‘ಸ್ಮಾರ್ಟ್ ಸಿಟಿ’ಗೆ ರೂ. 3 ಕೋಟಿ ಬಡ್ಡಿ ನಷ್ಟ ಹಗರಣ: ವಿಚಾರಣೆಗೆ ಸರ್ಕಾರದ ಆದೇಶ

‘ಸ್ಮಾರ್ಟ್ ಸಿಟಿ’ಗೆ ರೂ. 3 ಕೋಟಿ ಬಡ್ಡಿ ನಷ್ಟ ಹಗರಣ: ವಿಚಾರಣೆಗೆ ಸರ್ಕಾರದ ಆದೇಶ

‘ಸ್ಮಾರ್ಟ್ ಸಿಟಿ’ಗೆ ರೂ. 3 ಕೋಟಿ ಬಡ್ಡಿ ನಷ್ಟ ಹಗರಣ: ವಿಚಾರಣೆಗೆ ಸರ್ಕಾರದ ಆದೇಶ


ತುಮಕೂರು: ನಗರದ ‘ತುಮಕೂರು ಸ್ಮಾರ್ಟ್ಸಿಟಿ ಲಿಮಿಟೆಡ್ ಕಂಪನಿ’ ಯಲ್ಲಿ ಅಧಿಕಾರಿಗಳ ನಿರ್ಲಕ್ಷö್ಯ ಹಾಗೂ ಅಕ್ರಮಗಳಿಂದಾಗಿ ರೂ. 3 ಕೋಟಿ ಬಡ್ಡಿ ನಷ್ಟ ಆಗಿರುವುದಾಗಿ ‘ಬೆವರ ಹನಿ’ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿ ಸಂಬಂಧ ವಿಚಾರಣೆ ನಡೆಸಿ ಕೂಡಲೇ ವರದಿ ಸಲ್ಲಿಸುವಂತೆ ಸರ್ಕಾರ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮಕ್ಕೆ ಆದೇಶಿಸಿದೆ.


‘ ಬೆವರ ಹನಿ’ ದಿನಪತ್ರಿಕೆಯಲ್ಲಿ ಇದೇ ವರ್ಷದ ಆಗಸ್ಟ್ 28ರಂದು ಪ್ರಕಟವಾದ ವರದಿ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿ ಆಧರಿಸಿ ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ನಗರದ ಸಾರ್ವಜನಿಕ ಹೋರಾಟಗಾರ ಇಮ್ರಾನ್ ಪಾಷ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿರುವ ನಗರಾಭಿವೃದ್ಧಿ ಇಲಾಖೆಯು “ಈ ಬಗ್ಗೆ ವಿಚಾರಣೆ ನಡೆಸಿ ಸರ್ಕಾರಕ್ಕೆ ಕೂಡಲೇ ವರದಿ ಸಲ್ಲಿಸುವಂತೆ’’ೆ ಕೆ.ಯು.ಐ.ಡಿ.ಎಫ್.ಸಿ.ಗೆ ಸ್ಪಷ್ಟ ಸೂಚನೆ ನೀಡಿದೆ. 


ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆ.ಯು.ಐ.ಡಿ.ಎಫ್.ಸಿ.) ವ್ಯವಸ್ಥಾಪಕ ನಿರ್ದೇಶಕರಿಗೆ ಸರ್ಕಾರದ ಪತ್ರ ಸಂಖ್ಯೆ: ನಅಇ/ 165/ಸಿ.ಎಸ್.ಎಸ್./2021ರಲ್ಲಿ ದಿನಾಂಕ: 28-10-2021ರಲ್ಲಿ ಬರೆದಿರುವ ಪತ್ರದ ಪ್ರತಿ ಅರ್ಜಿದಾರ ಇಮ್ರಾನ್ ಪಾಷ ಅವರಿಗೆ ನ.13 ರಂದು ತಲುಪಿದೆ.


 ರಾಜ್ಯದ ಎಲ್ಲ ಸ್ಮಾರ್ಟ್ಸಿಟಿ ಕಂಪನಿಗಳು ಕೆ.ಯು.ಐ.ಡಿ.ಎಫ್.ಸಿ. ಅಧೀನಕ್ಕೆ ಒಳಪಡುತ್ತವೆ. ಸ್ವತಃ ನಗರಾಭಿವೃದ್ಧಿ ಸಚಿವ ಬಿ.ಎ.(ಬೈರತಿ) ಬಸವರಾಜು ಈ ನಿಗಮದ ಅಧ್ಯಕ್ಷರಾಗಿದ್ದು, ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಹಿರಿಯ ಐ.ಎ.ಎಸ್. ಅಧಿಕಾರಿ ರಾಕೇಶ್ ಸಿಂಗ್ ಸೇರಿ ಎಂಟು ಮಂದಿ ಐಎಎಸ್ ಹಾಗೂ ಒಬ್ಬರು ಐಎಫ್‌ಎಸ್ ಅಧಿಕಾರಿ ನಾಮನಿರ್ದೇಶಿತ ನಿರ್ದೇಶಕರಾಗಿದ್ದಾರೆ. 


ತುಮಕೂರು ಸ್ಮಾರ್ಟ್ಸಿಟಿ ಕಂಪನಿಯಲ್ಲಿ ನಡೆದಿರುವ ಈ ಅಕ್ರಮವನ್ನು ಮುಚ್ಚಿಹಾಕಲು ಕೆಲವು ಪಟ್ಟ ಭದ್ರ ಹಿತಾಸಕ್ತ ಶಕ್ತಿಗಳು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಸರ್ಕಾರದ ವಿಚಾರಣಾ ವರದಿ ಸಲ್ಲಿಸುವಂತೆ ಆದೇಶ ನೀಡಿರುವುದು ಇಡೀ ಹಗರಣಕ್ಕೆ ಹೊಸ ತಿರುವು ನೀಡಿದಂತಾಗಿದೆ.