ತುಮಕೂರಲ್ಲಿ ಮಳೆಯಾಗ್ತಿದೆ.. ಆದ್ರೆ ಕೆರೆಗಳು ಮಾತ್ರ ತುಂಬ್ತಿಲ್ಲ!

ತುಮಕೂರಲ್ಲಿ ಮಳೆಯಾಗ್ತಿದೆ.. ಆದ್ರೆ ಕೆರೆಗಳು ಮಾತ್ರ ತುಂಬ್ತಿಲ್ಲ!

ತುಮಕೂರಲ್ಲಿ ಮಳೆಯಾಗ್ತಿದೆ.. ಆದ್ರೆ ಕೆರೆಗಳು ಮಾತ್ರ ತುಂಬ್ತಿಲ್ಲ!


ಆರ್.ಎಸ್.ಅಯ್ಯರ್


ತುಮಕೂರು: ‘ತುಮಕೂರು ನಗರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಆಗಾಗ ಮಳೆ ಸುರಿಯುತ್ತಿದ್ದು, ಆ ಮಳೆ ನೀರು ಎಲ್ಲಿಗೆ ಹರಿದು ಹೋಗುತ್ತಿದೆ? ಎಲ್ಲಿ ಸಂಗ್ರಹವಾಗುತ್ತಿದೆ?’ ಹೀಗೊಂದು ಜಿಜ್ಞಾಸೆ ಈಗ ಪ್ರಜ್ಞಾವಂತ ವಲಯದಲ್ಲಿ ನಡೆದಿದೆ.
ಹೌದು, ಇದೊಂದು ಸಕಾಲಿಕ ಹಾಗೂ ಸಮಯೋಚಿತ ಜಿಜ್ಞಾಸೆಯೇ. ಏಕೆಂದರೆ ಈಗ ನಾಡಿನ ವಿವಿಧೆಡೆ ಬಿರುಸಿನ ಮಳೆ ಸುರಿದಿದೆ. ಕೆರೆ, ಕಟ್ಟೆ, ಕಾಲುವೆಗಳು ತುಂಬಿ ತುಳುಕಿವೆ. ಅನೇಕ ಕಡೆ ಊರೊಳಗೆಲ್ಲ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇದೇ ರೀತಿ ಇತ್ತೀಚೆಗೆ ತುಮಕೂರು ನಗರದ ವ್ಯಾಪ್ತಿಯಲ್ಲೂ ಸಾಕಷ್ಟು ಮಳೆ ಬಂದಿದೆ. ಆದರೂ ನಗರದ ಜಲಕಾಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕಾಣುತ್ತಿಲ್ಲ. ಹಾಗಾದರೆ ಆ ಮಳೆಯ ನೀರೆಲ್ಲವೂ ಎಲ್ಲಿಗೆ ಹರಿದುಹೋಗಿದೆ? ಎಂಬುದೇ ಈಗಿನ ಚರ್ಚೆಯ ಮುಖ್ಯಾಂಶ.
ಅಮಾನಿಕೆರೆಯ ಸ್ಥಿತಿ:
ನಗರದ ಹೃದಯ ಭಾಗದಲ್ಲಿ ಅಮಾನಿ ಕೆರೆ ಇದೆ. ಇಪ್ಪತ್ತು ಮುವತ್ತು ವರ್ಷಗಳ ಹಿಂದೆ ಒಂದೆರಡು ಬಾರಿ ಮಳೆ ಬಂದರೆ ಸಾಕು, ಅಮಾನಿಕೆರೆಗೆ ಗಣನೀಯವಾಗಿ ನೀರು ಹರಿದುಬರುತ್ತಿತ್ತು. ಕೆರೆಯಂಗಳದ ನೋಟವೇ ಬದಲಾಗುತ್ತಿತ್ತು. ಇನ್ನೂ ಸ್ವಲ್ಪ ರಭಸದ ಮಳೆಯಾದರೆ, ಕೆರೆ ಕೋಡಿಯಾಗುತ್ತಿತ್ತು. ಕೋಡಿ ಬಸವೇಶ್ವರ ದೇಗುಲದ ಪಕ್ಕದ ಚಿಕ್ಕ ಕೋಡಿ ಮತ್ತು ಶಿರಾಗೇಟ್ ರಸ್ತೆಯಲ್ಲಿರುವ ದೊಡ್ಡ ಕೋಡಿಯಿಂದ ನೀರು ಉಕ್ಕಿ ಹರಿಯುತ್ತಿದ್ದುದನ್ನು ನೋಡಲು ಜನಜಾತ್ರೆ ಸೇರುತ್ತಿತ್ತು. ಆದರೆ ಈಗ ಈ ಕೆರೆಗೆ ಮಳೆ ನೀರು ಹರಿದುಬರುತ್ತಿಲ್ಲವೇ? ಮಳೆ ನೀರು ಸರಾರವಾಗಿ ಹರಿದು ಬರಲೆಂದೇ ನಿರ್ಮಿಸಲಾಗಿದ್ದ ಪುರಾತನ ರಾಜಕಾಲುವೆಗಳ ಸ್ಥಿತಿಗತಿ ಏನಾಗಿದೆ? ಕೆರೆಗೆ ಹರಿದು ಬರಬೇಕಾಗಿದ್ದ ಮಳೆ ನೀರು ಎಲ್ಲಿಗೆ ಹೋಗುತ್ತಿದೆ? ಎಂಬುದು ಅನೇಕ ಹಿರಿಯರು ಮುಂದಿಡುತ್ತಿರುವ ಪ್ರಶ್ನೆಗಳು.
