತನ್ನ ಗಂಡನ ಸಾವಿನ ಅಂತ್ಯಕ್ರಿಯೆಗಳನ್ನು ತಾನೇ ನಿಂತು ನಡೆಸಿದ ಸುದ್ಧಿ ವೈರಲ್ ಆಗಿತ್ತು, ಮಗ ಅಥವಾ ಸಹೋದರ, ತಂದೆ ಹೀಗೆ ಯಾರೇ ಪುರುಷರು ನೆರವೇರಿಸುವ ಅಂತ್ಯ ಸಂಸ್ಕಾರದ ಕೆಲಸಗಳಲ್ಲಿ, ಶವವನ್ನು ಸಾಗಿಸುವಾಗ ಮಂದಿರಾ ಕೂಡ ಪುರುಷರ ಜೊತೆ ಸೇರಿಕೊಂಡು ಪತಿಯ ಶವವನ್ನು ಹೊತ್ತು ಸಾಗಿದ್ದು ಅಲ್ಲದೆ, ತಾನೇ ನಿಂತು ಅಂತ್ಯಸಂಸ್ಕಾರ ಕೂಡ ನೆರವೇರಿಸಿದ್ದು ಅವತ್ತಿನ ಘಟನೆ, ಈ ಹಿಂದೆ ಮಹಿಳೆಗೆ ಈ ಅವಕಾಶ ಇತ್ತಾ? ಇದ್ದರೂ ಇರದಿದ್ದರೂ ಆ ಹಕ್ಕಿನಿಂದಾಗುವ ಲಾಭ ಅಥವಾ ನಷ್ಟಗಳೇನು? ಕೇವಲ ಇಂತಹ ಆಚರಣೆಗಳಲ್ಲಿ ಭಾಗಿಯಾಗುವುದಷ್ಟೇ ಬದಲಾವಣೆಯಾ, ಆ ಒಂದು ಆಚರಣೆ ಅದರಲ್ಲಿ ಭಾಗಿಯಾದವರಿಗೆ ಯಾವ ಯಾವ ಹಕ್ಕುಗಳನ್ನ ತಂದುಕೊಡುತ್ತದೆ? ಎಂಬ ಪ್ರಶ್ನೆ ಮೂಡಿದರೆ, ಸೀತಾಮಾತೆ ಮರಳಿನಲ್ಲಿ ಅನ್ನದ ಉಂಡೆಗಳನ್ನು ಮಾಡಿ ಪಿತೃಗಳಿಗೆ ತಿಥಿ ಕಾರ್ಯ ಮಾಡಿದ ಕತೆ ತ್ರೇತಾಯುಗದಲ್ಲಿ ಇದೆ, ಪುರಾಣದಲ್ಲಿ 'ಅಪಲಾ' ಎಂಬ ಮಹಿಳೆಯು ತನ್ನ ಹಕ್ಕುಗಳಿಗಾಗಿ ಹೋರಾಡಿದ ಉಲ್ಲೇಖ ಬರುತ್ತದೆ.
ಸ್ತ್ರೀ ಸಮಾನತೆಯ ಬಹು ದೊಡ್ಡ ದೊಡ್ಡ ಮಾತುಗಳನ್ನು ನಾವುಗಳು ಆಡುತ್ತಿರುವ ಹೊತ್ತಿನಲ್ಲಿ, ಫೆಮಿನಿಸಮ್ ಎಂದರೆ ಉಡುಗೆ ತೊಡುಗೆ,ಜಗಳ ಸ್ವೇಚ್ಛೆ,ಸಂಸಾರದಿಂದ,ಅಡಿಗೆಮನೆಯಿಂದ ಹೊರಬರುವಷ್ಟಕ್ಕೇ ಸೀಮಿತವಾಗಬೇಕಾ, ಅದರಾಚೆಗೆ ನಾವು ತಲುಪಬೇಕಾದ ಎತ್ತರ ಯಾವುದು, ಹೆಣ್ಣೊಬ್ಬಳ ಧ್ವನಿಗೆ ಶಕ್ತಿ ಬರುವುದು ಯಾವಾಗ ಇತ್ಯಾದಿ ಪ್ರಶ್ನೆಗಳು ಏಳುತ್ತವೆ.
