ಅಂಕತಟ್ಟಿ ಭಾಸ್ಕರ್ ಸುಗಟೂರು ಸೊಸೈಟಿ ನೂತನ ಅಧ್ಯಕ್ಷ
ankatatti-new-president-sugaturu-society
ಅಂಕತಟ್ಟಿ ಭಾಸ್ಕರ್ ಸುಗಟೂರು ಸೊಸೈಟಿ ನೂತನ ಅಧ್ಯಕ್ಷ
ಕೋಲಾರ: ಅಧಿಕಾರ ಸಿಕ್ಕಾಗ ದರ್ಪ, ದೌರ್ಜನ್ಯ ಬೇಡ, ಅದನ್ನು ಜವಾಬ್ದಾರಿಯೆಂದು ಸ್ವೀಕರಿಸಿ ಜನರ ಸೇವೆ ಮಾಡಿ, ರೈತರು,ಮಹಿಳೆಯರಿಗೆ ನೆರವಾಗಿ ಎಂದು ಸೊಸೈಟಿಗಳ ಆಡಳಿತ ಮಂಡಳಿಗೆ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕಿವಿಮಾತು ಹೇಳಿದರು.
ತಾಲ್ಲೂಕಿನ ಸುಗಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಂಕತಟ್ಟಿ ಭಾಸ್ಕರ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೊಸೈಟಿ ಆಡಳಿತ ಮಂಡಳಿಗೆ ಹೆಚ್ಚಿನ ಜವಾಬ್ದಾರಿ ಇದೆ, ನಿಮ್ಮ ಪಾರದರ್ಶಕ ಆಡಳಿತವನ್ನು ರೈತರು, ಮಹಿಳೆಯರು ಗಮನಿಸುತ್ತಿರುತ್ತಾರೆ, ಅವರ ನಂಬಿಕೆಗೆ ಧಕ್ಕೆಯಾಗದಂತೆ ನೀವು ಕೆಲಸ ಮಾಡಬೇಕು ಎಂದರು.
ಎಸ್‌ಎಫ್‌ಸಿಎಸ್ ಆಡಳಿತ ಚುಕ್ಕಾಣಿ ಮುಳ್ಳಿನ ಹಾಸಿಗೆ ಇದ್ದಂತೆ ಸದಾ ಜನರ ಸೇವೆಗೆ ಸಿದ್ದವಿರಬೇಕು ಎಂದ ಅವರು, ಹಿಂದಿನ ಅಧ್ಯಕ್ಷರಾದ ದಿವಂಗತ ತಿಮ್ಮರಾಯಪ್ಪ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಿ, ಅವರು ಸದಾ ರೈತರು,ಮಹಿಳೆಯರ ಹಿತ ರಕ್ಷಣೆಗಾಗಿ ಸಾಲ ಸೌಲಭ್ಯ ಒದಗಿಸಿ ಈ ಭಾಗದಲ್ಲಿ ಮನೆಮಾತಾಗಿದ್ದರು ಎಂದರು.
ಬದುಕಿರುವಷ್ಟು ದಿನವೂ ಸೊಸೈಟಿ ಅಭಿವೃದ್ದಿಗೆ ಶ್ರಮಿಸಿದ ತಿಮ್ಮರಾಯಪ್ಪ ಅವರ ಸೇವೆ ಸ್ಮರಣೀಯವಾಗಿದೆ, ಜಿಲ್ಲೆಯಲ್ಲೇ ಅತಿ ಹೆಚ್ಚು ಸಾಲ ಸೌಲಭ್ಯವನ್ನು ರೈತರು,ಮಹಿಳೆಯರಿಗೆ ಸಿಗುವಂತೆ ಮಾಡಿದ್ದಾರೆ, ಅಷ್ಟೇ ಕಾಳಜಿಯಿಂದ ಸಾಲ ಮರುಪಾವತಿಗೂ ಶ್ರಮಿಸಿದ್ದಾರೆ ಎಂದರು.
