ತಂತ್ರಜ್ಞಾನ ಕಲಿಕೆಗೆ ಮಾಧ್ಯಮವಾಗುವ ಶಕ್ತಿ ಕನ್ನಡಕ್ಕಿದೆ: ವಿಜ್ಞಾನ ಕಮ್ಮಟದಲ್ಲಿ ವಿಜ್ಞಾನ ತಂತ್ರಜ್ಞಾನ ಬರಹಗಾರ ಟಿ.ಜಿ. ಶ್ರೀನಿಧಿ

ತಂತ್ರಜ್ಞಾನ ಕಲಿಕೆಗೆ ಮಾಧ್ಯಮವಾಗುವ ಶಕ್ತಿ ಕನ್ನಡಕ್ಕಿದೆ: ವಿಜ್ಞಾನ ಕಮ್ಮಟದಲ್ಲಿ ವಿಜ್ಞಾನ ತಂತ್ರಜ್ಞಾನ ಬರಹಗಾರ ಟಿ.ಜಿ. ಶ್ರೀನಿಧಿ


ತಂತ್ರಜ್ಞಾನ ಕಲಿಕೆಗೆ ಮಾಧ್ಯಮವಾಗುವ ಶಕ್ತಿ ಕನ್ನಡಕ್ಕಿದೆ:
ವಿಜ್ಞಾನ ಕಮ್ಮಟದಲ್ಲಿ ವಿಜ್ಞಾನ ತಂತ್ರಜ್ಞಾನ ಬರಹಗಾರ ಟಿ.ಜಿ. ಶ್ರೀನಿಧಿ


ತುರುವೇಕೆರೆ: ನಮ್ಮ ಗಣಕಯಂತ್ರ ಮತ್ತು ಮೊಬೈಲ್‌ಗಳಲ್ಲಿ ಕನ್ನಡಕ್ಕೆ ಆದ್ಯತೆ ಕೊಡಬೇಕು. ತಂತ್ರಜ್ಞಾನ ಕಲಿಕೆಗೆ ಮಾಧ್ಯಮವಾಗುವ ಎಲ್ಲಾ ಶಕ್ತಿ, ಸತ್ವ ಕನ್ನಡಕ್ಕಿದೆ. ಸಣ್ಣ ನಗರಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮೊಬೈಲ್‌ನ ಹೊಸ ಹೊಸ ಬಳಕೆದಾರರಿದ್ದಾರೆ. ಅವರೆಲ್ಲಾ ತಂತ್ರಜ್ಞಾನದ ಸವಲತ್ತುಗಳನ್ನು ಮಾತೃಭಾಷೆಯಲ್ಲೇ ಬಳಸಲಿದ್ದಾರೆ. ಮಾತೃ ಭಾಷೆಯಿಂದ ಹೊರತಾದ ಯಾವುದೇ ತಂತ್ರಜ್ಞಾನ ಗ್ರಾಹಕ ಸ್ನೇಹಿ ಎನಿಸಿಕೊಳ್ಳುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ತಮ್ಮ ಮೊಬೈಲ್‌ಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಖ್ಯಾತ ವಿಜ್ಞಾನ ತಂತ್ರಜ್ಞಾನ ಬರಹಗಾರ ಟಿ.ಜಿ. ಶ್ರೀನಿಧಿ ಮನವಿ ಮಾಡಿದರು.


ಪಟ್ಟಣದ ಚಿದಂಬರೇಶ್ವರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ 4 ನೇ ಗಣಿತ ವಿಜ್ಞಾನ ಕಮ್ಮಟದಲ್ಲಿ ದಿನನಿತ್ಯದ ತಂತ್ರಜ್ಞಾನ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. 
ತಂತ್ರಜ್ಞಾನ ಸಾಧನಗಳ ಬಳಕೆಯೇ ಮಾಹಿತಿ ತಂತ್ರಜ್ಞಾನದ ದೊಡ್ಡ ಸಾಧನೆಯಲ್ಲ. ತಂತ್ರಜ್ಞಾನವನ್ನು ಹೊಸ ಹೊಸ ಅವಿಷ್ಕಾರಗಳಿಗೆ ಬಳಸಿ ನಾವಿನ್ಯತೆಯನ್ನು ಶೋಧಿಸುವುದೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಪಠ್ಯ ಪುಸ್ತಕಗಳ ಆಚೆ ಕೌಶಲಗಳನ್ನು ಗಳಿಸಿಕೊಂಡವರಿಗಷ್ಟೇ ತಂತ್ರಜ್ಞಾನ ಪ್ರಪಂಚದಲ್ಲಿ ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದರು. 


ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಳೆದೊಂದು ಶತಮಾನದಲ್ಲಿ ಆಗಿದ್ದ ಸಾಧನೆ 21 ನೇ ಶತಮಾನದ ಕೇವಲ 10 ವರ್ಷಗಳಲ್ಲಿ ನೂರಾರು ಪಟ್ಟು ಸಾಧನೆಯಾಗಿದೆ. ದಿನನಿತ್ಯದ ವಿವಿಧ ಕ್ಷೇತ್ರಗಳ ಪರಿಣಾಮಕಾರಿ ಬಳಕೆಯಿಂದ ಸಮಯ, ಹಣ ಹಾಗೂ ಶ್ರಮದ ಉಳಿತಾಯವಾಗುತ್ತಿದೆ. ಕಾರ್ಪೊರೇಟ್ ಉದ್ಯಮ ಮತ್ತು ಮಾರುಕಟ್ಟೆ ವಿಭಾಗದಲ್ಲಂತೂ ಮಾಹಿತಿ ತಂತ್ರಜ್ಞಾನದ ಫಲವಾಗಿ ದೊಡ್ಡ ಕ್ರಾಂತಿಯೇ ಆಗಿದೆ. ಆದರೆ ಬಹಳಷ್ಟು ಜನ ಅಂತರ್ಜಾಲ ಬಳಕೆಯ ನಿರ್ಲಿಪ್ತ ಬಳಕೆದಾರರಾಗಿರುವುದು ವ್ಯಸನವಾಗಿ ಮಾರ್ಪಟ್ಟಿದೆ. ಅದರಿಂದ ಹೊರಬಂದು ಅಂತರ್ಜಾಲ ಮತ್ತು ತಂತ್ರಜ್ಞಾನವನ್ನು ರಚನಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸುವ ತಿಳುವಳಿಕೆ ಹೊಂದಬೇಕು ಎಂದರು.


ಕಮ್ಮಟದಲ್ಲಿ ವಿಜ್ಞಾನಿ ಶ್ರೀನಾಥ ರತ್ನಕುಮಾರ್ ‘ಆಕಾಶದಲ್ಲಿ ಮನೆ’ ಹಾಗೂ ಬಿ.ಎಸ್. ಕೃಷ್ಣಮೂರ್ತಿ ‘ಗಣಿತ ಕುಣಿತ’ ಕುರಿತು ಉಪನ್ಯಾಸ ನೀಡಿದರು. ಗ್ಲೋಬಲ್ ಎಂಬೆಸ್ಸಿ ಕಾಲೇಜಿನ ಪ್ರಾಂಶುಪಾಲ ಗಂಗಾಧರ ದೇವರ ಮನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಇಂಡಿಯನ್ ಪಬ್ಲಿಕ್ ಸ್ಕೂಲ್‌ನ ಆಡಳಿತಾಧಿಕಾರಿ ಡಾ. ರುದ್ರಯ್ಯ ಹಿರೇಮಠ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಕೆ. ಪುಟ್ಟರಂಗಪ್ಪ, ಪಿ.ಎಚ್. ಧನಪಾಲ್, ಬೋರಲಿಂಗಯ್ಯ, ಇತರರು ಭಾಗವಹಿಸಿದ್ದರು. ಗ್ರಂಥಾಲಯದ ಸಂಸ್ಥಾಪಕ ರಾಮಚಂದ್ರು ಸ್ವಾಗತಿಸಿದರು. ಕೃಷ್ಣಚೈತನ್ಯ ಕಾರ್ಯಕ್ರಮ ನಿರೂಪಿಸಿದರು.