ಇವತ್ತು ನಮ್ಮ ಚರ್ಚೆಯ ವಿಷಯ ಹಳಗನ್ನಡ ಕಾವ್ಯದಲ್ಲಿ ಇಂತಹ ಒಂದು ಧ್ವನಿ ಕೇಳುತ್ತದೆ ಅದು ಪಂಪನ ಒಂದು ಪಾತ್ರವಾದ ‘ನಿರ್ನಾಮಿಕೆ’ ಎಂಬ ಹೆಣ್ಣಿನದು.
ಭವಾವಳಿಗಳ ನಡುವೆ ಬರುವ ಒಂದು ಜನ್ಮದ ವೃತ್ತಾಂತದಲ್ಲಿ ಅನಾಥ ಹೆಣ್ಣೊಬ್ಬಳು ತನ್ನ ಅಸ್ತಿತ್ವಕ್ಕಾಗಿ ಬಡಿದಾಡುವ ಪ್ರಸಂಗ ಬಹಳ ಇಂಟ್ರೆಸ್ಟಿಂಗ್ ಅನ್ನಿಸಿದ ಕಾರಣ, ಮತ್ತು ಅದು ಅಂದಿನ ಕಾಲದ ಬದುಕಿನ ಬಗ್ಗೆ ಅನೇಕ ಹೊಳಹುಗಳನ್ನು ನೀಡುವ ಕಾರಣ ಅತಿ ಹೆಚ್ಚು ಚರ್ಚೆ ಆಗಬೇಕಿದ್ದ ವಿಷಯ ಎಂದು ನನಗೆ ಅನಿಸಿದ ಕಾರಣ ಅದನ್ನ ನಿಮ್ಮ ಮುಂದಿಡುತ್ತಿದ್ದೇನೆ.
‘ಆದಿಪುರಾಣ’ದ ತೃತೀಯಾಶ್ವಾಸದಲ್ಲಿ "ನಿರ್ನಾಮಿಕೆ" ಎಂಬ ಹೆಣ್ಣುಮಗಳೊಬ್ಬಳ ಮೇಲೆ ಅರಸುಮನೆಯಿಂದ ನಡೆದ ದೌರ್ಜನ್ಯ, ಶೋಷಣೆ, ಅನ್ಯಾಯಗಳನ್ನು ಆಕೆ ಪ್ರಶ್ನಿಸುವ ,ಮತ್ತು ಅದರ ವಿರುದ್ಧ ಏನನ್ನೂ ಮಾಡಲಾಗದ ಅವಳ ಅಸಹಾಯಕತೆಯ ಚಿತ್ರಣವಿದೆ.
ತನ್ನ ಹಿಂದಿನ ಜನ್ಮದ ಪ್ರಿಯಕರನಾದ ಲಲಿತಾಂಗದೇವನನ್ನ ನೆನಪಿಸಿಕೊಂಡು ದುುಃಖದಿಂದ ಇರುವ 'ಶ್ರೀಮತಿ'ಯು, ತನ್ನ ಸೇವಕಿ 'ಪಂಡಿತೆ'ಗೆ ತನ್ನ ಒಂದು ಜನ್ಮವಾದ 'ನಿರ್ನಾಮಿಕೆ'ಯ ವಿಚಾರಗಳನ್ನ ಹೇಳುತ್ತಾಳೆ. ಆ ವಿವರಗಳು ಹೀಗಿವೆ.
