ಮಾಹಿತಿ ಇಲ್ಲದೇ ತಡವರಿಸಿದ ಅಧಿಕಾರಿಗಳು: ಕೆಡಿಪಿ ಸಭೆಯಲ್ಲಿ ಡಾ.ಜಿ.ಪರಮೇಶ್ವರ ಕೆಂಡಾಮಂಡಲ
ಮಾಹಿತಿ ಇಲ್ಲದೇ ತಡವರಿಸಿದ ಅಧಿಕಾರಿಗಳು: ಕೆಡಿಪಿ ಸಭೆಯಲ್ಲಿ ಡಾ.ಜಿ.ಪರಮೇಶ್ವರ ಕೆಂಡಾಮಂಡಲ, dr-g-parameshwar-kdp-meeting

ಮಾಹಿತಿ ಇಲ್ಲದೇ ತಡವರಿಸಿದ ಅಧಿಕಾರಿಗಳು:
ಕೆಡಿಪಿ ಸಭೆಯಲ್ಲಿ ಡಾ.ಜಿ.ಪರಮೇಶ್ವರ ಕೆಂಡಾಮಂಡಲ
ಕೊರಟಗೆರೆ: ಶಾಸಕ ಡಾ.ಜಿ. ಪರಮೇಶ್ವರ ಕೆ.ಡಿ.ಪಿ. ಸಾಮಾನ್ಯ ಸಭೆಯಲ್ಲಿ ಕೆಲವು ಇಲಾಖೆಗಳ ಅಧಿಕಾರಿಗಳ ಮೇಲೆ ಕೆಂಡಮAಡಲವಾಗಿ ಅವರ ಕರ್ತವ್ಯ ಲೋಪವನ್ನು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕಾರ್ಯನಿರ್ವಾಹಣಾಧಿಕಾರಿ ದೊಡ್ಡಸಿದ್ದಯ್ಯ ಅವರಿಗೆ ಆದೇಶಿಸಿದರು.
ಮಂಗಳವಾರ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ. ಸಾಮಾನ್ಯ ಸಭೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ಕೊರೋನಾ ಮತ್ತು ಒಮಿಕ್ರಾನ್ ಸಾಂಕ್ರಾಮಿಕ ರೋಗಗಳಿಗೆ ಸರಿಯಾದ ಪೂರ್ವ ತಯಾರಿ ಮಾಡಿಕೊಳ್ಳದ ಬಗ್ಗೆ ಮತ್ತು ಸರ್ಕಾರದಿಂದ ಇಲಾಖೆಗಳಿಗೆ ಈ ರೋಗಗಳನ್ನು ತಡೆಗಟ್ಟಲು ಇಲ್ಲಿಯವರೆಗೆ ಯಾವುದೇ ಮಾರ್ಗಸೂಚಿ ಬಾರದೆ ಇರುವುದನ್ನು ಕೇಳಿ ಅಸಮಾಧಾನಗೊಂಡರು.