ಸೊಸೈಟಿ ಆಡಳಿತ,ಆರ್ಥಿಕ ವ್ಯವಸ್ಥೆಗೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸುವ ಹೊಣೆ ನಿಮ್ಮದಾಗಿದ್ದು, ಎಲ್ಲಾ ನಿರ್ದೇಶಕರ ಸಹಕಾರ ಪಡೆದು ಒಮ್ಮತದಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷರ ಆಯ್ಕೆಯನ್ನು ಅವಿರೋಧವಾಗಿ ನಡೆಸಿಕೊಟ್ಟ ಎಲ್ಲಾ ನಿರ್ದೇಶಕರನ್ನು ಅಭಿನಂದಿಸಿದ ಅವರು, ರೈತರ,ಮಹಿಳೆಯರ ಈ ಸಂಸ್ಥೆಯಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶವಿಲ್ಲದಂತೆ ಈ ಆಯ್ಕೆ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್, ಸುಗಟೂರು ಸೊಸೈಟಿಗೆ ಒಳ್ಳೆಯ ಇತಿಹಾಸವಿದೆ, ಈ ಸೊಸೈಟಿಯನ್ನು ಉಳಿಸಿ ಬೆಳೆಸುವ ಹೊಣೆ ನೂತನ ಅಧ್ಯಕ್ಷರದ್ದಾಗಿದ್ದು, ಅದನ್ನು ಸಮರ್ಪಕವಾಗಿ ನಿರ್ವಹಿಸಿ, ಸಾಲ ನೀಡಿಕೆ ಜತೆಗೆ ಠೇವಣಿ ಸಂಗ್ರಹಕ್ಕೂ ಪ್ರೇರಣೆ ನೀಡಿ ಎಂದು ಕಿವಿಮಾತು ಹೇಳಿದರು.
ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಡಿಸಿಸಿ ಬ್ಯಾಂಕಿಗೆ ಮಹಿಳೆಯರೇ ಜೀವಾಳ, ಅವರಿಗೆ ಅನ್ಯಾಯವಾಗದಂತೆ ಎಚ್ಚರವಹಿಸಿ, ಮತ್ತಷ್ಟು ತಾಯಂದಿರು ಜತೆಗೂಡಿ ಸಂಘ ರಚಿಸಿಕೊಳ್ಳಲು ಪ್ರೇರೇಪಿಸಿ, ಸಾಲ ಸೌಲಭ್ಯ ನೀಡುವ ಮೂಲಕ ಸಿಕ್ಕಿರುವ ಅಧಿಕಾರವನ್ನು ಜವಾಬ್ದಾರಿ ಎಂದು ನಿರ್ವಹಿಸಿ ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷ ಭಾಸ್ಕರ್ ಮಾತನಾಡಿ, ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಕಾರಣರಾದ ಎಲ್ಲಾ ನಿರ್ದೇಶಕರು, ನನ್ನನ್ನು ನಂಬಿ ಅಧಿಕಾರ ಸಿಗುವಂತೆ ಮಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು, ವಿಧಾನಪರಿಷತ್ ಸದಸ್ಯ ಅನಿಲ್‌ಕುಮಾರ್, ಜಿಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಸೇರಿದಂತೆ ಎಲ್ಲರಿಗೂ ಧನ್ಯವಾದ ಸಲ್ಲಿಸಿ, ನಿಮ್ಮ ನಂಬಿಕೆಗೆ ಚ್ಯುತಿಯಾಗದಂತೆ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ.ಕೃಷ್ಣಪ್ಪ, ಸಂಘದ ಉಪಾಧ್ಯಕ್ಷೆ ರುಕ್ಕಮ್ಮ, ನಿರ್ದೇಶಕರಾದ ಭೂಪತಿ, ರಮಣರೆಡ್ಡಿ, ವೆಂಕಟರಮಣಪ್ಪ, ಗೋಪಾಲಪ್ಪ, ಹನುಮೇಗೌಡ, ಸಿರಾಜ್, ನಾಗೇಂದ್ರಪ್ರಸಾದ್, ಸೊಸೈಟಿ ಸಿಇಒ ಪುಟ್ಟರಾಜು, ಸಿಬ್ಬಂದಿ ಚೈತ್ರಾ, ರವಿ ಮತ್ತಿತರರಿದ್ದರು.
-______________________
bevarahani1