ಶ್ರೀಮತಿಯ ಈಗಿನ ಜನ್ಮಕ್ಕೂ ಹಿಂದಿನ, ಮೂರನೆಯ ಜನ್ಮದಲ್ಲಿ 'ದಾತಕೀಷಂಡ'ದ ಪೂರ್ವ ದಿಕ್ಕಿನಲ್ಲಿರುವ ಮಂದರ ಪರ್ವತದ ಪಶ್ಚಿಮ ದಿಕ್ಕಿಗೆ ‘ಸೀತೋದಾ' ಎಂಬ ನದಿ ಇತ್ತು. ಅದರ ಉತ್ತರ ದಡದಲ್ಲಿರುವ ಗಂಧಿಲ ದೇಶದ ‘ಪಾಟಲಿ’ ಎಂಬ ಗ್ರಾಮದಲ್ಲಿ ‘ನಾಗದತ್ತ’ ಎಂಬ ವ್ಯಾಪಾರಿ ಇರುತ್ತಾನೆ, ಅವನ ಹೆಂಡತಿ 'ವಸುದತ್ತೆ', ಅವರಿಗೆ ನಂದ, ನಂದಿಮಿತ್ರ, ನಂದಿಷೇಣ, ವರಸೇನ ಹಾಗೂ ಜಯಸೇನ ಎಂಬ ಐದು ಗಂಡುಮಕ್ಕಳು. ಇವರ ಜೊತೆಗೆ ಮದನಕಾಂತೆ, ಶ್ರೀಕಾಂತೆ ಎಂಬ ಇಬ್ಬರು ಹೆಣ್ಣು ಮಕ್ಕಳು ಜೊತೆಗೆ ಕೊನೆಗೆ ಗರ್ಭದಲ್ಲಿ ಮತ್ತೊಬ್ಬ ಮಗಳು ನಿರ್ನಾಮಿಕೆ.
ಈಕೆಯು ಹುಟ್ಟಿನ ನಂತರ 'ಬಹಳ ಚಂದವಾಗಿ ಫಸಲು ಬಿಟ್ಟ ಮಾವಿನ ಮರಕ್ಕೆ ಸಿಡಿಲು ಬಡಿಯಿತೇನೋ' ಎಂಬಂತೆ ಆಕೆಯ ಒಡಹುಟ್ಟಿದವರೂ,ತಂದೆಯೂ ಬೇರೆ ಬೇರೆ ಕಾರಣಗಳಿಂದ ಸತ್ತುಹೋಗುತ್ತಾರೆ.
ಮನೆಯ ಹಿರಿಯ ಗಂಡು ಜೀವಗಳು ಸತ್ತುಹೋದ ಕ್ಷಣದಿಂದಲೇ,ಅದುವರೆಗೆ ಗೌರವಯುತವಾಗಿ ಬಾಳಿ ಬದುಕಿದ ಮನೆಯು ಹಾಳು ಹಂಪೆಯಂತಾಗುತ್ತದೆ.
ಅವರುಮನಂತಕನೊಯ್ಯನೆ
ಸವಿನೋಳ್ಪುದುಮಾನುಮೆನ್ನ ಪಾಪದ ಫಲಮಂ
ಸವಿನೋಡೆ ಪೊಕ್ಕೆನೊಡನೊಗೆ
ದ ವಿಚಾರಣ ಚರಿತಮೆಂಬ ಗಹನಾಂತರಮಂ.