ತಾಲೂಕಿನ ಶಾಲಾ ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ ಲಸಿಕೆ ಪಡೆಯದ ಮಕ್ಕಳಿದ್ದಾರೆ, ಅವರಿಗೆ ಹಾಗೂ ಸಾಮನ್ಯ ವರ್ಗದ ಜನರಿಗೆ ಮುಂಜಾಗೃತ ಕ್ರಮಗಳ ಬಗ್ಗೆ ವಿವರವಾಗಲಿ ಇಲ್ಲ, ಕೊರಟಗೆರೆ ಪಟ್ಟಣದಲ್ಲೇ ಹೆಚ್ಚಾಗಿದೆ ಎಂದು ಹೇಳುತ್ತಿದ್ದೀರಿ. ಪಟ್ಟಣ ಪಂಚಾಯತಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮೊದಲು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ, ಸೂಕ್ತ ಅಂಕಿ ಇಲ್ಲದ ಮೇಲೆ ಸಭೆಗೆ ಯಾಕ್ರಿ ಬರ್ತೀರಾ ಎಂದು ಅಧಿಕಾರಿ ಡಾ. ವಿಜಯಕುಮಾರ್ ಮೇಲೆ ಹರಿಹಾಯ್ದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿಗೆ ತಾಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ಮಕ್ಕಳ ಪಟ್ಟಿಯಾಗಲಿ ಸಂಖ್ಯೆಯ ಬಗ್ಗೆಯಾಗಲೀ ಮಾಹಿತಿ ಇರಲಿಲ್ಲ. ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳಿಗೆ ಬರುವ ವಿದ್ಯಾರ್ಥಿ ವೇತನದ ಅರಿವೇ ಇಲ್ಲದನ್ನು ಕಂಡು ಸಿಟ್ಟಿನಿಂದ ಶಾಸಕರು ನಿಮ್ಮಂತರವರು ಇಲಾಖೆಗೆ ಏಕಪ್ಪ ಇದ್ದೀರಾ? ತುಳಿತಕ್ಕೆ ಒಳಗಾದ ಸಮಾಜ ವಿದ್ಯಾರ್ಥಿಗಳ ವೇತನ ಬಗ್ಗೆ ಅರಿವೇ ಇಲ್ಲದ ನೀವು ಇಲಾಖೆಗೆ ಬೇಕಾ? ಇವರ ವಿರುದ್ಧ ಇಲಾಖೆ ಕ್ರಮಕ್ಕೆ ವರದಿ ನೀಡಿ ಎಂದರು ಸೂಚಿಸಿದರು.
ಅದೇ ರೀತಿ ಗ್ರಾಮೀಣ ನೀರು ಸರಬರಾಜು ಇಲಾಖಾ ಅಧಿಕಾರಿಯ ವರದಿ ಮಾಹಿತಿಯೂ ಸಹ ಅಪೂರ್ಣ ವಾಗಿದ್ದು ದುರಸ್ತಿಯಾಗಬೇಕಾದ ಕುಡಿಯುವ ನೀರಿನ ಘಟಕಗಳ ಬಗ್ಗೆ ಮಾಹಿತಿ ನೀಡದೆ ಇದ್ದು ಗ್ರಾಮಗಳ ಕುಡಿಯುವ ನೀರಿನ ಸಮಗ್ರ ಮಾಹಿತಿ ಕೊರತೆ ಕಂಡು ಅವರ ವಿರುದ್ಧ ಕ್ರಮ ವಹಿಸುವಂತೆ ಸೂಚಿಸಿದರು.
ತೋಟಗಾರಿಕೆ, ಭೂಸೇನಾ ನಿಗಮ, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಸಮಾಧಾನ ವ್ಯಕ್ತ ಪಡಿಸಿದರು. ಪ್ರತಿ ವರ್ಷ ಕೆರೆಗಳ ಸ್ವಚ್ಛತೆಗೆ ಯೋಜನೆ ರೂಪಿಸಿ ಸಲ್ಲಿಸುವಂತೆ ಕಿರು ನೀರು ಅಧಿಕಾರಿಗೆ ತಿಳಿಸಿದರು. ಇತರ ಇಲಾಖೆಗಳ ವಿವರ ಪಡೆದ ಶಾಸಕರು ಸರ್ಕಾರಿ ಸೇವೆಯಲ್ಲಿ ಜನರ ಕೆಲಸಗಳ ವಿಳಂಬ ಮತ್ತು ಕರ್ತವ್ಯ ನಿರ್ಲಕ್ಷ ಸಹಿಸುವುದಿಲ್ಲ. ಅಧಿಕಾರಿಗಳು ನನ್ನ ಸೌಮ್ಯತೆಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಸೇವೆಯಲ್ಲಿ ಲೋಪವೆಸಗಿದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರುಗಳ ಮೇಲೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಮತ್ತು ಸರ್ಕಾರಕ್ಕೆ ವರದಿ ನೀಡಬೇಕಾಗುತ್ತದೆ. ಮುಂದೆ ಹೀಗೆ ಆಗದಂತೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿ ಹಾಗೂ ಬದ್ಧತೆ ಆಧಿಕಾರಿಗಳ ಮೇಲಿದೆ ಎಂದರು.