ಕೆಲ ವರ್ಷಗಳ ಹಿಂದೆ ಆಗಿನ ಜಿಲ್ಲಾಧಿಕಾರಿಗಳ ಆಸಕ್ತಿಯಿಂದ ಅಮಾನಿಕೆರೆಯ ರಾಜಕಾಲುವೆಯ ಒತ್ತುವರಿ ತೆರವುಗೊಳಿಸಿ ಸಮರ್ಪಕಗೊಳಿಸುವ ಕಾಮಗಾರಿ ನಡೆದಿತ್ತು. ಬೆಳಗುಂಬ ರಸ್ತೆಯ ಕುಂದೂರು ಕ್ರಾಸ್‌ನಿಂದ ಹಿಡಿದು ಅಮಾನಿಕೆರೆಯವರೆಗೆ ರಾಜಕಾಲುವೆಯ ಹೂಳು ತೆಗೆದು ಸಮರ್ಪಕಗೊಳಿಸಲಾಗಿತ್ತು. ನಂತರದಲ್ಲಿ ತುಮಕೂರು ಸ್ಮಾರ್ಟ್ಸಿಟಿ ಕಂಪನಿಯಿAದಲೂ ರಾಜಕಾಲುವೆಗಳನ್ನು ಸಮರ್ಪಕಗೊಳಿಸುವ ಕಾಮಗಾರಿ ನಡೆದಿತ್ತು. ಹಿಂದೊಮ್ಮೆ ಅಮಾನಿಕೆರೆಯಲ್ಲಿ ಮಳೆ ನೀರು ತುಂಬಿದಾಗ, ರಾಜಕಾಲುವೆಗಳನ್ನು ಸಮರ್ಪಕಗೊಳಿಸಿದ್ದರಿಂದ ಸತ್ಯಮಂಗಲದ ಭಾಗದಿಂದ ಅಮಾನಿಕೆರೆಗೆ ನೀರು ಹರಿದು ಬಂತೆAದು ಸಮರ್ಥಿಸಿಕೊಳ್ಳಲಾಗಿತ್ತು. ರಾಜಕಾಲುವೆ ಸಮರ್ಪಕತೆಗೆಂದೇ ಆಗ ಲಕ್ಷಾಂತರ ರೂಪಾಯಿಗಳನ್ನು ವಿನಿಯೋಗಿಸಲಾಗಿತ್ತು. ಹೀಗಿದ್ದೂ ಕೂಡ ಅಂದರೆ ರಾಜಕಾಲುವೆಗಳನ್ನು ಸಮರ್ಪಕಗೊಳಿಸಿದ್ದರೂ, ಈಗ ಮಳೆ ನೀರು ಏಕೆ ಹರಿದುಬರಲಿಲ್ಲ? ರಾಜಕಾಲುವೆಗಳೇನಾದರೂ ಗುಳುಂ ಆಗಿಬಿಟ್ಟಿವೆಯೇ? ಎಂದು ಅನೇಕ ಪ್ರಜ್ಞಾವಂತರು ಗಂಭೀರವಾಗಿ ಚರ್ಚಿಸುತ್ತಿದ್ದಾರೆ.
ಇತರೆ ಕೆರೆ-ಕಟ್ಟೆಗಳು:
ತುಮಕೂರಿನ ಇತರೆ ಕೆರೆ-ಕಟ್ಟೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನಿಲ್ಲ. ಬಡ್ಡಿಹಳ್ಳಿ ಕೆರೆ, ಶೆಟ್ಟಿಹಳ್ಳಿ ಕೆರೆ, ಗಾರೆನರಸಯ್ಯನ ಕಟ್ಟೆ, ಉಪ್ಪಾರಹಳ್ಳಿ ಕೆರೆಕಟ್ಟೆ, ಮರಳೂರು ಕೆರೆಯನ್ನು ಉದಾಹರಿಸುವ ಪ್ರಜ್ಞಾವಂತರು, ಇಲ್ಲಿಗೇಕೆ ಮಳೆ ನೀರು ಹರಿದು ಬಂದಿಲ್ಲ? ಎಂದು ಅಚ್ಚರಿಯಿಂದ ಕೇಳುತ್ತಿದ್ದಾರೆ. ನಗರ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯೇನೋ ಸುರಿದಿದೆ. ರಸ್ತೆ-ರಸ್ತೆಗಳಲ್ಲಿ ನೀರು ಹರಿದಿದೆ. ಚರಂಡಿಗಳಲ್ಲಿ ನೀರು ಜೋರಾಗಿ ಹರಿದಿದೆ. ಈ ನೀರು ಹೋದದ್ದೆಲ್ಲಿಗೆ? ನಗರದ ಈ ಯಾವ ಕೆರೆ-ಕಟ್ಟೆಯೂ ಏಕೆ ತುಂಬಲಿಲ್ಲ? ಈ ಕೆರೆ-ಕಟ್ಟೆಗಳಿಗೆ ಸಂಬAಧಿಸಿದ ರಾಜಕಾಲುವೆಗಳು ಏನಾಗಿವೆ? ಎಂಬುದು ನಮಗರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ.
ನಮ್ಮೂರಿನ ಜನಪ್ರತಿನಿಧಿಗಳಿಗೂ ಇಂತಹ ಮೂಲಭೂತ ಸಂಗತಿಗಳು ಏಕೆ ಅರ್ಥವಾಗುತ್ತಿಲ್ಲ? ಇಂತಹ ಸಂಗತಿಗಳತ್ತ ಅವರುಗಳು ಆಲೋಚಿಸುವುದೇ ಇಲ್ಲವೇ? ಎಂಬುದು ಪ್ರಜ್ಞಾವಂತರ ಸಂದೇಹಾತ್ಮಕ ಪ್ರಶ್ನೆ.
ರಾಜಕಾಲುವೆಗಳ ಅಭಿವೃದ್ಧಿಗಾಗಿಯೇ ತುಮಕೂರು ಮಹಾನಗರ ಪಾಲಿಕೆಯು ಕೆಲವು ವರ್ಷಗಳ ಹಿಂದೆ ಕೋಟ್ಯಂತರ ರೂ.ಗಳನ್ನು ವಿನಿಯೋಗಿಸಿತ್ತು. ಅದರ ಫಲ ಕೆರೆ-ಕಟ್ಟೆಗಳಿಗೆ ಸಿಕ್ಕಿತೇ? ಅಥವಾ ಕಾಮಗಾರಿ ನಡೆಸಿದವರಿಗೆ ದಕ್ಕಿತೇ? ಎಂಬುದನ್ನು ಪಾಲಿಕೆಯೇ ಹೇಳಬೇಕಷ್ಟೇ.