ಮನೆಗೆ ಗಂಡು ದಿಕ್ಕಿಲ್ಲದ್ದು, ಹೊಲಕ್ಕೆ ಬೇಲಿಯಿಲ್ಲ ಎಂಬುದು ಒಂದೇ ಎಂದು ಸಂಬಂಧಿಕರೇ ಜರಿದು, ಮನೆಯ ಹೆಂಗಸರಾದ ಮನೆಯ ಹಿರಿಜೀವ ಮತ್ತು ಹೆಣ್ಣು ಮಗಳನ್ನು ಅನ್ಯಗ್ರಹ ಜೀವಿಗಳಂತೆ ನೋಡ ತೊಡಗುತ್ತಾರೆ, ದಾಯಾದಿಗಳು, ಓರಗೆಯವರು ಇವರನ್ನು ಕೊಂಕು ಮತ್ತು ಗೇಲಿ ಮಾತುಗಳಿಂದ ಇರಿಯತೊಡಗುತ್ತಾರೆ, ಹೊರಹೋಗಿ ದುಡಿವ ಕೈಗಳಿಲ್ಲದೆ ತುತ್ತು ಅನ್ನಕ್ಕೂ ತತ್ವಾರ, ಇಂತಹ ಕಡು ಕಷ್ಟದ ಸಮಯದಲ್ಲಿ ಈ ಬಡಪಾಯಿಗಳ ಅಳಿದುಳಿದ ಆಸ್ತಿಗಳ ಮೇಲೆ ದಾಯಾದಿಗಳದ್ದಿರಲಿ, ಅರಸರ ಕಣ್ಣೇ ಬೀಳುತ್ತದೆ. ಅರಸನ ಕಡೆಯವರು ಹಲವು ಕಾರಣಗಳನ್ನು,ನೆವಗಳನ್ನು ನೀಡಿ ಈ ಬಡವರ ತಿನ್ನುವ ತಟ್ಟೆಯನ್ನೂ ಕಸಿದುಕೊಳ್ಳುತ್ತಾರೆ, ಮನೆಯನ್ನೂ ಲೂಟಿ ಮಾಡುತ್ತಾರೆ. ವಾಸವಿರಲು ಇದ್ದೊಂದು ಮನೆಯನ್ನೂ ಕಳೆದುಕೊಂಡ ಅಜ್ಜಿ ಮತ್ತು ಅಮ್ಮಂದಿರು ದೃತಿಗೆಟ್ಟು ಪರರ ಸೇವಾಗೃಹದಲ್ಲಿ ಆಶ್ರಯ ಪಡೆದು ಹೇಗೋ ಬದುಕಲಾರಂಭಿಸುತ್ತಾರೆ. ಆಗ ಗರ್ಭಿಣಿಯಾಗಿದ್ದ ಅಮ್ಮ ಒಂಬತ್ತು ತಿಂಗಳು ತುಂಬಿದಾಗ ಹೆಣ್ಣುಮಗುವೊಂದನ್ನು ಹೆರುತ್ತಾಳೆ, ಆ ಮಗುವೋ ಹುಟ್ಟಿದ ಕ್ಷಣದಲ್ಲೇ ಸೂಲಗಿತ್ತಿಯರು ಮೂಗುಮುಚ್ಚಿಕೊಂಡು ಅಸಹ್ಯದಿಂದ ವಾಂತಿಮಾಡಿಕೊಳ್ಳುವಷ್ಟು ದುರ್ಗಂಧದಿಂದ ಕೂಡಿರುತ್ತದೆ, ಹತ್ತಿರ ಸುಳಿಯಲೂ ಅಸಹ್ಯ ಪಟ್ಟುಕೊಳ್ಳುವಂತೆ ತುಸು ದೂರದವರೆಗೂ ದುರ್ವಾಸನೆ ಬೀರುತ್ತಿರುತ್ತದೆ, ಆ ಕಾರಣಕ್ಕಾಗಿಯೇ ಈ ಮಗುವಿನ ಬಳಿ ಜನರೇ ಸುಳಿಯುತ್ತಿರಲಿಲ್ಲ. ಎಲ್ಲರೂ ಸೇರಿ ಹಾಲುಗಲ್ಲದ ಕಂದನೆಂದೂ ಕಾಣದೆ, ಊರಿನಿಂದಲೇ ದೂರವಿಡುತ್ತಾರೆ. ಬೇರೆ ಗತಿ ಕಾಣದ ಮಗುವಿನ ಅಮ್ಮ ಮತ್ತು ಅಜ್ಜಿಯು ಮಗುವನ್ನು ಸ್ಮಶಾನದಲ್ಲಿ ಚಿಂದಿ ಬಟ್ಟೆಯಲಿ ಸುತ್ತಿಟ್ಟು ಮಲಗಿಸಿಕೊಳ್ಳುತ್ತಾರೆ, ಅವರಿವರಿಂದ ತಿರಿದು ತಂದು ಆ ಮಗುವನ್ನು ಸಾಕುತ್ತಾರೆ. ಈ ರೀತಿಯಾಗಿ ಬೆಳೆದ ನತದೃಷ್ಟ ಮಗುವಿಗೆ ನಾಮಕರಣ ಮಾಡಿ ಹೆಸರನ್ನಾದರೂ ಯಾರಿಡಬೇಕು? ಹೆಸರೇ ಇಡದ ಆ ಮಗುವಿಗೆ ‘ನಿರ್ನಾಮಿಕೆ' ಎಂಬುದೇ ಹೆಸರಾಗಿ, ಮುಂದೆ ಅದೇ ಹೆಸರಲ್ಲಿ ಕರೆಯಲ್ಪಡುತ್ತಾಳೆ.
ಹೀಗೆ ಬೆಳೆದ ಆಕೆ ಊರಿನಲ್ಲಿ ನೆಲೆ ಸಿಗದೆ, ಕಾಡಿನಲ್ಲಿ ಒಂಟಿಯಾಗಿ ಬದುಕನ್ನು ಸಾಗಿಸುವ ಹೀನಸ್ಥಿತಿಯನ್ನು ತಲುಪುತ್ತಾಳೆ, ಹಾಗೆ ಕಾಡುಮೇಡು ಅಲೆಯುತ್ತಾ ಅಂಬರ ತಿಲಕವೆಂಬ ಬೆಟ್ಟದ ಮೇಲೆ ವಿಹಿತಾಸ್ರವ ಎಂಬ ಮುನಿಪತಿಗಳನ್ನು ಕಾಣುತ್ತಾಳೆ, ಜ್ಙಾನಿಯಾದ ಅವರಲ್ಲಿ ತನ್ನ ಈ ದುಸ್ಥಿತಿಗೆ ಕಾರಣಗಳೇನು,ತನ್ನ ತಪ್ಪಾದರೂ ಏನು, ಹೆಣ್ಣಿಗೆ ಮೋಕ್ಷ ಏಕಿಲ್ಲ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾಳೆ.
ಮತಿಗೆಟ್ಟ ಮಗಳೆ ಸಂಸ್ಕೃತಿ
ಲತೆಯೊಳ್ ತೊಡರಲ್ಕೆ ನೀನಿದಂ ನೆಗರ್ದೈ ದು
ರ್ಗತಿಹೇತು ಪೂಜ್ಯಪೂಜಾ
ವ್ಯತಿಕ್ರಮಂ ಕಿರಿದುದುಃಖಮಂ ಮಾಡುಗುಮೇ
ಎನ್ನುವ ಗುರುಗಳ ಮಾತಿಂದ ಪೂರ್ವಜನ್ಮದ ಕರ್ಮಫಲ ಮತ್ತು ದುರಾಚಾರಗಳ ಫಲ ಎಂಬ ಉತ್ತರವನ್ನು ಪಡೆಯುತ್ತಾಳೆ,ಉಪವಾಸ ವ್ರತಾದಿಗಳನ್ನು ಮಾಡಿ ಜನ್ಮವನ್ನು ಕಳೆದುಕೊಳ್ಳುತ್ತಾಳೆ.
ಇದಿಷ್ಟೂ ಕತೆ .
ಇಲ್ಲಿ ಬಹು ಮುಖ್ಯವಾಗಿ ನನ್ನ ಗಮನಸೆಳೆದ ಸಂಗತಿಯೆಂದರೆ
'ನಿರ್ನಾಮಿಕೆ'ಯು
‘ಅರಸರ ದಯೆಯಿಂ ಮನೆಯುಂ ಕವರ್ತೆ ವೋಪುದುಂ’ ಎನ್ನುವ ಮಾತು. ಅಂದರೆ (ರಾಜನೇ ನಮ್ಮ ಮನೆಯನ್ನು ನಾಶ ಮಾಡಿದವನು) ಎಂದು.