ತಜ್ಞರು ಕೇಳಿದ್ದ ಪ್ರಶ್ನೆ:
ಕಳೆದ ಕೆಲವು ವರ್ಷಗಳ ಹಿಂದೆ, ಪ್ರೊ. ರಾಜಾಸಾಬ್ ಅವರು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾಗ, ತುಮಕೂರು ವಿ.ವಿ. ಯಲ್ಲಿ ಮಳೆ ನೀರಿನ ಸಂಗ್ರಹ ಕುರಿತು ಒಂದು ವಿಶೇಷ ಕಾರ್ಯಕ್ರಮ ನಡೆದಿತ್ತು. ಶಿವಮೊಗ್ಗದಿಂದ ಸುಪ್ರಸಿದ್ಧ ತಜ್ಞರೊಬ್ಬರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ತಮ್ಮ ಮಾತನ್ನು ಆರಂಭಿಸಿದ್ದೇ ಪ್ರಶ್ನೆಯೊಂದರ ಮೂಲಕ. “ತುಮಕೂರು ನಗರದಲ್ಲಿ ವಾರ್ಷಿಕ ಬೀಳುತ್ತಿರುವ ಮಳೆಯ ಪ್ರಮಾಣ ಎಷ್ಟು?” ಎಂದು ಅವರು ಕೇಳಿದರು. ಕಿಕ್ಕಿರಿದು ತುಂಬಿದ್ದ ವಿ.ವಿ.ಯ ಸಭಾಂಗಣದ ಮೌನವೇ ಅದಕ್ಕೆ ಉತ್ತರವಾಗಿತ್ತು. ಬಳಿಕ ಅವರು ತಾವು ಸಂಗ್ರಹಿಸಿದ್ದ ಮಳೆಯ ವಿವರವನ್ನು ಹೇಳುತ್ತ, ಎರಡನೆಯ ಪ್ರಶ್ನೆಯನ್ನು ಮುಂದಿಟ್ಟರು. “ತುಮಕೂರು ನಗರದ ವ್ಯಾಪ್ತಿಯಲ್ಲಿ ಬೀಳುತ್ತಿರುವ ಮಳೆಯ ನೀರನ್ನು ಇಲ್ಲೇ ಸಂಗ್ರಹಿಸಿಡಲು ಯಾವ ಪ್ರಯತ್ನ ಮಾಡಲಾಗಿದೆ? ಆ ನೀರು ಈಗ ಎಲ್ಲಿಗೆ ಹರಿದು ಹೋಗುತ್ತಿದೆ?” ಎಂದು ಅವರು ಕೇಳಿದಾಗ, ಮತ್ತೆ ಮೌನವೇ ಉತ್ತರವಾಗಿತ್ತು. 
ಈಗ ತುಮಕೂರು ನಗರದ ಜನಪ್ರತಿನಿಧಿಗಳು ಮತ್ತು ತುಮಕೂರು ಮಹಾನಗರ ಪಾಲಿಕೆಯಲ್ಲಿರುವ ಇಂಜಿನಿಯರ್‌ಗಳ ದೊಡ್ಡ ತಂಡವು ಇದಕ್ಕೆ ಉತ್ತರಿಸುವ ಕಾಲ ಒದಗಿಬಂದಿದೆ.

ಉತ್ತರಿಸುವ ಕಾಲ ಬಂದಿದೆ
ತುಮಕೂರು ನಗರದಲ್ಲಿ ವಾರ್ಷಿಕ ಬೀಳುತ್ತಿರುವ ಮಳೆಯ ಪ್ರಮಾಣ ಎಷ್ಟು? ತುಮಕೂರು ನಗರದ ವ್ಯಾಪ್ತಿಯಲ್ಲಿ ಬೀಳುತ್ತಿರುವ ಮಳೆಯ ನೀರನ್ನು ಇಲ್ಲೇ ಸಂಗ್ರಹಿಸಿಡಲು ಯಾವ ಪ್ರಯತ್ನ ಮಾಡಲಾಗಿದೆ? ಆ ನೀರು ಈಗ ಎಲ್ಲಿಗೆ ಹರಿದು ಹೋಗುತ್ತಿದೆ? ಇದಕ್ಕೆ ಜನಪ್ರತಿನಿಧಿಗಳು ಮತ್ತು ಇಂಜಿನಿಯರ್‌ಗಳು ಉತ್ತರಿಸುವ ಕಾಲ ಬಂದಿದೆ.

ಇಂಜಿನಿಯರ್‌ಗಳ ದಂಡು!
ತುಮಕೂರು ಮಹಾನಗರ ಪಾಲಿಕೆಯಲ್ಲಿ ಈಗ ಇಂಜಿನಿಯರ್‌ಗಳ ಒಂದು ದಂಡೇ ಇದೆ. ಓರ್ವ ಸೂಪರಿಂಟೆAಡೆAಟ್ ಇಂಜಿನಿಯರ್, ಮೂವರು ಎಕ್ಸಿಕ್ಯುಟೀವ್ ಇಂಜಿನಿಯರ್‌ಗಳು, ಹಲವು ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್‌ಗಳು, ಹಲವು ಸಹಾಯಕ ಹಾಗೂ ಕಿರಿಯ ಇಂಜಿನಿಯರ್‌ಗಳು ಇದ್ದಾರೆ. ಈ ಇಂಜಿನಿಯರ್‌ಗಳ ತಂಡವೇ ಪ್ರಸ್ತುತ ಪ್ರಜ್ಞಾವಂತರ ಈ ಹೊತ್ತಿನ ಜಿಜ್ಞಾಸೆ-ಪ್ರಶ್ನೆಗಳಿಗೆ ಕ್ರಿಯಾರೂಪದಲ್ಲಿ ಉತ್ತರಿಸಬೇಕು.