ಆಕೆ ಇಲ್ಲಿ ಅರಸನ ಬದಲಿಗೆ ಕಳ್ಳರ ದೆಸೆಯಿಂದಲೋ, ಸುತ್ತಮುತ್ತಲಿನ ಜನರ ದೆಸೆಯಿಂದಲೋ ನಮ್ಮ ಮನೆಯು ಲೂಟಿಯಾಯಿತು ಎಂದು ಹೇಳಬಹುದಿತ್ತು. ಆದರೆ ಅರಸರ ಕಾರಣವಾಗಿ ನಮ್ಮ ಮನೆ ಲೂಟಿಯಾಯಿತು ಎಂದು ಸ್ಪಷ್ಟವಾಗಿ ಹೇಳುತ್ತಾಳೆ. ಇದರಿಂದಾಗಿ ಅಂದಿನ ಕಾಲಘಟ್ಟದಲ್ಲಿ ಅರಸರ ಆಳ್ವಿಕೆ ಹೇಗಿತ್ತು ? ಎಂಬುದು ನಮಗೆ ಮನವರಿಕೆಯಾಗುತ್ತದೆ. ಇಲ್ಲಿ ಜನತೆಯನ್ನು ಕಾಪಾಡಬೇಕಾಗಿದ್ದ ಅರಸನಾದವನೇ ಬಡಬಗ್ಗರ ಆಸ್ತಿಪಾಸ್ತಿಯನ್ನು, ಸಂಪತ್ತುಗಳನ್ನು ಕಬಳಿಸುವಷ್ಟು ಕ್ರೂರಿಯಾಗಿದ್ದ , ಈ ವಿವರಗಳು ರಾಜಾಡಳಿತದ ದಬ್ಬಾಳಿಕೆ ಹೇಗಿದ್ದಿರಬಹುದು ಎಂಬುದರ ಚಿತ್ರಣವನ್ನು ನಮಗೆ ಕೊಡುತ್ತದೆ.
ಇದಕ್ಕಿಂತ ಮುಖ್ಯವಾಗಿ ನನ್ನ ಗಮನ ಗಂಡು ಸಂತಾನಕ್ಕೆ ಅಂದಿನ ಸಮಾಜವು ಎಷ್ಟು ಪ್ರಾಮುಖ್ಯತೆ ನೀಡುತ್ತಿತ್ತು ಎಂಬುದರ ಕಡೆಗೆ ಹೋಗುತ್ತದೆ, ಒಂದು ಮನೆಯನ್ನ ಅಷ್ಟರ ಮಟ್ಟಿಗೆ ನಾಶಮಾಡಲು ಎಲ್ಲರೂ ಮುಂದಾಗಲು ಸಿಕ್ಕ ಸಸಾರದ ಅಂಶಗಳು ಯಾವುವು ಎಂದುಕೊಂಡಾಗ ಒಂದು ಆ ಮನೆಯಲ್ಲಿ ಗಂಡು ಮಕ್ಕಳಿಲ್ಲದಿರುವುದು,ಮತ್ತೊಂದು ಹೆಣ್ಣು ಮಕ್ಕಳಿಗೆ ಮೋಕ್ಷದ ಹಕ್ಕಿಲ್ಲ, ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಲು ಅರ್ಹಳಲ್ಲ ಎಂಬ ಧಾರ್ಮಿಕ, ಸಾಮಾಜಿಕ ಕಟ್ಟುಪಾಡುಗಳು ಎದ್ದು ಕಾಣುತ್ತವೆ. ಹೆಣ್ಣಿಗೆ ಸಂಪತ್ತಿನ ಇಲ್ಲವೆ ಆಸ್ತಿಯ ಒಡೆತನವಿಲ್ಲ ಅದೇನಿದ್ದರೂ ಗಂಡಿಗೇ ಸೇರಿದ್ದು, ಒಡೆತನ ಗಂಡಿನ ಸ್ವತ್ತು ಎಂಬಂತೆ ಇದ್ದ ವ್ಯವಸ್ಥೆ ಮತ್ತು ಅದರದೇ ಮೇಲರಿಮೆಯ ಭಾವಗಳಿಂದ ಕೂಡಿದ ಅರಸನೂ ಗಂಡುಸಂತಾನವಿಲ್ಲದ ಕಾರಣ ಒಡ್ಡಿ ಅವರ ಆಸ್ತಿ ರಾಜ್ಯದ ಹಕ್ಕು ಎಂದು ಅಧಿಕಾರ ಬಲವನ್ನು ತೋರಿ ದೋಚಿಕೊಳ್ಳುತ್ತಾನೆ. ಇದು ಅಧಿಕಾರದ ದುರುಪಯೋಗದ ಜೊತೆಗೆ ಅದರ ಚಲಾವಣೆಯಾಗಿಯೂ ಕಂಡುಬರುತ್ತದೆ. ಇಲ್ಲಿ ಕುಟುಂಬದ ಒಡೆತನದ ಸಂಪೂರ್ಣ ಅಧಿಕಾರ ಗಂಡಿನದೇ, ಈ ರೀತಿಯ ಅಧಿಕಾರದ ಹೇರಿಕೆ ಮತ್ತು ಅದರಿಂದಾಗುವ ಶೋಷಣೆಯ ವಿರುದ್ಧವಾಗಿ ಹುಟ್ಟಿದ ಧ್ವನಿಯೇ ನಿರ್ನಾಮಿಕೆ.
ಅಧಿಕಾರ,ಪ್ರಶ್ನಿಸುವ ಧೈರ್ಯ, ಒಡೆತನ ಇತ್ಯಾದಿಗಳ ವಿಷಯದಲ್ಲಿ ಕಾನೂನುಗಳು,ಹೇಳಿಕೆಗಳು ಅವತ್ತಿನ ಕಾಲಕ್ಕಿಂತ ಇವತ್ತಿನ ಕಾಲದ ಮಟ್ಟಿಗೆ ಬಹಳಷ್ಟು ಇವೆ, ಅವುಗಳ ಬಳಕೆ ಸರಿಯಾಗಿ ಅಷ್ಟೇ ತಪ್ಪಾಗಿಯೂ ಆಗುತ್ತಿದೆ.
ಅರಸನಾದರೂ ಕೂಡ ಸಾಮಾನ್ಯ ಹೆಣ್ಣೊಬ್ಬಳ ಯಕಶ್ಚಿತ್ ಆಸ್ತಿಗೂ ಹಪಹಪಿಸುವ ಆ ಮನುಷ್ಯನ ಗುಣ ಎಂತಹದ್ದು ಎಂಬುದಕ್ಕೆ ಹಲವು ನಿದರ್ಶನ ಗಳಿವೆ ಹಾಗೇ ಕಾರಣಗಳೂ, ರಾಣಿ ಚೆನ್ನಮ್ಮ,ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇತ್ಯಾದಿ ಹಲವು ಇತಿಹಾಸದ ಉದಾಹರಣೆಗಳಾದರೆ ಕಾರ್ನಾಡರ "ಅಗ್ನಿ ಮತ್ತು ಮಳೆ" ಯಿಂದ ಹಿಡಿದು ಇತ್ತೀಚೆಗೆ ನೌಶಾದ್ ಜನ್ನತ್ ಬರೆದ ಕಡಮಕಲ್ಲು ಎಸ್ಟೇಟ್ ವರೆಗೆ ಹಲವು ಪುಸ್ತಕಗಳಲ್ಲೂ, "ಮಾಮಿ" ಎಂಬ ಇಂಗ್ಲಿಷ್ ಮೂವಿಯಿಂದಿಡಿದು ಕನ್ನಡದ " ಮಸಣದ ಹೂವು" ಚಿತ್ರದ ವರೆಗೂ ಇದೇ ಎಳೆ ಇರುವ ಕತೆಗಳಿವೆ, ಹಾಗಾದರೆ ಇದು ಇನ್ನೂ ಸಾಕಷ್ಟು ಚರ್ಚೆಗೆ ಒಳಪಡಬೇಕಾದ ವಿಷಯವೇ ಹೌದಲ್ಲವೆ?.
bevarahani1